ಯಥಾ ಪ್ರಕಾರ ಎನ್ನುವ ಸ್ಥಿತಿಯೇ ಇಲ್ಲ

Updated on: 

ಸಾರ್ವಜನಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಬೇಕಾದ ರಾಜಕೀಯ ವಲಯದಲ್ಲಿ ಯಥಾಪ್ರಕಾರ ಎನ್ನುವ ಸ್ಥಿತಿಯೇ ಇಲ್ಲ. ಸದ್ಯದಲ್ಲಿ ಮೇಲ್ನೋಟಕ್ಕೆ ಕರ್ನಾಟಕದ ರಾಜಕೀಯದ ಸ್ಥಿತಿ ಮೂರಕ್ಕೆ ತಗ್ಗಲ್ಲ ಆರಕ್ಕೆ ಏರಲ್ಲ ಎನ್ನುವಲ್ಲಿ ಇದೆ ಎಂದು ಕಂಡು ಬಂದರೂ ಅಂತರಂಗದಲ್ಲಿ ತೀವ್ರವಾದ ಬೇಗುದಿ ಇದೆ.
ಕಾಂಗ್ರೆಸ್ ಈಗ ಹೆಚ್ಚು ಕಡಿಮೆ ಎಲ್ಲ ಚುನಾವಣೆಗಳಲ್ಲೂ ಗೆದ್ದು ಎದುರಾಳಿಗಳನ್ನು ಹಿಯಾಳಿಸುವ ಸ್ಥಿತಿಯಲ್ಲಿ ಇದೆ ಎಂದು ಭಾವಿಸಬಹುದು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರವಾಗಿಯೇ ಇದ್ದಾರೆ. ಮೊದಲ ನೂರು ದಿನಗಳಲ್ಲಿ ಎಲ್ಲರೂ ಮೆಚ್ಚುವ ಅಥವಾ ಆಶ್ಚರ್ಯ ಪಡುವ ರೀತಿಯಲ್ಲಿ ನಿರ್ಧಾರಗಳನ್ನು ಪ್ರಕಟಿಸಿದ್ದೂ ಆಗಿದೆ. ಅದರಲ್ಲಿ ಕೆಲವು ಕಾರ್ಯಾಚರಣೆಯ ಹಂತವನ್ನು ತಲುಪಿದ್ದಾಗಿದೆ. ಆದರೆ ಈಚೆಗೆ ಸರ್ಕಾರದ ಕೆಲಸದ ವೇಗ ಕಡಿಮೆಯಾದಂತಿದೆ. ಹಲವು ನಿರ್ಧಾರಗಳು ಕಾರ್ಯ ಸಾಧುವಲ್ಲ ಎನ್ನುವ ಅರಿವು ಸರ್ಕಾರಕ್ಕೆ- ಜನರಿಗೆ ಮೂಡುತ್ತಿದೆ. ಇದೆಲ್ಲವೂ ತೀರ ಸಹಜವಾದ ಬೆಳವಣಿಗೆ. ಪ್ರತಿನಿತ್ಯ ದಿಢೀರ್ ನಿರ್ಧಾರಗಳನ್ನು ಪ್ರಕಟಿಸಿ, ಮಿಂಚಿನ ವೇಗದಲ್ಲಿ ಅದನ್ನು ಜಾರಿಗೆ ತರುವ ಪವಾಡ ನಿರಂತರವಾಗಿ ನಡೆಯುವುದು ಸಾಧ್ಯವಿಲ್ಲ. ಆದರೆ ಅದರಿಂದಲೇ ಅತೃಪ್ತಿ- ಭಿನ್ನಾಭಿಪ್ರಾಯಗಳು ತಲೆತೋರುತ್ತವೆ ಎಂದೇನೂ ಅಲ್ಲ. ಅಧಿಕಾರಿಗಳ ವರ್ಗಾವರ್ಗಿಯ ಸೀಸನ್‌ನಲ್ಲಿ ಅಲ್ಲಿಲ್ಲಿ ಅವಾಂತರವಾಗಿರಬಹುದು. ಅದರಿಂದ ದೊಡ್ಡ ಮಾರ್ಪಾಟುಗಳು ಆಗುವ ಸಂಭವ ಕಡಿಮೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ ಅವರು ತಮ್ಮ ಕೆಲಸವನ್ನು ಮಾಡಿಕೊಂಡಿದ್ದಾರೆ. ಅಂದ ಮಾತ್ರಕ್ಕೇ ಯಾರೂ ರಾಜಕೀಯ ಮಾಡುತ್ತಿಲ್ಲ ಎಂದೇನೂ ಅಲ್ಲ. ಅಂತರಂಗದ ರಾಜಕೀಯ ನಡದೇ ಇದೆ. ಅದು ಪ್ರಚಾರ ಗಳಿಸುವ ಹಂತವನ್ನು ಮುಟ್ಟಿಲ್ಲ ಅಷ್ಟೇ. ಸದ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರೆನಿಸಿಕೊಂಡವರು, ಬೋರ್ಡು, ನಿಗಮ, ಮಂಡಳಿ, ಸಮಿತಿಗಳಲ್ಲಿ ಸ್ಥಾನಮಾನವನ್ನು ಬಿಟ್ಟು ಬೇರೆ ಯಾವುದೇ ಜನಪರ ಬೇಡಿಕೆಗಳನ್ನು ಮುಂದೊಡ್ಡುತ್ತಿಲ್ಲ.
ಈ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ತುಂಬಾ ಅನುಕೂಲವಾಗಿದೆ. ಸಂತೃಪ್ತಿಯನ್ನು ತಂದಂತೆ ಇದೆ. ಆದರೆ ಅದೇ ಮಾತನ್ನು ಪ್ರದೇಶ ಕಾಂಗ್ರೆಸ್ಸಿನ ವಿಚಾರದಲ್ಲಿ ಹೇಳುವಂತಿಲ್ಲ. ಇನ್ನು ಮೂಲದವರು- ಹೊರಗಿನವರು ಎನ್ನುವ ಮಾತು ಕೇಳಿ ಬರುತ್ತಿದೆ. ಪಕ್ಷದ ಸಂಘಟನೆಯಲ್ಲಿ ಬದಲಾವಣೆಗಳು ಅನಿವಾರ್ಯವೆನ್ನುವ ನಿರೀಕ್ಷೆಯನ್ನು ಮೂಡಿಸಿ ದೆಹಲಿಗೆ ಹಿಂತಿರುಗಿದ ದಿಗ್ವಿಜಯ ಸಿಂಗ್ ದೆಹಲಿ, ಉತ್ತರ ಪ್ರದೇಶಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ.  ಕಾಂಗ್ರೆಸ್ ಸಮಿತಿ ಹಾಗೂ ಸರ್ಕಾರ ಅಥವಾ ಶಾಸಕಾಂಗ ವಿಭಾಗದ ನಡುವಣ ಸಮನ್ವಯ ಸಮಿತಿಯ ನೇಮಕದ ಮಾತೂ ಕೇಳಿ ಬರುತ್ತಿಲ್ಲ. ಯಾವುದಕ್ಕೂ ಸಮಯ ಕೂಡಿ ಬರಬೇಕಂತೆ. ಈಗ ಕಾಂಗ್ರೆಸ್‌ಗೆ ಒಂದು ಸಂಘಟನೆಯಾಗಿ ಮಾಡಬಲ್ಲ ಯಾವ ಕೆಲಸವೂ ಇಲ್ಲ. ಚುನಾವಣೆ ಮುಗಿದ ಮೇಲೆ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮ ನಡೆದಿಲ್ಲ. ಅಧ್ಯಕ್ಷರ ಪ್ರವಾಸ ಕಾರ್ಯಕ್ರಮ ನಡೆದಿರಬಹುದು. ಆದರೆ ಯಾವ ಒಂದು ಮೇಳವೂ ನಡೆದಿಲ್ಲ. ಅದಕ್ಕೆ ಅಪವಾದ ಎಂದರೆ ಪಕ್ಷದ ಕಾರ್ಮಿಕ ವಿಭಾಗ ಏರ್ಪಡಿಸಿದ್ದ ಅಸಂಘಟಿತ ಶ್ರಮಿಕರ ರಾಜ್ಯ ಮಟ್ಟದ ಮಹಾಮೇಳ. ಅದೂ ಕೂಡ ಮಂತ್ರಿಗಳ ವೈಭವ ಪ್ರದರ್ಶನದಲ್ಲೇ ಮುಕ್ತಾಯವಾಯಿತು. ಯಾರಿಗೂ ಅರಿವಿಲ್ಲದಂತೆ, ಕ್ರಮೇಣ ಎನ್ನುವಂತೆ, ಪ್ರದೇಶ ಕಾಂಗ್ರೆಸ್ಸಿನ ನಾಯಕತ್ವದ ಸ್ವರೂಪ ಬದಲಾಗುತ್ತಿರುವುದು ನಿಜ. ಒಂದು ರೀತಿಯಲ್ಲಿ ಈಗ ರಾಜ್ಯದ ಕಾಂಗ್ರೆಸ್ ನಾಯಕತ್ವದಲ್ಲಿ "ಸಾಮಾಜಿಕ ಪರಿವರ್ತನೆ" ನಡೆದಿದೆ.  ಈ ಪ್ರವೃತ್ತಿಯನ್ನು ಅನೇಕರು ಗಮನಿಸಿದ್ದಾರೆ. ಕೆಲವು ವಲಯಗಳಲ್ಲಿ ಅಸಹನೆಯೂ ಮೂಡಿದೆ. ಆದರೆ ಇಲ್ಲಿ ಅತೃಪ್ತರು ಅಸಹಾಯಕರೇ.

ಪ್ರಾದೇಶಿಕ ಪಕ್ಷಗಳ ಸವಾಲು: ಈಗ ಸುದ್ದಿ ಮಾಡುತ್ತಿರುವುದರಲ್ಲಿ ಕರ್ನಾಟಕಕ್ಕೇ ಸಂಬಂಧಿಸಿದಂತೆ, ನಿರ್ದಿಷ್ಟವಾದ ಬೆಳವಣಿಗೆಗಳೇನು ಇಲ್ಲ.  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ ಗಾಂಧಿ ಅವರೇನೋ ರಾಜ್ಯದಿಂದ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ನಿರೀಕ್ಷಿಸುತ್ತಿದ್ದಾರೆಂದು ವರದಿಯಾಗಿದೆ. ವಿಧಾನ ಸಭೆ ಚುನಾವಣೆಯ ಮತದಾನದ ಅಂಕಿ-ಅಂಶಗಳನ್ನಷ್ಟೇ ಗಮನಿಸಿದರೆ, ಅದೇನೂ ಅಸಾಧ್ಯವಾದ ಗುರಿಯಲ್ಲ.  ದೇಶದ ಬಹುಭಾಗದಲ್ಲಿ ಕಾಂಗ್ರೆಸ್ ಸೋತಿರುವುದು ಪ್ರಾದೇಶಿಕ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ. ಉತ್ತರ ಪ್ರದೇಶ, ಬಿಹಾರ, ಬಂಗಾಳ, ಒಡಿಶಾ, ತಮಿಳುನಾಡುಗಳಲ್ಲಿ ಕಾಂಗ್ರೆಸ್ ಉಸಿರಾಡುವುದೇ ಕಷ್ಟ ಎನ್ನುವಂತಹ ವಾತಾವರಣವನ್ನು ಸೃಷ್ಟಿಸಿರುವುದು ಪ್ರಾದೇಶಿಕ ಪಕ್ಷಗಳೇ. ಆದರೆ ಕರ್ನಾಟಕದಲ್ಲಿ ನಿಜವಾದ ಅರ್ಥದಲ್ಲಿ ಒಂದು ಪ್ರಬುದ್ಧವಾದ, ಸಿದ್ಧಾಂತಕ್ಕೆ ಬದ್ಧವಾದ, ಪ್ರಾದೇಶಿಕ ಪಕ್ಷೆವೇ ಇಲ್ಲ. ಜಾತ್ಯತೀತ ಜನತಾ ದಳವನ್ನು ಪ್ರಾದೇಶಿಕ ಪಕ್ಷವೆಂದು, ಅದರ ಸಂಪೂರ್ಣ ಅರ್ಥದಲ್ಲಿ, ಕರೆಯುವುದು ಸಾಧ್ಯವಿಲ್ಲ.
ದೇವೇಗೌಡರಿಗೆ ರಾಷ್ಟ್ರಮಟ್ಟದಲ್ಲಿ ವೈಯಕ್ತಿಕವಾಗಿ ಸ್ಥಾನಮಾನ ಗಳಿಸುವ ಹಂಬಲ ಈಗ ಇಲ್ಲದೇ ಇರಬಹುದು. ಅವರು ಪ್ರಧಾನಿಯಾಗಿದ್ದವರು. ಬೇರೆ ಸ್ಥಾನ-ಮಾನವನ್ನು ಸ್ವೀಕರಿಸುವವರಲ್ಲ. ಆದರೂ ರಾಷ್ಟ್ರೀಯ ರಾಜಕೀಯದಲ್ಲಿ ಸಾಧ್ಯವಾದಾಗಲೆಲ್ಲ ಕೈಯಾಡಿಸುವ ಪ್ರವೃತ್ತಿ ಇದೆ. ದೇವೇಗೌಡರ ಭಾಷಣಗಳಲ್ಲಿ ಕರ್ನಾಟಕದ ಹಿತದ ವಿಚಾರಕ್ಕಿಂತ ಹೆಚ್ಚಾಗಿ, ರೈತರ ಹಿತದ ಪ್ರಸ್ತಾಪ ಮಾಡುವಾಗ ಉದ್ರೇಕ- ಉದ್ವಿಗ್ನತೆ ಕಂಡುಬರುವುದು ಸಹಜ. ಅವರು ರಾಜಕೀಯ ಆರಂಭಿಸಿದ್ದು ನೆಲದ ಮಟ್ಟದಿಂದಲೇ. ಈಗಂತೂ ಬಿಜೆಪಿಯ ಜತೆ ಜೆಡಿಎಸ್ ಕಂಡೂ- ಕಾಣದಂತೆ ಹೊಂದಾಣಿಕೆ ಮಾಡಿಕೊಂಡ ಅನಂತರ ಆ ಪಕ್ಷದ ಕಾಂಗ್ರೆಸ್- ಬಿಜೆಪಿಗಳ ನಡುವಣ ಸಮಾನ ದೂರದ ನೀತಿಗೆ ತಿಲಾಂಜಲಿ ಕೊಡಲಾಗಿದೆ ಎಂದೇ ಭಾವಿಸಬಹುದು.
ಸದ್ಯದಲ್ಲಿ ಜೆಡಿಎಸ್ ಮುಂದೆ ಯಾವ ರಾಜಕೀಯ ಸಮಸ್ಯೆಯೂ ಇಲ್ಲ. ಚುನಾವಣೆಯ ಸೋಲಿನಿಂದ, ಅದು ಕಲಿತಿರುವ ಒಂದು ಪಾಠ ಎಂದರೆ ವೈಯಕ್ತಿಕ ಸಂಬಂಧಗಳಲ್ಲಿ, ಪಕ್ಷದಲ್ಲಿ ನಾಯಕರ ಶ್ರೇಣೀಕರಣದ ವ್ಯವಸ್ಥೆಯಲ್ಲಿ ಯಜಮಾನಿಕೆಯ ಪ್ರವೃತ್ತಿ ಪಕ್ಷದ ಹಿತಕ್ಕೆ ಮಾರಕ ಎನ್ನುವುದು. ಆ ಕಾರಣದಿಂದಲೇ, ಪಕ್ಷದ ನೂತನ ರಾಜ್ಯಾಧ್ಯಕ್ಷರ ಆಯ್ಕೆಯಲ್ಲಿ ಎಂದಿನಂತೆ ಕಾರ್ಯಕರ್ತರೆಲ್ಲ ಸರ್ವೋಚ್ಚ ನಾಯಕ ದೇವೇಗೌಡರಿಗೇ ಅಧಿಕಾರವನ್ನು ಕೊಡಲು ಸಿದ್ದರಿದ್ದರೂ, ಆ ಹಳೆಯ ಕಾಂಗ್ರೆಸ್ ಪದ್ಧತಿಯನ್ನು ಕೈ ಬಿಟ್ಟು, ಪಕ್ಷದ "ಕೋರ್ ಕಮಿಟಿ"ಯಲ್ಲಿ ಸಮಾಲೋಚನೆಯ ಅನಂತರ ಹೆಸರನ್ನು ಪ್ರಕಟಿಸುವ ನಿರ್ಧಾರಕ್ಕೆ ಬಂದಿದ್ದು.  ಕಾಯಿದೆಯಂತೆ ರಾಜ್ಯ ರಾಜಕೀಯದಲ್ಲಿ ಜೆಡಿಎಸ್‌ಗೆ ಎರಡನೇ ಸ್ಥಾನವಿರುವುದು. ವಿಧಾನ ಸಭೆಯಲ್ಲಿ ಅಧಿಕೃತವಾಗಿ ವಿರೋಧ ಪಕ್ಷ ಎಂದು ಮನ್ನಣೆ ಸಿಕ್ಕಿದೆ. ಆದ್ದರಿಂದ ಆ ಪಕ್ಷದ, ಪಕ್ಷದ ನಾಯಕರ ಜವಾಬ್ದಾರಿ ಹಿಂದಿಗಿಂತ ಹೆಚ್ಚಾಗಿದೆ.
ಅದು ಸದನದ ಒಳಗೆ- ಹೊರಗೆ ಎರಡೂ ಕಡೆ ನಿರ್ವಹಿಸಬೇಕಾದ ಹೊಣೆಗಾರಿಕೆ. ಅದಕ್ಕೆ ಪಕ್ಷ ಯಾವ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆಯೋ ಗೊತ್ತಿಲ್ಲ. ಇತ್ತೀಚಿನ ರಾಜಕೀಯದಲ್ಲಿ, ಬಿಜೆಪಿಯ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಜಾತ್ಯತೀತ ಜನತಾ ದಳದ ವರ್ತನೆ ಕೆಲವು ವಿಚಾರಗಳಲ್ಲಿ ಪ್ರಶ್ನಾರ್ಹವಾಗಿದ್ದು ನಿಜ. ಅದರ ವಿವರಗಳನ್ನು ಬಿಡಿಸಿ ಹೇಳಲು ಸೂಕ್ತ ಸಮಯ ಬರಬೇಕು. ಕರ್ನಾಟಕ ಲೋಕ ಸೇವಾ ಆಯೋಗದ ಹಲವು ಅವಾಂತರಗಳಲ್ಲಿ ಪಾಲುದಾರರಲ್ಲಿ ಕೆಲವು ಜೆಡಿಎಸ್ ಅಭಿಮಾನಿಗಳೂ ಇದ್ದಾರೆನ್ನುವ ಗುಮಾನಿ ಇದೆ. ಅದು ಗುಮಾನಿ ಅಷ್ಟೇ.  ಜಾತ್ಯತೀತ ಜನತಾ ದಳ ಈಗ ತನ್ನ ಸಿದ್ಧಾಂತವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಬೇಕು. ಸಂಸತ್ತಿನಲ್ಲಿ ಈಚೆಗೆ ಅಂಗೀಕಾರವಾದ ಆಹಾರ ಭದ್ರತೆ ಕಾಯಿದೆ, ಭೂ ಸ್ವಾಧೀನ ಕಾಯಿದೆಗಳನ್ನು ಕುರಿತಂತೆ ಪಕ್ಷದ ನಿಲವು ಪ್ರಕಟವಾಗಿಲ್ಲ. ತನ್ನ ಹಿಂದಿನ ವರ್ತನೆಯ ಫಲವನ್ನು ಜೆಡಿಎಸ್ ಈಗ ಅನುಭವಿಸಬೇಕಾಗಿದೆ. ಮೊದಲ ಶ್ರೇಣಿಯ ನಾಯಕರಲ್ಲಿ ಯಾವ ಭಿನ್ನಾಭಿಪ್ರಾಯಗಳೂ ಇಲ್ಲದೇ ಹೋದರೂ, ಪಕ್ಷಕ್ಕೆ ಎರಡನೇ ಶ್ರೇಣಿಯ ನಾಯಕರೇ ಇಲ್ಲದಂತಾಗಿರುವುದು ಗಮನಾರ್ಹ.

ಬಿಜೆಪಿಯ ಹತಾಶೆ: ಬಿಜೆಪಿಯ ಕರ್ನಾಟಕ ವಿಭಾಗ, ಈಗ ಹತಾಶರ ಗುಂಪಿನಂತಾಗಿದೆ. ಬಿಜೆಪಿ, ಹಿಂದಿನ ಜನಸಂಘ ಬೇಕಾದಷ್ಟು ಚುನಾವಣೆಗಳಲ್ಲಿ ಸೋತಿತ್ತು. ಆದರೆ ಆ ಸೋಲುಗಳ ಅನಂತರ ಧೃತಿಗೆಟ್ಟಿರಲಿಲ್ಲ. ಈಗ ರಾಜ್ಯದ ಬಿಜೆಪಿ ನಾಯಕರಿಗೆ ಮತ್ತೆ ಚೇತರಿಸಿಕೊಳ್ಳುವ ಆತ್ಮ ವಿಶ್ವಾಸ ಇದ್ದಂತೆ ಕಂಡು ಬರುತ್ತಿಲ್ಲ.  ಪಕ್ಷದ ಪುನಾರಚನೆ, ಲೋಕಸಭೆ ಚುನಾವಣೆಗೆ ಸಿದ್ಧತೆ, ಕಳೆದ ಐದಾರು ವರ್ಷಗಳಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ವಿಚಾರ, ಇದ್ಯಾವುದಕ್ಕೂ ಗಮನ ಕೊಡದೇ ಹಗಲು-ರಾತ್ರಿ ಎನ್ನುವಂತೆ, ಮಾಜಿ ಮುಖ್ಯಮಂತ್ರಿ, ಈಗಿನ ಕರ್ನಾಟಕ ಜನತಾ ಪಾರ್ಟಿಯ ನಾಯಕ ಯಡಿಯೂರಪ್ಪ ಏನ್ಮಾಡ್ತಾರೆ ಏನ್ನಾಡಲ್ಲ ಎನ್ನುವ ವಿಚಾರಕ್ಕೇ ಎಲ್ಲೂ ಇಲ್ಲದ ರಾಜಕೀಯ ಪ್ರಾಮುಖ್ಯವನ್ನು ಕೊಟ್ಟು ನಿದ್ದೆಗೆಡುವುದು ಒಂದು ಪ್ರಬುದ್ಧ ಪಕ್ಷದ ಲಕ್ಷಣವಲ್ಲ.  ಯಡಿಯೂರಪ್ಪ ಅವರನ್ನು ಒಲಿಸಿಕೊಳ್ಳಲು ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಎಷ್ಟರ ಮಟ್ಟಿಗೆ, ಯಾವ ರೀತಿಯಲ್ಲಿ ಪ್ರಯತ್ನಿಸಬೇಕು ಎನ್ನುವುದನ್ನು ಪಕ್ಷದ ದೆಹಲಿ ನಾಯಕರಿಗೇ ಬಿಟ್ಟು, ಇಲ್ಲಿ ಕರ್ನಾಟಕದಲ್ಲಿ ಮಾಡಬೇಕಾಗಿರುವ ಬೆಟ್ಟದಷ್ಟು ಪ್ರಮಾಣದ ಕೆಲಸದತ್ತ ಗಮನ ಹರಿಸುವುದು ಸೂಕ್ತ.  ಯಡಿಯೂರಪ್ಪ ಅವರ ನಿಲವೇನು ಎನ್ನುವುದು ಅವರಿಗೇ ಸ್ಪಷ್ಟವಾಗಿ ತಿಳಿದಿರುವಂತಿಲ್ಲ. ಅದರಲ್ಲೂ ಈಗ ಸಿದ್ಧತೆ ನಡೆಯಬೇಕಾಗಿರುವುದು ಲೋಕಸಭೆ ಚುನಾವಣೆಗೆ. ಹಿಂದೆ ಬಿಜೆಪಿಯ ಪರವಾಗಿ, ಕನಿಷ್ಠ ಪಕ್ಷ ಮೂರು ಲೋಕಸಭೆ ಚುನಾವಣೆಗಳನ್ನು ನಡೆಸಿದ ಅನುಭವವಿರುವ ಯಡಿಯೂರಪ್ಪ ಅವರಿಗೆ, ಅದರ ಈಗಿನ ಏಕಾಂಗಿತನದ ಸ್ಥಿತಿಯಲ್ಲಿ ಹೋರಾಡುವುದು ಎಷ್ಟು ಕಷ್ಟ ಎನ್ನುವುದು ಗೊತ್ತಿದೆ.
ಯಡಿಯೂರಪ್ಪ ಈಗ ಪ್ರಕಟಿಸುತ್ತಿರುವ ಪರಸ್ಪರ ವೈರುಧ್ಯದ ಹೇಳಿಕೆಗಳ ಹಿಂದಿರುವುದು ಆ ಅನುಭವ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ ಅಥವಾ ಮಿತ್ರರಲ್ಲ ಎನ್ನುವ ಪಲಾಯನವಾದದ ಹೇಳಿಕೆಯಿಂದ ಜನರನ್ನು ಮರಳುಗೊಳಿಸುವ ಕಾಲ ಹೋಯಿತು. ಅದೊಂದು ಕ್ಲೀಷೆ ಅಷ್ಟೆ.

ಕಿಡಿಗೇಡಿತನ:
ರಾಜಕೀಯ ಪಕ್ಷಗಳಲ್ಲಿ ಈಗ "ಕೋರ್ ಕಮಿಟಿಗಳು" ಸಂಸದೀಯ ಮಂಡಳಿ, ಕಾರ್ಯಕಾರಿಣಿ, ಪದಾಧಿಕಾರಿಗಳ ಕೂಟಗಳಂತಹ ವ್ಯವಸ್ಥೆಯನ್ನೇ ನಿರ್ನಾಮ ಮಾಡಿರುವುದು ನಿಜವೇ?
-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com