ಶುರ್ವಾಗದೆ ಕಂಡೋರ ಮಕ್ಳುನ್ನ ಬಾವಿಗೆ ತಳ್ಳೋ ಸ್ಕೀಮು

ಕಾಸು ತಿನ್ನೋರ್ಗೆ ನೀವೇ ಯಾಕೆ ಗುಂಡು ಹಾಕ್ಬಾರ್ದು ಅಂತೀನಿ. ಹೆಂಗೂ ನೀವು..

ಕಾಸು ತಿನ್ನೋರ್ಗೆ ನೀವೇ ಯಾಕೆ ಗುಂಡು ಹಾಕ್ಬಾರ್ದು ಅಂತೀನಿ. ಹೆಂಗೂ ನೀವು ಪೊಲೀಸ್ ಇಲಾಖೆನಾಗೆ ಇದ್ದೋರು. ಬಂದೂಕು ಹೆಂಗೆ, ಎತ್ತ ಅಂತ ತಿಳ್ದೋರು. ಗುರಿ ಸಂದಾಕೇ ಮಡುಗ್ತೀರ.

'ಹರಹರ ಮಹೇದೇವ, ಗುಂಡಾಕ್ರಿ, ಗುಂಡಾಕ್ರಿ' ಅಂತೇಳಿ ಕೂಕ್ಕಂಡು ರಿಟೈರ್ಡ್ ಪೊಲೀಸ್ ಅಪೀಸರ್ರು ಬಿದ್ರಿ ಸಾಹೇಬ್ರು ಬತ್ತಾಯಿದ್ರು.
ನಮ್ ಮೈಲಾರಿ ಕೈನಾಗೆ ಗಾಜಿನ ಲೋಟ ಇಡ್ಕಂಡು ವೋಡೋಡಿ ವೋದ. 'ನಮುಸ್ಕಾರ ಸಾ, ಸಂದಾಕಿದ್ದೀರ. ನೀವು ಪೊಲೀಸ್ ಇಲಾಖೆ ಬುಟ್ಮೇಕೆ ಕಾಣಂಗೇ ಇಲ್ಲ. ಆಕಾಶ್ದಾಗೆ ಇರೋ ಚುಕ್ಕಿ ಥರ ಆಗೋದ್ರಿ ಬುಡಿ. ಏನರ ಯೋಳಿ ಸಾ, ಖಾಕಿ ಇದ್ರೆ ನಿಮ್ಗೆ ಖದರ್ರು, ಪವರ್ರು. ಈವಾಗ ನೋಡಿ, ನಿಮ್ ಲೈಪು ವೊಡ್ದೋಗಿರೋ ಪೈಪು ಥರ ಆಗೋಗದೆ' ಅಂತ ಯೋಳ್ದ ಮೈಲಾರಿ.  'ರಿಟೈರ್ಡು ಆದ್ಮೇಕೆ ಯಾರ್ಲಾ ಖಾಕಿ ಹಾಕ್ದಾರು ಬೇಕೂಪ. ನನ್ನುನ್ನ ಏರೋಪ್ಲೇನು ಹತ್ತುಸ್ತಾಯಿದ್ದೀಯೇನ್ಲಾ. ಅದ್ಸರಿ ಏನು ಬಂದಿದ್ದು ಯೋಳು. ಕೈನಾಗೆ ಗಾಜಿಂದು ಲೋಟ ಬ್ಯಾರೆ ಹಿಡ್ಕಂಡು ಬಂದಿದ್ದೀಯ. ಏನ್ ಸಮಾಚಾರ?' ಅಂದ್ರು ಬಿದ್ರಿಯೋರು.
'ಸಂದಾಕದೆ ಸಿವ ನೀವು ಯೋಳಾದು, ನೀವೇ ತಾನೆ ಗುಂಡಾಕಿ ಗುಂಡಾಕಿ ಅಂತ ಕೂಗ್ತಾ ಇದ್ದಿದ್ದು. ನಂಗೂವೆ ಗುಂಡಾಕಿ ಸ್ಯಾನೆ ದಿನ ಆಗೋಗಿತ್ತು. ಗಂಟ್ಲು ವೊಣ್ಗೋಗದೆ. ನಿಮ್ ಜತ್ಯಾಗೆ ಹಂಗೇ ಚಿಕ್ದಾಗಿ ವೊಂದು ಪಾರ್ಟಿ ಮಾಡ್ಕಂಬುಡಾವ ಅಂತೇಳಿ ಬಂದೆ' ಅಂದ ಮೈಲಾರಿ.
'ಜಾಡ್ಸಿ ವೊದ್ದ ಅಂತಂದ್ರೆ ಮುಂದ್ಲಾಗಡೆ ಇರೋ ಮೂವತ್ತೆರಡು ಹಲ್ಲುಗಳು ಹಂಗೇ ವುದ್ರೋಬೇಕು. ದಡ್‌ಮುಂಡೆದೆ, ನಾನು ಯೋಳಿದ್ದು ಏನ್ಲಾ?' ಅಂತ ಬಿದ್ರಿಯೋರು ಕೇಳುದ್ರು.
'ಅದೇ ಗುಂಡಾಕಿ, ಗುಂಡಾಕಿ ಅಂತ ತಾನೆ ಯೋಳಿದ್ದು. ಹೆಂಗೂ ಈವಾಗ ನೀವು ಯಾವ್ದೇ ಪಾರ್ಟಿನಾಗೆ ಇಲ್ಲ. ಅದುಕ್ಕೆ ಗುಂಡು ಪಾರ್ಟಿ ಮಾಡಕ್ಕೆ ಕರೀತಾವ್ರೆ ಅಂತೇಳಿ ಬಂದೆ. ಮನೆತವ ವಸಿ ಕೆಲ್ಸ ಅದೆ. ಈ ಲೋಟುಕ್ಕೆ ಒಂಚೂರು ಹಾಕ್ಬುಡಿ. ಗಂಟ್ಲಾಗೆ ಹಂಗೇ ವುಯ್ಕಂಡು ವೊಂಟೋಯ್ತೀನಿ'.
'ಅಲ್ಲ, ತಂದಿರೋ ಗುಂಡು ಯಾವ್ದು? ಲೋಕಲ್ಲೋ, ಪಾರಿನ್ನೋ? ಲೋಕಲ್ಲು ಕುಡಿಯಾದ್ನ ನಾನು ಬುಟ್ಟಾಕಿ ಸ್ಯಾನೆ ದಿನ ಅಗೋಗದೆ. ಕುಡುದ್ರೆ ಹೆಲ್ತು ಕೆಟ್ಟೋತದೆ. ಮಗಂದು ಕಿಕ್ಕೂ ಹತ್ತಾಕಿಲ್ಲ. ಸ್ಯಾನೆ ಸ್ಲೋ. ನಿಮ್ತಾವ ಪಾರಿನ್ ಮಾಲೇ ಇರ್ತದೆ ಬುಡಿ. ಅದುನ್ನು ವೊಳಿಕ್ಕೆ ಬುಟ್ಕಂಡ್ರೆ. ಮನೆಗಂಟ ತೇಲ್ಕಂಡು ವೊಂಟೋಯ್ತೀನಿ. ಬಸ್ ಚಾರ್ಜೂ ವುಳ್ಕತದೆ. ಕಿಕ್ಕೂವೆ ರಾಕೆಟ್ಟು ಥರ ಸೊಯ್ ಅಂತ ಮೇಲುಕ್ಕೆ ವೊಂಟೋಯ್ತದೆ ಅಲ್ವಾ?' ಅಂದ ಮೈಲಾರಿ. 'ನಿಂಗೆ ವೋಗೋ ಟೇಮು ಬಂದೋಗದೆ ಕಣ್ಲಾ. ಬಿದ್ರು ಮೋಟ್ರು ಕಟ್ಟೋದೆಯಾ ನಿಂಗೆ. ಅಲ್ಲಲೇ ನಾನು ಯೋಳಿದ್ದು, ಕಾಸು ತಿನ್ನೋ ರಾಜಕಾರಣಿಗ್ಳು, ಆಪೀಸರ್ಸುಗೆ ಗುಂಡಿಕ್ಕಿ ಸಾಯ್ಸಿ ಅಂತ. ನಿನ್ನುನ್ನ ಪಾರ್ಟಿ ಮಾಡಕ್ಕೆ ಅಂತ ಏನರ ಕರ್ದೆ ಏನ್ಲಾ ನಾನು? ಪಾರ್ಟಿ ಮಾಡಕ್ಕೆ ನೀನೇನರ ನನ್ ನೆಂಟಾನ, ಚಿಕ್ಕಪ್ಪನ ಮಗಾನ?' ಅಂದ್ರು ಬಿದ್ರಿಯೋರು.
'ಅಯ್ಯೋ ಬುಡಿ. ಅದುಕ್ಕೆ ಯಾಕೆ ಈ ಪಾಟಿ ಸಿಟ್ಟು ಮಾಡ್ಕತೀರ. ನಾನು ವಸಿ ಕನ್‌ಪ್ಯೂಜು ಮಾಡ್ಕಂಬುಟ್ಟಿದ್ದೆ ಅಷ್ಟೇಯ. ಅಲ್ಲ, ಕಾಸು ತಿನ್ನೋರ್ಗೆ ನೀವೇ ಯಾಕೆ ಗುಂಡು ಹಾಕ್ಬಾರ್ದು ಅಂತೀನಿ. ಹೆಂಗೂ ನೀವು ಪೊಲೀಸ್ ಇಲಾಖೆನಾಗೆ ಇದ್ದೋರು. ಬಂದೂಕು ಹೆಂಗೆ, ಎತ್ತ ಅಂತ ತಿಳ್ದೋರು. ಗುರಿ ಸಂದಾಕೇ ಮಡುಗ್ತೀರ. ಜನ ಗುಂಡು ಹಾಕ್ಬೇಕು ಅಂತಂದ್ರೆ ಅವ್ರು ಬಂದೂಕು ತಕ್ಕಬೇಕು. ಅದುನ್ನ ಹೆಂಗೆ ಯೂಜು ಮಾಡೋದು ಅನ್ನೋದ್ನ ತಿಳ್ಕಬೇಕು. ಅಮ್ಯಾಲೆ ಗುಂಡು ಹಾಕಕ್ಕೆ ವೋಬೇಕು ಅಲ್ವಾ ? ಸರ್ಕಾರ್ದೋರು ಏನರ ಬಂದೂಕು ಭಾಗ್ಯ ಸ್ಕೀಮು ತಕ್ಕಂಡುಬಂದ್ರೆ ಜನ ಈ ಕೆಲ್ಸಾನೆಲ್ಲ ಮಾಡ್ಬೋದು'.
'ಅದೆಲ್ಲ ಯಾಕೆ ಅಂತೀನಿ ? ನೀವೆ ಒಂದು ಕಡ್ಯಾಗಿಂದ ಗುಂಡಾಕ್ಕಂಡು ಬಂದ್ಬುಟ್ರೆ ಪುಲ್ ಕಿಲೀನ್ ಆಗೋಯ್ತದೆ ಅಲ್ವಾ ಸಿವನೇ?' ಅಂತ ಮೈಲಾರಿ ಕೇಳ್ದ. 'ಇಲ್ಲ ಕಣ್ಲಾ, ಇಲಾಖೆ ಬುಟ್ಮೇಕೆ ಬಂದೂಕು ಯೂಜು ಮಾಡೋದು ಮರ್ತೋಗದೆ. ಅದುಕ್ಕೆ ಜನ್ರುಗೆ ಯೋಳ್ತಾಯಿರಾದು' ಅಂದ್ರು ಬಿದ್ರಿಯೋರು. 'ಇದು ಕಂಡೋರು ಮಕ್ಳುನ್ನ ಬಾವಿಗೆ ತಳ್ಳೋ ಸ್ಕೀಮು ಬುಡಿ. ಅದುನ್ನ ಬ್ಯಾರೆ ಸುರು ಹಚ್ಕಂಡಂಗದೆ ನೀವು' ಅಂತೇಳಿ ಮೈಲಾರಿ ವಸಿ ಸಿಟ್ಟು ಮಾಡ್ಕಂಬುಟ್ಟ. 'ಅಲ್ಲಲೇ ತಳ್ಳಕ್ಕೆ ಬಾವಿ ಎಲ್ಲದೆ ? ವೂರ್ತುಂಬ ಇರೋದು ಬೋರ್‌ವೆಲ್‌ಗುಳೇ ಅಲ್ವೇನ್ಲಾ?' ಅಂತ ಬಿದ್ರಿ ಸಾಹೇಬ್ರು ಕೇಳುದ್ರು.
ಬಾವಿನೋ, ಬೋರ್ವೆಲ್ಲೋ? ವೊಟ್ನಾಗೆ ಈವತ್ತು ಬರೇ ನೀರು ಕುಡ್ಕಂಡು ಮಲಿಕ್ಕಳಂಗೆ ಆಯ್ತು ಬುಡಿ' ಅಂತೇಳಿ ಮೈಲಾರಿ ಖಾಲಿ ಲೋಟ ಹಿಡ್ಕಂಡು ವೊಂಟ.

- ಕೆ.ವಿ.ಪ್ರಭಾಕರ್
prabhukolar@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com