ಅಂಕಣಗಳು

ಪ್ರಶಸ್ತಿ ಪುರಸ್ಕಾರಗಳು ಆಟಿಕೆಗಳಾಗಬಾರದು

Published On :

ಪ್ರಶಸ್ತಿ-ಪುರಸ್ಕಾರಗಳು, ಸನ್ಮಾನಗಳು ಯಾರು ಬೇಡವೆನ್ನುತ್ತಾರೆ ಹೇಳಿ? ನಿಜ, ವ್ಯಕ್ತಿಯ ಬದುಕಿನ ಸಾಧನೆಗಳಿಗೆ ಉತ್ತೇಜನ, ಪ್ರೋತ್ಸಾಹ ಕೊಡುವ ದಿಶೆಯಲ್ಲಿ ಸನ್ಮಾನಗಳು, ಪ್ರಶಸ್ತಿ-ಪುರಸ್ಕಾರಗಳು ಅಗತ್ಯ ಎನ್ನುವಲ್ಲಿ ಎರಡು ಮಾತಿಲ್ಲ. ಆದರೆ ಅದು ಸಿಗದೇ ಇದ್ದರೆ ಸಾಧನೆ ಎನ್ನುವುದು ಸಾಧನೆಯೇ ಅಲ್ಲ ಅಥವಾ ಮಾಡಿದ ಸಾಧನೆಗೆ ಬೆಲೆಯೇ ಇಲ್ಲವೆಂದು ಅರ್ಥವಲ್ಲ. ವ್ಯಕ್ತಿಯೊಬ್ಬ ಯಾವುದೇ ತನ್ನ ಸಾಧನೆಯನ್ನು ತನ್ನ ಕರ್ತವ್ಯದ ಭಾಗವಷ್ಟೇ ಎಂದು ಪರಿಗಣಿಸಿದಾಗ ಇಂಥ ಆಸೆಗಳು ಕಾಡುವುದಿಲ್ಲ. ಸಂಘ ಸಂಸ್ಥೆಗಳು, ಸರ್ಕಾರ ತನ್ನ ಸಾಧನೆಗಳನ್ನು ಗುರುತಿಸಬೇಕೆಂಬ ದುರಾಸೆ ಮಾತ್ರ ಸಲ್ಲ.
ಏಕೆಂದರೆ ಇಂದಿನ ದಿನಗಳಲ್ಲಿ ಪ್ರಶಸ್ತಿ-ಪುರಸ್ಕಾರಗಳಿಗಾಗಿ ಹಂಬಲಿಸುವವರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಅದೇ ರೀತಿ ಅವುಗಳನ್ನು ದಯಪಾಲಿಸುವ ವ್ಯಕ್ತಿ, ಸಂಘ ಸಂಸ್ಥೆಗಳ ಸಂಖ್ಯೆಯೂ ಗಣನೀಯವಾಗಿದೆ. ರಾಜ್ಯ-ಹೊರರಾಜ್ಯ ಮಾತ್ರವಲ್ಲದೇ ಜಿಲ್ಲೆ, ತಾಲೂಕು ಮಟ್ಟದಲ್ಲೂ ವೈವಿಧ್ಯಮಯ ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗುತ್ತವೆ. ಕೆಲವು ಸಂಸ್ಥೆಗಳಿಗೆ ನಿರ್ದಿಷ್ಟ ಮೊತ್ತವನ್ನು ಸಲ್ಲಿಸಿದರೆ ಅವರು ಅಪೇಕ್ಷಿಸುವ ಪ್ರಶಸ್ತಿ-ಪುರಸ್ಕಾರಗಳನ್ನೇ ನೀಡಲಾಗುತ್ತದೆ! ಅದರ ಬೆಲೆ ತಾಲೂಕು ಮಟ್ಟದಿಂದಾರಂಭಿಸಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದವರೆಗೂ ಬೇರೆ ಬೇರೆ ಹಂತಗಳ ಮೌಲ್ಯಗಳನ್ನೊಳಗೊಂಡಿರುತ್ತದೆ! ಹಾಗೇನೇ ಅವುಗಳ ದರ-ಮೊತ್ತವೂ ವಿಭಿನ್ನವಾಗಿರುತ್ತದೆ. ಇದು ಖಾಸಗಿ ವಲಯದಲ್ಲಾದರೆ ಇನ್ನು ಸರ್ಕಾರಿ ವಲಯದಲ್ಲಿ ಮತ್ತಷ್ಟು ಗೋಜಲು ಗೋಜಲಾಗಿವೆ. ಯಾವುದೇ ಪ್ರಶಸ್ತಿ-ಪುರಸ್ಕಾರಗಳು ಬೇಕಿದ್ದರೆ ಆಯಾ ವ್ಯಕ್ತಿಗಳೇ ಅರ್ಜಿ ಗುಜರಾಯಿಸಬೇಕು. ತನ್ನ ಸಾಧನೆಗಳ ಪಟ್ಟಿಗಳನ್ನು ಲಗತ್ತಿಸಬೇಕು. ಮಾತ್ರವಲ್ಲ ಸೂಕ್ತ ರೀತಿಯ ಶಿಫಾರಸ್ ಕೂಡಾ ಮಾಡಿಸಬೇಕು. ಕೆಲವೊಮ್ಮೆ ಹಮ್ಮಿಣಿಗಳನ್ನೂ ಸಲ್ಲಿಸಬೇಕಾಗುತ್ತದೆ! ಇಷ್ಟೆಲ್ಲಾ ಸರ್ಕಸ್ ಮಾಡಿ ಪ್ರಶಸ್ತಿ-ಪುರಸ್ಕಾರವನ್ನು ಪಡೆಯಬೇಕೆಂಬ ಹಪಾಹಪಿ ನಿಜವಾದ ಸಾಧಕರಿಗಂತೂ ಇರಲಾರದು. ವಿಷಾದದ ಸಂಗತಿ ಎಂದರೆ ನಿಜವಾದ "ಸಾಧಕರು" ಇಂತಹ ಅಬ್ಬರದ ಸಾಧಕರ ಹಾರಾಟ-ಹೋರಾಟಗಳ ನಡುವೆ ಎಲ್ಲೋ ಮರೆತುಹೋಗುತ್ತಾರೆ ಅಥವಾ ಎಲೆಮರೆಯ ಕಾಯಿಯಂತಿರುತ್ತಾರೆ.
ಈ ಹಿನ್ನೆಲೆಯಲ್ಲಿ ಪ್ರಶಸ್ತಿ-ಪುರಸ್ಕಾರಗಳನ್ನು ಹಂಚುವ ಖಾಸಗಿ ಅಥವಾ ಸರ್ಕಾರಿ ವ್ಯವಸ್ಥೆಗಳು ತಾವು ನೀಡುವ ಸನ್ಮಾನಗಳ ಗೌರವವನ್ನು ಕಾಪಾಡಿಕೊಳ್ಳುವುದು ಹೆಚ್ಚು ಸೂಕ್ತವಾಗುತ್ತದೆ. ಯಾವುದೇ ಕಾರಣಕ್ಕೂ ಪ್ರಶಸ್ತಿ ಪುರಸ್ಕಾರಗಳಿಗಾಗಿ ಅರ್ಜಿ, ಶಿಫಾರಸುಗಳನ್ನು ಮಾನ್ಯ ಮಾಡದೇ ಸ್ವತಃ ತಾವಾಗಿಯೇ ಅದನ್ನು ನೀಡಿ ಗೌರವಿಸಬೇಕಾದಲ್ಲಿ ವ್ಯಕ್ತಿಯ ಸಾಧನೆಯ ಸಮಗ್ರ ಮಾಹಿತಿಗಳನ್ನು ವಸ್ತುನಿಷ್ಠವಾಗಿ ಕಲೆಹಾಕಬೇಕು. ಮಾತ್ರವಲ್ಲದೆ ವ್ಯಕ್ತಿಯ ಸಾಧನೆ ಸಮಾಜಕ್ಕೆ ನಿರ್ದಿಷ್ಟ ಕ್ಷೇತ್ರಕ್ಕೆ ಹೇಗೆ ಮತ್ತು ಎಷ್ಟರಮಟ್ಟಿಗೆ
ಪೂರಕ ಮತ್ತು ಮಾದರಿಯಾಗುತ್ತದೆ ಎಂಬುದನ್ನು ಬಹಿರಂಗಪಡಿಸುವುದು ನಿಜವಾದ ಪುರಸ್ಕಾರವಾದೀತು ಅಲ್ಲವೇ? ಆಗ ಮಾತ್ರ ಪ್ರಶಸ್ತಿ-ಪುರಸ್ಕಾರಗಳಿಗೆ ಮತ್ತು ಅವನ್ನು ಕೊಡ ಮಾಡುವ ಸಂಘ ಸಂಸ್ಥೆ/ ಸರ್ಕಾರಗಳ ಆಶಯಗಳಿಗೆ ಘನತೆ ಹಾಗೂ ಮೌಲ್ಯ ಬಂದೀತು. ಇಲ್ಲವಾದಲ್ಲಿ ಸಂತೆಯಲ್ಲಿ ಸಿಗುವ ಪೀಪಿ, ಆಟಿಕೆಗಳಂತೆ ಅವುಗಳ ಪಾಡಾದೀತು!

- ಚನ್ನಬಸವ
ಚಿತ್ರದುರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.