ಶಿಕ್ಷಣದಲ್ಲಿ ಪ್ರಯೋಗ ಸಾಕು, ಕಾಯಕಲ್ಪ ಬೇಕು
2012ರ ಶೈಕ್ಷಣಿಕ ವರದಿ ಪ್ರಕಾರ ದೇಶದ ಪ್ರತಿ ಮಗುವನ್ನೂ ಶಾಲೆಗೆ ಕರೆತರುವ ಮಹತ್ವದ ಹೆಜ್ಜೆಗೆ ತೀರಾ ಸನಿಹದಲ್ಲೇ ಇದ್ದೇವೆ. "ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಪ್ರತಿ ಮಗುವಿಗೆ" ಎಂಬ ಧ್ಯೇಯ ವಾಕ್ಯಗಳ ಹಿನ್ನೆಲೆಯಲ್ಲಿ ಇಂದು ಸರ್ಕಾರ ಶಿಕ್ಷಣಕ್ಕೆ ಮಾಡುತ್ತಿರುವ ವೆಚ್ಚ ನಿಜಕ್ಕೂ ಸಾರ್ಥಕ. ಸರ್ಕಾರಿ ಶಾಲೆಗಳು ಇಂದು ಸರ್ಕಾರದ ನಿರ್ದೇಶನದಂತೆ ಶಾಲೆಗೆ ಬರುವ ಪ್ರತಿ ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಬಡ ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಶಿಕ್ಷಣತಜ್ಞರು ರೂಪಿಸುತ್ತಿರುವ ಹೊಸ ಪ್ರಯೋಗಗಳು ಶಿಕ್ಷಕರನ್ನು ಗೊಂದಲದಲ್ಲಿ ಮುಳುಗಿಸಿವೆ. ಅದಕ್ಕೆ ತಾಜಾ ಉದಾಹರಣೆ 2013-14ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ನಿರಂತರ-ವ್ಯಾಪಕ ಮೌಲ್ಯಮಾಪನ. ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ, ಸಹಪಠ್ಯ ಚಟುವಟಿಕೆ ಮತ್ತು ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸಿ, ಪಠ್ಯಕ್ಕೆ ಸೀಮಿತವಾಗದೆ ಮಗುವನ್ನು ವಿವಿಧ ಆಯಾಮಗಳಲ್ಲಿ ಅರ್ಥೈಸಿಕೊಳ್ಳುವುದಾಗಿದೆ ಇದು. ಶಿಕ್ಷಣತಜ್ಞರ ಅಭಿಪ್ರಾಯದಂತೆ ಸರ್ಕಾರ ಶಿಕ್ಷಕರಿಗೆ 3 ದಿನಗಳ ತರಬೇತಿ ನೀಡಿ ಇದನ್ನು ವರ್ಗದ ಕೊಠಡಿಯಲ್ಲಿ ಅನುಷ್ಠಾನಗೊಳಿಸಿ ಎಂದು ಆದೇಶ ನೀಡಿದೆ. ಇದಕ್ಕಾಗಿಯೇ ಪ್ರತಿ ಮಗುವಿನ ಬಯೋಡೇಟಾ ಪ್ರೊಫೈಲ್ ದಾಖಲಿಸಲು ಶಾಲಾ ಅವಧಿ ಸಾಲದು. ಶಿಕ್ಷಕರು ಶಾಲೆ ಮಾತ್ರವಲ್ಲ ಮನೆಯಲ್ಲೂ ದಾಖಲೆ ತುಂಬಿ ಅಧಿಕಾರಿಗಳಿಗೆ ಸಮಾಧಾನ ಪಡಿಸುತ್ತಿದ್ದಾರೆ. ಇಷ್ಟೆಲ್ಲಾ ದಾಖಲೆಗಳು ಅವಶ್ಯಕವೇ ಎಂದು ಶಿಕ್ಷಕರು ತಮ್ಮ ತಮ್ಮಲ್ಲೇ ಪಿಸುಗುಡುತ್ತಿದ್ದಾರೆ. ಅಧಿಕಾರಿಗಳು ಇದಕ್ಕೆ ನೀಡುವ ಕಾರಣ ಆರ್.ಟಿ.ಇ. ಇಂದು ಬೋಧನೆ ಮಾಡುತ್ತಿರುವ ಶಿಕ್ಷಕರು, ವೃತ್ತಿಯಲ್ಲಿರುವ ಉಪನ್ಯಾಸಕರು, ವೈದ್ಯರು, ಇಂಜಿನಿಯರ್ ಹುದ್ದೆಯಲ್ಲಿರುವ ಎಲ್ಲ ನೌಕರರು ವ್ಯಾಸಂಗ ಮಾಡಿದ್ದು ಇಂದಿನ ಪದ್ಧತಿಯಲ್ಲಲ್ಲ. ಯುಗ ಬದಲಾಗಿರಬಹುದು ಜ್ಞಾನ ಬದಲಾಗಿಲ್ಲ. ಸರ್ಕಾರ -ಶಿಕ್ಷಣ ತಜ್ಞರು ಕೂಲಂಕಷವಾಗಿ ಚರ್ಚಿಸಿ ಶಿಕ್ಷಕರನ್ನು ಸಿ.ಸಿ.ಇ. ಹೊರೆಯಿಂದ ಮುಕ್ತಗೊಳಿಸಲಿ. ಅಂದಾಗ ಮಾತ್ರ ವರ್ಗದ ಕೊಠಡಿಯಲ್ಲಿ ಶೈಕ್ಷಣಿಕ ಪರಿಮಳ ಅರಳುತ್ತದೆ. ಇನ್ನು, ತಮಿಳುನಾಡಿನಲ್ಲಿ ಅಕ್ಷರ ದಾಸೋಹ ಅನುಷ್ಠಾನಕ್ಕೆ ಪ್ರತ್ಯೇಕ ಸಿಬ್ಬಂದಿ ಇದೆ. ಅದರ ಜವಾಬ್ದಾರಿ ಶಿಕ್ಷಕರಿಗಿಲ್ಲ. ಒಂದು ಆಕಸ್ಮಿಕ ಅವಘಡ ಶಿಕ್ಷಕರ ನೈತಿಕಸ್ಥೈರ್ಯವನ್ನು ಕಿತ್ತುಕೊಳ್ಳಬಲ್ಲದು. ಯಾವ ಶಿಕ್ಷಕರು ಮಕ್ಕಳಿಗೆ ತೊಂದರೆ ಆಗಲಿ ಎಂದು ಬಯಸುವುದಿಲ್ಲ. ಮನೆಯಲ್ಲಿ ಆಕಸ್ಮಿಕ ಘಟನೆ ಸಂಭವಿಸುವುದಿಲ್ಲವೇ? ತಾಯಿ ಬೇಕೆಂದೇ ಮಗುವನ್ನು ತೊಟ್ಟಿಗೆ ತಳ್ಳಿ ಸಾಯಿಸುತ್ತಾಳಾ? ಸರ್ಕಾರ ಬಿಸಿಯೂಟ ನಿರ್ವಹಣೆ ಕುರಿತು ಗಂಭೀರವಾಗಿ ಯೋಚಿಸಿ ಸೂಕ್ತ ನೀತಿ ಕೈಗೊಳ್ಳಬೇಕು. ಅಡುಗೆ ಸಹಾಯಕರಿಗೆ ಸುರಕ್ಷತೆ ಕುರಿತು ಅರಿವು ಮೂಡಿಸಿ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ತಿಳಿಸಬೇಕು. ಅವರಿಗೆ ನೀಡುತ್ತಿರುವ ಸಂಬಳ 1200 ರು. ಮತ್ತು 1100 ರು.ಗಳು ತುಂಬಾ ಕಡಿಮೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ಕೂಲಿ ದರವನ್ನಾದರೂ ನೀಡಿದರೆ ಹೆಚ್ಚು ಮುತುವರ್ಜಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿಯಾರು. ಸರ್ಕಾರ ಬಿಸಿಯೂಟದ ಪೂರ್ಣ ಹೊಣೆಯಿಂದ ಬಿಡುಗಡೆ ಮಾಡಿದರೆ ನಿರ್ಭಯವಾಗಿ ಬೋಧನೆ ಮಾಡಲು ಸಾಧ್ಯ. ಸರ್ಕಾರ ಅನ್ನ ಭಾಗ್ಯ ನೀಡಿ ಅಕ್ಷರ ಭಾಗ್ಯ ಕಿತ್ತುಕೊಳ್ಳಬಾರದು.
- ರಮಾಕಾಂತ ಕ. ಕಮತಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

