ಅಂಕಣಗಳು

ಊರಿಗೊಂದು ಕೆರೆ ಕಟ್ಟಿಸು, ಕೇರಿಗೊಂದು ಗುಡಿ ಕಟ್ಟಿಸು!

Published On :

ಚಿತ್ರದುರ್ಗ- ದಾವಣಗೆರೆ ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭರಮಸಾಗರ ಎಂಬ ಊರಿದೆ. ಅಲ್ಲಿ ಈಗಲೂ ವಿಶಾಲವಾದ ಕೆರೆ ಇದೆ. ಇಂದು ರಾಜ್ಯದಲ್ಲಿರುವ ಹಲವಾರು ಕೆರೆಗಳು ಕಣ್ಮರೆಯಾಗಿ ಹೋಗಿವೆ. ಮುಂದೆ ಒಂದು ದಿನ ವಿಶಾಲವಾದ ಭರಮಸಾಗರ ಕೆರೆಗೂ ಈ ದುರ್ಗತಿ ಬಂದರೂ ಬಂದೀತು.

ಮೇಲಿನ ಮಾತನ್ನು ಯಾವುದೋ ಒಬ್ಬ ತತ್ವಜ್ಞಾನಿ, ಚಿಂತಕ, ದಾರ್ಶನಿಕ ಅಥವಾ ಬಹು ಮೇಧಾವಿ ವ್ಯಕ್ತಿಯೊಬ್ಬ ಹೇಳಿದ್ದಲ್ಲ. ಇದು ಒಬ್ಬ ನಿರಕ್ಷರಕುಕ್ಷಿ ಮಹಿಳೆಯೊಬ್ಬಳ ಅನುಭವಾಮೃತದ ನುಡಿಗಳಾಗಿವೆ. ಸರ್ವಾಧಿಕಾರಿ ದಳವಾಯಿಯೊಬ್ಬನ ಕತ್ತಿಯ ಏಟಿಗೆ ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾದ ಮಹಿಳೆಯೊಬ್ಬಳ ನುಡಿಗಳಿವು. ತನ್ನ ರಾಜ್ಯ ದುಷ್ಟಶಕ್ತಿಯ ಕಪಿಮುಷ್ಟಿಗೆ ಸಿಲುಕಿ ನರಳುತ್ತಿದ್ದಾಗ ಪ್ರಜೆಗಳನ್ನು ತನ್ನ ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದ ಕಾಪಾಡಿದ, ಕೆರೆಗಳೇ ಗ್ರಾಮ ಜೀವನದ ನಾಡಿಗಳೆಂದು ಕೆರೆಯ ಸಂಸ್ಕೃತಿ ಹಿರಿಮೆಯನ್ನು ಸಾರಿದ ಅರಸು ಮಹಿಳೆಯೊಬ್ಬಳ ನುಡಿಗಳಿವು. ಈಕೆ ಬೇರಾರೂ ಅಲ್ಲ. ಚಿತ್ರದುರ್ಗದ ಪಾಳೇಗಾರ ಓಬಣ್ಣ ನಾಯಕನ ಮಡದಿ ಮಲ್ಲಮ್ಮ ನಾಗತಿ.
ಚಿತ್ರದುರ್ಗವನ್ನು ಪಾಳೆಯಗಾರರು ಆಳುತ್ತಿದ್ದಾಗ, ದುರ್ಗದ ಪಾಳೇಗಾರನ ಪಟ್ಟ ಮಹಿಷಿಯಾಗಿ ಬಂದವಳು ಮಲ್ಲಮ್ಮ ನಾಗತಿ. ಈಕೆ ನಾಯಕನಹಟ್ಟಿ ಸಾಮಂತ ಪಾಳೇಗಾರ ಮಲ್ಲಪ್ಪ ನಾಯಕನ ಅಚ್ಚುಮೆಚ್ಚಿನ ಮಗಳು. ಮಲ್ಲಮ್ಮ ನಾಗತಿ ಪುಸ್ತಕ ಜ್ಞಾನ ಪಡೆದದ್ದು ಬಹು ಅಲ್ಪ. ಆದರೆ ಲೋಕಜ್ಞಾನ ಕಲಿತಿದ್ದು ಬಹು ಹೆಚ್ಚು. ನಾಡಿನ ಸಂಸ್ಕಾರ, ಸಂಸ್ಕೃತಿಗಳನ್ನು ಅರಿಯುವಲ್ಲಿ ಮಲ್ಲಮ್ಮನಿಗೆ ಬಹು ಆಸಕ್ತಿಯಿದ್ದುದರಿಂದ ಪಾಳೇಗಾರ ಸಂಸ್ಕೃತಿಯನ್ನು ಅರಿತ ಜ್ಞಾನಿಯಾಗಿದ್ದಳು. ಓಬಣ್ಣ ನಾಯಕನನ್ನು ಮದುವೆಯಾಗಿ ಆಕೆ ದುರ್ಗಕ್ಕೆ ಬಂದಳು. ಅಲ್ಲಿನ ದಳವಾಯಿ ಮುದ್ದಣ್ಣ, ದುರ್ಗದ ಅರಸೊತ್ತಿಗೆಯನ್ನು ತಾನು ಪಡೆದುಕೊಳ್ಳಬೇಕೆಂಬ ದುರಾಲೋಚನೆಯಿಂದ ಓಬ್ಬಣ್ಣನ ಶಿರವನ್ನು ರಾಜಬೀದಿಯಲ್ಲೇ ಕತ್ತರಿಸಿ ಆತನ ಅರಸಿ ಮಲ್ಲಮ್ಮ ನಾಗತಿಯನ್ನು ಅರಮನೆಯ ಬಂಧನದಲ್ಲಿ ಇರಿಸಿ , ಸುತ್ತಲೂ ಭದ್ರವಾದ ಸೈನಿಕರ ಪಹರೆಯನ್ನು ಹಾಕಿದ್ದನು. ಆಡಳಿತ ಮುದ್ದಣ್ಣನ ಆಣತಿಯಂತೆ ನಡೆಯುವ ಅವನ ಆಜ್ಞಾರಾಧಕರ ಕೈಯಲ್ಲಿ ಸಿಲುಕಿಕೊಂಡಿತು. ಒಮ್ಮೆ ಊರ ಹೊರವಲಯದ ಪಾಳು ಮಂಟಪದಲ್ಲಿ ಒಬ್ಬ ಸನ್ಯಾಸಿ ಬಂದು ತಂಗಿರುವುದು ಮತ್ತು ಅವರೊಬ್ಬ ಮಹಾತ್ಮರು, ತಪಸ್ವಿಗಳು ಎಂಬುದು ಮಲ್ಲಮ್ಮ ನಾಗತಿಗೆ ತನ್ನ ಆಪ್ತ ಸಹಚರರ ಮೂಲಕ ತಿಳಿಯಿತು. ಅವರು ಶಾಂತವೀರ ಸ್ವಾಮಿಗಳು. ಮಲ್ಲಮ್ಮ ನಾಗತಿ, ದಳವಾಯಿ ಮುದ್ದಣ್ಣನಿಗೆ ಗೊತ್ತಾಗದಂತೆ ಪುರುಷ ವೇಷದಲ್ಲಿ ಪಹರೆಯ ಕಣ್ಣು ತಪ್ಪಿಸಿ ಸ್ವಾಮಿಗಳನ್ನು ಭೆಟ್ಟಿಯಾದಳು. ಅವರಿಗೆ ನಮಸ್ಕರಿಸಿ ದುರ್ಗದ ಪರಿಸ್ಥಿತಿಯನ್ನು ತಿಳಿಸಿ, ಈ ದುಷ್ಟಶಕ್ತಿ ದಳವಾಯಿ ಮುದ್ದಣ್ಣನ ನಾಶಕ್ಕೆ ಮಾರ್ಗೋಪಾಯವನ್ನು ತಿಳಿಸುವಂತೆ ಕೋರುತ್ತಾಳೆ. ಶಾಂತವೀರಸ್ವಾಮಿ ಸದಾ ಸಂಚಾರಿಗಳು. ಆದರೂ ದುರ್ಗದ ಹಿತವನ್ನು ಬಯಸುವವರಾಗಿದ್ದರು. ಆಗ ಅವರು, "ಚಿಂತಿಸದಿರಿ, ದುಷ್ಟಶಕ್ತಿ ಅಳಿಯಬೇಕೆಂಬುದು ನಮ್ಮ ಆಪೇಕ್ಷೆಯೂ ಆಗಿದೆ. ದಳವಾಯಿ ಮುದ್ದಣ್ಣನನ್ನು ಸಂಹರಿಸಿ ಅರಸೊತ್ತಿಗೆಯನ್ನು ಕಾಪಾಡುವಂತಹ ಸಾತ್ವಿಕ ಶಕ್ತಿಯೊಂದು ಉದಯವಾಗಿದೆ. ಅದರಿಂದ ದುರ್ಗಕ್ಕೆ ಒಳ್ಳೆಯದಾಗುತ್ತದೆ. ದುರ್ಗದ ರಾಜ್ಯಕ್ಕೆ ಸೇರಿದ ಕಣಕುಪ್ಪೆ ಪ್ರಾಂತ್ಯದ ಬಿಳಿಚೋಡು ಹಾಗೂ ಅಸಗೋಡು ಭಾಗಗಳಲ್ಲಿ ನಾವು ಸಂಚರಿಸುತ್ತಿದ್ದಾಗ, ಒಂದು ದಿವಸ ಅಸಗೋಡು ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಕುರಿಗಳನ್ನು ಮೇಯಲಿಕ್ಕೆ ಬಿಟ್ಟು ಬದಿಯ ಮರದಡಿಯಲ್ಲಿ ಮಲಗಿದ್ದ ತರುಣನೊಬ್ಬನನ್ನು ಕಂಡೆವು. ಆತನ ಶಿರದ ಮೇಲೆ ನಾಗರಹಾವೊಂದು ತನ್ನ ಹೆಡೆ ಬಿಚ್ಚಿ ಆಶೀರ್ವದಿಸುವುದನ್ನು ನಾವು ಕಂಡು ಆಶ್ಚರ್ಯವಾಯಿತು. ಹಾವು ಅಲ್ಲಿಂದ ತೆರಳಿದ ಮೇಲೆ ನಾವು ಆ ತರುಣನ ಬಳಿಗೆ ಹೋಗಿ ಅವನ ಪೂರ್ವಾಪರಗಳನ್ನು ವಿಚಾರಿಸಲಾಗಿ, ತರುಣನ ಹೆಸರು ಭರಮಣ್ಣನೆಂದು, ಆತ ಬಿಳಿಚೋಡು ಗ್ರಾಮಕ್ಕೆ ಸೇರಿದ ನಾಯಕ ಜನಾಂಗಕ್ಕೆ ಸೇರಿದವನೆಂದು ತಿಳಿಯಿತು. 'ನಿನಗೆ ರಾಜ್ಯವೊಂದರ ಅರಸನಾಗುವ ಯೋಗವಿದೆ, ನೀನು ಶೀಘ್ರವೇ ಅರಸನಾಗುವೆ' ಎಂದು ತಿಳಿಸಿ ಆತನನ್ನು ಹರಸಿ, ಈ ಕಡೆಗೆ ಬಂದೆವು. ಆತನನ್ನು ದಳವಾಯಿ ಮುದ್ದಣ್ಣನಿಗೆ ತಿಳಿಯದಂತೆ ದುರ್ಗಕ್ಕೆ ಕರೆಯಿಸಿಕೊಂಡು ಯುದ್ಧ ತರಬೇತಿ, ಧರ್ಮ ನೀತಿ ಶಾಸ್ತ್ರಗಳ ಬಗೆಗೆ ಸೂಕ್ತ ಮಾಹಿತಿ ನೀಡಿ ಆತನನ್ನು ಒಬ್ಬ ವೀರಯೋಧನನ್ನಾಗಿ ರೂಪಿಸಿ, ಆತನಿಂದಲೇ ದಳವಾಯಿಯ ಸಂಹಾರ ಮಾಡಬೇಕಾಗಿದೆ" ಎಂದು ಸ್ವಾಮಿಗಳು ತಿಳಿಸಿದಾಗ, ಮಲ್ಲಮ್ಮ ನಾಗತಿ ಕಾರ್ಯೋನ್ಮುಖಳಾದಳು. ಸ್ವಾಮಿಗಳ ಸಹಕಾರದಿಂದ ಆ ಕುರಿ ಕಾಯುವ ತರುಣ ಭೀಮಣ್ಣನನ್ನು ಕರೆಯಿಸಿಕೊಂಡು. ಆತನನ್ನು ಗುಪ್ತ ಸ್ಥಳದಲ್ಲಿರಿಸಿ ಕತ್ತಿವರಸೆ, ಕಾಳಗ ಧರ್ಮ, ನೀತಿ ಶಾಸ್ತ್ರಗಳ ವಿದ್ಯೆಯನ್ನು ಆರು ತಿಂಗಳ ಕಾಲ ನಿರಂತರವಾಗಿ ಕೊಡಿಸುತ್ತಾಳೆ.
ತರುಣ ಭರಮಣ್ಣ ಅಜಾನುಬಾಹುವಾಗಿದ್ದ. ಆತ ಬಹುಬೇಗ ಯುದ್ಧ ಕೌಶಲ್ಯವನ್ನು ಕಲಿತು ಒಬ್ಬ ಅಪ್ರತಿಮ ಯುದ್ಧ ಕುಶಲತೆಯನ್ನರಿತ ವೀರ ಯೋಧನಾಗಿ ಹೊರಹೊಮ್ಮಿದ. ಒಂದು ದಿನ ಭರಮಣ್ಣನು ದುರ್ಗದ ಉಚ್ಚಂಗಿದೇವಿ ಗುಡಿ ಮುಂಭಾಗದ ರಾಜಬೀದಿಯಲ್ಲೇ ತನ್ನ ಬಿಚ್ಚುಗತ್ತಿಯಿಂದ ದಳವಾಯಿ ಮುದ್ದಣ್ಣನೊಂದಿಗೆ ಹೋರಾಡಿ ಆತನನ್ನು ಸಂಹರಿಸಿದ. ಇದರಿಂದಾಗಿ ಆತ ಬಿಚ್ಚುಗತ್ತಿ ಭರಮಣ್ಣ ಎಂಬ ಖ್ಯಾತಿಗೆ ಪಾತ್ರನಾಗುತ್ತಾನೆ. ಮಲ್ಲಮ್ಮನ ಇಚ್ಛೆಯಂತೆ ದುರ್ಗದ ನಾಯಕನಾಗುತ್ತಾನೆ.
ಭರಮಣ್ಣನಾಯಕ ಪಟ್ಟವನ್ನು ಏರಿದ ಮೇಲೆ ರಾಜ್ಯದ ಸಾಮಂತ ಪಾಳೇಗಾರರು, ನಾಯಕರು, ದಳವಾಯಿಗಳು, ಮಂತ್ರಿಗಳು, ಮಾಂಡಲೀಕರು, ಗ್ರಾಮ ಗೌಡರು ಮತ್ತು ಪ್ರಮುಖರನ್ನು ಒಳಗೊಂಡ ರಾಜಸಭೆಯನ್ನು ಕರೆದು, ತಾನು ಪಟ್ಟಕ್ಕೇರಿರುವ ಈ ಶುಭ ಸಂದರ್ಭದಲ್ಲಿ ಹಿತೋಕ್ತಿಗಳನ್ನು ತಿಳಿಸುವಂತೆ ಸಭಿಕರಿಗೆ ಸೂಚಿಸುತ್ತಾನೆ. ಕೆಲವರು 'ನಮ್ಮ ವೈರಿಗಳಾದ ಹರಪನಹಳ್ಳಿ ನಾಯಕರನ್ನು ಸೋಲಿಸಿ ಉಚ್ಚಂಗಿ, ಅಣಜಿ, ಆಲೂರು ಕೋಟೆಗಳನ್ನು ವಶಪಡಿಸಿಕೊಳ್ಳಬೇಕು' ಎಂದರೆ, ಇನ್ನೂ ಕೆಲವರು 'ಶಿರಾ ನಾಯಕನನ್ನು ಬಗ್ಗು ಬಡಿಯಬೇಕು, ರಾಜ್ಯದಲ್ಲಿರುವ ಕೋಟೆ ಕೊತ್ತಲಗಳನ್ನು ಬಲಪಡಿಸಿ ಹೊಸ ಕೋಟೆಗಳನ್ನು ನಿರ್ಮಿಸಬೇಕು' ಎಂದರು.
 ರಾಜಸಭೆಯು ಮುಗಿದ ನಂತರ ದೊರೆ ಭರಮಣ್ಣನಾಯಕ ರಾಜಮಾತೆ ಮಲ್ಲಮ್ಮ ನಾಗತಿಯ ಅರಮನೆಗೆ ತೆರಳಿ ಆಕೆಗೆ ನಮಸ್ಕರಿಸಿ, 'ಪ್ರಜಾಪಾಲನೆ ಕುರಿತು ತಮ್ಮ ಅನುಭವದ ಹಿತೋಕ್ತಿಗಳನ್ನು ನೀಡಿರಿ' ಎಂದು ಕೋರುತ್ತಾನೆ. ಆಗ ಮಲ್ಲಮ್ಮ ನಾಗತಿ, 'ಭರಮಣ್ಣ ನೀನು ಕೋಟೆ ಕೊತ್ತಲಗಳನ್ನು ಕಟ್ಟಿಸು ಇಲ್ಲವೇ ಬಿಡು. ಶತ್ರುಗಳೊಂದಿಗೆ ಯುದ್ಧ ಮಾಡು, ಬಿಡು. ಆದರೆ ನಿನ್ನ ರಾಜ್ಯದಲ್ಲಿರುವ ಪ್ರಜೆಗಳು ಸುಖ ಶಾಂತಿ ನೆಮ್ಮದಿಯೊಂದಿಗೆ ದೈವಭಕ್ತರಾಗಿ ಬಾಳಬೇಕಾದರೆ ನೀನು ಊರಿಗೊಂದು ಕೆರೆ ಕಟ್ಟಿಸು, ಕೇರಿಗೊಂದು ಗುಡಿ ಕಟ್ಟಿಸು' ಎಂದು ಹೇಳುತ್ತಾಳೆ. 'ಕೆರೆ/ಗುಡಿ ಕಟ್ಟಿಸುವುದರಿಂದ ಪ್ರಜೆಗಳು ದೈವಭಕ್ತರಾಗಿ ನೆಮ್ಮದಿಯಿಂದ ಬಾಳಲು ಹೇಗೆ ಸಾಧ್ಯ?' ಎಂದು ನಾಯಕ ಪ್ರಶ್ನಿಸಿದಾಗ, ' ಕೆರೆಯಿದ್ದ ಊರು ಸದಾ ತಂಪಾಗಿರುತ್ತದೆ. ಊರಿಗೊಂದು ಕೆರೆ ಇದ್ದರೆ ಅದರಲ್ಲಿ ನೀರು ತುಂಬಿರುತ್ತದೆ. ಆ ನೀರನ್ನು ಪಕ್ಷಿ, ಜಾನುವಾರುಗಳು ಸೇವಿಸಿ ಬಾಳುತ್ತವೆ. ಕೆರೆಯ ಮೇಲೆ ಬೀಸುವ ಗಾಳಿ ಊರಿಗೆ ತಂಪು ತರುತ್ತದೆ. ಕೆರೆಯ ಕೆಳ ಭಾಗದ ಜಮೀನುಗಳು ನೀರಾವರಿಯಾಗಿ ಊರಿನ ಜನ ಆಹಾರ ಸ್ವಾವಲಂಬಿಗಳಾಗುತ್ತಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಕೆರೆ ಇದ್ದ ಊರಿನ ಭೂಮಿಯಲ್ಲಿ ಅಂತರ್ಜಲ ಸಮೃದ್ಧಿಯಾಗಿರುತ್ತದೆ. ಆ ಊರಿನ ಎಲ್ಲಾ ಬಾವಿಗಳು ಮತ್ತು ಕಟ್ಟೆಗಳು ಸದಾಕಾಲ ನೀರಿನಿಂದ ಕೂಡಿರುತ್ತವೆ. ಕೆರೆಯಿರುವ ಊರಿಗೆ ಯಾವ ಕಾಲಕ್ಕೂ ಜಲಕ್ಷಾಮ ಬರುವುದಿಲ್ಲ.  ಹಾಗೆಯೇ ಪ್ರತಿಯೊಂದು ಊರಿನ, ಪ್ರತೀ ಕೇರಿಯಲ್ಲೂ ಆಸ್ತಿಕರು ಮತ್ತು ನಾಸ್ತಿಕರು ಎಂಬ ಎರಡು ವರ್ಗದ ಜನರಿರುತ್ತಾರೆ. ಇಂಥವರು ದೈವ ಭಕ್ತರಾಗಲು ಕೇರಿಯಲ್ಲಿ ಗುಡಿಯೊಂದಿದ್ದರೆ, ನಾಸ್ತಿಕನಿಗೆ ಹೊರಗೆ ನಿಂತಾದರೂ ದೇವರಿಗೆ ಕೈ ಮುಗಿದು ಹೋಗಬೇಕು ಎಂಬ ಪ್ರೇರಣೆ ಉಂಟಾಗುತ್ತದೆ. ಅಷ್ಟರಮಟ್ಟಿಗೆ ಆತನು ಆಸ್ತಿಕ ದಾರಿಗೆ ಬರುತ್ತಾನೆ. ಅದೇ ರೂಢಿಯಾಗಿ ಕ್ರಮೇಣ ಆತನು ದೈವಭಕ್ತನಾಗುತ್ತಾನೆ. ಆದ್ದರಿಂದ ಕೆರೆ ಇದ್ದ ಊರು, ಗುಡಿ ಇದ್ದ ಕೇರಿಯ ಜನರು ದೈವಭಕ್ತರಾಗಿ ಸುಖ, ಶಾಂತಿ, ನೆಮ್ಮದಿಯಿಂದ ಬಾಳುತ್ತಾರೆ. ಇಂತಹ ಬಾಳನ್ನು ಬಾಳಲು ಅವಕಾಶ ಮಾಡಿಕೊಟ್ಟ ರಾಜನನ್ನು ತಮ್ಮ ಆರಾಧ್ಯ ದೈವವೆಂದು ಆರಾಧಿಸುತ್ತಾರೆ' ಎಂದಳು.
ಇದನ್ನು ಕಾರ್ಯರೂಪಕ್ಕೆ ತರಲು ಭರಮಣ್ಣ ನಾಯಕ ತನ್ನ ರಾಜ್ಯದಲ್ಲಿ ಸಾಗರೋಪಾದಿಯಲ್ಲಿ ದೊಡ್ಡ ಕೆರೆ ಯೊಂದನ್ನು ನಿರ್ಮಿಸಿ, ಅದಕ್ಕೆ "ಮಲ್ಲಮ್ಮ ಸಾಗರ" ಎಂದು ನಾಮಕರಣ ಮಾಡಲು ಸೂಚಿಸುತ್ತಾನೆ. ಮಂತ್ರಿಗಳಿಂದ ಈ ವಿಚಾರ ತಿಳಿದ ಮಲ್ಲಮ್ಮ ನಾಗತಿ ನಾಯಕನನ್ನು ಅರಮನೆಗೆ ಕರೆಯಿಸಿ 'ಭರಮಣ್ಣ ನಾನು ಈ ರಾಜ್ಯದ ಸಾಮಾನ್ಯ ಪ್ರಜೆ. ನೀನು ದುರ್ಗದ ನಾಯಕ. ಕೆರೆ ಕಟ್ಟಿಸಿದವನು ನೀನು. ನಿನ್ನ ಹೆಸರೇ ಸೂಕ'್ತ ಎಂದು ತಿಳಿಸಿ ನಂತರ ಮಂತ್ರಿಗಳನ್ನು ಕರೆಯಿಸಿಕೊಂಡು ಕೆರೆಗೆ "ಭರಮಣ್ಣ ಸಾಗರ ಅಥವಾ ಭರಮ ಸಾಗರ" ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡುವಂತೆ ಸೂಚಿಸುತ್ತಾಳೆ.
ಅದರೊಟ್ಟಿಗೆ ಅಲ್ಲಿ ಒಂದು ಊರು ಎದ್ದು ನಿಂತಿತು. ಈಗಲೂ ಚಿತ್ರದುರ್ಗ- ದಾವಣಗೆರೆ ನಡುವೆ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಭರಮಸಾಗರ ಎಂಬ ಊರಿದೆ. ಅಲ್ಲಿ ವಿಶಾಲವಾದ ಕೆರೆಯೂ ಇದೆ. ಇಂದು ರಾಜ್ಯದಲ್ಲಿರುವ ಹಲವಾರು ಕೆರೆಗಳು ಕಣ್ಮರೆಯಾಗಿ ಹೋಗಿವೆ. ಮುಂದೆ ಒಂದು ದಿನ ವಿಶಾಲವಾದ ಭರಮಸಾಗರ ಕೆರೆಗೂ ಈ ದುರ್ಗತಿ ಬಂದರೂ ಬಂದೀತು. ಅದು ಸಂಪೂರ್ಣವಾಗಿ ಬತ್ತಿ ಅದರ ಅಂಗಳದಲ್ಲಿ ಕಾಂಕ್ರೀಟ್ ಮನೆಗಳು ಹುಟ್ಟಿಕೊಂಡು, ಅಲ್ಲಿ ಕೆರೆ ಇತ್ತು ಎಂಬ ಅಸ್ತಿತ್ವದ ಚಿಹ್ನೆಯೇ ಮರೆಯಾಗುವ ಮುನ್ನ ಕೆರೆ ಸಂಸ್ಕೃತಿಯನ್ನು  ಬೆಳೆಸಿಕೊಳ್ಳೋಣ.
ಅಂದು ನಿರಕ್ಷರಕುಕ್ಷಿ ಮಲ್ಲಮ್ಮ ನಾಗತಿ ಪುರಾತನ ಕೆರೆ ಸಂಸ್ಕೃತಿಯ ಬೀಜವನ್ನು ಬಿತ್ತಿದಳು. ಅದು ಪಾಳೆಯಗಾರರ ಕಾಲದಲ್ಲಿ ಸಮೃದ್ಧವಾಗಿ ಬೆಳೆದು ಅದು ಜನ ಜೀವನದ ಅಂಗವಾಯಿತು. ಕೆರೆ ಹಾಗೂ ಗುಡಿ ಸಂಸ್ಕೃತಿಗಳು ಪ್ರಜಾಪ್ರಭುತ್ವದ ಇಂದಿನ ಕಾಲದಲ್ಲಿ ಕ್ರಮೇಣ ನಶಿಸುತ್ತಿರುವುದು ಅತಿದೊಡ್ಡ ದುರಂತವಾಗಿದೆ.
ಆಧಾರ: ತ.ರಾ.ಸು. ರವರ ಚಿತ್ರದುರ್ಗದ ಕಾದಂಬರಿಗಳಿಂದ.

- ಎಸ್. ಮಲ್ಲಿಕಾರ್ಜುನಪ್ಪ
ದಾವಣಗೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.