ಅಂಕಣಗಳು

ರಾಜಕೀಯ ಪಥದಲ್ಲಿ ಆಡ್ವಾಣಿ ಎಡವಿದ್ದು ಎಲ್ಲಿ?

Published On :

ನರೇಂದ್ರ ಮೋದಿ ಬಗ್ಗೆ ಆಡ್ವಾಣಿ ತಾಳಿರುವ ನಿಲುವನ್ನು ಕಡೆಗಣಿಸಲು ಬಿಜೆಪಿಯ ಹಿರಿಯ ನಾಯಕರಿಗೆ ಆಗುತ್ತಿಲ್ಲ. ಆದರೆ ಪ್ರಧಾನಿ ಹುದ್ದೆಗೆ ಗುಜರಾತ್ ಮುಖ್ಯಮಂತ್ರಿಯೇ ಸರಿಯಾದ ಅಭ್ಯರ್ಥಿ ಎಂಬುದೂ ಅವರಿಗೆ ಗೊತ್ತಿದೆ.
ಮೋದಿ ಅವರನ್ನು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಘೋಷಣೆ ತೀರ ಕ್ಲಿಷ್ಟಕರ ಮತ್ತು ದೀರ್ಘಾವಧಿಯ ಪ್ರಕ್ರಿಯೆಯಾಗಿತ್ತು. ಆಡ್ವಾಣಿಯವರ ನಿರಾಕರಣೆ, ಸುಷ್ಮಾ ಸ್ವರಾಜರ ನಿಲುವು, ಮತ್ತು ಆಡ್ವಾಣಿ ಜೊತೆಗಿರುವವರ ಮಾತಿನ ಜಾಣ್ಮೆ ಮತ್ತವರು ಸೃಷ್ಟಿಸಿದ ನಕಾರಾತ್ಮಕ ಕಥೆಗಳೆಲ್ಲ ಈ ಪ್ರಕ್ರಿಯೆಯನ್ನು ಇನ್ನಷ್ಟು ಜಟಿಲ/ ಕಲುಷಿತಗೊಳಿಸಿದವು. ಆಂತರಿಕ ಚುನಾವಣೆಯೊಂದನ್ನು ನಡೆಸಿದ್ದರೆ ಚೆನ್ನಾಗಿತ್ತು, ಆಗ ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಮೋದಿಯೇ ಗೆಲುವು ಸಾಧಿಸುತ್ತಿದ್ದರು ಎಂದು ಬಹಳಷ್ಟು ಜನ ಯೋಚಿಸತೊಡಗಿದ್ದರು.
ಅಮೆರಿಕದಲ್ಲೂ ಕೂಡ ಉಮೇದುವಾರರ ನಡುವೆ ಚುನಾವಣೆ ನಡೆಸಿ ಅಭ್ಯರ್ಥಿಯ ಆಯ್ಕೆ ಮಾಡಲಾಗುತ್ತದೆ. ಇದೇನೂ ಪ್ರಜಾಪ್ರಭುತ್ವಕ್ಕೆ ವಿರೋಧಿಯಾದ ಸಂಪ್ರದಾಯವೇನಲ್ಲ. ಆದರೆ ಹಾಗೊಂದು ವೇಳೆ ಚುನಾವಣೆ ನಡೆದಿದ್ದರೂ ಕೂಡ ಮೋದಿಯವರ ಹೆಸರೇ ಮುಂಚೂಣಿಯಲ್ಲಿರುತ್ತಿತ್ತು ಎನ್ನುವುದರಲ್ಲಿ ಸಂದೇಹವಿಲ್ಲ. ಬಹುತೇಕರು ಮೋದಿಯ ಪರವಾಗೇ ಇದ್ದಾರೆ. ಮೋದಿ ಬಿಜೆಪಿಯ ಪಾಪ್ಯುಲರ್ ಆಯ್ಕೆಯಲ್ಲ ಎನ್ನುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.
ಹಾಗಿದ್ದರೆ ಆಡ್ವಾಣಿ, ಮೋದಿ ಹೆಸರನ್ನು ವಿರೋಧಿಸಿದ್ದೇಕೆ? ಇದಕ್ಕೆ ಮೂರು ಕಾರಣಗಳಿವೆ. ಮೊದಲನೆಯದು, 86 ವರ್ಷದವರಾದರೂ, 2009ರಲ್ಲಿ ಸೋತರೂ ಕೂಡ ಆಡ್ವಾಣಿಯವರಿಗೆ ತಮ್ಮೊಳಗೆ ಪ್ರಧಾನಿ ಅಭ್ಯರ್ಥಿ ಇದ್ದಾನೆ ಎಂದನಿಸಿದ್ದು.  ಎರಡನೆಯದಾಗಿ, ದೆಹಲಿಯಲ್ಲಿನ ತಮ್ಮ ಶಕ್ತಿಕೇಂದ್ರದ ಸ್ಥಾನಕ್ಕೆ ಹೊರಗಿನವರಿಂದ ಅಪಾಯ ಎದುರಾಗಿದೆಯೆಂಬ ಭಯ ಮತ್ತು ಮೂರನೆಯದಾಗಿ, ಮೋದಿ ತಮ್ಮ ಪರ ವಹಿಸುವವರನ್ನಷ್ಟೇ ಮೆಚ್ಚುತ್ತಾರೆಂದೂ ಮತ್ತು ತಟಸ್ಥರಾಗಿರುವವರನ್ನು ದೂರವಿಡುತ್ತಾರೆಂಬ ಭಾವನೆ(ಅಥವಾ ಅವರಲ್ಲಿ ಹಾಗೆ ನಂಬಿಕೆ ಹುಟ್ಟಿಸಲಾಗಿದೆ).  ಅದಾಗ್ಯೂ ಈ ಕೊನೆಯ ವಾದಕ್ಕೆ ಯಾವ ದೃಢೀಕರಣವೂ ಸಿಗುವುದಿಲ್ಲ. ಏಕೆಂದರೆ, ಇತ್ತೀಚಿನ ರಾಜಕೀಯ ವಿಶ್ಲೇಷಣೆ ಮತ್ತು ಸಮೀಕ್ಷೆಗಳನ್ನು ಗಮನಿಸಿದಾಗ ಹಿಂದೆ ಮೋದಿಯವರನ್ನು ಮೂದಲಿಸುತ್ತಿದ್ದವರೂ ಅವರ ಪರ ವಾಲಿದ್ದಾರೆ ಎನ್ನುವುದು ಅರ್ಥವಾಗುತ್ತದೆ. ಒಂದು ವೇಳೆ ಇದಕ್ಕೆ ತದ್ವಿರುದ್ಧ ಅಭಿಪ್ರಾಯ ಆಡ್ವಾಣಿಯವರಿಗಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ವಿರುದ್ಧ ಅಭಿಪ್ರಾಯ ಹೊಂದುವ ಹಕ್ಕು ಅವರಿಗಿದೆ.
ವಾರಗಳ ಹಿಂದೆಯೇ ಬಿಜೆಪಿಯ ಬಹುತೇಕ ನಾಯಕರು ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಹೆಸರಿಸಲು ತುದಿಗಾಲಲ್ಲಿ ನಿಂತಿದ್ದರು. ಇನ್ನು ಜೆಡಿಯು ಕೂಡ ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡು ದೂರವಾಗಿದೆ.
ಹಾಗಿದ್ದರೂ ಆಡ್ವಾಣಿಯವರ ವಾದವನ್ನು ಅಲ್ಲಗಳೆಯಲು ಅದೇಕೆ ಬಿಜಿಪಿ ನಾಯಕರಿಗೆ ಅಷ್ಟು ಸುಲಭವಾಗಿ ಸಾಧ್ಯವಾಗಲಿಲ್ಲ? ಈಗಿರುವ ಬಿಜೆಪಿಯ ಹಿರಿಯ ನಾಯಕರಲ್ಲಿ ಬಹುತೇಕರು ಬಹಳ ವರ್ಷಗಳಿಂದ ಆಡ್ವಾಣಿಯವರ ಪೋಷಣೆಯಲ್ಲಿ ಬೆಳೆದವರು. ಗುರು, ಶಿಷ್ಯರನ್ನು ತ್ಯಜಿಸಿದ್ದರೂ ಕೂಡ, ಶಿಷ್ಯ ವರ್ಗ ಗುರುವನ್ನು ಪರಿತ್ಯಜಿಸಲು ಸಿದ್ಧವಿಲ್ಲ.
50-60 ವರ್ಷ ದಾಟಿದ ನಾಯಕರಿಗೆಲ್ಲ ಆಡ್ವಾಣಿ ತಂದೆಯ ಸಮಾನರು ಎನ್ನುವ ತಳಹದಿಯಲ್ಲಿ ಈ ನಡೆಯನ್ನು ನೋಡಬಹುದಾದರೂ, ಇದಕ್ಕೆ ರಾಜಕೀಯ ಕಾರಣಗಳನ್ನೂ ಕೊಡಬಹುದು. ಬಹಳ ಕಾಲದಿಂದ ರಾಜಕೀಯದಲ್ಲಿ ಇರುವುದರಿಂದ, ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸಿರುವ ಅನುಭವವಿರುವುದರಿಂದ, ಆಡ್ವಾಣಿಯಂಥ ಹಿರಿಯ ನಾಯಕನಿಗೆ ಕೇವಲ ಸನ್ನೆಯಿಂದಲೇ ವ್ಯವಸ್ಥೆಯಲ್ಲಿ ತ್ವರಿತ ಬದಲಾವಣೆ ತರುವ ಶಕ್ತಿಯಿದೆ ಎಂಬುದು.
ಆಡ್ವಾಣಿ ಅವರ ಪರಿಸ್ಥಿತಿಯನ್ನು ನೋಡಿದಾಗ ನನಗೆ ಮಹಾತ್ಮಾ ಗಾಂಧಿಯವರ ಕಾಂಗ್ರೆಸ್‌ನೊಂದಿಗಿನ ನಂಟಿನ ನೆನಪಾಗುತ್ತಿದೆ. ಇವರಿಬ್ಬರ ನಡುವೆ ಹೋಲಿಕೆ ಮಾಡುವುದು ಬೇಡ. ಅದು 1930 ಮತ್ತು 1940 ನಡುವಿನ ಸಮಯ. ಆ ವೇಳೆಗಾಗಲೇ ಗಾಂಧಿ ರಾಜನೀತಿಯ ಮತ್ತು ನೈತಿಕತೆಯ ಪೋಷಕ ಎಂಬ ಹೆಸರು ಪಡೆದಿದ್ದರು. 1939ರಲ್ಲಿ ಕಾಂಗ್ರೆಸ್, ಗಾಂಧಿಯವರ ಇಚ್ಛೆಗೆ ವಿರುದ್ಧವಾಗಿ ಸುಭಾಷ್ ಬೋಸ್‌ರನ್ನು ಕಾಂಗ್ರೆಸ್‌ನ ಅಧ್ಯಕ್ಷರನ್ನಾಗಿಸಿತು. ಎಚ್ಚರಿಕೆಯಿಂದ ಆಯ್ಕೆ ಮಾಡಿದ ಪದಗಳಿಂದ ಮತ್ತು ಸನ್ನೆಯಿಂದ, 'ಇದು ತಮ್ಮ ಸೋಲು' ಎಂಬ ಧಾಟಿಯ ಸಂದೇಶವನ್ನು ಅವರು ಕಾಂಗ್ರೆಸ್‌ಗೆ ಕಳುಹಿಸಿದರು. ಬೋಸ್ ಕೆಳಕ್ಕಿಳಿಯಲೇಬೇಕಾಯಿತು.
ಬೋಸ್‌ರನ್ನು ಕೆಳಕ್ಕಿಳಿಸಲು ಆಗ ಸಾಧ್ಯವಾಯಿತಾದರೆ, ಅದೇ ರೀತಿಯ ವಿರೋಧ ಎದುರಿಸುತ್ತಿರುವ ಮೋದಿಯವರನ್ನೇಕೆ ಕೆಳಕ್ಕಿಳಿಸಲು ಆಗುತ್ತಿಲ್ಲ? ಏಕೆಂದರೆ, ಬೋಸ್‌ರ ಸೋಲಿನ ಹಿಂದೆ ಅಂಕಿ ಸಂಖ್ಯೆಗಳ ಆಟವಿದೆ. ಗಾಂಧಿಯವರ ಆಪ್ತ ಪಟ್ಟಾಭಿ ರಾಮಯ್ಯ ಅವರನ್ನು ಬೋಸ್ ಕೇವಲ 200 ಮತಗಳ(ಒಟ್ಟು 3000ರ ಮತಗಳಲ್ಲಿ) ಅಂತರದಿಂದ ಸೋಲಿಸಿದ್ದರು. ಬೋಸ್‌ರಿಗೆ ಬಹುಮತ ಸಿಕ್ಕಿತಾದರೂ, ಗಾಂಧೀಜಿಯ ತೀವ್ರ ವಿರೋಧದಿಂದ ಪಕ್ಷವೇ ಗುಡಿಸಿ ಗುಂಡಾತರವಾಗುವ ಸಾಧ್ಯತೆ ಇತ್ತು. ಆದರೆ ಮೋದಿಯವರ ವಿಷಯದಲ್ಲಿ ಹಾಗಾಗಲಿಲ್ಲ. ಅವರಿಗೆ ಪಕ್ಷದೊಳಗಿನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಆಡ್ವಾಣಿಯವರ ಜೊತೆ ಕೇವಲ ನಾಲ್ಕೈದು ನಾಯಕರಷ್ಟೇ ಉಳಿದುಕೊಂಡರು.
ವ್ಯಂಗ್ಯವೆಂದರೆ, ಒಂದು ವೇಳೆ ಆಡ್ವಾಣಿಯವರು 2004ರಲ್ಲಿ ರಾಜಕೀಯದಿಂದ ಅಥವಾ ನಾಯಕತ್ವದಿಂದ ಕೆಳಕ್ಕಿಳಿದಿದ್ದರೆ ಅಥವಾ 2009ರ ಸೋಲಿನ ಜವಾಬ್ದಾರಿಯನ್ನು ಹೊತ್ತು, ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ವಹಿಸಿಕೊಳ್ಳದಿದ್ದರೆ ಕಥೆಯೇ ಬೇರೆಯಾಗಿರುತ್ತಿತ್ತು. ಹಾಗೆ ಮಾಡಿದ್ದರೆ ಜನತೆಯ ಅನುಕಂಪ ಅವರೊಟ್ಟಿಗಿರುತ್ತಿತ್ತು ಮತ್ತು ಬಿಜೆಪಿಯ ಮುಂದಿನ ನಾಯಕನ ಆಯ್ಕೆಯಲ್ಲಿ ದೊಡ್ಡ ಪಾತ್ರ ವಹಿಸುವ ಶಕ್ತಿ ಅವರಿಗೆ ದೊರಕುತ್ತಿತ್ತು.
ಇಂಥದ್ದೇ ಇನ್ನೊಂದು ದೃಷ್ಟಾಂತದತ್ತ ಗಮನ ಹರಿಸೋಣ. 1990ರಲ್ಲಿ ಬ್ರಿಟನ್‌ನ ಮೈಕೆಲ್ ಹೆಸಲ್ಟೀನ್, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಮಾರ್ಗರೇಟ್ ಥ್ಯಾಚರ್ ಅವರೊಂದಿಗೆ ಸ್ಪರ್ಧಿಸಿದರು. ಮೊದಲ ಆಂತರಿಕ ಚುನಾವಣೆಯಲ್ಲಿ ಥ್ಯಾಚರ್ ಬಹುಮತ ಸಾಧಿಸಿದರಾದರೂ ಮರು ಚುನಾವಣೆ ನಡೆಯುವುದಕ್ಕೆ ಎಲ್ಲಾ ಕಾರಣಗಳನ್ನು ಮೈಕೆಲ್ ಪೇರಿಸಿಟ್ಟುಕೊಂಡಿದ್ದರು. ಎರಡನೆ ಬಾರಿ ಮೈಕೆಲ್‌ಗೇ ಗೆಲುವಿನ ಸಾಧ್ಯತೆಗಳು ಹೆಚ್ಚಾದವು, ಏಕೆಂದರೆ ಅದಾಗಲೇ ಪ್ರಧಾನಿಯಾಗಿದ್ದ ಥ್ಯಾಚರ್ ಬಗ್ಗೆ ಶಾಸಕರೆಲ್ಲ ಆಸಕ್ತಿ ಕಳೆದುಕೊಂಡಿದ್ದರು.
ಹಾಗಿದ್ದರೆ ಥ್ಯಾಚರ್ ಮಾಡಿದ್ದೇನು? ತಮ್ಮ ಸಮಯ ಮುಗಿಯಿತೆಂದು ನಿರ್ಧರಿಸಿ, ತಾವು ತಮ್ಮ ಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿದರು! ಆಗ ಅನುಕಂಪದ ಅಲೆ ಎದ್ದಿತು. ಕನ್ಸರ್‌ವೇಟಿವ್ ಪಕ್ಷಕ್ಕೆ ಹೊಸ ರೂಪ ಕೊಡುವಲ್ಲಿ ಅವರು ಪಟ್ಟ ಶ್ರಮ, ಬ್ರಿಟಿಷ್ ಸಮಾಜದಲ್ಲಿ ಹೊಸ ಉತ್ಸಾಹ ತುಂಬಿದ ಅವರ ಆಡಳಿತ, ಪಕ್ಷದ ಸ್ಥಳೀಯ ಘಟಕಗಳು ಮತ್ತು ಅಧಿಕಾರಿಗಳೊಂದಿಗೆ ಅವರಿಗಿದ್ದ ಉತ್ತಮ ಸಂಬಂಧ- ಎಲ್ಲವೂ ಪರಿಗಣನೆಗೆ ಬಂದಿತು. ಥ್ಯಾಚರ್ ಅವರಿಗೆ ಮೈಕೆಲ್ ಹ್ಯಾಸಲ್ಟೀನ್ ಅವರನ್ನು ತಡೆಹಿಡಿಯುವ ಮತ್ತು ತಮಗಿಷ್ಟವಾದ ವ್ಯಕ್ತಿಯ ಹೆಸರನ್ನು ಪ್ರಧಾನಿ ಹುದ್ದೆಗೆ ಸೂಚಿಸುವ ಅಧಿಕಾರ ಲಭಿಸಿತು! ಆಕೆ ಜಾನ್ ಮೇಜರ್ ಎಂಬ ನಾಯಕನನ್ನು ಆಯ್ಕೆ ಮಾಡಿದರು. ಜಾನ್ ಅತ್ಯುತ್ತಮ ರಾಜಕಾರಣಿಯೇನೂ ಆಗಿರಲಿಲ್ಲ. ಆದರೆ ಮೈಕೆಲ್ ಹೆಸಲ್ಟೀನ್‌ರನ್ನು ಮೆತ್ತಗೆ ಮಾಡಲು ಜಾನ್ ಸೂಕ್ತ ವ್ಯಕ್ತಿ ಎಂಬುದು ಅವರಿಗೆ ತಿಳಿದಿತ್ತು.
ಥ್ಯಾಚರ್ ಒಂದು ವೇಳೆ ಮೈಕೆಲ್ ಮತ್ತು ಜಾನ್‌ರ ನಡುವಿನ ಆಯ್ಕೆ ಪ್ರಕ್ರಿಯೆಯಲ್ಲಿ ತಟಸ್ಥರಾಗಿ ಕುಳಿತಿದ್ದರೆ ನಿಸ್ಸಂಶಯವಾಗಿಯೂ ಅದ್ಭುತ ವಾಗ್ಮಿಯಾದ, ಜನರ ನಾಡಿ ಮಿಡಿತವನ್ನು ಅರಿತಿದ್ದ ಮೈಕೆಲ್ ಹೆಸಲ್ಟೀನ್ ಗೆಲುವು ಸಾಧಿಸುತ್ತಿದ್ದರು. ಆದರೂ ಕೊನೆಗೆ ಪ್ರಧಾನಿಯಾದದ್ದು  ಜಾನ್ ಮೇಜರ್. ಇದಕ್ಕೆ ಮುಖ್ಯ ಕಾರಣ, 'ತಾವು ಗೆಲ್ಲದಿದ್ದರೂ, ಎದುರಾಳಿಗೂ ಗೆಲುವು ಸಿಗದ ಹಾಗೆ ನೋಡಿಕೊಳ್ಳುವ' ಶಕ್ತಿ ಥ್ಯಾಚರ್‌ಗಿದ್ದದ್ದು. ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಯೇ ನಡೆಯಿತಾದರೂ ಥ್ಯಾಚರ್ ಗಳಿಸಿದ ಅನುಕಂಪದ ಅಲೆ,ಜಾನ್ ಮೇಜರ್‌ರನ್ನು ಪ್ರಧಾನಿಯಾಗಿಸಲು ಸಫಲವಾಯಿತು.
ಅದಾಗ್ಯೂ ಥ್ಯಾಚರ್ ಮತ್ತು ಆಡ್ವಾಣಿ ಅವರ ಮಧ್ಯೆ ಬಹುದೊಡ್ಡ ಭಿನ್ನತೆಯಿದೆ. ಈ ಗಾಂಧಿನಗರದ ಎಂಪಿ(ಆಡ್ವಾಣಿ) ತಪ್ಪು ಸಮಯದಲ್ಲಿ ಹೆಜ್ಜೆಯಿಟ್ಟದ್ದಷ್ಟೇ ಅಲ್ಲದೆ, ತಮ್ಮ ರಾಜಕೀಯ ಆಸಕ್ತಿಯನ್ನು ಮತ್ತು ಪ್ರಧಾನಿ ಹುದ್ದೆಯ ಬಗ್ಗೆ ತಮಗಿರುವ ಆಸೆಯನ್ನು ಹೊರಗೆಡವಲೇ ಇಲ್ಲ. ಅವರ ಅಧಿಕಾರವನ್ನು ದುರ್ಬಲ ಮಾಡಿದ್ದು ಇದೇ ಸಂಗತಿ! ಈಗೇನಿದ್ದರೂ ಮೋದಿಯ ಹೆಸರಷ್ಟೇ ಸುದ್ದಿ ಮಾಡುವುದು...

- ಅಶೋಕ್ ಮಲಿಕ್
malikashok@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.