ನಾವು ಬೇರೆಯವರಿಂದ ಯಾಕೆ ಕಲಿಯುವುದಿಲ್ಲ?
ನಮ್ಮ ಸುತ್ತಮುತ್ತಲಿನ ಸಣ್ಣ ಸಣ್ಣ ಪ್ರಾಣಿಗಳ ಸಾಂಘಿಕ ಬದುಕು ಎಷ್ಟು ಅದ್ಭುತ ಮತ್ತು ಅನುಕರಣೀಯ. "ಊರಿಗೆ ದಾರಿಯನ್ನು ಆರು ತೋರಿದರೇನು?" ಎಂಬ ವಿಶಾಲ ಮನೋಭಾವ ನಮಗೆ ದಾರಿದೀಪವಾಗಬೇಕು.
ಜ್ಞಾನವೆನ್ನುವುದು ಒಂದು ಅಪಾರ ಮಳಲಿನ ರಾಶಿ. ಅದರ ಎಲ್ಲ ಕಣಗಳನ್ನು ಮುಟ್ಟಲು ಒಂದು ಜನ್ಮ ಸಾಲದು. Art is long and time is fleeting (ಕಲೆ ಅನಂತ ಆದರೆ ಸಮಯ ಜಾರುತ್ತಿದೆ.) ಎಂಬುದು ಬಲ್ಲವರ ಹೇಳಿಕೆ. ಐನ್ಸ್ಟೈನ್, ರಸೆಲ್, ಸಿಜಿಯೂಂಗ್, ಅಲೆಕ್ಸಸ್ ಕೆರಲರ, ಜೆ.ಎಸ್. ಹಾಲ್ಡೇನ್, ಶಿವರಾಮ ಕಾರಂತ ಅವರಂತಹ ಮಹಾ ಮೇಧಾವಿಗಳು ಕೂಡ ಜ್ಞಾನದ ವಿಶ್ವ ರೂಪಕ್ಕೆ ಮಣಿಯಬೇಕಾಯಿತು. ಜ್ಞಾನ ಶೇಖರಣೆ ಒಂದು ಮಹಾ ತಪಸ್ಸು. ಅದು ಒಂದು ಮೂಲದಿಂದ ಮಾತ್ರವಲ್ಲದೇ ಹತ್ತಾರು ಮೂಲಗಳಿಂದ ನಿರಂತರ ಹರಿದು ಬರಬೇಕು. " ಊರಿಗೆ ದಾರಿಯನ್ನು ಆರು ತೋರಿದರೇನು?" ಎಂಬ ವಿಶಾಲ ಮನೋಭಾವ ನಮಗೆ ದಾರಿದೀಪವಾಗಬೇಕು. ಹದಿನಾರನೇ ಶತಮಾನದ ಪುಲಗೆರೆ ಸೋಮೇಶ್ವರ ತನ್ನ ಸೋಮೇಶ್ವರ ಶತಕದಲ್ಲಿ ಜ್ಞಾನ ಸಂಪಾದನೆಯ ರೀತಿಯನ್ನು ಬಲು ಸೊಗಸಾಗಿ ವಿವರಿಸಿದ್ದಾನೆ.
" ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಿಂ ಕೇಳುತಂ/ ಕೆಲವಂ ಮಾಳ್ಪವರಿಂದ ಕಂಡು, ಕೆಲವಂ ಸುಜ್ಞಾನದಿಂ ನೋಡುತಂ/ಕೆಲವಂ ಸಜ್ಜನಸಂಗದಿಂದರಿಯಲ್ ಸರ್ವಜ್ಞನಪ್ಪಂತೆಕೇ/ಳ್ಪಲವಂ ಪಳ್ಳ ಸಮುದ್ರದೈ ಹರಹರ ಶ್ರೀ ಚೆನ್ನಸೋಮೇಶ್ವರಾ..."
ಕೆಲವು ವಿಷಯಗಳನ್ನು ತಿಳಿದವರಿಂದ, ಕೆಲವನ್ನು ಶಾಸ್ತ್ರಾಧ್ಯಯನದಿಂದ, ಹಲವನ್ನು ಸಾಧಕರ ಸಾಧನೆಗಳನ್ನು ಪ್ರತ್ಯಕ್ಷ ಕಂಡು ಮತ್ತೆ ಕೆಲವನ್ನು ವಿವೇಚನಾಶಕ್ತಿಯಿಂದ, ಇನ್ನಷ್ಟು ಸಂಗತಿಗಳನ್ನು ಸಜ್ಜನರ ಒಡನಾಟದಿಂದ ಕಲಿತರೆ ಹಲವು ಹಳ್ಳಗಳು ಸೇರಿ ಸಮುದ್ರವಾಗುವಂತೆ ಮನಷ್ಯ ಸರ್ವಜ್ಞನಾಗುತ್ತಾನೆ. ನಮ್ಮ ಸುತ್ತಮುತ್ತಲಿನ ಸಣ್ಣ ಸಣ್ಣ ಪ್ರಾಣಿಗಳ ಸಾಂಘಿಕ ಬದುಕು ಎಷ್ಟು ಅದ್ಭುತ ಮತ್ತು ಅನುಕರಣೀಯ. ಕಾಗೆ ಒಂದಗುಳ ಕಂಡರೆ, ಕೋಳಿ ಒಂದು ಕುಟುಕ ಕಂಡರೆ ತಮ್ಮ ತಮ್ಮ ಬಳಗವನ್ನು ಕೂಗಿ ಕರೆದು ಹಂಚಿಕೊಂಡು ತಿಂದು ಸಂತೋಷದಿಂದ ಇರುತ್ತವೆ. ಭೀಕರ ಬರಗಾಲ ಬಿದ್ದು ಜನ ಕಂಗಾಲಾಗಿ ತುತ್ತು ಅನ್ನಕ್ಕಾಗಿ ಕನವರಿಸುವ ಕಾಲದಲ್ಲೂ ನಮಗೇಕೆ ಕನಿಕರ ಹುಟ್ಟುವುದಿಲ್ಲ? ಬದಲಾಗಿ ನಾಲ್ಕು ದುಡ್ಡು ಮಾಡಿಕೊಳ್ಳುವ ದುರ್ಬುದ್ಧಿ ಹುಟ್ಟುತ್ತಿದೆ?
ಓಟು ಗಿಟ್ಟಿಸುವ ಭರದಲ್ಲಿ ನಮ್ಮ ಸರ್ಕಾರವಾಗಲಿ, ರಾಜಕಾರಣಿಗಳಾಗಲಿ ಪೊಳ್ಳು ಭರವಸೆಗಳ ಹೊಳೆಗಳನ್ನೇ ಹರಿಸಿ ಜನತೆಯನ್ನು ವಂಚಿಸುತ್ತಾರೆ. ಸವಲತ್ತುಗಳಿಂದ ಜನ ಸೋಮಾರಿಗಳಾಗಿ ದುಡಿಯುವುದನ್ನು ಮರೆತಿದ್ದಾರೆ. ದುಡಿಮೆ ಇಲ್ಲವೆಂದ ಮೇಲೆ ಯಾವ ದೇಶ ಪ್ರಗತಿ ಹೊಂದಲು ಸಾಧ್ಯ? 'ಬದುಕಬೇಕಾದರೆ ನೀ ದುಡಿ' ಎಂದು ಚೀನಾ ದೇಶ ಹೇಳಿ ತನ್ನ ದೇಶದ ಬಾಗಿಲುಗಳನ್ನು ಮುಚ್ಚಿ ಬಿಟ್ಟಿತು. ಅನಿವಾರ್ಯವಾಗಿ ಜನ ಹಗಲು-ರಾತ್ರಿ ದುಡಿಯಲಾರಂಭಿಸಿದರು. ದುಡಿತದಲ್ಲಿ ಸುಖ ಕಂಡರು. ಕಾಯಕ ಅವರಿಗೆ ಕೈಲಾಸವಾಯಿತು. ಅದರ ಫಲ ಇಂದು ಚೀನಾ ದೇಶ ಜಗತ್ತಿನ ಬಲಾಢ್ಯ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ. ಎರಡನೆಯ ಮಹಾಯುದ್ಧದಿಂದ ನುಚ್ಚು ನೂರಾಗಿದ್ದ ಜರ್ಮನಿ ಮತ್ತೆ ಬಲಿಷ್ಠ ರಾಷ್ಟ್ರವಾಗಿ ಎದ್ದು ನಿಂತಿದ್ದು ದಿನದ ಹದಿನಾರು ತಾಸುಗಳನ್ನು ಸಮರ್ಥವಾಗಿ ಬಳಸಿಕೊಂಡಿದ್ದರಿಂದ.
ಇಸ್ರೇಲ್ನದ್ದು ಒಂದು ಅದ್ಭುತ ಪವಾಡ.1948ರಲ್ಲಿ ಉದಯವಾದ ಈ ಸಣ್ಣ ದೇಶ ಮರುಳಗಾಡನ್ನು ಫಲವತ್ತಾದ ನಾಡನ್ನಾಗಿ ಪರಿವರ್ತಿಸಿತು. ಸಮುದ್ರದ ಉಪ್ಪು ನೀರನ್ನು ಫಿಲ್ಟರ್ ಮಾಡಿ ಹಣ್ಣಿನಗಿಡಗಳನ್ನು ನೆಟ್ಟು ನಾಡನ್ನು ನಂದನವನವನ್ನಾಗಿಸಿ ರೂಪಿಸಿತು. ಇಂದು ಇಡೀ ಯುರೋಪ್ ಖಂಡಕ್ಕೆ ಹಣ್ಣು ಪೂರೈಸುವ ಏಕೈಕ ರಾಷ್ಟ್ರ ಇಸ್ರೇಲ್.
ನಿರಂತರ ಕ್ರಿಯಾಶೀಲತೆಯಿಂದ ಎದ್ದು ನಿಂತ ಮತ್ತೊಂದು ರಾಷ್ಟ್ರ ಜರ್ಮನಿ. ಏನು ಅದರ ಅಚ್ಚಕಟ್ಟುತನ, ಎಂಥ ಶುಭ್ರ, ಸ್ವಚ್ಛತೆ, ಚಕಚಕ ಕೆಲಸ ಮಾಡುವ ಅದರ ಲವಲವಿಕೆ ಎಷ್ಟು? ಆಡಳಿತದ ಚುಕ್ಕಾಣಿ ಹಿಡಿದವರ ಮುಂಧೋರಣೆ, ಪ್ರಾಮಾಣಿಕತೆ, ಜನಪರ ಕಾರ್ಯಕ್ರಮಗಳಿಂದ ಅದು ಪ್ರಗತಿಯ ನಾಗಲೋಟದಿಂದ ಸಾಗಿದೆ. ಜನರ ಮಿತಿಮೀರಿದ ಸುಖಾಪೇಕ್ಷೆ, ಮೈಗಳ್ಳತನ, ದೂರದರ್ಶಿತ್ವವಿಲ್ಲದ ದುರ್ಬಲ ಆಡಳಿತ ವಿದೇಶಿಯರ ಲೂಟಿಗಳಿಂದ ತತ್ತರಿಸಿ ಕಡೆದುಕೊಂಡು ಬಿದ್ದ ಒಂದು ದುರಂತ ರಾಷ್ಟ್ರ ನೌರು ( Nauru). ಶಾಂತಿಸಾಗರದ ಮಧ್ಯದಲ್ಲಿ ಅಂಡಾಕಾರದಲ್ಲಿದ್ದ ಕೇವಲ 21 ಚದುರ ಕಿಲೋ ಮೀಟರ್ ವಿಸ್ತಾರವಾದ ಕೇವಲ 6-7 ಸಾವಿರ ಜನಸಂಖ್ಯೆಯ ನೌರು ದೇಶ ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿತ್ತು. ಆದರೆ ಇಂದು ಆ ದೇಶ ಬೆಂಗಾಡು. ದೇಹವನ್ನು ದಂಡಿಸದೆ ಕುಳಿತು ತಿಂದ ಜನ ನಿಸ್ಸತ್ವರಾಗಿದ್ದಾರೆ. ದೈಹಿಕ- ಮಾನಸಿಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ದುಡಿತವಿಲ್ಲದ್ದರಿಂದ 10 ಜನರಲ್ಲಿ 9 ಜನ ಟೊಣಪರು. ಅನೇಕ ರೋಗಗಳಿಂದ ಬಳಲುತ್ತಿದ್ದಾರೆ. ನೌರು ದೇಶದ ಗತಿ ನಮಗೂ ಬರುವ ಲಕ್ಷಣಗಳು ಕಾಣುತ್ತಿವೆ. ಸುಜಲ, ಸುಫಲ, ಸಸ್ಯಶ್ಯಾಮಲೆಗಳಿಂದ ಮೈದುಂಬಿನಿಂತ ವಸುಂಧರೆ ತನ್ನ ಚೆಲುವನ್ನು ಕಳೆದುಕೊಳ್ಳುತ್ತಿದೆ. ಸ್ವಾರ್ಥ ರಾಜಕಾರಣಿಗಳು ವಿವೇಚನಾರಹಿತ ದುರ್ಬಲ ಆಡಳಿತ, ಕೇವಲ ಕೆಲವರ ತುಷ್ಟೀಕರಣದಿಂದ ಸಮಾಜ ಸ್ವಾಸ್ಥ್ಯ ಹಾಳಾಗಿದೆ. ದಿವಾಳಿಯಾಗುವ ಸೂಚನೆಗಳು ಕಂಡುಬರುತ್ತಿವೆ.
ದೇಶದ ಆಡಳಿತ ಯಂತ್ರ ಸಮರ್ಥವಾಗಿ ತುರುಸಿನಿಂದ ಕೆಲಸ ಮಾಡಲು ಹರಿತ ಬುದ್ಧಿಯ ಸೂಕ್ಷ್ಮ ಪ್ರಜ್ಞೆಯ ವಿಶಾಲ ಮನೋಭಾವದ, ದಯಾ ದೃಷ್ಟಿಯ ಮುಂಧೋರಣೆಯ ಯುವಕರ ಪಡೆ ಬೇಕು. ಇಂಥವರಿಂದ ಆಡಳಿತಕ್ಕೆ ಬಿಗುವು ಬರಬಲ್ಲದೆಂದು ಬ್ರಿಟೀಷರ ಕಾಲದಿಂದಲೂ ಪ್ರಚಲಿತವಿದ್ದ ನಂಬುಗೆ. ಅದಕ್ಕಾಗಿ ಯುಪಿಎಸ್ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಭರ್ತಿ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿದೆ. ಆದರೆ ಇತ್ತೀಚಿನ ರಾಜಕೀಯ ಸ್ಥಿತ್ಯಂತರಗಳಿಂದ ನಾನಾ ನಮೂನೆಯ ಮೀಸಲಾತಿಗಳು ಬಂದು ಹಾಲಿನ ಕೆನೆಯಂತಿದ್ದ ಬುದ್ಧಿವಂತ, ನಿಷ್ಠೆಯಿಂದ ಕೆಲಸ ಮಾಡುವ ಶಾಂತಪ್ರಿಯ ಪರಿಸರಕ್ಕೆ ಹೊಂದಿಕೊಳ್ಳುವ ಯವಕರಿಗೆ ಪಾಶ್ಚಾತ್ಯ ದೇಶಗಳಲ್ಲಿ ತುಂಬ ಮನ್ನಣೆ. ಹೀಗಾಗಿ ಅಮೆರಿಕ, ಇಂಗ್ಲಂಡ್, ಆಸ್ಟ್ರೇಲಿಯಾ ಹಾಗೂ ಗಲ್ಫ್ ದೇಶಗಳಲ್ಲಿ ಇವರು ತುಂಬಿಹೋಗಿದ್ದಾರೆ. ತಮ್ಮ ಅಸಾಧಾರಣ ಪ್ರತಿಭೆಯಿಂದ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದಾರೆ. ಐಐಟಿ ಪದವೀಧರರು ಭಾರತದಿಂದ ಪರದೇಶಕ್ಕೆ ಹೋದರೆ ಭಾರತದಲ್ಲಿ ಬೌದ್ಧಿಕ ಕ್ಷಾಮ ತಲೆದೋರುವುದರಲ್ಲಿ ಸಂಶಯವಿಲ್ಲ. ಪ್ರಪಂಚದ ಎಲ್ಲ ದೇಶಗಳಲ್ಲಿ ಪ್ರತಿಭೆಗೆ ಪುರಸ್ಕಾರ ನಮ್ಮ ದೇಶದಲ್ಲಿ ಮಾತ್ರ ತಿರಸ್ಕಾರ. ಹಿಂಗಾಗಿ ನಮ್ಮಲ್ಲಿ ಬುದ್ಧಿವಂತ ಅಧಿಕಾರಿಗಳು, ಪರಿಣತ ವೈದ್ಯರು, ಪ್ರತಿಭಾವಂತ ಎಂಜಿನಿಯರು, ಒಳ್ಳೆಯ ಸಂಶೋಧಕರು, ಆದರ್ಶ ಶಿಕ್ಷಕರು, ನುರಿತ ತಂತ್ರಜ್ಞರು, ಕುಶಲಕಾರ್ಮಿಕರು, ಶ್ರೇಷ್ಠ ಕ್ರೀಡಾಪಟುಗಳು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾನೂನು ಸುವ್ಯವಸ್ಥೆ ತುಂಬ ಬಿಗುವಿನದು. ಅಲ್ಲಿರುವುದು ಒಂದೇ ಕಾನೂನು. ಯಾವುದೇ ರೀತಿಯ ದಿನಬಳಕೆಯ ವಸ್ತುಗಳು ಮನುಷ್ಯ ದೇಹದ ಮೇಲೆ ದುಷ್ಪರಿಣಾಮ ಬೀರುವಂತಿದ್ದರೆ ತಕ್ಷಣ ತಡೆಯಲಾಗುತ್ತದೆ. ಆಹಾರ, ಔಷಧ, ನೀರು, ಉದ್ಯಾನವನ್ನು ರಕ್ಷಿಸಿಕೊಂಡು ಬರುತ್ತಾರೆ. ಗಿಡಮರಗಳನ್ನು ಕಡಿಯುವದೇ ಇಲ್ಲ. ಆದರೆ ನಮ್ಮಲ್ಲಿ ಮಾತ್ರ ನಿತ್ಯ ಗಿಡಮರಗಳ ಮಾರಣಹೋಮ. ಮೊಬೈಲ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಶಬ್ದಮಾಲಿನ್ಯ ಮಾಡಿದರೆ ಅಲ್ಲಿ ಉಗ್ರ ಶಿಕ್ಷೆ. ನಮ್ಮಲ್ಲಿ?
ಪ್ರಜೆಗಳನ್ನು ಕಾಪಾಡುವ ಕರ್ತವ್ಯವನ್ನು ಮರೆತು ಕೇವಲ ಭೋಗದಲ್ಲಿ ತೊಡಗಿರುವ ದೊರೆಗಳನ್ನು ಸೊಕ್ಕಿದ ಕೋಣಗಳೆಂದು ಸೋಮೇಶ್ವರ ತನ್ನ ಶತಕದಲ್ಲಿ ಬಣ್ಣಿಸಿದ್ದಾನೆ. ಇಂದು ಆಡಳಿತ ಸೂತ್ರ ಹಿಡಿದವರು ಇದಕ್ಕೆ ಯಾರೂ ಹೊರತಲ್ಲ. ಸ್ವಾರ್ಥ, ಸ್ವಜನಪಕ್ಷಪಾತ, ಹಣಗಳಿಸುವ, ಅಧಿಕಾರ ದುರ್ಬಳಕೆ, ದರ್ಪ, ದೌರ್ಜನ್ಯ ನಿರಂತರವಾಗಿ ನಡೆದಿದೆ. ಸಮಯ ಪ್ರಜ್ಞೆ ಇಲ್ಲ. ಶಿಕ್ಷಣದ ಗಂಧವಿಲ್ಲ. ಜನಪರ ಕಾಳಜಿ ಇಲ್ಲ. ಉತ್ತಮ ಸಂಸ್ಕಾರವಂತೂ ಮೊದಲೇ ಇಲ್ಲ. ಸುಮಾರು ಒಂದೂವರೆ ಸಾವಿರ ಜನಪ್ರತಿನಿಧಿಗಳು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ಏಳು ನೂರು ಜನಪ್ರತಿನಿಧಿಗಳು ಗಂಭೀರ ಅಪರಾಧ ಆರೋಪ ಎದುರಿಸುತ್ತಿದ್ದಾರೆ. ಇವರೆಲ್ಲ ಈ ದೇಶದ ಜನತೆಯ ಹಣೆ ಬರಹ ಬರೆಯುವ ಸ್ಥಾನದಲ್ಲಿ ಇದ್ದಾರೆ. 2000ನೇ ಇಸ್ವಿ ಮಾರ್ಚ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದರು. ಅದೇ ತಾನೇ ಅಮೆರಿಕ- ಭಾರತ ಸಂಬಂಧ ಸುಧಾರಿಸುವ ಹಂತದಲ್ಲಿ ಕ್ಲಿಂಟನ್ ನಮ್ಮ ಸಂಸತ್ತಿನಲ್ಲಿ ಅದ್ಭುತ ಭಾಷಣ ಮಾಡಿದರು. ಅವರ ತಿಳಿಹಾಸ್ಯ, ಪಾಂಡಿತ್ಯ ಪೂರ್ಣ ವಿಷಯ ಮಂಡನೆ, ನೀತಿ ನಿರೂಪಣೆ ಸಮಯೋಚಿತ ದೃಷ್ಟಾಂತಗಳು, ಶಿಕ್ಷಣ, ಆರೋಗ್ಯ ಸೇವೆ, ಹಾಗೂ ಭದ್ರತೆಗಳ ಬಗೆಗೆ ಮಾತನಾಡಿದಾಗ ಎಲ್ಲೆಡೆ ಸೂಜಿ ಬಿದ್ದರೂ ಸಪ್ಪಳಾಗದಂತಹ ಶಾಂತತೆ ಆವರಿಸಿತ್ತು. ಇಂತಹವರು ಭಾರತದಲ್ಲಿ ಒಬ್ಬರಾದರೂ ರಾಜಕಾರಣಿಗಳು ಇದ್ದಾರೆಯೇ? ಇಂತಹವರಿಂದ ನಮ್ಮವರು ಏಕೆ ಕಲಿತುಕೊಳ್ಳಬಾರದು?
-ಡಾ.ಶಿವಾನಂದ ಮೂಲಿಮನಿ
ಬೆಳಗಾವಿ ವೀರಶೈವ ವಾಣಿ ಪಾಕ್ಷಿಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

