ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಇದು ಸಂತಸದ ಸಮಯ. ವಿಧಾನಸಭೆ ಚುನಾವಣೆ, ಲೋಕಸಭೆಗೆ ನಡೆದ ಉಪ ಚುನಾವಣೆ, ವಿಧಾನ ಪರಿಷತ್ತಿನ ಆಯ್ಕೆ ಹೀಗೆ ಎಲ್ಲ ಕಡೆಯ ಬಲಾಬಲದ ಸ್ಪರ್ಧೆಯಲ್ಲಿ ಎದುರಾಳಿಗಳನ್ನು ಪಕ್ಷ ಮೆಟ್ಟಿನಿಂತಿದೆ. ಇಂತಹ ಸಮಯದಲ್ಲಿ ಹಿಂದೆ ಕಂಡುಬರುತ್ತಿದ್ದ ಬೆಳ್ಳಿಯ ಗದೆ, ಕತ್ತಿಗುರಾಣಗಳ ಸಮರ್ಪಣೆಯ ಆದ್ದೂರಿ ಸಮಾರಂಭಗಳು ನಡೆದಿಲ್ಲ, ಆದರೂ ಪಕ್ಷದಲ್ಲಿ ಸಂಭ್ರಮ ಇದೆ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ರಥದ ಸಾರಥಿಯಾಗಿದ್ದ ಡಾ. ಜಿ. ಪರಮೇಶ್ವರ್ ಅವರು ಸೋತಿದ್ದು ಸ್ವಲ್ಪ ಮಟ್ಟಿಗೆ ಪಕ್ಷದ ಪಾಲಿಗೆ ವಿಷಾದದ ವಿಚಾರವೇ. ಹಾಗೆಂದು ಅವರೇನೂ ಸುಮ್ಮನೆ ಕೂತಿಲ್ಲ. ತಮ್ಮ ಸ್ಥಾನದಲ್ಲಿ ಕೂತಿರುವಾಗ ಮಾಡಲೇಬೇಕಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಅವಕಾಶವಿರುವ ಸೂಕ್ತ ರೀತಿಯ ಸ್ಥಾನಮಾನವನ್ನು ಒದಗಿಸುವುದಕ್ಕೆ ಪರಮೇಶ್ವರ ಅವರು ಆದ್ಯತೆಯನ್ನು ನೀಡಿದ್ದಾರೆ. ಅದು ಸಹಜವೇ. ಕಾಂಗ್ರೆಸ್ ಕಾರ್ಯಕರ್ತರು ಅವರನ್ನೇ ಕೇಳುವುದು.
ಈಗಾಗಲೇ ಈ ವಿಚಾರದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಲಭ್ಯವಿರುವ ಸ್ಥಾನಗಳಲ್ಲಿ (ನಿಗಮ ಮಂಡಳಿಗಳ ಅಧ್ಯಕ್ಷತೆ, ನಿರ್ದೇಶಕರ ಸ್ಥಾನ) ಎಷ್ಟು ಕಾರ್ಯಕರ್ತರಿಗೆ ಸಿಗಬೇಕು, ಎಷ್ಟು ಶಾಸಕರಿಗೆ ಸಿಗಬೇಕು ಎನ್ನುವುದು ಇತ್ಯರ್ಥವಾದಂತೆಯೇ ಎಂದು ಕಂಡು ಬರುತ್ತಿದೆ.
ಆದರೆ ಮೊಸರನ್ನದಲ್ಲಿ ಕಲ್ಲು ಸಿಕ್ಕಿದಂತೆ, ಇಂತಹ ರಾಜಕೀಯ ನೇಮಕಗಳನ್ನು ಯಾವಾಗ ಮಾಡಬೇಕು ಎನ್ನುವುದರಲ್ಲಿ ಪ್ರಾಮಾಣಿಕವಾದ ಭಿನ್ನಾಭಿಪ್ರಾಯಗಳು ಇರಬಹುದು. ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ಸರ್ಕಾರ ಬಂದು ನೂರು ದಿನಗಳಾದವು, ಮಂತ್ರಿಗಳು ಶಾಸಕರು ತಮ್ಮ ತಮ್ಮ ಸ್ಥಾನಗಳಲ್ಲಿ ವಿರಾಜಮಾನರಾಗಿದ್ದಾರೆ. ಕಾರ್ಯಕರ್ತರಿಗೆ ಸಿಗಬಹುದಾದ ಸ್ಥಾನಗಳನ್ನು ಆದಷ್ಟು ಬೇಗ ಅವರಿಗೆ ಒದಗಿಸಬೇಕು ಎನ್ನುವ ಬೇಡಿಕೆ ಸರಿ ಎಂದೇ ಕಂಡುಬರಬಹುದು.
ಪಕ್ಷಕ್ಕೆ ಅಧಿಕಾರ ಇಲ್ಲದಿದ್ದಾಗ ಒಂಭತ್ತು ವರ್ಷ ಖಾಲಿ ಕೈ ಇತ್ತು. ಈಗ ಪಕ್ಷಕ್ಕೆ ಅಧಿಕಾರ ಬಂದು ನೂರುದಿನಗಳಾದರೂ ಇನ್ನೆಷ್ಟು ದಿನ ಕಾಯಬೇಕು ಎನ್ನುವ ಮಾತನ್ನು ತಳ್ಳಿ ಹಾಕುವಂತಿಲ್ಲ.
ಆದರೆ ಪಕ್ಷದ ಕೆಲವು ಹಿರಿಯರ ಪ್ರಕಾರ ಲೋಕಸಭೆ ಚುನಾವಣೆಗೆ ಸಿದ್ಧತೆಗಳು ನಡೆಯಬೇಕಾದ ಕಾಲದಲ್ಲಿ ಕೆಲವು ಕಾರ್ಯಕರ್ತರಿಗೆ ಸ್ಥಾನ-ಮಾನ ನೀಡಿ, ಅತೃಪ್ತಕ್ತರ ಸೇನೆಯನ್ನೇ ನಿರ್ಮಿಸುವುದು ರಾಜಕೀಯ ಜಾಣ್ಮೆ ಅಲ್ಲ, ಆದರೆ ಈ ಪರಿಸ್ಥಿತಿಯನ್ನು ಕಾಂಗ್ರೆಸ್ ಎಂದಾದರೊಂದು ದಿನ ಎದುರಿಸಲೇಬೇಕಲ್ಲ. ದಿನಕಳೆದಂತೆ ಕಾರ್ಯಕರ್ತರ ಉತ್ಸಾಹ ಕಡಿಮೆಯಾಗಬಹುದು. ಲೋಕಸಭೆ ಚುನಾವಣೆಗೆ ಪಕ್ಷದ ಸಿದ್ಧತೆಯಲ್ಲಿ ಕಾರ್ಯಕರ್ತರ ಪಾತ್ರ ತೀರ ಕಡಿಮೆ.
ಹೀಗಾಗಿ ಈಗ ಸಂಬಂಧಪಟ್ಟವರು ಏನನ್ನು ಮಾಡದೇ ಇದ್ದರೆ, ಕಾರ್ಯಕರ್ತರಲ್ಲಿ ಹತಾಶೆ ಮೂಡುವುದು ಖಚಿತ. ನಿಜಕ್ಕೂ ಇದೊಂದು ಕ್ಲಿಷ್ಟ ಸಮಸ್ಯೆಯೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆಯ ಪರಿಹಾರಕ್ಕೆ ಸುಲಭದ ಹಾದಿಯನ್ನು ಹಿಡಿದು, ವರಿಷ್ಠರನ್ನು ಕೇಳಿ, ಅವರ ಮಾತಿನಂತೆ ನಡೆದುಕೊಳ್ಳುವುದು ಸೂಕ್ತ ಎಂದಿದ್ದಾರಂತೆ. ಕಾಂಗ್ರೆಸ್ಸಿನಲ್ಲಿ ವರಿಷ್ಠರ ಮಾತು ಎಂದರೆ ಮುಗಿದೇ ಹೋಯಿತು. ಅಲ್ಲಿಗೆ ಸಮಸ್ಯೆ ತಾನೇ ತಾನಾಗಿ ಬಗೆಹರಿದಂತೆಯೇ ಎನ್ನುವ ಭಾವನೆ ಕೆಲವರಲ್ಲಿ ಮೂಡುತ್ತದೆ.
ಚುನಾವಣೆ ಸಿದ್ಧತೆಯ ವಿಚಾರ:
ಲೋಕಸಭೆ ಚುನಾವಣೆಗೆ ಬೇರು ಮಟ್ಟದಲ್ಲಿ ಪಕ್ಷಗಳಲ್ಲಿ ಯಾವ ರೀತಿಯ ಸಿದ್ಧತೆ ನಡೆಯುತ್ತಿದೆಯೋ ಗೊತ್ತಿಲ್ಲ. ಆದರೆ ಎಲ್ಲ ಪಕ್ಷಗಳಲ್ಲಿ ಪ್ರಾದೇಶಿಕ ಮಟ್ಟದಲ್ಲಿ ಬೇಕಾದಷ್ಟು ಮಾತುಕತೆ-ವಿಚಾರ ವಿನಿಮಯ, ಪಕ್ಷಗಳ ಮುಂದಿರುವ ಆಯ್ಕೆಗಳ ಅಂದಾಜು ನಡೆದಿರುವಂತಿದೆ.
ಕಾಂಗ್ರೆಸ್ಸಿನಲ್ಲಿ ಎಂದಿನಂತೆ, ಎಲ್ಲ ಚಟುವಟಿಕೆಗೂ ಮೇಲಿನಿಂದ ಪ್ರಚೋದನೆ ಹಾಗೂ ಆದೇಶ ಬರಬೇಕು. ಈಗಾಗಲೇ ಪಕ್ಷದ ಉಪಾಧ್ಯಕ್ಷ ರಾಹುಲ ಗಾಂಧಿ ತಾವೇ ರೂಪಿಸಿಕೊಂಡ ಕಾರ್ಯಕ್ರಮವನ್ನು ಜಾರಿಗೊಳಿಸಲು ಹೊರಟಿದ್ದಾರೆ. ಈ ಬಾರಿ ಅಭ್ಯರ್ಥಿಗಳ ಆಯ್ಕೆಯ ಸಂಬಂಧದಲ್ಲಿ ಪೂರ್ವಭಾವಿ ಸಮೀಕ್ಷೆ, ವಿವರಗಳ ಸಂಗ್ರಹದ ಕೆಲಸಕ್ಕೆ ಬರುವವರು ಹಳೆಯ ಕಾಂಗ್ರೆಸ್ಸಿಗರಲ್ಲ, ಹೊಸ ಚಿಂತನೆ, ಸಂದೇಶಗಳನ್ನು ಹೊತ್ತು ತರುವ ಯುವಕರು. ಅವರು ಕೇಳುವ ಪ್ರಶ್ನೆಗಳು ಹೊಸ ಸ್ವರೂಪದ್ದೇ.
ವಿಧಾನಸಭೆ ಚುನಾವಣೆಯ ಮತದಾನದ ಸ್ವರೂಪದ ಆಧಾರದ ಮೇಲೆ ಅಭ್ಯರ್ಥಿಯ ಆಯ್ಕೆಯನ್ನು ಕುರಿತ ಚರ್ಚೆ ನಡೆದರೂ, ಅದೇ ನಿರ್ಣಾಯಕವಲ್ಲ. ಬೇರೆ ಬೇರೆ ದೃಷ್ಟಿ ಕೋನಗಳಿಂದಲೂ ಪರಿಶೀಲನೆ ನಡೆಯಬೇಕಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಪರಿಶಿಷ್ಟ ಜಾತಿಗಳ, ಇತರೆ ಹಿಂದುಳಿದ ಜಾತಿಗಳ ನಾಯಕರಿಗೇನೂ ಕೊರತೆ ಇಲ್ಲ. ಅದರಲ್ಲೂ ಈಗ, ಇತರೆ ಹಿಂದುಳಿದ ಜಾತಿಗಳಲ್ಲಿ ಪ್ರಬಲ ನಾಯಕರೇ ಇದ್ದಾರೆ. ಇನ್ನು ಹೊರಗಿನಿಂದ ನಾಯಕರನ್ನು ಆಮದು ಮಾಡಿಕೊಳ್ಳಬೇಕಾದ ಅಗತ್ಯವೇನೂ ಇಲ್ಲ.
ಈಗಾಗಲೇ ಪ್ರತಿಷ್ಠಿತ ಕಾಂಗ್ರೆಸ್ ನಾಯಕರ ಬಂಧು ಬಾಂಧವರು ಕೆಲವು ಕಡೆಗಳಲ್ಲಿ ಕ್ಷೇತ್ರದರ್ಶನ ಮಾಡಿದ್ದೂ ಆಗಿದೆ. ಎಂ.ಪಿ.ಗಳ ಮಕ್ಕಳು ಶಾಸಕರಾಗಬಹುದಾದರೆ ಎಂಎಲ್ಎಗಳ ಮಕ್ಕಳೇಕೆ ಸಂಸತ್ ಸದಸ್ಯರಾಗಬಾರದು? ಎಐಸಿಸಿಯ ಆರಿಸಿದ ನಾಯಕರಲ್ಲಿ ಈ ವಿಚಾರ ಕುರಿತ ಚರ್ಚೆಯೂ ಆಗಿದೆಯಂತೆ. ಸಾಧ್ಯವಿರುವಷ್ಟೂ ಈಗಿನ ಶಾಸಕರ ಸಂಬಂಧಿಗಳನ್ನು ದೂರವಿಡುವುದು ಒಳ್ಳೆಯದೆನ್ನುವ ಸಾಮಾನ್ಯ ಅಭಿಪ್ರಾಯ ಪ್ರಕಟವಾಗಿರುವಂತಿದೆ.
ಜಾತ್ಯತೀತ ಜನತಾದಳ
ರಾಜ್ಯದಲ್ಲಿ ಈಗ ವಿಧಾನ ಸಭೆಯಲ್ಲಿ ನಂಬರ್ ಟೂ ಪಾರ್ಟಿ ಎಂದರೆ ಜಾತ್ಯತೀತ ಜನತಾದಳ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ, ಲೋಕಸಭೆ ಚುನಾವಣೆಯಲ್ಲಿ ತಮ್ಮ ಭದ್ರ ನೆಲೆಗಳನ್ನೇ ಕಳೆದುಕೊಂಡಿದ್ದರೂ, ಪಕ್ಷದ ನಾಯಕರ ಚಿಂತನೆ ಹಾಗೂ ವರ್ತನೆಯಲ್ಲಿ ಬದಲಾಗುವ ಸಂಭವ ತೀರ ಕಡಿಮೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಕ್ಷದ ರಾಜ್ಯಸಮಿತಿಯ ಅಧ್ಯಕ್ಷ ಪೀಠವನ್ನು ಬಿಟ್ಟಿರಬಹುದು. ಆ ಪೀಠಕ್ಕೆ ದೇವೇಗೌಡರು ಯಾರನ್ನೇ ಆರಿಸಿದರೂ, ಅದರಿಂದ ನಿಜವಾದ ರಾಜಕೀಯ ಪರಿಸ್ಥಿತಿ (ಪಕ್ಷದಲ್ಲಿ) ಬದಲಾಗುವುದು ಅನುಮಾನ.
ದೇವೇಗೌಡ ಅನಂತರ, ನಾಯಕರು, ಕಾರ್ಯಕರ್ತರು ಹೋಗುವುದು, ಹೋಗಬೇಕಾದ್ದು ಕುಮಾರಸ್ವಾಮಿ, ರೇವಣ್ಣ ಅವರ ಕಡೆಗೇ. ದೇವೇಗೌಡರಿಗೇನೋ ಪಕ್ಷದ ಚಹರೆಯನ್ನು ಬದಲಾಯಿಸುವ ಬಯಕೆ ಇರಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಒಂದು ರಾಜಕೀಯ ಪಕ್ಷವಾಗಿ ಜಾತ್ಯತೀತ ಜನತಾದಳ, ಉತ್ತರ ಕರ್ನಾಟಕದ, ಕರಾವಳಿ ಘಟ್ಟಗಳ ಸೀಮೆಯಲ್ಲಿ ಬೇರು ಬಿಡುವುದು ಕಷ್ಟ. ಕೆಲವರು "ನಾಯಕರು" ಸಿಗಬಹುದು. ಅದಕ್ಕಿಂತ ಹೆಚ್ಚಿನ ಸಾಧನೆ ಆ ಪ್ರದೇಶದಲ್ಲಿ ಕಷ್ಟ. ಪಕ್ಷಕ್ಕೆ ಉತ್ತರ ಕರ್ನಾಟಕದ ಪ್ರಬಲ ರಾಜಕೀಯ ಜನಾಂಗವಾದ ಲಿಂಗಾಯಿತರನ್ನು ಆಕರ್ಷಿಸುವುದು ಕಡು ಕಷ್ಟ.
ಜೆಡಿಎಸ್ - ಬಿಜೆಪಿ ನಡುವಣ ಸಂಬಂಧದಲ್ಲಿ ಉಪಚುನಾವಣೆಯ ಕಾಲದಲ್ಲಿ ಕಂಡು ಬಂದ ಬೆಳವಣಿಗೆಯ ಪರಿಣಾಮವನ್ನು ಅಳಿಸಿ ಹಾಕುವುದೂ ಕಷ್ಟ. ಆ ಭಾಗದಲ್ಲಿ ಸದ್ಯದಲ್ಲಿ ಜೆಡಿಎಸ್, ಹಿಂದುಳಿದ ಜಾತಿಗಳನ್ನು ಆಕರ್ಷಿಸಲು ಪ್ರಯತ್ನಿಸಬಹುದಷ್ಟೇ. ಆ ಪ್ರದೇಶದಲ್ಲಿನ ಮಧ್ಯಮ ವರ್ಗಕ್ಕೆ ಪಕ್ಷದಲ್ಲಿ ಯಾವ ಆಕರ್ಷಣೆಯೂ ಇಲ್ಲ.
ಬಿಜೆಪಿಯ ಹತಾಶೆ
ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹತಾಶರಾಗಿದ್ದಾರೆ. ಅವರಲ್ಲಿ ಉತ್ಸಾಹವನ್ನು ತುಂಬಬಲ್ಲ ಚೈತನ್ಯ ಪೂರ್ಣ ನಾಯಕರು ಆ ಪಕ್ಷದಲ್ಲಿ ಇಲ್ಲ. ಅಂತಹ ನಾಯಕರನ್ನು ದಿಢೀರನೆ, ಆಮದು ಮಾಡಿಕೊಳ್ಳುವುದೂ ಸಾಧ್ಯವಿಲ್ಲ. ಈ ನಿಜ ಪರಿಸ್ಥಿತಿಯನ್ನು ಪಕ್ಷದ ಜಿಲ್ಲಾ, ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರೂ ತಿಳಿದುಕೊಂಡಿದ್ದಾರೆ. ಆ ಕಾರಣದಿಂದಲೇ ಅವರು ಪಕ್ಷ ಪ್ರದರ್ಶಿಸಿದ ಎಲ್ಲ ಬಗೆಯ ಅವಕಾಶವಾದಿ ಅನುಕೂಲ ಸಿಂಧು ರಾಜಕೀಯ ಹೆಜ್ಜೆಗಳನ್ನು ಬೆಂಬಲಿಸಿದ್ದು.
ಈಗಂತೂ ಕರ್ನಾಟಕ ಬಿಜೆಪಿಯ ಮುಂದೆ, ಯಡಿಯೂರಪ್ಪ ವಿಚಾರ ಬಿಟ್ಟರೆ ಬೇರೆ ಯಾವ ಮಾತೂ ಕೇಳಿ ಬರುತ್ತಿಲ್ಲ. ರಾಜ್ಯದಲ್ಲಿ ಬಿಜೆಪಿಯ ಭವಿಷ್ಯ ಯಡಿಯೂರಪ್ಪ ಅವರ ನಿರ್ಧಾರದ ಮೇಲೇ ನಿಂತಿದೆ ಎನ್ನುವ ಭಾವನೆ ಪಕ್ಷಕ್ಕೆ ಇದೆ. ಅದನ್ನು ಅಲ್ಲಗಳೆಯುವುದು ಮೂರ್ಖತನ.
ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ವಿರೋಧಿಸುವವರು ಈಗ ಇಲ್ಲವೇ ಇಲ್ಲ ಎನ್ನಬಹುದು. ಆದರೆ ರಾಷ್ಟ್ರ ಮಟ್ಟದಲ್ಲಿನ ಕೆಲವು ನಾಯಕರಿಗೆ ಯಡಿಯೂರಪ್ಪ ಅವರನ್ನು ಮತ್ತೆ ರಾಜ್ಯದಲ್ಲಿ ಪಕ್ಷದ ನಾಯಕರ ಸ್ಥಾನದಲ್ಲಿ ಕೂಡಿಸಿದರೆ, ದೇಶದ ಇತರ ರಾಜ್ಯಗಳಲ್ಲಿ ಪ್ರತಿಕೂಲವಾದ ಪರಿಣಾಮ ಪ್ರಕಟವಾಗಬಹುದೆನ್ನುವ ಭೀತಿ ಇದೆ. ಆ ಭೀತಿಗೆ ಯಾವ ಸಿದ್ಧಾಂತದ ಬೆಂಬಲವೂ ಇಲ್ಲ.
ವೀರಶೈವ ಪ್ರಾಬಲ್ಯದ ಬಿಜೆಪಿಯನ್ನು ನಿರ್ಮಿಸಲು ಹೊರಟರೆ, ಪಕ್ಷವನ್ನು ಯಾವ ಕಷ್ಟ ಕಾಲದಲ್ಲೂ ಕೈ ಬಿಡದೇ ಇದ್ದ ಬ್ರಾಹ್ಮಣರು ತಟಸ್ಥರಾಗಬಹುದು. ಯಡಿಯೂರಪ್ಪ ಪಕ್ಷಕ್ಕೆ ಬಂದರೆ ಆ ಬೆಳವಣಿಗೆಯ ಪ್ರತಿಕೂಲ ಪರಿಣಾಮ ಕಡಿಮೆಯಾಗಬಹುದೇನೋ.
ಕಿಡಿಗೇಡಿತನ: ಇತ್ತೀಚೆಗೆ ರಾಹುಲ ಗಾಂಧಿ, ಡಿಎಂಕೆ ನಾಯಕ ಕರುಣಾನಿಧಿ ಪುತ್ರಿ ಕನಿಮೋಳಿ ಅವರನ್ನು ಭೇಟಿಯಾಗಿದ್ದರಂತೆ. ಡಿಎಂಡಿಕೆ ನಾಯಕ ವಿಜಯಕಾಂತ ಅವರ ಹುಟ್ಟುಹಬ್ಬದ ದಿನ ಫೋನ್ ಮಾಡಿದ್ದರಂತೆ. ಇದಕ್ಕೂ ಈ ಬಾರಿ ಸಂಸತ್ ಅಧಿವೇಶನದಲ್ಲಿ ಡಿಎಂಕೆಯ ಮೌನಕ್ಕೂ ಏನಾದರೂ ಸಂಬಂಧವಿದೆಯೇ?
- ಸತ್ಯ
anisikeprabha@gmail.com