ಅಂಕಣಗಳು

ಬದಲಾಗದ ಘೋಷಣೆ, ಇದಲ್ಲವೇ ವೈಫಲ್ಯದ ಸೂಚನೆ?

ಬದಲಾಗದ ಘೋಷಣೆ, ಇದಲ್ಲವೇ ವೈಫಲ್ಯದ ಸೂಚನೆ?
Published On :

2014ರ ಮಹಾಚುನಾವಣೆ ನಡೆಯಲಿದೆ. 1952ರಿಂದ ಇಲ್ಲಿಯವರೆಗೆ ಅದೆಷ್ಟೋ ಚುನಾವಣೆಗಳು ನಡೆದು ಹೋಗಿವೆ. ಆದರೆ ಎಲ್ಲಾ ಚುನಾವಣೆಗಳಲ್ಲೂ ಒಂದೇ ಘೋಷಣೆ "ಗರೀಬಿ ಹಠಾವೋ", ನಂತರದ ದಿನಗಳಲ್ಲಿ "ಜಾತ್ಯತೀತತೆಗೆ" ಮತ ನೀಡಿ. ಇದು ಬಿಟ್ಟು ಅಭಿವೃದ್ಧಿ, ಪ್ರಗತಿ, ದೇಶದ ಭದ್ರತೆ ಬಗ್ಗೆ ಗಂಭೀರವಾದ ಚರ್ಚೆಗಳು ನಡೆದೇ ಇಲ್ಲ.
"ಸ್ವಾತಂತ್ರ್ಯ ಸಂಗ್ರಾಮಕ್ಕೆಂದು ಸ್ಥಾಪಿಸಲ್ಪಟ್ಟ ಕಾಂಗ್ರೆಸ್ ಪಕ್ಷದ ಕರ್ತವ್ಯ ಸ್ವಾತಂತ್ರ ಸಿಕ್ಕ ಮೇಲೆ ಮುಗಿಯಿತು. ಇದನ್ನು ವಿಸರ್ಜಿಸಿ" ಎಂದರು ಮಹಾತ್ಮ ಗಾಂಧಿ. ಆದರೆ ಅಧಿಕಾರಕ್ಕೆ ಹಪಾಹಪಿಸಿ ಕುಳಿತಿದ್ದ ಜವಾಹರಲಾಲ್ ನೆಹರು ಮತ್ತು ಇತರರು ಕಾಂಗ್ರೆಸ್ಸನ್ನು ವಿಸರ್ಜಿಸಲಿಲ್ಲ. ಪ್ರತಿ ಚುನಾವಣೆ ಬಂದಾಗ "ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪಕ್ಷ" ಎಂದು ಆ ವಿಷಯವನ್ನೇ ಬಂಡವಾಳ ಮಾಡಿಕೊಂಡೇ ಬಂದರು. ಕಾಂಗ್ರೆಸ್ ಪಕ್ಷ ಎಷ್ಟೋ ಹೋಳಾಯಿತು. ಓಲ್ಡ್ ಕಾಂಗ್ರೆಸ್, ರೂಲಿಂಗ್ ಕಾಂಗ್ರೆಸ್, ರೆಡ್ಡಿ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಕಾಂಗ್ರೆಸ್ (ಐ), ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ, ಅರಸು ಕಾಂಗ್ರೆಸ್, ಕರ್ನಾಟಕ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಹೀಗೆ ಅದೆಷ್ಟೋ! ಆದರೆ ವಂಶಾಡಳಿತದ ನೆಹರು ಕುಟುಂಬ ಎಲ್ಲಿದೆಯೋ ಅದು ಮಾತ್ರ ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷವಾಗಿ ಹೋಯಿತು. ಕಾಂಗ್ರೆಸ್ ಪಕ್ಷಕ್ಕಿದ್ದ ಚರಕ, ಜೋಡೆತ್ತು, ಹಸುಕರುಗಳ ಚಿಹ್ನೆಗಳು ಹೋಗಿ ಈಗ 'ಕೈ' ಗುರುತಿಗೆ ಬಂದು ನಿಂತಿದೆ. ಈಗಲೂ ಈ ಪಕ್ಷದವರು ತಮ್ಮದು "ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಪಕ್ಷ" ಎನ್ನುತ್ತಲೇ ಇದ್ದಾರೆ. ಜನಸಂಘವನ್ನು ಕಟ್ಟಿದ ಇದರ ಸ್ಥಾಪಕ ಅಧ್ಯಕ್ಷ ಡಾ. ಶ್ಯಾಮ್ಪ್ರಸಾದ್ ಮುಖರ್ಜಿ ಕೂಡಾ ಸ್ವಾತಂತ್ರ್ಯದ ಅವಧಿಯಲ್ಲಿ ಕಾಂಗ್ರೆಸ್ನಲ್ಲಿದ್ದರು. ನೆಹರು ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿದ್ದರವರು. ಮುಖರ್ಜಿಯಂತೆ ಅನೇಕರು ಕಾಂಗ್ರೆಸ್ ಬಿಟ್ಟು ಹೊರನಡೆದರು. ಇದಕ್ಕೆ ಕಾರಣ ನೆಹರು ಅಧಿಕಾರದಾಹ ಮತ್ತು ಅವರ ಕುಟುಂಬ ಪ್ರೀತಿ.
ನೆಹರು ನಿಧನದವರೆಗೆ ಅವರೇ ಪ್ರಧಾನಿ. ಪ್ರತಿ ಚುನಾವಣೆಯಲ್ಲೂ ಒಂದೇ ಅಸ್ತ್ರ "ಗರೀಬಿ ಹಠಾವೋ, ಕೋಮುವಾದಿಗಳನ್ನು ದೂರವಿಡಿ" ಇದಕ್ಕಾಗಿ ಎಲ್ಲ ಪಕ್ಷಗಳಿಂದಲೂ ಸಹಕಾರ!
(ಜವಾಹರ್ಲಾಲ್ ನೆಹರು 1957ರಲ್ಲಿ ಚುನಾವಣಾ ಪ್ರಚಾರಕ್ಕೆ ಗೋಣಿಕೊಪ್ಪಲಿಗೆ ಬಂದಿದ್ದರಂತೆ. ಆಗವರು "ಈಗ ಒಂದು ದೀಪದ ಗುರುತಿನ ಪಕ್ಷ ಬಂದಿದೆ. ಅದು ಕೋಮುವಾದಿ ಪಕ್ಷ" ಎಂದಿದ್ದರಂತೆ. ಅಂದು ಅಜ್ಜ ಹೇಳಿದ್ದನ್ನೇ ಈಗ ಮರಿಮೊಮ್ಮಗ ರಾಹುಲ್ ಪುನರುಚ್ಚರಿಸುತ್ತಿದ್ದಾರೆ. ದೇಶದ ಭದ್ರತೆಗೆ ನೆಹರು ಕವಡೆ ಕಾಸಿನ ಕಿಮ್ಮತ್ತೂ ಕೊಡಲಿಲ್ಲ. ಭಾರತ ಒಂದು ಅಳುಮುಂಜಿ ರಾಷ್ಟ್ರವಾಗಿ ಹೋಯಿತು. ಚೀನಾ ಎದುರು ಮಂಡಿಯೂರಿ ಕುಳಿತರು ನಮ್ಮ ಪ್ರಧಾನಿ. ಚೀನಾದ ಶತ್ರುಗಳನ್ನು ನಮ್ಮ ಗಡಿಯಿಂದ ಕೆಚ್ಚೆದೆಯಿಂದ ಅಟ್ಟುತ್ತಿದ್ದ ಜನರಲ್ ತಿಮ್ಮಯ್ಯನವರ ಆತ್ಮಸ್ಥೈರ್ಯವನ್ನೇ ನೆಹರು ಉಡಗಿಸಿಬಿಟ್ಟಿದ್ದರು. ಕಾಶ್ಮೀರದಲ್ಲಿ ಪಾಕಿಸ್ತಾನಿಗಳ ಹಾವಳಿ ಬೇರೆ. ಇದನ್ನು ಸಂಸತ್ತಿನಲ್ಲಿ ಪ್ರತಿಭಟಿಸಿ "ದೇಶಕ್ಕೆ ಎರಡು ಪ್ರಧಾನಿ, ಎರಡು ಧ್ವಜ, ಎರಡು ಕಾನೂನು ಕೂಡದು" ಎಂದ ಡಾ. ಶ್ಯಾಮ್ಪ್ರಸಾದ್ ಮುಖರ್ಜಿ ಕೋಮುವಾದಿಯಾಗಿ ಬಿಟ್ಟರು, ಅಷ್ಟೇ ಯಾಕೆ ಅನುಮಾನಾಸ್ಪದ ರೀತಿಯಲ್ಲಿ ಕೊಲೆಯಾಗಿ ಹೋದರು! ಮತ್ತೆ ಚುನಾವಣೆ ಬರುತ್ತಲೇ ಇತ್ತು. ಮತ್ತೆ ಅದೇ ಘೋಷಣೆ - ಗರೀಬಿ ಹಠಾವೋ, ಕೋಮುವಾದಿಗಳನ್ನು ದೂರವಿಡಿ.
ನೆಹರು ನಿಧನದ ನಂತರ ಅಚಾನಕ್ ಪ್ರಧಾನಿಯಾದ ಲಾಲ್ಬಹಾದ್ದೂರ್ ಶಾಸ್ತ್ರಿ ಕಾಂಗ್ರೆಸ್ಸಿನ ಹಳಸಲು ಸ್ಲೋಗನ್ ಬದಲು ಮಾಡಿದರು. ದೇಶಕ್ಕೊಂದು ಹೊಸ ಚಿಂತನೆ ಹರಿಬಿಟ್ಟರು. ದೇಶದ ಕೃಷಿ ಮತ್ತು ದೇಶದ ಸುಭದ್ರತೆಗೆ ಮಹತ್ವ ನೀಡಿದರು. ಗರೀಬಿ ಹಠಾವೋ, ಜಾತ್ಯತೀತತೆ ಹೋಗಿ "ಜೈ ಜವಾನ್ ಜೈ ಕಿಸಾನ್" ಎಂದರು. ದೇಶದ ರೈತ ಮತ್ತು ದೇಶ ಕಾಯುವ ಸಿಪಾಯಿ ನಮ್ಮ ದೇವರು ಎಂದರು. ಆದರೆ ಇದು ಕಾಂಗ್ರೆಸ್ಸಿಗರಿಗೆ ಅಥವಾ ವಂಶಾಡಳಿತದ ಹೆಸರಿನಲ್ಲಿ ಅಧಿಕಾರಕ್ಕೆ ಹಪಾಹಪಿಸುತ್ತಿದ್ದವರಿಗೆ ರುಚಿಸಬೇಕಲ್ಲ? ಕೇವಲ 18 ತಿಂಗಳಿನಲ್ಲಿ ಜನಪ್ರಿಯಗೊಂಡಿದ್ದ ಲಾಲ್ಬಹದ್ದೂರ್ ಶಾಸ್ತ್ರಿ ನಿಗೂಢವಾಗಿ ಸಾವಿಗೀಡಾದರು.
 ಇಲ್ಲಿಂದ ಮತ್ತೆ ವಂಶಾಡಳಿತದ ಶಕೆ. ಅನೇಕರು ಕಾಂಗ್ರೆಸ್ ಬಿಟ್ಟು ಹೊರನಡೆದರು. ಅದು 'ಇಂದಿರಾ ಕಾಂಗ್ರೆಸ್' ಎಂದೇ ಹೆಸರಾಯಿತು. ಆದರೆ ಈ ಕಾಂಗ್ರೆಸ್ಸನ್ನು ಕೂಡಾ "ಸ್ವಾತಂತ್ರ್ಯ ಗಳಿಸಿಕೊಟ್ಟ ಕಾಂಗ್ರೆಸ್" ಎಂದು ಕರೆಯಲಾಯಿತು. ಚುನಾವಣೆ ಬಂದಾಗಲೆಲ್ಲಾ ಅದೇ ಸ್ಲೋಗನ್ ಗರೀಬಿ ಹಠಾವೋ! ಆದರೆ ದೇಶದಲ್ಲಿ ಬಡವರು ಉದ್ಧಾರವಾಗಲೇ ಇಲ್ಲ. ಕಾಂಗ್ರೆಸ್ಗೆ ಬಡವರೇ ಅಸ್ತ್ರವಾಗಿ ಹೋದರು.ಈ ಮಧ್ಯೆ ಕೇವಲ 6 ವರ್ಷ ಆಡಳಿತ ನಡೆಸಿದ ಅಟಲ್ ಬಿಹಾರಿ ವಾಜಪೇಯಿ "ಜೈ ಜವಾನ್ ಜೈ ಕಿಸಾನ್ ಜೊತೆಗೆ ಜೈ ವಿಜ್ಞಾನ್" ಎಂದು ವಿಜ್ಞಾನ ಕ್ಷೇತ್ರದ ಉನ್ನತಿಗೆ ಕಾರಣರಾದರು. ಅಣು ಬಾಂಬ್ ಪ್ರಯೋಗದ ಮೂಲಕ ಬಲಿಷ್ಠ ಭಾರತಕ್ಕೆ ಮುನ್ನುಡಿ ಬರೆದಿದ್ದರು.
ಇಂದಿರಾ ಗಾಂಧಿ ಮತ್ತು ನಂತರ ಬಂದ ಎಲ್ಲಾ ಕಾಂಗ್ರೆಸ್ ನಾಯಕರಿಗೆ ಚುನಾವಣೆ ಬಂದಾಗಲೆಲ್ಲಾ ಜಾತ್ಯತೀತತೆಯ ನೆನಪು, ಜೊತೆಗೆ ಧೊತ್ತನೆ ಕಣ್ಣೆದುರು ಆರ್.ಎಸ್.ಎಸ್. ಕೋಮುವಾದಿಗಳಿಗೆ ಆಡಳಿತ ಕೊಡಬೇಡಿ ಎಂಬ ಹುಯಿಲಿನ ಓಟ್ ಬ್ಯಾಂಕ್ ರಾಜಕಾರಣ. ಪ್ರತಿ ಚುನಾವಣೆಯಲ್ಲೂ ಮಹಾತ್ಮ ಗಾಂಧಿಯನ್ನು ಕೊಂದ ಉಲ್ಲೇಖ. ಸಂಘ ಪರಿವಾರದ ಬಿಜೆಪಿಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸುವ ನಿರಂತರ ಕಾಯಕ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ವಂಶಾಡಳಿತವೇ ಭಾರತದಲ್ಲಿ ಅಧಿಕಾರದಲ್ಲಿರಬೇಕೆಂಬ ಹಠ. ಮನಮೋಹನಸಿಂಗ್ 10 ವರ್ಷ ಪ್ರಧಾನಿಯಾದರೂ ಸೋನಿಯಾ ಗಾಂಧಿಯ ಅಣತಿಯಂತೆ ಸರ್ಕಾರ ನಡೆದಿದೆ. ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಎಂಪಿಯಾದರೂ ಅವರು ಹೇಳಿದ್ದನ್ನು ಸಿಂಗ್ ಕ್ಯಾಬಿನೆಟ್ ಕಾರ್ಯರೂಪಕ್ಕೆ ತರುತ್ತಿತ್ತು. ಈಗಂತೂ ಮುಂದಿನ ಪ್ರಧಾನಿ ರಾಹುಲ್ ಗಾಂಧಿಯೇ ಎಂದು ಬಿಂಬಿಸಿಯಾಗಿದೆ.
2014ರ ಈ ಚುನಾವಣೆಯಲ್ಲಿ ಕಾಂಗ್ರೆಸ್ನದ್ದು ಮತ್ತೆ ಅದೇ ಘೋಷಣೆ, 'ಜಾತ್ಯತೀತತೆ ಮತ್ತು ಬಡತನ ನಿರ್ಮೂಲನೆ'. ಕಾಂಗ್ರೆಸ್ ದೇಶದ ಸುಭದ್ರತೆ, ಅಭಿವೃದ್ಧಿ, ಕೃಷಿ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾರಣ ಈ ವಿಚಾರಗಳು ಓಟ್ ತಂದು ಕೊಡುವುದಿಲ್ಲ ಎಂದೂ ಅದಕ್ಕೆ ತಿಳಿದಿದೆ. ನಾವಿಂದು ಎಂಥ ಸ್ಥಿತಿಯಲ್ಲಿ ಇದ್ದೇವೆ ಎಂದರೆ ನಮ್ಮ ಸೈನಿಕರ ರುಂಡವನ್ನು ಚೆಂಡಾಡಿದರೂ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಡಲಾಗುತ್ತಿಲ್ಲ. ಚೀನಾದ ಅತಿಕ್ರಮಣಕ್ಕೆ ಬೆದರಿ ಕುಳಿತಿದ್ದಾರೆ ನಾಯಕರು. ಉಗ್ರಗಾಮಿಗಳು ಎಲ್ಲೆಡೆ ಬಾಂಬ್ ಸ್ಫೋಟವನ್ನು ಮಕ್ಕಳಾಟದಂತೆ ನಡೆಸುತ್ತಿದ್ದರೂ ಗಟ್ಟಿ ನಿರ್ಧಾರ ತೆಗೆದುಕೊಳ್ಳಲಾಗದ ಹೇಡಿತನ ತುಂಬಿದ ಸರ್ಕಾರವಿದೆ. ಇದಕ್ಕೆಲ್ಲಾ ಒಂದೇ ಕಾರಣ, ಓಟ್ ಬ್ಯಾಂಕ್ ರಾಜಕಾರಣ.
ಇದೀಗ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶದ ಭದ್ರತೆ- ಅಭಿವೃದ್ಧಿ ಎಂಬ ಹೊಸ ದೃಷ್ಟಿಯನ್ನು ಹೊತ್ತು ಜನರ ಮುಂದೆ ಬಂದಿದ್ದಾರೆ. ಆದರೆ ಕಾಂಗ್ರೆಸ್ಸಿನ ರಾಹುಲ್ ಮಾತ್ರ ನರೇಂದ್ರ ಮೋದಿಯವರನ್ನು ಕೋಮುವಾದಿ, ನರಹಂತಕ ಎಂದು ಪದೇ ಪದೇ ಬಿಂಬಿಸುವ ಮತಗಳಿಕೆಯ ಅದೇ ಹಳೆಯ ರಾಗದಲ್ಲೇ ಇದ್ದಾರೆ. ನಮ್ಮ ರಕ್ಷಣಾ ಮಂತ್ರಿ ಎ.ಕೆ. ಆ್ಯಂಟನಿ ಕೇರಳದಲ್ಲಿ "ದೇಶದ ಸರ್ವನಾಶ ತಪ್ಪಿಸಲು, ವಿನಾಶಕಾರಿ ವ್ಯಕ್ತಿ ಪ್ರಧಾನಿಯಾಗುವುದನ್ನು ತಡೆಯಲು ಕಮ್ಯೂನಿಷ್ಟರೂ ಸೇರಿದಂತೆ ಎಲ್ಲರೂ ಒಂದಾಗೋಣ" ಎಂದು ಹೇಳಿಕೆ ನೀಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಯಾವ ಮಾರ್ಗಕ್ಕೂ ಸಿದ್ಧ ಎಂಬ ಸೂತ್ರ ಇವರುಗಳದ್ದು. ಕಾಂಗ್ರೆಸ್ಸಿನ ಅಭ್ಯರ್ಥಿಯೊಬ್ಬ ಮೋದಿಯನ್ನು ಕೊಚ್ಚಿ ಕೊಲ್ಲುತ್ತೇನೆ ಎಂದು ಹೇಳುತ್ತಾನೆ. ಇದೆಲ್ಲ ಏನು ಸೂಚಿಸುತ್ತದೆ? ಇದಕ್ಕಾಗಿಯೇ ಪಂಡಿತ್ ರವಿಶಂಕರ್ ಗುರೂಜಿ "2014ರ ಚುನಾವಣೆ ಕೇವಲ ಚುನಾವಣೆಯಲ್ಲ ಅದು ಮಹಾಯಾಗ, ಯಜ್ಞ" ಎಂದದ್ದು. (ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಕೃಷ್ಣ ಕುಲಕರ್ಣಿ ಹೇಳುತ್ತಾರೆ " ರಾಹುಲ್ ಗಾಂಧಿಯವರೇ ರಾಜಕೀಯ ಲಾಭಕ್ಕಾಗಿ ಗಾಂಧಿ ಹೆಸರಿನ ದುರ್ಬಳಕೆ ಬಿಟ್ಟು ಬಿಡಿ. ನೀವೇನೂ ಗಾಂಧೀಜಿಯ ಮೊಮ್ಮಗ ಅಲ್ಲವಲ್ಲ")
ಅಟಲ್ ಬಿಹಾರಿ ವಾಜಪೇಯಿ ತಮ್ಮ ಕವನದಲ್ಲಿ ಹೇಳಿದ್ದು ಈ ಹೊತ್ತಿನಲ್ಲಿ ಹೆಚ್ಚು ಪ್ರಸ್ತುತ. ಭರವಸೆಯ ನಾಳೆಗಾಗಿ ಇದನ್ನೊಮ್ಮೆ ಓದಿ...
ನಡುಹಗಲು ತುಂಬಿದ ಕತ್ತಲು, ನೆರಳಿನಿಂದಲೇ ಸೋತನು ಸೂರ್ಯ
ಅಂತರಾಳ ಜಿಡ್ಡು ಕರಗಿಸಿ, ಆರಿದ ಮಾತು ಉರಿಸೋಣ
ಬನ್ನಿ ಮತ್ತೊಮ್ಮೆ ದೀಪ ಬೆಳಗೋಣ...
ತಂಗುದಾಣವೇ ಮನೆ ಎಂದೆವು, ಕಣ್ಣಿನೊಳಗೆ ಗುರಿ ಕಣ್ಮರೆಯಾಯಿತು
ವರ್ತಮಾನದ ಮೋಹ ಜಾಲದಿ ಬರುವ ನಾಳೆಯ ಮರೆಯದಿರೋಣ
ಬನ್ನಿ ಮತ್ತೊಮ್ಮೆ ದೀಪ ಬೆಳಗೋಣ...
ಆಹುತಿ ಬಾಕಿ. ಯಜ್ಞ ಅಪೂರ್ಣ, ನಮ್ಮದೇ ವಿಘ್ನಗಳಾಕ್ರಮಣ
ಅಂತಿಮ ನಿಯಮದ ವಜ್ರಾಯುಧಕೆ ನಮ್ಮ ದಧೀಚಿ ಆಸ್ತಿ ಕರಗಿಸೋಣ
ಬನ್ನಿ ಮತ್ತೊಮ್ಮೆ ದೀಪ ಬೆಳಗೋಣ...


- ಅಡ್ಡಂಡ ಕಾರ್ಯಪ್ಪ, ಅಧ್ಯಕ್ಷರು, ಕರ್ನಾಟಕ ಕೊಡವ ಸಾಹಿತ್ಯ  ಅಕಾಡೆಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.