ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ಅಶ್ವಕ್ಕೆ ಚಾಟಿ ಬೀಸಿ..!

ಯಾವುದೇ ಸರ್ಕಾರವಿರಲಿ, ಅದು ಸ್ಥಬ್ದ ಸರೋವರದಲ್ಲಿ ಸ್ವಚ್ಚಂದವಾಗಿ ಚಲಿಸುವ..
ಸಿದ್ದರಾಮಯ್ಯನವರೇ ನಿಮ್ಮ ಆಡಳಿತ ಅಶ್ವಕ್ಕೆ ಚಾಟಿ ಬೀಸಿ..!
Updated on: 

ಯಾವುದೇ ಸರ್ಕಾರವಿರಲಿ, ಅದು ಸ್ಥಬ್ದ ಸರೋವರದಲ್ಲಿ ಸ್ವಚ್ಚಂದವಾಗಿ ಚಲಿಸುವ ಹಂಸದಂತಿರಬೇಕೇ ಹೊರತು ಸರೋವರದಂತೆ ಸ್ಥಬ್ದವಾಗಬಾರದು. ರಾಜ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ 'ಗತಿ' ಹೀಗೆ ಆಗಿದೆ.
ಸಿದ್ದರಾಮಯ್ಯನವರ ಸರ್ಕಾರ ಅಕ್ಷರಶ: ನಿಂತ ನೀರಿನಂತೆ ಗೋಚರಿಸುತ್ತಿದೆ. ಶಾಂತ ಸರೋವರದಂತೆ ಕಾಣುತ್ತಿದೆ. ಆಡಳಿತ ಯಂತ್ರ ನಿರ್ವಹಣೆಯಲ್ಲಿ ಅಬ್ಬರವಿಲ್ಲ, ಚಲನಶೀಲತೆಯ ಡಾನ-ಡಂಗುರವಿಲ್ಲ. ಯಾವ ದೃಷ್ಟಿಯಿಂದ ನೋಡಿದರೂ ನಿರ್ಲಿಪ್ತತೆ, ನಿರ್ಭಾವುಕತೆ ಎದ್ದು ಕಾಣುತ್ತಿದೆ. ಇದನ್ನು 'ಸಮಚಿತ್ಥ' ಎನ್ನಬಹುದೋ, 'ಚಿತ್ಥ ವ್ಯಾಕುಲ' ರಾಹಿತ್ಯ ಸ್ಥಿತಿ ಎನ್ನಬಹುದೋ ಅಥವಾ ಅವೆರಡನ್ನೂ ಮೀರಿದ ಜಾಣಜಡತ್ವ ಎನ್ನಬಹುದೋ ಗೊತ್ತಾಗುತ್ತಿಲ್ಲ. ಏಕೆಂದರೆ ಸರ್ಕಾರದ ಓಟದಲ್ಲಿ ವೇಗವಿಲ್ಲ ; ಗುರಿಯೂ ಅಸ್ಪಷ್ಟ !
ಸಿದ್ದರಾಮಯ್ಯನವರು ಅಂತಲ್ಲ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದಾಗ ಟೇಕಾಫ್ ತೆಗೆದುಕೊಳ್ಳುವುದಕ್ಕೆ ಕೆಲ ಸಮಯ ಬೇಕು. ಆಡಳಿತಾತ್ಮಕವಾಗಿರಲಿ, ಸೈದ್ಧಾಂತಿಕವಾಗಿರಲಿ, ಅಭಿವೃದ್ಧಿಯ ಚಿಂತನೆಯಲ್ಲಿರಲಿ ಹಳೆಯದನ್ನು ಕಳೆದುಕೊಂಡು ಹೊಸತನವನ್ನು ಪ್ರದರ್ಶಿಸುವುದು ಚಿಟಿಕೆ ಹೊಡೆದಷ್ಟು ಸುಲಭವಲ್ಲ. ಅದಕ್ಕೂ ಒಂದಿಷ್ಟು ತಾಲೀಮು ಬೇಕಾಗುತ್ತದೆ. ಹಾಗೆ ನೋಡಿದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನವೇ ಒಂದಿಷ್ಟು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು. ಅದು ಅನ್ನಭಾಗ್ಯ ಯೋಜನೆ ಇರಬಹುದು, ಪರಿಶಿಷ್ಟ ಜಾತಿ-ಪಂಗಡ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಿದ ಸಾಲ ಮನ್ನಾ ಇರಬಹುದು, ರೈತರಿಗೆ ಹಾಲಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಿದ್ದಿರಬಹುದು. ಇದೆಲ್ಲವೂ ಸುದ್ದಿಯಾದವು, ಮಿಶ್ರ ಪ್ರತಿಕ್ರಿಯೆಯನ್ನು ಪಡೆದವು, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗೆ ಗುರಿಯಾದವು. ಆದರೆ ಇದೆಲ್ಲ ಆದ ನಂತರ ಈಗ ಸರ್ಕಾರವೇ ಕಾಣುತ್ತಿಲ್ಲ.
ಯಾವುದೇ ಸರ್ಕಾರದ ಕಾರ್ಯನಿರ್ವಹಣೆಗೆ ವೇಗೋತ್ಕರ್ಷ ಲಭಿಸಬೇಕಾದರೆ ಅದಕ್ಕೊಂದು 'ತಿರುಗಣಿ' ಸಮಯ ಎಂಬುದಿರುತ್ತದೆ. ಸಿದ್ದರಾಮಯ್ಯನವರ ಸರ್ಕಾರಕ್ಕೆ ಜನ ನಿಗದಿ ಮಾಡಿದ್ದ ಈ ಕಾಲ ಈಗ ಮುಗಿದಿದೆ. ಎದ್ದು ಕೆಲಸ ಮಾಡುವುದಕ್ಕೆ ಸಮಯ 'ಸಿದ್ದ'ವಾಗಿದೆ. ಸಿದ್ದರಾಮಯ್ಯನವರ ವೈಖರಿಯಲ್ಲಿ ಇದ್ಯಾವುದು ಕಾಣುತ್ತಿಲ್ಲ. ಅವರು ಆರಾಮವಾಗಿದ್ದಾರೆ. ಆದರೆ ಸರ್ಕಾರಕ್ಕೆ ಮಾತ್ರ ಯಾವುದೇ ಗುರಿ ಇದ್ದಂತೆ ಕಾಣುತ್ತಿಲ್ಲ. ಆಡಳಿತ ಹೇಗಿರಬೇಕು? ಹೇಗಿರಬಾರದು? ಹೇಗಿದ್ದರೆ ಚೆನ್ನ? ಎಂಬ ಯೋಚನೆಯೇ ಕಾಣುತ್ತಿಲ್ಲ. ಮಂತ್ರಿ ಪರಿಷತ್ತಿನ ಸಚಿವರು ಕೆಲಸ ಮಾಡುತ್ತಿರುವುದು ಕಾಣುತ್ತಿಲ್ಲ. ಆಡಳಿತ ಅದರ ಪಾಡಿಗೆ ಅದು ನಡೆದುಕೊಂಡು ಹೋಗುತ್ತಿದೆ. ಮಾತ್ರವಲ್ಲ ಅಧಿಕಾರಿ ವಲಯದಲ್ಲಿ ಜಡತ್ವವನ್ನೂ ಬಿತ್ತಿದೆ.
ಹಾಗಾದರೆ ಇದಕ್ಕೆಲ್ಲ ಏನು ಕಾರಣ? ಆಡಳಿತದ ಪಡಸಾಲೆಯೊಳಗೆ ಹೀಗೆ ಪ್ರಶ್ನಿಸಿದರೆ ಸ್ಪಷ್ಟೀಕರಣ ಹಾಗೂ ಸಬೂಬಿನ ಪಟ್ಟಿಯೇ ತಯಾರಾಗಿ ನಿಂತಿದೆ. ಅದರಲ್ಲಿ ಮೊದಲನೆಯದು ಹಾಗೂ ಸಿದ್ದರಾಮಯ್ಯನವರೂ ಸೇರಿ ಅಧಿಕಾರ ರೂಢರು ಹೋದಲ್ಲಿ, ಬಂದಲ್ಲಿ ಹೇಳುವುದು ಹಿಂದಿನ ಸರ್ಕಾರ ಮಾಡಿದ ಎಡವಟ್ಟು. ಹಿಂದಿನ ಸರ್ಕಾರ ಬೇಕಾಬಿಟ್ಟಿ ಘೋಷಣೆಗಳನ್ನು ಮಾಡಿತ್ತು. ಬೆಳಗ್ಗೆಯೊಂದು ಯೋಚನೆ, ಮಧ್ಯಾಹ್ನವೊಂದು ಯೋಜನೆ, ಸಾಯಂಕಾಲ ಅದಕ್ಕೆ ಬದಲಾವಣೆ. ಗೊತ್ತು-ಗುರಿ ಇಲ್ಲದ ಓಟ, ಅಕ್ಕಪಕ್ಕದವರು ನೀಡಿದ ಚೀಟಿಯನ್ನೂ ಸರ್ಕಾರದ ನಿರ್ಧಾರ ಎಂದು ಪರಿಗಣಿಸಿದ್ದು, ಮಿತಿಯಿಲ್ಲದ ಮಾತು, ಸಿಟ್ಟು-ಸೆಡವು, ಅನಪೇಕ್ಷಿತ ಕೋಪ-ತಾಪ ಸರ್ಕಾರಕ್ಕೆ ಕೆಟ್ಟ ಹೆಸರನ್ನು ತಂದವು. ಹಗರಣಗಳು ಅಂಟಿಕೊಂಡವು. ಹೀಗಾಗಿ ಇದನ್ನು ಸರಿಪಡಿಸುವುದಕ್ಕೆ ಸಮಯಬೇಕು ಎನ್ನುತ್ತಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯನವರು ಆರಂಭದಲ್ಲಿ ತೆಗೆದುಕೊಂಡ ಕೆಲವು ಆತುರದ ನಿರ್ಧಾರಗಳು ಅವರನ್ನು ಕಟ್ಟಿ ಹಾಕಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು ಪ್ರತಿಯೊಂದು ವಿಚಾರದ ಸಾಧಕ-ಬಾಧಕಗಳನ್ನು ಸಚಿವ ಸಂಪುಟ ಸಭೆಯಲ್ಲಿ ಅಳೆದು ತೂಗಿ ಮನವರಿಕೆಯಾದ ನಂತರವೇ ಒಪ್ಪಿಕೊಳ್ಳುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಸರಿ ಮತ್ತು ಅಪೇಕ್ಷಿತ. ಏಕೆಂದರೆ ಗಣಿಗಾರಿಕೆ ಸೇರಿದಂತೆ ಮಹತ್ವದ ವಿಚಾರಗಳಲ್ಲಿ ಹಿಂದಿನ ಸರ್ಕಾರ ತೆಗೆದುಕೊಂಡ ತೀರ್ಮಾನಗಳಿಗೆ ಈಗ ಯಾವ ತಿರುವು ಲಭಿಸುತ್ತಿದೆ ಎಂಬ ವಿಚಾರ ಸಿದ್ದರಾಮಯ್ಯನವರ ಕಣ್ಣಮುಂದೆ ಇದೆ.
ಇನ್ನೊಂದೆಡೆ ಶಾಸಕಾಂಗದ ನಿರ್ಧಾರವನ್ನು ಜಾರಿಗೆ ತರುವುದು ಕಾರ್ಯಾಂಗ. ಸರ್ಕಾರ ನಿಲ್ಲಲಿ, ನಡೆಯಲಿ, ಓಡಲಿ, ಬೀಳಲಿ ಅದರಲ್ಲಿ ಅಧಿಕಾರಶಾಹಿಗಳ ಪಾತ್ರ ಇದ್ದೇ ಇರುತ್ತದೆ. ಒಳ್ಳೆಯ ಅಧಿಕಾರಿ ಕೆಟ್ಟ ಮಂತ್ರಿಯನ್ನು ನಿಯಂತ್ರಿಸಬಲ್ಲ. ಅದೇ ರೀತಿ ಕೆಟ್ಟ ಅಧಿಕಾರಿ ಒಳ್ಳೆಯ ಮಂತ್ರಿಯನ್ನು ಕಾಲೆಳೆದು ಬೀಳಿಸಬಲ್ಲ. ಸಚಿವರನ್ನು ಪ್ರಶಂಸೆಯ ಪರ್ವತಕ್ಕೆ ಕರೆತಂದು ಪ್ರತಿಷ್ಠಾಪಿಸುವುದು, ಅವನತಿಯ ಆಳಕ್ಕೆ ತಂದು ಮುಳಿಗಿಸುವುದು ಅಧಿಕಾರಿಗಳ ಕೈಯಲ್ಲಿ ಇರುತ್ತದೆ. ಆದರೆ ರಾಜ್ಯದಲ್ಲಿ ಅಂಥ ಅಧಿಕಾರಶಾಹಿ ವರ್ಗ ಗರಬಡಿದು ಕುಳಿತು ಬಿಟ್ಟಿದೆ. ಯಾವುದೇ ಸಚಿವರ ವ್ಯಕ್ತಿಗತ ಆಶಯಗಳ ತಾಳಕ್ಕೆ ಅಧಿಕಾರಿಗಳು ಕುಣಿಯುತ್ತಿಲ್ಲ. ಅಷ್ಟೇ ಏಕೆ ಅಪೇಕ್ಷಿತ ಕಡತಗಳಿಗೆ ಸಹಿ ಹಾಕುವುದಕ್ಕೂ ಮೀನಾಮೇಷ ಎಣಿಸುತ್ತಿದ್ದಾರೆ. ಏಕೆಂದರೆ ಅವರಿಗೊಂದು ಶಾಶ್ವತ ಸತ್ಯ ಗೊತ್ತಾಗಿ ಬಿಟ್ಟಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಹೊಸ ಸರ್ಕಾರ ಬರುತ್ತದೆ,ಹೋಗುತ್ತದೆ. ಇಂದು ಬಂದು ನಾಳೆ ಹೋಗುವ ಸರ್ಕಾರಗಳ ಹರ್ಷದ ಕೂಳಿಗಾಗಿ ತಮ್ಮ ವರ್ಷದ ಕೂಳನ್ಯಾಕೆ ಕಳೆದುಕೊಳ್ಳಬೇಕು ಎಂಬ ಧೋರಣೆಯನ್ನು ಆಡಳಿತವರ್ಗ ಹೊದ್ದುಕೊಂಡು ಮಲಗಿದೆ. ಮಾತ್ರವಲ್ಲ ಮಂತ್ರಿಗಳಿಗೆ ಲಗಾಮು ತೊಡಿಸಿದೆ.
ಆದರೆ ಯಾವುದೇ ಸರ್ಕಾರದ ಚಲನಶೀಲತೆಗೆ ಹಿಂದಿನ ಸರ್ಕಾರದ ನಕಾರಾತ್ಮಕ ಅಂಶಗಳೇ ಅಡ್ಡಿಯಾಗಬಾರದು. ದೂರದೃಷ್ಟಿಯ ಯೋಜನೆಗಳೂ ಬೇಕು. ಬರಿ ಹಿಂದಿನ ಸರ್ಕಾರದ ರಥ ಎಳೆದವರು ಜೈಲಿಗೆ ಹೋದರು ಎಂದು ಹೇಳಿಕೊಂಡು ಕಾಲಕ್ಷೇಪ ಮಾಡುವುದು ಸರಿಯಲ್ಲ. ವಿಚಿತ್ರ ಎಂದರೆ ಸಿದ್ದರಾಮಯ್ಯನವರ ಸರ್ಕಾರ ಈ ಹೇಳಿಕೆಯನ್ನು ಕೊಡುತ್ತಲೇ ರಾಜ್ಯವನ್ನು ಜಡ್ಡುಗೊಳಿಸಿದೆ. ವಿವೇಕ, ಕಾಳಜಿ, ಬದ್ಧತೆ, ಗುರಿಯನ್ನು ಸಮಚಿತ್ತ ಹಾಗೂ ಸಮಭಾವದಲ್ಲಿ ಬೆರೆಸಿ ಆಡಳಿತ ನೀಡುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಹೊಲ ಉತ್ತು, ಒಳ್ಳೆಯ ಫಸಲು ನಿರೀಕ್ಷಿಸುವ ರೈತನ ಭೂಮಿಗೆ ಅತಿವೃಷ್ಟಿಯೂ ಒಳ್ಳೆಯದಲ್ಲ, ಅನಾವೃಷ್ಟಿಯ ಅಗತ್ಯವಿಲ್ಲ. ಆದರೆ ಮಳೆಯೇ ಬೇಡ ಎನ್ನುವುದು ಸಾಧ್ಯವಿಲ್ಲ. ಬಿತ್ತಿದ ಬೀಜ ಪೈರು ನೀಡುವುದಕ್ಕೆ ಹದವಾದ ಮಳೆ ಅಪೇಕ್ಷಿತ. ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಪ್ರಶಾಂತ ಸರೋವರದಲ್ಲಿ ತೇಲುವ ಹಂಸವಾಗುವ ಬದಲು ಸರೋವರದಂತೆ ಸರ್ಕಾರ ಸ್ಥಬ್ದವಾಗಿದೆ.
ಹೀಗಾಗುವುದಕ್ಕೆ ಕಾರಣಗಳು ಹಲವು. ಎಲ್ಲದಕ್ಕಿಂತ ಹೆಚ್ಚಿನದಾಗಿ ಮುಖ್ಯಮಂತ್ರಿ ಹುದ್ದೆ ಸಿದ್ದರಾಮಯ್ಯನವರಿಗೆ ಅನಾಯಾಸವಾಗಿ ಒಲಿಯಿತು. ಹೆಚ್ಚುಕಡಿಮೆ ಅಯಾಚಿತವಾಗಿಯೇ ಬಂತು. ಜಾತ್ಯತೀತ ಜನತಾ ದಳವನ್ನು ತೊರೆಯುವ ಸಂದರ್ಭದಲ್ಲಿ ತಾನು ಒಂದಿಲ್ಲೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಶಪಥ ಮಾಡಿದ್ದರು ಜತೆಗೆ ಅದಕ್ಕಾಗಿ ಪರಿತಪಿಸಿದ್ದರು. ಆದರೆ ಆ ರೀತಿಯ ತಪನೆಯಲ್ಲಿ ಅವರ ಪರಿಶ್ರಮವಿತ್ತೇ ಹೊರತು ಪಡೆಯುವಲ್ಲಿ ರಾಗಿ ಕಾಳಿನಷ್ಟೂ ಇರಲಿಲ್ಲ.
ಮುಖ್ಯಮಂತ್ರಿ ಪದವಿ ಸಿದ್ದರಾಮಯ್ಯನವರ ಬಳಿ ಬಂಗಾರದ ಬಟ್ಟಲಲ್ಲಿ ಬಂತೇ ಹೊರತು, ಅವರು ಅದರ ಬಳಿ ಧಾವಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದಕ್ಕೆ ಅಗತ್ಯವಾದ ಬಹುಮತವನ್ನು ಪಡೆಯುವ ಹೊತ್ತಿಗೆ, ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪೈಕಿ ಒಬ್ಬರಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಚುನಾವಣೆಯಲ್ಲಿ ಸೋತು ಹೋದರು. ಸ್ಪರ್ಧಿಯಾಗಬಹುದಾಗಿದ್ದ ಇನ್ನೊಬ್ಬ ಮುಖಂಡ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ ಕೇಂದ್ರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಗೊಂಡು ಸಿಎಂ ಗಾಧಿಯ ಹಾದಿಯನ್ನು ಸುಲಭವಾಗಿಸಿಕೊಂಡರು. ಕಾಂಗ್ರೆಸ್ ಇತಿಹಾಸದಲ್ಲೇ ಇಷ್ಟು ಸರಳವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆದ ಉದಾಹರಣೆ ರಾಜ್ಯದ ಮಟ್ಟಿಗೆ ಇದೇ ಮೊದಲು. ಹೀಗಾಗಿ ಆರಾಮವಾಗಿ ದಕ್ಕಿದ ಅಧಿಕಾರವನ್ನು ಸಿದ್ದರಾಮಯ್ಯ ಅಷ್ಟೇ ಆರಾಮವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ!
ಹೀಗಾಗಿ ಮುಖ್ಯಮಂತ್ರಿಗಳ ಮುಖದಲ್ಲಿ ಯಾವುದೇ ಆತಂಕ ಹಾಗೂ ಜವಾಬ್ದಾರಿಯ ನೆರಿಗೆ ಕಾಣುತ್ತಿಲ್ಲ. ಅದ್ಯಾವುದೋ ರೀತಿಯ ನಿರ್ಭಾವುಕತೆ, ನಿರ್ಲಿಪ್ತತೆ ಕಾಣುತ್ತಿದೆ. ಈ ಎರಡು ಭಾವ ಎಲ್ಲವನ್ನೂ ತ್ಯಜಿಸಿದ ಭೈರಾಗಿಗಳಿಗೆ ಹೇಳಿ ಮಾಡಿಸಿದ್ದೇ ಹೊರತು, ಸಮಾಜ ನಿರ್ಮಾಣದ ನೊಗ ಹೊತ್ತವರಿಗಲ್ಲ. ಆಡಳಿತ ನಡೆಸುವವರು ತಮ್ಮ ಅಂತರಂಗದ ಕದವನ್ನು ವಿಷಾದ, ಆತಂಕ, ಸಂಶಯ, ಸ್ವೈರ ಮನೋಭಾವಗಳಿಗೆ ತೆರೆಯಬಾರದು. ಅವರ ಆತ್ಮವಿಶ್ವಾಸ ಎಂದೂ ಮುಕ್ಕಾಗಬಾರದು.
ಸದಾ ಚಿರಸ್ಥಾಯಿಯಾಗಿ ಉಳಿಯುವಂತ ಯೋಜನೆಗಳನ್ನು ರೂಪಿಸುವ ಕನಸು ಮುಖ್ಯಮಂತ್ರಿಯಾದವರ ಕಂಗಳಲ್ಲಿ ಕುಣಿಯುತ್ತಿರಬೇಕು. ಆತಂಕದ ಐರಾವತವನ್ನು ವಿವೇಕದ ಅಂಕುಶದಿಂದ ಪಳಗಿಸಬೇಕು. ಉತ್ಸಾಹದ ಬುಗ್ಗೆಯಾಗಬೇಕು, ಚೈತನ್ಯದ ಚಿಲುಮೆಯಾಗಬೇಕು. ತಾವು ಓಡಬೇಕು; ಸಹೋದ್ಯೋಗಿಗಳನ್ನು ಮತ್ತು ಅಧಿಕಾರಿಗಳನ್ನು ತಮ್ಮದೇ ವೇಗದಲ್ಲೇ ಕರೆದೊಯ್ಯಬೇಕು. ಇಷ್ಟೆಲ್ಲ ಆಗಬೇಕಿದ್ದರೆ ಖುದ್ದು ಸಿದ್ದರಾಮಯ್ಯನವರೇ ಮೈಕೊಡವಿಕೊಂಡು ಎದ್ದೇಳಬೇಕು. ಕುಂಟುತ್ತಾ ಸಾಗಿದರೆ ತಲುಪಬೇಕಾದ ಗಮ್ಯ ಹತ್ತಿರವಿದ್ದರೂ ದೂರದಲ್ಲಿರುವಂತೆ ಭಾಸವಾಗುತ್ತದೆ.
ಮುಖ್ಯಮಂತ್ರಿಯಂಥ ಮಹತ್ವದ ಹುದ್ದೆಯನ್ನು ಏರಿದವರು ತಮ್ಮ ನಂತರವೂ ನೆನಪಿನಲ್ಲಿ ಉಳಿಯುವಂಥ ಕೆಲಸವನ್ನು ಬಿಟ್ಟು ಹೋಗಬೇಕು. ಇಂಥದೊಂದು ಘನ ಪರಂಪರೆ ರಾಜ್ಯ ರಾಜಕಾರಣದಲ್ಲಿ ಇದೆ. ಸ್ವತಃ ಸಿದ್ದರಾಮಯ್ಯನವರೇ ಒಪ್ಪಿಕೊಳ್ಳುವ ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಅವರು ಭೂ ಸುಧಾರಣೆ ಕಾನೂನಿಗೆ ರಾಜ್ಯದಲ್ಲಿ ತಿದ್ದುಪಡಿ ತಂದು ಅದೆಷ್ಟೋ ರೈತರಿಗೆ ಭೂ ಒಡೆತನದ ಹಕ್ಕನ್ನು ಕೊಟ್ಟರು. ಈ ಕಾರಣಕ್ಕಾಗಿ ರಾಜ್ಯದ ಹಳ್ಳಿಹಳ್ಳಿಯಲ್ಲೂ ಅವರಿನ್ನೂ ಜೀವಂತವಾಗಿದ್ದಾರೆ. ದಿ.ರಾಮಕೃಷ್ಣ ಹೆಗಡೆಯವರು ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಆಡಳಿತ ವಿಕೇಂದ್ರೀಕರಣ ನೀತಿ, ಅಧಿಕಾರ ಹಂಚಿಕೆ ಸೂತ್ರದಿಂದ ಅತ್ಯಂತ ಸಣ್ಣ ಸಮುದಾಯಕ್ಕೂ ಸರ್ಕಾರದಲ್ಲಿ ಪ್ರಾತಿನಿಧ್ಯ ದೊರೆಯುವುದಕ್ಕೆ ಸಾಧ್ಯವಾಯಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ತಮ್ಮ ಆಡಳಿತಾವಧಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದರು. ಇದರ ಫಲವಾಗಿ ಇಂದು ಕರ್ನಾಟಕ ವಿಶ್ವದ ಭೂಪಟದಲ್ಲೇ ಜಾಗ ಪಡೆದಿದೆ. ಜತೆಗೆ ಬಿಸಿಯೂಟ ಯೋಜನೆ ಗ್ರಾಮಾಂತರ ಪ್ರದೇಶಗಳಲ್ಲಿ ಓದುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗೆ ವರವಾಗಿದೆ. ಇನ್ನು ಕೆಲವರು ಮುಖ್ಯಮಂತ್ರಿ ಹುದ್ದೆಯನ್ನು ಏರಿ ಭ್ರಷ್ಟಾಚಾರದ ಮೂಲಕ ಹೆಸರಾಗಿದ್ದ ಉದಾಹರಣೆಯೂ ಇದೆ.
ರಾಜ್ಯದ ಜನತೆ ಸಿದ್ದರಾಮಯ್ಯನವರಿಂದ ಬಯಸುವುದು ಶಾಶ್ವತ ಯೋಜನೆಗಳನ್ನೇ ಹೊರತು ಇನ್ನೇನೂ ಅಲ್ಲ. ಸಿದ್ದರಾಮಯ್ಯನವರು ತಮ್ಮ ಹುದ್ದೆ ಬಿಟ್ಟು ಎದ್ದು ಹೋದಾಗ ಆ ಜಾಗದಲ್ಲಿ ಖಾಲಿತನ ಆವರಿಸಬಾರದು. ಬಂದರು, ಇದ್ದರು, ಹೋದರೂ, ಉಳಿಸಿದ್ದು ಏನೂ ಇಲ್ಲಪ್ಪ! ಎಂಬ ಭಾವ ಸೃಷ್ಟಿಯಾಗಲು ಬಿಡಬಾರದು. ಇದಕ್ಕಾಗಿ ಸಿದ್ದರಾಮಯ್ಯನವರು ತಮ್ಮ ಆಡಳಿತ ರಥಕ್ಕೆ ಕಟ್ಟಿದ ಕುದುರೆಗಳಿಗೆ ಮೊದಲು ಚಾಟಿ ಏಟುಕೊಟ್ಟು ವೇಗ ಹೆಚ್ಚಿಸಲೇಬೇಕು.

ಲಗೋರಿ: ಓಡುವವನ 'ಭಾಗ್ಯ' ಓಡುತ್ತದೆ. ತೂಕಡಿಸುವವನ 'ಭಾಗ್ಯ' ತೂಕಡಿಸುತ್ತದೆ.

- ಪಿ. ತ್ಯಾಗರಾಜ್
thyagarjun@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com