ಅಂಕಣಗಳು

ಹಳ್ಳಿಯ ಸಾಮಾನ್ಯ ಮಹಿಳೆ ಇ-ಮಹಿಳೆಯಾದಾಗ!

ಹಳ್ಳಿಯ ಸಾಮಾನ್ಯ ಮಹಿಳೆ ಇ-ಮಹಿಳೆಯಾದಾಗ!
Published On :

ಹಳ್ಳಿ ಹಳ್ಳಿಗಳಲ್ಲಿಯೂ ಇಂದು ಮಹಿಳೆಯರು ಸಕ್ರಿಯರಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ವತಿಯಿಂದ ಲಕ್ಷಾಂತರ ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದ್ದು, ಆ ಗುಂಪುಗಳಲ್ಲಿ ಉಳಿತಾಯದ ಹಣ ಜಮಾ ಮಾಡುವುದು ಹಾಗೂ ಬಡ್ಡಿ ಮೇಲೆ ಕೊಡುವುದು ಬಿಟ್ಟು ಇನ್ನೇನೂ ಮಾಡುತ್ತಿರಲಿಲ್ಲ. ಇದರಿಂದ ಅಭಿವೃದ್ಧಿ ಆಗಬೇಕಾದಷ್ಟು ಆಗಲಿಲ್ಲ ಹಾಗೂ ಅವರಿಗೆ ಉದ್ಯೋಗದ ಅವಕಾಶ ಇರಲಿಲ್ಲ. ಒಂದು ಸಲ ಮಹಿಳಾ ಸ್ವಸಹಾಯ ಗುಂಪುಗಳಿಗೆ ಭೇಟಿ ನೀಡಲು ಹೋದಾಗ ಬಹಳ ಮಹಿಳೆಯರು ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಪಾಸಾಗಿದ್ದು ಈ ಸಮಸ್ಯೆಯನ್ನು ನನ್ನ ಮುಂದೆ ಇಟ್ಟು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕೋರಿದರು. ಈ ವಿಷಯವನ್ನು ನಾನು ಮಿಕ್ಕ ಅಭಿವೃದ್ಧಿ ಇಲಾಖೆಗಳ ಮಾಸಿಕ ಸಭೆಯಲ್ಲಿ ಚರ್ಚಿಸಿದೆ.
ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಇಂದು ಒಂದು ವಿಭಾಗವನ್ನು ಸ್ಥಾಪಿಸಿದ್ದು ಇದರ ಉದ್ದೇಶ ಸ್ವಸಹಾಯ ಗುಂಪುಗಳನ್ನು ಪ್ರೋತ್ಸಾಹಿಸುವುದು ಮತ್ತು ಆರ್ಥಿಕವಾಗಿ ಸಶಕ್ತಗೊಳಿಸುವುದಾಗಿತ್ತು. ಈ ವಿಭಾಗವನ್ನು ಈ ಹಿಂದೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದ ಮೇಲೆ ಪ್ರಾರಂಭಿಸಲಾಯಿತು. ಐ.ಡಿ.ಎಫ್. ಎಂಬ ಸ್ವಸಹಾಯ ಸಂಸ್ಥೆ ಇದನ್ನು ನಡೆಸುತ್ತಿದ್ದರು. ಅವರನ್ನು ಕೇಳಿದಾಗ ಸುಮಾರು ಸ್ವಉದ್ಯೋಗದ ಅವಕಾಶಗಳು ಇರುವುದು ಕಂಡು ಬಂದಿತು. ಐ.ಡಿ.ಎಫ್. ಸಂಸ್ಥೆ ಬೆಂಗಳೂರು ನಗರದಲ್ಲಿ ಮಹಿಳಾ ಕರಕುಶಲ ಉದ್ಯಮಿಗಳನ್ನು ಉತ್ತೇಜಿಸುತ್ತಿದ್ದರು. ಅದರಲ್ಲಿ ಒಂದು ವಿಶೇಷ ನಾನು ಕಂಡಿದ್ದು, ಒಬ್ಬ ಮಹಿಳೆ ಕೃತಕ ಬೋನ್ಸಾಯ್ ತಯಾರಿಸುವುದು. ಚಿಕ್ಕ ಗಿಡದ ಮೇಲೆ ದೊಡ್ಡ ಹಣ್ಣುಗಳು ಇದ್ದು ನೋಡಲು ಆಕರ್ಷಕವಾಗಿರುತ್ತಿತ್ತು. ಈ ಪ್ರತಿಭೆಯನ್ನು ಟಿ.ವಿ. ಮಾಧ್ಯಮದಲ್ಲಿ ಸಹ ಪ್ರದರ್ಶಿಸಲಾಗಿತ್ತು. ಅಲ್ಲದೆ ಅವರು ತಯಾರಿಸುವ ಕೃತಕ ಬೋನ್ಸಾಯ್ ಗ್ಗಿಡಗಳನ್ನು ಜಪಾನ್ ಮತ್ತು ಇನ್ನಿತರ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಇನ್ನೊಂದು ಆಸಕ್ತಿ ಕೆರಳಿಸಿದ ವಿಷಯವನ್ನು ನಾನು ನೋಡಿದ್ದು ಒಬ್ಬ ಮಹಿಳೆ ಕಾಗದದ ಮೇಲೆ ಒಣ ಎಲೆ ಮತ್ತು ಹೂಗಳನ್ನು ಅಂಟಿಸಿ ದೀಪದ ಮುಸುಕು (ಲ್ಯಾಂಪ್ ಶೇಡ್) ತಯಾರಿಸುವುದು. ಬಲ್ಬಿನ ಪ್ರಕಾಶದಿಂದ ಹೂಗಳು ಒಂದು ರೀತಿಯಲ್ಲಿ ಮರುಜೀವ ಪಡೆದಂತೆ ಆಕರ್ಷಿಸುತ್ತಿದ್ದವು. ಈ ಒಂದು ವಸ್ತುವಿಗೆ ಆಸ್ಟ್ರೇಲಿಯಾದಲ್ಲಿ ತುಂಬಾ ಬೇಡಿಕೆ ಇದ್ದು ಉತ್ತಮ ಬೆಲೆ ಸಿಗುತ್ತಿತ್ತು. ಇದನ್ನು ಕಂಡು ಇದಕ್ಕೆ ಹೆಚ್ಚಿನ ಪ್ರಚಾರ ಒದಗಿಸಿ, ನಮ್ಮ ರಾಜ್ಯದ ಇನ್ನಿತರ ಮಹಿಳೆಯರಿಗೆ ತರಬೇತಿ ನೀಡಿದರೆ ಅವರಿಗೆ ಉದ್ಯೋಗಾವಕಾಶ ಒದಗಿಸಬಹುದು ಎನಿಸಿತು. ಆಸಕ್ತಿಯುಳ್ಳ ನಮ್ಮ ರಾಜ್ಯದ ಇನ್ನಿತರ ಮಹಿಳೆಯರು ಈ ಕೌಶಲ್ಯದಲ್ಲಿ ತರಬೇತಿ ಪಡೆಯಲು ಅನುಕೂಲ ಮಾಡಲಾಯಿತು.
ನಮ್ಮ ರಾಜ್ಯ ಹಾಗೂ ರಾಷ್ಟ್ರದಲ್ಲಿ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ಪ್ರತಿ ವರ್ಷ ಏರ್ಪಡಿಸಿದ ಸರಸ್ ವಸ್ತು ಪ್ರದರ್ಶನ ಮತ್ತು ಮಾರಾಟ ನವದೆಹಲಿಯಲ್ಲಿ ನಡೆಯುತ್ತಿತ್ತು. ಆಗ ದೇಶ ವಿದೇಶದ ವ್ಯಪಾರಿಗಳು ನಮ್ಮ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಪರಿಶೀಲಿಸಿ ದೊಡ್ಡ ಪ್ರಮಾಣದ ಸರಕು ವ್ಯಾಪಾರದ ಆದೇಶಗಳನ್ನು ನೀಡುತ್ತಿದ್ದರು. ಇದರಿಂದ ಮಹಿಳೆಯರು ತಯಾರಿಸಿದ ವಸ್ತುಗಳಿಗೆ ಉತ್ತಮ ಮಾರಾಟಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಇಂಥ ಅವಕಾಶಗಳು ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸಿಗುತ್ತಿದ್ದವು. ಒಂದು ವೇಳೆ ನಮ್ಮ ಮಹಿಳೆಯರಿಗಾಗಿ ಶಾಶ್ವತ ಮಾರುಕಟ್ಟೆ ಹಾಗೂ ತರಬೇತಿ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿ ಕೊಟ್ಟರೆ ಖಂಡಿತವಾಗಿ ಅವರು ಸ್ವಸಹಾಯ ಗುಂಪುಗಳ ಮೂಲಕ ಸಂಗ್ರಹಿಸಿದ ಐನೂರು ಕೋಟಿ ಬಂಡವಾಳ ಲಕ್ಷಾಂತರ ಕೋಟಿಗೆ ಬೆಳೆಸಲು ಸಾಧ್ಯವಾಗಬಹುದಾಗಿದೆ. ಆದರೆ ಪ್ರತಿ ತಾಲೂಕು ಮಟ್ಟದಲ್ಲಿ ಆಕಾಂಕ್ಷಿ ಮಹಿಳೆಯರಿಗೆ ತರಬೇತಿ ಮತ್ತು ಇನ್ನಿತರ ಔದ್ಯೋಗಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಒಂದು ಶಾಶ್ವತ ಸಂಸ್ಥೆಯ ಅವಶ್ಯಕತೆ ಇತ್ತು.
ಈ ಹಿಂದೆ ನಾನು ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದಾಗ ಅಥಣಿ ತಾಲೂಕಿನ ಕೆಲವು ಬಡ ಕುಟುಂಬಗಳೊಂದಿಗೆ "ಅವೇಕ್‌" ಸಂಸ್ಥೆಯ ಕೊಲ್ಲಾಪುರಿ ಚಪ್ಪಲಿ ಘಟಕಕ್ಕೆ ಭೇಟಿ ಕೊಟ್ಟಿದ್ದೆ. ಆಶ್ಚರ್ಯದ ಸಂಗತಿ ಏನೆಂದರೆ ವಿಶ್ವದಲ್ಲಿ ಖ್ಯಾತಿ ಪಡೆದಿರುವ ಕೊಲ್ಲಾಪುರಿ ಚಪ್ಪಲಿ ಮಹಾರಾಷ್ಟ್ರದ ಕೊಲ್ಲಾಪುರದಿಂದ ಅಲ್ಲ, ಬದಲಾಗಿ ಬೆಳಗಾವಿ ಅಥಣಿಯಿಂದ ತಯಾರಾಗುತ್ತಿತ್ತು. ಆದರೆ ಈ ಕೌಶಲ್ಯ ಪಕ್ಕದ ರಾಜ್ಯದಲ್ಲಿನ ಕೊಲ್ಲಾಪುರದಲ್ಲಿ ಬೆಳೆದದ್ದರಿಂದ ಜನ ಅದನ್ನು ಕೊಲ್ಲಾಪುರ ಎಂದು ತಿಳಿದುಕೊಂಡಿದ್ದಾರೆ. ಅವೇಕ್ ಸಂಸ್ಥೆಯವರು ನಮ್ಮ ರಾಜ್ಯದ ಜನರಲ್ಲಿ ಇರುವ ಈ ಕೌಶಲ್ಯವನ್ನು ಉಳಿಸಿ ಬೆಳೆಸಿ ಅತ್ಯುತ್ತಮ ಡಿಸೈನ್‌ಗಳನ್ನು ರಚಿಸಿ ಹೊರದೇಶದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಈ ಸಂಸ್ಥೆಯು ಮಹಿಳಾ ಅಭಿವೃದ್ಧಿ ನಿಗಮದೊಂದಿಗೆ ರಾಜ್ಯಾದ್ಯಂತ ಸಹಕರಿಸಲು ಮುಂದೆ ಬಂದಿತು. ಅದೇ ರೀತಿ ಐ.ಬಿ.ಎಂ. ನಲ್ಲಿ ಕೆಲಸ ಮಾಡುವ ಉತ್ಸಾಹಿ ಯುವಕರು ನನ್ನನ್ನು ಭೇಟಿ ಮಾಡಿ ರಾಂನಗರ, ಬಿಜಾಪುರ ಜಿಲ್ಲೆಯ ಕೆಲವು ಹಳ್ಳಿಗಳಿಂದ ಶಾಲೆ ಬಿಟ್ಟ ಗಂಡು ಮಕ್ಕಳನ್ನು ಆಯ್ಕೆ ಮಾಡಿ ಏಳು ತಿಂಗಳು ಸ್ಥಳೀಯವಾಗಿ ತರಬೇತಿ ನೀಡಿದಾಗ ಎನೂ ಗೊತ್ತಿಲ್ಲದ ಮಕ್ಕಳು ನನ್ನ ಮುಂದೆ ಲ್ಯಾಪ್ ಟಾಪ್ ಬಳಸಿ ಪವರ್ ಪಾಯಿಂಟ್ ಪ್ರದರ್ಶನ ಕೊಟ್ಟರು. ತುಂಬಾ ಆಶ್ಚರ್ಯದಿಂದ "ಪೆನ್ನೇ ಹಿಡಿಯದವರು ಪೆನ್ ಡ್ರೈವ್ ಉಪಯೋಗಿಸುವ ಮ್ಯಾಜಿಕ್ ಇಂದು ನಾನು ಕಂಡೆ" ಎಂದು ಹೇಳಿದೆ. ಅವರು ಒಂದು ಖಕ್ಖಔ  ಎನ್ನುವ ಸಂಸ್ಥೆಯನ್ನು ಕಟ್ಟಿ, ಈ ರೀತಿ ತರಬೇತಿ ನೀಡುತ್ತೇವೆ ಎಂದು ಮುಂದೆ ಬಂದು, ಎಲ್ಲೆಡೆ ಇದೇ ಸಂಸ್ಥೆಯ ವತಿಯಿಂದ ಮಹಿಳೆಯರ ಉತ್ಪನ್ನಗಳನ್ನು ಮಾರಾಟ ಮಾಡಲು ತಮ್ಮ ತಂತ್ರಜ್ಞಾನದ ಪರಿಣತಿಯನ್ನು ಕೊಡುತ್ತೇವೆ ಎಂದರು. ನಮ್ಮ ದೇಶದಲ್ಲಿ ಸ್ವಯಂ ಪ್ರೇರಣೆಯಿಂದ ಸಮಾಜಕ್ಕೆ ಕೆಲಸ ಮಾಡಲು ಇಷ್ಟೊಂದು ಜನ ಇದ್ದಾರೆ ಎನ್ನುವುದು ನಮಗೆ ಹೆಮ್ಮೆಯ ವಿಷಯ ಅಲ್ಲವೇ?
ಇಂಥ ಕೆಲವು ಸಂಘಗಳನ್ನು ನಾನು ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷಳಾಗಿ ನಮ್ಮ ಕಾರ್ಯಕಾರಿ ಸಮಿತಿಯಲ್ಲಿ ಖಾಯಂ ಆಹ್ವಾನಿತರನ್ನಾಗಿ ಕರೆದಿದ್ದೆ. ಸಭೆಯಲ್ಲಿ ಒಳ್ಳೆಯ ಸಲಹೆಗಳು ಸಿಕ್ಕಿದವು. ಟ್ಯಾಲಿ ಎಂಬ ಸಂಸ್ಥೆ ಪಿ.ಯು.ಸಿ. ಪಾಸಾದ ಹೆಣ್ಣು ಮಕ್ಕಳಿಗೆ ತರಬೇತಿ ನೀಡಿ ಯಾವುದಾದರೊಂದು ಖಾಸಗಿ ಸಂಸ್ಥೆಯಲ್ಲಿ ಕೆಲಸ ಕೊಡುತ್ತೇವೆ ಎಂದು ಒಪ್ಪಂದ ಮಾಡಿಕೊಂಡು ಸಾವಿರಾರು ಮಹಿಳೆಯರಿಗೆ ಉದ್ಯೋಗಾವಕಾಶ ಮಾಡಿ ಕೊಟ್ಟಿತು. ಇಂಥ ಒಂದು ಕಾರ್ಯಕ್ರಮ ಉದ್ಘಾಟಿಸಲು ಹೋದಾಗ ನಾನು ನೋಡಿದ ಒಂದು ದೃಶ್ಯ ಏನೆಂದರೆ, ಒಬ್ಬ ಮಹನೀಯರು ಎರಡು ವರ್ಷದ ಮಗುವನ್ನು ಹಿಡಿದುಕೊಂಡು ಆಡುತ್ತಿದ್ದರು. ನಾನು ಅವರನ್ನು ಕೇಳಿದಾಗ ಅವರು ಹೇಳಿದರು, "ನಮಗೆ ಸರಿಯಾದ ಉದ್ಯೋಗವಿಲ್ಲ. ಮಹಿಳೆಯರಿಗೆ ಸರ್ಕಾರದಿಂದ ಈ ಅವಕಾಶ ದೊರಕಿದೆ. ಆದುದರಿಂದ ನನ್ನ ಹೆಂಡತಿ ತರಬೇತಿಗೆ ಬಂದಿದ್ದಾಳೆ. ಅದಕ್ಕೆ ನಾನು ಮಗುವನ್ನು ನೋಡಿಕೊಳ್ಳುತ್ತಿದ್ದೇನೆ." ಇಂಥ ಪುರುಷರು ನಮ್ಮಲ್ಲಿ ಇದ್ದಾರೆ ಎಂದು ನೋಡಿ ತುಂಬಾ ಖುಷಿ ಆಯಿತು.
ಈ ಸಮಯದಲ್ಲಿ ದಾವಣಗೆರೆಯಿಂದ ಒಂದು ಸರ್ಕಾರೇತರ ಸಂಸ್ಥೆ ಇ-ಮಹಿಳೆ ಯೋಜನೆಯನ್ನು ತೆಗೆದುಕೊಂಡು ಬಂದಿತು. ಅವರ ಆಶಯ ಏನೆಂದರೆ ಪ್ರತಿಯೊಂದು ಹಳ್ಳಿಯ ಗ್ರಾಮಸ್ಥರು ದಿನ ನಿತ್ಯದ ಅನುಕೂಲಕ್ಕಾಗಿ ನಗರಕ್ಕೆ ಬರುವ ಅನಿವಾರ್ಯತೆ ಇರಬಾರದು ಎಂಬುದು. ಆದುದರಿಂದ ಇಂಟರ್ನೆಟ್ ಮೂಲಕ ಮಹಿಳೆಯರು ಕೆಲವು ನಾಗರಿಕ ಸೇವೆಗಳನ್ನು ನೀಡಬಹುದು, ಉದಾಹರಣೆಗೆ ಬಸ್, ರೈಲಿನ ಟಿಕೆಟ್, ಜೀವವಿಮೆಯ ಪಾಲಿಸಿ, ಕೃಷಿ ಉತ್ಪನ್ನಗಳ ಮಾರಾಟ ಮುಂತಾದವು. ಈ ಮಾದರಿಯನ್ನು ಬೆಳಗಾವಿಯಲ್ಲಿ ಈಗಾಗಲೇ ಸ್ಥಳೀಯ ಶಾಸಕರ ಆಶ್ರಯದಿಂದ ಯಶಸ್ವಿಗೊಳಿಸಿದ್ದೇವೆ ಎಂದರು. ನಾನು ಇಲಾಖೆಯ ಅಧಿಕಾರಿಗಳೊಂದಿಗೆ ಅಲ್ಲಿಗೆ ಭೇಟಿ ನೀಡಿದೆ. ಶಾಸಕರ ನೇತೃತ್ವದಲ್ಲಿ ಆ ಹಳ್ಳಿ ಹಳ್ಳಿಯಾಗಿ ಕಾಣುತ್ತಿರಲಿಲ್ಲ. ಸ್ವಚ್ಛತೆ, ಉತ್ತಮ ರಸ್ತೆ, ನೀರು, ಬೀದಿ ದೀಪ, ಇತ್ಯಾದಿಯನ್ನೊಳಗೊಂಡ ಮಾದರಿ ಹಳ್ಳಿಗಳಾಗಿ ಕಾಣುತ್ತಿದ್ದವು. ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರೂ ಹೆಮ್ಮೆ ಪಡುತ್ತಿದ್ದರು. ಹೆಣ್ಣು ಮಕ್ಕಳು ತಮ್ಮ ಕಂಪ್ಯೂಟರ್ ಪ್ರೊಜೆಕ್ಟರ್‌ಗಳನ್ನು ಹಿಡಿದು ಸಂಜೆಯ ಹೊತ್ತು ಗ್ರಾಮ ಪಂಚಾಯತಿಯ ಸಮುದಾಯ ಭವನದಲ್ಲಿ ಜನರನ್ನು ಆಹ್ವಾನಿಸಿ ಸರ್ಕಾರದ ಹಲವು ಯೋಜನೆಗಳ ಮೇಲೆ ತಯಾರಿಸಿದ ಚಿತ್ರಗಳನ್ನು ತೋರಿಸಿ ಅರಿವು ಬೆಳೆಸುತ್ತಿದ್ದರು. ಇಂಥ ಪರಿವರ್ತನೆ ನಮ್ಮ ಎಲ್ಲಾ ಹಳ್ಳಿಗಳಲ್ಲಿ ಆಗಲಿ ಎಂದು ಕನಸು ಕಂಡಿದ್ದೆ.

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.