ಅಂಕಣಗಳು

ಮಣಿಬೆನ್‌ರ ಪುಟಗಳಲ್ಲಿ ಪದವಾದ ಪಟೇಲರ ಅಂತರಂಗ

ಮಣಿಬೆನ್‌ರ ಪುಟಗಳಲ್ಲಿ ಪದವಾದ ಪಟೇಲರ ಅಂತರಂಗ
Published On :

ಯಾವ ವ್ಯಕ್ತಿ 542 ಸಂಸ್ಥಾನಗಳನ್ನು ಒಂದುಗೂಡಿಸುವ ಪರಾಕ್ರಮ ಮೆರೆದರೋ, ಸೋಮನಾಥ ಮಂದಿರದ ಮರು ನಿರ್ಮಾಣ ಕಾರ್ಯವನ್ನು ನಿರ್ವಿವಾದ ರೂಪದಲ್ಲಿ ನಿರ್ವಹಿಸಿದರೋ ಮತ್ತು ಹೈದ್ರಾಬಾದ್‌ನ ರಜಾಕರರನ್ನು ತುಳಿದು ದಕ್ಷಿಣದಲ್ಲಿ ಪಾಕಿಸ್ತಾನ ಹುಟ್ಟಿಕೊಳ್ಳುವುದನ್ನು ತಡೆದರೋ ಅಂಥ ವ್ಯಕ್ತಿಯ ಕೊಡುಗೆಯಿಂದು ನೆಹರೂವಾದಿ ಮನಸ್ಥಿತಿಗಳಿಂದಾಗಿ ಮರೆತು ಹೋದಂತಾಗಿದೆ.
ಸರ್ದಾರ್ ಪಟೇಲರ ಮಗಳು ಮಣಿಬೇನ್ 8 ಜೂನ್ 1936 ರಿಂದ ಹಿಡಿದು 15 ಡಿಸೆಂಬರ್ 1950ರ ವರೆಗೆ ತಮ್ಮ ತಂದೆಯೊಡನೆ ನೆರಳಿನಂತಿದ್ದುಕೊಂಡು ಅವರ ಪ್ರತಿಯೊಂದು ಹೆಜ್ಜೆಯನ್ನು, ವಿಚಾರಗಳನ್ನು ಡೈರಿಯ ಲ್ಲಿ ಬರೆದಿಟ್ಟರು. ಸರ್ದಾರ್ ಪಟೇಲರ ಅಂತರಂಗವನ್ನು ಅರ್ಥಮಾಡಿಕೊಳ್ಳಲು ಈ ಡೈರಿ ಅತ್ಯಂತ ಸಹಾಯಕವಾಗಿದೆ. ಇದರಲ್ಲಿ ಮಣಿಬೆನ್ ಅವರು ಕಾಂಗ್ರೆಸ್‌ನ ಒಳಗಿನವರು ಸರ್ದಾರ್ ಪಟೇಲರನ್ನು ಹತ್ತಿಕ್ಕಲು ನಡೆಸಿದ ಸಂಚು, ರಫಿ ಅಹಮದ್ ಕಿದ್ವಾಯಿ ಮತ್ತು ಮೌಲಾನಾ ಆಜಾದ್‌ರಂಥ ಹಿರಿಯ ನಾಯಕರೊಂದಿಗೆ ಪಟೇಲರಿಗಿದ್ದ ಮತಭೇದದ ಬಗ್ಗೆಯೂ ಬರೆದಿದ್ದಾರೆ.
ಅಷ್ಟೇ ಅಲ್ಲದೆ ಇದರಲ್ಲಿ ನೆಹರು ಅವರು ಮಾಡಿಕೊಂಡ ಲಿಯಾಕತ್ ಒಪ್ಪಂದ ಮತ್ತು ಪಾಕಿಸ್ತಾನದಿಂದ ಬಂದ ಹಿಂದು ಶರಣಾರ್ಥಿಗಳ ಹೃದಯ ವಿದ್ರಾವಕ ಸ್ಥಿತಿ. ಚೀನಾ ಮತ್ತು ನೇಪಾಳದ ಜೊತೆಗಿನ ಸಂಬಂಧದಲ್ಲಿ ಭಾರತದ ನೀತಿ ಹೇಗಿರಬೇಕು ಹಾಗೂ ಪ್ರಥಮ ಮಂತ್ರಿಮಂಡಲದಲ್ಲಿದ್ದ ಭ್ರಷ್ಟ ಮಂತ್ರಿಗಳ ಬಗೆಗೆ ಪಟೇಲರ ಕಟುನಿಲವುಗಳ ಬಗ್ಗೆಯೂ ಬರೆಯಲಾಗಿದೆ.
ಕಾಶ್ಮೀರದ ವಿಷಯದಲ್ಲಿ ಪಟೇಲರು ಕಾಯುತ್ತಾ ಕುಳಿತುಕೊಳ್ಳುವುದಕ್ಕೆ ಸಿದ್ಧರಿರಲಿಲ್ಲ. ಅಲ್ಲದೆ ಯಾವುದೋ ದುರ್ಬಲ ಒಪ್ಪಂದ ಅಥವಾ ನಡೆ ಅನುಸರಿಸಲೂ ಅವರು ತಯಾರಿರಲಿಲ್ಲ. ಕಾಶ್ಮೀರದ ವಿಷಯದಲ್ಲಿ ನೆಹರು ಅನುಸರಿಸುತ್ತಿರುವ ನೀತಿಯನ್ನು ನೋಡಿ ಪಟೇಲರು "ನೆಹರು ಪಶ್ಚಾತ್ತಾಪ" ಪಡಲಿದ್ದಾರೆ ಎಂದು ನಿಷ್ಟುರವಾಗಿಯೇ ನೆಹರು ಆಪ್ತರ ಮುಂದೆ ನುಡಿದಿದ್ದರು. 23 ಜುಲೈ 1949ರಲ್ಲಿ ಪಟೇಲ್, "ನಮಗೆ ಅರ್ಧಂಬರ್ಧ ಕಾಶ್ಮೀರವಲ್ಲ, ಬದಲಾಗಿ ಇಡೀ ಪ್ರದೇಶವೇ ಬೇಕು. ಅದನ್ನು ನಾವು ಯುದ್ಧಮಾಡಿಯಾದರೂ ಸರಿ ಪಡೆದೇ ತೀರುತ್ತೇವೆ" ಎಂದು ಬಹಿರಂಗವಾಗಿ ಘೋಷಿಸಿದ್ದರು.
15 ಆಗಸ್ಟ್ 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ  ಪಟೇಲರ ಕಿವಿಗೆ, ಪಾಕಿಸ್ತಾನಿ ಸೇನೆ ಲಕ್ಷದ್ವೀಪವನ್ನು ಕಬ್ಜಾ ಮಾಡಿಕೊಳ್ಳಲು ತನ್ನ ನೌಕಾಸೇನೆಯನ್ನು ರಾತ್ರೋ ರಾತ್ರಿ ಕಳುಹಿಸಲಿದೆ ಎನ್ನುವ ಸುದ್ದಿ ತಲುಪಿತು. ಲಕ್ಷದ್ವೀಪದಲ್ಲಿ ಮುಸಲ್ಮಾನರ ಬಾಹುಳ್ಯವಿದ್ದರೂ ಅದು ಪಾಕಿಸ್ತಾನಕ್ಕೆ ಹೋಗಿರಲಿಲ್ಲ, ಸತ್ಯವೇನೆಂದರೆ ವಿಭಜನೆಯ ಸಮಯದಲ್ಲಿ ಆ ಪ್ರದೇಶದ ಬಗ್ಗೆ ಯಾರೂ ಗಮನವನ್ನೇ ಕೊಟ್ಟಿರಲಿಲ್ಲ. ಬ್ರಿಟಿಷರಿಂದ ಪಾಕಿಸ್ತಾನಕ್ಕೆ ಯಾವಾಗ ಈ ವಿಷಯ ತಿಳಿಯಿತೋ ಆಗ ಅದು ಒಪ್ಪಂದದಲ್ಲಿನ ಈ ದೌರ್ಬಲ್ಯದ ಲಾಭ ಪಡೆಯಲು ಯೋಜನೆ ರೂಪಿಸಿ, ತನ್ನ ನೌಕಾದಳವನ್ನು ಸಕ್ರಿಯಗೊಳಿಸಿತು. ಭಾರತೀಯ ಗುಪ್ತಚರ ಇಲಾಖೆಯ ಮೂಲಕ ಯಾವಾಗ ಪಾಕಿಸ್ತಾನದ ಈ ಪಾಖಂಡಿತನದ ಸುದ್ದಿ ಪಟೇಲರಿಗೆ ತಿಳಿಯಿತೋ, ಕೂಡಲೇ ಅವರು ಕೊಚ್ಚಿನ್‌ನಿಂದ ನೌಕಾದಳವನ್ನು ಕಳುಹಿಸಿ ಅಲ್ಲಿ ಭಾರತೀಯ ಧ್ವಜ ಹಾರುವಂತೆ ಮಾಡಿದರು. ಸುಮ್ಮನೆ ಒಮ್ಮೆ ಯೋಚಿಸಿ, ಒಂದುವೇಳೆ ಅಂದು ಪಾಕಿಸ್ತಾನವೇನಾದರು ಲಕ್ಷದ್ವೀಪವನ್ನು ತನ್ನ ಜೋಳಿಗೆಗೆ ಹಾಕಿಕೊಂಡಿತ್ತೆಂದರೆ ಇಂದು ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು? ಅರಬ್ಬಿ ಸಮುದ್ರದಿಂದ ಹಿಡಿದು ಹಿಂದು ಮಹಾಸಾಗರದವರೆಗೆ ಅದರದ್ದೇ ಪ್ರಾಬಲ್ಯವಿರುತ್ತಿತ್ತು!
ಮಣಿಬೇನ್‌ರ ಡೈರಿಯಿಂದ- "ಒಂದು ವೇಳೆ ಮಹಾತ್ಮಾ ಗಾಂಧೀಜಿಯ ನಿಕಟ ಸಂಪರ್ಕ ನೆಹರು ಕುಟುಂಬಕ್ಕೆ ದೊರಕದೇ ಹೋಗಿದ್ದರೆ ಪಂಡಿತ್ ನೆಹರು ಸೇರಿದಂತೆ ಅವರ ಇಡೀ ಕುಟುಂಬ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿತ್ತು ಎಂದು ಘನಶ್ಯಾಮ್ ದಾಸ್ ಬಿರ್ಲಾ ಅಪ್ಪನಿಗೆ(ಪಟೇಲರಿಗೆ) ಹೇಳಿದರಂತೆ. ಅಲ್ಲದೆ ಹೈದ್ರಾಬಾದ್ ನಿಜಾಮನ ಸದ್ದಡಗಿಸಬೇಕೆಂಬ ಪ್ರಯತ್ನಕ್ಕೆ ಅಡ್ಡಗಾಲು ಹಾಕಲು ನೆಹರು ಪ್ರಯತ್ನಿಸಿದರು ಎನ್ನುವುದನ್ನೂ ಘನಶ್ಯಾಮ್ ಹೇಳಿದರಂತೆ. ಅಪ್ಪನಿಗೆ ರಾಜಾಜಿ ರಾಜಗೋಪಾಲಾಚಾರ್ಯ ಅವರೂ ಸಾಥ್ ನೀಡಲಿಲ್ಲ. ಆದರೆ ಪಟೇಲರು ರಾಜಾಜಿಯವರಿಗೆ ಸ್ಪಷ್ಟವಾಗಿ ಹೇಳಿದರು: "ಒಂದು ಕಡೆ ಪೂರ್ವ ಪಾಕಿಸ್ತಾನ, ಇನ್ನೊಂದೆಡೆ ಪಶ್ಚಿಮ ಪಾಕಿಸ್ತಾನ(ಬಾಂಗ್ಲಾದೇಶ), ಭಾರತದ ಒಡಲಲ್ಲಿ ಮತ್ತೊಂದು ಪಾಕಿಸ್ತಾನವನ್ನು ಹುಟ್ಟುಹಾಕಿ ಹೋದರೂ ಎಂದು ಮುಂದಿನ ಪೀಳಿಗೆ ನಮ್ಮನ್ನು ಶಪಿಸುವಂತಾಗಬಾರದು! ಪಾಕಿಸ್ತಾನಿಗಳು ಭಾರತದಲ್ಲಿ ಮತ್ತೊಮ್ಮೆ ಮೊಘಲ್ ಸಾಮ್ರಾಜ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲಿಯವರೆಗೂ ನೀವು(ರಾಜಾಜಿ) ಮತ್ತು ನೆಹರು  ಗೃಹ ಸಚಿವಾಲಯವನ್ನು ಅಂಚಿನಲ್ಲಿ ನಿಲ್ಲಿಸಿ, ನಿಮ್ಮದೇ ನಿರ್ಧಾರ ಕೈಗೊಳ್ಳುತ್ತಾ ಕೂರುವಿರಿ?"(13 ಸೆಪ್ಟೆಂಬರ್ 1948).
ಪಟೇಲರ ಇದೇ ದೃಢತೆಯಿಂದಾಗಿಯೇ ಜನರಲ್ ಜೆ.ಎನ್. ಚೌಧರಿ ಅವರ ನೇತೃತ್ವದಲ್ಲಿ ಹೈದ್ರಾಬಾದ್ ಪೊಲೀಸ್ ಆ್ಯಕ್ಷನ್ ಕಾರ್ಯಾಚರಣೆ ಸಫಲವಾಗಿದ್ದು.
ಗಾಂಧೀಜಿಯ ಹತ್ಯೆಯಾದ ನಂತರ ಸುಳ್ಳು ಆರೋಪಗಳನ್ನು ಹೊರಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಪ್ರತಿಬಂಧ ಹೇರಲಾಯಿತು. ಆ ಪ್ರತಿಬಂಧ ಹಿಂಪಡೆಯುವಲ್ಲಿ ಪಟೇಲರ ಪಾತ್ರವೂ ಬಹಳಷ್ಟಿದೆ. ಗುರೂಜಿ ಗೊಳವಲ್ಕರ್ ಅವರು ಜೈಲಿನಿಂದ ಹೊರಬಂದಾಗ ಪಟೇಲರು ತುಂಬಾ ಸಂತಸ ಪಟ್ಟಿದ್ದರು.
ಮಣಿಬೇನ್‌ರ ಡೈರಿ: 3 ಆಗಸ್ಟ್ 1949. "ಗೊಳವಲ್ಕರ್ ಅವರ ಬಿಡುಗಡೆಯಿಂದ ಅಪ್ಪನಿಗೆ ಬಹಳ ಆನಂದವಾಗಿದೆ. ಗೊಳವಲ್ಕರ್ ಅವರನ್ನು ಕಾಂಗ್ರೆಸ್‌ಗೆ ಆಹ್ವಾನಿಸಲು ಅವರು ಸಿದ್ಧರಿದ್ದಾರೆ. ಗೊಳವಲ್ಕರ್ ಮತ್ತು ಸಂಘಕ್ಕೆ ಕಾಂಗ್ರೆಸ್‌ನಲ್ಲಿ ಪ್ರವೇಶ ಕಲ್ಪಿಸಿಕೊಡಲು ಅವರು ಪ್ರಯತ್ನಿಸುತ್ತಿದ್ದಾರೆ"
ಸರ್ದಾರ್ ಪಟೇಲರು ಪಾಕಿಸ್ತಾನದಿಂದ ಗುಳೆ ಎದ್ದು ಬಂದ ಹಿಂದುಗಳ ಅವಸ್ಥೆಯನ್ನು ಮತ್ತು ಇಸ್ಲಾಂನಲ್ಲಿ ಹೆಚ್ಚುತ್ತಿರುವ ಮತಾಂತರ ಮನಸ್ಥಿತಿಯನ್ನು ನೋಡಿ ಬಹಳ ಚಿಂತಿತರಾಗಿದ್ದರು. 5 ಏಪ್ರಿಲ್ 1950ರಂದು ಅವರು ಹೇಳಿದ್ದರು, "ಸಿಂಧ್, ಪಂಜಾಬ್, ಬಲೂಚಿಸ್ತಾನ್ ಮತ್ತು ಸೀಮಾ ಪ್ರಾಂತಗಳಿಂದ ಹಿಂದುಗಳನ್ನು ಸಂಪೂರ್ಣವಾಗಿ ಅಳಿಸಿಹಾಕಲಾಗಿದೆ. ಇದೇ ಸ್ಥಿತಿ ಪೂರ್ವ ಪಾಕಿಸ್ತಾನದಲ್ಲಿಯೂ ನಿರ್ಮಾಣವಾಗಲಿದೆ"
24 ಏಪ್ರಿಲ್ 1950ರಂದು ಪಟೇಲರು ಹೀಗೆ ಹೇಳಿದ್ದರೆಂದು ಮಣಿಬೇನ್ ಬರೆಯುತ್ತಾರೆ: "ಹಫೀಜುರ್‌ಹಮಾನ್‌ನಂಥವರು ಭಾರತದಲ್ಲಿ ನೆಲೆಯೂರಿದ್ದಾರೆ. ಭಾರತದೊಳಗೇ ಒಂದು ಹೋಮ್‌ಲ್ಯಾಂಡ್ ಸೃಷ್ಟಿಸಬೇಕು ಎಂದವರು ಆಟ ಶುರುವಿಟ್ಟುಕೊಂಡರೆ ನಮ್ಮ ಸ್ಥಿತಿಯೇನಾಗಬಹುದೋ ಯೋಚಿಸಿ? ಮುಂದಿನ ಪೀಳಿಗೆ ನಮ್ಮನ್ನು ದೇಶದ್ರೋಹಿಗಳೆಂದು ಕರೆಯುವುದಿಲ್ಲವೇ?"
ಸರ್ದಾರ್ ಪಟೇಲರು ಕಮ್ಯುನಿಸ್ಟರ್ ವಿರೋಧಿಗಳಾಗಿದ್ದರು. ಕಮ್ಯುನಿಸ್ಟರಿಗೆ ದೇಶದ ಬಗ್ಗೆ ನಿಷ್ಠೆ ಕಡಿಮೆ ಎಂದವರು ಹೇಳುತ್ತಿದ್ದರು. 13ಡಿಸೆಂಬರ್ 1948ರಂದು ಅವರು ಪಂಡಿತ್ ನೆಹರು ಅವರ ಆಪ್ತ ಎಮ್. ಒ. ಮಥಾಯ್ ಅವರೊಂದಿಗೆ ಮಾತನಾಡುತ್ತಾ, "ಒಂದು ವೇಳೆ ನಾವು ರಾಷ್ಟ್ರ ನಿರ್ಮಾಣ ಮಾಡುತ್ತೀವೆಂದರೆ ಅದರಲ್ಲಿ ಕಮ್ಯುನಿಷ್ಟರಿಗೆ ಜಾಗವಿರಬಾರದು!"
ವ್ಯಂಗ್ಯವೆಂದರೆ ಕಾಂಗ್ರೆಸ್, ಮೊದಲಿನಿಂದಲೂ ವೀರ ಸಾವರ್ಕರರನ್ನು ವಿರೋಧಿಸುತ್ತಲೇ ಬಂದಿದೆ. ಆದರೆ ಪಟೇಲರಿಗೆ ಸಾವರ್ಕರ್ ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಕೂಡ ಅವರಿಬ್ಬರೂ ಒಂದು ವಿಷಯದಲ್ಲಿ ಮಾತ್ರ ಏಕ ಅಭಿಪ್ರಾಯವನ್ನು ಹೊಂದಿದ್ದರು. ಈ ಬಗ್ಗೆ 16 ಆಗಸ್ಟ್ 1949ರಂದು ಮಣಿಬೆನ್ ಬರೆಯುತ್ತಾರೆ: "ಭಾರತದಲ್ಲಿರುವ 4 ಕೋಟಿ ಮುಸಲ್ಮಾನರು ಭಾರತಕ್ಕೆ ನಿಷ್ಠರಾಗಿರಬೇಕು ಎಂಬುದು ಅಪ್ಪ ಮತ್ತು ಸಾವರ್ಕರರ ನಿಲವಾಗಿತ್ತು". ಒಂದು ವೇಳ ಕಾಶ್ಮೀರದ ವಿಷಯವನ್ನೇನಾದರೂ ಪಟೇಲರಿಗೆ ಎತ್ತಿಕೊಳ್ಳಲು ಸಾಧ್ಯವಾಗಿತ್ತೆಂದರೆ ಇಂದು ಇಡೀ ಕಾಶ್ಮೀರ ಭಾರತದ ಭಾಗವಾಗಿರುತ್ತಿತ್ತು. ಅಲ್ಲಿ ಎರಡು ಧ್ವಜಗಳು, ಎರಡು ಸಂವಿಧಾನಗಳಂಥ ವಿಚಿತ್ರ, ವಿಷಮಯ ಸ್ಥಿತಿ ನಿರ್ಮಾಣವಾಗುತ್ತಲೇ ಇರಲಿಲ್ಲ.

- ತರುಣ್ ವಿಜಯ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.