ಮೈಲಾರಿ ವತ್ತಾರೆ ಎದ್ಬುಟ್ಟು ಪೇಪ್ರು ವೋದ್ತಾ ಕೂತಿದ್ದ. ಆಮಾಸೆ ಬಂದು 'ಏನ್ಲಾ ಮೈಲಾರಿ ಪೇಪರ್ನಾಗೆ ವಿಸೇಸ ಈವತ್ತು. ಯಾರರ ವೊಗೆ ಹಾಕ್ಕಂಡವ್ರಾ ?' ಅಂತ ಕೇಳ್ದ.
'ಅಯ್ಯೋ ನಿನ್ ಬಾಯ್ಗೆ ಮಣ್ಣಾಕ. ವತ್ತಾರೆ ಎದ್ದು ವೊಳ್ಳೇದು ಯೋಳಕ್ಕೆ ಏನ್ಲಾ ಬಂದಿರಾದು ನಿಂಗೆ?' ಅಂತ ಮೈಲಾರಿ ಕೇಳ್ದ.
'ಅಯ್ತು ಬುಡಪ್ಪ, ವೊಳ್ಳೇದು ಏನಾದ್ರೂವೆ ಇದ್ರೆ ಯೋಳು ಕೇಳಾವ' ಅಂದ ಅಮಾಸೆ. ಯಾರು ಏನರ ಯೋಳ್ಳಿ ಲಾಡು ಬುಡಾಕಿಲ್ಲ ಅಂತ ಸಿಯೆಮ್ಮು ಸಿದ್ರಾಮಣ್ಣ ಯೋಳವ್ರಂತೆ. ಲಾಡು ಅಂತಂದ್ರೆ ಅಷ್ಟು ಇಷ್ಟಾನ ? ಈಕಿತ ಅವ್ರು ಮನೆತವ ವೋದಾಗ ಲಾಡು ಪಾರ್ಸಲ್ಲು ಮಾಡಿಸ್ಕಂಡು ತಕ್ಕಂಡು ವೋಯ್ತೀನಿ ಕಣ್ಲಾ' ಅಂದ ಮೈಲಾರಿ.
'ನಿನ್ ತಲೆವೊಳಿಕ್ಕೆ ವೊಂದೆಲ್ಡು ಎರೆವುಳ ಬುಟ್ಕಳಲೇ' ಅಂದ ಅಮಾಸೆ. 'ಅದ್ಯಾಕಲೇ ಮೂದೇವಿ ?' ಅಂತೇಳಿ ಮೈಲಾರಿ ಕೇಳ್ದ. 'ತಲೆ ವೊಳ್ಗಿರೋ ಮಣ್ಣು ತಿನ್ಕಳಕ್ಕೆ. ಅಲ್ಲಲೇ ಲಾಡು ಅಂದ್ರೆ ತಿನ್ನೋದಲ್ಲ ಮುಂಡೇದೆ. ಮಂತ್ರಿ ಸಂತೋಷ್ ಲಾಡು. ಆವಯ್ಯ ಗಣಿ ಕೇಸ್ನಾಗೆ ತಗ್ಲಾಕ್ಕಂಡದೆ ಅಂತ ಹಿರೀಕ್ರು ಆಡ್ಕತಾವ್ರೆ. ಅದುಕ್ಕೆ ಸಿಯೆಮ್ಮು ಮೂರು ಆರಾಗ್ಲಿ, ಆರು ಮೂರಾಗ್ಲಿ ಯಾರು ಏನರ ಬೊಂಬ್ಡ ವೊಡ್ಕಳ್ಳಿ ಲಾಡುನ ಮಾತ್ರ ಬುಡಾಕಿಲ್ಲ ಬುಡಾಕಿಲ್ಲ ಅಂತೇಳಿ ವೋಗಿದ್ಕಡೆ ಮೈಕು ಹಾಕ್ಕಂಡು ಯೋಳ್ತಾವ್ರೆ. ಅದುಕ್ಕೆ ಮಂತ್ರಿ ಲಾಡು ಸಿದ್ರಾಮಣ್ಣ ನಂಗೆ ಗಾಡು ಅಂತ ಹೇಳ್ಕಂಡು ಓಡಾಡ್ತವ್ರೆ' ಅಂತೇಳ್ದ ಅಮಾಸೆ.
'ಯಾರ್ಯಾರು ಎಲ್ಲೆಲ್ಲಿ ತಗ್ಲಾಕ್ಕತರೋ ಏನೋ ? ಆ ಕಂಪ್ಲಿ ಸಾಸ್ಕ ಸುರೇಸು ಅಶೆಂಬ್ಲಿನಾಗೆ ನಿಂತ್ಕಂಡು ಬಳ್ಳಾರಿಗೆ ಯಾರು ಬತ್ತೀರೋ ಬರ್ರಿ. ಚೂಸ್ತಾನು ಅಂತ ಆವಾಜು ಬುಟ್ಟಿತ್ತಂತೆ. ಪಾಪ ಸಿಬಿಐದೋರು ಎತ್ತಾಕ್ಕಂಡೋಗಿ ನುಣ್ಗೆ ರುಬ್ತಾವ್ರಂತೆ. ಅದುಕ್ಕೆ ದೊಡ್ಡೋರು ಯೋಳಿರಾದು ಮಾಡಿದ್ದುಣ್ಣೋ ಮಾರಾಯ ಅಂತ. ನಾನು ಪಾಪ ಮಾಡುದ್ರೆ ಮಕ್ಳುಗೆ ಆಯ್ತದೆ. ಮುಂದಿನ ಜನ್ಮುಕ್ಕೆ ಆಯ್ತದೆ ಅನ್ನೋರು. ಈವಾಗ ಆ ಥರುಕ್ಕೆ ಇಲ್ಲ. ಇಲ್ಲೇ ಈವಾಗ್ಲೇ ಡ್ರಾ, ಈವಾಗ್ಲೆ ಬಹುಮಾನ. ಕ್ಯಾಸೆಟ್ನಾಗೆ ಎ ಸೈಡು, ಬಿ ಸೈಡು ಅಂತ ವೊಟ್ಟೊಟ್ಗೆ ನೋಡಾಕಿಲ್ವಾ ಹಂಗೆ. ಬಳ್ಳಾರಿ ಅಂದ್ರೆ ರೆಡ್ಡಿಗಾರ್ದು ಅನ್ನೋರು. ಪಾಪ ಈವಾಗ ನೋಡು ಆ ವೂರ್ನಾಗೆ ರೆಡ್ಡಿಗಾರು ಹೆಸ್ರು ಯೋಳಕ್ಕೂ ಜನ ಇಲ್ದಂಗೆ ಆಗೋಗದೆ ಅಲ್ವಾ? ರೆಡ್ಡಿಗಳು ಹೆಸರು ಯೋಳುದ್ರೆ ಸಿಬಿಐದೋರು ಬೆನ್ನು ಹಿಂದ್ಲಾಗಡೆನೇ ಇರ್ತರೆ' ಅಂದ ಮೈಲಾರಿ.
'ಅಲ್ಲಲೇ ಆ ಲಾಲೂ ಕಥೆ ನೋಡ್ದ. ಮೇವು ತಿಂದಿದ್ಕೆ ಸಿಬಿಐನೋರು ಸೀದಾ ಕರ್ಕಂಡೋಗಿ ಜೈಲು ಸೇರುಸ್ಬುಟ್ಟವ್ರಂತೆ. ಪಾಪ ಮನ್ಯಾಗೆ ವೊಟ್ಟೆಗೆ ಹಿಟ್ಟು ಹಾಕ್ತಾಯಿರ್ಲಿಲ್ವೋ ಏನೋ ಅದುಕ್ಕೆ ದನುಗ್ಳುಗೆ ಹಾಕೋ ಮೇವು ತಿಂತಾಯಿದ್ರು ಅಂತ ಕಾಣ್ತದೆ' ಅಂದ ಅಮಾಸೆ. 'ಮಣ್ಣು ನನ್ ತಲೆಗಿಂತ ನಿನ್ ತಲ್ಯಾಗೆ ಸ್ಯಾನೆ ಇರಂಗದೆ. ಆವಯ್ಯ ಮೇವು ತಿಂದಿಲ್ಲಲ್ಲೇ. ಮೇವು ಮಾರೋದ್ರಾಗೆ ಕಮೀಸನ್ನೋ ಏನೋ ತಿಂದಿರಂಗದೆ. ಅದುಕ್ಕೆ ಸಿಬಿಐದೋರು ಕೈನಾಗೆ ಪುಲ್ ಮಸಾಜು ಮಾಡಿಸ್ಕತಾಯಿರೋದು' ಅಂತ ಮೈಲಾರಿ ಯೋಳ್ದ.
'ವೊಟ್ನಾಗೆ ನಮ್ ದೇಸದಾಗೆ ಇರೋ ಜೈಲುಗಳ್ಗೆ ಏನೋ ಲಕ್ಕು ಬಂದಂಗಂದೆ. ಎಲ್ಲಿ ನೋಡುದ್ರೂ ವಿಐಪಿಗಳು ತುಂಬೋಗವ್ರೆ. ಹಿಂಗೇ ಆದ್ರೆ ಪಾಪ ಬ್ಯಾರೆ ಜನುಕ್ಕೆ ಜಾಗ ಎಲ್ಲಿದ್ದಾತು ಯೋಳು. ಆವತ್ತು ಜೈಲ್ಗೆ ವೋಗಿ ಬಂದೋರು ಲೀಡ್ರುಸು ಆಯ್ತಾಯಿದ್ರು. ಈವತ್ತು ಲೀಡ್ರುಸೇ ಜೈಲ್ಗೆ ವೋಯ್ತಾ ಅವ್ರೆ. ಎಂಥಾ ಕಾಲ ಬಂತಪ್ಪ ಮಾದೇಸ್ವರ' ಅಂತೇಳಿ ಅಮಾಸೆ ಎದ್ದ.
'ಯಾಕ್ಲಾ ವೊಂಟೆ ಇರು ಕಾಪಿ ಕುಡ್ಕಂಡು ವೋಗೂವಂತೆ ಅಂದ ಮೈಲಾರಿ. ಅಲ್ಲಲೇ ನಿಮ್ ಮನ್ಯಾಗೆ ಕಾಪಿ ಕಾಯ್ಸಲ್ಲ ಅಂತಾಯಿದ್ದೆ. ಈವಾಗೇನು ಪೆಸಲ್ಲು' ಅಂತ ಅಮಾಸೆ ಕೇಳ್ದ. 'ಸರ್ಕಾರ್ದೋರು ಮಕ್ಳುಗೆ ಹಾಲು ಕುಡ್ಸೋ ಸ್ಕೀಮು ತಂದವ್ರಲ್ಲಾ' ಅದುಕ್ಕೆ ಅಂದ ಮೈಲಾರಿ.
'ಅಯ್ಯೋ ಮುಂಡೇದೆ. ಮಕ್ಳು ಕುಡ್ಯೋ ಹಾಲು ಕದ್ದು ತತ್ತೀಯ. ನೀನೂವೆ ವೊಳಿಕ್ಕೆ ವೊಂಟೋಯ್ತಿಯ ಇರು' ಅಂತೇಳಿ ಅಮಾಸೆ ಬೈದ. 'ಹಾಲು ತಕ್ಕಂಡು ಬಂದ್ರೆ ಏನಾಯ್ತದೆ ಬುಡ್ಲಾ ಅಂದ ಮೈಲಾರಿ. ದನಕ್ಕೆ ಹಾಕೂ ಮೇವು ತಿಂದಿರೋರ್ನೆ ಬುಡ್ತಾಯಿಲ್ಲ. ಹಾಲು ಕದ್ದು ಕುಡ್ದೋರುನ್ನ ಬುಡ್ತರ. ಕಾಪೀನು ಬ್ಯಾಡ, ಟೀನೂ ಬ್ಯಾಡ ನಾನು ಬತ್ತೀನಪ್ಪ' ಅಂತೇಳಿ ಅಮಾಸೆ ಎದ್ದು ವೋಡ್ದ.
'ಆಯ್ಯೋ ಸಿವನೇ ಇದೇನು ಹಿಂಗೆ ಯೋಳ್ಬುಟ್ಟು ಪೇರಿ ಕಿತ್ನಲ್ಲ ಈ ಆಮಾಸೆ. ಬಡ್ಡಿ ಹೈದುನ್ನು ತಂದು. ಅಮ್ಮಿ ಇನ್ಮೇಕೆ ಕಾಪಿ ಬಂದ್' ಅಂತೇಳಿ ಮಿಸ್ಸಸ್ಸುಗೆ ಕೂಗಿ ಯೋಳ್ದ ಮೈಲಾರಿ.
-ಕೆ.ವಿ.ಪ್ರಭಾಕರ್
prabhukolar@yahoo.com