ಘರಾತ್‌ಗಳ ವಿದ್ಯುತ್ ಕ್ರಾಂತಿಯ ಮುನ್ನುಡಿ

ಉತ್ತರಾಖಂಡಕ್ಕೆ ಹೊರಟು ನಿಂತಿದ್ದಾಗ ಮೊಟ್ಟ ಮೊದಲು ಮನ ಹಂಬಲಿಸಿದ್ದು...
ಘರಾತ್‌ಗಳ ವಿದ್ಯುತ್ ಕ್ರಾಂತಿಯ ಮುನ್ನುಡಿ
Updated on: 

ವಾಣಿಜ್ಯ ಶಾಸ್ತ್ರ ಓದಿದವರಿಗೆ ವಿನಿಮಯ ಪದ್ಧತಿ ಎನ್ನುವುದರ ಅರಿವು ಚೆನ್ನಾಗಿ ಇರುತ್ತದೆ. ಈಗಲೂ ಹಳ್ಳಿಗಳಲ್ಲಿ, ವಿಶೇಷತಃ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಅಡಕೆ ಬೆಳೆಗಾರರಲ್ಲಿ ಈ ಪದ್ಧತಿ ಇದೆ. ಅದನ್ನು ಮುರಿಯಾಳು ಅಂತಲೂ ಕರೆಯುತ್ತಾರೆ. ಅಲ್ಲಿ ಹಣದ ವಿನಿಮಯ ಇರುವುದಿಲ್ಲ. ಬದಲಾಗಿ ಸೇವೆಗಳ ವಿನಿಮಯ.

ಉತ್ತರಾಖಂಡಕ್ಕೆ ಹೊರಟು ನಿಂತಿದ್ದಾಗ ಮೊಟ್ಟ ಮೊದಲು ಮನ ಹಂಬಲಿಸಿದ್ದು ಉತ್ತರಕಾಶಿಯ ಘರಾತ್‌ಗಳನ್ನು ನೋಡಬೇಕೆಂದು. ಜಲವಿದ್ಯುತ್ ಮಿಲ್‌ಗಳ ಸಾಲೇ ಅಲ್ಲಿನ ಭಾಗೀರಥಿ ಮಡಿಲ ಹಳ್ಳಿಗಳನ್ನು ಬೆಳಗುತ್ತಿದೆ. ಸ್ವಯಂ, ಸುಸ್ಥಿರ ಜೈವಿಕ ಇಂಧನ ಘಟಕಗಳು ಮಾಡಿರುವ ಸಾಧನೆ ಪುಟ್ಟದೇನಲ್ಲ. ವಿದ್ಯುತ್ ಸ್ವಾವಲಂಬನೆ ಸಾಧಿಸಿರುವ ಗಂಗಾ ತಟದ ರೈತಾಪಿ ವರ್ಗ. ಒಂದೆಡೆ ಅಭಿವೃದ್ಧಿಯ ಹೆಸರಿನಲ್ಲಿ, ಬೃಹತ್ ವಿದ್ಯುತ್ ಯೋಜನೆಗಳ ನೆಪದಲ್ಲಿ ಹಿಮಗಿರಿಯ ಮೇಲೆ ನಿರಂತರ ಮುಂದುವರಿಸಿಕೊಂಡೇ ಹೊರಟಿರುವ ದೌರ್ಜನ್ಯ. ಇನ್ನೊಂದೆಡೆ ಪರಿಸರಸ್ನೇಹಿ ಜೈವಿಕ ಇಂಧನ ಹಾಗೂ ಕಿರುವಿದ್ಯುತ್ ಘಟಕಗಳು ಸದ್ದಿಲ್ಲದೇ ನಡೆಸುತ್ತಿರುವ ನೈಜ ಕ್ರಾಂತಿ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆ ಏಕಕಾಲದಲ್ಲಿ ಇಂಥ ವೈರುಧ್ಯಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಪರಿಸರ ಹೋರಾಟಗಾರ, ನೀರಮಿತ್ರ ಸುರೇಶ್ ತೆಹ್ರಿ ಅಣೆಕಟ್ಟಿನ ದೇದೀಪ್ಯ (?) ದೃಶ್ಯದ ಹಿನ್ನೆಲೆಯಲ್ಲಿ ನನಗಾಗಿ ಕಾಯುತ್ತಿದ್ದರು. ರಾಜಸ್ಥಾನದ ಆಧುನಿಕ ಭಗೀರಥ ರಾಜೇಂದ್ರ ಸಿಂಗ್ ಉತ್ತರಕಾಶಿಯ ಸುಶೀಲಾ ಬೆಹನ್ ಹಾಗೂ ಸುರೇಶ್ ಭಯ್ಯಾರ ಬಗ್ಗೆ, ಅವರ ಹೋರಾಟದ ಕೆಚ್ಚಿನ ಬಗ್ಗೆ ಸಾಕಷ್ಟು ಹೇಳಿ, ಪರಸ್ಪರ ಪರಿಚಯ ಮಾಡಿಕೊಟ್ಟಿದ್ದರು. ಸುಶೀಲಾ ಬೆಹನ್ ಕೇದಾರ ಕಣಿವೆಯ ಪರಿಸರ ಸಂರಕ್ಷಣೆ ಹೋರಾಟದಲ್ಲಿ ತೊಡಗಿಕೊಂಡವರು. ರಾಜೇಂದ್ರ ಸಿಂಗ್‌ಜಿ ಗರಡಿಯಲ್ಲೇ ಪಳಗಿದ ಹುಲಿಗಳವು. ಅದೇ ಸಲುಗೆಯಲ್ಲಿ ಸ್ವಾಗತಿಸಿದ ಸುರೇಶ್ ಭಯ್ಯಾ ಮೊದಲು ಕರಕೊಂಡು ಹೋಗಿದ್ದು ಧನರಿಪಟ್ಟಿಗೆ.
2007ರಲ್ಲಿ, ವಿಷ್ಣು ಪ್ರಯಾಗ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ನಡೆಯುತ್ತಿದ್ದಾಗಲೇ ಉತ್ತರಕಾಶಿಯಲ್ಲಿ ಜೈವಿಕ ಇಂಧನ ಕ್ರಾಂತಿಯೂ ಹುಟ್ಟಿತ್ತು. ನಾವು ಅಲ್ಲಿನ ಘರಾತ್‌ವೊಂದನ್ನು ತಲುಪುವವರೆಗೆ ಹಾದಿಯುದ್ದಕ್ಕೂ ಸುರೇಶ್ ಭಯ್ಯಾ ಘರಾತ್‌ಗಳ ಬಗ್ಗೇ ಹೇಳಿದ್ದೇ ಹೇಳಿದ್ದು. ಘರಾತ್‌ಗಳ ಬಗ್ಗೆ ಮೊದಲೇ ಸ್ವಲ್ಪ ತಿಳಿದುಕೊಂಡಿದ್ದರಿಂದ ಆತ ಹೇಳಿದ್ದರಲ್ಲಿ ಉತ್ಪ್ರೇಕ್ಷೆಗಳೇನೂ ನನಗೆ ಕಾಣಿಸಲಿಲ್ಲ. ಹೇಳಿಕೇಳಿ ಹಿಮಾಲಯದ ತಪ್ಪಲಿನ ಮಂದಿ ಇದ್ದ ನೈಸರ್ಗಿಕ ಸಂಪನ್ಮೂಲಗಳನ್ನು ನಿಸರ್ಗಕ್ಕೆ ಧಕ್ಕೆಯಾಗದ ರೀತಿಯಲ್ಲಿ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದರಲ್ಲಿ ನಿಷ್ಣಾತರು. ಧನರಿಪಟ್ಟಿಯ ವಿದ್ಯುತ್ ಮಿಲ್ ತಲುಪಿದಾಗ ಅಲ್ಲಿ ಜನ ಕಾಳುಕಡಿಗಳನ್ನು ಹಿಡಿದುಕೊಂಡು ಸಾಲಾಗಿ ನಿಂತಿದ್ದರು. ಹೌದು, ಘರಾತ್‌ಗಳನ್ನು ಜಲವಿದ್ಯುತ್ ಮಿಲ್ ಎಂದು ಧಾರಾಳವಾಗಿ ಕರೆಯಬಹುದು. ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಿಕೊಂಡು, ಆ ವಿದ್ಯುತ್‌ನಿಂದ ನಡೆಯುವ ಗಿರಣಿಗಳೇ ಘರಾತ್‌ಗಳು. ಇವು ಸಾಮಾಜಿಕ ಸಾಮರಸ್ಯಕ್ಕೂ ಕಾರಣವಾಗಿವೆ ಎನ್ನುವುದು ಇನ್ನೂ ಕುತೂಹಲದ ಸಂಗತಿ.
ವಾಣಿಜ್ಯ ಶಾಸ್ತ್ರ ಓದಿದವರಿಗೆ ವಿನಿಮಯ ಪದ್ಧತಿ ಎನ್ನುವುದರ ಅರಿವು ಚೆನ್ನಾಗಿ ಇರುತ್ತದೆ. ಈಗಲೂ ಹಳ್ಳಿಗಳಲ್ಲಿ, ವಿಶೇಷತಃ ಉತ್ತರಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳ ಅಡಕೆ ಬೆಳೆಗಾರರಲ್ಲಿ ಈ ಪದ್ಧತಿ ಇದೆ. ಅದನ್ನು ಮುರಿಯಾಳು ಅಂತಲೂ ಕರೆಯುತ್ತಾರೆ. ಒಬ್ಬರ ಮನೆ ಕೃಷಿ ಕೆಲಸದಲ್ಲಿ ಮತ್ತೊಬ್ಬರು ನೆರವಾಗುವುದು, ಅವರ ಮನೆ ಕೆಲಸದಲ್ಲಿ ಇವರು ಸಹಾಯಹಸ್ತ ಚಾಚುವುದು. ಅಲ್ಲಿ ಹಣದ ವಿನಿಮಯ ಇರುವುದಿಲ್ಲ. ಬದಲಾಗಿ ಸೇವೆಗಳ ವಿನಿಮಯ. ಉತ್ತರಾಖಂಡದ ಘರಾತ್‌ನಲ್ಲಿ ಇರುವುದೂ ಇದೇ ಸಿದ್ಧಾಂತ. ಘರಾತ್‌ಗಳ ಒಡೆಯರು ಖಾಸಗಿ ವ್ಯಕ್ತಿಗಳು ಎನ್ನುವುದು ನಿಜವೇ ಆದರೂ, ಅದು ನಡೆಯುವುದು ಮಾತ್ರ ಸಾಮಾಜಿಕ ಸಿದ್ಧಾಂತದ ಮೇಲೆಯೇ. ಯಾರಾದರೂ ಘರಾತ್ ಸ್ಥಾಪಿಸುತ್ತಾರೆ ಎಂದಾದರೆ ಊರಿನವರೆಲ್ಲ ಶ್ರಮದಾನದ ರೂಪದಲ್ಲಿ ನೆರವಾಗುತ್ತಾರೆ. ಅದಕ್ಕೆ ಪ್ರತಿಯಾಗಿ ಯಾರದೇ ಮನೆಯಲ್ಲಿ ವಿಶೇಷ ಸಮಾರಂಭಗಳಿದ್ದರೆ, ಗ್ರಾಮದ ವತಿಯಿಂದ ಕೈಗೊಳ್ಳುವ ಜಾತ್ರೆ ಇತ್ಯಾದಿ ಆಚರಣೆಗಳ ಸಂದರ್ಭದಲ್ಲಿ ಘರಾತ್ ಒಡೆಯ ಮುಫತ್ತಾಗಿ ಕಾಳುಕಡಿಗಳನ್ನು ಹಿಟ್ಟು ಮಾಡಿಕೊಡುತ್ತಾನೆ. ಉಳಿದ ದಿನಗಳಲ್ಲಿ ಮಿಲ್ ಸೇವೆಗೆ ಕನಿಷ್ಠ ಶುಲ್ಕ ಕೊಡಬೇಕು. ಹೀಗೆ ವಿದ್ಯುತ್ ಸ್ವಾವಲಂಬನೆಯ ಜತೆಗೆ ಗ್ರಾಮಸ್ಥರ ನಡುವಿನ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವುದರಲ್ಲಿಯೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಘರಾತ್‌ಗಳು.
ಸಾಮಾನ್ಯವಾಗಿ ಘರಾತ್‌ಗಳು ಊರ ಹೊರಗಿರುತ್ತವೆ. ಊರ ಹೊರಗೆ ಅನ್ನುವುದಕ್ಕಿಂತ ನದಿ ದಡದಲ್ಲಿ ಎನ್ನುವುದೇ ಹೆಚ್ಚು ಸೂಕ್ತ. ಹರಿಯುವ ನೀರಿನಿಂದ ಹಾಗೆಯೇ ವಿದ್ಯುತ್ ಉತ್ಪಾದನೆ ಸಾಧ್ಯವಿಲ್ಲ. ಅದಕ್ಕೆ ಧುಮುಕುವ ನೀರೇ ಬೇಕು. ಇದು ಸರಳ ನಿಯಮ. ಇದಕ್ಕಾಗಿ ಮರದ ಹಲಗೆಗಳಿಂದ ನಿರ್ಮಿಸಿದ ಕೃತಕ ಕಾಲುವೆಗಳ ಮೂಲಕ ನದಿ ನೀರನ್ನು ಒಯ್ಯಲಾಗುತ್ತದೆ. ಕಾಲುವೆ ಆರಂಭದಲ್ಲಿ ಅಗಲವಾಗಿದ್ದು, ಬರುಬರುತ್ತಾ ಕಿರಿದಾಗುತ್ತದೆ. 2ರಿಂದ 6 ಮೀಟರ್ ಎತ್ತರದಿಂದ ನೀರು ಧುಮುಕುವಂಥ ಸ್ಥಳ ಸಿಗುವಲ್ಲಿಯವರೆಗೂ ನೀರನ್ನು ಇದೇ ರೀತಿ ಹರಿಸುತ್ತಾರೆ. ಅಲ್ಲಿ ಅಂದರೆ ತಳದಲ್ಲಿ ಮರದ ದೊಡ್ಡ ಚಕ್ರಗಳಿರುತ್ತವೆ. ಅವುಗಳ ಮೇಲೆ ನೀರು ಬೀಳುತ್ತಿದ್ದಂತೆ ಜೋರಾಗಿ ತಿರುಗಿಸಲಾಗುತ್ತದೆ. ವಿದ್ಯುತ್ ಉತ್ಪಾದನೆ ಆಗುತ್ತಿದ್ದಂತೆ ಗಿರಣಿ ಚಾಲೂ. ಮರದ ಕಾಲುವೆಗಳ ಮೂಲಕ ಒಮ್ಮೆ ನೀರು ಹರಿಸಿಕೊಂಡರೆ 1ರಿಂದ 1.5 ಕಿಲೋವ್ಯಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುತ್ತದೆ. ಅದರಿಂದ ಪ್ರತಿ ಗಂಟೆಗೆ 4ರಿಂದ 8 ಕೆ.ಜಿ.ಯಷ್ಟು ಧಾನ್ಯಗಳನ್ನು ಹಿಟ್ಟು ಮಾಡಬಹುದು.
ವರ್ಷದ ಎಲ್ಲಾ ದಿನಗಳಲ್ಲಿಯೂ ಘರಾತ್‌ಗಳು ಕಾರ್ಯನಿರ್ವಹಿಸುವುದಿಲ್ಲ. ತಿಂಗಳಿನಲ್ಲಿ 15ರಿಂದ 18 ದಿನ ಅಷ್ಟೇ ಇವು ಕೆಲಸ ಮಾಡುವುದು. ವಿದ್ಯುತ್ ಮಿಲ್ ಮಾಲೀಕನ ಮುಖ್ಯ ಕಸುಬು ಬೇಸಾಯವೇ ಆಗಿರುವುದರಿಂದ ಈ ರೀತಿಯ ವ್ಯವಸ್ಥೆ. ಇಷ್ಟೇ ಅವಧಿಯಲ್ಲಿ ಆತನಿಗೆ ಎರಡೂವರೆಯಿಂದ ಮೂರು ಸಾವಿರ ರುಪಾಯಿ ಗಳಿಕೆ.
ಉತ್ತರಾಖಂಡ ರಾಜ್ಯವೊಂದರಲ್ಲೇ ಇಂಥ 15,449 ಸಾಂಪ್ರದಾಯಿಕ ವಿದ್ಯುತ್ ಉತ್ಪಾದನಾ ಸ್ಥಾವರಗಳಿವೆ. ಅವುಗಳಲ್ಲಿ ಶೇ.65ರಷ್ಟು ಸಕ್ರಿಯವಾಗಿವೆ. ಇನ್ನು ಶೇ.25ರಷ್ಟು ಎಲ್ಲಾ ತಿಂಗಳುಗಳಲ್ಲಿ ಅಲ್ಲದಿದ್ದರೂ, ಸಾಂದರ್ಭಿಕವಾಗಿ ಕಾರ್ಯನಿರ್ವಹಿಸುತ್ತವೆ. ಉಳಿದ ಶೇ.10ರಷ್ಟು ನಿಷ್ಕ್ರಿಯವಾಗಿವೆ ಎನ್ನುತ್ತದೆ ಅಧಿಕೃತ ಅಂಕಿ- ಅಂಶ. ಇವು ನಿಷ್ಕ್ರಿಯಗೊಳ್ಳಲೂ ಆಧುನಿಕವಾದ ಡೀಸೆಲ್ ಗಿರಣಿಗಳು ಕಾರಣ ಎಂದು ವಿವರಿಸಿದರು ಸುರೇಶ್ ಭಯ್ಯಾ. ಡೀಸೆಲ್ ಗಿರಣಿಗಳ ಸಾಮರ್ಥ್ಯ ಸ್ವಾಭಾವಿಕವಾಗಿಯೇ ಹೆಚ್ಚು. ಅವು ಹಳ್ಳಿಗಳ ಮಧ್ಯದಲ್ಲಿ ಸ್ಥಾಪನೆಯಾಗಿರುವುದರಿಂದ ರಸ್ತೆ ಸಂಪರ್ಕ ಚೆನ್ನಾಗಿರುತ್ತದೆ. ಘರಾತ್‌ಗಳಿಗೆ ಹೋಗಲು ಏನಿಲ್ಲವೆಂದರೂ 2-3 ಮೈಲು ನಡೆಯಬೇಕು. ಕಚ್ಚಾಹಾದಿ ಬೇರೆ. ಆಗಾಗ ಘರಾತ್‌ಗಳಲ್ಲಿಯೂ ಗಿರಣಿಗಳಷ್ಟೇ ಹಣ ಪಡೆಯುತ್ತಿದ್ದಾರೆ. ಆದ್ದರಿಂದ ತಾವೇ ದುಡಿದು ಸ್ಥಾಪಿಸಿದ ಘರಾತ್‌ಗಳಾದರೂ ಜನ ಅಲ್ಲಿಗೆ ಹೋಗುವುದನ್ನು ನಿಧಾನಕ್ಕೆ ಕಡಿಮೆ ಮಾಡುತ್ತಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಕೃಷಿಯನ್ನೇ ನಂಬಿಕೊಂಡವರ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ. ಹಳ್ಳಿಗರೂ ಸಮೀಪದ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಕೃಷಿ ಕಡಿಮೆಯಾಗಿರುವುದರಿಂದ ಗ್ರಾಮಗಳಲ್ಲಿ ಬೆಳೆಯುವ ಧವಸ- ಧಾನ್ಯಗಳ ಪ್ರಮಾಣವೂ ಕಡಿಮೆಯಾಗುತ್ತಿದೆ. ಸಮೀಪದ ಷಹರಗಳಿಗೆ ದುಡಿಯಲು ಹೋಗುವವರು ರೆಡಿಮೇಡ್ ಹಿಟ್ಟು ಖರೀದಿಸಿ ತರುತ್ತಾರೆ ಎನ್ನುತ್ತ ಮತ್ತೊಂದು ಮಗ್ಗುಲನ್ನು ತೋರಿಸಿದರು.
ಘರಾತ್‌ಗಳನ್ನು ಉಳಿಸಿಕೊಳ್ಳಲು ಸ್ವಯಂಸೇವಾ ಸಂಸ್ಥೆಗಳು ಭಾರಿ ಪರಿಶ್ರಮಪಡುತ್ತಿವೆ. ಘರಾತ್‌ಗಳ ಆಧುನೀಕರಣಕ್ಕೆ ಅವು ತಾಂತ್ರಿಕ ನೆರವು ನೀಡುತ್ತಿವೆ. ಮರದ ಹಲಗೆಗಳ ಬದಲು ಲೋಹದ ತಗಡುಗಳು ಬಂದಿವೆ. ಇದರಿಂದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮತ್ತು ಗಿರಣಿ ಸಾಮರ್ಥ್ಯ ಶೇಕಡಾ 40ರಿಂದ50ರಷ್ಟು ಹೆಚ್ಚಾಗಿದೆ. ಮೇಲ್ದರ್ಜೆಗೆ ಏರಿರುವ ಘರಾತ್‌ಗಳು 5 ಕಿಲೋ ವ್ಯಾಟ್‌ವರೆಗೂ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಪಡೆದಿವೆ. ಅದಕ್ಕೆ ತಕ್ಕಂತೆ ಗಿರಣಿಗಳೂ ಮೇಲ್ದರ್ಜೆಗೆ ಏರಿವೆ. ಹೆಚ್ಚುವರಿ ವಿದ್ಯುತ್‌ನಿಂದ ಸಮೀಪದ ಮನೆಗಳಿಗೆ ಬೆಳಕಿನ ವ್ಯವಸ್ಥೆ ಆಗುತ್ತಿದೆ. ಎಣ್ಣೆ ತೆಗೆಯುವುದು ಮೊದಲಾದ ಸಣ್ಣಪುಟ್ಟ ಉದ್ದಿಮೆಗಳೂ ಇದೇ ವಿದ್ಯುತ್ ಅನ್ನು ಬಳಸುತ್ತಿವೆ. ಸದ್ದಿಲ್ಲದೇ ಮತ್ತೊಂದು ಕ್ರಾಂತಿಗೆ ಘರಾತ್‌ಗಳು ಮುನ್ನುಡಿ ಬರೆಯುತ್ತಿವೆ.

- ರಾಧಾಕೃಷ್ಣ ಎಸ್. ಭಡ್ತಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com