ತೆಹೆಲ್ಕಾದ ಪುಟಗಳಲ್ಲಿ ಹಣಕಾಸು ಹಳವಂಡಗಳೂ ಕಡಿಮೆಯೇನಿಲ್ಲ!

ತರುಣ್ ತೇಜ್ಪಾಲ್ ಅವರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ತೆಹಲ್ಕಾ ಆಡಳಿತ ಮಂಡಳಿಗೆ ಇನ್ನೂ ಹಲವಾರು ಸಮಸ್ಯೆಗಳು ಕಾಡಲಿರುವುದಂತೂ ನಿಶ್ಚಿತ. ಹೇಗೆ ತೇಜ್ಪಾಲ್ರ ಕುಟುಂಬ ಮತ್ತು ತೆಹಲ್ಕಾದ ಶೋಮಾ ಚೌಧರಿ ಅನುಮಾನಾಸ್ಪದ ವ್ಯವಹಾರದ ಮೂಲಕ ಕೋಟ್ಯಂತರ ರುಪಾಯಿ ಹಣ ಗಳಿಸಿದ್ದಾರೆ ಎನ್ನುವ ಬಗ್ಗೆ ಒಂದೊಮ್ಮೆ 'ತೆಹಲ್ಕಾದ' ನೌಕರರಾಗಿದ್ದ 'ರಮಣ್ ಕೃಪಾಲ್' ಫಸ್ಟ್ಪೋಸ್ಟ್ ಜಾಲತಾಣದಲ್ಲಿ ಬರೆದಿದ್ದಾರೆ...
---
2005-06ರಲ್ಲಿ ತೆಹೆಲ್ಕಾದಲ್ಲಿ ಕೆಲಸ ಮಾಡಿರುವವರಿಗೆ ಆ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಅಂದು ಬಹಳ ಹದಗೆಟ್ಟಿತ್ತು ಎನ್ನುವುದು ಗೊತ್ತಿದ್ದೇ ಇದೆ. "ಎರಡು ತಿಂಗಳವರೆಗೆ ನಮಗೆ ಸಂಬಳವೇ ಬಂದಿರಲಿಲ್ಲ' ಎನ್ನುತ್ತಾರೆ ತೆಹಲ್ಕಾದ ಅಂದಿನ ವಿಭಾಗ ಮುಖ್ಯಸ್ಥರಾದ ಹರ್ತೋಶ್ ಸಿಂಗ್ ಬಾಲ್. ಆದರೆ ಅದೇ ಸಮಯದಲ್ಲೇ ಕೆಲವು ಷೇರುದಾರರ ಜೇಬು ಭರ್ತಿಯಾಗತೊಡಗಿತ್ತು.
ತೆಹೆಲ್ಕಾ ಕಂಪನಿಯಾದ 'ಅಗ್ನಿ ಮೀಡಿಯಾ ಪ್ರೈವೇಟ್ ಲಿಮಿಟೆಡ್'ನ(ಈಗ ಅನಂತ್ ಮೀಡಿಯಾ) ನಿವ್ವಳ ಆಸ್ತಿ ಬೆಲೆ ನಕಾರಾತ್ಮಕವಾಗಿದ್ದ ಸಂದರ್ಭವದು. ಆನಂತ್ ಮೀಡಿಯಾ ಶೋಚನೀಯ ಸ್ಥಿತಿಯಲ್ಲಿದ್ದಾಗಲೂ ಲಾಭ ಮಾಡಿಕೊಂಡ ಅದರ ಷೇರುದಾರರೆಂದರೆ ತೇಜ್ಪಾಲ್ರ ಕುಟುಂಬ ವರ್ಗ ಮತ್ತು ಶೋಮಾ ಚೌಧರಿ. ಇನ್ನು ಆ ಸಂಸ್ಥೆಯಲ್ಲಿ ಷೇರು ಹೊಂದಿರುವ ರಾಮ್ ಜೇಠ್ಮಲಾನಿ(165 ಷೇರುಗಳು), ಕಪಿಲ್ ಸಿಬಲ್(80 ಷೇರುಗಳು) ಮತ್ತು ಲಂಡನ್ ಮೂಲದ ಉದ್ಯಮಿ ಪ್ರಿಯಾಂಕಾ ಗಿಲ್(4,242 ಷೇರುಗಳು) ಅವರ ಷೇರುಗಳು ಬಹುತೇಕ ನಿಷ್ಕ್ರಿಯವಾಗಿಯೇ ಇವೆ. ಈ ಬಗ್ಗೆ ಫಸ್ಟ್ಪೋಸ್ಟ್ನೊಂದಿಗೆ ಮಾತನಾಡಿದ ಕಪಿಲ್ ಸಿಬಲ್, "ನನ್ನ ಹೆಸರಿನಲ್ಲಿ ತೇಜ್ಪಾಲ್ ಅವರು ಷೇರುಗಳನ್ನು ಹಂಚಿರುವುದು ನನಗೆ ಗೊತ್ತೇ ಇಲ್ಲ. ನಾನು ತೆಹೆಲ್ಕಾಗೆ ಉತ್ತಮ ಉದ್ದೇಶದಿಂದ 5 ಲಕ್ಷ ರುಪಾಯಿ ದೇಣಿಗೆ ನೀಡಿದ್ದೆನೇ ಹೊರತು ಷೇರು ಹಂಚಿಕೆಗಲ್ಲ" ಎನ್ನುತ್ತಾರೆ. ತಮ್ಮ ಹೆಸರಿನಲ್ಲಿ 2005ರಿಂದಲೂ ಷೇರು ಹಂಚಲಾಗುತ್ತಿರುವ ವಿಷಯ ಸಿಬಲ್ಗೆ ಗೊತ್ತಿರಲಿಲ್ಲ ಎನ್ನುವುದು ತುಸು ವಿಚಿತ್ರವಾಗಿ ಕಂಡರೂ, ಅವರು ಹಣವನ್ನು ದೇಣಿಗೆಯ ರೂಪದಲ್ಲಿ ನೀಡಿದ್ದಾರೆ ಎನ್ನುವುದೇ ನಿಜವಿರಬಹುದು.
2005ಕ್ಕೂ ಮುನ್ನ ತರುಣ್ ತೇಜಪಾಲ್ ಹಲವಾರು ಬಾಲಿವುಡ್ ನಟರಿಂದ ತಮ್ಮ ಸಂಸ್ಥೆಗಾಗಿ ದೇಣಿಗೆ ಸಂಗ್ರಹಿಸಿದ್ದರು. ಅಮೀರ್ ಖಾನ್ ಮತ್ತು ನಂದಿತಾ ದಾಸ್ರನ್ನೂ ಒಳಗೊಂಡು ಅನೇಕ ಬಾಲಿವುಡ್ ಮಂದಿಯಿಂದ ತಲಾ ಒಂದು ಲಕ್ಷದಂತೆ ಒಟ್ಟು 2 ಕೋಟಿ ರುಪಾಯಿ ಅವರು ಪಡೆದಿದ್ದರು ಎನ್ನಲಾಗುತ್ತದೆ. ಪರ್ಯಾಯ ಮಾಧ್ಯಮವಾಗಿ ತೆಹೆಲ್ಕಾ ಬೆಳೆಯಲಿ ಎನ್ನುವ ಸದುದ್ದೇಶದಿಂದ ಅನೇಕರು ಅಂದು ದೇಣಿಗೆ ನೀಡಿದ್ದರು.
ಆದರೆ ತೆಹೆಲ್ಕಾ ಮಾಡಿದ್ದೇ ಬೇರೆ. ಕೆಲವೇ ಸಮಯದಲ್ಲಿ ಬೇನಾಮಿ ಕಂಪನಿಗಳು ತೆಹೆಲ್ಕಾದ ಹಣಕಾಸು ವ್ಯವಹಾರದಲ್ಲಿ ಕಾಣಿಸಿಕೊಂಡವು. ತೆಹಲ್ಕಾದ ಈ ಕಥೆಯಲ್ಲಿ ಮುಖ್ಯವಾಗಿ ಆರು ಹೂಡಿಕೆದಾರರು ನಮಗೆ ಕಾಣಿಸುತ್ತಾರೆ- ಫಕ್ರುದ್ದಿನ್ ತಾಹಿರ್ಭಾಯ್ ಖೋರಕಿವಾಲಾ, ಎ.ಕೆ.ಗುರ್ತು ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್, ಎನ್ಲೈಟೆಂಡ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈ.ಲಿ., ವೆಲ್ಡನ್ ಪಾಲಿಮರ್ಸ್ ಪ್ರೈ.ಲಿ. , ರಾಜಸ್ಥಾನ್ ಪತ್ರಿಕಾ ಮತ್ತು ತೃಣಮೂಲ ಕಾಂಗ್ರೆಸ್ನ ರಾಜ್ಯಸಭಾ ಎಂಪಿ ಕೆ.ಡಿ. ಸಿಂಗ್ ಅವರ ರಾಯಲ್ ಬಿಲ್ಡಿಂಗ್ ಪ್ರೈ.ಲಿ..
ರಾಜಸ್ಥಾನ್ ಪತ್ರಿಕಾ ಮತ್ತು ಖೋರಕಿವಾಲಾರನ್ನು ಹೊರತುಪಡಿಸಿದರೆ ಉಳಿದವು ಭಾರೀ ನಷ್ಟವನ್ನು ಅನುಭವಿಸಿ ತೆರೆಮರೆಗೆ ಸರಿದವು. ಈ ಉಳಿದ ಕಂಪನಿಗಳು ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಷ್ಟೇ ಅಸ್ತಿತ್ವಕ್ಕೆ ಬಂದಿದ್ದವು. ತೆಹೆಲ್ಕಾದಲ್ಲಿನ ಟ್ರೆಂಡ್ ಹೇಗಿದೆಯೆಂದರೆ ಕಂಪನಿಗಳು(ಬೇನಾಮಿ) ಹಣ ಹೂಡಿ, ನಷ್ಟ ಅನುಭವಿಸಿ ಕಾಣೆಯಾಗಿಬಿಡುತ್ತವೆ!
ಲಾಭ ಮಾಡಿಕೊಂಡವರು: 1) ಶೋಮಾ ಚೌಧರಿ(ಅಂದಿನ ಸಂಪಾದಕಿ)ಯವರಿಗೆ ಅನಂತ್ ಮೀಡಿಯಾ, ಸುಮಾರು 1500 ಇಕ್ವಿಟಿ ಷೇರುಗಳನ್ನು 10 ರುಪಾಯಿ ಬೆಲೆಗೆ ಮಾರಿತ್ತು. ಜೂನ್ 14, 2006ರಂದು ಅವರು 13,189 ರುಪಾಯಿ ಪ್ರೀಮಿಯಂ ಬೆಲೆಯಲ್ಲಿ ಎ.ಕೆ. ಗುರುದತ್ ಕಂಪೆನಿಗೆ 500 ಷೇರುಗಳನ್ನು ಮಾರಿದರು. ಆ ಮೂಲಕ 66 ಲಕ್ಷರುಪಾಯಿಗಳನ್ನು ಬಾಚಿಕೊಂಡರು. ಸರಳವಾಗಿ ಹೇಳಬೇಕೆಂದರೆ ಒಟ್ಟು 15,000 ರುಪಾಯಿ ಹೂಡಿಕೆ ಮಾಡಿ ಕೇವಲ ಮೂರು ವರ್ಷಗಳಲ್ಲಿ 66 ಲಕ್ಷ ರುಪಾಯಿ ಲಾಭ ಮಾಡಿಕೊಂಡರು ಶೋಮಾ!
2) ತೇಜ್ಪಾಲ್ರ ಪತ್ನಿ ಗೀತನ್ ಬಾತ್ರಾ ಎ.ಕೆ. ಗುರ್ತು ಕಂಪನಿಗೆ 13,189ರುಪಾಯಿ ಪ್ರೀಮಿಯಂ ಲೆಕ್ಕದಲ್ಲಿ 2000 ಇಕ್ವಿಟಿ ಷೇರುಗಳನ್ನು ಮಾರಿ 2.64 ಕೋಟಿ ರುಪಾಯಿ ಪಡೆದರು.
3)ತೇಜ್ಪಾಲ್ರ ಸಹೋದರ ಮಿಂಟಿ ಕುಂವರ್ 1500 ಷೇರುಗಳನ್ನು ಎ.ಕೆ. ಗುರ್ತು ಕಂಪನಿಗೆ ಮಾರಿ 2 ಕೋಟಿ ಪಡೆದ.
4) ತೇಜ್ಪಾಲ್ರ ತಂದೆ ಇಂದರ್ಜಿತ್ ತೇಜ್ಪಾಲ್ ಮತ್ತು ತಾಯಿ ಶಕುಂತಲಾ ತಲಾ 1000 ಷೇರುಗಳನ್ನು ಮೇಲಿನ ಕಂಪನಿಗೆ ಮಾರಿ ಒಟ್ಟು 2.64 ಕೋಟಿ ರುಪಾಯಿ ಪಡೆದರು.
5) ತೇಜ್ಪಾಲ್ರ ಸಹೋದರಿ ನೀನಾ ಶರ್ಮಾ 432 ಷೇರುಗಳನ್ನು ಮಾರಿ 57 ಲಕ್ಷ ರುಪಾಯಿ ಪಡೆದರು.
ತರುಣ್ ತೇಜ್ಪಾಲ್ ತಮ್ಮ ಷೇರುಗಳನ್ನು ಮಾರಲಿಲ್ಲವಾದರೂ, ಶಂಕರ್ ಶರ್ಮಾ ಮತ್ತು ದೇವಿನಾ ಮೆಹ್ರಾ ಎನ್ನುವವರಿಂದ ಅದೇ ದಿನದಂದು, ಅಂದರೆ 14 ಜೂನ್ 2006 ರಂದು ಪ್ರತಿ ಷೇರಿಗೆ 10 ರುಪಾಯಿ ಬೆಲೆಯಲ್ಲಿ 4,125 ಷೇರುಗಳನ್ನು ಖರೀದಿಸಿದರು. ಇನ್ನು ಅದೇ ದಿನದಂದು ಆನಂದ್ ಮೀಡಿಯಾದ ಷೇರುಗಳು ಬೇರೆ ಬೇರೆ ಬೆಲೆಯಲ್ಲಿ ಮಾರಾಟವಾದವು- ಎಷ್ಟಕ್ಕೆ ಗೊತ್ತೆ? 10 ಮತ್ತು 13,189 ರುಪಾಯಿಗೆ!
ಖಾಸಗಿ ಕಂಪನಿಯೊಂದು ತನ್ನ ನಿವ್ವಳ ಆಸ್ತಿ ಬೆಲೆಗಿಂತ ಹೆಚ್ಚಿನ ಬೆಲೆಯ ಇಕ್ವಿಟಿ ಷೇರುಗಳನ್ನು ಹಂಚುವುದು ಅಪರಾಧವೆಂದು ಹೇಳುತ್ತದೆ ಫೈನಾನ್ಸ್ ಆ್ಯಕ್ಟ್ 2012. ಆ ಸಮಯದಲ್ಲಿ ಅನಂತ್ ಮೀಡಿಯಾದ ಹಣಕಾಸು ಪರಿಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಅಂದರೆ ಅದರ ಷೇರು ಬೆಲೆ 10 ರುಪಾಯಿಗಿಂತಲೂ ಹೆಚ್ಚಿರಲಿಲ್ಲ ಎಂದಾಯಿತು. ಹಾಗಿದ್ದಾಗ, ಹೇಗೆ ತಾನೆ ಅದು ತನ್ನ ಇಕ್ವಿಟಿ ಷೇರುಗಳನ್ನು 2,000-13,000 ರುಪಾಯಿ ಬೆಲೆಗೆ ಮಾರಾಟ ಮಾಡಿತು? ಈ ವ್ಯವಹಾರದಲ್ಲಿ ಧುಮಿಕಿ ಹಣ ಮಾಡಿಕೊಂಡ ಹೊರಗಿನ ಏಕೈಕ ವ್ಯಕ್ತಿಯೆಂದರೆ ಮುಂಬೈ ಮೂಲದ ಉದ್ಯಮಿ, ಪದ್ಮಶ್ರಿ ಪ್ರಶಸ್ತಿ ವಿಜೇತ ಫಕ್ರುದ್ದೀನ್ ತಾಹೆರ್ಭಾಯ್ ಖೋರ್ಕಿವಾಲಾ ಒಬ್ಬರೇ. 2005ರಲ್ಲಿ ತೆಹಲ್ಕಾ ಪತ್ರಿಕೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ಹಲವಾರು ರಹಸ್ಯ ಕಾರ್ಯಾಚರಣೆಗಳನ್ನು ನಡೆಸಿದಾಗ, ಆ ನಿಯತಕಾಲಿಕವನ್ನು ರಕ್ಷಿಸಲು ಖೋರ್ಕಿವಾಲಾ 4.65 ಕೋಟಿ ರುಪಾಯಿಯನ್ನು ಕೊಟ್ಟಿದ್ದಲ್ಲದೇ, 2,409 ರುಪಾಯಿ ಪ್ರೀಮಿಯಂನಲ್ಲಿ 19, 326 ಈಕ್ವಿಟಿ ಷೇರುಗಳನ್ನು ಅನಂತ್ ಮೀಡಿಯಾದಿಂದ ಖರೀದಿಸಿದ್ದರು. 2006ರಲ್ಲಿ ಖೋರ್ಕಿವಾಲಾ ಎ.ಕೆ. ಗುರ್ತು ಕಂಪನಿಗೆ ತಮ್ಮ ಎಲ್ಲಾ ಷೇರುಗಳನ್ನು 13, 189 ರುಪಾಯಿ ಪ್ರೀಮಿಯಂಗೆ ಮಾರಾಟ ಮಾಡಿ 25.49 ಕೋಟಿ ರುಪಾಯಿ ಗಳಿಸಿದರು ಎಂದು ತೆಹಲ್ಕಾದ ದಾಖಲೆಗಳು ಹೇಳುತ್ತವೆ. ಖೋರ್ಕಿವಾಲಾ 2011ರಲ್ಲಿ ನಿಧನರಾದರು. ಆದರೆ ಅವರಿಗೆ ಆ ಹಣ ಬರಲೇ ಇಲ್ಲ ಎನ್ನುತ್ತವೆ ಅವರ ಕುಟುಂಬದ ಆಪ್ತರು. ಅಂದರೆ ಅದು ಕೇವಲ ದೇಣಿಯಾಗಿತ್ತಷ್ಟೆ. ಈ ಕುರಿತು ತೆಹೆಲ್ಕಾದ ಶೋಮಾ ಚೌಧರಿ ಮತ್ತು ನೀನಾ ಶರ್ಮಾ ಅವರಿಗೆ ಫಸ್ಟ್ಪೋಸ್ಟ್ ಜಾಲತಾಣ ಇ-ಮೇಲ್ ಮಾಡಿದಾಗ, ಅವರುಗಳಿಂದ ಪ್ರತಿಕ್ರಿಯೆ ಬರಲೇ ಇಲ್ಲ.
2006ರಲ್ಲಿ ತೆಹೆಲ್ಕಾದಲ್ಲಿ 40 ಕೋಟಿ ಹೂಡಿಕೆ ಮಾಡಿ ಮರುವರ್ಷವೇ ಮಾಯವಾದ ಎ.ಕೆ.ಗುರ್ತು ಕಂಪನಿಯ ಮಾಲೀಕರ್ಯಾರು ಎನ್ನುವುದು ಈವರೆಗೂ ತಿಳಿದಿಲ್ಲ. ಅದರಿಂದ ಹಣ ಪಡೆಯುವಾಗ ಅದರ ಪೂರ್ವಾಪರಗಳನ್ನೆಲ್ಲ ತಿಳಿದುಕೊಂಡಿದ್ದಾಗಿ ತೇಜ್ಪಾಲ್ ಹೇಳಿದ್ದರು. ಆದರೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೂ ಇಂಥದ್ದೊಂದು ಕಂಪನಿಯಿದೆ ಎನ್ನುವುದೇ ಗೊತ್ತಿಲ್ಲ! ಮೊದಲು ಈ ಕಂಪನಿಯ ಮುಖ್ಯ ಕಚೇರಿ ದೆಹಲಿಯ ಜಂಗ್ಪುರದಲ್ಲಿತ್ತು ನಂತರ ಅದು ಶಾಕರ್ಪುರಕ್ಕೆ ಸಾಗಿತು ಎಂದು ತೆಹೆಲ್ಕಾದ ದಾಖಲೆಗಳು ಹೇಳುತ್ತವೆ. ಆದರೆ ಈ ಎರಡೂ ಜಾಗಗಳಲ್ಲೂ 'ಗುರ್ತು' ಎಂಬ ಕಂಪನಿಯ ಗುರುತೇ ಇಲ್ಲ. 2007ರಲ್ಲಿ ಈ ಗುರ್ತು ಕಂಪನಿ, ನಷ್ಟ ತೋರಿಸಿ ತನ್ನೆಲ್ಲ ಷೇರುಗಳನ್ನು ಎನ್ಲೈಟೆಂಡ್ ಕಂಪನಿಗೆ ವರ್ಗಾಯಿಸಿತು. ವಿಚಿತ್ರವೆಂದರೆ ಈ ಎನ್ಲೈಟೆಂಡ್ ಕಂಪನಿಯ ವಿಳಾಸ ಮತ್ತು ದೆಹಲಿಯ ಜಂಗ್ಪುರದಲ್ಲಿತ್ತು ಎನ್ನಲಾದ 'ಗುರ್ತು' ಕಂಪನಿಯ ವಿಳಾಸ ಒಂದೇ ಆಗಿದೆ!
"ಇವೆಲ್ಲ ಬೇನಾಮಿ ಕಂಪನಿಗಳು. ಕಪ್ಪು ಹಣವನ್ನು ಬಿಳಿ ಮಾಡಿ ಮಾಯವಾಗುವುದಕ್ಕಷ್ಟೇ ಇಂಥವು ಅಸ್ತಿತ್ವಕ್ಕೆ ಬರುತ್ತವೆ" ಎನ್ನುತ್ತಾರೆ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು. ಮುಂದೆ ಎನ್ಲೈಟೆಂಡ್ ಕಂಪನಿ ಕೂಡ 17 ಕೋಟಿ ರುಪಾಯಿಗಳ ಲುಕ್ಸಾನು ತೋರಿಸಿ ತೆಹೆಲ್ಕಾದಿಂದ ಹೊರ ನಡೆಯಿತು. ಆದರೆ ಫಸ್ಟ್ಪೋಸ್ಟ್ಗೆ ಸಿಕ್ಕ ದಾಖಲೆಗಳ ಪ್ರಕಾರ, ತೆಹೆಲ್ಕಾದಲ್ಲಿ ಹೂಡಿಕೆದಾರನಾಗಿರುವ ವೆಲ್ಡನ್ ಪಾಲಿಮರ್ಸ್ ಎನ್ನುವ ಕಂಪನಿಗೆ ಹಣ ಒದಗಿಸುತ್ತಿರುವುದೇ 'ದಿವಾಳಿಯಾಗಿದ್ದೇವೆ' ಎಂದು ಹೇಳಿಕೊಂಡ ಎನ್ಲೈಟೆಂಡ್ ಕಂಪನಿ!
ಕೋಟ್ಯಂತರ ರುಪಾಯಿ ನಷ್ಟದಲ್ಲಿದ್ದ ತೆಹಲ್ಕಾಗೆ ಹಣ ಹರಿದು ಬಂದಿದ್ದು ಇಂಥ ಅವ್ಯವಹಾರದಿಂದಾಗಿಯೇ.
2009ರಲ್ಲಿ ರಾಜಸ್ಥಾನ ಪತ್ರಿಕಾ ಪ್ರೈ.ಲಿ. ತೆಹೆಲ್ಕಾದಲ್ಲಿ 1.75 ಕೋಟಿ ಹಣ ಹೂಡಿತು. ಜೂನ್ 22, 2009ರಲ್ಲಿ ರಾಜಸ್ಥಾನ ಪತ್ರಿಕಾ ತೆಹಲ್ಕಾದ ಷೇರುಗಳನ್ನು ತಲಾ 4,493.35 ಕೋಟಿ ರುಪಾಯಿ ಕೊಟ್ಟು ಖರೀದಿಸಿದರೆ, ಅದೇ ಸಮಯದಲ್ಲಿ ಇನ್ನೊಂದು ಕಂಪನಿ ಈ ಷೇರುಗಳನ್ನು ಖರೀದಿಸಿದ್ದು ಪ್ರತಿ ಷೇರಿಗೆ 10,623 ರುಪಾಯಿ ಬೆಲೆ ತೆತ್ತು! ಇಂಥ ಅಸಮಂಜಸತೆ ಅನಂತ್ ಮೀಡಿಯಾದಲ್ಲಿ ದಂಡಿಯಾಗಿ ಸಿಗುತ್ತವೆ.
ತೆಹೆಲ್ಕಾದ ಅನಂತ್ ಮೀಡಿಯಾದಲ್ಲಿ ತೃಣಮೂಲ್ ಕಾಂಗ್ರೆಸ್ ನಾಯಕ ಕೆ.ಡಿ.ಸಿಂಗ್ ಅವರ ಕಂಪನಿಯಾದ 'ರಾಯಲ್ ಬಿಲ್ಡಿಂಗ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ.(ಆರ್ಬಿಐಪಿಎಲ್)' ಹೂಡಿರುವುದು ಸುಮಾರು 32 ಕೋಟಿ ರುಪಾಯಿಗಳನ್ನು. ಆ ಕಂಪನಿಯಲ್ಲಿ ಅವರ ಪಾಲುದಾರಿಕೆ 66 ಪ್ರತಿಶತದಷ್ಟಿದೆ. ನಿಜ ಹೇಳಬೇಕೆಂದರೆ ತೆಹೆಲ್ಕಾದ ಅನಂತ್ ಮೀಡಿಯಾ ಕೆ.ಡಿ.ಸಿಂಗ್ ಅವರ ಆರ್ಬಿಐಪಿಎಲ್ನ ಅಂಗಸಂಸ್ಥೆಯಾಗಿಯೇ ಕೆಲಸ ನಿರ್ವಹಿಸುತ್ತಿದೆ. ಈಗ ಕೆ.ಡಿ. ಸಿಂಗ್ ಅವರು ಅನಂತ್ ಮೀಡಿಯಾದ ಕೈ ಬಿಡುವುದಾಗಿ ಹೇಳುತ್ತಿದ್ದಾರೆ. ಅನಂತ್ ಮೀಡಿಯಾದಲ್ಲಿ ತೇಜ್ಪಾಲ್ ಕುಟುಂಬದ ಪಾಲುದಾರಿಕೆ 22 ಪ್ರತಿಶತದಷ್ಟಿದೆ. ಒಂದು ವೇಳೆ ಕೆ.ಡಿ. ಸಿಂಗ್ ಕೈ ಎತ್ತಿದರೆಂದರೆ ತೆಹೆಲ್ಕಾದ ಕಥೆ ಮುಗಿಯಿತೆಂದೇ ಅರ್ಥ!
- ರಮಣ್ ಕೃಪಾಲ್
anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


