ಮುಂಬರುವ ಅಡಚಣೆಯನ್ನು ಹೇಗೆ ದಾಟುವರು ಸಿದ್ದರಾಮಯ್ಯ?

Updated on: 

ಒಬ್ಬ ಮುಖ್ಯಮಂತ್ರಿಗೆ ಕೇವಲ 100 ದಿನಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ಸಾಧ್ಯವಿಲ್ಲ. ಹಾಗಾಗೆ ಆತನ ಕಾರ್ಯನಿರ್ವಹಣೆಯನ್ನು ಇಷ್ಟು ಕಡಿಮೆ ಅವಧಿಯಲ್ಲೇ ಅವಲೋಕಿಸುತ್ತಾ ಕುಳಿತುಕೊಳ್ಳುವುದೂ ತರವಲ್ಲ. ಆದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಒಂದು ಮಾತನ್ನಂತೂ ಹೇಳಬಹುದು- ಅವರು ತುಂಬಾ ಲಕ್ಕಿ. ಅವರ ಏರುದಾರಿಯಲ್ಲಿನ ಎಲ್ಲಾ ವಿಘ್ನಗಳೂ ತಮ್ಮಷ್ಟಕ್ಕೆ ತಾವೇ ಮಾಯವಾದವು. ಪಕ್ಷದ ಒಳಗಿನ ಮತ್ತು ಹೊರಗಿನ ಅವರ ವಿರೋಧಿಗಳೆಲ್ಲ ತಮ್ಮಷ್ಟಕ್ಕೆ ತಾವೇ ಹಿಂದೆ ಸರಿದರು.
ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಒಂದಂಶವಂತೂ ಸ್ಪಷ್ಟವಾಗಿ ಗೊತ್ತಿತ್ತು. ಬಿಜೆಪಿ ಹೀನಾಯವಾಗಿ ಸೋಲುತ್ತದೆ ಮತ್ತು ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪರಮೇಶ್ವರ್ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮತ್ತು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು. ಆದರೆ ಪರಮೇಶ್ವರ್ ತಮ್ಮ ಕ್ಷೇತ್ರದಲ್ಲೇ ಹೀನಾಯವಾಗಿ ಸೋಲುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅದಾಗ್ಯೂ ತಮ್ಮ ಪಕ್ಷವನ್ನು ಅಧಿಕಾರದತ್ತ ಅವರು ಕೊಂಡೊಯ್ದಿದ್ದರೆ(?) ಅವರೇ ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಆಯ್ಕೆಯಾಗಿರುತ್ತಿದ್ದರಲ್ಲವೇ? ಆದರೂ ಇದರಿಂದ ಸಿದ್ದರಾಮಯ್ಯನವರಿಗೆ ಸುಲಭವಾಗಿ ಅಧಿಕಾರ ದೊರಕಿತು. ಪರಮೇಶ್ವರ್ ಅವರ ಬೆಂಬಲಿಗರು ತಮ್ಮ ನಾಯಕನನ್ನು ಕೊನೆಪಕ್ಷ ಉಪಮುಖ್ಯಮಂತ್ರಿಯಾದರೂ ಮಾಡಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದರು. ಆದರೆ ಅವರ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಲಾಯಿತು.
ಮೊದಲನೆಯದಾಗಿ, ಮುಖ್ಯಮಂತ್ರಿಸ್ಥಾನಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಅವರೊಂದಿಗೆ ಸ್ಪರ್ಧೆಯಲ್ಲಿದ್ದರು. ರಾಜ್ಯದ ಹಿರಿಯ ನಾಯಕರಾದ ಖರ್ಗೆ ಹಿಂದುಳಿದ ವರ್ಗದ ಪ್ರತಿನಿಧಿ. ಅದಕ್ಕಿಂತಲೂ ಹೆಚ್ಚಾಗಿ ಅವರು ಪಕ್ಷದ ಒಳಗಿನವರು. ಸಿದ್ದರಾಮಯ್ಯ ಹೊರಗಿನವರು. ಆದರೂ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಎರಡು ಕಾರಣಗಳಿಗಾಗಿ ಆಯ್ಕೆ ಮಾಡಿತು. ಮೊದಲನೆಯದಾಗಿ, ಅವರು ದೇವೇಗೌಡ ಮತ್ತವರ ಮಕ್ಕಳಿಗೆ ಸರಿಯಾಗಿ ಟಾಂಗ್ ಕೊಡುತ್ತಾರೆ ಎನ್ನುವುದು ಮತ್ತು ಎರಡನೆಯದಾಗಿ, ಅವರು ನಿಷ್ಕಳಂಕ ವ್ಯಕ್ತಿ ಎನ್ನುವುದು. ಭ್ರಷ್ಟಾಚಾರದಿಂದಾಗಿ ಅಧಿಕಾರ ಕಳೆದುಕೊಂಡ ಬಿಜೆಪಿಗೆ ಅವರು ಸರಿಯಾದ ಉತ್ತರವಾಗಬಲ್ಲರು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಚೆನ್ನಾಗಿ ಗೊತ್ತಿತ್ತು. ಡಿ.ಕೆ. ಶಿವಕುಮಾರ್ ಕೂಡ ಆ ಸ್ಥಾನಕ್ಕಾಗಿ ಹಂಬಲಿಸಿದರಾದರೂ, ಹೆಸರು ಕೆಡಿಸಿಕೊಂಡಿದ್ದರಿಂದ ಅವರಿಗೆ ಸಚಿವ ಸ್ಥಾನವೂ ಸಿಗಲಿಲ್ಲ. ಇನ್ನು ಎಸ್.ಎಂ.ಕೃಷ್ಣ ಅವರ ಹೆಸರು ಸದ್ದು ಮಾಡಿತಾದರೂ, ವಯಸ್ಸು ಅವರಿಗೆ ಸಾಥ್ ಕೊಡಲಿಲ್ಲ. ಕರ್ನಾಟಕ ಕಾಂಗ್ರೆಸ್‌ನ ಮಾರ್ಗದರ್ಶಿಯಾಗುವಂತೆ ಕಾಂಗ್ರೆಸ್ ಅವರಿಗೆ ಸಲಹೆ ನೀಡಿತು(ಇದರರ್ಥ, ಸುಮ್ಮನೆ ಹಿನ್ನೆಲೆಗೆ ಸರಿಯಿರಿ ಎನ್ನುವುದಾಗಿತ್ತು). ಹಾಗಾಗಿ ಸಿದ್ದರಾಮಯ್ಯ ಅವರಿಗೆ ಎದುರಾಗಬಹುದಾಗಿದ್ದ ಎಲ್ಲಾ ಅಡ್ಡಿಗಳೂ ತಮ್ಮಷ್ಟಕ್ಕೆ ತಾವೇ ಕರಗಿಹೋದವು.
ಅವರಿಗೆ ಎದುರಾದ ಎರಡನೆಯ ಅಡಚಣೆಯೆಂದರೆ, ಎರಡು ಲೋಕಸಭಾ ಕ್ಷೇತ್ರಗಳಿಗಾಗಿ ನಡೆದ ಉಪಚುನಾವಣೆ. ಮುಖ್ಯಮಂತ್ರಿಯಾದ ನಂತರ ಅವರಿಗೆದುರಾದ ಮೊದಲ ಸವಾಲಿದು. ಕಾಂಗ್ರೆಸ್‌ನ ವೈರಿಗಳಾದ ಜೆಡಿಎಸ್ ಮತ್ತು ಬಿಜೆಪಿ ರಹಸ್ಯ ಒಪ್ಪಂದ ಮಾಡಿಕೊಂಡವು. ಈ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಪ್ರಾಬಲ್ಯ ಅಧಿಕವಿದ್ದುದರಿಂದ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ. ಈ ಮೂಲಕ ಕಾಂಗ್ರೆಸ್ ವಿರೋಧಿ ಮತಗಳು ಹಂಚಿಹೋಗದಂತೆ ಈ ಎರಡೂ ಪಕ್ಷಗಳು ಎಚ್ಚರಿಕೆ ವಹಿಸಿದ್ದವು.     
ಒಂದು ಸ್ಥಾನಕ್ಕಾಗಿ ಕುಮಾರಸ್ವಾಮಿ ಸ್ಪರ್ಧಿಸಿದರೆ, ಇನ್ನೊಂದಕ್ಕೆ ಅವರ ಆಪ್ತ ಚೆಲುವರಾಯಸ್ವಾಮಿ ಕಣಕ್ಕಿಳಿದರು. ಈ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರು ತಮ್ಮ ಸಂಸತ್ ಸ್ಥಾನಗಳಿಗೆ ರಾಜಿನಾಮೆ ಕೊಟ್ಟುಬಂದಿದ್ದರು. ತಮ್ಮ ಪಕ್ಷವೇ ಗೆದ್ದು ಮತ್ತೊಮ್ಮೆ ಕಿಂಗ್‌ಮೇಕರ್ ಆಗಲಿದೆ ಎನ್ನುವ ಭರವಸೆಯಲ್ಲಿದ್ದರು ಕುಮಾರಸ್ವಾಮಿ. ಆದರೆ ಎರಡೂ ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಗೆಲವು ಸಾಧಿಸಿದ ಕಾಂಗ್ರೆಸ್ ಜೆಡಿಎಸ್‌ನ  ಭರವಸೆಯನ್ನು ಬೂದಿ ಮಾಡಿತು. ತಮ್ಮ ಪ್ರಬಲ ಶತ್ರು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ಕುದ್ದು ಹೋಗಿದ್ದ ದೇವೇಗೌಡರ ಕುಟುಂಬ, ಉಪಚುನಾವಣೆಗಳಲ್ಲಿ ಗೆದ್ದು ಸಿಎಂಗೆ ಅವಮಾನ ಮಾಡಬೇಕು ಎಂದು ಕಾದು ಕುಳಿತಿತ್ತು. ಆದರೆ ಅವರ ಎಣಿಕೆಯೆಲ್ಲ ತಿರುಗುಮುರುಗಾಯಿತು.
ಆದರೆ ಶತ್ರುಗಳಿಂದ ಮಿತ್ರರಾಗಿ ಬದಲಾದವರ ಮಾಸ್ಟರ್ ಪ್ಲಾನ್ ಹೀನವಾಗಿ ವಿಫಲವಾಯಿತು. ಅವಕಾಶವಾದಿ ರಾಜಕಾರಣದಲ್ಲಿ ತೊಡಗಿದ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಪಾಠ ಕಲಿಸಿದ ಮತದಾರರು, ಕಾಂಗ್ರೆಸ್‌ಗೆ ಬಹುಮತ ನೀಡಿದರು. ಜೆಡಿಎಸ್ ತನ್ನ ಅಖಾಡದಲ್ಲೇ ಸೋತು ಶರಣಾಯಿತು, ಬಿಜೆಪಿಯಂತೂ ತನ್ನ ಮತಗಳು ಕಾಂಗ್ರೆಸ್‌ಗೆ ಹರಿದುಹೋಗಿದ್ದನ್ನು ನೋಡಿ ಕಣ್ಣೀರು ಹಾಕಿತು. ಮತ್ತೊಮ್ಮೆ ಸಿದ್ದರಾಮಯ್ಯ ಗೆಲುವಿನ ನಗೆಬೀರಿದರು. ಎರಡನೇ ಅಡಚಣೆಯನ್ನೂ ಅವರು ಸುಸೂತ್ರವಾಗಿ ದಾಟಿದರು.
ಈಗ ಅವರಿಗೆದುರಾಗಲಿರುವ ಮೂರನೇ ಅಡಚಣೆಯೆಂದರೆ, 2014ರ ಲೋಕಸಭಾ ಚುನಾವಣೆ. ಮತ್ತೊಮ್ಮೆ ಗೆಲುವಿನ ದೇವಿ ಅವರ ಮೇಲೆ ಕೃಪೆ ತೋರಲಿದ್ದಾಳೆಯೆ? ಅವರ ಗೆಲುವಿನ ಮ್ಯಾರಥಾನ್ ಮುಂದುವರಿಯುವುದೇ? ಆ ಅಡಚಣೆಯನ್ನೂ ಕೂಡ ಅವರು ದಾಟಬಲ್ಲರೇ? ತಮ್ಮ ವಿರೋಧಿಗಳನ್ನು ಧ್ವಂಸ ಮಾಡಿ ಕಾಂಗ್ರೆಸ್‌ಗೆ ಸೂಕ್ತ ಸ್ಥಾನಗಳನ್ನು ದೊರಕಿಸಿಕೊಡುವರೇ? ಈ ಪ್ರಶ್ನೆಗಳಿಗೆ ಸಮಯವೇ ಉತ್ತರಿಸಲಿದೆ. ಆದರೂ ಅವರ ಈ ನೂರು ದಿನಗಳ ಪಯಣವನ್ನು, ಹೇಗೆ ಅವರು ನಿರಾತಂಕವಾಗಿ ಅಡಚಣೆಗಳನ್ನು ದಾಟಿದರು ಎನ್ನುವ ಕಾರಣಕ್ಕಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುವುದು. ಅವರೀಗ ಉತ್ತಮ ಆಡಳಿತ ಮತ್ತು ತ್ವರಿತ ಅಭಿವೃದ್ಧಿಯತ್ತ ಗಮನಹರಿಸಬೇಕಿದೆ. ಈಗ ಎಲ್ಲರ ದೃಷ್ಟಿಯೂ ಅವರತ್ತ ನೆಟ್ಟಿದೆ.

ಕೊನೆಯ ಗುಟುಕು: ಟ್ವಿಟ್ಟರ್‌ನಲ್ಲಿ ಸುತ್ತುಹೊಡೆಯುತ್ತಿರುವ ಜೋಕೊಂದು ಹೀಗಿದೆ: "ಆಸಾರಾಂ ಬಾಪು Hari Om ಎಂದಾಗಲೆಲ್ಲ, ಎಲ್ಲಾ ಹೆಣ್ಣು ಮಕ್ಕಳು Hurry home ಆಗಬೇಕು! (ಅಂದರೆ ಮನೆಗೆ ಬೇಗ ಓಡಬೇಕು)

-ಎಚ್.ಎಸ್. ಬಲರಾಮ್
hsbalram@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com