ಅಂಕಣಗಳು

ಬಾಲ ನ್ಯಾಯ ಕಾಯಿದೆ: ಬೇಕಿದೆ ತಿದ್ದುಪಡಿ

Published On :

ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು. ಹಲವು ವೈವಿಧ್ಯತೆಗಳ -ವೈರುಧ್ಯಗಳ ನಡುವೆ ಏಕತೆಯನ್ನು ಕಾಪಾಡಿಕೊಂಡು ಬಂದಿರುವ ನಾಡು. ಪುರಾತನ ಸಂಸ್ಕೃತಿ, ಸನಾತನ ಧರ್ಮ, ಪ್ರಾಚೀನ ನಾಗರಿಕತೆ ಎರಡು ಮಹಾಕಾವ್ಯಗಳು. ವೇದ ಉಪನಿಷತ್ತುಗಳ ತವರೂರು. ಪ್ರಕೃತಿಯನ್ನು ಆರಾಧಿಸುವುದರ ಜತೆ-ಜತೆಯಲ್ಲೇ ಮಹಿಳೆಯರನ್ನೂ ಪೂಜಿಸುವ, ಗೌರವಿಸುವ ಪರಂಪರೆಯನ್ನು ಕಂಡ ನಾಡು. ಸ್ತ್ರೀಯನ್ನು ಪೂಜಿಸುವಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇಟ್ಟ ನಾಡು ನಮ್ಮದು. ಆದರೆ ... ಇತ್ತೀಚಿನ ದಿನಗಳಲ್ಲಿ ಮಹಿಳೆಯರ/ಮಕ್ಕಳ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆಯಂತಹ ಮೃಗೀಯ ಕೃತ್ಯಗಳು ಎಂತಹ ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡುತ್ತಿದೆ. ಈ ಕುಕೃತ್ಯಗಳಲ್ಲಿ ಹೆಚ್ಚು 'ಅಪ್ರಾಪ್ತ' ವಯಸ್ಕರೂ ಕೂಡ ಭಾಗಿಯಾಗುತ್ತಿರುವುದು ಆತಂಕಕಾರಿ ವಿಷಯವೇ. ದೇಶ ಕಾಣುತ್ತಿರುವ ಹಲವು ಸಾಮಾಜಿಕ ಸಮಸ್ಯೆಗಳು/ಪಿಡುಗುಗಳಾದ ಜಾತೀಯತೆ, ಕೋಮುವಾದ, ಬಡತನ, ಮೌಢ್ಯತೆ ಅಥವಾ ಪಾಕಿಸ್ತಾನದ ಭಯೋತ್ಪಾದನೆಗಿಂತಲೂ ಇವು ಬಹಳ ಕ್ರೂರ, ಅಮಾನವೀಯ ದುಷ್ಕೃತ್ಯಗಳೇ ಸರಿ. ಇವರು 'ಬಾಲಾಪರಾಧಿಗಳು' ಎನ್ನುವ ಕಾರಣಕ್ಕಾಗಿಯೇ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿರುವ/ ತಪ್ಪಿಸಿಕೊಳ್ಳುತ್ತಿರುವ ಹಲವಾರು ಉದಾಹರಣೆ ನಮ್ಮ ಮುಂದೆ ಇವೆ.

  • 2007ರಲ್ಲಿ ದೆಹಲಿಯಲ್ಲಿ ನಡೆದ ಘಟನೆ... 6 ವರ್ಷದ ಮುಗ್ಧ ಬಾಲೆಯ ಮೇಲೆ ಅತ್ಯಾಚಾರವೆಸಗಿ, ಕೊಲೆಗೈದು... ದೇಹವನ್ನು ಎರಡು ಭಾಗ ಮಾಡಿ ಟಾಯ್ಲೆಟ್‌ಗೆ ಎಸೆದಿದ್ದ ಕ್ರಿಮಿನಲ್ ಒಬ್ಬ ಬಾಲಕ (ಬಾಲಾಪರಾಧಿ)Trial Court ಮರಣದಂಡನೆ ವಿಧಿಸಿದ್ದರೂ, ದೆಹಲಿ ಹೈಕೋರ್ಟ್ ಬಾಲಪರಾಧಿ ಕಾನೂನಿನನ್ವಯ ಶಿಕ್ಷೆಯನ್ನು ರದ್ದು ಮಾಡಿ ಅಪರಾಧಿ ಅದಾಗಲೇ 5 ವರ್ಷ ಜೈಲುವಾಸ ಅನುಭವಿಸಿದ್ದರಿಂದ, ಅವನನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಗೊಂಡ 'ವಯಸ್ಕ' ಸತ್ತ ಹುಡುಗಿಯ ತಂದೆ-ತಾಯಿಯರಿಗೆ ಇರುವ ಮತ್ತೊಬ್ಬ ಮಗಳಿಗೆ ಕೊಲೆ ಬೆದರಿಕೆ ಹಾಕುತ್ತಾ Free birdಆಗಿ ತಿರುಗುತ್ತಿದ್ದಾನೆ.
  • 2013 (ಸೆಪ್ಟೆಂಬರ್) ರಾಜಸ್ತಾನದ 'ಕೋಟಾ'ದ ಕೇಶವಪುರದಲ್ಲಿ ... 6 ವರ್ಷದ ಬಾಲೆಯ ಮೇಲೆ ನಡೆದ ಅತ್ಯಾಚಾರ. ಅಲ್ಲಿನ ಪಂಚಾಯ್ತಿ ಈ ಹುಡುಗಿಯ ಜತೆ ಅಪರಾಧವೆಸಗಿದವನ 'ಅಪ್ರಾಪ್ತ' ಬಾಲಕನ ಜತೆ ಮದುವೆ ಮಾಡಲು ಮುಂದಾದಾಗ... ಪೊಲೀಸ್ ಗಮನಕ್ಕೆ ಬಂದು ಅಪರಾಧಿಯನ್ನು ಬಂಧಿಸಲಾಗಿದೆ.
  • 2012ರ ದೆಹಲಿ ಗ್ಯಾಂಗ್ ರೇಪ್... ನಿರ್ಭಯಾಳ ಮೇಲೆ ನಡೆದ ಅತ್ಯಾಚಾರ, ಹಿಂಸೆ, ಕ್ರೌರ್ಯ, ಕೊಲೆ... ಇಡೀ ನಾಗರೀಕ ಸಮಾಜದ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಿದ ದುರ್ಘಟನೆ. ಇಲ್ಲಿ 6 ಜನ ಅತ್ಯಾಚಾರಿಗಳ ಪೈಕಿ, ಹೆಚ್ಚು ಕ್ರೂರವಾಗಿ, ಮೃಗೀಯವಾಗಿ ನಡೆದುಕೊಂಡ 'ಬಾಲಾಪರಾಧಿ' ಅವನಿಗೆ ಘನ ನ್ಯಾಯಾಲಯ 3 ವರ್ಷದ ಸಜೆಯಷ್ಟೇ ವಿಧಿಸಿದೆ!!!
  • ಮನುಷ್ಯತ್ವವನ್ನು ಕಳೆದುಕೊಂಡವರ ಕೊನೆಯ ಕೃತ್ಯ- ಈ ಅತ್ಯಾಚಾರ, ಕೊಲೆ ಇದರಲ್ಲಿ ಹೆಚ್ಚು ಹೆಚ್ಚು 'ಬಾಲಕರೇ' ಭಾಗಿಯಾಗುತ್ತಿರುವುದಾದರೂ ಏಕೆ? ಬದಲಾಗುತ್ತಿರುವ ನಮ್ಮ ಸಾಮಾಜಿಕ -ಆರ್ಥಿಕ ಸ್ಥಿತಿಗತಿಗಳೇ? ಬೆಳೆಯುತ್ತಿರುವ ನಗರೀಕರಣವೇ; ಬದಲಾಗುತ್ತಿರುವ ನಮ್ಮ ಜೀವನಶೈಲಿ, ಆಹಾರ ಪದ್ಧತಿಗಳು ಅಥವಾ ಇಂತಹ ದುಷ್ಕೃತ್ಯಗಳಿಗೆ ಹೆಚ್ಚು ಉತ್ತೇಜನಕಾರಿಯಾಗುತ್ತಿರುವ ಅಂಗೈನಲ್ಲೇ ಎಲ್ಲವನ್ನೂ ತೆರೆದಿಡುವ ಮೊಬೈಲ್‌ಗಳು, ಕಂಪ್ಯೂಟರ್‌ಗಳು, ಟಿವಿಗಳೇ?
  • NCRB...National Crime Records Bureau... ತನ್ನ ಇತ್ತೀಚಿನ 2011ರ ವಾರ್ಷಿಕ ವರದಿಯಲ್ಲಿ ತಿಳಿಸಿರುವಂತೆ- ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ 'ಬಾಲಾಪರಾಧಿ'ಗಳ ಸಂಖ್ಯೆಈ ದಶಕದಲ್ಲಿ ಎರಡು ಪಟ್ಟು ಹೆಚ್ಚಿದೆಯಂತೆ... 2011ರಲ್ಲಿ -399 ಬಾಲಾಪರಾಧ ಪ್ರಕರಣ (ಅತ್ಯಾಚಾರ) ಇದ್ದು 2010ರಲ್ಲಿ -458, 2012ರಲ್ಲಿ -1149 ಪ್ರಕರಣ (ಎರಡು ಪಟ್ಟಿಗಿಂತಲೂ ಹೆಚ್ಚು).
  • ಈ ಅಂಕಿ-ಅಂಶಗಳನ್ನು ನೋಡುತ್ತಿದ್ದರೆ, ದೆಹಲಿ ನಿರ್ಭಯಳ ದುರ್ಘಟನೆ ನೆನೆಸಿಕೊಂಡರೆ... ದಿನವೂ ನಮ್ಮ ಸುತ್ತ-ಮುತ್ತಲೂ ಇಂದಿಗೂ ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ಗಮನಿಸಿದರೆ, ಅತ್ಯಾಚಾರ ಕಾನೂನಿಗೆ ಅಥವಾ ಬಾಲಾಪರಾಧ ಕಾನೂನಿಗೆ ತಿದ್ದುಪಡಿ ಅವಶ್ಯಕ ಮತ್ತು ಇವತ್ತಿನ ಅಗತ್ಯತೆ ಹೆಚ್ಚು ಎಂದೆನಿಸುವುದಿಲ್ಲವೇ?
  • 1990ರ ದಶಕದಲ್ಲಿ ಅಮೇರಿಕಾದಲ್ಲಿ ಬಾಲಾಪರಾಧಗಳು ಹೆಚ್ಚಾದಾಗಲೇ ಅಲ್ಲಿ ಆ ಬಾಲಾಪರಾಧ ಕಾಯಿದೆ  Get tough approach  ತಂದಿತು. Youth Court  ಗಳನ್ನು ಜಾರಿಗೆ ತಂದಿವೆ. ಅಮೆರಿಕದಲ್ಲಿ 'ಬಾಲ' ವಯಸ್ಸು 13-15 ಇದ್ದರೆ, ಯುಕೆಯಲ್ಲಿ ಅದು 10-18 ಆಗಿದೆ, ಚೀನಾದಲ್ಲಿ ಇದು 16-18 ವರ್ಷವಿದೆ.
  • ಈ ಎಲ್ಲಾ ದೇಶಗಳನ್ನು  ಬಾಲಾಪರಾಧ ಕಾನೂನಿಗೆ ತಿದ್ದುಪಡಿ ತಂದಿದ್ದು ಅದು ಅಲ್ಲಿ ಈ ವಯಸ್ಸುಗಳ ಅಂತರದ ಯಾವ ಬಾಲಕನೇ ಆಗಲಿ ಅತ್ಯಾಚಾರ ಮತ್ತು ಕೊಲೆಯಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದು ಕಂಡು ಬಂದರೆ, ತಕ್ಷಣದಿಂದಲೇ ಆ  ಬಾಲಾಪರಾಧಿಯ 'ಕೇಸು'-'ಅಪರಾಧ ಕೇಸು'ಎಂದು ಪರಿಗಣಿಸಲ್ಪಟ್ಟು - ಆ 'ವಯಸ್ಕ' ಕಾನೂನಿನಂತೆಯೇ ವಿಚಾರಣೆ ನಡೆದು ಶಿಕ್ಷೆಗೆ ಗುರಿಪಡಿಸಲಾಗುತ್ತದೆ.  ಈ ರೀತಿಯ ತಿದ್ದುಪಡಿ ನಮ್ಮಲ್ಲಿ ಜರೂರಾಗಿ ಮತ್ತು ಅತೀ ತುರ್ತಾಗಿ ಆಗಬೇಕಾಗಿದೆ.
  • ಅತ್ಯಾಚಾರ, ಹಿಂಸೆ, ಕೊಲೆಯಂತಹ ಪಾತಕವೆಸಗುವ ಬಾಲಾಪರಾಧಿಗಳಿಗೆ ಕಾನೂನಿನ ಭಯ ಇರುವುದಿಲ್ಲ. ಏನೇ ಮಾಡಿದರೂ 3 ವರ್ಷದ ಜೈಲು ಶಿಕ್ಷೆಯಷ್ಟೇ -ಎನ್ನುವ ಮನೋಭಾವ ಇಂತಹ ದುಷ್ಕೃತ್ಯಗಳಿಗೆ ಪ್ರೇರೇಪಿಸುತ್ತದೆ.
  • ಕಾನೂನಿನಲ್ಲಿ ಇವರಿಗೆ ಭಯ ಹುಟ್ಟಿಸುವಂತಹ ಶಿಕ್ಷೆಯನ್ನು ಅಳವಡಿಸಬೇಕು. ಮರಣದಂಡನೆಯೇ ಅಂತಿಮವಾಗಬೇಕು.
  • ಹೆಚ್ಚು -ಹೆಚ್ಚು ತ್ವರಿತ ಗತಿ ನ್ಯಾಯಾಲಯಗಳನ್ನು ಸ್ಥಾಪಿಸಿ: Forensic report & Doctors Certificate ಆದ ತಕ್ಷಣ -ಅಲ್ಲಿ ಅತ್ಯಾಚಾರ ಆಗಿರುವುದು ಸಾಬೀತಾಗಿದ್ದರೆ-Legal Procedureಕಾಲಮಿತಿಯೊಳಗೆ ಪೂರೈಸಿ ಶಿಕ್ಷೆಯನ್ನು ವಿಧಿಸಬೇಕು.
  • ಅತ್ಯಾಚಾರ/ಯಾವುದೇ ಅಪರಾಧ ಕೃತ್ಯಗಳು-ಮೊದಲು ಅವು Act of mind--ಎಂದೇ ಅಪರಾಧಿಗಳ Biological ageMental ageನ್ನು ಪರಿಗಣಿಸಬೇಕು.
  • ಮಾನವೀಯತೆ ಎಂದು ಹೇಳಿ ಅಪರಾಧಿಯನ್ನು ರಕ್ಷಿಸಿದರೆ ಮುಂದಿನ ದಿನಗಳಲ್ಲಿ ಇಂಥದೇ ಅನಾಹುತಕಾರಿ ದುಷ್ಕೃತ್ಯಗಳಿಗೆ ಅಡಿಗಲ್ಲು ಹಾಕಿಕೊಟ್ಟಂತಾಗುತ್ತದೆ. ಎರಡು- ಬದುಕಿ ಬಾಳಬೇಕಾಗಿದ್ದ ಅಮಾಯಕರ ಹಕ್ಕನ್ನು ಕಿತ್ತು ಕೊಂಡಂತಾಗುತ್ತದೆ.
  • ಜನಸಾಮಾನ್ಯರಲ್ಲೂ ಕಾನೂನುಗಳ ಬಗ್ಗೆ ಗೌರವ ಮೂಡಬೇಕಾದರೆ, ಕಾನೂನುಗಳನ್ನು ಮಾಡುವವರ ಬಗ್ಗೆ ನಂಬಿಕೆ ಇರಬೇಕಾದರೆ ಬಾಲ ನ್ಯಾಯ ಕಾನೂನಿಗೆ ತುರ್ತಾಗಿ ತಿದ್ದುಪಡಿಯ ಅಗತ್ಯವಿದೆ. ಇದು ನಮ್ಮ ದೇಶದ ಇಂದಿನ ಪರಿಸ್ಥಿತಿಗೆ ಅವಶ್ಯಕ ಮತ್ತು ಅನಿವಾರ್ಯ ಕೂಡ.
- ಹೆಚ್.ಸಿ. ಲಕ್ಷ್ಮಣ್
ಜಿಲ್ಲಾ ಪಂಚಾಯತ್ ಸದಸ್ಯರು, ಹಂಪಾಪುರ ಕ್ಷೇತ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.