ಅಂಕಣಗಳು

ವಿಜ್ಞಾನಿಗಳ ಸಾವಿನ ಕುರಿತು ಮೌನವೇಕೆ?

ವಿಜ್ಞಾನಿಗಳ ಸಾವಿನ ಕುರಿತು ಮೌನವೇಕೆ?
Published On :

ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಾರ್ಕ್)ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು 'ಆತ್ಮಹತ್ಯೆ' ಮತ್ತು ಹತ್ಯೆಗೊಳಗಾಗುವುದಕ್ಕೆ ಬದ್ಧರಾಗಿರಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಂಥ ಹಲವು ಅಸಹಜ ಸಾವುಗಳು ವರದಿಯಾಗುತ್ತಲೇ ಬಂದಿವೆ.

ಇರಾನ್‌ನ ಅಣುಶಕ್ತಿ ಯೋಜನೆಯಲ್ಲಿ ಅಸಹಜ ಸಾವಿಗೆ ಒಳಗಾದ ವಿಜ್ಞಾನಿಗಳ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಆದರೆ ಅದೇ ರೀತಿಯ ಅಸಹಜ ಸಾವುಗಳು ಭಾರತದ ಅಣುಶಕ್ತಿ ಕಾರ್ಯಕ್ರಮದಲ್ಲಿ ಘಟಿಸುತ್ತಿರುವುದು ಮಾತ್ರ ಯಾರ ಗಮನಕ್ಕೂ ಬರುತ್ತಿಲ್ಲ.
ಈ ನಿಟ್ಟಿನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಪ್ರಕರಣವೆಂದರೆ ಅಕ್ಟೋಬರ್ 7ನೇ ತಾರೀಖಿನದ್ದು. ವಿಶಾಖಪಟ್ಟಣದ ನೌಕಾನೆಲೆಯ ಪೆಂಡುರ್ತಿ ಬಳಿಯ ರೈಲ್ವೆಹಳಿಗಳ ಪಕ್ಕದಲ್ಲಿ ಕೆ. ಕೆ. ಜೋಶ್ ಹಾಗೂ ಅಭೀಶ್ ಶೀವಮ್ ಅವರ ಮೃತದೇಹ ಪತ್ತೆಯಾಯಿತು. ಭಾರತದ ಸ್ವದೇಶಿ ನಿರ್ಮಿತ, ಅಣುಶಕ್ತಿಚಾಲಿತ ಜಲಾಂತರ್ಗಾಮಿ 'ಅರಿಹಂತ್‌'ನ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಎಂಜಿನಿಯರ್‌ಗಳು ಇವರು. ಅವರಿಗೆ ವಿಷಪ್ರಾಸನ ಮಾಡಿಸಲಾಗಿತ್ತು ಹಾಗೂ ಅವರ ಸಾವು ಅಪಘಾತದಂತೆ ತೋರಿಬರಲಿ ಎಂಬ ಕಾರಣಕ್ಕೆ ರೈಲ್ವೆಹಳಿಗಳ ಮೇಲೆ ದೇಹಗಳನ್ನು ಬಿಸಾಡಲಾಗಿತ್ತು. ಆದರೆ ಇವರ ದೇಹದ ಮೇಲೆ ರೈಲು ಹರಿದಾಡುವುದಕ್ಕೂ ಮುಂಚೆ ಸ್ಥಳೀಯರ ಗಮನ ಹರಿಯಿತು. ವಿದೇಶಗಳಲ್ಲಾಗಿದ್ದರೆ ಕಾರ್ಯತಂತ್ರ ಸೂಕ್ಷ್ಮವಾಗಿರುವ ಯೋಜನೆಯಲ್ಲಿ ತೊಡಗಿಕೊಂಡಿದ್ದ ಎಂಜಿನಿಯರ್‌ಗಳು ಹೀಗೆ ಹತ್ಯೆಯಾಗಿರುವುದು ಮಾಧ್ಯಮಗಳಲ್ಲಿ ಆತಂಕದ ಚರ್ಚಾ ಅಲೆಯನ್ನೇ ಹುಟ್ಟುಹಾಕುತ್ತಿತ್ತು. ಆದರೆ ನಮ್ಮಲ್ಲಿ ಮಾಧ್ಯಮ ಮತ್ತು ರಕ್ಷಣಾ ಸಚಿವಾಲಯಗಳೆರಡೂ ಇದನ್ನು ಮಾಮೂಲಿ ಅಪಘಾತ ಎಂಬಂತೆ ಉಪೇಕ್ಷಿಸಿದವು. ಸಾವಿಗೆ ಕಾರಣವನ್ನು ತನಿಖೆ ಮಾಡುವುದಕ್ಕೆ ಮಾಮೂಲಿ ಪೊಲೀಸರನ್ನು ನೇಮಿಸಲಾಯಿತು. ತನಿಖೆಯಂತೂ ಶುರುವಾದಲ್ಲೇ ಬಿದ್ದುಕೊಂಡಿದೆ.
ಬಾಬಾ ಅಟಾಮಿಕ್ ರಿಸರ್ಚ್ ಸೆಂಟರ್ (ಬಾರ್ಕ್)ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು 'ಆತ್ಮಹತ್ಯೆ' ಮತ್ತು ಹತ್ಯೆಗೊಳಗಾಗುವುದಕ್ಕೆ ಬದ್ಧರಾಗಿರಬೇಕಾಗುತ್ತದೆ. ಕಳೆದ ಐದು ವರ್ಷಗಳಲ್ಲಿ ಇಂಥ ಹಲವು ಅಸಹಜ ಸಾವುಗಳು ವರದಿಯಾಗುತ್ತಲೇ ಬಂದಿವೆ. ಪ್ರತಿ ಪ್ರಕರಣದಲ್ಲೂ ಸಾವನ್ನು ಆತ್ಮಹತ್ಯೆ ಎಂದೋ ಅಥವಾ ಮರಣಕ್ಕೆ ಕಾರಣ ತಿಳಿದಿಲ್ಲ ಎನ್ನುವ ಮೂಲಕವೋ ಪರಿಸಮಾಪ್ತಿಗೊಳಿಸಲಾಗುತ್ತಿದೆ. ಇಷ್ಟೆಲ್ಲ ಸಾವಿನ ಪ್ರಕರಣಗಳ ಹಿಂದೆ ಸಂಚುಕೋರ ತಲೆಯೊಂದು ಕೆಲಸ ಮಾಡಿರಲೇಬೇಕಲ್ಲ? ಆದರೆ ಈವರೆಗೂ ಪೊಲೀಸರು ಅಂಥ ಯಾವ ಸಂಚುಕೋರರನ್ನೂ ಗುರುತಿಸಿಲ್ಲ.
2010ರ ಫೆಬ್ರವರಿ 23ರಂದು ಬಾರ್ಕ್‌ನ ಎಂಜಿನಿಯರ್ ಎಂ. ಐಯ್ಯರ್ ತಮ್ಮ ನಿವಾಸದಲ್ಲಿ ಮೃತರಾಗಿದ್ದರು. ಮನೆಗೆ ನುಗ್ಗುವುದಕ್ಕೆ ನಕಲಿ ಕೀಲಿ ಬಳಸಿದ್ದ ಕೊಲೆಗಾರ ನಿದ್ರೆಯಲ್ಲೇ ಅವರನ್ನು ಉಸಿರುಗಟ್ಟಿಸಿದ್ದ. ಗಮನಿಸಬೇಕಾದ ಸಂಗತಿ ಎಂದರೆ ಕೆಲ ಪೊಲೀಸ್ ಅಧಿಕಾರಿಗಳು ಇದನ್ನು ಆತ್ಮಹತ್ಯೆ ಎಂದು ನಿರೂಪಿಸುವುದಕ್ಕೆ ಪ್ರಯತ್ನಪಟ್ಟರು. ಕೊನೆಗೂ ಮುಂಬೈ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿದರು. ಆದಾಗ್ಯೂ ಎಲ್ಲ ಪ್ರಕರಣಗಳಲ್ಲೂ ಆದಂತೆ ಯಾವ ಬಂಧನಗಳೂ ಆಗಲಿಲ್ಲ ಹಾಗೂ ತನಿಖೆ ಇದ್ದಲ್ಲೇ ಕುಂಟುಹಾಕಿತು. ಬಾಬಾ ಅಟೊಮಿಕ್ ಸೆಂಟರ್‌ನ ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳ ಅಸಹಜ ಸಾವಿನ ಪ್ರಕರಣಗಳಲ್ಲೆಲ್ಲ ಬೆರಳಚ್ಚುಗಳು ಹಾಗೂ ತನಿಖೆಗೆ ಸಹಕರಿಸುವ ಸೂಕ್ಷ್ಮ ಸುಳಿವುಗಳು ನಾಪತ್ತೆಯಾಗಿವೆ ಎನ್ನುತ್ತಾರೆ ವಿಧಿವಿಜ್ಞಾನ ಪರಿಣತರು. ಇದು ಆ ಕೊಲೆಗಾರರು ಅತ್ಯಂತ ವೃತ್ತಿಪರರು ಎಂಬುದನ್ನು ಸೂಚಿಸುತ್ತದೆ. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದ ವಿಜ್ಞಾನಿಗಳನ್ನು ಮುಗಿಸುವುದಕ್ಕೆ ಯಶಸ್ವಿಯಾದ ಅತ್ಯುನ್ನತ ಗುಪ್ತಚರ ಪಡೆ ಇದೇ ರೀತಿ ನಾಜೂಕಿನ ಕಾರ್ಯ ಕೈಗೊಂಡಿತ್ತು ಎಂಬುದನ್ನು ನಾವು ನೆನಪಿಸಿಕೊಳ್ಳಬೇಕಾಗುತ್ತದೆ. ಇರಾನ್ ತನ್ನ ಪ್ರಮುಖ ವ್ಯಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕೆ ತಕ್ಷಣವೇ ಕಾರ್ಯಪ್ರವೃತ್ತವಾಯಿತು. ಆದರೆ ಭಾರತ ಮಾತ್ರ ತನ್ನ ಅಣ್ವಸ್ತ್ರಬಲದ ಸಂವರ್ಧನೆಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅಮೂಲ್ಯ ಜೀವಗಳನ್ನು ರಕ್ಷಿಸಿಕೊಳ್ಳುವತ್ತ ಯಾವ ಆಸಕ್ತಿಯನ್ನೂ ತೋರಿಸಿಲ್ಲ!
2011ರ ಏಪ್ರಿಲ್ 29ರಂದು ವಿಜ್ಞಾನಿ ಉಮಾ ರಾವ್ ಅವರ ಅಸಹಜ ಸಾವು ಆತ್ಮಹತ್ಯೆಯೇ ಎಂದು ಸಾಬೀತಾಗಿರುವುದು ಹೌದಾದರೂ ಉಳಿದೆಲ್ಲ ಆತ್ಮಹತ್ಯೆ ಪ್ರಕರಣಗಳನ್ನು ಸಂಬಂಧಿಸಿದ ಕುಟುಂಬದವರು ಪ್ರಶ್ನಿಸಿದ್ದಾರೆ. ತಮ್ಮ ಪ್ರೀತಿಪಾತ್ರರು ಆತ್ಮಹತ್ಯೆಯಂಥ ನಿರ್ಧಾರಕ್ಕೆ ಎಳಸುವ ಯಾವ ಪರಿಸ್ಥಿತಿಯೂ ಇದ್ದಿರಲಿಲ್ಲ ಎಂದು ಅವರೆಲ್ಲ ಅಭಿಪ್ರಾಯಪಟ್ಟಿದ್ದಾರೆ. ಇದು ಭಾರತವು ಅಣುಶಕ್ತಿಯ ಔನ್ನತ್ಯವನ್ನು ಸಾಧಿಸುವುದನ್ನು ತಡೆಯುವ ಅಂತಾರಾಷ್ಟ್ರೀಯ ಸಂಚು ಎಂದು ಹಲವರು ಶಂಕೆ ವ್ಯಕ್ತಪಡಿಸುತ್ತಿದ್ದರೂ ಭಾರತ ಸರ್ಕಾರ ಮಾತ್ರ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದೆ.
1994ರ ಕ್ರಯೊಜನಿಕ್ ಎಂಜಿನ್ ಹಗರಣದಲ್ಲೂ ಇಂಥದೇ ಕಾರ್ಯಶೈಲಿಯನ್ನು ಅನುಸರಿಸಲಾಗಿತ್ತು. ಸ್ವದೇಶಿ ಕ್ರಯೊಜನಿಕ್ ಎಂಜಿನ್‌ಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದ ಪ್ರಮುಖ ವಿಜ್ಞಾನಿಗಳನ್ನು ಬೇಹುಗಾರಿಕೆ ಆರೋಪದ ಮೇಲೆ ಇಬ್ಬರು ಮಾಲ್ಡೀವ್ ಹೆಂಗಸರೊಂದಿಗೆ ಇಂಟಲಿಜೆನ್ಸ್ ಬ್ಯೂರೊ ಹಾಗೂ ಕೇರಳ ಪೊಲೀಸರು ಬಂಧಿಸಿದರು. ವಾಸ್ತವದಲ್ಲಿ ಅಮೆರಿಕದ ಬಿಲ್ ಕ್ಲಿಂಟನ್ ಆಡಳಿತಕ್ಕೆ ರಷ್ಯಾವು ಭಾರತಕ್ಕೆ ಕ್ರಯೊಜನಿಕ್ ಎಂಜಿನ್‌ಗಳನ್ನು ಮಾರುತ್ತಿರುವುದನ್ನು ಸಹಿಸಲಾಗುತ್ತಿರಲಿಲ್ಲ. ಅದನ್ನು ಮಿತಿಗೊಳಿಸಬೇಕು ಎಂದು ಒತ್ತಡ ಹೇರಿತ್ತು. ಆದರೆ ಭಾರತಕ್ಕೆ ಸ್ನೇಹಿತರಾಗಿದ್ದ ರಷ್ಯಾ ವಿಜ್ಞಾನಿಗಳು ಕ್ರಯೊಜನಿಕ್ ಎಂಜಿನ್‌ನ ನೀಲನಕ್ಷೆಯನ್ನು ರಹಸ್ಯವಾಗಿ ನೀಡಿದ್ದರು. ಇದನ್ನು ಅರಿತ ಅಮೆರಿಕ ಗುಪ್ತಚರ ವಿಭಾಗ- ಸಿಐಎ- ವಿಜ್ಞಾನಿಗಳನ್ನು ಜೈಲಿಗೆ ಕಳುಹಿಸಿ ಈ ಕಾರ್ಯಕ್ರಮವನ್ನೇ ಗತಿಗೆಡಿಸುವ ಕಾರ್ಯದಲ್ಲಿ ಗೌಪ್ಯವಾಗಿ ತೊಡಗಿಕೊಂಡಿತು. ಕಾಲಾನಂತರದಲ್ಲಿ ವಿಜ್ಞಾನಿಗಳ ಮೇಲಿನ ಯಾವ ಆರೋಪಗಳೂ ಸಾಬೀತಾಗದೆ ಅವರೆಲ್ಲ ಖುಲಾಸೆಯಾದರಾದರೂ ಈ ಅವಧಿಯಲ್ಲಿ ಕ್ರಯೊಜನಿಕ್ ಎಂಜಿನ್ ನಿರ್ಮಾಣದ ಕೆಲಸ ನೆನೆಗುದಿಗೆ ಬಿದ್ದಿತ್ತು. ವಿದೇಶಿ ಗುಪ್ತಚರ ಸಂಸ್ಥೆಯ ಅಣತಿ ಮೇರೆಗೆ ನಮ್ಮ ವಿಜ್ಞಾನಿಗಳ ಮೇಲೆ ಹೀಗೆಲ್ಲ ಸುಳ್ಳು ಆರೋಪಗಳನ್ನು ಹೊರಿಸಿದ್ದ ಐಬಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ರಾಷ್ಟ್ರದ್ರೋಹದ ಅಡಿಯಲ್ಲಿ ಶಿಕ್ಷೆ ಆಗಬೇಕಿತ್ತು. ಆದರೆ ಇನತ್ತಿನ ದಿನಾಂಕದವರೆಗೂ ಅವರ ಕೂದಲೂ ಕೊಂಕಿಲ್ಲ!
ಭಾರತ ಸರ್ಕಾರದ ಮಾಹಿತಿ ಪ್ರಕಾರವೇ 'ಬಾರ್ಕ್‌'ನಲ್ಲಿಯೇ ಕಳೆದ ಮೂರು ವರ್ಷಗಳಲ್ಲಿ 9 ಅಸಹಜ ಸಾವುಗಳಾಗಿವೆ. ಇವುಗಳಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸೇರಿದ್ದಾರೆ. ಕೈಗಾದ ಅಣುಶಕ್ತಿ ಘಟಕದಲ್ಲೂ ಇಂಥ ಅಸಹಜ ಸಾವುಗಳು ವರದಿಯಾಗಿವೆ. ಇವೆಲ್ಲದರ ಪೈಕಿ ಎರಡು ಸಾವು ಆತ್ಮಹತ್ಯೆ ಎಂದು ಸಾಬೀತಾಗಿರುವುದು ಬಿಟ್ಟರೆ ಉಳಿದವೆಲ್ಲ ಅಸಹಜ ಸಾವುಗಳು. ಇವಕ್ಕೆಲ್ಲ ಕಾರಣ ಕೆದಕಿ ತಪ್ಪಿತಸ್ಥರನ್ನು ಕಟಕಟೆಗೆ ತರುವ ಉಮೇದು ಯಾರಲ್ಲೂ ಕಾಣುತ್ತಿಲ್ಲ.

- ಮಾಧವ ನಳಪತ್
ಅಂಕಣಕಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.