

1968ರ ಒಂದು ಸಾಯಂಕಾಲ. ಅಮೆರಿಕದ ನಕಾಶೆಯ ಅಪಾರ್ಟ್‌ಮೆಂಟ್ ಒಂದರ ಅಡುಗೆ ಮನೆಯಲ್ಲಿ ಕಾರ್ಯನಿರತವಾಗಿರುವವಳು ಅಸೀಮಾ ಗಂಗೂಲಿ. 'ಮಿಟ್' (MIIT) ನಲ್ಲಿ ಡಾಕ್ಟರೇಟ್ ಅಧ್ಯಯನ ಮಾಡುತ್ತಿರುವ ಅಶೋಕ (ಅಶೋಕೆ, ಬಂಗಾಳಿ ಸ್ಟೈಲ್‌ನಲ್ಲಿ) ನನ್ನು ಮದುವೆಯಾಗಿರುವ ಕಾರಣದಿಂದ ಕೋಲ್ಕತಾದ ಸಂದಿಯಿಂದ ಈ ಅಪರಿಚಿತ ಜಗತ್ತಿಗೆ ಬಂದು ಜಮೆಯಾಗಿದ್ದಾಳೆ. ತುಂಬು ಗರ್ಭಿಣಿ ಅಸೀಮಾಳಿಗೆ ಇನ್ನೆರಡು ವಾರಕ್ಕೆಲ್ಲ ಡೇಟ್ ಕೊಡಲಾಗಿದೆ. ಆಗಲೇ ಅವಳಿಗೆ ನೋವು ಕಾಣಿಸಿಕೊಂಡಿತು. ಗಂಡನ ಹೆಸರು ಹಿಡಿದು ಕೂಗದ ಸಾಂಪ್ರದಾಯಿಕ ಕಾಲಘಟ್ಟವದು. ಹಾಗೆಂದೇ, 'ಕೇಳ್ತಾ ಇದೀರಾ?' ಅಂತ ಧ್ವನಿ ಎತ್ತರಿಸಿ ಬೆಡ್‌ರೂಮ್‌ನಲ್ಲಿ ಓದುತ್ತ ಬಿದ್ದಿರುವ ಅಶೋಕನ ಗಮನ ಸೆಳೆದಿದ್ದಾಳೆ.
ಟ್ಯಾಕ್ಸಿಯಲ್ಲಿ ಆಕೆಯನ್ನು ಮೌಂಟ್ ಅಬರ್ನ್‌ನ ಆಸ್ಪತ್ರೆಗೆ ಕರೆತರಲಾಗಿದೆ. ಹೆರಿಗೆ ವಾರ್ಡ್‌ನ ಕೊಠಡಿಯಲ್ಲಿ ಆಕೆಯ ಮುರ್ಷಿದಾಬಾದ್ ಸೀರೆಯನ್ನು ತೆಗೆಯಲು ಹೇಳಿ, ಕಾಟನ್‌ಗೌನ್ ಒಂದನ್ನು ನೀಡಲಾಗಿದೆ. ಮೊಣಕಾಲಿನವರೆಗಷ್ಟೆ ಬರುವ ಆ ದಿರಸು ಧರಿಸಿದವಳನ್ನು ಮುಜುಗರ ಆವರಿಸಿಕೊಂಡಿದೆ. ಸೀರೆ ಮಡಚಿಡುತ್ತೇನೆ ಅಂತ ತೆಗೆದುಕೊಂಡ ನರ್ಸು ಅದರ ಜಾರುವ ಗುಣಕ್ಕೆ ಪೇಚು ಬಿದ್ದು ಹೇಗ್ಹೇಗೋ ಸೂಟ್‌ಕೇಸ್‌ನಲ್ಲಿ ತುರುಕಿಸುತ್ತಾಳೆ. ಆಕೆಯ ಗರ್ಭದಿಂದ ಮಗು ಹೊರಗೆ ಬರುವ ಪ್ರಕ್ರಿಯೆಯನ್ನು ವಿವರಿಸುತ್ತಿದ್ದಾರೆ ಡಾಕ್ಟರ್ ಆ್ಯಶ್ಲಿ. ಮೊದಲ ಹೆರಿಗೆಯಾದ್ದರಿಂದ ಇಪ್ಪತ್ತನಾಲ್ಕು ಗಂಟೆ ತೆಗೆದುಕೊಂಡರೂ ಆಶ್ಚರ್ಯವಿಲ್ಲ ಎಂಬ ಮಾಹಿತಿ ಸಿಕ್ಕಿದೆ. ವೈದ್ಯರು ಎಳೆದಿರುವ ಪರದೆಯ ಆಚೆ ಗಂಡನ ಮುಖ. ಆತನನ್ನು ನೋಡಬೇಕು ಎಂಬ ತೀವ್ರವಾದ ಹಂಬಲ ಅಸೀಮಾಳದ್ದು. 'ನಾನು ಇಲ್ಲೇ ಹೋಗಿ ಬರುವೆ' ಅಂತ ಪರದೆಯಾಚೆಯಿಂದ ಬಂಗಾಳಿಯಲ್ಲಿ ಹೇಳಿದ್ದಾನೆ ಅಶೋಕ. ಆಕೆಯೀಗ ಒಬ್ಬಂಟಿ. ಅದೇ ಕೊಠಡಿಯಲ್ಲಿ ಮೂವರು ಹೆಂಗಸರಿರುವುದು ಧ್ವನಿಯಿಂದ ಗೊತ್ತಾಗುತ್ತಿದೆ. ಪರದೆ ಎಲ್ಲರನ್ನೂ ಬೇರ್ಪಡಿಸಿದೆ. 'ದೇವರೇ, ಇದು ನರಕ' ಅಂತ ಹೆಂಗಸೊಬ್ಬಳು ಚೀರಿದ್ದಾಳೆ. 'ಐ ಲವ್ ಯು ಸ್ವೀಟ್ ಹಾರ್ಟ್' ಎಂಬ ಗಂಡಸಿನ ಸಾಂತ್ವನ. ಈ ಪದವನ್ನು ಅಸೀಮಾ ತನ್ನ ಗಂಡನಿಂದ ನಿರೀಕ್ಷಿಸುವಂತೆಯೇ ಇಲ್ಲ. ತಾವಿರುವ ಬಗೆಯೇ ಭಿನ್ನ. ಜೀವನದಲ್ಲಿ ಮೊದಲ ಬಾರಿಗೆ ಆಕೆ ಏಕಾಂಗಿಯಾಗಿ ಮಲಗಿದ್ದಾಳೆ. ತಂದೆ-ತಾಯಿ ಪಕ್ಕದಲ್ಲಿರುತ್ತಿದ್ದರು, ಇಲ್ಲವೇ ಅಶೋಕನಿರುತ್ತಿದ್ದ. ಪರದೆ ಸರಿದಿದ್ದರೆ ಅಲ್ಲಿನ ಅಮೆರಿಕನ್ ಹೆಂಗಸರೊಂದಿಗೆ ಮಾತನಾಡಬಹುದಿತ್ತು. ಅವರಲ್ಲೊಬ್ಬಳಾದರೂ ಮೊದಲ ಹೆರಿಗೆ ಮುಗಿಸಿರುತ್ತಾಳೆ. ಆಕೆಯಿಂದ ಏನಾದರೂ ಸಲಹೆ ಪಡೆದು ಹಗುರಾಗಬಹುದಿತ್ತೆಂಬ ಬಯಕೆ ಅಸೀಮಾಳಿಗೆ. ಆದರೆ ಅವಳಿಗೆ ಇನ್ನೊಂದು ಮಾಹಿತಿಯೂ ಇದೆ. ಈ ಅಮೆರಿಕನ್ನರು ಸಾರ್ವಜನಿಕವಾಗಿಯೇ ಮುದ್ದಿಸಿಕೊಂಡರೂ, ಮಿನಿಸ್ಕರ್ಟ್-ಬಿಕಿನಿಗಳಲ್ಲಿ ಅಡ್ಡಾಡಿದರೂ ವಿಚಿತ್ರ ಖಾಸಗಿತನವೊಂದನ್ನು ಕಾಪಾಡಿಕೊಂಡಿರುತ್ತಾರೆ. ಬಹುಶಃ ಇಡೀ ಆಸ್ಪತ್ರೆಯಲ್ಲಿ ಇರುವ ಭಾರತೀಯಳೆಂದರೆ ತಾನೊಬ್ಬಳೇನಾ ಅಂದುಕೊಳ್ಳುತ್ತಾಳೆ ಅಸೀಮಾ. ಆದರೆ ಹೊಟ್ಟೆಯಲ್ಲಿನ ಸರಿದಾಡುವಿಕೆಯ ಅನುಭೂತಿ, ಟೆಕ್ನಿಕಲ್ ಆಗಿ ತಾವಿಬ್ಬರು ಇರುವುದಾಗಿ ಆಕೆಗೆ ಸಾರುತ್ತದೆ. ಯಾಕೋ ಆ ಆಸ್ಪತ್ರೆಯಲ್ಲಿ ಅವಳಿಗೆ ಯಾವ ಸಂಗತಿಗಳೂ ಸಮಾಧಾನ ತರುತ್ತಿಲ್ಲ. ಭಾರತದಲ್ಲಾಗಿದ್ದರೆ ಹೆರಿಗೆಗೆ ಹೆಣ್ಣು ತನ್ನ ಪಾಲಕರ ಬಳಿ ತೆರಳುವ ಚಿತ್ರಣವೇ ಅಸೀಮಾಳ ಕಣ್ಮುಂದಿದೆ. ಮಗು ಅವತರಿಸುವುದೆಂದರೆ, ಗಂಡ- ಮನೆಗೆಲಸಗಳಿಂದ ದೂರಾಗಿ ತುಸು ಸಮಯ ತಾಯಿಯೂ ಬಾಲ್ಯಕ್ಕೆ ಜಾರುವುದು...
---
ಇದು ಜುಂಪಾ ಲಾಹಿರಿ ಎಂಬ ಅಮೆರಿಕನ್ -ಇಂಡಿಯನ್ ಕತೆಗಾರ್ತಿಯ ಬರವಣಿಗೆಯ ಝಲಕ್. ಹೊಸ ಭವಿಷ್ಯವೊಂದನ್ನು ಅರಸಿ ಭಾರತದಿಂದ ಖಂಡಾಂತರವಾಗಿ ವಲಸೆ ಹೋದ ಪೀಳಿಗೆಯೊಂದರ ಆ ಕಾಲಘಟ್ಟದ ಭಾವ ತಲ್ಲಣಗಳನ್ನೇ ತನ್ನೆಲ್ಲ ಕತೆ-ಕಾದಂಬರಿಗಳಲ್ಲಿ ಪೋಣಿಸಿ ಇಟ್ಟಿದ್ದಾರೆ ಜುಂಪಾ ಲಾಹಿರಿ. ಸಮಯ-ಸಂದರ್ಭಗಳು ಬೇರೆ ಇದ್ದಿರಬಹುದು. ಆದರೆ ಅವರವರ ಮಿತಿಯಲ್ಲಿ ಬಹುಪಾಲು ಮಂದಿ ಸ್ಥಿತ್ಯಂತರಕ್ಕೆ ತೆರೆದುಕೊಳ್ಳುತ್ತಾರೆ. ಹೆಚ್ಚಿನವರು ನಾವೆಲ್ಲ ಊರುಗಳನ್ನು ತೊರೆದು ಬೆಂಗಳೂರೆಂಬ ಮುಗಿಯದ ಅಲೆಗಳ ಸಾಗರದಲ್ಲಿ ಜೀಕುತ್ತಿರುವಂತೆ. ಎಪ್ಪತ್ತರ ಅವಧಿಯ ಅಸೀಮಾ ಗಂಗೂಲಿ ಎಂಬ ಪಾತ್ರದ ಏಕಾಕಿತನ, ಹೆದರಿಕೆಗಳು ಇವತ್ತಿನ ಕಾಲದ ನಾವೆಯಲ್ಲಿ ತೇಲುತ್ತಿರುವ ನಮಗೆ ಸಿಲ್ಲಿ ಎನಿಸಬಹುದಾದರೂ, ನಮ್ಮೊಳಗಿನ ತಲ್ಲಣಗಳು ಒಂದೇ. ಇದೇ ಕಾರಣಕ್ಕೆ ಜುಂಪಾ ಲಾಹಿರಿಯ ಬರವಣಿಗೆಯ ಬಿರುಸು ನಮ್ಮ ಭಾವಕೋಶವನ್ನು ಬೆಚ್ಚಗಾಗಿಸದೇ ಬಿಡುವುದಿಲ್ಲ.
ಈ ಲಾಹಿರಿ ಮೂಲತಃ ಭಾರತದ ನೀಲಾಂಜನ ಸುದೇಷ್ಣಾ. ಇದವರ ಬಂಗಾಳಿ ಪಾಲಕರು ಇಟ್ಟ ಹೆಸರು. ಅವರು ಇಂಗ್ಲೆಂಡಿಗೆ ವಲಸೆ ಹೋದವರು. ಅಲ್ಲಿಯೇ ಲಾಹಿರಿ ಹುಟ್ಟಿದ್ದು. ನಂತರ ಅವರು ಅಮೆರಿಕದ ರೋಡ್ ಐಲ್ಯಾಂಡ್‌ಗೆ ಹೋದರು. ನೀಲಾಂಜನ ಸುದೇಷ್ಣಾ ಎಂಬ ಅಂದದ ಹೆಸರನ್ನು ಉಚ್ಚರಿಸುವುದೇ ಇಂಗ್ಲಿಷ್ ಮಂದಿಗೆ ಕಷ್ಟವಾದಾಗ ಆಗಿನ್ನೂ ಎಳವೆಯಲ್ಲಿದ್ದ ಲಾಹಿರಿಗೆ ತುಂಬ ಯಾತನೆಯಾಯಿತಂತೆ. ತನ್ನ ಅಸ್ತಿತ್ವವನ್ನು ಸಾರುವ ನಾಮಧೇಯವೇ ಇತರರಿಗೆ ಕಿರಿಕಿರಿಯ ವಿಷಯವಾಗಿ ಬಿಟ್ಟರೆ ಎಂಥ ಕಷ್ಟವಲ್ಲವೇ? ವ್ಯಾವಹಾರಿಕ ಹೆಸರಿನೊಂದಿಗೆ ಮನೆಯವರಷ್ಟೇ ಕರೆಯುವ ಆಪ್ತ ನಾಮವೊಂದಿರುವುದು ಬಂಗಾಳಿಗಳ ರಿವಾಜು. ಅಂತೆಯೇ ಸುದೇಷ್ಣೆಯ ಪೆಟ್‌ನೇಮ್ ಜುಂಪಾ ಎಂಬುದೇ ನಂತರ ಜುಂಪಾ ಲಾಹಿರಿ ಎಂದು ಕಾಯಮ್ಮಾಯಿತು. ಇದೇ ಇರಿಸುಮುರಿಸನ್ನೇ ವಸ್ತುವಾಗಿ ಇಟ್ಟುಕೊಂಡು ಬರೆದ ಲಾಹಿರಿಯ ಮೊದಲ ಕಾದಂಬರಿ 'ನೇಮ್‌ಸೇಕ್.' ಪ್ರಾರಂಭದಲ್ಲಿ ಉಲ್ಲೇಖಿಸಿದ ಅಸೀಮಾ-ಅಶೋಕರ ಕತೆ, ಅವರ ಮಗನ ಭಾವತಲ್ಲಣಗಳನ್ನು ವಿಸ್ತರಿಸುವುದನ್ನು ಕೆಲ ಆಸಕ್ತಿದಾಯಕ ವಿವರಗಳೊಂದಿಗೆ ಹರವಿಡುವ ಕಥಾನಕ. ಹುಟ್ಟಿದ ಮಗುವಿಗೆ ತನ್ನಜ್ಜಿಯೇ ನಾಮಕರಣ ಮಾಡಲಿ, ಆಕೆ ಸೂಚಿಸುವ ಹೆಸರನ್ನೇ ಇಡೋಣ ಎಂದು ಕಾಯುವ ಅಸೀಮಾ. ಅಜ್ಜಿಯ ಪತ್ರಕ್ಕೆ ದಾರಿ ಕಾಯ್ದದ್ದೇ ಬಂತು. ಇತ್ತ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲು ನಿಯಮದಂತೆ ಹೆಸರೊಂದನ್ನು ದಾಖಲೆಗೆ ನೀಡಲೇಬೇಕು. ಆ ಕ್ಷಣಕ್ಕೆ ಅಶೋಕ ಸೂಚಿಸುವ ಹೆಸರು ಗೊಗೊಲ್. ರಷ್ಯನ್ ಲೇಖಕ ನಿಕೊಲಾಯ್ ಗೊಗೊಲ್ ಅಶೋಕನ ಫೇವರಿಟ್ ಅಷ್ಟೇ ಅಲ್ಲ, ಅನುಭವದ ಒಂದು ಭಾಗ. ಈ ಲೇಖಕನ ಪುಸ್ತಕ ಓದುತ್ತಾ ರೈಲಿನಲ್ಲಿ ಸಾಗುತ್ತಿರುವಾಗಲೇ ಅದು ಅಪಘಾತಕ್ಕೆ ಈಡಾಗಿ ಹೆಚ್ಚು-ಕಡಿಮೆ ಸಾವಿನ ಮನೆಯ ಬಾಗಿಲು ಬಡಿದಿರುತ್ತಾನೆ ಅಶೋಕ. ಕೂಗು ಹಾಕಲಾಗದ ಸ್ಥಿತಿಯಲ್ಲಿ ಬೋಗಿಯಡಿ ಸಿಕ್ಕಿಕೊಂಡವನನ್ನು ರಕ್ಷಣಾ ಕಾರ್ಯಕರ್ತರು ಗಮನಿಸುವುದಕ್ಕೆ ಸಾಧ್ಯವಾಗಿದ್ದು ಈತನ ಕೈಯಿಂದ ಜಾರಿದ ಗೊಗೊಲ್ ಪುಸ್ತಕದ ಹಾಳೆಗಳನ್ನು ನೋಡಿಯೇ. ಹೀಗಾಗಿ ಗೊಗೊಲ್ ಎಂಬ ಹೆಸರು ಅಶೋಕನ ಎದೆಯಲ್ಲಿ ಪುನರ್ಜನ್ಮದ ತರಂಗಗಳನ್ನು ಎಬ್ಬಿಸುವಂಥದ್ದು. ಅತ್ತ, ಅಜ್ಜಿ ತನ್ನ ಮೊಮ್ಮಗನಿಗೆ ಹೆಸರಿಡುವುದಕ್ಕೂ ಮೊದಲು ಕೋಮಾಕ್ಕೆ ಜಾರಿದ ಪರಿಣಾಮವಾಗಿ ಇಲ್ಲಿ ಈ ಕಂದನಿಗೆ ಗೊಗೊಲ್ ಎಂಬ ಹೆಸರೇ ಪಕ್ಕಾ ಆಗುತ್ತದೆ. ಆದರೆ ಬೆಳೆಯುತ್ತ, ಬೆಳೆಯುತ್ತ ಅಮೆರಿಕನ್-ಭಾರತೀಯ ಎರಡೂ ಅಲ್ಲದ ತನ್ನ ವಿಚಿತ್ರ ಹೆಸರಿನ ಬಗ್ಗೆ ಹೇವರಿಕೆ ಪಡುತ್ತಾ, ಹೆಸರಿಟ್ಟವರನ್ನು ದೂಷಿಸುತ್ತಾ, ತಾನೊಂದು ಐಡೆಂಟಿಟಿ ಕಂಡುಕೊಳ್ಳುವ ಒದ್ದಾಟಕ್ಕೆ ಬೀಳುತ್ತಾನೆ ಗೊಗೊಲ್. ಅದುವೇ 'ನೇಮ್‌ಸೇಕ್' ಕಾದಂಬರಿಯ ಹೂರಣ.
ಇಸ್ವಿ 2000ದಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಭಾಜನವಾದ ಲಾಹಿರಿಯ ಕಥಾ ಸಂಕಲನ 'ಇಂಟರ್‌ಪ್ರಿಟರ್ ಆಫ್ ಮೆಲಾಡೀಸ್.' ಅದು ಇಂಟರ್‌ನ್ಯಾಷನಲ್ ಬೆಸ್ಟ್ ಸೆಲ್ಲರ್ ಆಗಿ, ವಿಮರ್ಶಕರಿಂದಲೂ ಹೊಗಳಿಸಿಕೊಂಡ ಮೇಲೆ 'ಅನ್ ಅಕಸ್ಟಮ್ಡ್ ಅರ್ಥ್' ಎಂಬ ಇನ್ನೊಂದು ಕಥಾಗುಚ್ಛ ಹೊರಬಿತ್ತು. ಇದೀಗ ಜುಂಪಾ ಲಾಹಿರಿಯ ಇತ್ತೀಚಿನ ಕಾದಂಬರಿ 'ಲೊಲ್ಯಾಂಡ್' ಮ್ಯಾನ್ ಬೂಕರ್ ಎಂಬ ಅದ್ಧೂರಿ ಪ್ರಶಸ್ತಿಯ ರೇಸ್‌ನಲ್ಲಿದೆ. ಬಹುಶಃ ಇದನ್ನು ಓದುತ್ತಿರುವಷ್ಟರಲ್ಲಿ ಬೂಕರ್ ವಿಜೇತರ ಘೋಷಣೆ ಹೊರಬಿದ್ದಿರುತ್ತದೆ.
ಲಾಹಿರಿ ತಂದೆ-ತಾಯಿ ಬಂಗಾಳದವರೆಂಬುದನ್ನು ಬಿಟ್ಟರೆ ಆಕೆ ಭಾರತದಲ್ಲಿ ಹುಟ್ಟಲೂ ಇಲ್ಲ, ಬೆಳೆಯಲೂ ಇಲ್ಲ. ಆದರೂ ಲಾಹಿರಿ ಕತೆಗಳಲ್ಲಿ ಭಾರತದ, ಅದರಲ್ಲೂ ಬಂಗಾಳದ ಬಿಂಬಗಳು ಢಾಳಾಗಿವೆ. ಆಕೆಯ ಕತೆಗಳೊಂದಿಗೆ ಬೆಸೆದುಕೊಳ್ಳುವುದು ತ್ರಾಸವೆನಿಸುವುದಿಲ್ಲ.
'ಲೊಲ್ಯಾಂಡ್' ಸಹ ಭಾರತದಲ್ಲೇ ಅಂಕುರಿಸಿ ನಂತರ ಕಾಲ-ದೇಶಗಳಲ್ಲಿ ಚಾಚಿಕೊಳ್ಳುವ ಕಥಾನೇಯ್ಗೆ. ಕೋಲ್ಕತಾದ ಟಾಲಿಗಂಜ್‌ನಲ್ಲಿ ಗಳಸ್ಯ-ಕಂಠಸ್ಯ ಎಂಬಂತೆ ಬೆಳೆಯುವ ಸಹೋದರರಾದ ಸುಭಾಷ್ ಮತ್ತು ಉದಯನ. ಒಂದು ಹಂತದಲ್ಲಿ ಇವರ ಬದುಕು ಕವಲೊಡೆಯುತ್ತದೆ. ನಕ್ಸಲ್‌ಬಾರಿಯಲ್ಲಿ ಶುರುವಾದ ಕ್ರಾಂತಿಯತ್ತ ಆಕರ್ಷಿತನಾಗುವ ಉದಯನ. ಸಮಾಜಕ್ಕಿಂತ ಸ್ವ ಸುಧಾರಣೆಗೆ ಒತ್ತು ನೀಡಿ ಫಿಸಿಕ್ಸ್ ಉನ್ನತ ವ್ಯಾಸಂಗಕ್ಕೆ ಅಮೆರಿಕದ ರೋಡ್ ಐಲ್ಯಾಂಡ್‌ಗೆ ಪ್ರಯಾಣಿಸುವ ಸುಭಾಷ್. ಎನ್‌ಕೌಂಟರ್‌ನಲ್ಲಿ ಉದಯನ ಸಾವು. ಈ ಆಘಾತದಲ್ಲಿ ಸ್ವದೇಶಕ್ಕೆ ಭೇಟಿ ನೀಡಿದ ಸುಭಾಷ್‌ಗೆ ಉದಯನನ ವಿಧವೆ, ಗರ್ಭಿಣಿ ಗೌರಿಯ ಮೇಲೆ ಹರಿಯುವ ಅನುಕಂಪ. ಮನೆಯಲ್ಲೂ ಆಕೆಗೆ ಪರಿಸ್ಥಿತಿ ಅನುಕೂಲವಾಗಿಲ್ಲದಿರುವುದನ್ನು ಮನಗಂಡು, ಉದಯನನ್ನು ತಾನೇ ಸಾಯಲು ಬಿಟ್ಟೆನೇನೋ ಎಂಬ ಪಶ್ಚಾತ್ತಾಪವೂ ಜತೆಯಾಗಿ ಆಕೆಯನ್ನು ಮದುವೆಯಾಗುವ ನಿರ್ಧಾರಕ್ಕೆ ಬರುತ್ತಾನೆ ಸುಭಾಷ್. ಗೌರಿಗೆ ಆಕೆಯಿರುವ ಪರಿಸ್ಥಿತಿಯಿಂದ ಪಾರಾಗುವುದಕ್ಕೆ ಇದ್ದ ಆಯ್ಕೆ ಅದೊಂದೇ. ಮದುವೆಯೂ ಆಗುತ್ತದೆ. ಉದಯನನ ಮಗಳನ್ನು ತನ್ನ ಮಗಳೆಂದು ಸಾಕುವುದು ಸುಭಾಷನಿಗೆ ಬದ್ಧತೆ ಎನಿಸುತ್ತದೆ. ತನ್ನ ಗತದ ವಿವರಗಳ ಭಾರದಲ್ಲಿ ನಲುಗುವ ಗೌರಿ, ಮಗಳಾಗಿ ಸುಭಾಷನ ಭಾವಪ್ರಪಂಚ ಆಕ್ರಮಿಸುವ, ಒಂದು ಹಂತದಲ್ಲಿ ಆತ ತನ್ನ ತಂದೆಯಲ್ಲವೆಂಬುದು ತಿಳಿದು ತಲ್ಲಣಿಸುವ ಬೇಲಾ ಎಂಬ ಪಾತ್ರ. ಇವರೆಲ್ಲರ ಜೀವನದ ಆಪ್ತ ವಿವರಗಳ ಕಸೂತಿಯಲ್ಲೇ ಕಾದಂಬರಿಯ ಜೀವವಿದೆ. ಅದನ್ನು ಓದಿಯೇ ಸವಿಯಬೇಕು. ಭಾರತದ ನಕ್ಸಲ್ ಚಳವಳಿಯ ಇತಿಹಾಸವನ್ನೂ ಸಂಕ್ಷಿಪ್ತವಾಗಿ ತೆರೆದಿಡುವ ಕಾದಂಬರಿ, ಒಳ್ಳೆಯ ಉದ್ದೇಶದಿಂದ ರೂಪುಗೊಂಡ ಕ್ರಾಂತಿಯೊಂದು ಹಿಂಸಾತ್ಮಕ ಹಾದಿ ಹಿಡಿದು ಹಳಿ ತಪ್ಪಿದ್ದನ್ನೂ ವಿಶ್ಲೇಷಿಸುತ್ತದೆ. ಉದಾತ್ತ ತುಡಿತ ಹೊಂದಿದ್ದರೂ ಸಹ್ಯವಲ್ಲದ ಮಾರ್ಗ ಹಿಡಿದ ಉದಯನನ ಪಾತ್ರಕ್ಕೆ ಲಾಹಿರಿ, ತದನಂತರ ಆತನ ಮಗಳು ಬೇಲಾಳ ಪ್ರೌಢಿಮೆಯಲ್ಲಿ ಪರ್ಯಾಯದ ಹೊಳಹು ನೀಡಿರುವ ರೀತಿ ಚೆನ್ನಾಗಿದೆ.
ಇವೆಲ್ಲದರ ಹೊರತಾಗಿ, ಜುಂಪಾ ಲಾಹಿರಿಯ ಬಿಡಿ ಬಿಡಿ ಕತೆಗಳನ್ನು ಓದಿಕೊಂಡರೂ ಏಕಾಂತದ ಲೋಕದ ಚೂರೊಂದು ನಮ್ಮದಾಗುತ್ತದೆ. ಅದೇಕೋ ಆ ದಂಪತಿ ನಡುವೆ ಮಾತೇ ಬಿದ್ದು ಹೋಗಿರುತ್ತದೆ. ಅವನ ಪಾಡಿಗೆ ಯಾವುದೋ ಮೂಲೆಯಲ್ಲಿ ಕುರ್ಚಿ ಎಳೆದುಕೊಂಡು ತುತ್ತು ಬಾಯಿಗಿಕ್ಕುವ ಆತ. ಅದೇ ಮನೆಯ ಇನ್ನೆಲ್ಲೋ ಲ್ಯಾಪ್‌ಟಾಪ್ ತೆರೆದುಕೊಂಡಿರುವ ಈಕೆ. ಹೀಗಿರುವಾಗ ದುರಸ್ತಿ ಕಾರ್ಯಕ್ಕೆಂದು ಒಂದು ವಾರ ನಿಗದಿತ ಸಮಯಕ್ಕೆ ತಾಸಿನ ಅವಧಿಗೆ ಕರೆಂಟು ತೆಗೆಯಲಾಗುತ್ತದೆ. ಹಾಗೆ ಹೋಗುವ ಕರೆಂಟು ಮೊಂಬತ್ತಿ ಬೆಳಕಲ್ಲಿ ಅವರಿಬ್ಬರನ್ನು ಹತ್ತಿರ ಸೆಳೆಯುತ್ತದೆ. ಮಾತಾಡುವಂತೆ ಪ್ರೇರೇಪಿಸುತ್ತದೆ. ಕತೆಯ ಶುರುವಿನಲ್ಲಿದ್ದ ಮುಗುಮ್ಮಾದ ವಾತಾವರಣ, ಇಬ್ಬರೂ ಬಿಕ್ಕಳಿಗೆಗಳನ್ನೆಲ್ಲ ಸಡಿಲಿಸಿ ಅಳುವುದರೊಂದಿಗೆ ಅಂತ್ಯವಾಗುತ್ತದೆ.
'ಇಲ್ಲಿ ಬಾ ಕುಳಿತುಕೋ. ಚಂದ್ರನನ್ನು ನೋಡು. ಅಲ್ಲಿ ಅಮೆರಿಕದ ಧ್ವಜ ಹುಗಿದಿದ್ದಾರೆ. ಅದ್ಭುತ ಅಲ್ವಾ?' ಅಂತ ಪ್ರತಿ ಬಾರಿಯೂ ಬೆರಗಿಗೆ ಬೀಳುವ ಶತಾಯುಷಿ ಅಜ್ಜಿ, ಭಿನ್ನ ಭಾಷೆಯ ರೋಗಿಗಳ ಯಾತನೆಯನ್ನು ವೈದ್ಯರಿಗೆ ಭಾಷಾಂತರಿಸಿ ಹೇಳುವ ಆದರೆ ತನ್ನ ಕೆಲಸದ ಅಚ್ಚರಿಯ ಆಯಾಮವನ್ನು ಟೂರ್‌ಗೆ ಬಂದ ಹೆಂಗಸೊಬ್ಬಳು ಹೇಳುವವರೆಗೂ ಆ ಬಗ್ಗೆ ಅನಾಸಕ್ತನಾಗಿದ್ದ ವ್ಯಕ್ತಿ... ಹೀಗೆ ಲಾಹಿರಿ ಕತೆಯ ಪಾತ್ರಗಳೆಲ್ಲ ಬದುಕಿನ ವಿಲಕ್ಷಣ ಹಾಗೂ ವಿಸ್ಮಯದ ಆಯಾಮಗಳನ್ನು ತೆರೆದಿರಿಸುತ್ತವೆ.
ಬೂಕರ್ ಸಿಕ್ಕರೂ ಸಿಗದಿದ್ದರೂ, ಲಾಹಿರಿ ಪುಸ್ತಕಗಳನ್ನು ಕೈಗೆತ್ತಿಕೊಂಡವರ ಓದಿನ ಉಲ್ಲಾಸಕ್ಕೆ ಖಂಡಿತ ಮೋಸವಿಲ್ಲ.
- ಚೈತನ್ಯ ಹೆಗಡೆ
cchegde@gmail.com