ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕೆಲಸ ಮಾಡಿಸಿಕೊಳ್ಳಲು ದುಂಬಾಲು ಬೀಳುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಸ್ವಪಕ್ಷದವರೇ ಗಂಟೆಗಟ್ಟಲೇ ಕಾಯ್ದು ತಮಗೆ ಬೇಕಾದ ಕೆಲಸ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಕೆಲಸ ಆಗದಿದ್ದರೆ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಅವರನ್ನು ಸಂಪರ್ಕಿಸಬೇಕಂತೆ! ಇಂಥದೊಂದು ಗುಟ್ಟು ಬಿಟ್ಟು ಕೊಟ್ಟಿದ್ದು ಸ್ವತಃ ಹೊರಟ್ಟಿ ಅವರೇ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಇನ್‌ಕಾಮೆಕ್ಸ್ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿತ್ತು. ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಕೂಡ ಉಪಸ್ಥಿತರಿದ್ದರು. ಮಾತಿಗೆ ನಿಂತ ಹೊರಟ್ಟಿ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಹಳೇ ದೋಸ್ತ್. ಅವರು ಕಾಂಗ್ರೆಸ್‌ನವರಿಗಿಂತ ನಮ್ಮವರ ಮಾತೇ ಹೆಚ್ಚು ಕೇಳ್ತಾರೆ. ಈಗಲೂ ನಮ್ಮನ್ನು ನೋಡಿದ ಕೂಡಲೇ ನಮ್ಮ ಹಳೇ ದೋಸ್ತರು ಎಂದು ಕರೆಯುತ್ತಾರೆ. ಅವರ ಹತ್ತಿರ ಯಾವುದಾದರೂ ಕೆಲಸ ಆಗದಿದ್ದರೆ ನನ್ನ ಹತ್ತಿರ ಹೇಳಿ. ನನ್ನದು ಅವರದ್ದು ಹಳೇ ದೋಸ್ತಿ. ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದೇವೆ. ಹೀಗಾಗಿ ಯಾವುದೇ ಕೆಲಸವನ್ನಾದರೂ ಸರಿ ನಾನು ಸಲೀಸಾಗಿ ಮಾಡಿಸಿ ಕೊಡುತ್ತೇನೆ ಎಂದರು. ಹೊರಟ್ಟಿ ಅವರ ಮಾತು ಕೇಳುತ್ತಿದ್ದ ಎಚ್.ಕೆ. ಪಾಟೀಲ್ ಅವರು ಮಾತ್ರ ಮೌನಕ್ಕೆ ಶರಣಾಗಿದ್ದರು!
ಬಸನಗೌಡ ಯತ್ನಾಳ್‌ಗೆ ಅನಿವಾರ್ಯದ ಅಜ್ಞಾತವಾಸ!
ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ಕಾಲಕ್ಕೆ ಮಾತಿನ ಭರಾಟೆಯಲ್ಲಿ ಬಿಜಾಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಡಿಎಸ್‌ನ ಬಸನಗೌಡ ಪಾಟೀಲ್ ಯತ್ನಾಳ ಅವರು ನಾನು ಗೆದ್ದೇ ಗೆಲ್ತೀನಿ. ನನ್ನ ಶಿಷ್ಯ, ಮಾಜಿ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ಸೋಲಿಸಿಯೇ ತೀರುತ್ತೇನೆ. ನಾನು ಸೋಲುಂಡರೆ ಇದು ನನ್ನ ಕೊನೆಯ ಚುನಾವಣೆ ಎಂದು ವೀರಾವೇಶದಿಂದ ಘೋಷಿಸಿದ್ದರು. ಅಂದು ಅವರಾಡಿದ ಮಾತುಗಳೇ ಈಗ ಅವರನ್ನು ಪೇಚಿಗೆ ಸಿಲುಕಿಸುತ್ತಿವೆ! ಚುನಾವಣೆಯಲ್ಲಿ ಸೋತ ನಂತರ ಯತ್ನಾಳ್ ಮನೆ ಬಿಟ್ಟು ಹೊರಗೆ ಬರುತ್ತಿಲ್ಲ. ಹೊರಗೆ ಹೋದರೆ ಜನರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದು ಏನಾಯ್ತು ಎಂದು ಕೇಳುತ್ತಾರೆ ಎಂಬ ಅಳುಕು ಒಂದೆಡೆಯಾದರೆ, ನಾನು ಮನೆಯಲ್ಲಿಯೇ ಸುಮ್ಮನೆ ಕುಳಿತರೆ ಜನ ನನ್ನನ್ನು ಮರೆತು ಬಿಡುತ್ತಾರೆ ಎಂಬ ಭಯ ಮತ್ತೊಂದೆಡೆ! ಹೀಗಾಗಿಯೇ ವಿಧಾನಸಭೆ ಚುನಾವಣೆ ಮುಗಿದ ಬಳಿಕ ಸಭೆ, ಸಮಾರಂಭಗಳಿಂದ ಯತ್ನಾಳ್ ದೂರ ಉಳಿದಿದ್ದಾರೆ. ಮತದಾರರು ನೀಡಿದ ಅಜ್ಞಾತವಾಸ ಸೂಚನೆಯನ್ನು ಪಾಲಿಸುತ್ತಿರಬೇಕು ಎಂದು ವಿರೋಧ ಪಕ್ಷದವರು ತಮಾಷೆ ಮಾಡುತ್ತಿದ್ದಾರೆ.
ವಾಹನ ಸವಾರರಿಗೆ ಮೈಸೂರು ಪೊಲೀಸ್ ಆಯುಕ್ತರ ರೆಡ್‌ಸಿಗ್ನಲ್
ಪ್ರಮುಖ ರಸ್ತೆ, ವೃತ್ತಗಳಲ್ಲಿ ನಿಂತು ಸಂಚಾರ ನಿಯಂತ್ರಿಸಬೇಕಾದ ಪೊಲೀಸರ ಕೈಗೆ ಡಿಜಿಟಲ್ ಕ್ಯಾಮರಾ ಕೊಟ್ಟು, ಛಾಯಾಗ್ರಾಹಕರನ್ನಾಗಿ ಮಾಡಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಈಗ ಮತ್ತೊಂದು ಮೌಖಿಕ ಆದೇಶ ನೀಡಿದ್ದಾರೆ. ಅದು ಏನೆಂದರೆ ಬೆಳಗ್ಗೆ ಆನ್ ಮಾಡಿದ ಸಂಚಾರ ದೀಪಗಳನ್ನು ಯಾವುದೇ ಕಾರಣಕ್ಕೂ ರಾತ್ರಿವರೆಗೆ ಆಫ್ ಮಾಡಬಾರದು. ಮಳೆ ಬಂದರೂ ಕೂಡ! ಮೊದಲೆಲ್ಲಾ ಸಂಚಾರ ಪೊಲೀಸರು ಜನಸ್ನೇಹಿಯಾಗಿ ವರ್ತಿಸುತ್ತಿದ್ದರು. ಅಂದರೆ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರು ನೆನೆಯುತ್ತಾ ಸಿಗ್ನಲ್‌ಗಾಗಿ ಕಾಯಬಾರದು ಎಂದು ಆಫ್ ಮಾಡುತ್ತಿದ್ದರು. ಬ್ಲಿಂಕರ್ ಹಾಕುತ್ತಿದ್ದರು. ಸವಾರರು ಸುತ್ತಮುತ್ತ, ಅಕ್ಕಪಕ್ಕ, ಹಿಂದೆ- ಮುಂದೆ ನೋಡಿಕೊಂಡು ಓಡಾಡುತ್ತಿದ್ದರು. ಆದರೆ ಈಗ ಮಳೆ ಬಂದರೂ ನೆನೆಯುತ್ತಾ ಸಿಗ್ನಲ್‌ಗೋಸ್ಕರ ಕಾಯುತ್ತಿರಬೇಕು. ಈ ಬಗ್ಗೆ ಸಂಚಾರ ಪೊಲೀಸರಿಗೂ ಅಸಮಾಧಾನವಿದೆ. ಏನ್ ಮಾಡೋದ್ ಸಾರ್, ಪೊಲೀಸ್ ಇಲಾಖೆಯಲ್ಲಿದ್ದೀವಿ. ಹಿರಿಯ ಅಧಿಕಾರಿಗಳು ಕಾಗೆ ಬೆಳ್ಳಗಿದೆ ಎಂದರೂ ನಾವು ಹೌದು ಎನ್ನಬೇಕು. ಕಪ್ಪಗಿದೆ ಎನ್ನುವಂತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತವರಲ್ಲಿ ಪೊಲೀಸರ ರಾಜ್ಯ ಶುರುವಾಗಿದೆ. ಕೇಳುವವರೇ ಇಲ್ಲ. ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಎಂದು ಜನ ಕೋರಸ್‌ನಲ್ಲಿ ಹಾಡುವುದೊಂದೇ ಬಾಕಿ.
ಹೇಳೋದು ಆಚಾರ ತಿನ್ನೋದ ಮಾತ್ರ ಬದನೆಕಾಯಿ
ಮೈಸೂರಿನಲ್ಲಿ ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಶಿಕ್ಷಕರ ದಿನಾಚರಣೆ ಏರ್ಪಡಿಸಲಾಗಿತ್ತು. ಅದೇ ದಿನ ಮೈಸೂರು ನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯೂ ಇತ್ತು. ಈ ಚುನಾವಣೆಯಲ್ಲಿ ನಗರವನ್ನು ಪ್ರತಿನಿಧಿಸುವ ವಿಧಾನಸಭೆ, ವಿಧಾನ ಪರಿಷತ್ ಸದಸ್ಯರಿಗೂ ಮತದಾನದ ಹಕ್ಕಿತ್ತು. ಹೀಗಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲ ಶಾಸಕರು ಮೇಯರ್, ಉಪ ಮೇಯರ್ ಚುನಾವಣೆಗೆ ಹೋಗುವ ತರಾತುರಿಯಲ್ಲಿದ್ದರು. ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಭಾಷಣ ಮಾಡುತ್ತಿದ್ದರೆ ವಿಧಾನಸಭಾ ಸದಸ್ಯ ಜಿ.ಟಿ. ದೇವೇಗೌಡ ಅವರು ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರನ್ನು ಸನ್ಮಾನಿಸುತ್ತಿದ್ದರು. ರಾಜಕಾರಣಿಗಳೆಲ್ಲಾ ಹೋದ ನಂತರ ಸಾಹಿತಿಯೊಬ್ಬರು ಮಾತಿಗೆ ನಿಂತರು. ಶಿಕ್ಷಕರು ಮಕ್ಕಳಿಗಿಂತ ಹೆಚ್ಚಾಗಿ ಗಲಾಟೆ ಮಾಡುತ್ತಿದ್ದುದನ್ನು ಗಮನಿಸಿದ ಆ ಸಾಹಿತಿ, ನೀವೆಲ್ಲಾ ಶಿಕ್ಷಕರು. ನೀವೇ ಗಲಾಟೆ ಮಾಡಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡು ಮಾತಿಗೆ ಆರಂಭಿಸಿದರು. ವೇದಿಕೆಯಲ್ಲಿದ್ದ ಅಧಿಕಾರಿಗಳನ್ನು ಉದ್ದೇಶಿಸಿ, ಡಿಸಿ ಸಾಹೇಬ್ರೆ, ಸಿಇಒ ಸಾಹೇಬ್ರೆ, ಡಿಡಿಪಿಐ ಸಾಹೇಬ್ರೆ.. ಎಂದು ಮಾತು ಆರಂಭಿಸುತ್ತಿದ್ದಂತೆಯೇ ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಿಕ್ಷಕಿಯರು, ಇವರ್ಯಾವ ಸೀಮೆ ಸಾಹಿತಿ. ನಮ್ಗೆ ಬುದ್ಧಿ ಹೇಳಿ ಇವ್ರೆ ಎಲ್ಲಾರನ್ನೂ ಓಲೈಸುವಂತೆ ಮಾತನಾಡ್ತಾರೆ. ಹೇಳೋದೆಲ್ಲ ಆಚಾರ, ತಿನ್ನೋದು ಮಾತ್ರ ಬದನೆಕಾಯಿ ಎಂದು ಗೊಣಗಿಕೊಂಡರು.
ಮೈಸೂರಿನಲ್ಲಿ ಡಬಲ್ ಆಸರೆ!
ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಸೋತ ನಂತರ ಆಸರೆ ಫೌಂಡೇಷನ್ ಕಾರ್ಯಚಟುವಟಿಕೆಗಳು ಸ್ತಬ್ಧವಾಗಿವೆ. ಆದರೆ ಈಗ ಮೈಸೂರಿಗೆ ಪೊಲೀಸ್ ಆಯುಕ್ತರಾಗಿ ಬಂದಿರುವ ಡಾ.ಎಂ.ಎ. ಸಲೀಂ ಹಿರಿಯ ನಾಗರಿಕರಿಗೆ ರಕ್ಷಣೆ ಒದಗಿಸಲು ಆಸರೆ ಯೋಜನೆ ಜಾರಿ ಮಾಡಲು ಮುಂದಾಗಿದ್ದಾರೆ. ಇಬ್ಬರೂ ಸಕ್ರಿಯರಾದರೆ ಆಸರೆ ವರ್ಸಸ್ ಆಸರೆ ಎನ್ನಬಹುದು!
- ನಂಬಿರಾಜ್