

ನೇತ್ರಾವತಿ ಆಯಿತು, ಎತ್ತಿನ ಹೊಳೆ ಬಂದಾಯಿತು, ಈಗ ಅಘನಾಶಿನ, ಶರಾವತಿಯರ ಹೆಸರು ಕೇಳಿಬರುತ್ತಿದೆ. ರಾಜ್ಯದ ದಕ್ಷಿಣಕ್ಕೆ ನೀರು ತರಲು 'ಆಳ ಅಧ್ಯಯನ' (?)ದ ವರದಿಗಳು ಸಿದ್ಧಗೊಂಡಿವೆ.
ಈ ಸಂದರ್ಭದಲ್ಲಿ ಜಗದೀಶ್ ಕೊಪ್ಪ ಅವರ ಹೊತ್ತಗೆಯಲ್ಲಿ ಓದಿದ ಸಾಲುಗಳು ನೆನಪಾಗುತ್ತಿವೆ. ಲೇಖಕರಾದ ಯಜ್ರೊಹೈಲಾ ಮತ್ತು ರಿಚರ್ಡ್ ಲೇಪಿನ್ ತಮ್ಮ 'ಹ್ಯೂಮ್ಯಾನಿಟಿ ಅಂಡ್ ನೇಚರ್' ಕೃತಿಯಲ್ಲಿ 15ನೇ ಶತಮಾನದಲ್ಲಿ ಉದ್ಭವವಾದ ಊಳಿಗಮಾನ್ಯ ಪದ್ಧತಿ ಮತ್ತು 17ನೇ ಶತಮಾನದಲ್ಲಿ ಜನ್ಮತಾಳಿದ ಬಂಡವಾಳಶಾಹಿ ಯುಗದಿಂದ ಪರಿಸರದ ದುರ್ಬಳಕೆಗೆ ದಾರಿಯಾಯಿತು ಎಂದು ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಪ್ರಾನ್ಸಿಸ್ ಬೇಕನ್ ಎಂಬ ಮಹಾನುಭಾವನೊಬ್ಬ 'ಪ್ರಕೃತಿಯನ್ನು ಮಣಿಸಿ ಅದರ ಮೇಲೆ ಪ್ರಭುತ್ವ ಸಾಧಿಸುವುದು ಮಾನವನ ಕರ್ತವ್ಯ. ಇದರಲ್ಲಿ ಅವನ ಭವಿಷ್ಯ ಅಡಗಿದೆ. ಮಾನವನ ಅಭ್ಯುದಯಕ್ಕಾಗಿ ಪ್ರಕೃತಿಯನ್ನು ಪಳಗಿಸುವುದು ತಪ್ಪಲ್ಲ' ಎಂದು ವಾದಿಸಿದ್ದಾನಂತೆ. ಗ್ರೇಟ್! ಕೋಲಾರದ ಮಹತ್ವಾಕಾಂಕ್ಷಿ ಡಾ. ಮಧು ಸೀತಪ್ಪ ಅವರ ಲೇಖನ, ಅಘನಾಶಿನಿ ನದಿ ನೀರಿನ ಬಳಕೆ ಕುರಿತಂತೆ ವರದಿ ಓದಿದಾಗ ಈ ಮೇಲಿನ ಎರಡು ಹೇಳಿಕೆಗಳು ತನ್ನಿಂದ ತಾನೇ ಮನಃಪಟಲದಲ್ಲಿ ಸುಳಿದು ಬಂತು.
ಅದು ಹಾಗಿರಲಿ, ದಶಕದ ಹಿಂದಿನ ಮಾತು. ಅದಾಗ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿತ್ತು. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದರು. ಕೋಲಾರದ ಮುಳಬಾಗಲು ಕ್ಷೇತ್ರದಿಂದ ಮಾಜಿ ಸ್ಪೀಕರ್ ಒಬ್ಬರು ಪುನರಾಯ್ಕೆ ಬಯಸಿದ್ದರು. ಕ್ಷೇತ್ರದ ಪುಟ್ಟ ಹಳ್ಳಿ ಹೊಸಕೆರೆ. ಹೊತ್ತು ಮುಳುಗುವ ಹೊತ್ತಿನಲ್ಲಿ ಪ್ರಚಾರ ಸಭೆ ಆಯೋಜನೆಗೊಂಡಿತ್ತು. ಹರಿಬರಿಯಲ್ಲಿ ಪ್ರಚಾರ ಭಾಷಣಕ್ಕೆ ನಿಂತ ಮಾಜಿ ಸ್ಪೀಕರ್ ಭರವಸೆಯ ಹೊಳೆಯನ್ನೇ ಅಲ್ಲಿ ಹರಿಸುತ್ತಿದ್ದರು. 'ದಕ್ಷಿಣಕ್ಕೆ ಮಲೆನಾಡಿನ ಭಾಗದ ನದಿಯನ್ನು ತಿರುಗಿಸಿಕೊಂಡು ಬಂದೇ ಬರುತ್ತೇವೆ. ಈ ಭಾಗದಲ್ಲಿ ನೀರಾವರಿಯ ಸಮೃದ್ಧಿಯೇ ನಮ್ಮ ಗುರಿ. ನೀವ್ಯಾರೂ ಚಿಂತಿಸಬೇಕಾದುದೇ ಇಲ್ಲ...' ಹೀಗೆ ಅಬ್ಬರದಿಂದ ಸಾಗಿತ್ತು ಮಾತು. ಸಭೆಯಲ್ಲಿ ಕುಳಿತಿದ್ದ ಐವತ್ತರ ಆಸುಪಾಸಿನ ಮಹಿಳೆ ಎದ್ದು ನಿಂತಳು. ಆಕೆ ಪಾಪಮ್ಮ. ಸಮಾಜದ ಕೆಳಸ್ತರದ ಅನಕ್ಷರಸ್ಥೆ. ಆದರೆ, ಚಿಂತನೆಗಳಲ್ಲಿ ಆಕೆಯ ಸರ್ವವಿಧದಿಂದಲೂ ಶ್ರೀಮಂತಳು. ಮಧ್ಯ ಭಾಷಣ ತಡೆದು 'ಸ್ವಾಮಿ, ನೀವು ನದಿಯನ್ನು ತಿರುಗಿಸಿಕೊಂಡು ಬರುವುದರಲ್ಲಿ ಅನುಮಾನವೇ ಇಲ್ಲ. ನದಿ ನೀರು ಇಲ್ಲಿಯವರೆಗೆ ಬರುವುದರಲ್ಲೂ ನಂಬಿಕೆಯಿದೆ. ಎಲ್ಲ ಸರಿ. ಆದರೆ, ಬರುವ ಆಪಾಟಿ ನೀರನ್ನು ಇಲ್ಲಿ ಹಿಡಿದಿಟ್ಟುಕೊಳ್ಳುವುದೆಲ್ಲಿ? ಏಕೆಂದರೆ ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ಜಿಲ್ಲೆಯ ಖ್ಯಾತಿಯ ನಮ್ಮೂರಿನಲ್ಲಿ ಎಲ್ಲ ಕೆರೆಗಳೂ ಇಂದು ಹೂಳಿನಿಂದ ತುಂಬಿ ಹೋಗಿವೆ. ಜಿಲ್ಲೆಯ ಜೀವಾಳವಾಗಿದ್ದ ಕೆರೆಗಳು ಸುಸ್ಥಿತಿಯಲ್ಲಿದ್ದಿದ್ದರೆ ಮೂರು ವರ್ಷ ಮಳೆ ಬಾರದಿದ್ದರೂ ಕೋಲಾರ ಕಂಗೆಡುತ್ತಿರಲಿಲ್ಲ. ಅವಾದರೂ ಇದ್ದಿದ್ದರೆ ಬರುವ ನದಿಯ ನೀರನ್ನು ಕೆರೆಗಳಲ್ಲಿ ತುಂಬಿಸಿಕೊಳ್ಳಬಹುದಿತ್ತು. ಮೊದಲು ಆ ಬಗ್ಗೆ ಯೋಚಿಸಿ. ಅದಿಲ್ಲದಿದ್ದರೆ ನದಿ ನೀರು ಮನೆಯೊಳಗೆ ನುಗ್ಗಿ ನಾವೂ ಮುಳುಗಬೇಕಾದೀತು ಸ್ವಾಮಿ...' ಎಂದು ಮುಖಕ್ಕೆ ರಾಚಿದಳು ಆ 'ನೀರ'ಕ್ಷರ ತಜ್ಞೆ. ಹಾಗೆ ಹೇಳುವ ನೈತಿಕತೆ ಅವಳಲ್ಲಿತ್ತು. ತನ್ನ ನೇತೃತ್ವದಲ್ಲೇ ಊರಲ್ಲಿ ಕೆರೆ ಸಂಘವನ್ನು ಕಟ್ಟಿ, ಕೂಲಿಯಿಂದ ಬಂದ ನಂತರ ಪ್ರತಿದಿನ ಸಂಜೆ ಶ್ರಮಾದಾನ ಮಾಡಿ ಹೊಸಕೆರೆಯ ಬೃಹತ್ ಕೆರೆಯ ಹೂಳೆತ್ತಿ ನಳನಳಿಸುವಂತೆ ಮಾಡಿದ್ದಳು. ಅಷ್ಟೇ, ವೀರಾವೇಶದ ಭಾಷಣಕ್ಕೆ ನಿಂತಿದ್ದ ರಾಜಕಾರಣಿ ಸದ್ದಿಲ್ಲದೇ ವೇದಿಕೆಯಿಂದ ಇಳಿದುಹೋದರು ಎಂಬುದನ್ನು ಮತ್ತೆ ಹೇಳಬೇಕಿಲ್ಲ.
ಈ ನದಿ ತಿರುವು, ಬೃಹತ್ ನೀರಾವರಿ ಯೋಜನೆಗಳ ಬಗ್ಗೆ ರಾಜಕಾರಣಿಗಳ ಮಾತುಗಳನ್ನು ಕೇಳಿದಾಗಲೆಲ್ಲ ಪಕ್ಕಾ ಜೋಕ್ನಂತೆ ಭಾಸವಾಗುತ್ತದೆಯೇ ಹೊರತೂ ಬೇರಿನ್ನೇನೂ ಇಲ್ಲ. ಸ್ವಾಮಿ ಡಾ. ಮಧು ಸೀತಪ್ಪನವರೇ ನಿಮಗೂ ರಾಜಕೀಯ ಉದ್ದೇಶಗಳೇ ಇದ್ದರೆ ನೀವು ಖಂಡಿತಾ ಇಂಥ ಯೋಜನೆಗಳ ಬಗ್ಗೆ ಮಾತನಾಡಿ. ನಮ್ಮದೇನೂ ಅಭ್ಯಂತರವಿಲ್ಲ. ಅದಿಲ್ಲದಿದ್ದರೆ ನೀವು ಯಾವ ಕಾರಣಕ್ಕೂ ಲಂಡನ್ನಲ್ಲೆಲ್ಲೋ ನಿಂತುಕೊಂಡು ಕೋಲಾರದ 'ಕೃತಕ, ನಾವೇ ನಿರ್ಮಿಸಿಕೊಂಡ ಬರ'ವನ್ನು ನೆನೆಪಿಸಿಕೊಂಡು ಅಘನಾಶಿನಿ, ಶರಾವತಿ ಎಂದೆಲ್ಲ ಕನವರಿಸುತ್ತಿರಲಿಲ್ಲ. ಕೋಲಾರದವರಾಗಿ ಅಲ್ಲಿನ ನೀರಾವರಿಯ ಬಗ್ಗೆ, ಈ ನಿಟ್ಟಿನಲ್ಲಿ ನೀವು ನಡೆಸಿರುವ ಅಧ್ಯಯನದ ಬಗ್ಗೆ ಖಂಡಿತಾ ಗೌರವವಿದೆ. ಬೆಂಗಳೂರು ಸುತ್ತಮುತ್ತಲಿನ ತಾಲೂಕುಗಳ ಬರ ನಿರೋಧದ ಬಗ್ಗೆ ನೀವು ಸಲ್ಲಿಸಿದ ವರದಿಯನ್ನೂ ಸಮರ್ಥಿಸಿಕೊಂಡಿದ್ದೀರಿ. ಸಾವಿರಾರು ದಿನಗಳ ಪರಿಶ್ರಮ ಈ ವರದಿಯ ಹಿಂದಿದೆ ('ಕನ್ನಡಪ್ರಭ'ದ ಅ.23ರ ಅನುಭವ ಮಂಟಪ ಪುಟದಲ್ಲಿನ 'ಹರಿವೋ, ತಿರುವೋ ನೀರಂತೂ ಬೇಕು' ಎಂಬ ಲೇಖನ) ಎಂದೂ ನಿಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದೀರಿ. ನೀವು ಪರಿಶ್ರಮಿಗಳೆಂಬುದೂ ಇದರಿಂದ ಸಾಬೀತಾಗುತ್ತದೆ. ಯೋಜನೆಯ ತಾಂತ್ರಿಕ ದೋಷಗಳ ಬಗ್ಗೆ ಸಾಗರದವರಾದ ಬೊ.ನಾ. ಕೃಷ್ಣಮೂರ್ತಿಯವರು ವಿವರಿಸಿದ್ದೂ (ಕನ್ನಡಪ್ರಭದ ಅದೇ ಪುಟದಲ್ಲಿ ಅ.22ರ ಲೇಖನ) ನಿಮಗೆ ಸರಿ ಕಂಡಿಲ್ಲ. ಅವೆಲ್ಲವನ್ನೂ ಬದಿಗಿಟ್ಟು ಜಗತ್ತಿನ ಇಂಥ ಯೋಜನೆಗಳ ಇತಿಹಾಸವನ್ನೊಮ್ಮೆ ನಿಮ್ಮ ಮುಂದಿಡಲೇಬೇಕೆನಿಸಿದೆ. ಅದು ಗೊತ್ತಿದ್ದಿದ್ದರೆ ಅಧ್ಯಯನ ದೃಷ್ಟಿ, ಅನುಭವ, ಪರಿಶ್ರಮ, ಬುದ್ಧಿವಂತಿಕೆ ಎಲ್ಲವೂ ಇದ್ದೂ ನೀವು ಕಾರ್ಯ ಸಾಧ್ಯವಾದ ಕೋಲಾರದ ಕೆರೆಗಳ ಉದ್ಧಾರದ ಬಗ್ಗೆ ಯೋಚಿಸದೇ ಕಂಡ ಕಂಡ ನದಿಯ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ ಎಂದು ಬೊಬ್ಬೆ ಹೊಡೆಯುತ್ತಿರಲಿಲ್ಲ.
ಅಷ್ಟಕ್ಕೂ ನದಿಯ ನೀರು ಸಮುದ್ರಕ್ಕೆ ಹೋಗಿ ಸೇರುವುದನ್ನು ವ್ಯರ್ಥವೆಂದು ಯಾವ ವಿಜ್ಞಾನದಲ್ಲಿ ಕಲಿತಿರಿ ಸ್ವಾಮಿ? ಒಂದೊಮ್ಮೆ ನದಿಯ ನೀರು ಸಮುದ್ರವನ್ನು ಹೋಗಿ ಸೇರದಿದ್ದರೆ ಏನಾಗುತ್ತದೆ ಎಂಬ ಕಲ್ಪನೆಯಾದರೂ ನಿಮಗೆ ಇದೆಯೇ? ಬೇಕಿದ್ದರೆ ರಷ್ಯಾದ ಅರಾಲ ಸಮುದ್ರ ಬತ್ತಿ ಹೋಗಿದ್ದ ದುರಂತವನ್ನೊಮ್ಮೆ ನೆನಪಿಸಿಕೊಳ್ಳಿ. ಆ ಬಗ್ಗೆ ಪುಟಗಟ್ಟಲೆ ವರದಿಗಳು ಎಲ್ಲೆಡೆ ಲಭ್ಯವಿವೆ. ಸೋವಿಯತ್ನ ನೀರಾವರಿ ಯೋಜನೆಗಳಿಂದಾಗಿ ನದಿಗಳೆಲ್ಲ ಒಳನಾಡಿನಲ್ಲೇ ಬಂಧಿಯಾಗಿ 1960ರಿಂದ ಪಕ್ಕದ ಸಮುದ್ರಕ್ಕೆ ಸಮುದ್ರವೇ ಬತ್ತಲಾರಂಭಿಸಿ 'ಭೂಮಿಯ ಮೇಲಿನ ಅತಿದೊಡ್ಡ ಪಾರಿಸಾರಿಕ ದುರಂತ' ದಾಖಲಾದದ್ದು ಗೊತ್ತಿದೆಯೇ? ಜಲಾಶಯ ಅಥವಾ ಇನ್ನಾವುದೇ ನದಿ ಹರಿವು ತಡೆಯಿಂದ ನೀರಿನಲ್ಲಿದ್ದ ಖನಿಜ ಮತ್ತು ಲವಣಾಂಶಗಳ ನಷ್ಟ ಇನ್ನೊಂದು ಅತಿದೊಡ್ಡ ಅಪಾಯ. ಪರ್ವತ ಗಿರಿ ಶ್ರೇಣಿಗಳಿಂದ ಹರಿಯುತ್ತಿದ್ದ ನೀರಿನಲ್ಲಿದ್ದ ಖನಿಜ, ಲವಣಾಂಶಗಳು ಜಲಚರಗಳಿಗೆ ಪೋಷಕಾಂಶವನ್ನು ಒದಗಿಸುವುದರ ಜೊತೆಗೆ ನದಿ ತೀರಗಳಿಗೆ ಗಟ್ಟಿತನವನ್ನು ಒದಗಿಸಿ, ಭೂ ಸವೆತವನ್ನು ತಡೆಗಟ್ಟುತ್ತವೆ. ಯಾವಾಗ ಜಲಾಶಯಗಳು ನಿರ್ಮಾಣವಾಗುತ್ತವೋ ಅಥವಾ ನದಿಯನ್ನು ಕೃತಕವಾಗಿ ದಿಕ್ಕು ಬದಲಿಸಿಕೊಳ್ಳುತ್ತೇವೋ ಆಗ ನದಿ ನೀರಿನ ಖನಿಜ, ಲವಣಾಂಶಗಳೆಲ್ಲಾ ಜಲಾಶಯದ ತಳಭಾಗ ಸೇರಿ, ಶೇಖರವಾಗುತ್ತಿರುವ ಹೂಳಿನಲ್ಲಿ ಮಿಶ್ರವಾಗಿ, ಸಿಹಿ ನೀರನ್ನು ಉಪ್ಪು ನೀರನ್ನಾಗಿ ಪರಿವರ್ತಿಸುತ್ತದೆ. ಇದಲ್ಲದೆ ಇಂಥ ಯೋಜನೆಗಳಿಂದ ನದಿಯ ತೀರಗಳು ಶಿಥಿಲಗೊಳ್ಳುತ್ತವೆ. ಮಳೆಗಾಲದಲ್ಲೇ ನೀವು ಹೆಚ್ಚುವರಿ ನೀರನ್ನು ತಂದುಕೊಳ್ಳುತ್ತೇವೆ ಎಂದರೂ ಪ್ರವಾಹದ ಸಂದರ್ಭದಲ್ಲಿ ನೀರಿನೊಂದಿಗೆ ಹೂಳೂ ಸೇರಿ ನದಿಯ ಇಕ್ಕೆಲಗಳ ಫಲವತ್ತಾದ ಭೂಮಿಯನ್ನು ಚೌಳು ಭೂಮಿಯನ್ನಾಗಿಸುತ್ತದೆ. ಕೋಲಾರದಲ್ಲಿ ಈಗಿರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಯಬಹುದಾಗಿದ್ದನ್ನೂ ಬೆಳೆಯಲಾರದ ಬಂಜೆತನಕ್ಕೆ ಭೂಮಿ ಬಂದು ತಲುಪುತ್ತದೆ.
ಇವೆಲ್ಲ ಪಾಶ್ಚಿಮಾತ್ಯ ಪ್ರೇರಿತ ಅಭಿವೃದ್ಧಿ ಹಾಗೂ ಆರ್ಥಿಕ ಸಿದ್ಧಾಂತಗಳು ಎಂಬುದು ನೆನಪಿರಲಿ ಡಾಕ್ಟರೇ. ನೀವು ಅಲ್ಲಿ ಕಂಡುಕೊಂಡ ಅಭಿವೃದ್ಧಿ(?)ಯನ್ನು ಇಲ್ಲಿ ಹೋಲಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದಿಲ್ಲ. ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ಪಶುಸಂಗೋಪನೆಯ ಮುಖ್ಯ ಗುರಿ ಮಾಂಸ ಉತ್ಪಾದನೆ. ಹಸುಗಳು ಕೊಬ್ಬಿದಷ್ಟೂ ಅವರಿಗೆ ಲಾಭ. ಅಲ್ಲಿ ಹಾಲಿಗಾಗಿಯಾಗಲೀ, ನಮ್ಮಂತೆ ಪೂಜ್ಯ ಭಾವನೆಯಿಂದಾಗಲೀ ಗೋವನ್ನು ಸಾಕುವುದಿಲ್ಲ. ಹೀಗಾಗಿ ಅವನ್ನು ಮಿತಿಮೀರಿ ಕೊಬ್ಬಿಸಲು ಅವರಿಗೆ ಆ ಪ್ರಮಾಣದ ಮೇವು ಬೇಕು. ಅದನ್ನು ಬೆಳೆಯಲು ಯಥೇಚ್ಛ ನೀರು ಅಗತ್ಯ. ಅದಕ್ಕಾಗಿ ಅವರು ಅಣೆಕಟ್ಟುಗಳನ್ನು ನಿರ್ಮಿಸತೊಡಗಿದರು. ಅಂಥ ವಾಸ್ತವ ಮುಚ್ಚಿಟ್ಟು ಅದನ್ನೇ ಅಭಿವೃದ್ಧಿ ಎಂದು ಬಿಂಬಿಸಿದರು. ಅಂಥವನ್ನು ನಂಬಿ ನೀವು, ನಿಮ್ಮಂಥವರು ಇಲ್ಲಿನ ಪ್ರಕೃತಿಯಲ್ಲಿ ಹಸ್ತಕ್ಷೇಪದ ಮಾತನಾಡುವುದು ಯಾವ ತಜ್ಞತೆ? ಅನುಮಾನವೇ ಇಲ್ಲ ಮನುಕುಲವನ್ನು ಅಭಿವೃದ್ಧಿ ಹುಚ್ಚು ದಾಹ ಆವರಿಸಿದೆ. ಎಲ್ಲವನ್ನೂ ಸರಕನ್ನಾಗಿ ನೋಡುವ ನಮ್ಮ ಆರ್ಥಿಕತೆ ದಿಕ್ಕು ತಪ್ಪಿರುವುದೇ ಇಲ್ಲ. ಲಾಭ ನಷ್ಟಗಳ ಲೆಕ್ಕಾಚಾರವನ್ನೇ ನದಿ ನೀರಿನಲ್ಲೂ ಮಾಡಬೇಡಿ. ರಾಜಕೀಯ ಉದ್ದೇಶಗಳು ನಮ್ಮ ಅಭಿವೃದ್ಧಿಯ ಹಳಿ ತಪ್ಪಿಸಿದ್ದು ಇದು ಮೊದಲನೇ ಬಾರಿಯೇನಲ್ಲ. ಪ್ರಕೃತಿ ಮೇಲಿನ ದೌರ್ಜನ್ಯ ವಿನಾಶಕ್ಕೆ ನಾಂದಿ ಹಾಡಿದಂತೆ ಎಂಬುದು ಮೊನ್ನೆ ಮೊನ್ನೆಯಷ್ಟೇ ಕೇದಾರದಲ್ಲಿ ಸಾಬೀತಾಗಿದೆ.
ನಿಮಗೆ ವಿದೇಶವೇ ಮಾದರಿ ಎನ್ನುವುದಾದರೆ, ಅದನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಎರಡನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಸ್ಟಾಲಿನ್ ಅಧಿಕಾರದ ಅವಧಿಯಲ್ಲಿ, ರಷ್ಯಾ ಮತ್ತು ಉಕ್ರೇನ್ ಪ್ರದೇಶಗಳಲ್ಲಿ ಇಂಥವೇ ಕಾರಣಗಳಿಗಾಗಿ ನೂರಾರು ಅಣೆಕಟ್ಟುಗಳು ನಿರ್ಮಾಣಗೊಂಡವು. 50 ಶತಕೋಟಿ ಡಾಲರ್ ವೆಚ್ಚದ ಮೂರು ಅಣೆಕಟ್ಟುಗಳ ಹಿಂದೆ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು ಗೊತ್ತಿರಬಹುದು. ದೇಶ, ರಾಜ್ಯಗಳ ರಾಜಕೀಯ ಅಸ್ಥಿರತೆ, ಬದಲಾಗುವ ಸರಕಾರದ ಜನಪ್ರತಿನಿಧಿಗಳ ಮನೋಭಾವ ಇಂಥ ಯೋಜನೆಗಳಲ್ಲಿ ಭ್ರಷ್ಟಾಚಾರವನ್ನು ಉದ್ದೀಪಿಸುತ್ತವೆ. ನಿಗದಿತ ಅವಧಿಯಲ್ಲಿ ಯೋಜನೆಗಳು ಪೂರ್ಣಗೊಳ್ಳದೇ ಅಂದಾಜು ವೆಚ್ಚ ಮಿತಿಮೀರಿ, ಸಾಲದ ಮೇಲಿನ ಬಡ್ಡಿಯಿಂದಾಗಿ ಉದ್ದೇಶವೇ ಸಾಕಾರಗೊಳ್ಳದೇ ಹೋಗುತ್ತಿರುವುದು ನಮ್ಮಲ್ಲೂ ಹೊಸದೇನಲ್ಲ. ಯಾವ ಪುರುಷಾರ್ಥ ಸಾಧನೆಗಾಗಿ ಇಂಥವು?
'ನದಿ ತಿರುವು' ಎಂದಾಕ್ಷಣ ಮತ್ತೆ ಮತ್ತೆ ನೆನಪಿಗೆ ಬರುವುದು ಚೀನಾದ ತ್ರಿ ಗೋರ್ಜೆಸ್. 'ಯಾಂಗ್ ತ್ಸೆ' ಎಂಬ ನದಿಯನ್ನು ಪಕ್ಕದ ತೊರೆಯೊಂದಕ್ಕೆ ತಿರುವಿಕೊಂಡು ಒಯ್ದು ಜಗತ್ತಿನ ಅತಿ ದೊಡ್ಡ ಅಣೆಕಟ್ಟೆ ನಿರ್ಮಿಸಿ ಬೀಗಬೇಕೆಂದಿತ್ತು ಚೀನಾ. ಅಲ್ಲಿನ ಬುದ್ಧಿವಂತ (?) ಕಮ್ಯುನಿಸ್ಟ್ ಸರಕಾರ ಹಿಂದೆ ಮುಂದೆ ನೋಡದೆ 1.2 ಶತಕೋಟಿ ಜನರನ್ನು ಇನ್ನಿಲ್ಲದಂತೆ ಗೋಳು ಹೊಯ್ದುಕೊಂಡಿತು. ಇಷ್ಟೆಲ್ಲ ಮಾಡಿ ಒಡ್ಡು ಕಟ್ಟಿ ಅಲ್ಲಿ ನೀರು ತುಂಬಿಸಿ, ಹಡಗಿನ ಮೂಲಕ ಸಾಗಿಸುವ 'ಚಾಣಾಕ್ಷ' ಯೋಜನೆ ಉದ್ಘಾಟನೆಯ ದಿನವೇ ಹಳ್ಳ ಹಿಡಿದದ್ದು ಕಂಡು ಇಡೀ ಜಗತ್ತೇ ವಿಸ್ಮಯ ಪಡುವ ಬದಲು ಕೈತಟ್ಟಿ ನಕ್ಕಿತ್ತು. ನೀರು ನಿಂತ ಒಂದೇ ದಿನದಲ್ಲಿ ಅಣೆಕಟ್ಟು ಎಂಟು-ಹತ್ತು ಕಡೆ ಬಿರುಕು ಬಿಟ್ಟಿತು. ಇದನ್ನು ಸರಿಪಡಿಸುವ ಪ್ರಯತ್ನ ಬಿರುಕನ್ನು ಇನ್ನಷ್ಟು ದೊಡ್ಡದಾಗಿಸಿತು. ಕೊನೆಗೆ ಪ್ರವಾಹ ಹೆಚ್ಚುತ್ತ ಹೋದಾಗ ಬೇರೆ ದಿಕ್ಕು ತೋಚದೆ ಕೇವಲ ತಿಂಗಳೊಪ್ಪತ್ತಿನಲ್ಲಿ ಡೈನಾಮೈಟ್ ಇಟ್ಟು ಒಡ್ಡುಗಳನ್ನು ಸಿಡಿಸಿ ಹಾಕಿದರು. ಡಾಕ್ಟರೇ ಈ ಬಗ್ಗೆ ನಿಮಗೆ ಗೊತ್ತೇ?
ಇನ್ನು ನಮ್ಮ ದೇಶದಲ್ಲೇ ಗಂಗಾ ನದಿಯ ನೀರನ್ನು ದಕ್ಷಿಣದತ್ತ ಹರಿಸಬೇಕೆಂಬ ವಿಚಾರಕ್ಕೆ ಬಿಹಾರ್ ಮತ್ತು ಪಶ್ಚಿಮ ಬಂಗಾಳಗಳು ಈಗಾಗಲೇ ವಿರೋಧಿಸಿವೆ. ಗಂಗಾ ನದಿಯ ನೀರಿಗೆ ನೇಪಾಳ ಹಾಗೂ ಬಾಂಗ್ಲಾದೇಶಗಳಲ್ಲೂ ಬೇಡಿಕೆ ಇದೆ. ನದಿ ಜೋಡಣೆ ಯೋಜನೆ ಆಕಾರ ತಳೆಯುತ್ತಿದ್ದಂತೆ ಅನೇಕ ಅಂತರ ರಾಜ್ಯ ಹಾಗೂ ಅಂತರ್ ದೇಶಿ ನೀರು ಹಂಚಿಕೆ ವಿವಾದಗಳು ತಲೆ ಎತ್ತುವುದರಲ್ಲಿ ಅನುಮಾನವೇ ಇಲ್ಲ. ಜೋಡಿಸಬೇಕೆಂದಿರುವ ನದಿಗಳಲ್ಲಿ ಬಹುಪಾಲು ಈಗಾಗಲೇ ತೀವ್ರ ಜಲಮಾಲಿನ್ಯವಿದೆ. ನದಿಗಳನ್ನು ಜೋಡಿಸಿದಾಗ ನೀರಿನೊಡನೆ ಮಾಲಿನ್ಯ ಸೇರಿದಂತೆ, ಬೇಕಾದ್ದು- ಬೇಡದ್ದು ಎಲ್ಲವೂ ಹರಿದುಬರುತ್ತದೆ ಎಂಬುದನ್ನು ನಾವು ಮರೆಯಬಾರದು. 19ನೇ ಶತಮಾನದ ಮಧ್ಯ ಭಾಗದಲ್ಲಿ ರೂಪುಗೊಂಡ ಸರ್ ಆರ್ಥರ್ ಕಾಟನ್ ಯೋಜನೆ, 1972ರಲ್ಲಿ ಅಂದಿನ ಕೇಂದ್ರ ಸಚಿವ ಸಂಪುಟದಲ್ಲಿ ನೀರಾವರಿ ರಾಜ್ಯ ಸಚಿವರೂ ಸ್ವತಃ ನೀರಾವರಿ ತಜ್ಞರೂ ಆಗಿದ್ದ ಡಾ. ಕೆ.ಎಲ್. ರಾವ್ ಪ್ರತಿಪಾದಿಸಿದ ಗಂಗಾ- ಕಾವೇರಿ ನದಿ ಜೋಡಣೆ ಯೋಜನೆ ಹಾಗೂ 1977ರಲ್ಲಿ ಪ್ರಸ್ತಾಪಿತಗೊಂಡ ಕ್ಯಾಪ್ಟನ್ ದಿಲ್ ಷಾದ್ ದಸ್ತೂರ್ ಅವರ ಗಾರ್ಲೆಂಡ್ ಕಾಲುವೆ ಯೋಜನೆಗಳು - ನದಿಗಳ ನಡುವೆ ಸಂಪರ್ಕ ಕಲ್ಪಿಸುವ ಪರಿಕಲ್ಪನೆಗೆ 150 ವರ್ಷಗಳಿಗೂ ಮೀರಿದ ಇತಿಹಾಸವಿದ್ದು ಈ ಅವಧಿಯಲ್ಲಿ ಈ ಮೂರು ಮುಖ್ಯ ಯೋಜನೆಗಳನ್ನು ಪರಿಶೀಲಿಸಿ ಕೈಬಿಡಲಾಗಿದೆ ಎಂಬುದನ್ನು ನಾವು ಮರೆಯಬಾರದು.
ನಮ್ಮ ದೇಶದಲ್ಲಿ ಸಂಪರ್ಕ ಕಾಲುವೆಗಳನ್ನು ತಿರುಗಿಸುವ ಕೋಸಿ- ಮೇಖ್ ಚಿ, ಕೋಸಿ- ಘಾಗ್ರಾ, ಗಂಡಕಿ-ಗಂಗಾ, ಘಾಗ್ರಾ- ಯಮುನಾ, ಶರ್ದಾ- ಯಮುನಾ, ಯಮುನಾ- ರಾಜಸ್ಥಾನ್, ರಾಜಸ್ಥಾನ್- ಸಬರಮತಿ, ಚುನಾರ್- ಸೋನೆ ಬ್ಯಾರೇಜ್, ಸೋನೆ ಆಣೆಕಟ್ಟು- ಗಂಗೆಯ ದಕ್ಷಿಣದ ಉಪನದಿಗಳು, ಬ್ರಹ್ಮಪುತ್ರಾ- ಗಂಗಾ (ಎರಡು ಕಾಲುವೆಗಳು), ಫರಕ್ಕಾ- ಸುಂದರಬನ, ಗಂಗಾ- ದಾಮೋದರ- ಸುವರ್ಣ ರೇಖಾ, ಸುವರ್ಣರೇಖಾ- ಮಹಾನದಿ ಯೋಜನೆಗಳು ಹತ್ತಾರು ವರ್ಷಗಳಿಂದ ನನೆಗುದಿಯಲ್ಲೇ ಇವೆ. ವಿನಾಕಾರಣ ಎನ್ನವುದಕ್ಕಿಂಥ ಅವು ಕಾರ್ಯ ಸಾಧುವಾಗಿದ್ದರೆ ಇಷ್ಟೊತ್ತಿಗೆ ಅನುಷ್ಠಾನಗೊಂಡಿರುತ್ತಿದ್ದವು. ಇನ್ನು ಪರ್ಯಾಯ ದ್ವೀಪ ಕಾಲುವೆಗಳನ್ನು ತಿರುಗಿಸುವ ಯೋಜನೆಗಳಾದ ಮಹಾನದಿ- ಗೋದಾವರಿ, ಗೋದಾವರಿ- ಕೃಷ್ಣಾ, ಇಂಚಂಪಲ್ಲಿ ಕಟ್ಟೆ- ನಾಗಾರ್ಜುನ ಸಾಗರ್ ಟೇಲ್ ಪಾಂಡ್, ಗೋದಾವರಿ (ಪೋಲಾವರಂ)-ಕೃಷ್ಣಾ (ವಿಜಯವಾಡಾ), ಕೃಷ್ಣಾ (ಆಲಮಟ್ಟಿ)- ಪೆನ್ನಾರ್, ಕೃಷ್ಣಾ (ಶ್ರೀಶೈಲಂ)- ಪೆನ್ನಾರ್, ಕೃಷ್ಣಾ (ನಾಗಾರ್ಜುನ ಸಾಗರ)- ಪೆನ್ನಾರ್ (ಸೋಮಶೀಲಾ), ಪೆನ್ನಾರ್ (ಸೋಮಶೀಲಾ)- ಕಾವೇರಿ (ಗ್ರ್ಯಾಂಡ್ ಆಣೆಕಟ್ಟು), ಕಾವೇರಿ (ಕಾಟಲೈ)- ವೈಗೈ-ಗುಂಡರ್, ಕೆನ್- ಬೆಟ್ಟಾ, ಪರ್ಬತಿ- ಕಾಲಿಸಿಂಧ್ ಚಂಬಲ್, ಪಾರ್- ತಾಪಿ- ನರ್ಮದಾ, ಡಾಮನ್ ಗಂಗಾ- ಹೇಮಾವತಿ, ಪಾಂಬ- ಅಚನ್ ಕೋವಿಲ್ ವೈಪ್ಪಾರ್ ಮುಂತಾದವದ್ದೂ ಇದೇ ಕಥೆ.
ಈ ಪರಿಯ ಕಾಡು ಸೀಳುವ, ನದಿಗಳ ಪಾತ್ರ ಹಿರಿದಾಗಿಸುವ, ಮನೆಯ ನಲ್ಲಿಯ ಪೈಪ್ ಬಗ್ಗಿಸಿ, ತಿರುಗಿಸಿದಂತೆ ನೀರ ಅಭಿವೃದ್ಧಿ ನಮಗೆ ಬೇಕೆ? ಹಾಗಾಗಿ, ಕೋಟ್ಯಂತರ ರುಪಾಯಿ ಬಂಡವಾಳ ಬೇಡುವ, ಅನೇಕ ಅನಿಶ್ಚಿತತೆಗಳನ್ನು ಮೈಗೂಡಿಸಿಕೊಂಡಿರುವ, ಆಘಾತಕಾರಿ ಪರಿಸ್ಥಿತಿ ಎದುರಿಸಬೇಕಾದ ಸಂಕಷ್ಟಗಳನ್ನು ಹೊತ್ತು ಬರಲಿರುವ ನದಿಗಳ ಜೋಡಣೆಯಂಥ ಬೃಹತ್ ಯೋಜನೆಗಳಿಗೆ ಶ್ರೀಕಾರ ಹಾಕದೇ, ನಮ್ಮ ದೇಶದ ವಿವಿಧ ಭಾಗಗಳು ಪ್ರತಿ ವರ್ಷವೂ ಹಾಗೂ ವರ್ಷದಿಂದ ವರ್ಷಕ್ಕೆ ಸಮರ್ಥವಾಗಿ ಎದುರಿಸುವ ಬರ ನಿರೋಧಕ ಜಾಣ್ಮೆಯನ್ನು, ಕ್ಷಾಮ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬಹುದೆಂಬುದನ್ನು ಅನೇಕ ಸಮುದಾಯ ಕೇಂದ್ರಿತ ಯೋಜನೆಗಳು ತೋರಿಸಿಕೊಟ್ಟಿವೆ. ಸ್ಥಳೀಯ ಪರಂಪರೆ ಹಾಗೂ ಜಾಣ್ಮೆಯನ್ನು ಆಧರಿಸಿ ಬರ ನಿರೋಧಕ ತಂತ್ರಜ್ಞಾನ ಹಾಗೂ ನೆರೆ ನಿಯಂತ್ರಿಸುವ ಉಪಕ್ರಮಗಳನ್ನು ಕಟ್ಟಿಕೊಳ್ಳುವುದು ಉತ್ತಮ. ಅದು ಬಿಟ್ಟು ಮೊದಲೇ ಬರದಿಂದ ನಲುಗಿದ ಕೋಲಾರದಂಥ ಜಿಲ್ಲೆಯ ಜನರಲ್ಲಿ ಸಲ್ಲದ, ಆಗುಹೋಗದ ಹುಸಿ ಕನಸುಗಳನ್ನು ಬಿತ್ತದಿರಿ, ಪ್ಲೀಸ್!
- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in