ಅಂಕಣಗಳು

ಆಡುವ ವಯಸ್ಸಿನಲ್ಲಿ ದುಡಿವ ಹೊರೆ ಏಕೆ?

ಆಡುವ ವಯಸ್ಸಿನಲ್ಲಿ ದುಡಿವ ಹೊರೆ ಏಕೆ?
Published On :

ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದಾಗ ನಡೆದ ಘಟನೆ ಇದು. ಮೂರು ದಿನಗಳ ವಿವಿಧ ಜಿಲ್ಲೆಗಳ ಪರಿಶೀಲನಾ ಪ್ರವಾಸ ಮುಗಿಸಿಕೊಂಡು ಕಚೇರಿಗೆ ಬಂದಾಗ ಹೊರಗಡೆ ಮೆಟ್ಟಲ ಬಳಿಯೇ ಒಬ್ಬ ಮಹಿಳೆ ನನ್ನನ್ನು ಅಡ್ಡ ಹಾಕಿದಳು. ನನ್ನ ಕಾರಿನಲ್ಲಿದ್ದ ಫೈಲುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ನಮ್ಮ ಕಚೇರಿಯ ಜವಾನ ಆಕೆಯನ್ನು ದಾರಿ ಬಿಡಲು ಗದರಿಸಿ, ನನ್ನತ್ತ ತಿರುಗಿ, 'ಈ ಮಹಿಳೆ ಮೂರು ದಿನಗಳಿಂದಲೂ ದಿನಾಲೂ ನಿಮ್ಮನ್ನು ಕಾಣಲು ಇಲ್ಲಿ ಬರುತ್ತಿದ್ದಾಳೆ. ನೀವು ಪ್ರವಾಸದಲ್ಲಿ ಇದ್ದೀರೆಂದು ಹೇಳಿದರೂ, ನೀವು ಬರುವವರೆಗೆ ಕಾಯುತ್ತೇನೆ ಎಂದು ಹೇಳುತ್ತಿದ್ದಳು. ಕಚೇರಿಯ ಒಳಗೆ ಬಂದು ಬೇರೆ ಅಧಿಕಾರಿಗಳಿಗೆ ಮನವಿ ಸಲ್ಲಿಸು ಎಂದು ಹೇಳಿದರೂ ಕೇಳುತ್ತಿಲ್ಲ. ನಿಮ್ಮನ್ನೇ ಕಾಣಬೇಕೆಂದು ಪಟ್ಟು ಹಿಡಿದಿದ್ದಾಳೆ' ಎಂದ. ನಾನು ಆ ಮಹಿಳೆಯನ್ನು ನನ್ನ ಜೊತೆ ಬರಲು ತಿಳಿಸಿ, ಕಚೇರಿಯ ಒಳಗೆ ಕರೆದುಕೊಂಡು ಹೋಗಿ ಸಮಸ್ಯೆಯೇನೆಂದು ಕೇಳಿದೆ. ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಆಕೆಯನ್ನು ನೋಡಿದರೆ ಊಟ ಮಾಡಿ ಎಷ್ಟೋ ದಿನಗಳಾಗಿರಬಹುದು ಎನಿಸುತ್ತಿತ್ತು. ಜವಾನನನ್ನು ಕಳುಹಿಸಿ ಆಕೆಗೆ ಮೊದಲು ತಿನ್ನಲು ಏನಾದರೂ ವ್ಯವಸ್ಥೆ ಮಾಡಲು ತಿಳಿಸಿದೆ. ಅವನು ತಂದ ತಿಂಡಿಯನ್ನು ಮೊದಲು ತಿಂದು, ಕಾಫಿ ಕುಡಿದು ನಂತರ ಮಾತನಾಡಲು ತಿಳಿಸಿ, ನನ್ನ ತುರ್ತು ಕೆಲಸಗಳನ್ನು ಮುಗಿಸಿದೆ. ಮತ್ತೆ ಆಕೆ ಅಳುತ್ತಾ ನನ್ನ ಕಾಲು ಹಿಡಿಯಲು ಬಂದಳು. ಅವಳನ್ನು ಸಮಾಧಾನ ಪಡಿಸಿ, ಸ್ವಲ್ಪ ಸಮಯದವರೆಗೂ ನನ್ನನ್ನು ಯಾರೂ ಕಾಣಬಾರದೆಂದೂ, ಯಾವುದೇ ಕರೆಗಳನ್ನು ಕೊಡಬಾರದೆಂದೂ ತಿಳಿಸಿ, ಆಕೆಗೆ ಮಾತನಾಡಲು ತಿಳಿಸಿದೆ. ಆಕೆಗೆ ಐದು ಮಕ್ಕಳು. ಮೂರು ಗಂಡು ಮತ್ತು ಎರಡು ಹೆಣ್ಣು. ಎಲ್ಲರೂ ಐದು ವರ್ಷದಿಂದ ಹನ್ನೆರಡು ವರ್ಷದ ಒಳಗಿನವರೆ. ಆಕೆಯ ಕುಡುಕ ಗಂಡ ತಮ್ಮ ಎಲ್ಲ ಮಕ್ಕಳನ್ನೂ ಮಾರಿರಬಹುದು ಎಂಬ ಅನುಮಾನ. ಅವನನ್ನು ಹಿಡಿದು ಶಿಕ್ಷಿಸಿ, ಮಕ್ಕಳನ್ನು ತನಗೆ ಕೊಡಿಸಬೇಕೆಂದು ಕೇಳಿದಳು. ಅವಳು ಬಳ್ಳಾರಿಯಿಂದ ಬೆಂಗಳೂರಿಗೆ ಬಂದು ನನಗಾಗಿ ಕಾಯುತ್ತಿದ್ದಳು. ತಕ್ಷಣವೇ ಬಳ್ಳಾರಿಯ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿದುಕೊಂಡು ನನಗೆ ತಿಳಿಸಲು ಹೇಳಿದೆ. ಅವಳಿಗೆ ಕಚೇರಿಯಲ್ಲಿ ಕುಳಿತಿರಲು ತಿಳಿಸಿದೆ. ಮಧ್ಯಾಹ್ನದ ವೇಳೆಗೆ ನನಗೆ ಬಂದ ಮಾಹಿತಿ ಆಕೆಯ ಅನುಮಾನವನ್ನೇ ನಿಜ ಮಾಡಿತ್ತು. ಅವಳ ಗಂಡ ಮಕ್ಕಳನ್ನು ಭಿಕ್ಷಾಟನೆಯ ದಂಧೆ ನಡೆಸುವವರಿಗೆ ಮಾರಿಬಿಟ್ಟಿದ್ದ. ತಕ್ಷಣವೇ ಮಕ್ಕಳನ್ನು ಪತ್ತೆ ಮಾಡಲು ಆದೇಶ ನೀಡಿದೆ. ಮುಂದಿನ ಎರಡು ದಿನಗಳಲ್ಲಿ ಎಲ್ಲಾ ಮಕ್ಕಳನ್ನೂ ಹುಡುಕಿ ನನ್ನ ಕಚೇರಿಗೆ ಕರೆ ತಂದರು. ತಾಯಿ ಮಕ್ಕಳನ್ನು ಒಂದು ಮಾಡಿ, ಅವರು ಪಟ್ಟ ಸಂತೋಷವನ್ನು ಕಂಡು ದೊಡ್ಡ ನಿಟ್ಟುಸಿರುಬಿಟ್ಟೆ. ಆ ತಾಯಿಯ ಛಲವನ್ನು ಕಂಡು ಬೆರಗಾದೆ. ಮಕ್ಕಳು ಕಾಣೆಯಾದಾಗಿನಿಂದ ಅವಳು ಪಟ್ಟ ಕಷ್ಟ ಕೇಳಿದರೆ ಕಣ್ಣಿನಲ್ಲಿ ರಕ್ತ ಬರುತ್ತಿತ್ತು. ಅವಳು ಕಾಣದ ಜನರಿಲ್ಲ, ಬೇಡಿಕೊಂಡದ್ದು ಕಡಿಮೆಯಲ್ಲ. ಆದರೆ ಎಲ್ಲಿಯೂ ನೆರವು ಸಿಗದಿದ್ದಾಗ ನನ್ನ ಬಳಿ ಓಡಿ ಬಂದಿದ್ದಳು. ಹೆತ್ತ ಕರುಳು ಕೂಲಿ ನಾಲಿ ಮಾಡಿಯಾದರೂ ಮಕ್ಕಳನ್ನು ಸಾಕುತ್ತೇನೆ ಎನ್ನಬೇಕಾದಾಗ, ಕಾಯಬೇಕಾದ ತಂದೆಯೇ ತನ್ನ ಚಟಕ್ಕೆ ತನ್ನ ಮಕ್ಕಳನ್ನೇ ಮಾರಿದ್ದು ಎಂಥ ವಿಪರ್ಯಾಸ.
1986ನೇ ಇಸವಿಯಲ್ಲಿ ಜಾರಿಗೆ ಬಂದ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಅಧಿನಿಯಮದ ಪ್ರಕಾರ ಹದಿನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳಲು ಬರುವುದಿಲ್ಲ. ದೊಡ್ಡ ದೊಡ್ಡ ಶ್ರೀಮಂತರು ಚಿಕ್ಕ ವಯಸ್ಸಿನ ಮಕ್ಕಳನ್ನು ತಮ್ಮ ಮನೆಯಲ್ಲಿ ಚಾಕರಿಗೆ ಇಟ್ಟುಕೊಳ್ಳುವುದು ಕಾನೂನು ಬಾಹಿರ.
ಸಣ್ಣ ಪುಟ್ಟ ಮನಸ್ತಾಪಗಳು, ಮನೆಯಲ್ಲಿ ತಂದೆ ಕುಡುಕನಾಗಿದ್ದು, ತಾಯಿಯ ಮೇಲೆ ದೌರ್ಜನ್ಯ ನಡೆಸುತ್ತಿದ್ದರೆ, ಮನೆಯಲ್ಲಿ ಅತೀವ ಬಡತನವಿದ್ದರೆ ಮತ್ತು ಇಂಥ ಹಲವಾರು ಕಾರಣಗಳಿಂದಾಗಿ ಮಕ್ಕಳು ತಾವಾಗಿಯೇ ಮನೆ ಬಿಟ್ಟು ಓಡಿ ಹೋಗುತ್ತಾರೆ. ಎಷ್ಟೋ ಸಲ ಅವರಿಗೆ ಪಟ್ಟಣದ ಬಣ್ಣದ ಜೀವನ, ದುಡ್ಡಿನ ಪ್ರಲೋಭನೆಗಳನ್ನು ಒಡ್ಡಿ ಮನೆಯಿಂದ ಓಡಿ ಬರುವಂತೆ ಪುಸಲಾಯಿಸುವ ದುಷ್ಕರ್ಮಿಗಳ ಗುಂಪುಗಳೂ ಇವೆ. ಹಲವೊಮ್ಮೆ ಬಸ್ಸು ಅಥವಾ ರೈಲು ಹತ್ತಿ ಓಡಿ ಬಂದಿರುವ ಮಕ್ಕಳನ್ನು ನಿಲ್ದಾಣಗಳಿಂದ ಅಪಹರಿಸಿ, ಅವರನ್ನು ಭಿಕ್ಷೆ ಬೇಡಲು, ಹೋಟೆಲ್ಲುಗಳಲ್ಲಿ ಕೆಲಸ ಮಾಡಲು, ಮನೆಗೆಲಸಕ್ಕೆ, ಕಲ್ಲು ಕುಟ್ಟಲು, ಬೀಡಿ ತಯಾರಿಸಲು, ಊದುಗಡ್ಡಿಗಳನ್ನು ತಯಾರಿಸಲು, ಪಟಾಕಿಗಳನ್ನು ತಯಾರಿಸಲು, ಮುಂತಾದ ಕೆಲಸಗಳಿಗೆ ಹಾಕಿ, ಅವರ ದುಡಿಮೆಯನ್ನು ತಮ್ಮ ಜೇಬಿಗೆ ಇಳಿಸುವ ಖದೀಮರು ಬಹಳ ಮಂದಿ ಇದ್ದಾರೆ. ಇನ್ನು ಲೈಂಗಿಕವಾಗಿ ಬಳಸಿಕೊಳ್ಳುವ, ಬೇರೆ ಬೇರೆ ರಾಜ್ಯಗಳ ದುಷ್ಕರ್ಮಿಗಳ ಗುಂಪಿಗೆ ಮಾರುವ ಅನೇಕ ಉದಾಹರಣೆಗಳೂ ಇವೆ.
ಹದಿನಾಲ್ಕು ವರ್ಷ ಮೇಲ್ಪಟ್ಟ ಬಾಲಕರಿಂದ ಆರು ಗಂಟೆಗಳಿಗಿಂತ ಹೆಚ್ಚು ಅವಧಿಗೆ ಕೆಲಸ ಮಾಡಿಸಿಕೊಳ್ಳಬಾರದು. ಅಲ್ಲದೇ ಕೆಲಸವು ಒಂದು ಬಾರಿಗೆ ಮೂರು ಗಂಟೆಗಳಿಗಿಂತ ಹೆಚ್ಚನ ಅವಧಿಗೆ ಇರಬಾರದು ಮತ್ತು ಮೂರು ಗಂಟೆಯ ನಂತರ ಅವರಿಗೆ ಕನಿಷ್ಠ ಒಂದು ಗಂಟೆಯ ವಿರಾಮ ನೀಡಬೇಕು. ಮಕ್ಕಳಿಂದ ರಾತ್ರಿ ಏಳರಿಂದ ಬೆಳಗ್ಗೆ ಎಂಟು ಗಂಟೆಯವರೆಗೆ ಯಾವುದೇ ಕೆಲಸ ಮಾಡಿಸುವಂತಿಲ್ಲ. ಅವರಿಗೆ ವಾರದಲ್ಲಿ ಒಂದು ದಿನ ಕಡ್ಡಾಯವಾಗಿ ರಜೆಯನ್ನು ಕೊಡಬೇಕು.
ನಿರ್ಗತಿಕ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ, ಪುರ್ನರ್ವಸತಿಯನ್ನು ಕಲ್ಪಿಸುವುದಕ್ಕಾಗಿ ಮತ್ತು ಅವರಿಗೆ ಕೌಟುಂಬಿಕ ವಾತಾವರಣವನ್ನು ಕಲ್ಪಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅರ್ಹ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಿರ್ಗತಿಕ ಮಕ್ಕಳ ಕುಟೀರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕರ್ನಾಟಕದಾದ್ಯಂತ ಸ್ಥಾಪಿಸಲಾಗಿದೆ. ಪ್ರತಿ ಮಗುವಿನ ಪಾಲನೆ, ಪೋಷಣೆ, ವೈದ್ಯಕೀಯ ವೆಚ್ಚಕ್ಕೆಂದು ತಿಂಗಳಿಗೆ ನಾಲ್ಕು ನೂರು ರುಪಾಯಿಗಳನ್ನು ಇಲಾಖೆಯಿಂದ ಸ್ವಯಂ ಸೇವಾ ಸಂಸ್ಥೆಗಳಿಗೆ ಕೊಡಲಾಗುತ್ತಿದೆ. ಸಂಘ ಸಂಸ್ಥೆಗಳು ನಿರ್ಗತಿಕ ಮಕ್ಕಳನ್ನು ಸಲಹುವ ಒಳ್ಳೆಯ ಕಾಯಕವನ್ನು ಕನಿಷ್ಠ ಮೂರು ವರ್ಷಗಳಿಂದ ಮಾಡುತ್ತಿದ್ದರೆ ದಯವಿಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಅಥವಾ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿ ನೊಂದಾಯಿಸಿಕೊಳ್ಳಿ. ಮಕ್ಕಳನ್ನು ನೋಡಿಕೊಳ್ಳುವ ಸ್ವಯಂ ಸೇವಾ ಸಂಸ್ಥೆಗಳು ನೋಂದಾಯಿಸುವುದು ಕಡ್ಡಾಯವಾಗಿದೆ. ನೋಂದಾಯಿತ ಸೇವಾ ಸಂಸ್ಥೆಗಳಿಗೆ ಇಪ್ಪತ್ತೈದು ಮಕ್ಕಳ ಒಂದು ಘಟಕದಂತೆ ಪಾಲನೆ ಮತ್ತು ಪೋಷಣೆಗೆ ನಿರ್ಗತಿಕ ಕುಟೀರವನ್ನು ತೆರೆಯಲು ಅನುಮತಿಯೊಂದಿಗೆ ಧನ ಸಹಾಯವನ್ನೂ ನೀಡಲಾಗುವುದು. ಈ ಯೋಜನೆಯ ರೂಪು ರೇಷೆಗಳ ಪ್ರಕಾರ ಅನುಮೋದಿತ ವೆಚ್ಚದ ಶೇಕಡಾ ತೊಂಭತ್ತಷ್ಟರನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ನೀಡಲಾಗುತ್ತದೆ. ಉಳಿದ ಶೇಕಡಾ ಹತ್ತರಷ್ಟನ್ನು ಸಂಸ್ಥೆಯು ಭರಿಸಬೇಕಾಗುತ್ತದೆ. ಇದೀಗ 8,875 ಮಕ್ಕಳನ್ನೊಳಗೊಂಡ ಮುನ್ನೂರ ಇಪ್ಪತ್ತೈದು ಕುಟೀರಗಳು ಕೆಲಸ ಮಾಡುತ್ತಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬಾಲ ಕಾರ್ಮಿಕರ ಪುನರ್ವಸತಿಗಾಗಿ ತಾಲೂಕು ಮಟ್ಟದಲ್ಲಿ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಸರ್ಕಾರದ ವತಿಯಿಂದ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಮಧ್ಯಾಹ್ನದ ಬಿಸಿ ಊಟ, ಉಚಿತ ವೈದ್ಯಕೀಯ ಸೌಲಭ್ಯ ದೊರೆಯುತ್ತದೆ. ಮಕ್ಕಳನ್ನು ಅವರ ಸಹಜ ಬಾಲ್ಯದಿಂದ ವಂಚಿಸುವುದರಿಂದಲೇ ಅವರಿಗೆ ಸಿಗಬೇಕಾದ ಶಿಕ್ಷಣ, ಸಂಸ್ಕಾರ ಸಿಗದೆ, ಮುಂದೆ ಅವರು ಬೆಳೆದ ಮೇಲೆ ಸಮಾಜಘಾತುಕರಾಗುತ್ತಾರೆ. ಇಂಥ ನಿರ್ಗತಿಕ ಮಕ್ಕಳೇನಾದರೂ ನಿಮ್ಮ ಗಮನಕ್ಕೆ ಬಂದರೆ ತಕ್ಷಣವೇ ಪೊಲೀಸ್ ಠಾಣೆಯಲ್ಲಿ ಅಥವಾ ಉಚಿತ ಮಕ್ಕಳ ದೂರವಾಣಿಯ ಸಂಖ್ಯೆ 1098ಕ್ಕೆ ದೂರು ಕೊಡಿ. ಅವರು ಅಂಥ ಮಕ್ಕಳಿಗಾಗಿಯೇ ಇರುವ ಸುರಕ್ಷಿತ ಗೃಹಗಳಿಗೆ ಅವರನ್ನು ಕಳುಹಿಸಿಕೊಡುತ್ತಾರೆ.
ಇಂದು ನಮ್ಮ ದೇಶ ಒಂದು ಯುವ ದೇಶ ಎಂದು ನಾವು ಹೆಮ್ಮೆ ಪಡಬಹುದಾಗಿದೆ. ಶೇಕಡಾ 40 ರಷ್ಟು ಜನಸಂಖ್ಯೆ ಯುವ ಪೀಳಿಗೆಯದ್ದಾಗಿದೆ. ನಮ್ಮ ಅತ್ಯಂತ ಬಹುಮೂಲ್ಯ ಆಸ್ತಿ ಅವರೇ ಆಗಿದ್ದಾರೆ. ಬಾಲ್ಯ ಸರಿಯಾಗಿದ್ದರೆ, ವಯಸ್ಕರಾದ ಮೇಲೆ ಅವರು ತಮಗಾಗಿ ಹಾಗೂ ಸಮಾಜಕ್ಕಾಗಿ ದುಡಿಯಬಹುದಾಗಿದೆ. ನಗು ನಗುತ್ತಾ ಆಟವಾಡಿಕೊಂಡಿರಬೇಕಾದ ವಯಸ್ಸಿನಲ್ಲಿ ಮಕ್ಕಳು ದುಡಿಯಬೇಕಾದ ಪರಿಸ್ಥಿತಿಗೆ ಬಂದು ತಮ್ಮ ಬಾಲ್ಯವನ್ನೇ ಕಳೆದುಕೊಳ್ಳುವಂತಾದರೆ ಅದು ಸಮಾಜದ ದೊಡ್ಡ ದುರಂತ. ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿ ಮಾಡದಿರುವುದು ಕೇವಲ ಸರ್ಕಾರದ ಹೊಣೆಯಲ್ಲ. ನಮ್ಮ, ನಿಮ್ಮ, ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಜವಾಬ್ದಾರಿಯೂ ಹೌದಲ್ಲವೇ?

(ಮುಂದುವರೆಯುವುದು)

- ಶಾಲಿನಿ ರಜನೀಶ್, ಐಎಎಸ್
anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.