

ಅಕ್ಟೋಬರ್ 26. ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ, ಗಣರಾಜ್ಯೋತ್ಸವದ ನಮೂನೆಯಲ್ಲೇ ಈ ದಿನವೂ ಇನ್ನು ರಾಷ್ಟ್ರ ಜಾಗೃತಿಯ ಮಹತ್ವದ ದಿನಾಂಕವಾಗಿ ಆಚರಣೆಗೆ ಬರಬೇಕಿದೆ. ಮೊನ್ನೆಯಷ್ಟೆ ಸರಿದ ಈ ತಾರೀಖು ಜಮ್ಮು-ಕಾಶ್ಮೀರ ರಾಜ್ಯವು ಭಾರತದಲ್ಲಿ ವಿಲೀನವಾದ ದಿನ.
ಜಮ್ಮು-ಕಾಶ್ಮೀರ ಎಂಬ ಹೆಸರು ಕೇಳಿದೊಡನೆ ಸಾಮಾನ್ಯರಿಗೆ ಭಾವಾವೇಶದ ಜತೆ ಕೊನೆಯಲ್ಲಿ ನಿಟ್ಟುಸಿರೂ ಕಾಯಂ ಎಂಬಂತೆ ಆಗಿದೆ. ನಮ್ಮ ನೆಲವನ್ನು ಕಬಳಿಸಿ, ಇನ್ನಷ್ಟು ಆಕ್ರಮಿಸುವುದಕ್ಕೆ ಹೊಂಚು ಹಾಕಿರುವ ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳ ವಿರುದ್ಧ ದೇಶಪ್ರೇಮಿಗಳ ಸಿಟ್ಟು. ನೆಹರು ಧಾಡಸಿತನ ತೋರಿದ್ದರೆ ಎಲ್ಲವೂ ಸರಿಹೋಗುತ್ತಿತ್ತು ಎಂದು ಚಿಮ್ಮುವ ಆಕ್ರೋಶ. ಇಂಥ ಭಾವಾವೇಶಗಳು ತಪ್ಪು ಎಂದಲ್ಲ. ಆದರೆ ಹೀಗೆ ಹುಟ್ಟಿಕೊಳ್ಳುವ ಕಿಡಿ ಕೇವಲ ಭಾವಾವೇಶದಲ್ಲಿ ಬೇಯಿಸದೇ ನಮ್ಮನ್ನು ತರ್ಕದೆಡೆಗೆ ನಡೆಸಬೇಕು. ಅದಾಗುತ್ತಿಲ್ಲ. ಈ ಬಗ್ಗೆ ಎಲ್ಲ ಬಿಸಿ ಬಿಸಿ ಮಾತುಗಳಾದ ಮೇಲೆ, ಅಯ್ಯೋ ಬಿಡಪ್ಪಾ, ಈ ಕಾಶ್ಮೀರ ಸಮಸ್ಯೆ ಬಗೆಹರಿಯುವ ಥರ ಕಾಣಿಸ್ತಾ ಇಲ್ಲ ಎಂಬ ನಿರಾಸೆಯೊಂದಿಗೆ ಚರ್ಚೆ ಮುಗಿಯುತ್ತದೆ. ಹಾಗಾದರೆ ಈ ನಿರಾಸೆಯೇ ನಿಜವೇ? ವಾಸ್ತವದಲ್ಲಿ ಎಲ್ಲಿಗೂ ಕೊಂಡೊಯ್ಯದ ಅತಿ ಭಾವಾವೇಶ ಮತ್ತು ಹತಾಶ-ಆತಂಕಿತ ದೃಷ್ಟಿಗಳೆರಡಕ್ಕೂ ಅರಿವಿನ ಕೊರತೆಗಳೇ ಕಾರಣ ಎನ್ನುತ್ತದೆ 'ಜಮ್ಮು ಕಾಶ್ಮೀರ ಅಧ್ಯಯನ ಸಮಿತಿ'. ಎಲ್ಲರೂ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿರುವ 'ಕಾಶ್ಮೀರ ಸಮಸ್ಯೆ'ಯ ಕಾನೂನಾತ್ಮಕ ಮಗ್ಗುಲುಗಳೇನು ಎಂಬ ಬಗ್ಗೆ ಜಮ್ಮು-ಕಾಶ್ಮೀರ ವಿಷಯ ಪರಿಣತರಾಗಿರುವ ಅರುಣ್ ಕುಮಾರ್ ಅವರ ನೇತೃತ್ವದಲ್ಲಿ ಆಳ ಅಧ್ಯಯನ ನಡೆಸಿರುವ ಸಮತಿ ಹಲವು ಬೆರಗಿನ ಅಂಶಗಳನ್ನು ತಾರ್ಕಿಕವಾಗಿ ತೆರೆದಿಟ್ಟಿದೆ. 'ಜಮ್ಮು ಕಾಶ್ಮೀರ ಅಧ್ಯಯನ ಸಮಿತಿ'ಯ ಬೆಂಗಳೂರು ವಿಭಾಗದ ಎಸ್ ಕಿರಣ್ ಕುಮಾರ್ ಅವರು, ಅಧ್ಯಯನ ತಂಡವು ಮಾಡಿದ ಚರ್ಚೆ-ಸಂವಾದಗಳ ಆಧಾರದಲ್ಲಿ ಪ್ರಶ್ನೋತ್ತರ ಮಾಲಿಕೆಯೊಂದನ್ನು ಸಿದ್ಧಪಡಿಸಿದ್ದಾರೆ. 56 ಪುಟಗಳ ಇಂಗ್ಲಿಷ್ ಕಿರು ಹೊತ್ತಗೆಯನ್ನು 'ದ ಮಿಥ್ ಆಫ್ ಕಾಶ್ಮೀರ್ ಪ್ರಾಬ್ಲಂ' ಎಂಬ ಶೀರ್ಷಿಕೆಯಲ್ಲಿ ರಾಷ್ಟ್ರೋತ್ಥಾನ ಮುದ್ರಣಾಲಯ ಹೊರತಂದಿದೆ. ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕಿರುಹೊತ್ತಗೆ, ಹೇಗೆ 'ಕಾಶ್ಮೀರ ಸಮಸ್ಯೆ' ಎಂಬ ಕಟ್ಟುಕತೆಯನ್ನು ಹಲವು ವರ್ಷಗಳಿಂದ ಪೋಷಿಸಿಕೊಂಡು ಬರಲಾಗುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದೆ.
ಹಾಗಾದರೆ ಕಾಶ್ಮೀರ ಸಮಸ್ಯೆಯನ್ನು ಪೋಷಿಸಿ, ಬೃಹತ್ತಾಗಿ ಬಿಂಬಿಸುತ್ತಿರುವ ಅಂಶಗಳು ಯಾವವು? 370ನೇ ವಿಧಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದೆ, ಈ ರಾಜ್ಯ ಒಂದು ವಿವಾದಗ್ರಸ್ತ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದಲ್ಲಿ ಜನರ ಆಶಯವನ್ನು ಗಣನೆಗೆ ತೆಗೆದುಕೊಂಡು ನಿರ್ಧಾರಕ್ಕೆ ಬರುವ ನಿಟ್ಟಿನಲ್ಲಿ ಜನಮತಗಣನೆ ನಡೆಸುವುದಕ್ಕೆ ವಿಶ್ವಸಂಸ್ಥೆಗೆ ಭಾರತ ಮಾತುಕೊಟ್ಟಿದೆ ಎಂಬ ಅರ್ಧಸತ್ಯಗಳನ್ನು ಮುಂದಿಟ್ಟು ಜಮ್ಮು-ಕಾಶ್ಮೀರವೇ ಭಾರತದಿಂದ ಸಿಡಿಯಲು ತಹತಹಿಸುತ್ತಿರುವಂತೆ ಚಿತ್ರಿಸಲಾಗುತ್ತಿದೆ.
ಜನಮತಗಣನೆ ಎಂಬುದು ಜಮ್ಮು-ಕಾಶ್ಮೀರದ ವಿಷಯದಲ್ಲಿ ಪ್ರತ್ಯೇಕವಾಗಿ ಕೊಟ್ಟ ಭರವಸೆ ಅಲ್ಲವೇ ಅಲ್ಲ. 1947ರ ಎಲ್ಲ ಪ್ರಿನ್ಸ್ಲಿ ಸ್ಟೇಟ್ಸ್ಗಳ ವಿಷಯದಲ್ಲಿ ನೀಡಿದ್ದ ಈ ಬದ್ಧತೆ 1950ರಲ್ಲೇ ಪೂರ್ಣಗೊಂಡಿದೆ. ರಾಜರ ಅಧೀನದಲ್ಲಿದ್ದ ಬೇರೆ ರಾಜ್ಯಗಳು ಅನುಸರಿಸಿದ ಮಾರ್ಗವನ್ನೇ ಜಮ್ಮು-ಕಾಶ್ಮೀರವೂ ಅನುಸರಿಸಿದೆಯೇ ಹೊರತು ಭಿನ್ನವಾದ ಪ್ರಕ್ರಿಯೆ ಏನಿಲ್ಲ. ಹೀಗಾಗಿ ಜಮ್ಮು-ಕಾಶ್ಮೀರಕ್ಕೆ ಮಾತ್ರ ಸಮಸ್ಯೆ ಏಕೆ ಉದ್ಭವವಾಗಬೇಕು? ಆವತ್ತಿನ ಭಾರತದ ಶೇ. 65 ಭಾಗ ಬ್ರಿಟಿಷರ ನೇರ ಆಡಳಿತದಲ್ಲಿದ್ದರೆ, 35 ಶೇಕಡ ಭಾಗವು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ರಾಜರುಗಳ ಆಳ್ವಿಕೆಯಲ್ಲಿತ್ತು. ಬ್ರಿಟಿಷರು ತೆರಳುವ ವೇಳೆಗೆ ಅವರೂ ಸ್ವತಂತ್ರರೇ ಆದರೂ ಪ್ರಾಯೋಗಿಕ ದೃಷ್ಟಿಯಿಂದ ಅವರಿಗೆ ಭಾರತ ಇಲ್ಲವೇ ಪಾಕಿಸ್ತಾನ ಎರಡರಲ್ಲಿ ಒಂದು ದೇಶಕ್ಕೆ ಸೇರಿಕೊಳ್ಳುವಂತೆ ಸೂಚಿಸಲಾಯಿತು. ಹೀಗೆ ಮಾಡುವಾಗ ಅಲ್ಲಿನ ಪ್ರಜೆಗಳ ಆಶಯವನ್ನು ಕೇಳಿ ಎಂಬ ಸೂಚನೆ ಇದ್ದಿದ್ದೂ ಹೌದು. ಆದರೆ ಇದಕ್ಕೂ ಮುಂಚಿತವಾಗಿ ಇದ್ದ ಷರತ್ತೆಂದರೆ ರಾಜಾಡಳಿತದ ಆ ಪ್ರಾಂತ್ಯವು ಯಾವ ದೇಶವನ್ನು ಸೇರಲಿದೆಯೋ ಅದರೊಂದಿಗೆ ಭೌಗೋಳಿಕವಾಗಿ ಅದು ನಿರಂತರತೆಯ ಕೊಂಡಿ ಇಟ್ಟುಕೊಂಡಿರಬೇಕು. ಹೀಗಾಗಿ ಆ ಸಮಯದಲ್ಲಿ ರಾಜಾ ಹರಿಸಿಂಗ್ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದಕ್ಕೆ ವಿರೋಧಿಸಿ ಭಾರತ ಸೇರಿದ್ದನ್ನು, ಹೈದರಾಬಾದ್ ನಿಜಾಮನು ಭಾರತದೊಂದಿಗೆ ವಿಲೀನವಾಗುವುದಕ್ಕೆ ಪ್ರತಿಭಟಿಸಿದ್ದ ವಿದ್ಯಮಾನದೊಂದಿಗೆ ಹೋಲಿಸುವಂತೆಯೇ ಇಲ್ಲ. ಏಕೆಂದರೆ ಹೈದರಾಬಾದ್, ಪಾಕ್ನೊಂದಿಗೆ ಗಡಿಯನ್ನು ಹೊಂದಿಯೇ ಇಲ್ಲವಾದ್ದರಿಂದ ಅದರೊಂದಿಗೆ ವಿಲೀನವಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಇನ್ನು ಕಾಶ್ಮೀರದ ರಾಜ ಭಾರತದೊಂದಿಗೆ ವಿಲೀನವಾಗುವುದಕ್ಕೆ ನಿರ್ಧರಿಸಿದಾಗ ಅಲ್ಲಿನ ಬಹುಸಂಖ್ಯಾತರು ವಿರೋಧಿಸಿದ ಉದಾಹರಣೆಯೂ ಇಲ್ಲ. ಅಲ್ಲದೇ ಕಾಶ್ಮೀರ ಕಣಿವೆಯಲ್ಲಿ ಶೇಖ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ಸಕ್ರಿಯವಾಗಿದ್ದ ಅವತ್ತಿನ ಏಕೈಕ ರಾಜಕೀಯ ಪಕ್ಷವು ಹರಿಸಿಂಗ್ ಅವರ ವಿಲೀನ ನಿರ್ಧಾರವನ್ನು ಸ್ವಾಗತಿಸಿತ್ತು. ಇಷ್ಟಾಗಿಯೂ ಪಾಕಿಸ್ತಾನ ಇವತ್ತಿಗೂ ಬೊಬ್ಬೆ ಹಾಕುತ್ತಿರುವುದೇನೆಂದರೆ ಜಮ್ಮು-ಕಾಶ್ಮೀರವು ಮುಸ್ಲಿಂ ಬಾಹುಳ್ಯದ ರಾಜ್ಯವಾಗಿರುವುದರಿಂದ ಅದು ಭಾರತಕ್ಕೆ ಸೇರಬೇಕು ಅಂತ. ಇದೇ ತರ್ಕವನ್ನು ಆಧರಿಸುವುದಾದರೆ ಇವತ್ತಿನ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಉಮರ್ಕೋಟ್ ಪಾಕ್ ಜತೆ ವಿಲೀನವಾಗುವಂತೆಯೇ ಇರಲಿಲ್ಲ. ಏಕೆಂದರೆ ಶೇ. 90 ಹಿಂದೂ ಪ್ರಜೆಗಳನ್ನು ಹೊಂದಿದ್ದ ಆ ಪ್ರಾಂತ್ಯವನ್ನು ಹಿಂದೂ ರಾಜನೇ ನೋಡಿಕೊಳ್ಳುತ್ತಿದ್ದ. ಹಾಗೆ ನೋಡಿದರೆ ಪಾಕ್ನ ದೊಡ್ಡ ಪ್ರಾಂತ್ಯವಾಗಿರುವ ಬಲೂಚಿಸ್ತಾನದಲ್ಲಿರುವ ಕಲಾತ್ನ ನವಾಬನು ಆಗ ಭಾರತದ ಉಪ ಪ್ರಧಾನಿಯಾಗಿದ್ದ ಸರ್ದಾರ್ ಪಟೇಲರಿಗೆ ತಾನು ಭಾರತದೊಂದಿಗೆ ವಿಲೀನವಾಗುವುದಾಗಿ ಕೋರಿಕೊಂಡಿದ್ದ! ಆದರೆ ಬಲೂಚಿಸ್ತಾನದೊಂದಿಗೆ ಭಾರತ ಗಡಿ ಹಂಚಿಕೊಂಡಿಲ್ಲವಾದ್ದರಿಂದ ಭೌಗೋಳಿಕ ನಿರಂತರತೆ ಕೊರತೆಯಿಂದ ಹಾಗೆ ಮಾಡಲಾಗದು ಎಂದರು ಪಟೇಲರು. ಅಷ್ಟಕ್ಕೆ ಸುಮ್ಮನಾಗದ ನವಾಬ, ಪಾಕಿಸ್ತಾನ ಹಾಗೂ ಪೂರ್ವ ಪಾಕಿಸ್ತಾನಗಳ (ಈಗಿನ ಬಾಂಗ್ಲಾದೇಶ) ಉದಾಹರಣೆ ಕೊಟ್ಟು, ನೀವು ಸಮ್ಮತಿಸುವುದಾದರೆ ಅದೇ ರೀತಿ ಪಾಕಿಸ್ತಾನದ ಮಗ್ಗುಲಿನಲ್ಲಿ ಪಶ್ಚಿಮ ಹಿಂದುಸ್ಥಾನ ಏಕಿರಬಾರದು ಎಂದು ಕೇಳಿದ್ದ. ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳು ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್ನಲ್ಲೇ ಉಲ್ಲೇಖಿತವಾಗಿರುವ ಸಂಗತಿ ಎಂದು ಹೇಳಿ ಪಟೇಲರು ಅಂತರ ಕಾಪಾಡಿಕೊಂಡರು.
ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿದಾಗ 'ಇಂಡಿಯನ್ ಇಂಡಿಪೆಂಡೆನ್ಸ್ ಆ್ಯಕ್ಟ್' ಪ್ರಕಾರವೇ ಜಮ್ಮು-ಕಾಶ್ಮೀರದ ವಿಲೀನ ಕ್ರಮಬದ್ಧವಾಗಿ ಮುಗಿದುಹೋಗಿದೆ. ಇಲ್ಲದ ವಿವಾದವನ್ನು ವಿವಾದ ಎಂದು ಬಿಂಬಿಸುತ್ತಿರುವುದೇ ನಿಜವಾದ ಸಮಸ್ಯೆ. ಈಗ ಆಗಬೇಕಿರುವುದು ಆಕ್ರಮಿತ ಪ್ರದೇಶಗಳಿಂದ ಪಾಕಿಸ್ತಾನವು ಹಿಂದಡಿ ಇಟ್ಟು ರಾಜಾ ಹರಿಸಿಂಗ್ರ ಕಾನೂನುಬದ್ಧ ನಿರ್ಧಾರವನ್ನು ಗೌರವಿಸುವುದು ಹಾಗೂ ರಾಜಕೀಯ ಕಾರಣಗಳಿಗಾಗಿ ತತ್ಕಾಲಕ್ಕೆ ಎಂದು ಜಾರಿ ಮಾಡಿದ್ದ 370ನೇ ವಿಧಿಯನ್ನು ತೆರವುಗೊಳಿಸಿ, ಭಾರತದ ಸಂವಿಧಾನವನ್ನು ಜಮ್ಮು-ಕಾಶ್ಮೀರಕ್ಕೆ ಇಡಿಯಾಗಿ ಜಾರಿಗೊಳಿಸುವುದು.
ಹೀಗೆಂದಕೂಡಲೇ ಮತ್ತೆ ಜನಮತಗಣನೆ ಒತ್ತಾಯದೊಂದಿಗೆ, ಕಾಶ್ಮೀರದ ಮೇಲೆ ಭಾರತದ ಆಡಳಿತ ಹೇರಲಾಗಿದೆ ಎಂದೆಲ್ಲ ನಮ್ಮದೇ ಬುದ್ಧಿಜೀವಿಗಳು ವಾದಕ್ಕೆ ಬೀಳುತ್ತಾರೆ. ದಿಲೀಪ್ ಪಡಗಾಂವ್ಕರ್, ರಾಧಾ ಕುಮಾರ್ ಹೀಗೆ ಕಾಶ್ಮೀರಿ ಸಂಧಾನಕಾರರ ತಂಡ ಕೂಡ ಮಾತನಾಡುವುದು ಇದೇ ಧಾಟಿಯಲ್ಲಿ. ಇವರೆಲ್ಲರ ಪ್ರಕಾರ ಜಮ್ಮು-ಕಾಶ್ಮೀರವು ಭಾರತದಿಂದ ಸಿಡಿಯುವುದಕ್ಕೆ ತಹತಹಿಸುತ್ತಿದೆ!
ಜಮ್ಮು-ಕಾಶ್ಮೀರವೆಂದರೆ ಕೇವಲ ಕಾಶ್ಮೀರ ಮಾತ್ರ ಎಂದು ಬಿಂಬಿಸುತ್ತಿರುವವರ ಸುಂದರ ಸುಳ್ಳಿದು. ಪ್ರತ್ಯೇಕತಾವಾದಕ್ಕೆ ಸಂಬಂಧಿಸಿದ ಹಿಂಸಾಚಾರಗಳು ನಡೆಯುತ್ತಿರುವುದು ಪ್ರಮುಖವಾಗಿ ಕಾಶ್ಮೀರದ ಐದು ಜಿಲ್ಲೆಗಳಲ್ಲಿ ಮಾತ್ರ. ಅದು ಇಡೀ ರಾಜ್ಯದ ಸಮಸ್ಯೆ ಅಲ್ಲವೇ ಅಲ್ಲ. ಜಮ್ಮು-ಕಾಶ್ಮೀರ ರಾಜ್ಯವಿರುವುದು 1,01,000 ಚದರ ಕಿಲೋಮೀಟರ್ಗಳಲ್ಲಿ. 59 ಸಾವಿರ ಚ.ಕಿಮೀ ಲಡಾಕ್, 27 ಸಾವಿರ ಚ.ಕಿಮೀ ಜಮ್ಮು ಇದ್ದರೆ, 15 ಸಾವಿರ ಚ.ಕಿಮೀ ಮಾತ್ರ ಕಾಶ್ಮೀರವಿದೆ. ಲಡಾಕ್ನ ಐದರಲ್ಲಿ ನಾಲ್ಕು ಕಣಿವೆ ಪ್ರದೇಶಗಳಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ. ಕಾರ್ಗಿಲ್ನ ಸುರು ಕಣಿವೆಯಲ್ಲಿ ಮಾತ್ರ ಮುಸ್ಲಿಮರು ಬಹುಸಂಖ್ಯಾತರು. ಅವರೂ ಶಿಯಾ ಪಂಗಡದವರು. ಜಮ್ಮುವಿನಲ್ಲಿ ಶೇಕಡ 70ರಷ್ಟು ಹಿಂದೂ ಜನಸಂಖ್ಯೆ ಇದೆ. ಒಟ್ಟಾರೆಯಾಗಿ ಬಹುಸಂಖ್ಯೆ ಜನರು ಭಾರತದೊಂದಿಗೆ ಗುರುತಿಸಿಕೊಳ್ಳುವ ರಾಷ್ಟ್ರವಾದಿಗಳು. ಜಮ್ಮು-ಕಾಶ್ಮೀರದ ಒಟ್ಟೂ ಮುಸ್ಲಿಂ ಜನಸಂಖ್ಯೆಯಲ್ಲಿ ಶೇ. 14ರಷ್ಟು ಗುಜ್ಜರ್ಗಳು, ಶೇ.8ರಷ್ಟು ಪಹಡಿ ರಜಪೂತ ಮುಸ್ಲಿಮರು, ಶೇ.10 ಶಿಯಾ ಮುಸ್ಲಿಮರು ಇದ್ದಾರೆ. ಪ್ರತ್ಯೇಕತಾವಾದಿ ನಾಯಕರು ಎಂದು ಮಾಧ್ಯಮದೆದುರು ಅಬ್ಬರಿಸುತ್ತಿರುವವರಲ್ಲಿ ಈ ಸಮುದಾಯಗಳ ಒಬ್ಬ ವ್ಯಕ್ತಿಯನ್ನೂ ನೀವು ಕಾಣಲಾರಿರಿ!
ರಾಷ್ಟ್ರವಾದಿಗಳೇ ಬಹುಸಂಖ್ಯಾತರಾಗಿರುವ ರಾಜ್ಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿಗಳಂಥ ಪಕ್ಷದ ಪಾರುಪತ್ಯ ಸಾಧ್ಯವಾಗುತ್ತಿರುವುದು ಹೇಗೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಉದ್ಭವಿಸುತ್ತದೆ. 370ನೇ ವಿಧಿ ಪರಿಣಾಮವಾಗಿ ಭಾರತ ಸಂವಿಧಾನದ ಹೆಚ್ಚಿನ ನಿಯಮಗಳು ಈ ರಾಜ್ಯಕ್ಕೆ ಅನ್ವಯವಾಗುತ್ತಲೇ ಇಲ್ಲ. ಪ್ರಜಾ ಪ್ರತಿನಿಧಿ ಕಾಯ್ದೆ ಅಲ್ಲಿಗೆ ಲಾಗೂ ಆಗಿಲ್ಲವಾದ್ದರಿಂದ ಮತಕ್ಷೇತ್ರ ವಿಂಗಡನೆ ಸೂಕ್ತವಾಗಿಲ್ಲ. ಕಾಶ್ಮೀರಕ್ಕಿಂತ ಜಮ್ಮು ಶೇ.60ಕ್ಕೂ ಹೆಚ್ಚು ಪ್ರದೇಶ ಹೊಂದಿದೆ. ಜನಸಂಖ್ಯೆ ಮತ್ತು ಮತಗಳೂ ಹೆಚ್ಚಿವೆ. ಆದರೆ ಕಾಶ್ಮೀರದಲ್ಲಿ 46 ವಿಧಾನಸಭೆ ಕ್ಷೇತ್ರಗಳಿದ್ದರೆ, ಜಮ್ಮುವಿಗೆ ಕೇವಲ 37 ಹಾಗೂ ಲಡಾಕ್ಗೆ ನಾಲ್ಕು ಸ್ಥಾನಗಳ ಪ್ರಾತಿನಿಧ್ಯ! 2008ರಲ್ಲಿ ಕಾಶ್ಮೀರದಲ್ಲಿ ಪ್ರತಿ ಸ್ಥಾನಕ್ಕೆ 58 ಸಾವಿರ ಮತಗಳಿದ್ದರೆ, ಜಮ್ಮುವಿನಲ್ಲಿ 83 ಸಾವಿರ ಮತಗಳಿಗೆ ಒಂದು ಕ್ಷೇತ್ರ.
ಇಷ್ಟೆಲ್ಲ ಇದ್ದಾಗ ಭಾರತ ವಿಶ್ವಸಂಸ್ಥೆಗೆ ಹೋಗಿದ್ದೇಕೆ ಎಂಬುದು ಇನ್ನೊಂದು ಪ್ರಶ್ನೆ. ಭಾರತ ವಿಶ್ವಸಂಸ್ಥೆಗೆ ಹೋಗಿದ್ದು ವಿಲೀನದ ಚರ್ಚೆಗೆ ಅಲ್ಲ. ಜಮ್ಮು-ಕಾಶ್ಮೀರದ ಕೆಲ ಭಾಗಗಳಲ್ಲಿ ಪಾಕಿಸ್ತಾನದ ಆಕ್ರಮಣವಾಗುತ್ತಿದೆ ಎಂಬ ವಿಷಯದ ಮೇಲೆ. ಆಗ ವಿಶ್ವಸಂಸ್ಥೆ ಕೈಗೊಂಡ ನಿರ್ಣಯಗಳಲ್ಲೊಂದು ಜನಮತಗಣನೆ. ಆದರೆ ಅದಕ್ಕೆ ಪೂರ್ವದಲ್ಲಿ ಪಾಕಿಸ್ತಾನ ಈಡೇರಿಸಬೇಕಾದ ಕೆಲಸಗಳನ್ನು ನಿರ್ಣಯವು ಸ್ಪಷ್ಟವಾಗಿ ಸಾರಿದೆ. ಪಾಕ್ ಆಕ್ರಮಿತ ಕಾಶ್ಮೀರವೂ ಸೇರಿದಂತೆ ಜಮ್ಮು-ಕಾಶ್ಮೀರದ ಎಲ್ಲ ಭಾಗಗಳಿಂದ ಪಾಕಿಸ್ತಾನವು ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಬೇಕು. 1947ರ ಆಗಸ್ಟ್ 15ರ ವೇಳೆಗೆ ಮಹಾರಾಜಾ ಹರಿಸಿಂಗ್ ಆಡಳಿತದಲ್ಲಿದ್ದ ಸ್ಥಿತಿಗೆ ಮರಳಬೇಕು. ಪಾಕ್ ಆಕ್ರಮಣದ ಕಾರಣದಿಂದ ಗಿಲ್ಗಿಟ್, ಮಿರ್ಪುರ, ಬಾಲ್ಟಿಸ್ತಾನ, ಮುಜ್ಜಪ್ಫರಾಬಾದ್ಗಳಿಂದ ನಿರಾಶ್ರಿತರಾದವರು (2 ಲಕ್ಷ ಮಂದಿ) ಮನೆಗಳಿಗೆ ಮರಳುವಂತಾಗಬೇಕು. ಇಷ್ಟೆಲ್ಲ ಆದಮೇಲೆ ಅಲ್ಲಿ ಶಾಂತಿ ಪಾಲನೆಗೆ ಬೇಕಾದಷ್ಟು ಪಡೆಯನ್ನು ಭಾರತ ನಿಯೋಜಿಸಬಹುದು ಎಂದು ವಿಶ್ವಸಂಸ್ಥೆ ನಿಯಮಗಳನ್ನು ಪಟ್ಟಿ ಮಾಡಿದೆ. ಈ ಮೂಲಕವೇ ಅದು ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ್ದು ಎಂಬುದನ್ನು ಒಪ್ಪಿದಂತಾಗಿದೆ. ಇನ್ನು ಜನಮತ ಎಂಬುದು ಜಮ್ಮು-ಕಾಶ್ಮೀರಕ್ಕೆ ಭಾರತವು ನೀಡಿದ್ದ ಆಂತರಿಕ ಭರವಸೆ ಅಷ್ಟೆ. ಅದು ತನ್ನ ಸಮಕ್ಷಮದಲ್ಲೇ ಆಗಲಿ ಎಂದು ವಿಶ್ವಸಂಸ್ಥೆ ನಿರ್ಣಯಿಸಿತ್ತು. ಜನಮತಗಣನೆ ಆಗುವುದಕ್ಕೂ ಪೂರ್ವದ ಯಾವ ನಿಯಮಗಳನ್ನೂ ಪಾಕಿಸ್ತಾನ ಪೂರೈಸಲೇ ಇಲ್ಲವಾದ್ದರಿಂದ ಅದರ ಪ್ರಶ್ನೆಯೇ ಅಪ್ರಸ್ತುತವಾಗಿದೆ. ನಂತರ 1972ರ ಶಿಮ್ಲಾ ಒಪ್ಪಂದದ ಪ್ರಕಾರ ವಿವಾದವನ್ನು ದ್ವಿಪಕ್ಷೀಯವಾಗಿ ಬಗೆಹರಿಸಿಕೊಳ್ಳಲಾಗುವುದು ಎಂದು ಉಭಯ ದೇಶಗಳು ಹೇಳಿರುವುದರಿಂದ ಈಗ ವಿಶ್ವಸಂಸ್ಥೆಯ ಪಾತ್ರವೇ ಇಲ್ಲ.
ಈ ಎಲ್ಲ ವಿಷಯಗಳ ವಿವರಣೆ ಹಾಗೂ ಇನ್ನೂ ಹೆಚ್ಚಿನ ಒಳನೋಟಗಳನ್ನು 'ದ ಮಿಥ್ ಆಫ್ ಕಾಶ್ಮೀರ್' ಕಿರುಹೊತ್ತಗೆ ನೀಡುತ್ತದೆ. ಈ ಅಡಿಪಾಯದಲ್ಲಿ ಜಮ್ಮು-ಕಾಶ್ಮೀರ ನಮ್ಮದೆಂಬ ಮಾಹಿತಿಯುಕ್ತ ಜನಾಭಿಪ್ರಾಯ ದೇಶಾದ್ಯಂತ ಮೂಡಬೇಕಿದೆ. ಆ ರಾಜ್ಯದಲ್ಲಿ ಬೇರುಮಟ್ಟದಲ್ಲಿ ಕೆಲಸ ಮಾಡಿರುವ ದೇಶಭಕ್ತರ ಖಡಾಖಡಿ ನುಡಿ ಎಂದರೆ ಪ್ರತ್ಯೇಕತಾವಾದಿಗಳು ಈಗ ಸೋತ ಸ್ಥಿತಿಯಲ್ಲಿದ್ದಾರೆ. ಅವರು ನಡೆಸಿದ ಹಿಂಸಾಚಾರ, ಕಗ್ಗೊಲೆಗಳ ಪ್ರಮಾಣದ ಆಧಾರದಲ್ಲಿ ಜಮ್ಮು-ಕಾಶ್ಮೀರ ಅದ್ಯಾವತ್ತೋ ಅವರದಾಗಬೇಕಿತ್ತು. ಹಾಗಾಗಿಲ್ಲ ಎಂಬುದು ರಾಷ್ಟ್ರೀಯತೆಯ ತಾಕತ್ತನ್ನು ಪ್ರತ್ಯೇಕತಾವಾದಿಗಳಿಗೂ ಪರಿಚಯಿಸಿದೆ. ರಾಷ್ಟ್ರವಾದಿಗಳ ಧ್ವನಿಗೆ ಸಂಪೂರ್ಣ ಅನುಮೋದನೆ ಸಿಗುವ ದಿನ ದೂರವಿಲ್ಲ. ಅದಕ್ಕೆ ನಮ್ಮೆಲ್ಲರ ಒಕ್ಕೊರಲ ಸಹಯೋಗ ಅಗತ್ಯವಿದೆ.
- ಚೈತನ್ಯ ಹೆಗಡೆ
cchegde@gmail.com