

ಭಾನುವಾರ ಚಾಂಪಿಯನ್ಸ್ ಲೀಗ್ನ ಫೈನಲ್ ಪಂದ್ಯದಲ್ಲಿ ಯಾರು ಗೆದ್ದರು, ಯಾರು ಸೋತರು ಎಂಬುದಕ್ಕಿಂತ ಕ್ರಿಕೆಟ್ ಎಷ್ಟು ಬಡವಾಯಿತು ಎಂಬುದೇ ಪ್ರಧಾನವಾಯಿತು. ಸಚಿನ್ ತೆಂಡೂಲ್ಕರ್ ತಮ್ಮ ಕಡೆಯ ಟಿ-20 ಪಂದ್ಯ ಆಡಿದರೆ, ಕಡೆಯ ಬಾರಿಗೆ ರಾಹುಲ್ ದ್ರಾವಿಡ್ ಆಟಗಾರನಾಗಿ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಂಡರು. ಸಚಿನ್ ಬಿಡಿ, ಇನ್ನೂ ಆಡುತ್ತಾರೆ. ಆದರೆ ರಾಹುಲ್, ಉಹೂಂ ಮತ್ತೆ ಆತನನ್ನು ವೃತ್ತಿಪರ ಆಟಗಾರನಾಗಿ ನೋಡಲಾಗುವುದಿಲ್ಲ. ರಾಜಸ್ಥಾನ ತಂಡದ ಪರ ಏಳನೆಯವರಾಗಿ ಕೇವಲ ಒಂದು ರನ್ ಗಳಿಸಿ ದ್ರಾವಿಡ್ ನಿರ್ಗಮಿಸಿದಾಗ ಕೋಟ್ಲಾ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಮತ್ತು ಟಿವಿ ಪರದೆಯತ್ತ ನೆಟ್ಟ ನೋಟ ಇಟ್ಟು ಕುಳಿತಿದ್ದ ಅಸಂಖ್ಯ ಅಭಿಮಾನಿಗಳ ಮನಸ್ಸಲ್ಲಿ ಒಂದು ರೀತಿಯ ಚಡಪಡಿಕೆ, ತಳಮಳ ಉಂಟಾಗಿತ್ತು. ಕ್ರೀಸ್ನಿಂದ ಪೆವಿಲಿಯನ್ವರೆಗೆ ದ್ರಾವಿಡ್ ಒಂದೊಂದೇ ಹೆಜ್ಜೆ ಇಟ್ಟು ಹಿಂತಿರುಗಿದಾಗ ಆ ಒಂದೊಂದು ಹೆಜ್ಜೆಯೂ ಒಂದೊಂದು ಇತಿಹಾಸ ಹೇಳುತ್ತಿತ್ತು. ನೆನಪುಗಳ ಬುತ್ತಿಯನ್ನು ಬಿಚ್ಚಿ ಮನಸ್ಸನ್ನು ಪೆಚ್ಚಾಗಿಸಿತು. ಆ ಕ್ಷಣಕ್ಕೆ ಕಾಲ ನಿಲ್ಲಬಾರದೆ, ಮತ್ತೆ ಗಡಿಯಾರ ಹಿಂದೆ ಹೋಗಬಾರದೆ, ಮತ್ತೆ ದ್ರಾವಿಡ್ ಆಟವನ್ನು ಕಣ್ತುಂಬಿಕೊಳ್ಳಬಾರದೆ ಎಂದೆಲ್ಲ ಅನಿಸಿತ್ತು. ಇಡೀ ಕ್ರೀಡಾಂಗಣ ದ್ರಾವಿಡ್ಗೆ ತಲೆ ಬಾಗಿತ್ತು. ಕರತಾಡನ ಮುಗಿಲು ಮುಟ್ಟಿತು. ಹಾಗೆಯೆ ಮತ್ತೆಂದೂ ಈತನ ಆಟ ನೋಡಲಾಗುವುದಿಲ್ಲವಲ್ಲ ಎಂದು ಮಮ್ಮುಲ ಮರುಗಿತ್ತು. ನಿಜ, ದ್ರಾವಿಡ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿ ಒಂದೂವರೆ ವರ್ಷ ಕಳೆದಿದೆ. ಆತ ನಿವೃತ್ತನಾದಾಗಲೂ ಐಪಿಎಲ್ ಆಡುತ್ತಾನಲ್ಲ ಎಂಬ ಸಮಾಧಾನ ಇತ್ತು. ಆದರೆ ಈಗ ಈ ಸಮಾಧಾನವೂ ಶಾಶ್ವತವಾಗಿ ಸಮಾಧಿಯಾಗಿದೆ. ದ್ರಾವಿಡ್ ಬಿತ್ತಿರುವ ನೆನಪುಗಳ ಒಡ್ಡೋಲಗದಲ್ಲಿ ಕಳೆದು ಹೋದರೆ ಅದು ಕೊಡುವ ಅನುಭೂತಿಯೇ ಅನನ್ಯ. 'ನೀನೇ ಗತಿ ಶಂಭೋ' ಎಂದು ತಂಡ ಮೊರೆ ಇಟ್ಟಾಗಲೆಲ್ಲ 'ಮೈ ಹೂನಾ' ಎನ್ನುತ್ತಿದ್ದ ದ್ರಾವಿಡ್ನ ಭರವಸೆ, ರಮತ್ಯೆಯಿಂದ ದೂರವಾಗಿ ವಾಸ್ತವತೆಗೆ ತೀರಾ ಹತ್ತಿರವಾಗಿದ್ದ ಆತನ ಆಟ ಮತ್ತು ವ್ಯಕ್ತಿತ್ವ ಸದಾ ಕಾಡುತ್ತದೆ. ವ್ಯಕ್ತಿ ಪ್ರತಿಷ್ಠೆಯೇ ಕೈ ಮೇಲಾಗಿರುವ ಇಂದಿನ ಸಂದರ್ಭದಲ್ಲಿ ಸಮಷ್ಟಿ ಭಾವ ಮತ್ತು ಅದು ತರುವ ಸಂತೃಪ್ತಿ, ಸಮಾಧಾನಗಳ ಪ್ರತೀಕವಾಗಿ ನಿಲ್ಲುತ್ತಾನೆ ದ್ರಾವಿಡ್.
ಲಾರ್ಡ್ಸ್, 1996.
ಲಾರ್ಡ್ಸ್ ಎಂದರೆ ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧ. ಇಲ್ಲಿನ ಪ್ರೇಕ್ಷಕರೂ ಮಡಿವಂತರೇ. ಅವರು ನೋಡಲು ಬಯಸುವ ಆಟವೂ ಅಂತಹುದೇ. ಪ್ರೇಕ್ಷಕರ ನಿರೀಕ್ಷೆಯ ಭಾರದಲ್ಲಿ ಅದೆಷ್ಟೊ ಆಟಗಾರರು ಸೊರಗಿದ್ದಿದೆ. ಇಲ್ಲಿ ಅಬ್ಬರ, ಆಕ್ರಮಣಕ್ಕಿಂತ ಕೌಶಲ, ತಾಂತ್ರಿಕತೆ, ಶಾಸ್ತ್ರಕ್ಕೆ ಹೆಚ್ಚು ಚಪ್ಪಾಳೆ. ತನ್ನ ಬ್ಯಾಟಿನಿಂದ ಜಗತ್ತನ್ನೇ ಗೆದ್ದಿದ್ದ ಸುನಿಲ್ ಗವಾಸ್ಕರ್ ಸಹ ಇಲ್ಲಿ ಸೋತಿದ್ದ. ಆತ ಒಂದೇ ಒಂದು ಶತಕವನ್ನೂ ಇಲ್ಲಿ ದಾಖಲಿಸಲಿಲ್ಲ. ಅದೇ ದಿಲೀಪ್ ವೆಂಗ್ಸರ್ಕರ್ ಬಂದಾಗಲೆಲ್ಲ ಇಲ್ಲಿ ಶತಕ (ಸತತ ಮೂರು ಬಾರಿ) ಬಾರಿಸಿ ಭೇಷ್ ಎನಿಸಿಕೊಂಡಿದ್ದ.
ಅಜರುದ್ದೀನ್ ನಾಯಕತ್ವದ ಭಾರತ ತಂಡ ಎಜ್ಬಾಸ್ಟನ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಹಾಗಾಗಿ ಲಾರ್ಡ್ಸ್ ಪಂದ್ಯಕ್ಕೆ ತಂಡದಲ್ಲಿ ಬದಲಾವಣೆ ಮಾಡಲಾಯಿತು. ಇಬ್ಬರು ಹೊಸ ಮುಖಗಳಿಗೆ ದಾರಿ ಮಾಡಿಕೊಡಲಾಯಿತು. ಶ್ರೀನಾಥ್ ಮತ್ತು ವೆಂಕಟೇಶ್ ಪ್ರಸಾದ್ ಕೈಚಳಕದ ಫಲವಾಗಿ ಇಂಗ್ಲೆಂಡ್ 349 ರನ್ಗಳಿಗೆ ಮೊದಲ ಸರದಿ ಮುಗಿಸಿತ್ತು. ನಿಜಕ್ಕೂ ಪಂದ್ಯ ಗೆಲ್ಲಲು ಭಾರತಕ್ಕೆ ಅವಕಾಶವಿತ್ತು. ಮೊದಲ ಪಾಳಿಯಲ್ಲಿ ಭಾರೀ ಮುನ್ನಡೆ ಪಡೆದು ಜಯಕ್ಕಾಗಿ ಪ್ರಯತ್ನಿಸಬಹುದಿತ್ತು. ತೆಂಡೂಲ್ಕರ್, ಅಜರುದ್ದೀನ್, ಜಡೇಜಾರಿಂದ ಭಾರೀ ನಿರೀಕ್ಷೆ ಇತ್ತು. ಆದರೆ ಇವರಾರೂ ತಂಡವನ್ನು ಕಾಯಲಿಲ್ಲ. ಹೊಸ ಮುಖಗಳಾಗಿದ್ದ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇಲ್ಲದಿದ್ದರೆ ಭಾರತ ಆ ಪಂದ್ಯವನ್ನು ಸೋಲುವುದು ಖಚಿತವಾಗಿತ್ತು. ಮೊದಲ ಸರದಿಯಲ್ಲಿ ಭಾರತ ಗಳಿಸಿದ್ದು 429 ರನ್. ಅದರಲ್ಲಿ ಈ ಇಬ್ಬರ ಪಾಲು 226! ಇದು ಅಂಕಿ-ಸಂಖ್ಯೆ. ಆದರೆ ಈ ಅಂಕಿಗಳನ್ನು ಮೀರಿದ ಭರವಸೆ ಅಂದು ಭಾರತಕ್ಕೆ ಪ್ರಾಪ್ತವಾಗಿತ್ತು. ಅಂದು ಗಂಗೂಲಿ ಚೊಚ್ಚಲ ಟೆಸ್ಟ್ನಲ್ಲಿ ಶತಕ ದಾಖಲಿಸಿ ಹೀರೊ ಆದರು. ದ್ರಾವಿಡ್ ಐದು ರನ್ಗಳಿಂದ ಶತಕ ವಂಚಿತರಾದರೂ ಲಾರ್ಡ್ಸ್ನ puristಗಳ ಮನಗೆಲ್ಲುವಲ್ಲಿ ಸಫಲರಾದರು. ಕ್ರೀಸ್ ಅನ್ನು ಬಳಸಿಕೊಳ್ಳುವ ಪರಿ, ಪ್ರತಿಯೊಂದು ಹೊಡೆತದ ಹಿಂದಿನ ವೈಜ್ಞಾನಿಕ ವಿಧಾನದ ಕರ್ಮಠತೆ, ಕಾಯುವ, ಕಾಯಿಸುವ, ಕಾಯಿಸಿ, ಕಾಯಿಸಿ ಬೇಸರಿಸುವ, ಹಾಗೆ ಮಾಡುತ್ತಲೇ ಮಾನಸಿಕವಾಗಿ ಎದುರಾಳಿಯನ್ನು ಗೆಲ್ಲುವ ರೀತಿ ಎಲ್ಲರ ಗಮನ ಸೆಳೆಯಿತು. ಹಾಗೆಂದು ದ್ರಾವಿಡ್ಗೆ ಕ್ರಿಕೆಟ್ ಎಂಬುದು ಅಪ್ಪ ಕೊಟ್ಟ ಬಳುವಳಿ ಅಥವಾ ತಾತನ ಉಂಬಳಿಯೇನೂ ಆಗಿರಲಿಲ್ಲ. ಅದೇನಿದ್ದರೂ ಸ್ವಯಂಕೃಷಿ. ಕೇಕಿ ತಾರಾಪುರ್ ಈತನ ಪಾಲಿನ ದ್ರೋಣಾಚಾರ್ಯ. ಕೇಕಿ ಹೇಳಿದ್ದನ್ನು ಎದೆಗಪ್ಪಿಕೊಂಡು ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಾಸ ಮಾಡಿದ್ದ. ಅದರ ಫಲವೇ ಲಾರ್ಡ್ಸ್ನ ಅದ್ಭುತ ಅರಂಗೇಟ್ರಂ. ಭಾರತ ತಂಡಕ್ಕೆ ಬರುವ ಮುನ್ನ ಐದು ವರ್ಷ ದೇಶದ ನಾನಾ ಮೈದಾನಗಳಲ್ಲಿ ಬೆವರಿಳಿಸಿದ್ದ. 1996ರಲ್ಲಿ ಭಾರತದಲ್ಲೇ ನಡೆದ ವಿಶ್ವಕಪ್ಗೆ ತಂಡದಲ್ಲಿ ದ್ರಾವಿಡ್ಗೆ ಅವಕಾಶ ನೀಡದ ಬಗ್ಗೆ ಆಗ ಆಯ್ಕೆ ಸಮಿತಿಯಲ್ಲಿದ್ದ ಜಿ.ಆರ್. ವಿಶ್ವನಾಥ್ ಹೇಳಿದ್ದು 'ದ್ರಾವಿಡ್ ಭಾರತದ ಪರ ಆಡಲು ಇನ್ನೂ ಸಮಯ ಕೂಡಿಬಂದಿಲ್ಲ. ಖಂಡಿತ ಆತ ಆಯ್ಕೆ ಆಗುತ್ತಾನೆ ಮತ್ತು ದೊಡ್ಡ ಸಾಧನೆ ಮಾಡುತ್ತಾನೆ' ಎಂದು. 1991ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿಯಲ್ಲಿ ಆಡಿದಾಗಲೇ ಈತನ ಕುರಿತು ಇದೇ ಜಿಆರ್ವಿ ಹೇಳಿದ್ದರು, 'ಕಾದು ನೋಡಿ, ಈತ ದೊಡ್ಡ ಆಟಗಾರ ಆಗತ್ತಾನೆ' ಎಂದು. ಲಾರ್ಡ್ಸ್ನ ಪ್ರದರ್ಶನದಲ್ಲಿ ಈ ಎಲ್ಲವೂ ಪ್ರತಿಧ್ವನಿಸಿತ್ತು. ಕೇಕಿ ಪಾಠ, ಜಿಆರ್ವಿ ವಿಶ್ವಾಸ ಎರಡೂ ಅಂದು ಸಾರ್ಥಕತೆ ಕಂಡಿತ್ತು. ಅಂದು ಗೋಚರಿಸಿದ ಭರವಸೆ 2012ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳುವವರೆಗೆ, ಅಂದರೆ 17 ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ಅನ್ನು ಕಾದಿತ್ತು. ಎಂದೂ ಕೈ ಕೊಡಲಿಲ್ಲ, ಸೋತು ಬಸವಳಿಯಲಿಲ್ಲ.
2003ರಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಕೋಲ್ಕೊತಾದಲ್ಲಿ ಲಕ್ಷ್ಮಣ್ ಜೊತೆಗಿನ ಸರಸ, 2002ರಲ್ಲಿ ಹೆಡಿಂಗ್ಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಆವೇಶ, 2003ರಲ್ಲಿ ಅಡಿಲೇಡ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಉನ್ಮಾದ, 2004ರಲ್ಲಿ ರಾವಲ್ಪಿಂಡಿಯಲ್ಲಿ ಪಾಕಿಸ್ತಾನದ ವಿರುದ್ಧದ ಉತ್ಕರ್ಷ... ಇವೆಲ್ಲವೂ ದ್ರಾವಿಡ್ ಯಶಸ್ಸಿನ ಹಾರದ ಎಂದೂ ಮಾಸದ ಮುತ್ತಿನ ಮಣಿಗಳಾಗಿವೆ. ಜೊತೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಡರ್ಬನ್ನಲ್ಲಿ ತೋರಿದ ಎದೆಗಾರಿಕೆ, ನಿವೃತ್ತಿಯ ತುರ್ತು ನಿರ್ಗಮನದ ಬಾಗಿಲು ತೆರೆದ ಆಸ್ಟ್ರೇಲಿಯಾ ಪ್ರವಾಸಕ್ಕೆ ಮುನ್ನ ಇಂಗ್ಲೆಂಡ್ನಲ್ಲಿ ಇಡೀ ತಂಡವೇ ಮಕಾಡೆ ಮಲಗಿದರೂ ತಾನೊಬ್ಬನೇ ತಲೆ ಎತ್ತಿ ನಿಂತು ತೋರಿದ ದಿಟ್ಟತನ ಎಲ್ಲವೂ ದ್ರಾವಿಡ್ನ ಮೃದು ವ್ಯಕ್ತಿತ್ವದ ಹಿಂದಿನ ಕಠೋರ ಚಿತ್ತವನ್ನು ತೋರುತ್ತದೆ. ಕ್ರಿಕೆಟ್ ಮೈದಾನದಲ್ಲಿ ದ್ರಾವಿಡ್ ಸಾಧಿಸಿದ್ದು ಅಪಾರ. ಆದರೆ, ಗಳಿಸಿದ ರನ್ಗಳು, ದಾಖಲಿಸಿದ ಶತಕಗಳು, ಹಿಡಿದ ಕ್ಯಾಚ್ಗಳು ಮತ್ತು ಬರೆದ ದಾಖಲೆಗಳಿಗಿಂತ ದ್ರಾವಿಡ್ ಹೆಚ್ಚು ಆಪ್ತರಾಗುವುದು Simplicity in Deed and mind (ನಡೆ ನುಡಿಯಲ್ಲಿನ ಸರಳತೆ)ನಿಂದಾಗಿ. ದ್ರಾವಿಡ್ ಪಾಲಿಗೆ ಕ್ರಿಕೆಟ್ ಎಂದೂ ಖ್ಯಾತಿ, ಕೀರ್ತಿ, ಹಣ ತರುವ ಕಾಯಕ (ಇವೆಲ್ಲವೂ ಆತನನ್ನು ಅರಸಿ ಬಂದದ್ದು ನಿಜ) ಮಾತ್ರವೇ ಆಗಿರಲಿಲ್ಲ. ಅದು ಒಂದು ರೀತಿಯಲ್ಲಿ ಆತನಿಗೆ Liberation (ಮುಕ್ತಿಮಾರ್ಗ) ಆಗಿತ್ತು. ಭಾರತೀಯ ಕ್ರಿಕೆಟ್ನ ಭವಿಷ್ಯವನ್ನೇ ಬದಲಿಸಿದ ಈಡನ್ ಗಾರ್ಡನ್ಸ್ನಲ್ಲಿನ ಲಕ್ಷ್ಮಣ್ ಜೊತೆಗಿನ ಪಾಲುದಾರಿಕೆಯ ಪ್ರತಿ ಫ್ರೇಮಿನಲ್ಲೂ ದ್ರಾವಿಡ್ ಮುಖದಲ್ಲಿ ಈ ಲಿಬರೇಷನ್ ವ್ಯಕ್ತವಾಗಿತ್ತು. ಗ್ಲೆನ್ ಮೆಗ್ರಾತ್, ಶೇನ್ವಾರ್ನ್, ಗಿಲೆಸ್ಪಿ ಎಸೆದ ಪ್ರತಿಯೊಂದು ಸವಾಲಿಗೂ ತನ್ನನ್ನು ತಾನು ಒಡ್ಡಿಕೊಂಡ, ತನ್ನೊಳಗಿನ ಎಲ್ಲ ಶಕ್ತಿ ಸಾಮರ್ಥ್ಯವನ್ನೂ ಹೊರಗೆಳೆದು ಆ ಸವಾಲನ್ನು ಹಿಮ್ಮೆಟ್ಟಿಸಿದ ಪರಿಯಲ್ಲೂ ಇದು ವೇದ್ಯವಾಗುತ್ತದೆ. 2001ರಿಂದ 2006ರವರೆಗೆ ದ್ರಾವಿಡ್ ವೃತ್ತಿ ಬದುಕು ಯಾವುದೇ ಯುವ ಕ್ರೀಡಾಪಟುವಿಗೆ ಮಾದರಿಯನ್ನುವಂತಿತ್ತು. ಈ ಅವಧಿಯಲ್ಲೇ ದ್ರಾವಿಡ್ ಮುಟ್ಟಿದ್ದೆಲ್ಲವೂ ಚಿನ್ನದಂತಿತ್ತು. ಆದರೆ ಈ ಯಶಸ್ಸನ್ನು ಆತ ಯಾವತ್ತೂ ತಲೆಗೆ ಹಾಕಿಕೊಳ್ಳಲಿಲ್ಲ. ಇಗೋ ಹತ್ತಿರ ಸುಳಿಯಲು ಬಿಡಲಿಲ್ಲ. ಇದಕ್ಕೆ ಮುನ್ನ ಆಯ್ಕೆ ರಾಜಕೀಯದ ಪಗಡೆಯಾಟದಲ್ಲಿ ಕೆಳಗೆ ಬಿದ್ದಾಗಲೂ ದ್ರಾವಿಡ್ ಮರುಗಲಿಲ್ಲ. ತಂಡದ ಸ್ವರೂಪದಲ್ಲೇ ನನ್ನ ಪಾತ್ರ ಅಗತ್ಯ ಇದ್ದಂತಿಲ್ಲ ಎಂಬ ಫಿಲಾಸಫಿ ತೋರಿದ. ಮತ್ತೆ ತಂಡಕ್ಕೆ ಮರಳಲು ಸಾಕಷ್ಟು ಪರಿಶ್ರಮ ವಹಿಸಿದ. ವಿಕೆಟ್ ಕೀಪರ್ ಆಗುವುದಾದರೆ ತಂಡಕ್ಕೆ ಮರಳಬಹುದು ಎಂಬುದು ತಿಳಿದ ಕೂಡಲೇ ಕೈಗೆ ಗ್ಲೌಸ್ ಧರಿಸಿ ಗಂಟೆಗಟ್ಟಲೆ ಯುವ ಬೌಲರ್ಗಳಿಗೆ ವಿಕೆಟ್ ಕಾದ. ಅದನ್ನು ಒಂದು ತಪಸ್ಸಿನಂತೆ ಆಚರಿಸಿದ ತಂಡಕ್ಕೆ ಮರಳಿದ ಮೇಲೆ ವಿಕೆಟ್ ಕಾಯುವುದರ ಜೊತೆಗೆ ತಂಡವನ್ನು ಕಾಯುವ ಕೆಲಸಕ್ಕೂ ಮುಂದಾದ. ಗಂಗೂಲಿಗೆ ಬೇಕೆಂದರೆ ಆಫ್ ಸ್ಪಿನ್ನರ್ ಹ್ಯಾಟ್ ಧರಿಸಿದರು. ಧೋನಿಗೆ ಕೀಪಿಂಗ್ ಬೇಸರವಾಗಿ ಬೌಲಿಂಗ್ ಮಾಡುವ ಚಪಲ ಬಂದರೆ ಕೂಡಲೇ ಆತನ ಕೀಪಿಂಗ್ ಗ್ಲೌಸ್ ಧರಿಸಿ ವಿಕೆಟ್ ಹಿಂದೆ ಸರಿದ. ಆರಂಭಿಕ ಬ್ಯಾಟ್ಸ್ಮನ್ ವಿಫಲನಾದರೆ ಅಥವಾ ಗಾಯಗೊಂಡರೆ ಅವರ ಸ್ಥಾನ ತುಂಬಿದ, ಲಕ್ಷ್ಮಣ್ಗೆ ನೆರವಾಗಲೆಂದು 5ನೇ ಕ್ರಮಾಂಕದಲ್ಲಿ ಆಡಿದ, ಸಚಿನ್ನ ಶೀಲ್ಡ್ ಮಾಡಲೆಂದು ಮತ್ತೆ 3ನೇ ಕ್ರಮಾಂಕಕ್ಕೆ ಬಂದ. ಇದ್ಯಾವುದಕ್ಕೂ 'ನಾನು' ಎಂಬುದು ದ್ರಾವಿಡ್ನನ್ನು ಕಾಡಲಿಲ್ಲ. ಬದಲಿಗೆ ದ್ರಾವಿಡ್ ಪಾಲಿಗೆ ತಾನು ಎಂಬುದು ತಂಡವೇ ಆಗಿತ್ತು. ಭಾನುವಾರ ಚಾಂಪಿಯನ್ಸ್ ಲೀಗ್ ಫೈನಲ್ನಲ್ಲಿ ಇದು ತನ್ನ ಕಡೆಯ ಆಟ ಎಂದು ತಿಳಿದಿದ್ದರೂ ಎಂದಿನಂತೆ ಇನಿಂಗ್ಸ್ ಆರಂಭಿಸಲು ಮತ್ತು ಆ ಮೂಲಕ ಗಮನ ತನ್ನತ್ತ ಸೆಳೆದುಕೊಳ್ಳಲು ಮುಂದಾಗಲಿಲ್ಲ. ಉಳಿದವರಿಗೆ ಅವಕಾಶ ಮಾಡಿಕೊಟ್ಟ. ಇಲ್ಲೂ ಅದೇ ಮನೋಭಾವ ಎದ್ದು ಕಾಣುತ್ತಿತ್ತು. ದ್ರಾವಿಡ್ ಎಂದೂ ಸಚಿನ್ ಆಗಲಿಲ್ಲ, ಸಚಿನ್ನಂತೆ ದೇಶವನ್ನು ಆವರಿಸಿಕೊಳ್ಳಲಿಲ್ಲ, ಸಮೂಹ ಸನ್ನಿ ಸೃಷ್ಟಿಮಾಡಲಿಲ್ಲ. ಹಾಗಾಗಲು ಪ್ರಯತ್ನಿಸಲೂ ಇಲ್ಲ. ಹಾಗಾಗಲಿಲ್ಲವಲ್ಲ ಎಂದು ಕೊರಗಲೂ ಇಲ್ಲ. ಆದರೆ ತನ್ನ ವರ್ತನೆ, ನಿಗರ್ವ, ಸಮರ್ಪಣೆ ಮತ್ತು ಒಟ್ಟಾರೆ Conductನಿಂದ ಸಚಿನ್ಗಿಂತಲೂ ದೊಡ್ಡವನಾಗಿದ್ದಾನೆ. ಕ್ರಿಕೆಟ್ ಬಗೆಗಿನ ದ್ರಾವಿಡ್ನ ಕಾಳಜಿ, ಪ್ರೀತಿ ಎಷ್ಟರ ಮಟ್ಟಿಗಿದೆ ಎಂಬುದನ್ನು 2011ರಲ್ಲಿ ಆಸ್ಟ್ರೇಲಿಯಾದ ಕ್ಯಾನ್ಬೆರಾದಲ್ಲಿ ಆತ ನೀಡಿದ ಬ್ರಾಡ್ಮನ್ ಸ್ಮರಣಾರ್ಥ ಭಾಷಣದಲ್ಲಿ ವ್ಯಕ್ತವಾಗುತ್ತದೆ. ಈ ಭಾಷಣ ಮಾಲಿಕೆಯಲ್ಲಿ ಅನೇಕ ಆಟಗಾರರು ಮಾತನಾಡಿದ್ದಾರೆ. ಆದರೆ ದ್ರಾವಿಡ್ ಅಂದು ಮಾಡಿದ ಭಾಷಣಕ್ಕೆ ವ್ಯಕ್ತವಾದ ಮೆಚ್ಚುಗೆ, ಪ್ರತಿಕ್ರಿಯೆ ಅದ್ಭುತವಾಗಿತ್ತು. ಕ್ರಿಕೆಟ್ನ ಇತಿಹಾಸ, ಭಾರತ-ಆಸ್ಟ್ರೇಲಿಯಾ ಕಾಳಗಗಳ ನಡೆದು ಬಂದ ಬಗೆ, ಕ್ರಿಕೆಟ್ನ ಇಂದಿನ ಅವಸ್ಥೆ ಮತ್ತು ಭವಿಷ್ಯದ ವ್ಯವಸ್ಥೆ ಹೇಗಿರಬೇಕು ಎಂಬ ಕುರಿತಾದ ದ್ರಾವಿಡ್ ಮಾತುಗಳಿಗೆ ಇಡೀ ಆಸ್ಟ್ರೇಲಿಯಾ ತಲೆದೂಗಿತ್ತು. ಇಂದಿಗೂ ಆಸ್ಟ್ರೇಲಿಯಾ ಅಥವಾ ಇನ್ನಾವುದೇ ದೇಶದ ಆಟಗಾರರಿರಬಹುದು ಸಚಿನ್ ಕುರಿತು ಮೆಚ್ಚುಗೆಯ ಮಾತಾಡುವಾಗ ಹೆಚ್ಚು academic ಎನಿಸುತ್ತದೆ. ಅದೇ ದ್ರಾವಿಡ್ ಬಗ್ಗೆ ಹೇಳುವಾಗ ನಿಜದ ಗೌರವ ಇರುತ್ತದೆ.
'ಕ್ರಿಕೆಟ್ ಮೈದಾನದಲ್ಲಿ ಆಕ್ರಮಣ, ರೊಚ್ಚು, ಛಲ ನೋಡಬೇಕೆಂದಿದ್ದರೆ ರಾಹುಲ್ ದ್ರಾವಿಡ್ ಕಣ್ಣಲ್ಲಿ ಕಣ್ಣಿಟ್ಟು ನೋಡು'-ಮ್ಯಾಥ್ಯೂ ಹೇಡನ್
'ದ್ರಾವಿಡ್ ಜೊತೆ ಏಗಲು ಸಾಧ್ಯವಿಲ್ಲ ಎಂದಾದರೆ ಜೀವನದಲ್ಲಿ ನೀವು ಸ್ಥಿರವಾಗಿಲ್ಲ ಎಂದೇ ಅರ್ಥ'-ಬ್ರೆಟ್ ಲೀ.
ದ್ರಾವಿಡ್ ಲಾರ್ಡ್ಸ್ ನಲ್ಲಿ ಚೊಚ್ಚಲ ಪಂದ್ಯವಾಡಿ 17 ವರ್ಷಗಳೇ ಕಳಿದಿವೆ. ಈ ಅವಧಿಯಲ್ಲಿ ಒಂದು ಹೊಸ ತಲೆಮಾರು ಉದಯಿಸಿ ಈಗ ಪ್ರವರ್ಧಕ್ಕೆ ಬರುತ್ತಿದೆ. ಟಿ-20 ಹೊಡಿಬಡಿ ಕ್ರಿಕೆಟ್ ಜೊತೆ ಜೋತು ಬಿದ್ದಿದೆ. ಇಷ್ಟಾಗಿಯೂ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದ ವೇಳೆ ಟ್ವಿಟರ್ನಲ್ಲಿ ಅತಿ ಹೆಚ್ಚು ಟ್ರೆಂಡ್ ಆಗಿದ್ದು ರಾಹುಲ್ ದ್ರಾವಿಡ್! ಸಾವಿರಾರು ಟ್ವೀಟ್ಗಳಲ್ಲಿ ದ್ರಾವಿಡ್ ಪ್ರತಿ ವ್ಯಕ್ತವಾಗಿದ್ದು, Respect. ಇದು ವ್ಯಕ್ತಿಯಾಗಿ, ಆಟಗಾರನಾಗಿ ದ್ರಾವಿಡ್ನನ್ನು ಜನ ಎಷ್ಟು ಎತ್ತರದಲ್ಲಿ ನೋಡುತ್ತಾರೆ ಎಂಬುದನ್ನು ತೋರಿಸುತ್ತದೆ.
Yes, ಕೊನೆಯ ಬಾರಿಗೆ ದ್ರಾವಿಡ್ ಅಂಗಳದಿಂದ ಹೊರ ನಡೆದಿದ್ದಾರೆ. ಮತ್ತೆ ಸಾಂತ್ವನ ನೀಡುವ ಭರವಸೆ ಕೊಡುವ ಆ ಹಿತಾನುಭವ ಲಭಿಸುವುದಿಲ್ಲ. ನಮ್ಮ ನಿನ್ನೆಗಳನ್ನು ಸಮೃದ್ಧಗೊಳಿಸಿದ, ಶಾಶ್ವತಗೊಳಿಸಿದ ದ್ರಾವಿಡ್ಗೆ ನಿಜಕ್ಕೂ HATS OFF!
- ಕೆ.ಎಸ್.ಜಗನ್ನಾಥ್
jagannath.kudinoor@gmail.com