

ಸಾಮಾನ್ಯವಾಗಿ ಮಾಲ್ಗಳಲ್ಲಿ, ಹಬ್ಬ-ಹರಿದಿನಗಳ ಸಾಲು ಆರಂಭವಾದಾಗ ಭಾರಿ ವಿನಾಯತಿ ಮಾರಾಟ ಘೋಷಿಸಲಾಗುತ್ತದೆ. ಕೊಂಚ ಬೆಲೆ ಇಳಿಸಿದಂತೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ಇಂತಹ ಗಿಮಿಕ್ಗಳು ನಡೆಯುತ್ತವೆ. ಅದರಲ್ಲೂ ಆಯುಧ ಪೂಜೆ, ದೀಪಾವಳಿ, ಯುಗಾದಿ ಬಂದರಂತೂ ಎಲ್ಲ ಮಾರಾಟ ಮಳಿಗೆಗಳ ಮುಂದೆಯೂ ಇಂತಹ ಫಲಕಗಳು ರಾರಾಜಿಸುತ್ತವೆ. "ಬನ್ನಿ, ಕೂಡಿಟ್ಟ ಕಾಸನ್ನು ಸರಕನ್ನಾಗಿ ಪರಿವರ್ತಿಸಿ" ಎಂದು ಗ್ರಾಹಕರನ್ನು ಕೈಬೀಸಿ ಕರೆಯುತ್ತವೆ. ಈ ಬಾರಿಯೂ ದಸರಾಗೆ ಮುಂಚೆ ಆರಂಭವಾದ ಈ ಇಳುವರಿ ಮಾರಾಟದ ಅಬ್ಬರ ಇನ್ನೂ ನಿಂತಿಲ್ಲ. ಅಂಗಡಿ-ಮುಂಗಟ್ಟುಗಳು, ಮಾಲ್ಗಳ ಮುಂದೆ ಜನರ ಸರತಿ ಸಾಲು ಇನ್ನೂ ಕರಗಿಲ್ಲ. ಇದರ ನಡುವೆಯೇ ಇಕಾನಾಮಿಕ್ ಟೈಮ್ಸ್ ಪತ್ರಿಕೆ ಒಂದು ವಿಶೇಷ ಲೇಖನ ಪ್ರಕಟಿಸಿತ್ತು. ಅದೂ ಇಳುವರಿ ಮಾರಾಟಕ್ಕೆ ಸಂಬಂಧಿಸಿದ್ದೆ. ಆದರದು ಟಿವಿ, ಫ್ರಿಜ್ಜು ಮುಂತಾದ ಗೃಹೋಪಯೋಗಿ ವಸ್ತುಗಳಿಗೆ ಸಂಬಂಧಿಸಿದ್ದಾಗಿರಲಿಲ್ಲ. ಬದಲಿಗೆ ದಸರಾ-ದೀಪಾವಳಿ ಧಮಾಕಾಗೆ 35 ರಿಂದ 50 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲ ವಿವಿಧ ಕಂಪನಿಗಳ ತೀರುವಳಿ ಮಾರಾಟ! ಹೌದು, ಈ ಬಾರಿ ವಿದ್ಯುತ್ ಕಂಪನಿಗಳೇ ಮಾರಾಟಕ್ಕಿದ್ದವು. ಐನೂರು-ಸಾವಿರ ಮೆಗಾವ್ಯಾಟ್ನಿಂದ ಹಿಡಿದು ಹದಿನೈದಿಪ್ಪತ್ತು ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಲ್ಲ ಕಂಪನಿಗಳೇ ಮಾರಾಟದ ವಸ್ತುವಾಗಿದ್ದವು.
ಐದು ವರ್ಷಗಳ ಹಿಂದಿನ ಮಾತು. ಭಾರತದಲ್ಲಿ ಹಣದ ಹರಿವು ಸುಸ್ಥಿತಿಯಲ್ಲಿತ್ತು. ಆರ್ಥಿಕ ಪರಿಸ್ಥಿತಿ ಕಳೆಗಟ್ಟಿತ್ತು. ವ್ಯಾಪಾರ-ವಾಣಿಜ್ಯ ಚಟುವಟಿಕೆಗಳತ್ತ ಉಳ್ಳವರು ಮುಂದಾಗಿದ್ದರು. ಹಿಂದು-ಮುಂದು ಯೋಚಿಸದೆ ಹಿರಿ-ಕಿರಿ ಉದ್ದಿಮೆದಾರರು ದೊಡ್ಡ ಮೊತ್ತದ ಬಂಡವಾಳ ಹೂಡಲು ಮುಂದಾಗಿದ್ದರು. ಅವರಿಗೆ ಬೇಕಾದಷ್ಟು ಬಂಡವಾಳ ಸಾಲ ನೀಡಲು ಬ್ಯಾಂಕುಗಳು ಸಾಲಿನಲ್ಲಿ ನಿಂತಿದ್ದವು. ಸರ್ಕಾರವೂ ಕೇಳಿದವರಿಗೆಲ್ಲ ಲೈಸೆನ್ಸ್ ನೀಡಲು ಸಿದ್ಧವಾಗಿತ್ತು. ಈಗಿನಂತೆಯೇ ಆಗಲೂ ವಿದ್ಯುತ್ ಅಭಾವ ಆರ್ಥಿಕ ಅಭಿವೃದ್ಧಿಗೆ ಕಂಟಕವಾಗಿತ್ತು. ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆ ನಡುವೆ ತೀವ್ರ ಅಂತರವಿತ್ತು. ಇದರ ಇನ್ನೊಂದು ಮುಖ ವಿದ್ಯುತ್ ಉತ್ಪಾದನೆಗೆ ಎಲ್ಲಿಲ್ಲದ ಬೇಡಿಕೆ. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿದರೆ ಉತ್ತಮ ಫಸಲು ಪಡೆಯಬಹುದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಇದೇ ಉಮೇದಿನಲ್ಲಿ ಸುಮಾರು 30 ಕಂಪನಿಗಳು ವಿದ್ಯುತ್ ಉತ್ಪಾದನೆಗೆ ಬಂಡವಾಳ ಹೂಡಲು ಮುಂದಾದವು. ಸರ್ಕಾರವೂ ತಡಮಾಡದೆ ಲೈಸೆನ್ಸ್ ನೀಡಿತ್ತು. ವಿದ್ಯುತ್ ಸ್ಥಾವರಗಳ ನಿರ್ಮಾಣ ಕಾರ್ಯವೂ ಎಗ್ಗಿಲ್ಲದೆ ಸಾಗಿತು. ಎಲ್ಲ ಸರಿ ಹೋಗಿದ್ದರೆ ಈ ವೇಳೆಗೆ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯೂ ಶುರುವಾಗಬೇಕಿತ್ತು. ವಿದ್ಯುತ್ ಉತ್ಪಾದಿಸಿ ವಹಿವಾಟು ಆರಂಭಿಸಬೇಕಿದ್ದ ಕಂಪನಿಗಳು ಇಂದು ಬೀಗ ಜಡಿದು ಕುಳಿತಿವೆ. ಅಷ್ಟೇ ಅಲ್ಲ, ಈ ಸ್ಥಾವರಗಳನ್ನು ಮಾರಾಟಕ್ಕಿಟ್ಟಿವೆ. ವಿಪರ್ಯಾಸವೆಂದರೆ ಬೇರೆ ಯಾವ ಕಂಪನಿಗಳೂ ಇವುಗಳನ್ನು ಕೊಳ್ಳಲು ಆಸಕ್ತಿ ತೋರಿಲ್ಲ. ವಿದ್ಯುತ್ ಕಂಪನಿಗಳನ್ನು ಸ್ಥಾಪಿಸಿ ಕೇವಲ ಐದು ವರ್ಷಗಳಲ್ಲಿ, ಅದೂ ಪ್ರಾಥಮಿಕ ಹಂತದ ಉತ್ಪಾದನೆಯನ್ನೂ ಆರಂಭಿಸದೆ, ಮಾರಾಟಕ್ಕೆ ಮುಂದಾಗಿದ್ದಾದರೂ ಏಕೆ? ವಿದ್ಯುತ್ ಉತ್ಪಾದನೆಗೆ ಮೂಲಾಧಾರವಾದ ಕಲ್ಲಿದ್ದಲು ಹಾಗೂ ಅನಿಲದ ತೀವ್ರ ಅಭಾವ. ಜೊತೆಗೆ ಇಂದಲ್ಲ ನಾಳೆ ಈ ಅಭಾವ ತೀರಬಹುದು ಎಂಬ ಯಾವುದೇ ಖಾತ್ರಿ ಇಲ್ಲದಿರುವುದು. ನಿಜ. ಭಾರತದಲ್ಲಿ ಅನಿಲದ ಕೊರತೆ ಇದೆ. ಆದರೆ ಕಲ್ಲಿದ್ದಲಿಗೆ ಕೊರತೆಯೇ? ಜಗತ್ತಿನ ಐದನೇ ಅತಿ ದೊಡ್ಡ ಕಲ್ಲಿದ್ದಲು ನಿಕ್ಷೇಪದ ಮೇಲೆ ಭಾರತ ಕುಳಿತಿದೆ. ಹಾಗಿದ್ದ ಮೇಲೆ ಕಲ್ಲಿದ್ದಲು ಕೊರತೆ ಏಕೆ ಉಂಟಾಯಿತು. ಭೂಮಿಯಲ್ಲಿ ಹುದುಗಿರುವ ಈ ನಿಧಿಯನ್ನು ಅಗೆದು ಕೊರತೆ ನೀಗಿಕೊಳ್ಳಲು ಭಾರತಕ್ಕೇನು ಧಾಡಿ?
1970ರಲ್ಲಿ ಇಂದಿರಾಗಾಂಧಿ ತೆಗೆದುಕೊಂಡ ಒಂದು ನಿರ್ಧಾರಕ್ಕಾಗಿ ದೇಶ ಇಂದಿಗೂ ಪರಿತಪಿಸುವಂತಾಗಿದೆ. ದೇಶದ ಕಲ್ಲಿದ್ದಲು ನಿಕ್ಷೇಪಗಳನ್ನು ರಾಷ್ಟ್ರೀಕರಣಗೊಳಿಸುವ ಇಂದಿರಾರ ಸಮಾಜವಾದಿ ತುಡಿತದ ನಿರ್ಧಾರ ಹಾಗೂ ಕಲ್ಲಿದ್ದಲು ಗಣಿಗಾರಿಕೆಗೆ ಕೋಲ್ ಇಂಡಿಯಾ ಕಂಪನಿ ಎಂಬ ಏಕೈಕ ಕೊತ್ವಾಲನ ನೇಮಕ ದೇಶದ ಸ್ವಾವಲಂಬನೆಗೆ ಭಾರಿ ಪೆಟ್ಟು ನೀಡಿತು. ಆಗ ವಿದ್ಯುತ್ ಅಭಾವ ಅಷ್ಟಾಗಿ ಕಾಡಿರಲಿಲ್ಲ. ಆದರೆ ಈಗ ಪರಿಸ್ಥಿತಿ ಭಿನ್ನ. ಇಂದು ಭಾರತದ ಒಟ್ಟು ವಿದ್ಯುತ್ ಉತ್ಪಾದನೆಯ ಬಹುಪಾಲು ಕಲ್ಲಿದ್ದಲ್ಲನ್ನೇ ನೆಚ್ಚಿಕೊಂಡಿದೆ. ತಮ್ಮ ಬುಡದಲ್ಲಿಯೇ ಹೇರಳವಾದ ಕಲ್ಲಿದ್ದಲು ನಿಕ್ಷೇಪವಿದ್ದರೂ ಅದನ್ನು ಬಳಸಿಕೊಳ್ಳಲಾಗದೆ ಹೊರ ದೇಶಗಳತ್ತ ಕೈಚಾಚಿ ನಿಲ್ಲುವ ದೈನೇಸಿ ಸ್ಥಿತಿಯಲ್ಲಿದೆ. ಪರಿಸ್ಥಿತಿ ಯಾವ ಹಂತಕ್ಕೆ ತಲುಪಿದೆ ಎಂದರೆ ಭಾರತ, ಇಂದು ದೇಶ ಜಗತ್ತಿನ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಆಮದುದಾರನಾಗಿದೆ. ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿಯ ಪ್ರಕಾರ ಭಾರತವು ಇನ್ನೂ ಎರಡು ದಶಕಗಳವರೆಗಾದರೂ ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆಯಿಂದ ಹೊರಬರಲು ಸಾಧ್ಯವಿಲ್ಲ. ಕಳೆದ ಒಂದು ದಶಕದ ಅವಧಿಯಲ್ಲಿ ವಿದ್ಯುತ್ ಬೇಡಿಕೆ ದುಪ್ಪಟ್ಟಾಗಿದೆಯಾದರೂ ಉತ್ಪಾದನೆ ಮಾತ್ರ ಕುಂಠಿತವಾಗಿದೆ. ದೇಶದ ಶೇ.70 ಭಾಗ ವಿದ್ಯುತ್ ಉತ್ಪಾದನೆ ಕಲ್ಲಿದ್ದಲು ಆಧಾರಿತವಾಗಿದ್ದು 2030ರ ವೇಳೆಗೆ ಸುಮಾರು 800 ಮೆಟ್ರಿಕ್ ಟನ್ನಿನಷ್ಟು ಕಲ್ಲಿದ್ದಲು ಅಗತ್ಯ ಬೀಳಲಿದೆ. ಕಳೆದ ದಶಕದಲ್ಲಿ ಕಲ್ಲಿದ್ದಲು ಆಮದು ನಾಲ್ಕು ಪಟ್ಟು ಹೆಚ್ಚಿದೆ. ಇದು ಆಮದು-ರಫ್ತು ಅನುಪಾತದ ಮೇಲೆ ಬೀರಿರುವ ಪರಿಣಾಮ ದೇಶದ ಆರ್ಥಿಕ ಆರೋಗ್ಯವನ್ನು ಹಾಳು ಮಾಡಿದೆ. ನಾಲ್ಕು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಕೋಲ್ ಇಂಡಿಯಾ ಸುಳಿಗೆ ಸಿಲುಕಿದ ದೋಣಿಯಂತೆ ಅಸಹಾಯಕವಾಗಿದೆ. ಇಡೀ ದೇಶದ ಕಲ್ಲಿದ್ದಿಲಿನ ನಿರ್ವಹಣೆಯನ್ನು ಈ ಒಂದು ಸಂಸ್ಥೆಗೆ ವಹಿಸಿದ ಸರ್ಕಾರಗಳು ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಲಿ, ಗಣಿಗಾರಿಕೆಯ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಲಿ ಮುಂದಾಗದಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ. ಕಣಜದಲ್ಲಿ ಅಕ್ಕಿ ಇದೆ. ಆದರೆ ತಿನ್ನಲು ಅನ್ನ ಇಲ್ಲ ಎಂಬಂತಾಗಿದೆ ಭಾರತದ ಪರಿಸ್ಥಿತಿ.
ಇದಕ್ಕೆ ಯಾರನ್ನು ದೂರಬೇಕು? 2004 ಮತ್ತು 2009ರಲ್ಲಿ ಜನಾದೇಶ ಪಡೆದು ಆಡಳಿತದ ಚುಕ್ಕಾಣಿ ಹಿಡಿದ ಯುಪಿಎ ಸರ್ಕಾರ ವಿದ್ಯುತ್ ಸ್ವಾವಲಂಬನೆಯ ಬಗ್ಗೆ ಪುಂಖಾನುಪುಂಖವಾಗಿ ಹೇಳಿತ್ತು. ಪ್ರತಿ ಮನೆಗೆ, ಹಳ್ಳಿಗೆ ವಿದ್ಯುತ್ ನೀಡುವುದಾಗಿ ಬಡಾಯಿ ಕೊಚ್ಚಿಕೊಂಡಿತ್ತು. ವಿದ್ಯುತ್ ಉತ್ಪಾದನಾ ಕ್ಷೇತ್ರದ ತ್ವರಿತ ಬೆಳವಣಿಗೆಗೆ ಇರುವ ಅಡೆ-ತಡೆಗಳನ್ನು ತೊಡೆದು ಹಾಕುವ ಭರವಸೆ ನೀಡಿತ್ತು. ಕಲ್ಲಿದ್ದಲು ನಿಕ್ಷೇಪಗಳನ್ನು ಪತ್ತೆ ಹಚ್ಚಿ ಅವುಗಳ ವರ್ಗೀಕರಣಕ್ಕೆ ಚಾಲ್ತಿಯಲ್ಲಿರುವ ಆಧುನಿಕ ಮಾನದಂಡವನ್ನು ಅಳವಡಿಸುವುದಾಗಿ ಪ್ರಧಾನಿ ಮನಮೋಹನ್ ಸಿಂಗ್ 2004ರಲ್ಲೇ ಘೋಷಿಸಿದ್ದರು. ಆದರೆ ಇಂದಿಗೂ ಓಬಿರಾಯನ ಕಾಲದ ವರ್ಗೀಕರಣವನ್ನೇ ಸರ್ಕಾರ ಅನುಸರಿಸುತ್ತಿದೆ. ಇರುವ ನಿಕ್ಷೇಪ ಎಷ್ಟು, ಅದರಲ್ಲಿ ಗಣಿಗಾರಿಕೆಗೆ ಯೋಗ್ಯವಾದದ್ದೆಷ್ಟು ಎಂಬ ಸರಳ ವರ್ಗೀಕರಣ ಮಾಡುವಷ್ಟೂ ವ್ಯವಧಾನ ಸರ್ಕಾರಕ್ಕೆ ಇದ್ದಂತಿಲ್ಲ. ವಿದ್ಯುತ್ ಉತ್ಪಾದನೆಗೆ ಮುಂದಾದ ಕಂಪನಿಗಳಿಗೆ ಅನುಮತಿ ನೀಡಿದ ಸರ್ಕಾರ ಅದಕ್ಕೆ ಅತ್ಯಗತ್ಯವಾಗಿ ಬೇಕಾದ ಕಲ್ಲಿದ್ದಲು ಪೂರೈಕೆಗೆ ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಕಲ್ಲಿದ್ದಲು ಗಣಿಗಾರಿಕೆಗೆ ಪ್ರೋತ್ಸಾಹ ನೀಡುವ ಮೈನ್ಸ್ ಎಂಡ್ ಮಿನರಲ್ಸ್ ಕಾಯಿದೆಗೆ ತಿದ್ದುಪಡಿ ತರಲು ಸರ್ಕಾರ ಇನ್ನೂ ಮೀನಮೇಷ ಎದುರಿಸುತ್ತಿದೆ. ಓಟು ತಂದು ಕೊಡುವ ಸಾಧನಗಳೆಂದು ನರೇಗಾ, ಆಹಾರ ಭದ್ರತೆಯಂತಹ ಕಾಯಿದೆಗಳನ್ನು ಅತ್ಯಂತ ಮುತುವರ್ಜಿಯಿಂದ ಸಂಸತ್ತಿನಲ್ಲಿ ಪಾಸು ಮಾಡಿಸಿಕೊಳ್ಳುವ ಸರ್ಕಾರ ದೇಶದ ಆರ್ಥಿಕತೆಯನ್ನು ಸದೃಢಗೊಳಿಸಬಲ್ಲ ಇಂತಹ ಕಾಯಿದೆಗಳಿಗೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳಲು ಮಾತ್ರ ತನ್ನ ಅಸಹಾಯಕತೆ ಪ್ರದರ್ಶಿಸುತ್ತಿದೆ. 2006ರಿಂದ 2009ರವರೆಗೆ ಸ್ವತಃ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಕಲ್ಲಿದ್ದಲು ಸಚಿವರಾಗಿದ್ದರೂ ಈ ನಿಟ್ಟಿನಲ್ಲಿ ಯಾವುದೇ ಫೈಲು ಅಲುಗಾಡಲಿಲ್ಲ. ಹಾಗೆಂದು ಅವರ ಸುಪರ್ದಿನಲ್ಲಿ ಕಲ್ಲಿದ್ದಲು ಇಲಾಖೆಯಲ್ಲಿ ಫೈಲುಗಳು ಚಲಿಸಲೇ ಇಲ್ಲ ಎಂದಲ್ಲ. ಹಾಗೆ ಚಲಿಸಿದ ಫೈಲುಗಳೇ ಇಂದು ಸರ್ಕಾರದ, ಅಷ್ಟೇಕೆ ಪ್ರಧಾನಿಯ ಬುಡಕ್ಕೇ ಸಂಚಕಾರ ತಂದಿವೆ. ಅದೇ ಕೋಲ್ಗೇಟ್. ಕಲ್ಲಿದ್ದಲು ಗಣಿಗಾರಿಕೆಯನ್ನು ಸಂಪೂರ್ಣವಾಗಿ ಖಾಸಗಿ ವಲಯಕ್ಕೆ ತೆರೆಯಲಾಗದಿದ್ದರೂ ನಿಶ್ಚಿತ ಉದ್ದೇಶಕ್ಕೆ (ವಿದ್ಯುತ್ ಉತ್ಪಾದನೆ) ಭೂಮಿ ಬಗೆದು ಕಲ್ಲಿದ್ದಲನ್ನು ಹೊರತೆಗೆಯಲು ಮತ್ತು ಅದೇ ಉದ್ದೇಶಕ್ಕೆ ಬಳಸಿಕೊಳ್ಳಲು 141 ಕಂಪನಿಗಳಿಗೆ ಅನುಮತಿ ನೀಡಲು ಇದೇ ಮನಮೋಹನ್ ಸಿಂಗ್ ತೀರ್ಮಾನ ಕೈಗೊಂಡರು. ಇದರಲ್ಲಿ ತಪ್ಪೇನಿಲ್ಲ. ಆದರೆ ತಪ್ಪಿದ್ದದ್ದು ಅದಕ್ಕಾಗಿ ಅನುಸರಿಸಿದ ವಿಧಾನದಲ್ಲಿ. ಅಂದು ಕಲ್ಲಿದ್ದಲು ಇಲಾಖೆ ಕಾರ್ಯದರ್ಶಿಯಾಗಿದ್ದ ಪಾರಖ್ ಅವರ ಸಲಹೆ ತಿರಸ್ಕರಿಸಿ ಬಿಡ್ಡಿಂಗಿಗೆ ಅವಕಾಶ ನೀಡದೆ ಒಂದು ಪರಿಶೀಲನಾ ಸಮಿತಿ ನೇಮಿಸಿ ಅದು ಶಿಫಾರಸು ಮಾಡುವ ಕಂಪನಿಗಳಿಗೆ ಹಿಂದು ಮುಂದೆ ನೋಡದೆ ಕಲ್ಲಿದ್ದಲು ಬ್ಲಾಕ್ಗಳನ್ನು ಸರ್ಕಾರ ನೀಡಿತು. ವಿದ್ಯುತ್ ಬರ ನೀಗಲು ಇದು ಅತ್ಯಗತ್ಯವಾಗಿತ್ತು ಎಂದು ಸರ್ಕಾರ ಹೇಳಿಕೊಂಡಿದ್ದೂ ಉಂಟು. ಆದರೆ ಈ 141 ಕಂಪನಿಗಳು ಎಷ್ಟು ಮೆಟ್ರಿಕ್ ಟನ್ ಕಲ್ಲಿದ್ದಲು ಅಗೆದವು? ಅವುಗಳಲ್ಲಿ ಎಷ್ಟು ಕಂಪನಿಗಳು ಪರ್ಮಿಟ್ ಮಾರಿಕೊಳ್ಳಲು ಮುಂದಾದವು? ಇನ್ನೆಷ್ಟು ಕಂಪನಿಗಳು ಬ್ಲಾಕ್ಗಳನ್ನು ಇತರರಿಗೆ ಮಾರಲು (ಲಾಭಕ್ಕೆ) ಸೂಕ್ತ ಸಮಯಕ್ಕಾಗಿ ಕಾದು ಕುಳಿತವು? ಈ ನಿರ್ಧಾರದಿಂದ ದೇಶದ ವಿದ್ಯುತ್ ಜಾಲಕ್ಕೆ ಎಷ್ಟು ಮೆಗಾವ್ಯಾಟ್ ವಿದ್ಯುತ್ ಸೇರ್ಪಡೆಯಾಗಿದೆ? ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರದ್ದು 'ಮೌನ'ವೇ ಉತ್ತರ. ಭಾರತದ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರಾಗಿದ್ದ (ಸಿಎಜಿ) ವಿನೋದ್ ರಾಯ್ ಇಡೀ ಹಂಚಿಕೆ ಪ್ರಕ್ರಿಯೆಯ ಅಪ್ರಾಮಾಣಿಕತೆಯನ್ನು ಹೊರಗೆಳೆಯದೇ ಹೋಗಿದ್ದರೆ ಈ ಪ್ರಶ್ನೆಗಳು ಹುದುಗಿ ಹೋಗುತ್ತಿದ್ದವು. ಇಡೀ ಸರ್ಕಾರವೇ ಹಗರಣಗಳ ಹೂರಣವಾಗಿದ್ದರೂ, ಅದು ತನಗೆ ಮೆತ್ತಿಲ್ಲ ಎಂಬಂತಿದ್ದ ಪ್ರಧಾನಿ ಮೇಲೆಯೇ ಈಗ ಸಂಶಯದ ಮುಳ್ಳು ತಿರುಗಿದೆ. ಬೆಳಕಿಗೆ ಬಂದಾಗಿನಿಂದ ಇಂದಿನವರೆಗೆ ಯಾವುದೇ ಸಮರ್ಪಕ ಉತ್ತರ ನೀಡದೆ ನುಣುಚಿಕೊಳ್ಳುತ್ತಿದ್ದ ಪ್ರಧಾನಿ ಮೊನ್ನೆ ಸಿಬಿಐ ಈ ಪಾಪದಲ್ಲಿ ಪಾಲುದಾರ ಎಂದು ಖ್ಯಾತ ಉದ್ಯಮಿ ಕುಮಾರ ಮಂಗಳಂ ಬಿರ್ಲಾ ವಿರುದ್ಧ ಚಾರ್ಜ್ಶೀಟ್ ಹಾಕಿದ ಕೂಡಲೇ ಮೈಕೊಡವಿ ಮೇಲೆದ್ದರು. ಬಿರ್ಲಾ ಬಚಾವ್ಗೆ ಮುಂದಾದ ಪ್ರಧಾನಿ "ಈ ವಿಷಯದಲ್ಲಿ ಅರ್ಹತೆಯ ಮಾನದಂಡ ಅನುಸರಿಸಿಯೇ ಬಿರ್ಲಾರ ಹಿಂಡಾಲ್ಕೊ ಕಂಪನಿಗೆ ಕಲ್ಲಿದ್ದಲು ಬ್ಲಾಕ್ ನೀಡಲಾಗಿದೆ" ಎಂದು ಸಮಜಾಯಿಷಿ ನೀಡಿದ್ದಾರೆ. ಹಾಗಾದರೆ ಉಳಿದ 140 ಹಂಚಿಕೆಗಳಲ್ಲಿ ಅರ್ಹತೆ ಮಾನದಂಡವಾಗಿರಲಿಲ್ಲವೇ? ಅವುಗಳ ವಿಷಯದಲ್ಲಿ ಮೌನವೇಕೆ? ಅಥವಾ ಪ್ರಧಾನಿ ಎಲ್ಲ 141 ಹಂಚಿಕೆಗಳ ಬಗ್ಗೆಯೂ ಇದೇ ರೀತಿ ಸಮಜಾಯಿಷಿ ನೀಡುತ್ತಾರೆಯೇ? ಪ್ರಧಾನಿಯೇ ಹೀಗೆ ಹೇಳಿದ ಮೇಲೆ ಅವರ ಮೂಗಿನಡಿಯೇ ಕೆಲಸ ಮಾಡುವ ಸಿಬಿಐ ನಿಷ್ಪಕ್ಷಪಾತ ತನಿಖೆ ಮಾಡಲು ಸಾಧ್ಯವೇ? ಪ್ರಧಾನಿಯ ಮಾತು ಕೇಳಿ ಸಿಬಿಐ ಬಿರ್ಲಾ ಅವರಿಗೆ ಕ್ಲೀನ್ಚಿಟ್ ನೀಡಿದರೆ ಉಳಿದ ಫಲಾನುಭವಿಗಳು ಸುಮ್ಮನಿರುತ್ತಾರೆಯೇ? ಅಥವಾ ಅವರಿಗೂ ಹೀಗೆ ಮಾಡಿ ಸಿಬಿಐ ಇಡೀ ಹಗರಣಕ್ಕೇ ಕ್ಲೀನ್ ಚಿಟ್ ನೀಡುತ್ತದೆಯೇ? ಕಲ್ಲಿದ್ದಲು ಇಲಾಖೆಯ ಅಂದಿನ ಕಾರ್ಯದರ್ಶಿ ಪಾರಖ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸುವ ಮೂಲಕ ಹಗರಣವನ್ನು ಅವರ ತಲೆಗೆ ಕಟ್ಟುವ ಪ್ರಯತ್ನ ಈಗಲೇ ನಡೆದಿದೆ. ಅಂದರೆ ಈ ಹಗರಣದಲ್ಲಿ ಸಾಕ್ಷಿದಾರನಾಗಬಹುದಾದ ವ್ಯಕ್ತಿ ಯನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ನಡೆದಿದೆ. ಕಲ್ಲಿದ್ದಲು ಬ್ಲಾಕ್ ಪಡೆದ ಕೆಲವು ಕಂಪನಿಗಳಲ್ಲಿ ಪಾರಖ್ಆಡಳಿತ ಮಂಡಳಿಯಲ್ಲಿದ್ದರು. ಹಾಗಾಗಿ ಅವರನ್ನು ಬಲಿಪಶು ಮಾಡಬಹುದು ಎಂಬುದು ಸಿಬಿಐ ಲೆಕ್ಕಾಚಾರವಿರಬಹುದು. ಆದರೆ ಅಸಲಿಯತ್ತೇ ಬೇರೆ. ಪಾರಖ್ ಕಾರ್ಯದರ್ಶಿಹುದ್ದೆಯಿಂದ ನಿವೃತ್ತರಾದ ಬಳಿಕ ನಿಯಮಗಳಂತೆ ಒಂದೆರಡು ವರ್ಷದ ಬಳಿಕವಷ್ಟೇ ಖಾಸಗಿ ವಲಯದ ಉದ್ದಿಮೆಗಳ ಆಡಳಿತ ಮಂಡಳಿ ಪ್ರವೇಶಿದ್ದರು. ಈ ಹಿನ್ನೆಲೆಯಲ್ಲಿ ಅವರ ಕ್ರಮವನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಬಿರ್ಲಾಗೆ ಸ್ವತಃ ಪ್ರಧಾನಿ ಕ್ಲೀನ್ ಚಿಟ್ ನೀಡಿದಂತೆ ಮಾತನಾಡಿದ್ದಾರೆ. ಪಾರಕ್ ಸಲಹೆಯನ್ನು ತಿರಸ್ಕಿರಿಸಿ ಪ್ರಧಾನಿ ಹಂಚಿಕೆ ಮಾಡಿದ್ದಾರೆ ಎಂದ ಮೇಲೆ ತಪ್ಪು ಯಾರದ್ದು ಎಂದು ವಿವರಿಸುವ ಅಗತ್ಯವಿಲ್ಲ. ಅಗತ್ಯವಾಗಿ ಆಗಬೇಕಿರುವುದೆಂದರೆ ಸ್ವತಃ ಪ್ರಧಾನಿ ತಪ್ಪೊಪ್ಪಿಕೊಳ್ಳುವುದು. ಆದರೆ ಪ್ರಧಾನಿ ಹೊಣೆ ಹೊರುತ್ತಾರಾ? ಈ ವಿಚಾರದಲ್ಲಿ ಅವರ ಈವರೆಗಿನ ನಡೆ-ನುಡಿ ಗಮನಿಸಿದರೆ ಖಂಡಿತ ಅಂತಹ ಉದಾತ್ತತೆ ನಿರೀಕ್ಷಿಸುವುದು ಅಸಾಧ್ಯ. ರಾಜಕಾರಣಿ ಎಂದ ಮೇಲೆ ಲೋಕ ನಿಂದನೆ, ಟೀಕೆ-ಟಿಪ್ಪಣಿಗಳನ್ನು ಸಹಿಸಿಕೊಳ್ಳಲು ದಪ್ಪ ಚರ್ಮ ಬೆಳೆಸಿಕೊಳ್ಳಬೇಕು. ಆದರೆ ಪ್ರಧಾನಿ ಈಗ ತೋರುತ್ತಿರುವಷ್ಟು ದಪ್ಪ ಚರ್ಮವೇ?
- ಕೆ.ಎಸ್.ಜಗನ್ನಾಥ್
jagannath.kudinoor@gmail.com