ಭೀಷ್ಮರ ಇಬ್ಬಂದಿತನವನ್ನು ದೊಡ್ಡ ಮೌಲ್ಯವೆಂದು ಬಿಂಬಿಸುವುದೇಕೆ?

ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿಯವರ ಬಗೆಗಿನ ಅನಂತಮೂರ್ತಿಯವರ ಮಾತುಗಳನ್ನು ಕುರಿತು ಪತ್ರಿಕೆಗಳಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಅನಂತಮೂರ್ತಿಯವರ ಸಮಯಸಾಧಕತೆಯನ್ನು ಪ್ರಶ್ನಿಸಿ ಸುದೀರ್ಘ ಲೇಖನಗಳು ಬಂದಿವೆ. ಅಲ್ಲಿಯವರೆಗೆ ಸರಿ. ಅನಂತಮೂರ್ತಿಯವರಿಗೆ ಇವರುಗಳ ವಾದಗಳ ಬಗೆಗೆ ಒಪ್ಪಿಗೆ ಇಲ್ಲದಿದ್ದಲ್ಲಿ ಲೇಖನರೂಪದಲ್ಲಿ ಪ್ರತಿಭಟಿಸಬಹುದಿತ್ತು. ಆದರೆ ಅದನ್ನು ಮಾಡಲಿಲ್ಲ. ಬದಲಿಗೆ ಈ ಪ್ರಕರಣ ಮುಂದುವರೆದಿದ್ದು ಕಳೆದ ಭಾನುವಾರ ಪತ್ರಿಕೆಗಳಲ್ಲಿ ಬಿಡುಗಡೆಯಾದ ಒಂದು ಪ್ರಕಟಣೆಯ ಮೂಲಕ - "ಮಾಧ್ಯಮಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ತೇಜೋವಧೆ" ಎಂಬ ಶೀರ್ಷಿಕೆಯಡಿಯಲ್ಲಿ. ಈ ಹೇಳಿಕೆಗೆ ಒಪ್ಪಿಗೆ ಕೊಟ್ಟವರು - ಹೆಚ್. ಎಸ್. ದೊರೆಸ್ವಾಮಿ, ಗಿರೀಶ್ ಕಾರ್ನಾಡ್, ಪ್ರೊ. ಬಿ. ಕೆ. ಚಂದ್ರಶೇಖರ್, ಇತ್ಯಾದಿ ಹಲವರು. ಈ ಹೇಳಿಕೆಯ ಕಡೆಯಲ್ಲಿ "ಮಾಧ್ಯಮಗಳ ಭಾಷೆ ನಡತೆಯನ್ನು ಕಾನೂನು ಮೂಲಕ ನಿಯಂತ್ರಿಸಬೇಕೇ ಅಥವಾ ಸ್ವಯಂ ನಿಯಂತ್ರಣವೇ ಸರಿಯಾದ ಮಾರ್ಗವೇ ಎನ್ನುವ ವಿಷಯ ಪ್ರಸ್ತುತವಾಗಿದ್ದು ನಾವು ಸ್ವನಿಯಂತ್ರಣದ ಪರ ಎನ್ನುವುದನ್ನು ಹೇಳಲಿಚ್ಛಿಸುತ್ತೇವೆ" ಎಂದಿದ್ದಾರೆ. ನೀವಾಗಿ ನೀವು ಸುಮ್ಮನಾಗಿ ಅಥವಾ ನಾವು ಕಾನೂನಿನ ಮಾರ್ಗದಿಂದ ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಪರ್ಯಾಯವಾಗಿ ಹೇಳುತ್ತಾರೆ ಈ ಮಂದಿ! ಇಂತಹ ಧಾರ್ಷ್ಟ್ಯ ಇವರುಗಳಿಗೆ ಬಂದಿದ್ದು ಹೇಗೆ? ಇದಕ್ಕೆ ಉತ್ತರ ಪಡೆಯಲು ನೆಹರು ಕಾಲಕ್ಕೆ ಹೋಗಬೇಕು. ತಮ್ಮ ವಿರುದ್ಧದ ನಿಲುವುಗಳನ್ನು ಹತ್ತಿಕ್ಕಲೆಂದೇ ತಾನೆ ಜವಾಹರಲಾಲ್ ನೆಹರು ಮೊದಲನೆಯ ತಿದ್ದುಪಡಿಯ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ 'subject to reasonable restrictions' ಎಂಬ ಕುತಂತ್ರದ ಕೊಡಲಿಯೇಟು ಹಾಕಿದ್ದು! ಮಗಳಾದ ಇಂದಿರಾ ಗಾಂಧಿ ಇದನ್ನೇ ತಾನೆ ದುರುಪಯೋಗ ಮಾಡಿ ತುರ್ತುಪರಿಸ್ಥಿತಿಯನ್ನು ಘೋಷಿಸಿ ಪತ್ರಿಕಾಸ್ವಾತಂತ್ರ್ಯವನ್ನು ಕಸಿದದ್ದು. ಹಾಗಾಗೇ ಇವರೆಲ್ಲರಿಗೂ ಕಾಂಗ್ರೆಸ್ ಅಂದರೆ ಅಚ್ಚುಮೆಚ್ಚು. ಕಾಂಗ್ರೆಸ್ ಕೂಡ ಈ ನಿಲುವಿನ ಬುದ್ಧಿಜೀವಿಗಳನ್ನು ಪದವಿ-ಪ್ರಶಸ್ತಿಗಳಿಂದ ಪೋಷಿಸುತ್ತಿರುವುದು ಗೊತ್ತೇ ಇದೆ.
ಪತ್ರಿಕೆಯೊಂದರಲ್ಲಿ ಅನಂತಮೂರ್ತಿ, "ಮಹಾಭಾರತ, ಹಿಂದು ಧರ್ಮ, ಸಾವರ್ಕರ್, ನೆಹರು, ಪಟೇಲ್ ಮುಂತಾದ ಹಲವು ವಿಷಯಗಳ ಬಗ್ಗೆ ಮಾತನಾಡಿರುವುದು ವರದಿಯಾಗಿದೆ. ತಾತ್ಪರ್ಯ ಹಳೆಯದೇ - "ಹಿಂದುತ್ವ ಅಳಿಸಿ, ಕಾಂಗ್ರೆಸ್ ಉಳಿಸಿ"! ಅವರ ನಿಲುವು ಅವರಿಗೆ ಬಿಟ್ಟದ್ದು. ಆದರೆ ಆಡುವ ಮಾತುಗಳಿಗೆ ದೃಢವಾದ ಪುರಾವೆಗಳನ್ನೂ ನೀಡಲಾರದಷ್ಟು ಬೌದ್ಧಿಕ ಆಲಸ್ಯವಾದರೆ ಏನೆಂದು ಹೇಳೋಣ ಇದನ್ನೆಲ್ಲ ಒಬ್ಬ ಲೇಖಕ ಹೇಳದೆ ಇನ್ಯಾರು ಹೇಳಬೇಕು ಎಂಬ ನೈತಿಕತೆಯ ಸೋಗನ್ನೇ ಮೊದಲು ನೋಡಬಹುದು. ಕಳೆದ ಕೆಲವು ವರ್ಷಗಳಲ್ಲಿ ಪತ್ರಿಕಾಮಾಧ್ಯಮದಲ್ಲಿ ಹಲವಾರು ಮಹತ್ತ್ವದ ಚರ್ಚೆಗಳು ನಡೆದವು. ಯಾವ ಚರ್ಚೆಯಲ್ಲೂ ಅನಂತಮೂರ್ತಿಯವರು ಲೇಖನದ ಮಾಧ್ಯಮದಲ್ಲಿ ಕಾಣಿಸಿಕೊಂಡಿಲ್ಲ. ಅವರೇನಿದ್ದರೂ ಭಾಷಣ ಅಥವಾ ಸಂದರ್ಶನ. ರಾಜಕಾರಣಿಗಳೂ ಕೂಡ ಹೀಗೆಯೇ ಅಲ್ಲವೇ? ಆಡಿದ ಮಾತನ್ನು ಅಲ್ಲಗಳೆಯಬಹುದು ಅಥವಾ ಮಾಧ್ಯಮದವರು ತಿರುಚಿದರು ಎನ್ನಬಹುದು, ಆದರೆ ಬರವಣಿಗೆ ಹಾಗಲ್ಲ. ಒಮ್ಮೆ ಬರೆದರೆ ನಿರಾಕರಿಸಲು ಕೂಡ ಬರದು.
ಲೇಖನಗಳ ಗುಣಮಟ್ಟದಿಂದ ಲೇಖಕರಿಗೆ ಗೌರವ ಬರುತ್ತದೆಯೇ ವಿನಾ ಲೇಖಕನ ಹೆಸರು-ಪದವಿಗಳಿಂದಲ್ಲ. ಇಷ್ಟೆಲ್ಲ ತೇಜೋವಧೆ ಎಂದು ಬೊಬ್ಬಿಡುವ ಇವರುಗಳು ಬೇರೆಯವರ ತೇಜೋವಧೆ ಮಾಡುವ ಮೊದಲು ಎಷ್ಟು ಯೋಚಿಸುತ್ತಾರೆ? ಮೋದಿಯವರನ್ನು ಫ್ಯಾಸಿಸ್ಟ್, ಕೊಲೆಗಡುಕ ಎಂದೆಲ್ಲ ಜರಿಯುವಾಗ ಹೇಗನ್ನಿಸುತ್ತದೆ? ಇಲ್ಲಿಯವರೆಗೆ ಭಾರತದ ಯಾವ ನ್ಯಾಯಾಲಯವೂ ಗುಜರಾತ್ ಗಲಭೆಯಲ್ಲಿ ಮೋದಿಯವರ ಕೈವಾಡವಿದೆ ಎಂದು ತೀರ್ಮಾನಿಸಿಲ್ಲ. ಹಾಗಿರುವಾಗ ನಿಮ್ಮ ಮಾತುಗಳಿಗೆ ಆಧಾರವೇನು? ಇದೇ ಅನಂತಮೂರ್ತಿಯವರು ಇತ್ತೀಚೆಗೆ ಬರಗೂರು ರಾಮಚಂದ್ರಪ್ಪನವರ ಕೃತಿಗಳನ್ನು ಬಿಡುಗಡೆ ಮಾಡುತ್ತಾ- "ಗುಜರಾತ್ ಭೂಕಂಪದ ವೇಳೆ ಆರ್ಎಸ್ಎಸ್ನವರು ಬಹುಬೇಗ ಅಲ್ಲಿಗೆ ತೆರಳಿ ಸಂತ್ರಸ್ತರ ಸೇವೆ ಮಾಡಿದರು. ಆದರೆ, ಅಲ್ಲಿ ದೊರೆತ ಚಿನ್ನವನ್ನು ಸಂತ್ರಸ್ತರಿಗೆ ನೀಡಲಿಲ್ಲ ಎಂಬ ಮಾತು ಬೇರೆ" ಎಂದಿದ್ದರು. ಸಾವಿರಾರು ಸ್ವಯಂಸೇವಕರ ಮೇಲೆ ಏಕಾಏಕಿ ನಿರಾಧಾರವಾಗಿ ಕಳ್ಳತನದ ಆರೋಪವನ್ನು ಮಾಡುವ ಇವರು ಯಾವ ರೀತಿಯಲ್ಲಿ ಗೌರವಾರ್ಹರು?
ಇನ್ನು ಅವರು ಮಹಾಭಾರತದ್ದು ಎಂದು ಗೌತಮ-ಅಹಲ್ಯೆಯರ ಕಥೆಯನ್ನು ಪ್ರಸ್ತಾಪಿಸುತ್ತಾರೆ. ಇದನ್ನು ಶರಶಯ್ಯೆಯಲ್ಲಿ ಮಲಗಿರುವ ಭೀಷ್ಮರು ಹೇಳಿದರು ಎಂದು ಕೂಡ ಹೇಳಿದ್ದಾರೆ. ಭಂಡಾರ್ಕರ್ ಸಂಶೋಧನ ಸಂಸ್ಥೆಯ ಮಹಾಭಾರತದ Critical Text ಅನ್ನು ಆಮೂಲಾಗ್ರವಾಗಿ ಓದಿರುವ ನನಗೆ ಈ ಕಥೆ ಮಹಾಭಾರತದಲ್ಲಿ ಬರುವುದಿಲ್ಲ ಎಂದು ಖಚಿತವಾಗಿ ಗೊತ್ತು. ಮುಂದುವರಿದು, "ಭೀಷ್ಮ, ಕೌರವರ ಕ್ರೌರ್ಯವನ್ನು ಕಣ್ಣಾರೆ ಕಂಡಿದ್ದಾನೆ. ಅದು ತಪ್ಪು ಎನ್ನುವುದೂ ಅವನಿಗೆ ಗೊತ್ತಿದೆ. ಆದ್ರೂ ಅವನದ್ದು ಕಾನೂನಿನ ಲೆಕ್ಕ. ಅದಕ್ಕೆ ತಾನು ಪಾಂಡವರ ಪರ ನಿಲ್ಲಬೇಕೋ ಅಥವಾ ಕೌರವರ ಪರವೋ ಎನ್ನುವ ಗೊಂದಲ ಇದೆ. ಇದೇ ಹಿಂದು ಧರ್ಮ' ಎಂದಿದ್ದಾರೆ. ಇದು ಅನಂತಮೂರ್ತಿಯವರ ಮರ್ಮವಷ್ಟೆ. ಇಲ್ಲಿ ನೈತಿಕ ಗೊಂದಲವೇ ಸನಾತನಧರ್ಮದ ಸ್ವರೂಪ ಎಂಬುದನ್ನು ಬಹಳ ನಯವಾಗಿ ಹೇಳುತ್ತಿದ್ದಾರೆ. ಮೋದಿ ಹಾಗೂ ಕಾಂಗ್ರೆಸ್ ನಡುವೆ ಯಾರ ಪರ ನಿಲ್ಲಲಿ ಎನ್ನುವ ಗೊಂದಲದ ನಡುವೆ ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದೇನೆ. ತನ್ಮೂಲಕ ನಾನು ನೈತಿಕವಾಗಿ ಭೀಷ್ಮರ ಮಟ್ಟದಲ್ಲಿದ್ದೇನೆ ಎನ್ನುವ ಧ್ವನಿಯನ್ನು ಕೂಡ ಇಟ್ಟಿದ್ದಾರೆ. ಸಭೆಯಲ್ಲಿ ಅಸಹಾಯಕಳಾದ ಹೆಣ್ಣೊಬ್ಬಳ ಮಾನಹರಣವನ್ನು ನೋಡುತ್ತ ಕೈಕಟ್ಟಿ ಕುಳಿತಿದ್ದ ಭೀಷ್ಮನ ನೈತಿಕತೆ ಬಹಳ ಎತ್ತರದ್ದೇ ಸರಿ! ಭೀಷ್ಮಾದಿಗಳ ಅಳತೆಯನ್ನು ಮೂಲ ಮಹಾಭಾರತದಲ್ಲಿ ದುರ್ಯೋಧನನೇ ಮಾಡಿದ್ದಾನೆ. ಪಾಂಡವರ ಜನಪ್ರಿಯತೆ ಹೆಚ್ಚುತ್ತಿರುವುದನ್ನು ಕಂಡು ಅವರನ್ನು ಹೇಗಾದರೂ ದೇಶಾಂತರ ಕಳಿಸಿ ವಾರಣಾವತದ ಅರಗಿನ ಮನೆಯಲ್ಲಿ ಕೊಲ್ಲುವ ತಂತ್ರಕ್ಕೆ ಯಾರು ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ತನ್ನ ತಂದೆಯಲ್ಲಿ ವಿಶ್ಲೇಷಿಸುತ್ತಾ, "ಭೀಷ್ಮರು ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ, ಮಧ್ಯಸ್ಥರು. ದ್ರೋಣರ ಮಗ ಅಶ್ವತ್ಥಾಮ ನನ್ನ ಕಡೆಯಿದ್ದಾನೆ. ಮಗನಿದ್ದೆಡೆ ದ್ರೋಣ ಇರುತ್ತಾನೆ ಎಂಬುದರಲ್ಲಿ ಅನುಮಾನವೇ ಇಲ್ಲ" ಎನ್ನುತ್ತಾನೆ(1.130.16)
ಭೀಷ್ಮನು ತನ್ನ ಪೌರುಷದಿಂದ ದುರ್ಯೋಧನನ ದುರಾಲೋಚನೆಗಳನ್ನು ಮೆಟ್ಟಿದ್ದರೆ ಮುಂದೆ ದ್ರೌಪದಿಯ ಪ್ರಸಂಗ ಏಳುತ್ತಲೇ ಇರಲಿಲ್ಲ. ಹಾಗೆ ನೋಡಿದರೆ ಕುರುಕುಲವಿನಾಶಕ್ಕೆ ಭೀಷ್ಮನ ಅಲಿಪ್ತ ನೀತಿಯೇ ಕಾರಣ. ಪ್ರಜಾಪ್ರಭುತ್ವವಾಗಿದ್ದೂ ಭ್ರಷ್ಟ ಸರ್ವಾಧಿಕಾರಿಗಳಾದ ನಾಸರ್ ಅಂತಹವರೊಡನೆ ಕೂಡಿ ಸೋವಿಯತ್ ಸರ್ವಾಧಿಕಾರತ್ವವನ್ನೇ ಬೆಂಬಲಿಸಿದ ನೆಹರು ಇದೇ ದಾರಿಯವರು. ಅನಂತಮೂರ್ತಿ ಪಟೇಲರನ್ನೂ ಇದೇ ಬುಟ್ಟಿಗೆ ಹಾಕುತ್ತಾರೆ. ಪಟೇಲರಿಗೆ ಈ ಮಟ್ಟದ ಗೊಂದಲದ ಸ್ವಭಾವವಿದ್ದಿದ್ದಲ್ಲಿ ಅವರಿಗೆ 500ಕ್ಕೂ ಹೆಚ್ಚು ರಾಜಪ್ರಭುತ್ವಗಳನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲಾಗುತ್ತಿತ್ತೇ? ನೆಹರು ಕೈಗೆತ್ತಿಕೊಂಡ ಒಂದೇ ಒಂದು ರಾಜಪ್ರಭುತ್ವ ಕಾಶ್ಮೀರದ್ದು. ಅದು ಇಂದಿಗೂ ಪರಿಹಾರವಾಗದ ಕಗ್ಗಂಟಾಗಿರುವುದು ಎಲ್ಲರಿಗೂ ತಿಳಿದೇ ಇದೆ. ಇದು ಅನಂತಮೂರ್ತಿಯವರ ಮಹಾಭಾರತ ಹಾಗೂ ಸನಾತನಧರ್ಮದ ತಿಳಿವಳಿಕೆ.
ಇನ್ನು ಕೇವಲ ವಯೋವೃದ್ಧನೆಂದು ಕೃಷ್ಣ ಭೀಷ್ಮನಿಗೆ ಮಣೆ ಹಾಕಲಿಲ್ಲ. ಹಾಗೆಯೇ ಬ್ರಾಹ್ಮಣರೆಂದು ದ್ರೋಣ, ಕೃಪ, ಅಶ್ವತ್ಥಾಮರಿಗೂ ಸೊಪ್ಪು ಹಾಕಲಿಲ್ಲ. ಅದಕ್ಕಾಗಿಯೇ ಕೃಷ್ಣ ಮಹಾತ್ಮ. ಇದು ಸನಾತನಧರ್ಮ. ಹಾಗೆಯೇ ರೈಲ್ವೆ ಸ್ಟೇಷನ್ನಿನಲ್ಲಿ ಟೀ ಮಾರುತ್ತಿದ್ದ ಹಿಂದುಳಿದ ಜಾತಿಯ ಹುಡುಗನೊಬ್ಬ ಇಂದು ಕೇವಲ ತನ್ನ ಕಾರ್ಯದಕ್ಷತೆಯಿಂದ ಜನ-ಮನಗಳನ್ನು ಗೆಲ್ಲುತ್ತಿರುವುದು ಸನಾತನಧರ್ಮೀಯರ ಗುಣಗ್ರಹಣಕ್ಕೆ ಸಾಕ್ಷಿ.
ಮಹಾಭಾರತದ ಆದಿಯಲ್ಲೇ ವೇದವ್ಯಾಸರು ವಿದುರನ ಸರ್ವತೋಮುಖ ಪ್ರಜ್ಞೆಯನ್ನು, ಕುಂತಿಯ ಸ್ಥೈರ್ಯವನ್ನು, ಗಾಂಧಾರಿಯ ಧರ್ಮಶೀಲತೆಯನ್ನು, ಕೃಷ್ಣನ ಮಹಾತ್ಮೆಯನ್ನು, ಪಾಂಡವರ ಸತ್ಯವಂತಿಕೆಯನ್ನು ಹಾಗೂ ಧೃತರಾಷ್ಟ್ರನ ಮಕ್ಕಳ ದುಷ್ಟತೆಯನ್ನು ಹೇಳಿದ್ದಾರೆಯೇ ವಿನಃ ಭೀಷ್ಮನ ಮಹಾತ್ಮೆಯನ್ನಲ್ಲ.
ಕೃಷ್ಣ ದುರ್ಯೋಧನನಿಗೆ ಹೇಳುತ್ತಾನೆ, "ಅವರನ್ನು(ಪಾಂಡವರನ್ನು) ದ್ವೇಷಿಸುವನು ನನ್ನನ್ನೂ ದ್ವೇಷಿಸಿದಂತೆ. ಅವರನ್ನು ಒಪ್ಪಿದವನು ನನ್ನನ್ನೂ ಒಪ್ಪಿದಂತೆ. ಧರ್ಮವಂತರಾದ ಪಾಂಡವರು ಬೇರೆಯಲ್ಲ ನಾನು ಬೇರೆಯಲ್ಲ." ಆದ್ದರಿಂದಲೇ ಮಹಾಭಾರತವು ಈ ಪಾತ್ರಗಳನ್ನು ತನ್ನ ಸಂದೇಶವಾಹಕರೆಂದು ಗುರುತಿಸಿರುವುದು. ಇವನ್ನೆಲ್ಲ ಬಿಟ್ಟು ಅನಂತಮೂರ್ತಿಯವರಿಗೆ ಸಂದೇಶವಾಗಿ ಕಂಡದ್ದು ಭೀಷ್ಮನ ಇಬ್ಬಂದಿ!
ಕಡೆಗೆ ಅನಂತಮೂರ್ತಿಯವರು ಭೀಷ್ಮನ ಮತ್ತೊಂದು ಕಥೆಯನ್ನು ಹೇಳುತ್ತಾರೆ. ಯಜ್ಞಬಲಿಗೆಂದು ನೂರಾರು ಗೋವುಗಳನ್ನು ಕೊಲ್ಲಲು 'ರೆಡಿ'ಯಾಗಿರುವ ಬ್ರಾಹ್ಮಣರನ್ನು ಕುರಿತು. ಈ ಕಥೆ ಕೂಡ ಮಹಾಭಾರತದಲ್ಲಿ ಎಲ್ಲೂ ಇಲ್ಲ. ಅನಂತಮೂರ್ತಿಯವರ ಮಹಾಭಾರತದ ಪ್ರತಿ ಎಲ್ಲಿಯದೋ ತಿಳಿಯದು. ಅವರೇ ಇದಕ್ಕೂ ಪುರಾವೆ ಒದಗಿಸಬೇಕು. ಅವರು ಹೇಳುತ್ತಾರೆ-"ಯಜ್ಞವನ್ನು ತಡೆಯುವುದು ಸಾಧ್ಯವಿಲ್ಲ ಎನ್ನುವುದು ಭೀಷ್ಮರಿಗೂ ಗೊತ್ತು. ಯಜ್ಞ ನಡೆಯಲಿ ಅಂತಾನೂ ಭೀಷ್ಮರು ಹೇಳೋದಿಲ್ಲ. ಆದರೆ ಗೋವುಗಳ ಬಗ್ಗೆ ಕರುಣೆ ತೋರಿಸ್ತಾರೆ". ಇಲ್ಲಿಯ ತಾತ್ಪರ್ಯವಿಷ್ಟೆ - ಬ್ರಾಹ್ಮಣರು ನಿರ್ದಯವಾಗಿ ಗೋವುಗಳನ್ನು ಕೊಲ್ಲುತ್ತಿದ್ದರು. ನಾನು ಗೋಹತ್ಯೆಯನ್ನು ವಿರೋಧಿಸದಿದ್ದರೂ ನನಗೆ ಕರುಣೆಯಂತೂ ಇದೆ. ಬ್ರಾಹ್ಮಣರಿಗೆ ಅದೂ ಇಲ್ಲ ಎಂದು. ಇಲ್ಲಿ ಒಂದು ತೊಂದರೆ. ಭೀಷ್ಮರಿಗೆ ಯಾವುದೇ ಕಾರಣಕ್ಕಾಗಿ ಪ್ರಾಣಿಹತ್ಯೆ ಮಾಡಿದರೆ ಕರುಣೆ ಬರುತ್ತಿತ್ತೋ ಅಥವಾ ಕೇವಲ ಯಜ್ಞಬಲಿಯ ಬಗೆಗೆ ತೊಂದರೆಯಿತ್ತೋ ಎಂಬುದನ್ನು ಇಲ್ಲಿ ತಿಳಿಸಿಲ್ಲ. ನಾನು ಈ ಸಮಸ್ಯೆಯನ್ನು ಕೊಲ್ಲಲ್ಪಡುವ ಪ್ರಾಣಿಯ ದೃಷ್ಟಿಯಿಂದ ನೋಡಬಯಸುತ್ತೇನೆ. ಯಜ್ಞಬಲಿಗೆ ಪ್ರಾಣ ಕಳೆದುಕೊಳ್ಳುವುದಾಗಲಿ ಅಥವಾ ಯಾರದೋ ಮನೆಯ ಊಟಕ್ಕಾಗಿ ಪ್ರಾಣ ಕಳೆದುಕೊಳ್ಳುವುದಾಗಲಿ ಗೋವಿಗೆ ಏನು ವ್ಯತ್ಯಾಸವಾಗುತ್ತದೆ? ಕೇವಲ ಯಜ್ಞಬಲಿಯನ್ನು ವಿರೋಧಿಸುವ ನೈತಿಕ ಹಕ್ಕು ಸಸ್ಯಾಹಾರಿಗಳಿಗುಂಟು ಅಷ್ಟೆ. ಮತ್ತು ಕ್ಷತ್ರಿಯನಾದ ಭೀಷ್ಮನು ಸಸ್ಯಾಹಾರಿ ಎಂದು ಎಲ್ಲೂ ಹೇಳಿಲ್ಲ. ಹೀಗಿರುವಾಗ ಇಲ್ಲಿ ಭೀಷ್ಮರದ್ದು ಎಡವಟ್ಟು ಎಂದೇ ಹೇಳಬೇಕು. ಅನಂತಮೂರ್ತಿಯವರು ಪ್ರಗತಿಪರರಾಗಿರುವ ಕಾರಣ ಕೇವಲ ಸಸ್ಯಾಹಾರಿಯಾಗಿರುವ ಸಂಭವ ಕಡಿಮೆ ಎಂದೆಣಿಸುತ್ತೇನೆ. ಹೀಗಿರುವಾಗ, ಈ ಸಮಸ್ಯೆಯನ್ನು ಪ್ರಾಣಿಯ ದೃಷ್ಟಿಯಿಂದ ನೋಡುತ್ತಿದ್ದಂತೆಯೇ ಎಲ್ಲೆಡೆ ನಡೆಯುವ ಎಲ್ಲ ಪ್ರಾಣಿವಧೆಯನ್ನೂ ಖಂಡಿಸಬೇಕಾಗುತ್ತದೆ.
ಇಲ್ಲಿ ನಾವು ಗಮನಿಸಬೇಕಾದದ್ದು ಅವರ ತಂತ್ರವನ್ನು - 'ಮೊದಲು ಭೀಷ್ಮರ ಅನಿಶ್ಚಿತತೆ ಅಥವಾ ಇಬ್ಬಂದಿತನವನ್ನು ದೊಡ್ಡ ಮೌಲ್ಯವೆಂದು ಬಿಂಬಿಸುವುದು. ನಂತರ ತಮ್ಮ ಧೋರಣೆಗಳಿಗೆ ತಕ್ಕಂತೆ ಭೀಷ್ಮರನ್ನು ಬಳಸಿ ಕಥೆ ಸೃಷ್ಟಿಸುವುದು. ತನ್ಮೂಲಕ ತಮ್ಮನ್ನು ಭೀಷ್ಮರೊಡನೆ ಸಮೀಕರಿಸಿಕೊಳ್ಳುವುದು. ಅದರಿಂದ ಭೀಷ್ಮರ ಬಗೆಗೆ ಅಲ್ಪ-ಸ್ವಲ್ಪ ಗೌರವವನ್ನಿಟ್ಟುಕೊಂಡಿರುವ ಜನರ ಮನದಲ್ಲಿ ಮೋದಿಯವರ ಬಗೆಗೆ ಇಬ್ಬಂದಿ ಮೂಡಿಸುವುದು. ಅಲಿಪ್ತವಾಗಿದ್ದುಕೊಂಡು ಮತ ಚಲಾಯಿಸದಿದ್ದರೂ ನಡೆಯುತ್ತದೆ ಎನ್ನುವ ದಿಕ್ಕಿನಲ್ಲಾದರೂ ಅವರ ಚಿಂತನೆಯನ್ನು ತೊಡಗಿಸುವುದು. ಇಲ್ಲಿ ಒಂದು ಸ್ಪಷ್ಟನೆ ಅಗತ್ಯ. ವೇದಕಾಲದಲ್ಲಿ ಪ್ರಾಣಿಬಲಿ ಇದ್ದದ್ದೇ. ಗವಾಲಂಭ, ಗೋಮೇಧ ಮುಂತಾದ ಯಜ್ಞಗಳಿದ್ದವು. ಜಗತ್ತಿನ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲೂ ಇವುಗಳು ಇದ್ದದ್ದೇ. ಅದರಲ್ಲಿ ಸಂಕೋಚಪಡುವ ಅಗತ್ಯವೇನಿಲ್ಲ.
ಕೇವಲ ಜಾತಿವಾದಕ್ಕೆ, ಸ್ತ್ರೀಶೋಷಣೆಗಷ್ಟೆ ಮೀಸಲಾದದ್ದು ಎಂಬಂತೆ ಬಿಂಬಿತವಾಗುವ ಮನುಸ್ಮೃತಿಯ ಒಂದು ಶ್ಲೋಕ ಇಲ್ಲಿ ಉಲ್ಲೇಖನೀಯ - "ನ ಮಾಂಸಭಕ್ಷಣೇ ದೋಷೋ ನ ಮದ್ಯೇ ನ ಚ ಮೈಥುನೇ / ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ" (ಮಾಂಸಭಕ್ಷಣೆಯಲ್ಲಾಗಲೀ, ಮದ್ಯಪಾನದಲ್ಲಾಗಲೀ, ಮೈಥುನದಲ್ಲೇ ಆಗಲೀ ದೋಷವಿಲ್ಲ. ಏಕೆಂದರೆ ಇವುಗಳೆಲ್ಲವೂ ಪ್ರಾಣಿಸಹಜ. ಆದರೆ ಇವುಗಳನ್ನು ತೊರೆಯುವುದರಲ್ಲಿ ಶ್ರೇಯಸ್ಸಿದೆ.)
ಈ ದೃಷ್ಟಿಯಿಂದ ಇಂದಿನ ಪ್ರಗತಿಪರರಿಗೆ ಸುಮಾರು 2000 ವರ್ಷಗಳ ಮುಂಚೆಯೇ ಮನುವು ಪ್ರಗತಿಪರನಾಗಿದ್ದನು ಎನ್ನಬಹುದೇ? ಒಪ್ಪಿದರೆ ಲಾಭವಿಲ್ಲ, ಒಪ್ಪದಿದ್ದಲ್ಲಿ ನಷ್ಟವಿಲ್ಲ.
ಮುಂದುವರಿಯುತ್ತಾ ಅನಂತಮೂರ್ತಿಯವರು ಸಾವರ್ಕರ್ ಒಬ್ಬ ಫ್ಯಾಸಿಸ್ಟ್ ಎಂದಿದ್ದಾರೆ. ನಾವು ಸಾವರ್ಕರ್ ಅವರ ಬಗೆಗೆ ಅಂಬೇಡ್ಕರ್ ಅವರ ನಿಲುವು ಏನಿತ್ತೆಂದು ಮೊದಲು ನೋಡಬಹುದು. ಅಂಬೇಡ್ಕರ್ ಅವರೇ ಪ್ರಕಟಿಸುತ್ತಿದ್ದ ಜನತಾ ಎಂಬ ಮಾಸಿಕದಲ್ಲಿ ಅವರು- 'ಸಾವರ್ಕರ್ ಅವರು ದಲಿತರ ಏಳಿಗೆಗೆ ಮಾಡುತ್ತಿರುವ ಕಾಯಕಗಳು ಗೌತಮ ಬುದ್ಧನು ಮಾಡಿದ ಮಟ್ಟದಲ್ಲಿವೆ' ಎಂದಿದ್ದಾರೆ. ಇನ್ನು ಯಾವ ಬ್ರಿಟೀಷರಿಗೆ ವಿರುದ್ಧವಾಗಿ ಸಾವರ್ಕರ್ ಹೋರಾಡಿದರೋ ಅವರು ಸಾವರ್ಕರ್ ಅವರನ್ನು ಹೇಗೆ ಬಿಂಬಿಸುತ್ತಾರೊ ನೋಡೋಣ. ಸಾವರ್ಕರ್ ಇದ್ದ ಲಂಡನ್ನ ಇಂಡಿಯಾ ಹೌಸ್ ಮುಂದಿರುವ ಫಲಕ ಏನು ಹೇಳುತ್ತದೆ ಗೊತ್ತೇ? VINAYAK DAMODAR SAVARKAR 1833-1966 Indian Patriot and Philosopher lived here ಎಂದು. ಅನಂತಮೂರ್ತಿಯವರೇ ಇದನ್ನು ಹಾಕಿರುವುದು ಖಂಡಿತ ಆರ್ಎಸ್ಎಸ್ ಅಲ್ಲ!
ಆದರೆ ನಮ್ಮಲ್ಲೇನಾಗುತ್ತಿದೆ? ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿದ್ದ ಸಾವರ್ಕರ್ ಸ್ಮರಣ ಫಲಕವನ್ನು ಕಾಂಗ್ರೆಸ್ಸಿನ ಮಣಿಶಂಕರ್ ಅಯ್ಯರ್ ತೆಗೆದುಹಾಕಿಸಿದರು! ಅದನ್ನು ಯಥಾಸ್ಥಿತಿಗೆ ತರುವಂತೆ ಬಿ.ಜೆ.ಪಿ ಮಾಡಿದ ಮನವಿಯನ್ನು ಕಾಂಗ್ರೆಸ್ ತಿರಸ್ಕರಿಸಿತು. ಇಂದಿರಾ ಗಾಂಧಿಯವರು ಸಾವರ್ಕರ್ ಕೊನೆಯುಸಿರೆಳೆದಾಗ "ಸಾವರ್ಕರ್ ದೇಶಪ್ರೇಮಕ್ಕೆ ಮತ್ತೊಂದು ಹೆಸರು ಹಾಗೂ ನೂರಾರು ಮಂದಿ ಅವರಿಂದ ಪ್ರೇರಣೆ ಪಡೆದಿದ್ದಾರೆ" ಎಂದಿದ್ದರು. ನೆಹರು ಅವರ ಅವಿವೇಕದ ಫಲವಾಗಿ ಚೀನಾ ಕೈಯಲ್ಲಿ ನಾವು ಮುಖಭಂಗ ಅನುಭವಿಸಿದಾಗ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು - "ಸಾವರ್ಕರ್ ಅವರ ಸಲಹೆಯಂತೆ ಭಾರತವು ತನ್ನ ಸೈನ್ಯಪಡೆಯನ್ನು ಸಜ್ಜುಗೊಳಿಸಿದ್ದರೆ ಈ ಅವಮಾನ ಆಗುತ್ತಿರಲಿಲ್ಲ" ಎಂದಿದ್ದರು. ಇಂತಹ ಮಹಾನ್ ದೇಶಪ್ರೇಮಿಯನ್ನು ಫ್ಯಾಸಿಸ್ಟ್ ಎಂದು ಕರೆಯಬೇಕಾದರೆ ಅನಂತಮೂರ್ತಿಯವರದ್ದು ಎಂಥ ವಿಕೃತ ಮನಸ್ಸಿರಬಹುದು?
ನಮ್ಮಲ್ಲಿ ಸೆಕ್ಯುಲರಿಸಂ ಎಂಬ ಪದವೊಂದೇ ಮಡಿಯಾದದ್ದು ಎನ್ನುವ ವಾತಾವರಣವನ್ನು ಬುದ್ಧಿಜೀವಿಗಳು ಹಾಗೂ ಮಾಧ್ಯಮಗಳು ಸೃಷ್ಟಿಸಿದ್ದಾರೆ. ಇದನ್ನು ಲೆಕ್ಕಿಸದೆ ನಾನೊಬ್ಬ ಹಿಂದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ನರೇಂದ್ರ ಮೋದಿ ಇವರುಗಳಿಗೆ ನುಂಗಲಾರದ ತುತ್ತಾಗಿದ್ದಾರೆ. ಅವರನ್ನು ಹೇಗಾದರೂ ನೆಲಕಚ್ಚಿಸಲು ದಿಲ್ಲಿಯಿಂದ ಗಲ್ಲಿಯವರೆಗೆ ಅನಂತಮೂರ್ತಿಯಂಥವರು ಇಂತಹ ಗುಲ್ಲುಗಳನ್ನು ಹಬ್ಬಿಸುತ್ತಿರುವುದು.
ಕೊನೆಯದಾಗಿ, ಮೋದಿಯವರು ಮಾಜಿ ಸೇನಾಧ್ಯಕ್ಷರಾದ ವಿ. ಕೆ. ಸಿಂಘ್ರೊಡನೆ ವೇದಿಕೆ ಹಂಚಿಕೊಂಡದ್ದನ್ನು ರಾಷ್ಟ್ರವನ್ನು ಆಕ್ರಮಿಸಲು ಮಾಡುತ್ತಿರುವ ಸಂಚು ಎಂಬಂತೆ ಅನಂತಮೂರ್ತಿ ಬಿಂಬಿಸಿದ್ದಾರೆ. ನಮಗೆಲ್ಲರಿಗೂ ಗೊತ್ತಿರುವಂತೆ ಭಾರತೀಯ ಸೇನೆ ಎಂದೂ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಂತಹ ಸೇನೆಯ ಮೇಲೆ ಅನುಮಾನ ಪಡಬಹುದಾದರೆ ಒಂದು ಬಾರಿ ದೇಶವನ್ನು ತುರ್ತುಪರಿಸ್ಥಿತಿಗೇ ದೂಡಿದ ಕಾಂಗ್ರೆಸ್ಸಿನ ಮೇಲೆ ಇನ್ನೂ ಹೆಚ್ಚು ಅನುಮಾನ ಪಡಬೇಕಲ್ಲವೇ?
ಅನಂತಮೂರ್ತಿಯವರೇ, ನಿಮ್ಮಿಂದ ಬರಹದ ರೂಪದಲ್ಲಿ ಇದಕ್ಕೆ ಪ್ರತಿಕ್ರಿಯೆ ದೊರಕದು ಎಂದು ನನಗೆ ತಿಳಿದೇ ಇದೆ. ಇಷ್ಟಕ್ಕೂ ನನ್ನ ಉದ್ದೇಶ ನಿಮಗೆ ತಿಳಿಯಹೇಳುವುದಲ್ಲ. ನನ್ನ ಉದ್ದೇಶವೇನಿದ್ದರೂ ಸಹನಾಗರಿಕರೊಂದಿಗೆ ಒಂದಷ್ಟು ಗಂಭೀರವಾದ ವಿಚಾರವಿನಿಮಯ.
ಅಂದ ಹಾಗೆ ಅನಂತಮೂರ್ತಿಯವರೇ, ಈ ಸುದ್ದಿಯನ್ನು ಗಮನಿಸಿದ್ದೀರಾ? ಅಜ್ಮೇರ್ ಸ್ಫೋಟಗಳಲ್ಲಿ ಅಪರಾಧಿಯೆಂದು ಹೆಸರಿಸಲಾಗಿರುವ ಭಾವೇಶ್ ಪಟೇಲ್ ಎಂಬಾತನು "ದಿಗ್ವಿಜಯ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ, ಶ್ರೀಪ್ರಕಾಶ್ ಜೈಸ್ವಾಲ್ ಮುಂತಾದ ಕಾಂಗ್ರೆಸ್ಸಿಗರು ಆರ್.ಎಸ್.ಎಸ್ ಮುಖಂಡರ ವಿರುದ್ಧ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಪಡಿಸಿದ್ದರೆಂದು" ಹೇಳಿದ್ದಾನೆ. ಇದರ ಬಗ್ಗೆ ಏನನ್ನುತ್ತೀರೋ ನಾನು ಊಹಿಸಲೇ? ಸಂಘಪರಿವಾರದ ಸಂಚು!!
-ವಾಸುಕಿ. ಎಚ್.ಎ
havasuki@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


