

-ಒಂದು ಸಾವು ತರುವ ನೋವು, ದುಃಖವೇ ಭೀಕರ. ಹಾಗಿರುವಾಗ ಹತ್ತು ಲಕ್ಷ ಜನರ ಸಾವು-ನೋವಿನ ಕತೆ ಹೇಗಿರಬಹುದು? ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮನೆಗೆ ಮನೆ, ಕುಟುಂಬಕ್ಕೆ ಕುಟುಂಬ, ಕೇರಿಗೆ ಕೇರಿ, ಊರಿಗೆ ಊರು ಈ ಜನಾಂಗೀಯ ನರಮೇಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋಯಿತು. ಅಲ್ಲಿ ಭಾವನೆ, ಮಾನವೀಯತೆಗಳೆಲ್ಲ ಅರ್ಥ ಕಳೆದುಕೊಂಡಿದ್ದವು.
ಈ ಚುನಾವಣೆಯೊಂದು ಬಂದಿರದೇ ಇದ್ದರೆ, ನಾನು ಇಂದು ರವಾಂಡದ ರಾಜಧಾನಿ ಕಿಗಾಲಿಯಲ್ಲಿರುತ್ತಿದ್ದೆ. ಆದರೆ ಚುನಾವಣೆಯಂಚಿನಲ್ಲಿರುವ ಭಾರತ ಇಂದು ರವಾಂಡದಂತಾಗಿದೆ. ಹೀಗಾಗಿ ಇಲ್ಲಿರುವುದು ಅನಿವಾರ್ಯವಾದ್ದರಿಂದ ಆ ರವಾಂಡಾಕ್ಕೆ ಹೋಗದೇ, ಈ ರವಾಂಡದಲ್ಲಿಯೇ ಉಳಿದಿದ್ದೇನೆ.
ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಇದೇ ದಿನ ಕತ್ತಲೆಯ ಖಂಡ ಆಫ್ರಿಕಾದ ರವಾಂಡ ಎಂಬ ದೇಶದಲ್ಲಿ ಹುಟು ಹಾಗೂ ಟುಟ್ಸಿ ಎಂಬ ಎರಡು ಕೋಮುಗಳ ನಡುವೆ ಜನಾಂಗೀಯ ಘರ್ಷಣೆ ಆರಂಭವಾಯಿತು. 1994ರ ಏಪ್ರಿಲ್ 6ರಂದು ರವಾಂಡದ ಅಂದಿನ ಅಧ್ಯಕ್ಷ ಜುವೆನಲ್ ಹಬ್ಯರಿಮಾನ ಅವರಿದ್ದ ವಿಮಾನ ಕಿಗಾಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವಾಗ ಗುಂಡಿಕ್ಕಿ ಕೆಳಗೆ ಉರುಳಿಸಿ ಅಧ್ಯಕ್ಷರ ಸಮೇತ ಎಲ್ಲರೂ ಸಾವಿಗೀಡಾಗುತ್ತಿದ್ದಂತೆ, ಅದೆಲ್ಲಿತ್ತೋ ಆ ದ್ವೇಷ, ಕೋಪ-ತಾಪ, ಆಕ್ರೋಶ? ಮುಂದಿನ ನೂರು ದಿನಗಳವರೆಗೆ ದೇಶಕ್ಕೆ ದೇಶವೇ ಅಕ್ಷರಶಃ ರುದ್ರಭೂಮಿಯಾಗಿ ಹೋಯಿತು. ಶೇ. 85ರಷ್ಟು ಜನಸಂಖ್ಯೆ ಹೊಂದಿರುವ ಹುಟುಗಳು ಅಲ್ಪಸಂಖ್ಯಾತ ಟುಟ್ಸಿ (ಶೇ.15ರಷ್ಟು) ಗಳನ್ನು ಕಂಡಕಂಡಲ್ಲಿ ಕತ್ತರಿಸಲಾರಂಭಿಸಿದರು. ಅಲ್ಲಿಯ ತನಕ ನೆರೆಹೊರೆಯವರೆಲ್ಲ ಅನ್ಯೋನ್ಯವಾಗಿದ್ದವರು ಕತ್ತಿ, ಮಚ್ಚು, ದೊಣ್ಣೆ, ಹಾರೆ, ಪಿಕಾಸಿ, ಬಂದೂಕು, ಸೈಜುಗಲ್ಲು ಹಿಡಿದು ಆಜನ್ಮ ವೈರಿಗಳಂತೆ ಹೊಡೆದಾಟಕ್ಕೆ ನಿಂತುಬಿಟ್ಟರು. ಮನೆಯಲ್ಲಿದ್ದ ಹೆಂಗಸರು, ಮಕ್ಕಳನ್ನು ಹೊರಗೆಳೆದುಕೊಂಡು ಬಂದು ಬೀದಿಯಲ್ಲಿ ಮಾನಭಂಗ ಮಾಡಿದರು. ಸಜೀವವಾಗಿ ಸುಟ್ಟು ಹಾಕಿದರು. ಬಡಿದು ಸಾಯಿಸಿದರು. ನೂರು ದಿನಗಳಲ್ಲಿ ಸುಮಾರು ಹತ್ತು ಲಕ್ಷ ಜನ ಹೆಣವಾದರು. ಅಂದರೆ ದಿನಕ್ಕೆ ಸರಾಸರಿ ಹತ್ತು ಸಾವಿರ ಜನರು ಹತರಾದರು. ದೇಶದ ರಾಜಧಾನಿ ಕಿಗಾಲಿಯೊಂದರಲ್ಲೇ ಮೂರು ಲಕ್ಷ ಜನರ ಮಾರಣಹೋಮ ನಡೆಯಿತು. ಪ್ರಾಯಶಃ ಮಾನವ ಚರಿತ್ರೆಯಲ್ಲೇ ಇಂಥ ದಾರುಣ, ಭಯಂಕರ, ಭೀಭತ್ಸ ಘಟನೆ ನಡೆದಿರಲಿಕ್ಕಿಲ್ಲ. ಅಂದು ಕಿಗಾಲಿಯಲ್ಲಿ ಎಲ್ಲಿ ನೋಡಿದರೂ ಹೆಣಗಳು ಬಿದ್ದಿದ್ದವಂತೆ. ಅಂತ್ಯಸಂಸ್ಕಾರವಿಲ್ಲದೇ ಹೆಣಗಳು ಕೊಳೆತು ದುರ್ನಾತ ಬೀರುತ್ತಿದ್ದವಂತೆ. ಏಕಕಾಲಕ್ಕೆ ಎರಡು ಲಕ್ಷಕ್ಕೂ ಅಧಿಕ ಶವಗಳನ್ನು ಹೂಳಲಾಯಿತಂತೆ.
ಒಂದು ಸಾವು ತರುವ ನೋವು, ದುಃಖವೇ ಭೀಕರ. ಹಾಗಿರುವಾಗ ಹತ್ತು ಲಕ್ಷ ಜನರ ಸಾವು-ನೋವಿನ ಕತೆ ಹೇಗಿರಬಹುದು? ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮನೆಗೆ ಮನೆ, ಕುಟುಂಬಕ್ಕೆ ಕುಟುಂಬ, ಕೇರಿಗೆ ಕೇರಿ, ಊರಿಗೆ ಊರು ಈ ಜನಾಂಗೀಯ ನರಮೇಧದಲ್ಲಿ ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋಯಿತು. ಅಲ್ಲಿ ಭಾವನೆ, ಮಾನವೀಯತೆಗಳೆಲ್ಲ ಅರ್ಥ ಕಳೆದುಕೊಂಡಿದ್ದವು. ಬಂದೂಕಿನಿಂದ ಗುಂಡು ಹೊಡೆದು ಸಾಯಿಸುವುದು ದುಬಾರಿ ಎನಿಸಿದಾಗ ಜನ ಕಲ್ಲು ಹೊಡೆದು, ಬಡಿಗೆ, ದೊಣ್ಣೆಯಿಂದ ಹೊಡೆದು ಸಾಯಿಸಿದರು. ಒಬ್ಬ ಹುಟು, ಟುಟ್ಸಿಯನ್ನು ಕಂಡರೆ ಸಾಕು, ಅವನು ಯಾರೇ ಆಗಿರಲಿ, ಎಂಥ ಅಮಾಯಕನೇ ಆಗಲಿ, ಸಾಯಿಸಿದ್ದೇ ಖರೆ! ಹಸುಳೆಗಳು, ಪುಟ್ಟ ಕಂದಮ್ಮಗಳನ್ನೂ ಬಿಡಲಿಲ್ಲ. ವಾರಗಟ್ಟಲೆ ಊಟ, ತಿಂಡಿಯಿಲ್ಲದೇ ಕಾಡುಗಳಲ್ಲಿ ಅಡಗಿ ಕುಳಿತ ಟುಟ್ಸಿಗಳನ್ನು ಬಿಡದೇ ಹುಡುಕಿ ಅಟ್ಟಾಡಿಸಿಕೊಂಡು ಕೊಚ್ಚಿ ಹಾಕಿದರು.
ರವಾಂಡದಲ್ಲಿ ಅಂದು ಬದುಕಿದ್ದ ಟುಟ್ಸಿಗಳ ಪೈಕಿ ಶೇ. 80ರಷ್ಟು ಜನ ಈ ನರಮೇಧದಲ್ಲಿ ಸತ್ತರು. ದೇಶದ ಜನಸಂಖ್ಯೆಯ ಶೇ. 30ರಷ್ಟು ಮಂದಿ ಈ ದುರ್ಘಟನೆಯಲ್ಲಿ ಬಲಿಯಾದರು. ರವಾಂಡ ಜನಾಂಗೀಯ ನರಮೇಧದ ಬಗ್ಗೆ ಸಿನಿಮಾ ಮಾಡಲು ಹೋದ ಬ್ರಿಟಿಷ್ ನಿರ್ದೇಶಕನೊಬ್ಬ ಹೇಳಿದ ಮಾತನ್ನು ಕೇಳಿಸಿಕೊಳ್ಳಬೇಕು-'ನಾನು ಎರಡು ವರ್ಷ ಈ ಸಿನಿಮಾ ಯೋಜನೆಯಲ್ಲಿ ಕೆಲಸ ಮಾಡಿ, ಅಂತಿಮವಾಗಿ ಈ ಯೋಜನೆಯನ್ನು ಕೈ ಬಿಟ್ಟೆ. ಕಾರಣ ಎಷ್ಟೇ ಪರಿಣಾಮಕಾರಿಯಾಗಿ ಸಿನಿಮಾ ನಿರ್ಮಿಸಿದರೂ, ಹತ್ತು ಲಕ್ಷ ಮಂದಿ ಸಾವು ಹುಟ್ಟಿಸುವ ಭಾವೋತ್ಕರ್ಷ, ವಿಷಾದ, ನೋವು, ದುಃಖ, ಆಕ್ರೋಶ, ಹತಾಶೆಯನ್ನು ಕಟ್ಟಿಕೊಡುವುದು ಸಾಧ್ಯವಿಲ್ಲವೆನಿಸಿತು. ನನ್ನ ಕಲ್ಪನೆಗೂ ಸಿಗದ ಮಹಾ ದುರಂತವದು. ಅಂದು ರವಾಂಡದಲ್ಲಿ ನಡೆದಿದ್ದು ನಿಜವಿದ್ದಿರಬಹುದಾ, ಹೀಗೆಲ್ಲ ಆಗಲು ಸಾಧ್ಯವಾ ಯೋಚಿಸಿದೆ. ಆ ದುರಂತವನ್ನು ಕಟ್ಟಿಕೊಡುವುದು ಅಸಾಧ್ಯವೆಂದು ನನಗೆ ಅನಿಸಿತು. ಹೀಗಾಗಿ ಆ ಯೋಜನೆಯನ್ನು ಕೈಬಿಟೆ.್ಟ' ಅತ್ತು ಅತ್ತು ಕಣ್ಣೀರು ಬತ್ತಿ ಹೋಯಿತು ಅಂತಾರಲ್ಲ, ರವಾಂಡದ ಕತೆ ಕೇಳಿದ ಯಾರಿಗಾದರೂ ಅನಿಸುವುದು ಸಹ ಅದೇ. ಕಣ್ಣೀರೇ ಬತ್ತಿ ಹೋದ ಬಳಿಕ ಭಾವನೆಗಳು ಬರಿದಾಗುತ್ತವೆ, ಭಾವಕೋಶಗಳು ಬಾಡಿಹೋಗುತ್ತವೆ. ಜನಾಂಗೀಯ ನರಮೇಧದಲ್ಲಿ ನೊಂದವರ, ಬೆಂದವರ ಅಸಂಖ್ಯ ಕತೆಗಳು ಯಾರಲ್ಲಾದರೂ ಇದೇ ಭಾವವನ್ನು ಮೂಡಿಸುತ್ತದೆ.
ಇವೆಲ್ಲಾ ಒಂದೆಡೆ ಇರಲಿ.
ನನಗೆ ಅಚ್ಚರಿಯೆನಿಸುವುದು, ಈ ಇಪ್ಪತ್ತು ವರ್ಷಗಳಲ್ಲಿ ರವಾಂಡ ನಡೆದುಕೊಂಡ ರೀತಿ ಹಾಗೂ ಬೆಳೆದು ಬಂದ ಬಗೆ. ಅಂದೇ ಕೊನೆ. ಈ ಎರಡು ದಶಕಗಳಲ್ಲಿ ಅಂಥ ಒಂದು ಸಣ್ಣ ಘಟನೆಯೂ ಆಗಿಲ್ಲ. ಕಣ್ಣೆದುರೇ ತಂದೆ-ತಾಯಿಗಳನ್ನು ಕಳೆದುಕೊಂಡ ಮಕ್ಕಳು, ಮಕ್ಕಳನ್ನು ಕಳೆದುಕೊಂಡ ಪಾಲಕರು, ಕುಟುಂಬದವರನ್ನೆಲ್ಲ ಕಳೆದುಕೊಂಡ ಒಂದು ಕುಡಿ, ಎಲ್ಲ ನೋವು, ದುಃಖ, ದ್ವೇಷ, ರೋಷಾಗ್ನಿಯನ್ನೆಲ್ಲ ಹೊಟ್ಟೆಗೆ ಹಾಕಿಕೊಂಡು, ವಿಷಕಂಠನಂತೆ ನುಂಗಿಕೊಂಡು, ಏನೂ ನಡೆದೇ ಇಲ್ಲವೇನೋ ಎಂಬಂತೆ ಸುಮ್ಮನಾಗಿ ನಗುನಗುತ್ತಾ ಎಂದಿನಂತೆ ಮಧುರ ಬದುಕನ್ನು ಅರಳಿಸಿಕೊಂಡಿರುವ ಪರಿ ಎಂಥವರಲ್ಲಾದರೂ ಅಚ್ಚರಿ ಮೂಡಿಸುತ್ತದೆ. ತಾವು ಅದೆಂಥ ಮಹಾಪರಾಧ ಮಾಡಿದೆವು ಎಂಬ ಪಶ್ಚಾತ್ತಾಪ, ಅಪರಾಧ ಮನೋಭಾವ ಅವರನ್ನು ಕಾಡುತ್ತಿದೆ. ಇಂಥ ನೋವನ್ನು ಮರೆತು ಪುನಃ ಎಂದಿನಂತೆ ಅನ್ಯೋನ್ಯವಾಗಿ ಬಾಳುವುದು ಸಣ್ಣ ಮಾತಲ್ಲ. ವ್ಯಕ್ತಿ ವ್ಯಕ್ತಿ ನಡುವೆ ಹುಟ್ಟಿದ ಹಗೆತನ, ಅಪನಂಬಿಕೆ, ಅವಿಶ್ವಾಸವನ್ನು ಹೊಡೆದು ಹಾಕಿವಿಶ್ವಾಸ, ಭರವಸೆ ಮೂಡಿಸುವುದು, ನೂತನ ಬಾಂಧವ್ಯಕ್ಕೆ ಕಂಕಣಬದ್ಧರಾಗುವುದು ಸಾಮಾನ್ಯ ಸಂಗತಿಯಲ್ಲ. ರವಾಂಡದ ಉಳಿದೆಲ್ಲ ಸಾಧನೆಗಳು ಬದಿಗಿರಲಿ, ಜನರ ನಡುವೆ ಶಾಂತಿ, ನಂಬಿಕೆ ಮೂಡಿದೆಯಲ್ಲ, ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ.
ಇಂದು ರವಾಂಡ 'ಜಗತ್ತಿನ ಭರವಸೆ ಮೂಡಿಸುವ ದೇಶ'ಗಳ ಪಟ್ಟಿಯಲ್ಲಿ ಹನ್ನೊಂದನೇ ಸ್ಥಾನದಲ್ಲಿದೆ. ಕಳೆದುಕೊಂಡ ಜಾಗದಲ್ಲಿಯೇ ಹುಡುಕಬೇಕು ಅಂತಾರಲ್ಲ.
ಒಂದು ರಾಷ್ಟ್ರವಾಗಿ ಎಲ್ಲಿ ಅವನತಿ ಹೊಂದಿತ್ತೋ, ಅಲ್ಲಿಯೇ ಹೊಸ ಮನ್ವಂತರಕ್ಕೆ ಶಪಥಗೈದಿದೆ. ಜಗತ್ತಿನ ಐವತ್ತಕ್ಕೂ ಹೆಚ್ಚು ದೇಶಗಳ ನಾಯಕರು ಇಂದು ರವಾಂಡದಲ್ಲಿ ಜಮಾಯಿಸಲಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಹೊಸ ಸಂಕಲ್ಪಕ್ಕೆ ಮುಂದಡಿಯಿಡಲಿದ್ದಾರೆ.
ರವಾಂಡದ ತಪ್ಪು ಇಡೀ ಜಗತ್ತಿಗೆ ಪಾಠವಾಗಲಿ. ರವಾಂಡದ ಕಹಿ ಘಟನೆ ಜಗತ್ತಿನ ಚರಿತ್ರೆಯಲ್ಲಿ ಎಂದೆಂದಿಗೂ ಮರುಕಳಿಸದಿರಲಿ.
ಹೀಗೊಂದು ಚಿಕಿತ್ಸೆ
ಇದು ಡಾಕ್ಟರ್‌ರ ಕಿಲಾಡಿತನವೋ, ವೃತ್ತಿ ಅನುಭವವೋ, ಭಾಷಾಜ್ಞಾನದ ಕೊರತೆಯೋ ಅಥವಾ ಪೆದ್ದುತನದ ಪರಮಾವಧಿಯೋ ಗೊತ್ತಿಲ್ಲ. ಬೆಂಗಳೂರಿನ ಜಯನಗರದಲ್ಲಿ ದವಾಖಾನೆಯ ಮುಂದೆ ಕಾಣಿಸಿದ ಒಂದು ಬೋರ್ಡ್ - 'ಮಹಿಳೆ ಮತ್ತು ಇತರ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುವುದು.'
ಅಜ್ಜನ ಆರೋಗ್ಯದ ಗುಟ್ಟು
ಒಂದು ದಿನ ಹುಡುಗನೊಬ್ಬ ಪಾರ್ಕ್‌ನಲ್ಲಿ ಕುಳಿತು ಒಂದಾದಮೇಲೆ ಒಂದರಂತೆ ಚಾಕ್‌ಲೆಟ್ ತಿನ್ನತೊಡಗಿದ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಆ ಹುಡುಗನ ಬಳಿ ಹೋಗಿ ಸಲಹೆ ಕೊಡತೊಡಗಿದ...
ವ್ಯಕ್ತಿ: ನೋಡು ಪುಟ್ಟಾ, ಇಷ್ಟೊಂದು ಚಾಕಲೆಟ್ ತಿನ್ಬಾರ್ದು. ಇದರಿಂದ ಆರೋಗ್ಯ ಹಾಳಾಗುತ್ತೆ.
ಹುಡುಗ: ನಾನೊಂದು ವಿಷಯ ಹೇಳ್ಲಾ? ನನ್ನ ಅಜ್ಜನಿಗೆ 105 ವರ್ಷ ವಯಸ್ಸು. ಅವರು ಇಂದಿಗೂ ಆರೋಗ್ಯವಾಗಿದ್ದಾರೆ.
ವ್ಯಕ್ತಿ: ಓಹ್! ಅವರೂ ನಿನ್ನ ಹಾಗೆ ಬಹಳ ಚಾಕ್ಲೆಟ್ ತಿನ್ನುತ್ತಾರಾ?
ಹುಡುಗ: ಇಲ್ಲ..
ವ್ಯಕ್ತಿ: ಮತ್ತೆ?
ಹುಡುಗ: ಅವರು ನಿಮ್ಮ ಹಾಗೆ ಬೇರೆಯವರ ವಿಷಯದಲ್ಲಿ ಮೂಗು ತೂರಿಸೋದಿಲ್ಲ!
ಹೆಚ್ಚು ಆಸೆ ಪಟ್ಟರೆ...
ಮಹಿಳೆಯೊಬ್ಬಳ ಪ್ರಾರ್ಥನೆಗೆ ಒಲಿದು ದೇವರು ಪ್ರತ್ಯಕ್ಷನಾದ.
ದೇವರು: ಏನು ವರ ಬೇಕೋ ಕೇಳು ಮಗಳೇ...
ಮಹಿಳೆ: ನನ್ನ ಗಂಡ 24 ಗಂಟೆಯೂ ನನ್ನನ್ನೇ ನೋಡುತ್ತಿರಬೇಕು, ನನ್ನ ಬಿಟ್ಟು ಆತನಿಗೆ ಬೇರೆ ಪ್ರಪಂಚ ಇರಬಾರದು, ಯಾವಾಗಲೂ ಆತ ನನ್ನ ಪಕ್ಕದಲ್ಲೇ ಮಲಗಬೇಕು, ಆತ ಹೊರಗೆ ಹೋದಾಗಲೆಲ್ಲ ನನ್ನನ್ನೂ ಜೊತೆಗೊಯ್ಯಬೇಕು...
(ದೇವರು ತಥಾಸ್ತು ಅಂದ, ಆ ಮಹಿಳೆ ಮೊಬೈಲ್ ಫೋನ್ ಆದಳು!)
- ವಿಶ್ವೇಶ್ವರ ಭಟ್