'ಭಾರತ ರತ್ನ' ಪಡೆಯುವ ಅರ್ಹತೆ ಅಟಲ್‌ಗಿಲ್ಲವೇ?

ಒಂದು ಸಣ್ಣ ವಿವಾದವಿಲ್ಲದೇ 'ಭಾರತ ರತ್ನ'ದಂಥ ಅತ್ಯುನ್ನತ ಗೌರವ...
'ಭಾರತ ರತ್ನ' ಪಡೆಯುವ ಅರ್ಹತೆ ಅಟಲ್‌ಗಿಲ್ಲವೇ?
Updated on: 

ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ಅಟಲ್ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ 'ಅಟಲ್ ಗ್ರಾಮ್ ಸಡಕ್ ಯೋಜನಾ' ಎಂದು ಹೆಸರಿಸಿ ಯೋಜನೆಯ ಕರಡನ್ನು ಮುಂದಿಟ್ಟಾಗ, ತಮ್ಮ ಹೆಸರನ್ನು ಕಾಟು ಹೊಡೆದು 'ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನಾ' ಎಂದು ತಿದ್ದಿದರು ಅಟಲ್! ಇಂಥ ವ್ಯಕ್ತಿಯ ವಿಷಯದಲ್ಲೂ ಚೌಕಾಶಿ ಮಾಡಬೇಕೆ?

ಒಂದು ಸಣ್ಣ ವಿವಾದವಿಲ್ಲದೇ 'ಭಾರತ ರತ್ನ'ದಂಥ ಅತ್ಯುನ್ನತ ಗೌರವ, ಪ್ರಶಸ್ತಿಯನ್ನು ಕೊಡಲು ನಮಗೆ ಆಗುವುದಿಲ್ಲವಲ್ಲ. ಈ ಭಾರತರತ್ನಕ್ಕೂ ವಿವಾದಕ್ಕೂ ಅದ್ಯಾವ ನಂಟೋ ತಿಳಿಯುವುದಿಲ್ಲ. ಯಾರಿಗೇ ಕೊಡಲಿ ವಿವಾದ ಗ್ಯಾರಂಟಿ. ಸಚಿನ್ ತೆಂಡೂಲ್ಕರ್‌ಗೆ ಕೊಟ್ಟರೆ, ಧ್ಯಾನಚಂದ್‌ಗೆ ಯಾಕೆ ಕೊಟ್ಟಿಲ್ಲ ಅಂತ ಕೇಳುತ್ತಾರೆ. 'ಸಚಿನ್‌ಗೇಕೆ ಕೊಡಬೇಕು ಆತ ತನಗೋಸ್ಕರ ಕ್ರಿಕೆಟ್ ಆಡಿದವನು, ದೇಶಕ್ಕಾಗಿ ಆಡಿದವನಲ್ಲ, ಹಣಕ್ಕಾಗಿ ಆಡಿದವನು' ಎಂದು ಹಂಗಿಸುತ್ತಾರೆ. ಭಾರತರತ್ನವನ್ನು ವಾಪಸ್ ಪಡೆಯಿರಿ ಎಂದು ಆಗ್ರಹಪಡಿಸುತ್ತಾರೆ. ಇದೆಂಥ ಸಂಸ್ಕೃತಿ? ಪ್ರಶಸ್ತಿ ಕೊಟ್ಟ ನಂತರ ವಾಪಸ್ ಕಿತ್ತುಕೊಳ್ಳಲಾಗುತ್ತದೆಯೇ? ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಭೀಮಸೇನ ಜೋಷಿಯವರಿಗೆ ಭಾರತರತ್ನ ನೀಡಿದಾಗಲೂ ಮಹಾರಾಷ್ಟ್ರದಲ್ಲಿ ವಿವಾದವೆದ್ದಿತ್ತು. 'ಭೀಮಸೇನ ಜೋಷಿ' ಮಹಾನ್ ಸಂಗೀತಗಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅವರು ಮೊದಲ ಪತ್ನಿಯಿರುವಾಗಲೇ ಎರಡನೇ ವಿವಾಹವಾಗಿದ್ದರು, ಅಲ್ಲದೇ ಸಂಗೀತ ಕಛೇರಿಗೆ ಮುನ್ನ ಕುಡಿದು ಬಂದು ಹಾಡುತ್ತಿದ್ದರು. ಇಂಥವರಿಗೆಲ್ಲ ಭಾರತರತ್ನ ಕೊಟ್ಟರೆ ಆ ಪ್ರಶಸ್ತಿಯ ಕಿಮ್ಮತ್ತು ಹೋಗುತ್ತದೆ' ಎಂದು ಅಲ್ಲಿನ ಕೆಲವು ಬುದ್ಧಿಜೀವಿಗಳು ಹುಯಿಲೆಬ್ಬಿಸಿದ್ದರು. ಆದರೆ ಅವರ ವಾದಕ್ಕೆ ಯಾರೂ ಕಿಮ್ಮತ್ತು ಕೊಡಲಿಲ್ಲವೆನ್ನಿ. ಪುಣ್ಯ, ನಮ್ಮ ಪ್ರೊ. ಸಿ.ಎನ್.ಆರ್. ರಾವ್‌ಗೆ ಈ ಗೌರವ ನೀಡಿದಾಗ ಯಾರೂ ಚಕಾರವೆತ್ತಲಿಲ್ಲ.
ವಿಚಿತ್ರ ಅಂದ್ರೆ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ 'ಭಾರತ ರತ್ನ'ವನ್ನು ಕೊಟ್ಟಿಲ್ಲ. ಆದರೂ ಅದು ವಿವಾದವಾಗಿದೆ. ಕಾಂಗ್ರೆಸ್‌ನ ಅವಿವೇಕಿ ರಾಜಕಾರಣಿಯೊಬ್ಬರು ವಾಜಪೇಯಿಗೆ ಭಾರತ ರತ್ನ ಕೊಡಲೇ ಕೂಡದೆಂದೂ ಆಗ್ರಹಿಸಿ, ಅದಕ್ಕೊಂದು ಮೂರ್ಖ ಹಾಗೂ ಬಾಲಿಶ ಕಾರಣ ಕೊಟ್ಟೂ ಆಗಿದೆ. ಈ ರಾಜಕಾರಣಿಯ ಪ್ರತಿಕ್ರಿಯೆಯ ಬಗ್ಗೆ ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರ ಬಳಿ ಮಾತನಾಡಿದಾಗ ಅವರು, 'ಅವರನ್ನು ಅಷ್ಟು ಗಂಭೀರವಾಗಿ ಪರಿಗಣಿಸಬೇಕಿಲ್ಲ. ವಾಜಪೇಯಿ ಬಗ್ಗೆ ಮಾತಾಡುವ ಯೋಗ್ಯತೆಯೇನಾದರೂ ಅವರಿಗಿದೆಯಾ ಎಂಬುದನ್ನು ಕೇಳಿಕೊಂಡಿದ್ದರೆ ಮರ್ಯಾದೆಯಾದರೂ ಇರುತ್ತಿತ್ತು. ನಿಸ್ಸಂದೇಹವಾಗಿ ವಾಜಪೇಯಿ ಭಾರತರತ್ನಕ್ಕೆ ಅರ್ಹರು. ಆದರೆ ಪಕ್ಷದ ಕಟ್ಟಳೆಗಳಿಂದಾಗಿ ಈ ಮಾತನ್ನು ಬಹಿರಂಗವಾಗಿ ಹೇಳಲು ಆಗುತ್ತಿಲ್ಲ' ಎಂದರು. ದಿಲ್ಲಿಯ ಕಮ್ಯುನಿಸ್ಟ್ ನಾಯಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಹಾಗೆಂದು ಹಿರಿಯ ಪತ್ರಕರ್ತ ಇಂದರ್ ಮಲ್ಹೋತ್ರಾ ಬರೆದಿದ್ದಾರೆ. ಯುಪಿಎ ಸರ್ಕಾರದಲ್ಲಿ ಮಂತ್ರಿಯಾಗಿರುವ ಶಶಿ ತರೂರ್, ಜೆಡಿಯು ನಾಯಕ ನಿತೀಶ್‌ಕುಮಾರ್, ಜಮ್ಮು-ಕಾಶ್ಮೀರದ ಮುಖಂಡ ಡಾ. ಫಾರೂಕ್ ಆಬ್ದುಲ್ಲಾ, ಶರದ್ ಯಾದವ್, ಅಕಾಲಿ ನಾಯಕ ಪ್ರಕಾಶ್ ಸಿಂಗ್ ಬಾದಲ್ ಪಕ್ಷಭೇದ ಮರೆತು ವಾಜಪೇಯಿಗೆ 'ಭಾರತ ರತ್ನ' ನೀಡಬೇಕೆಂದು ಹೇಳಿದ್ದಾರೆ. ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಡಾ. ಫಾರೂಕ್ ಅಬ್ದುಲ್ಲಾ ಅವರಂತೂ, 'ನಾನು ಬಿಜೆಪಿಯವನಲ್ಲ, ಆದರೆ ನಾನು ಭಾರತೀಯ. ಈ ದೇಶಕ್ಕೆ ವಾಜಪೇಯಿ ನೀಡಿದ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಅವರಿಗಲ್ಲದೇ ಮತ್ಯಾರಿಗೆ ನೀಡುತ್ತೀರಿ' ಎಂದು ಕೇಳಿದ್ದಾರೆ. ಯುಪಿಎ ಸರ್ಕಾರದ ಮಂತ್ರಿಯೂ ಆಗಿರುವ ಡಾ. ಅಬ್ದುಲ್ಲಾ ಮಾತು ಮನನೀಯ. ತಾನು ಕಾಂಗ್ರೆಸ್‌ನ ಚೇಲಾ ಎಂದು ಕರೆದುಕೊಳ್ಳುವ ಪತ್ರಕರ್ತ ವಿನೋದ ಮೆಹತಾ ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ W‌hy Va​j​p​a​y​ee s‌h‌o‌uld ‌get t‌he B‌ha‌ra​ta Ra​tna ಎಂಬ ಲೇಖನ ಬರೆದು ಅವರಿಗೆ ಅದನ್ನು ಕೊಡಬೇಕೆಂದು ಹೇಳಿದ್ದಾರೆ. ಇಂದು ಎಲ್ಲ ರಾಜಕೀಯ ಪಕ್ಷಗಳಲ್ಲಿ ಭಾರತರತ್ನಕ್ಕೆ ಒಪ್ಪುವ ವ್ಯಕ್ತಿಗಳಿದ್ದರೆ ಅವರು ವಾಜಪೇಯಿ ಎಂದು ಎರಡು ರಾಷ್ಟ್ರೀಯ ಸಮೀಕ್ಷೆಗಳಿಂದಲೂ ವ್ಯಕ್ತಪಟ್ಟಿದೆ. ಆ ಸಮೀಕ್ಷೆ ಕೊನೆಯಲ್ಲಿ, 'ಇಪ್ಪತ್ತೆಂಟು ಬಣ್ಣ, ಸೊಗಡು, ನಾಟಕ, ಕರಾಮತ್ತು, ತಂತ್ರಗಳ ರಾಜಕೀಯ ಪಕ್ಷಗಳ ನಾಯಕರನ್ನು ಸೇರಿಸಿಕೊಂಡು ಕೇಂದ್ರ ಸರ್ಕಾರಕ್ಕೆ ನೇತೃತ್ವ ಕೊಟ್ಟರಲ್ಲ, ವಾಜಪೇಯಿ ಸರ್ವಮಾನ್ಯ ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಾ?' ಎಂದು ಹೇಳಿದೆ.
ಹಾಗೆ ನೋಡಿದರೆ, ವಾಜಪೇಯಿ ನಿಜಕ್ಕೂ ಅಜಾತಶತ್ರು. ರಾಜಕೀಯವಾಗಿ ಅವರನ್ನು ಟೀಕಿಸುವವರು ಸಹ 'R‌i‌g‌ht man ‌in a w‌r‌on‌g pa‌r​ty'  ಎಂದು ಹೇಳುತ್ತಾ ಅವರನ್ನು ಪ್ರಶಂಸಿಸುವುದುಂಟು. ಐದೂವರೆ ದಶಕಗಳ ಸುದೀರ್ಘ ಇತಿಹಾಸದಲ್ಲಿ ಅವರು ಯಾವ ಹಗರಣ, ಕರ್ಮಕಾಂಡ, ವಿವಾದ, ಅಪಸವ್ಯಗಳಿಗೆ ಗುರಿಯಾದವರಲ್ಲ. ಎಂದೂ ಕೀಳುಮಟ್ಟದ ರಾಜಕಾರಣಕ್ಕಿಳಿದವರಲ್ಲ. ಎನ್.ಎಂ. ಘಟಾಟೆ ಅವರು ಸಂಪಾದಿಸಿದ My F‌o‌u‌r De‌cad​es ‌in Pa‌r​l‌i​a​m​ent ಎಂಬ ಪುಸ್ತಕದಲ್ಲಿ ಲೋಕಸಭೆಯಲ್ಲಿ ನಡೆದ ಪ್ರಸಂಗವನ್ನು ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಜವಾಹರ್‌ಲಾಲ್ ನೆಹರು ಅವರ ಚೀನಾ ನೀತಿಯನ್ನು ಖಂಡಿಸಿ ಲೋಕಸಭೆಯಲ್ಲಿ ಪ್ರತಿಪಕ್ಷದ ಹದಿನೆಂಟು ನಾಯಕರು ಮಾತಾಡುತ್ತಾರೆ. ಚರ್ಚೆ ಎರಡು ದಿನಗಳವರೆಗೆ ಸಾಗುತ್ತದೆ. ಅಂದಿನ ಜನಸಂಘದ ಸದಸ್ಯ ವಾಜಪೇಯಿ ಕೂಡ ಎದ್ದು ನಿಂತು ಹೇಳುತ್ತಾರೆ- 'ಪ್ರತಿಪಕ್ಷದ ಸದಸ್ಯರೆಂದರೆ ಸರ್ಕಾರವನ್ನು ಯಾವತ್ತೂ ಟೀಕಿಸಲೇಬೇಕೆಂಬ ನಿಯಮವಿದೆಯಾ? ದೇಶದ ಗಡಿ, ಭದ್ರತೆ ವಿಷಯದಲ್ಲಿ ರಾಜಕೀಯ ಮಾಡಬಾರದು. ನಾವು ಪ್ರಧಾನಿ ಜತೆ ನಿಲ್ಲಬೇಕು. ಅವರಿಗೆ ನೈತಿಕಶಕ್ತಿ ನೀಡಬೇಕು. ನಮಗೆ ಸರ್ಕಾರವನ್ನು ಟೀಕಿಸಲು, ಪ್ರಧಾನಿಯವರನ್ನು ನಿಂದಿಸಲು ಹಲವಾರು ವಿಷಯಗಳಿವೆ. ಆದರೆ ಈ ಸಂದರ್ಭದಲ್ಲಿ ಪ್ರಧಾನಿ ನೆಹರು ಅವರು ಚೀನಾ ವಿಷಯದಲ್ಲಿ ತಳೆ ನಿಲುವನ್ನು ಬೆಂಬಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.'
ವಾಜಪೇಯಿ ಮಾತು ಕೇಳಿ ಇಡೀ ಸದನ ನಿಬ್ಬೆರಗಾಗಿತ್ತು. ಕಾಂಗ್ರೆಸ್ ಸದಸ್ಯರು ಎದ್ದುಬಂದು ಹಿಂದಿನ ಸಾಲಿನಲ್ಲಿ ಕುಳಿತಿದ್ದ ವಾಜಪೇಯಿ ಬಳಿ ತೆರಳಿ ಅಭಿನಂದನೆ ಸಲ್ಲಿಸಿದ್ದರು. ಚೀನಾ ವಿಷಯದಲ್ಲಿ ಮುಂದೆ ನೆಹರು ತಪ್ಪು ಹೆಜ್ಜೆಗಳನ್ನಿಟ್ಟಾಗ ಅದನ್ನು ಟೀಕಿಸಲು ಸಹ ವಾಜಪೇಯಿ ಹಿಂದೆ ಮುಂದೆ ನೋಡಲಿಲ್ಲ. 'ತಮಗೆ ನೀಡಿದ ಬೆಂಬಲವನ್ನು ತಪ್ಪುಗಳನ್ನೆಸಲು ಕೊಟ್ಟ ಪರವಾನಗಿ ಎಂದು ಪ್ರಧಾನಿ ನೆಹರು ಭಾವಿಸಬಾರದು' ಎಂದು ನಯವಾಗಿ, ತೀಕ್ಷ್ಣವಾಗಿ ತಿವಿದಿದ್ದರು. ವಾಜಪೇಯಿ ಅವರ ಈ ಮಾತುಗಳನ್ನು ನೆಹರು ಒಂದೆರಡು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದರಂತೆ.
1962ರಲ್ಲಿ ವಾಜಪೇಯಿ ಅವರು ಉತ್ತರಪ್ರದೇಶದ ಬಲರಾಮಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಅಂದಿನ ಪ್ರಧಾನಿ ನೆಹರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ ನೆಹರು ಕಾರ್ಯಕ್ರಮ ಪಟ್ಟಿಯಲ್ಲಿ ಬಲರಾಮಪುರದಲ್ಲಿ ಭಾಷಣ ಮಾಡುವುದಿರಲಿಲ್ಲ. ಆಗ ಕಾಂಗ್ರೆಸ್ ಅಭ್ಯರ್ಥಿ ಸುಭದ್ರಾ ಜೋಶಿ ಅವರು ನೆಹರು ಮುಂದೆ ತಾನು ಸ್ಪರ್ಧಿಸಿರುವ ಕ್ಷೇತ್ರಕ್ಕೆ ಪ್ರಚಾರಮಾಡಲು ಬರಲೇಬೇಕೆಂದು ಪಟ್ಟು ಹಿಡಿದರು. ನೆಹರುಗೆ ತೀವ್ರ ಪೀಕಲಾಟ. ಕೊನೆಗೆ ಸುಭದ್ರಾ ಜೋಶಿಯವರನ್ನು ಕರೆದು 'ನೀವು ಗೆಲ್ಲುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ವಾಜಪೇಯಿ ವಿರುದ್ಧ ನಾನು ಪ್ರಚಾರ ಮಾಡುವುದಿಲ್ಲ' ಎಂದು ಹೇಳಿದರು. ಈ ಉತ್ತರದಿಂದ ಸುಭದ್ರಾ ಜೋಶಿಗೆ ಸಮಾಧಾನವಾಗದಿದ್ದಾಗ, ನೆಹರು ಹೇಳಿದ್ದು- 'ಬಲರಾಮಪುರಕ್ಕೆ ಬರದಿರಲು ಬಲವಾದ ಕಾರಣವಿದೆ. ನೀವು ಎಷ್ಟೇ ಒತ್ತಾಯಿಸಿದರೂ ನನ್ನ ನಿರ್ಧಾರವನ್ನು ಬದಲಿಸಲು ಸಾಧ್ಯವಿಲ್ಲ. ನಿಮ್ಮ ವಿರುದ್ಧ ಸ್ಪರ್ಧಿಸಿರುವ ಜನಸಂಘದ ಅಭ್ಯರ್ಥಿ ವಾಜಪೇಯಿ ಉತ್ತಮ ವಾಗ್ಮಿ. ಅದರಲ್ಲೂ ವಿದೇಶಾಂಗ ವ್ಯವಹಾರಗಳ ಬಗ್ಗೆ ಅವರಿಗೆ ಅತೀವ ಆಸಕ್ತಿಯಿದೆ. ಲೋಕಸಭೆ ಕಲಾಪಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಅಂಥವರು ಸದನದಲ್ಲಿದ್ದರೆ ಭೂಷಣ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯದು. ಹೀಗಾಗಿ ನಾನು ಅವರ ವಿರುದ್ಧ ಪ್ರಚಾರ ಮಾಡುವುದಿಲ್ಲ.' ಈ ಬಗ್ಗೆ ಪಕ್ಷದಲ್ಲಿ ಚರ್ಚೆಯಾದರೂ, ನೆಹರು ತಮ್ಮ ನಿರ್ಧಾರದಿಂದ ಹಜಕಾಡಲಿಲ್ಲ.
ವಾಜಪೇಯಿಯವರಿಗೆ ಅತ್ಯುತ್ತಮ ಸಂಸದೀಯಪಟು ಪ್ರಶಸ್ತಿ ಪ್ರದಾನ ಮಾಡಿ ಮಾತಾಡಿದ ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಹೇಳಿದ ಮಾತು ಕೆಲವು ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿತ್ತು. ವಾಜಪೇಯಿ ಅವರನ್ನು ಆತ್ಮೀಯವಾಗಿ ಆಲಂಗಿಸಿದ ನರಸಿಂಹರಾವ್, 'ಭಾರತೀಯ ಸಂಸದೀಯ ಚರಿತ್ರೆಗೆ ವಿಶೇಷ ಮೆರುಗನ್ನು ನೀಡಿದ ಅಪರೂಪದ ನಾಯಕ ವಾಜಪೇಯಿ. ಇವರೇ ನನ್ನ ರಾಜಕೀಯ ಗುರು' ಎಂದು ತಮ್ಮ ಭಾಷಣದಲ್ಲಿ ಹೇಳಿ ಕಾಂಗ್ರೆಸ್ಸಿಗರ ಹುಬ್ಬೇರುವಂತೆ ಮಾಡಿದ್ದರು.
ಕಮ್ಯುನಿಸ್ಟ್ ನಾಯಕರಾದ ಜ್ಯೋತಿಬಸು ಅವರು ತಮ್ಮ ಪಕ್ಷದ ಸಭೆಯಲ್ಲಿ ಪಾಲ್ಗೊಂಡಾಗ ವೇದಿಕೆ ಮೇಲಿದ್ದ ಕಾಮ್ರೇಡ್‌ಗಳ ಜತೆ ಮಾತಾಡುತ್ತಾ, 'ಬಿಜೆಪಿ ಬಗ್ಗೆ ಟೀಕಿಸಬಹುದು. ಆದರೆ ವಾಜಪೇಯಿ ಅವರ ಹೆಸರು ಹಿಡಿದು ಅ ಪಕ್ಷವನ್ನು ಜರೆಯುವುದು ಕಷ್ಟ' ಎಂದು ಹೇಳಿದ್ದರು.
ವಿನೋದ ಮೆಹತಾ ವಾಜಪೇಯಿಗೆ 'ಭಾರತರತ್ನ'ವನ್ನು ಯಾಕೆ ಕೊಡಬೇಕು ಎಂಬ ಇತ್ತೀಚಿನ ತಮ್ಮ ಲೇಖನದಲ್ಲಿ ಒಂದೆಡೆ S‌in‌ce ‌he ‌is t‌he ‌only P‌ime ‌M‌in‌iste‌r I ‌have ‌kn‌own w‌h‌o ‌had a sen​se ‌of ‌h‌um‌o‌u‌r,​​ ‌he enj‌o​yed t‌he e‌x‌c‌han‌ge ‌of w‌it​t‌i‌c‌i​s​ms ಎಂದು ಬರೆದಿದ್ದಾರೆ. ಅದೇ ಲೇಖನದಲ್ಲಿ ಅವರು ಒಂದು ಪ್ರಸಂಗವನ್ನು ನೆನಪಿಸಿದ್ದಾರೆ. ಒಮ್ಮೆ ಮೆಹತಾ ಪ್ರಧಾನಿ ವಾಜಪೇಯಿಯವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ಹೋಗಿದ್ದರಂತೆ. ಆದರೆ ವಾಜಪೇಯಿ ಎಂದಿನ ಖುಷಿ ಹಾಗೂ ಉಲ್ಲಾಸದ ಮೂಡಿನಲ್ಲಿ ಇದ್ದಿರಲಿಲ್ಲವಂತೆ. ಅದನ್ನು ಸೂಕ್ಷ್ಮವಾಗಿ ಗ್ರಹಿಸಿದ ಮೆಹತಾ ಆ ಕುರಿತು ವಾಜಪೇಯಿಯವರನ್ನು ಕೇಳಿದಾಗ, 'ನೀವು ಹೋದ ನಂತರ ನನ್ನನ್ನು ಭೇಟಿ ಮಾಡಲು ಜಯಲಲಿತಾ ಬರುತ್ತಾರೆ' ಎಂದು ಹೇಳಿ ಬಾಯಿ ತುಂಬಾ ನಕ್ಕಿದ್ದರಂತೆ.
ವಿನೋದ ಮೆಹ್ತಾ ಬರೆದ ಒಂದು ಸಂಗತಿ ಗಮನಾರ್ಹ. ವಾಜಪೇಯಿ ಬದಲು ಮತ್ತ್ಯಾರೇ ಪ್ರಧಾನಿಯಾಗಿದ್ದರೂ ಅಮೆರಿಕ ಅಧ್ಯಕ್ಷ ಜಾರ್ಜ್ ಬುಶ್ ಪ್ರಣೀತ ಇರಾಕ್ ಯುದ್ಧಕ್ಕೆ ಭಾರತದ ಸೇನೆಯನ್ನು ಕಳಿಸುತ್ತಿದ್ದರು. 'ಅಮೆರಿಕದ ಸೈನಿಕರು ಇರಾಕ್‌ನಲ್ಲಿ ಸಾಯುತ್ತಿದ್ದಾರೆ. ಬುಶ್ ನಮ್ಮ ಸೈನಿಕರನ್ನು ಕಳಿಸಿಕೊಡಿ ಎಂದು ಬಲವಂತ ಮಾಡುತ್ತಿದ್ದಾರೆ. ನಮ್ಮ ಸೈನಿಕರನ್ನು ಅಲ್ಲಿಗೆ ಕಳಿಸುವುದನ್ನು ಖಂಡಿತ ಒಪ್ಪುವುದಿಲ್ಲ. ನಮ್ಮ ಸೈನಿಕರು ಇರಾಕಿನ ನೆಲದಲ್ಲಿ ಸಾಯುವುದನ್ನು ನಾನು ಬಯಸುವುದಿಲ್ಲ' ಎಂದು ಮೆಹತಾಗೆ ವಾಜಪೇಯಿ ಹೇಳಿದ್ದರಂತೆ. ಇದೇ ಸಂದರ್ಭದಲ್ಲಿ ಕಮ್ಯುನಿಸ್ಟ್ ನಾಯಕರಾದ ಎ.ಬಿ. ಬರ್ದನ್ ಮತ್ತು ಹರ್ಕಿಶನ್ ಸಿಂಗ್ ಸುರ್ಜಿತ್‌ರನ್ನು ವಾಜಪೇಯಿ ಕರೆಯಿಸಿಕೊಂಡಿದ್ದರು. ಈ ಇಬ್ಬರು ನಾಯಕರು ಇರಾಕ್‌ಗೆ ಭಾರತದ ಸೇನೆ ಕಳಿಸಕೂಡದೆಂದು ಆಗ್ರಹಿಸುವಂತೆ ದೇಶವ್ಯಾಪಿ ಹೋರಾಟ ಹಮ್ಮಿಕೊಂಡಿದ್ದರು. 'ನಿಮ್ಮ ಹೋರಾಟ ಹೇಗೆ ನಡೆಯುತ್ತಿದೆ?' ಎಂದು ವಾಜಪೇಯಿ ಕೇಳಿದರು. 'ಸಾರ್ವಜನಿಕರು ಪೂರಕವಾಗಿ ಸ್ಪಂದಿಸುತ್ತಿದ್ದಾರೆ, ಉತ್ತೇಜಕ ಸ್ಪಂದನೆ ಸಿಗುತ್ತಿದೆ' ಎಂದು ಅವರಿಬ್ಬರೂ ಹೇಳಿದರು. ಅದಕ್ಕೆ ವಾಜಪೇಯಿ 'ಆದರೆ ನನಗೆ ನಿಮ್ಮ ಹೋರಾಟದ ಕೂಗೇ ಕೇಳುತ್ತಿಲ್ಲ' ಎಂದು ಹೇಳಿದರು. ಈ ಹೋರಾಟ ಇನ್ನಷ್ಟು ತೀವ್ರವಾದರೆ ದೇಶದಲ್ಲಿ ಉಗ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಗೆ ಭಾರತೀಯ ಸೇನೆಯನ್ನು ಕಳಿಸಲು ಸಾಧ್ಯವಾಗುತ್ತಿಲ್ಲ ಹಾಗೂ ರಾಜಕೀಯ ವಿರೋಧಿಗಳು ತನ್ನ ಕೈ ಕಟ್ಟಿಹಾಕಿದ್ದಾರೆಂದು ಅಮೆರಿಕದ ಅಧ್ಯಕ್ಷನಿಗೆ ಮನವರಿಕೆ ಮಾಡಿಕೊಡುವುದು ವಾಜಪೇಯಿ ಉದ್ದೇಶವಾಗಿತ್ತು. ಕೊನೆಗೂ ವಾಜಪೇಯಿ ತಂತ್ರಗಾರಿಕೆ ಫಲಿಸಿತು.
ಮೊರಾರ್ಜಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದಾಗ ಪಾಕಿಸ್ತಾನಕ್ಕೆ ಹೋದಾಗ, 'ಇನ್ನು ಮುಂದೆ ಭಾರತ-ಪಾಕಿಸ್ತಾನ ಕೇವಲ ಕ್ರಿಕೆಟ್ ಮೈದಾನದಲ್ಲಿ ಸೆಣಸುವುದೇ ಹೊರತು, ಯುದ್ಧಭೂಮಿಯಲ್ಲಿ ಅಲ್ಲ' ಎಂದು ಹೇಳುವ ಮೂಲಕ ಪಾಕ್ ಜತೆ ಸ್ನೇಹಹಸ್ತ ಚಾಚಿದ್ದ ವಾಜಪೇಯಿ, ಎರಡು ದಶಕಗಳ ಬಳಿಕ ತಾವೇ ಪ್ರಧಾನಮಂತ್ರಿಯಾದಾಗ, ಪಾಕ್ ಜತೆಗಿನ ಸಂಬಂಧ ಸುಧಾರಣೆಗೆ ಲಾಹೋರ್ ಬಸ್‌ಯಾತ್ರೆ ಹೊರಟಿದ್ದು ಐತಿಹಾಸಿಕ ಕ್ಷಣ. ಜಾಗತಿಕರಣಕ್ಕೆ ಸ್ಪಂದಿಸಿ ನರಸಿಂಹರಾವ್ ಅವರು ಜಗತ್ತಿನೆಡೆಗೆ ಭಾರತದ ಮುಖವನ್ನು ತಿರುಗಿಸಿದರೆ, ವಾಜಪೇಯಿಯವರು ಅಭಿವೃದ್ಧಿ ಹಾಗೂ ವಿಕಾಸದ ಜಪ ಪಠಿಸುತ್ತಾ ನವಭಾರತದ ಉದಯಕ್ಕೆ ಇಂಬು ನೀಡಿದ್ದು ಸಹ ವಾಸ್ತವ.
ವಾಜಪೇಯಿಗೆ ಯಾರ ಶಿಫಾರಸು ಬೇಕಾಗಿಲ್ಲ. ಅವರು ಸವೆಸಿದ ಸಾರ್ವಜನಿಕ ಪಥವೇ ಅವರೆಂಥವರು ಎಂಬುದಕ್ಕೆ ನಿದರ್ಶನ. ಪ್ರಾಯಶಃ ಸ್ವತಂತ್ರ ಭಾರತದಲ್ಲಿ ಜವಾಹರ್‌ಲಾಲ್ ನೆಹರು ಹಾಗೂ ಇಂದಿರಾಗಾಂಧಿ ನಂತರ ದೇಶದ ಜನಮಾನಸವನ್ನು ಮುಟ್ಟಿದ ಮತ್ತೊಬ್ಬ ನಾಯಕರಿದ್ದರೆ, ನಿಸ್ಸಂದೇಹವಾಗಿ ಅವರು ವಾಜಪೇಯಿ. ಹಾಗಂತ ಅವರ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಯಾವ ದೃಷ್ಟಿಯಿಂದ, ದಿಕ್ಕಿನಿಂದ ನೋಡಿದರೂ ವಾಜಪೇಯಿ ಈ ಗೌರವಕ್ಕೆ ಅರ್ಹರು. ರಾಜಕೀಯ ಕಾರಣವನ್ನು ಪರಿಗಣಿಸಿದರೂ ವಾಜಪೇಯಿ ಯೋಗ್ಯರು. ಅವರಿಗೆ ಸ್ವಹಿತಾಸಕ್ತಿ ಎಂದಿಗೂ ಮುಖ್ಯವಾಗಿರಲಿಲ್ಲ. ರಾಷ್ಟ್ರಹಿತದ ಮುಂದೆ ಪಕ್ಷ ಹಿತವನ್ನೂ ಕಡೆಗಣಿಸಿದವರು. ಅವರು ಅಧಿಕಾರದ ರಾಜಕಾರಣಕ್ಕೆ ಎಂದೂ ಅಂಟಿಕೊಂಡವರಲ್ಲ. ಸಮ್ಮಿಶ್ರ ಸರ್ಕಾರದ ನಾಯಕನಾಗಿ ಮರ್ಯಾದೆ ಬಿಟ್ಟು, ದೇಶ ಹಿತವನ್ನು ಕಡೆಗಣಿಸಿ ರಾಜಕಾರಣ ಮಾಡಲಿಲ್ಲ. ಸರ್ಕಾರದ ಅಂಗಪಕ್ಷಗಳ ಒತ್ತಡ ಜಾಸ್ತಿಯಾದಾಗ, ಸರ್ಕಾರದ ಪತನ ಸನ್ನಿಹಿತವಾದಾಗ, ರಾಜಿ ಮಾಡಿಕೊಳ್ಳಲಿಲ್ಲ. ಸರ್ಕಾರ ಬಿದ್ದು ಹೋಯಿತು. ವಾಜಪೇಯಿ ಪುನಃ ಜನರ ಬಳಿ ಹೋದರೇ ಶಿವಾಯ್ ಅಂಗಪಕ್ಷಗಳ ನಾಯಕರ ಕಾಲು ಹಿಡಿಯಲಿಲ್ಲ. ಸಂಪುಟ ಸಭೆಯಲ್ಲಿ ಹತ್ತಾರು ಪಕ್ಷಗಳ ನಾಯಕರ ಮಧ್ಯೆ ವಾಜಪೇಯಿ ಅವರ ನಿರ್ಧಾರವೇ ಅಂತಿಮವಾಗಿತ್ತು. ಅವರ ನಿರ್ಧಾರವನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ.
ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದ ಅರುಣ್ ಶೌರಿ ತಮ್ಮ ಲೇಖನವೊಂದರಲ್ಲಿ ಬರೆದಿದ್ದರು. 'ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ವಾಜಪೇಯಿ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ಅಟಲ್ ಗ್ರಾಮ ಸಡಕ್ ಯೋಜನಾ ಎಂದು ಹೆಸರಿಸಿ ವಾಜಪೇಯಿ ಮುಂದೆ ಯೋಜನೆಯ ಕರಡನ್ನು ಇಟ್ಟಾಗ, ತಮ್ಮ ಹೆಸರನ್ನು ಕಾಟು ಹೊಡೆದು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನಾ ಎಂದು ತಿದ್ದಿದರು' ಎಂದು ಶೌರಿ ಬರೆದಿದ್ದರು.
ಎರಡು ಸಂದರ್ಭಗಳಲ್ಲಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವ ಅವಕಾಶವಿತ್ತು. ಒಂದು ವೇಳೆ ಸರ್ಕಾರ ಬಚಾವ್ ಆದರೂ ಅಪಾಯದಿಂದ ಮುಕ್ತವಾಗಿರಲಿಲ್ಲ. 'ಇಂಥ ಸರ್ಕಾರ ಬೆಳೆಯುವುದಕ್ಕಿಂತ ಉರುಳುವುದೇ ಮೇಲು. ಅಧಿಕಾರಕ್ಕೆ ಅಂಟಿಕೊಂಡಿರುವುದರಲ್ಲಿ ಅರ್ಥವೇ ಇಲ್ಲ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಅಧಿಕಾರಕ್ಕೆ ಬರಲು ಹಾಗೂ ಅದನ್ನು ಉಳಿಸಿಕೊಳ್ಳಲು ಅನುಸರಿಸಿದ ಮಾರ್ಗ ಎಂಥದು ಎಂಬುದು ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಮಾತ್ರ ತಾನು ರಾಜಿ ಮಾಡಿಕೊಳ್ಳುವುದಿಲ್ಲ. ಆದರ ಬದಲು ರಾಜೀನಾಮೆ ನೀಡುತ್ತೇನೆ ಎಂದು ಹೇಳಿ ರಾಷ್ಟ್ರಪತಿ ಭವನದತ್ತ ಪ್ರಯಾಣ ಮಾಡಿದ್ದನ್ನು ಈ ದೇಶವಾಸಿಗಳು ಕಂಡಿದ್ದಾರೆ. ವಾಜಪೇಯಿಗೆ ಅವರೇ ಸಾಟಿ. ಅವರಂಥ ಇನ್ನೊಬ್ಬ ನಾಯಕ ಇಲ್ಲ. ಅವರಿಲ್ಲದ ಬಿಜೆಪಿ ಏನಾಯಿತು ಎಂಬುದನ್ನು ಸಹ ನೋಡಿದ್ದೇವೆ.
ವಾಜಪೇಯಿ ವಿಷಯದಲ್ಲಿ ಭಾರತರತ್ನಕ್ಕೆ ಯಾಕೆ ಚೌಕಾಶಿ ಮಾಡಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಅವರ ಏಕಮಾತ್ರ ನೆಗೆಟಿವ್ ಸಂಗತಿಯೆಂದರೆ ಅವರು ಕಾಂಗ್ರೆಸ್ಸಿಗರಲ್ಲ ಎಂಬುದು ಅಥವಾ ಹುಟ್ಟಾ ಕಾಂಗ್ರೆಸ್ ವಿರೋಧಿ ಎಂಬುದು. ಈ ಅಂಶವನ್ನು ಪರಿಗಣಿಸಿಯೇ ಅವರಿಗೆ ಆ ಗೌರವವನ್ನು ನೀಡಿದ್ದರೆ ಕೇಂದ್ರ ಸರ್ಕಾರಕ್ಕೆ ಶ್ರೇಯಸ್ಸು ಸಿಗುತ್ತಿತ್ತು. ತಾನು ಪಕ್ಷಪಾತಿ ಅಲ್ಲ ಎಂಬುದನ್ನಾದರೂ ಸಾರಿ ಹೇಳಿದಂತಾಗುತ್ತಿತ್ತು. ಆದರೆ ಕಾಂಗ್ರೆಸ್ ನಾಯಕರ ಮನಸ್ಸಿನಲ್ಲಿರುವ ಲೆಕ್ಕಾಚಾರಗಳೇನೋ ಗೊತ್ತಾಗುವುದಿಲ್ಲ.
ಕಾಂಗ್ರೆಸ್ ಸರ್ಕಾರ ಕಾಲಕಾಲಕ್ಕೆ ಈ ಪ್ರಶಸ್ತಿಯನ್ನು ಎಂಥೆಂಥವರಿಗೆ ಕೊಟ್ಟಿದೆಯೆಂಬುದನ್ನು ನೋಡಿದರೆ ಬೇಸರ, ಹೇಸಿಗೆ, ಅಸಹ್ಯವಾಗದೇ ಇರದು. 'ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಭಾರತರತ್ನ ಕೊಡುವುದಕ್ಕಿಂತ ಹದಿನಾರು ವರ್ಷಗಳ ಮೊದಲು ರಾಷ್ಟ್ರಪತಿ ಹುದ್ದೆಗೆ ಸ್ವಲ್ಪವೂ ಘನತೆ, ಗೌರವ ತಂದು ಕೊಡದ, ಬಾಯಿಬಿಟ್ಟು ಹೇಳಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದ, ನಿಮಗೆ ಎರಡು ಬಿಟ್ಟಿ ಸೈಟು ಕೊಡುತ್ತೇನೆ, ಆ ಲೇಔಟ್‌ಗೆ ನಿಮ್ಮ ಹೆಸರಿಡುತ್ತೇನೆ, ಬಂದು ಉದ್ಘಾಟನೆ ಮಾಡಿ ಎಂದಾಗ ಬೆಂಗಳೂರಿನ 'ಗಿರಿ'ನಗರಕ್ಕೆ ಬಂದು ಕೈಂಕರ್ಯ ಪೂರೈಸಿದ 'ವರಾಹಗಿರಿ ವೆಂಕಟಗಿರಿ' ಈ ಗೌರವಕ್ಕೆ ಪಾತ್ರರಾಗಿದ್ದರು ಎಂದರೆ ನಂಬಬೇಕು! ಗಿರಿ ಅವರಿಗೆ ಈ ಗೌರವ ನೀಡಿದ ಎಂಟು ವರ್ಷಗಳ ತರುವಾಯ ಆಚಾರ್ಯ ವಿನೋಬಾ ಭಾವೆಯವರಿಗೆ ಕರುಣಿಸಲಾಯಿತು.
ಮರುದು ಗೋಪಾಲನ್ ರಾಮಚಂದ್ರನ್ ಅಂದ್ರೆ ಯಾರಿಗೂ ಗೊತ್ತಾಗಲಿಕ್ಕಿಲ್ಲ. ಅದೇ ಎಂ.ಜಿ.ಆರ್. ಅಂದ್ರೆ ಎಲ್ಲರಿಗೂ ಗೊತ್ತಾಗುತ್ತದೆ. ಅವರು ತಮಿಳು ಚಿತ್ರರಂಗದ ಉತ್ತಮ ನಟರಾಗಿದ್ದರು. ತಮ್ಮ ಸಿನಿಮಾ ವರ್ಚಸ್ಸನ್ನು ಬಳಸಿಕೊಂಡು ಮುಖ್ಯಮಂತ್ರಿಯಾದರು. (ಇದೇ ಕಾರಣಕ್ಕಾದರೆ ಎನ್.ಟಿ. ರಾಮರಾವ್ ಅವರಿಗೂ ಭಾರತರತ್ನ ಕೊಡಬೇಕಿತ್ತು.) ಅವರು ಮುಖ್ಯಮಂತ್ರಿಯಾಗಿ ಮಾಡಿದ್ದು ಅಷ್ಟಕ್ಕಷ್ಟೆ. ನಟನೆಯನ್ನು ಪರಿಗಣಿಸಿದ್ದರೆ ಅವರಿಗಿಂತ ಉತ್ತಮ ನಟರಿದ್ದರು. ಯಾವುದೇ ಕಾರಣಕ್ಕೂ ಅವರು ಈ ಪ್ರಶಸ್ತಿಗೆ ಅರ್ಹರಿರಲಿಲ್ಲ. ಆದರೆ ಎಐಎಡಿಎಂಕೆಯೊಂದಿಗೆ ಮೈತ್ರಿಯನ್ನು ಗಟ್ಟಿಗೊಳಿಸಲು ಅಂದಿನ ಪ್ರಧಾನಿ ರಾಜೀವ್ ಗಾಂಧಿ ಸಮಯಸಾಧಕತನ ತೋರಿ ಎಂ.ಜಿ.ಆರ್.ಗೆ ಭಾರತರತ್ನ ನೀಡಿದರು.
ಭಾರತದ ಸಂವಿಧಾನಶಿಲ್ಪಿ, ದಲಿತರ ದನಿಯಾದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡುವುದಕ್ಕಿಂತ ಮೊದಲು ಎಂ.ಜಿ.ಆರ್.ಗೆ ಕೊಡುವಂಥ ಜರೂರತ್ತು ಏನಿತ್ತು? ಈ ಪ್ರಶ್ನೆ ವಿವಾದಕ್ಕೆ ಕಾರಣವಾಗಿದ್ದರಿಂದ ಮುಂದಿನ ವರ್ಷ ಡಾ. ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಾಯಿತು. ಇಲ್ಲದಿದ್ದರೆ ಡಾ. ಅಂಬೇಡ್ಕರರು ಇನ್ನೆಷ್ಟು ವರ್ಷ ಕಾಯಬೇಕಿತ್ತೋ?
ಇಂದಿರಾಗಾಂಧಿ ಪ್ರಧಾನಿಯಾಗಿರುವಷ್ಟು ಕಾಲ ತಮ್ಮ ತಂದೆಯ ಪ್ರತಿಸ್ಪರ್ಧಿ ಎಂದೇ ಬಿಂಬಿತವಾಗಿದ್ದ ವಲ್ಲಭಬಾಯಿ ಪಟೇಲ್‌ಗೆ ಭಾರತರತ್ನ ಸಿಗದಂತೆ ನೋಡಿಕೊಂಡರು. ರಾಜೀವ್‌ಗಾಂಧಿ ಸಹ ತಾಯಿ ಹಠವನ್ನು ಮುಂದುವರಿದರು. ಇವರಿಬ್ಬರೂ ಪ್ರಧಾನಿಯಾಗಿದ್ದಾಗ ಗಣರಾಜ್ಯೋತ್ಸವಕ್ಕಿಂತ ಮುನ್ನ ಭಾರತರತ್ನ ಪ್ರಶಸ್ತಿ ಸಂಭಾವ್ಯ ಅರ್ಹ ಅಭ್ಯರ್ಥಿಗಳ ಪಟ್ಟಿಯಲ್ಲಿ ಪಟೇಲ್ ಹೆಸರಿರುತ್ತಿತ್ತು. ಆದರೆ ಘೋಷಣೆ ಮಾತ್ರ ಆಗುತ್ತಿರಲಿಲ್ಲ. ಚಂದ್ರಶೇಖರ್ ಪ್ರಧಾನಿಯಾದಾಗ, 1991ರಲ್ಲಿ ಪಟೇಲ್‌ಗೆ 'ಭಾರತರತ್ನ' ನೀಡಲಾಯಿತು. ಅಷ್ಟೊತ್ತಿಗೆ ಪಟೇಲ್ ನಿಧನರಾಗಿ ನಲವತ್ತೊಂದು ವರ್ಷಗಳಾಗಿದ್ದವು. (ಚಂದ್ರಶೇಖರ್ ಪಟ್ಟು ಹಿಡಿಯದಿದ್ದರೆ ಮೊರಾರ್ಜಿ ದೇಸಾಯಿಗೂ ಭಾರತರತ್ನ ಸಿಗುತ್ತಿರಲಿಲ್ಲ.) ಪಟೇಲ್‌ರಿಗೆ ಆದದ್ದು ಜಯಪ್ರಕಾಶ ನಾರಾಯಣ ಅವರಿಗೂ ಆಯಿತು. 1980ರಿಂದ ಸಂಭಾವ್ಯರ ಪಟ್ಟಿಯಲ್ಲಿ ಜೆಪಿ ಹೆಸರು ಬಂದು ಹೋಗುತ್ತಿತ್ತು. ನರಸಿಂಹರಾಯರು ಜೆಪಿಗೆ ಭಾರತರತ್ನ ನೀಡಲು ಒಲವು ತೋರಿದ್ದರು. ಆದರೆ ಕೆಲ ಕಾಂಗ್ರೆಸ್ಸಿಗರು 'ಜೆಪಿ ಕಾಂಗ್ರೆಸ್ ಹಾಗೂ ಇಂದಿರಾ ವಿರೋಧಿಯಾಗಿದ್ದರು. ಅವರಿಗೆ ಹೇಗೆ ನೀಡುತ್ತೀರಿ?' ಎಂದು ಒತ್ತಡ ಹೇರಿದ್ದರಿಂದ ರಾಯರು ಸುಮ್ಮನಾದರು.
ಜೆಪಿ ನಿಧನರಾದ ಹತ್ತೊಂಬತ್ತು ವರ್ಷಗಳ ನಂತರ 1998ರಲ್ಲಿ ಭಾರತ ರತ್ನ ಬಂತು!
 ಮದರ್ ಥೆರೇಸಾಗೆ ಭಾರತರತ್ನ ಕೊಡಬೇಕೆಂದು ಇಂದಿರಾಗಾಂಧಿಯವರಿಗೆ ಅನಿಸಿದಾಗ ಅವರು ಭಾರತೀಯ ಮೂಲದವರಲ್ಲ ಎಂಬ ಪ್ರಶ್ನೆ ಎದುರಾಯಿತು. ಆಗ ಇಂದಿರಾಗಾಂಧಿ ಅವರು ಭಾರತ ರತ್ನ ಪ್ರಶಸ್ತಿಯ ಆಯ್ಕೆಯ ನಿಯಮಗಳನ್ನೇ ಬದಲಾಯಿಸಿದರು. ವಿದೇಶಿಯರನ್ನೂ ಈ ಪ್ರಶಸ್ತಿಗೆ ಆಯ್ಕೆ ಮಾಡಬಹುದು ಎಂಬ ನಿಯಮ ರೂಪಿಸಿದರು. (ಹುಟ್ಟಾ ಭಾರತೀಯರಲ್ಲದವರೂ 'ಭಾರತರತ್ನ' ಗೌರವಕ್ಕೆ ಪಾತ್ರರಾಗಬಹುದಾದ್ದರಿಂದ, ಸೋನಿಯಾ ಗಾಂಧಿಯವರೂ ಈ ಗೌರವಕ್ಕೆ ಪಾತ್ರರಾಗಲು ಯಾವುದೇ ತೊಡಕುಗಳಿಲ್ಲ.)
1954ರಲ್ಲಿ ಸ್ಥಾಪಿಸಲಾದ ಭಾರತರತ್ನ ಪ್ರಶಸ್ತಿಯನ್ನು ಪ್ರತಿವರ್ಷ ಒಬ್ಬರಂತೆ (ಮೂವರಿಗೆ ಕೊಡಬಹುದು) ಕೊಟ್ಟಿದ್ದರೆ, ಇಲ್ಲಿತನಕ 59 ಜನರು ಪಡೆದಿರುತ್ತಿದ್ದರು. ಆದರೆ ಮೊನ್ನೆ ಸಚಿನ್ ತೆಂಡೂಲ್ಕರ್ ಸೇರಿದಂತೆ ಇಲ್ಲಿತನಕ ಈ ಗೌರವಕ್ಕೆ ಪಾತ್ರರಾದವರು 43 ಮಂದಿ. 2001ರಲ್ಲಿ ಲತಾ ಮಂಗೇಶ್ಕರ್ ಹಾಗೂ ಬಿಸ್ಮಿಲ್ಲಾಖಾನ್ ಅವರಿಗೆ ಭಾರತರತ್ನ ಕೊಟ್ಟ ನಂತರ ಏಳು ವರ್ಷಗಳವರೆಗೆ ಯಾರನ್ನೂ ಆಯ್ಕೆ ಮಾಡಿರಲಿಲ್ಲ. ಹಾಗೆ 2008ರಲ್ಲಿ ಪಂಡಿತ ಭೀಮಸೇನ ಜೋಷಿ ಅವರಿಗೆ ಕೊಟ್ಟ ಬಳಿಕ ನಾಲ್ಕು ವರ್ಷ ಯಾರಿಗೂ ಕೊಟ್ಟಿರಲಿಲ್ಲ. ಅಂದರೆ ನೂರಾ ಇಪ್ಪತ್ತು ಕೋಟಿ ಜನರಿರುವ ಈ ದೇಶದಲ್ಲಿ ಒಂದು 'ರತ್ನ' ಸಿಕ್ಕಿರಲಿಲ್ಲ!
ಸೋಜಿಗದ ಸಂಗತಿಯೊಂದಿದೆ. ಅದೇನೆಂದರೆ ಮಹಾತ್ಮ ಗಾಂಧಿಗೆ 'ಭಾರತರತ್ನ' ಗೌರವ ಸಿಕ್ಕಿಲ್ಲ!
ಈ ಪ್ರಶಸ್ತಿಯನ್ನು ಸ್ಥಾಪಿಸಿದಾಗ ನಿಧನರಾದವರಿಗೆ ಕೊಡಬಾರದು ಎಂಬ ನಿಯಮ ರೂಪಿಸಿದ್ದರಿಂದ ಮಹಾತ್ಮಾಗಾಂಧಿ ಹೆಸರನ್ನು ಪರಿಗಣಿಸಲಿಲ್ಲ. ಮೊದಲ ಸಲ ಚಕ್ರವರ್ತಿ ರಾಜಗೋಪಾಲಾಚಾರಿ, ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಹಾಗೂ ಸಿ.ವಿ. ರಾಮನ್ ಭಾರತರತ್ನಕ್ಕೆ ಭಾಜನರಾದರು. ಅದರ ಮುಂದಿನ ವರ್ಷ ನಿಯಮಗಳನ್ನು ತಿದ್ದಿ, ಮರಣೋತ್ತರವಾಗಿಯೂ ಈ ಪ್ರಶಸ್ತಿ ಕೊಡಬಹುದು ಎಂಬ ನಿಯಮ ಜಾರಿಗೆ ಬಂತು. ಹೊಸ ನಿಯಮದಂತೆ ಗಾಂಧೀಜಿಗೆ ಪ್ರಶಸ್ತಿ ಕೊಡಬಹುದಿತ್ತು. ಆದರೆ ಆಗಲೇ ಮೂವರಿಗೆ ಕೊಟ್ಟಿದ್ದರಿಂದ ನಾಲ್ಕನೆಯವರಾಗಿ ಗಾಂಧೀಜಿಗೆ ಕೊಡುವುದು ಅವರಿಗೆ ಅವಮಾನ ಮಾಡಿದಂತೆ ಎಂದು ಭಾವಿಸಲಾಯಿತು.
ಆ ವರ್ಷ ಕಾಶೀ ವಿದ್ಯಾಪೀಠದ ಸ್ಥಾಪಕ ಭಗವಾನ್ ದಾಸ್, ಮೋಕ್ಷಗುಂಡಂ ವಿಶ್ವೇಶ್ವರಯ್ಯ ಜತೆಗೆ ಜವಾಹರ್‌ಲಾಲ್ ನೆಹರು ಅವರು ತಮ್ಮ ಹೆಸರನ್ನು ಸೇರಿಸಿಕೊಂಡರು!
ಭಾರತರತ್ನ ಪ್ರಶಸ್ತಿಗೆ ಪ್ರಧಾನಿಯವರು ಅರ್ಹ ಅಭ್ಯರ್ಥಿ ಹೆಸರನ್ನು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡುತ್ತಾರೆ. ರಾಷ್ಟ್ರಪತಿಯವರು ಅದಕ್ಕೆ ಅಂಕಿತ ಹಾಕಿ ಪ್ರಕಟಿಸುತ್ತಾರೆ. 1971ರಲ್ಲಿ ಇಂದಿರಾಗಾಂಧಿಯವರು ಈ ಪ್ರಶಸ್ತಿಗೆ ತಮ್ಮ ಹೆಸರನ್ನೇ ಶಿಫಾರಸು ಮಾಡಿಕೊಂಡಿದ್ದರು!
ಈಗ ಹೇಳಿ, ವಾಜಪೇಯಿ ಭಾರತರತ್ನಕ್ಕೆ ಅರ್ಹರಾ ಅಥವಾ ಅಲ್ಲವಾ?


-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com