ವಿಶ್ವವೇ ಒಂದು ರೀತಿ ಯೋಚಿಸಿದರೆ ರಾಜಕಾರಣಿಗಳು ಮಾತ್ರ ಬೇರೆ!

ಜಗತ್ತಿನ ಎಲ್ಲರೂ ಒಂದು ರೀತಿಯಲ್ಲಿ ಯೋಚಿಸುತ್ತಿದ್ದರೆ, ರಾಜಕಾರಣಿಗಳು ಮಾತ್ರ..
ವಿಶ್ವವೇ ಒಂದು ರೀತಿ ಯೋಚಿಸಿದರೆ ರಾಜಕಾರಣಿಗಳು ಮಾತ್ರ ಬೇರೆ!
Updated on: 

ಮೂರು ಲೆಕ್ಕಾಚಾರಗಳು ಇರುತ್ತವೆಯಂತೆ.
ಮೊದಲನೆಯದು ಸರಿಯಾದ ಲೆಕ್ಕಾಚಾರ, ಎರಡನೆಯದು ತಪ್ಪು ಲೆಕ್ಕಾಚಾರ ಹಾಗೂ ಮೂರನೆಯದು ರಾಜಕೀಯ ಲೆಕ್ಕಾಚಾರ. ಮೊದಲನೆಯ ಲೆಕ್ಕಾಚಾರದವರು ಎರಡು ಪ್ಲಸ್ ಎರಡು ಅಂದ್ರೆ ನಾಲ್ಕು ಅಂತಾರೆ. ಎರಡನೆಯವರು ಮೂರು ಅಥವಾ ಐದು ಎಂದು ತಪ್ಪು ಹೇಳಬಹುದು. ಮೂರನೆಯ ಹಾಗೂ ರಾಜಕೀಯ ಲೆಕ್ಕಾಚಾರದವರಿದ್ದಾರಲ್ಲ, ಅವರಿಗೆ ಎರಡು ಪ್ಲಸ್ ಎರಡು ಎಷ್ಟು ಅಂತ ಕೇಳಿದರೆ, ನಿಮಗ್ಯಾವ ಉತ್ತರ ಬೇಕೋ ಆ ಉತ್ತರವನ್ನು ಕೊಡುತ್ತಾರೆ. ಅಷ್ಟೇ ಅಲ್ಲ, ಆ ಉತ್ತರವನ್ನು ನಿಜ ಮಾಡಿ ತೋರಿಸುತ್ತಾರೆ. ಅಂದರೆ ಎರಡು ಪ್ಲಸ್ ಎರಡು ಎಷ್ಟು ಅಂತ ಕೇಳಿದಾಗ ನಿಮಗೆ ಆರೋ, ಏಳೋ ಎಂಬ ಉತ್ತರ ಬೇಕಿದ್ದರೆ, ರಾಜಕಾರಣಿಗಳು ಅದೇ ಉತ್ತರವನ್ನು ಹೇಳಿ ಅದನ್ನು ನಿಜ ಅಂತ ಸಾಬೀತುಪಡಿಸುತ್ತಾರೆ.
ರಾಜಕಾರಣಿಗಳು ಯೋಚಿಸುವ ರೀತಿಯೇ ಬೇರೆ. ಜಗತ್ತಿನ ಎಲ್ಲರೂ ಒಂದು ರೀತಿಯಲ್ಲಿ ಯೋಚಿಸುತ್ತಿದ್ದರೆ, ರಾಜಕಾರಣಿಗಳು ಮಾತ್ರ ವಿಭಿನ್ನವಾಗಿ ಯೋಚಿಸುತ್ತಾರೆ. ರಾಜಕಾರಣಿಗಳ ಯೋಚನೆಗೂ ವಿಶ್ವದ ಇತರ ಜನರ ಯೋಚನೆಗಳಿಗೂ ತಾಳ-ಮೇಳ ಆಗುವುದಿಲ್ಲ. ವಿಜ್ಞಾನಿಗಳು, ತತ್ತ್ವಜ್ಞಾನಿಗಳು, ದಾರ್ಶನಿಕರು, ವಿದ್ವಾಂಸರು, ಪತ್ರಕರ್ತರು, ಉದ್ದಿಮೆದಾರರು, ಶ್ರಮಿಕರು, ಕೃಷಿಕರು...ಹೀಗೆ ಎಲ್ಲ ವರ್ಗ, ಸಮುದಾಯದವರು ಈ ಜಗತ್ತು ಅಭಿವೃದ್ಧಿಯಾಗಬೇಕು, ಎಲ್ಲರೂ ಉತ್ತಮ ಬದುಕು ಸಾಗಿಸುವಂತಾಗಬೇಕು ಅಂತ ಯೋಚಿಸಿದರೆ, ರಾಜಕಾರಣಿಗಳು ಹಾಗಲ್ಲ, ಸಮಾಜದಲ್ಲಿ ಶಾಂತಿ ನೆಲೆಸಿದರೆ, ಎಲ್ಲರೂ ಓದಿ ಬುದ್ಧಿವಂತರಾದರೆ, ಸಮಾಜ ಅಭಿವೃದ್ಧಿಯಾಗಿ ಎಲ್ಲರೂ ಉತ್ತಮ ಜೀವನ ಸಾಗಿಸಿದರೆ ತಮಗೇನು ಕೆಲಸ ಎಂದು ಯೋಚಿಸುತ್ತಾರೆ. ಅದಕ್ಕೆ ಜಾತಿ-ಜಾತಿ ನಡುವೆ ವಿಷಬೀಜ ಬಿತ್ತಿ ಅಶಾಂತಿ ನೆಲೆಸುವಂತೆ ಮಾಡುತ್ತಾರೆ. ಓದಿ ಬುದ್ಧಿವಂತರಾಗಬಾರದೆಂದು ಅಜ್ಞಾನದಲ್ಲಿಯೇ ಇರಿಸುತ್ತಾರೆ. ಆ ಮೂಲಕ ಅವರು ಬಡತನ, ಹಸಿವು, ರೋಗರುಜಿನ, ಕಷ್ಟಕಾರ್ಪಣ್ಯದಲ್ಲಿಯೇ ಶಾಶ್ವತ ಇರುವಂತೆ ಮಾಡುತ್ತಾರೆ. ಬಡವರು ಬಡವರಾಗಿ ಉಳಿದರೆ ಮಾತ್ರ ರಾಜಕಾರಣಿಗಳ ಬೇಳೆ ಬೇಯುತ್ತದೆ. ಬಡವರಿಗೆ ಎರಡು ಹೊತ್ತಿನ ಊಟದ ಆಸೆ ತೋರಿಸಿ, ಶ್ರೀಮಂತನಿಗೆ ತನ್ನ ಹಣದ ಥೈಲಿಯ ರಕ್ಷಣೆ ಭರವಸೆ ಮೂಡಿಸಿ ಏಕಕಾಲಕ್ಕೆ ಇಬ್ಬರಲ್ಲೂ ಆತಂಕ, ಭೀತಿ ಮೂಡಿಸಿ, ಮನಸ್ಸಿನ ಮೂಲೆಯಲ್ಲೆಲ್ಲೋ ಆಸೆಯನ್ನೂ ಚಿಗುರಿಸಿ ಸದಾ ಇಬ್ಬರನ್ನೂ ಶೋಷಿಸುತ್ತಾರೆ.   
'ಗರೀಬಿ ಹಠಾವೋ' ಎಂದು ನಲವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಇಷ್ಟೊತ್ತಿಗೆ ಬಡತನ ಎಂದೋ ದೇಶಬಿಟ್ಟು ಹೋಗಬೇಕಿತ್ತು. ಆದರೆ ಬಡತನ ಅಂದು ಎಷ್ಟಿತ್ತೋ ಇಂದೂ ಅಷ್ಟೇ ಇದೆ. ಇನ್ನು ಐವತ್ತು ವರ್ಷಗಳಾದರೂ ಇರುತ್ತದೆ, ಅನುಮಾನ ಬೇಡ. ಕಾರಣ ನಮ್ಮ ನಡುವೆ ರಾಜಕಾರಣಿಗಳು ಇದ್ದೇ ಇರುತ್ತಾರಲ್ಲ. ತಾವು ಇರುವ ತನಕ ಹೇಗಾದರೂ ಮಾಡಿ ಬಡತನವನ್ನೂ ಇರುವಂತೆ ನೋಡಿಕೊಳ್ಳುತ್ತಾರೆ. ರಾಜಕಾರಣಿಗಳಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕೆಂದರೆ ಬಡತನ ನಿವಾರಣೆಯಾಗದಂತೆ ನೋಡಿಕೊಳ್ಳಬೇಕು. ಕೊಚ್ಚೆ, ಹೊಲಸಿನಲ್ಲಿಯೇ ಸೊಳ್ಳೆ, ಗುಂಗಾಡುಗಳು ಹುಟ್ಟಿಕೊಳ್ಳುತ್ತದೆ. ಬಡತನ, ಹಸಿವು, ಅನಕ್ಷರತೆ, ರೋಗರುಜಿನ, ಕೋಟಳೆಗಳ ನಡುವೆಯೇ ರಾಜಕಾರಣಿಯೂ ಅರಳುತ್ತದೆ. ಅದಕ್ಕೇ ಹೇಳಿದ್ದು, ಎಲ್ಲರೂ ಒಂದು ರೀತಿಯಲ್ಲಿ ಯೋಚಿಸಿದರೆ, ಇಡೀ ವಿಶ್ವವೇ ಒಂದು ರೀತಿಯಲ್ಲಿ ಚಿಂತಿಸಿದರೆ, ರಾಜಕಾರಣಿಗಳು ಮಾತ್ರ ಮತ್ತೊಂದು ರೀತಿಯ ಯೋಚನೆಯಲ್ಲಿ ಮುಳುಗಿರುತ್ತಾರೆ.
ಒಮ್ಮೆ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಟೆಕ್ಸಾಸ್‌ನಲ್ಲಿ ಇಂಜಿನಿಯರ್‌ಗಳು, ಡಾಕ್ಟರ್‌ಗಳು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಮೇಧಾವಿಗಳು, ಬುದ್ಧಿಜೀವಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿದ್ದರು. ಆನಂತರ ಅವರೊಂದಿಗೆ ಪ್ರಶ್ನೋತ್ತರ ಕಾರ್ಯಕ್ರಮವಿತ್ತು. ಆಗ ಒಬ್ಬರು ಎದ್ದು ನಿಂತು, 'ಅಧ್ಯಕ್ಷ ರೇಗನ್ ಅವರೇ, ಇತ್ತೀಚೆಗೆ ಅಮೆರಿಕ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಇರಾನ್‌ಗೆ ಮಾರಾಟ ಮಾಡಿದೆಯೆಂಬುದು ಗೊತ್ತಾಗಿದೆ. ಇದು ಸರಿಯಾದ ಕ್ರಮ ಅಲ್ಲ. ಯಾಕೆಂದರೆ ಮುಂದೊಂದು ದಿನ ಇರಾನ್ ಅದೇ ಶಸ್ತ್ರಾಸ್ತ್ರಗಳನ್ನು ಅಮೆರಿಕದ ವಿರುದ್ಧವೇ ಪ್ರಯೋಗಿಸಬಹುದು. ನಮ್ಮಲ್ಲಿರುವ ಅಸ್ತ್ರವನ್ನು ವೈರಿ ದೇಶಕ್ಕೆ ನೀಡಿ ನಾವೇ ಅವರಿಂದ ಹೊಡೆತ ತಿನ್ನುವ ಇಂಥ ಕ್ರಮ ಎಷ್ಟು ಸರಿ? ಇದರಿಂದ ಹಾನಿ, ತೊಂದರೆ ಅನುಭವಿಸುವವರು ಮಾತ್ರ ಅಮೆರಿಕನ್ನರು. ಇಂಥ ಮೂರ್ಖತನದ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಯಾಕೆ? ಈ ಪ್ರಶ್ನೆಯನ್ನು ಅಮೆರಿಕದ ಸೆನೆಟ್‌ನಲ್ಲಿ ಕೇಳಿದ್ದರೂ ನೀವು ನೇರ ಉತ್ತರ ಕೊಡದೇ ನುಣುಚಿಕೊಂಡಿದ್ದೇಕೆ?' ಎಂದು ನೇರವಾಗಿ ಏರಿದ ದನಿಯಲ್ಲಿ ಕೇಳಿದ.
ಅದಕ್ಕೆ ರೇಗನ್ ಹೇಳಿದ-'ನೀವು ಕೇಳಿದ ಕೊನೆಯ ಪ್ರಶ್ನೆಗೆ ಮೊದಲು ಹೇಳುತ್ತೇನೆ. ನಾನು ಸೆನೆಟ್‌ಗೆ ಉತ್ತರ ನೀಡದೇ  ನುಣುಚಿಕೊಂಡಿಲ್ಲ. ಕೆಲವು ಪ್ರಶ್ನೆಗಳಿಗೆ ಬಹಿರಂಗವಾಗಿ ಉತ್ತರ ಕೊಡಲು ಆಗುವುದಿಲ್ಲ. ಆದರೂ ನೀವು ಕೇಳಿದ ಪ್ರಶ್ನೆಗೆ ಉತ್ತರಿಸುತ್ತೇನೆ ಕೇಳಿ. ನಾವು ಇರಾನ್‌ಗೆ ಶಸ್ತ್ರಾಸ್ತ್ರ ನೀಡಿದ್ದು ನಿಜ. ಅವರು ನಮ್ಮಿಂದ ಪಡೆದ ಶಸ್ತ್ರಾಸ್ತ್ರಗಳನ್ನು ನಮ್ಮ ಮೇಲೆಯೇ ಪ್ರಯೋಗಿಸಬಹುದೆಂಬ ಆತಂಕದಿಂದಲೇ ಅವರಿಗೆ ನಾವು ಹೊಸ, ಆಧುನಿಕ ಹಾಗೂ ಅತ್ಯಂತ ವಿಶಿಷ್ಟ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದೇವೆ. ನಾವು ಅವರಿಗಿಂತ ಕಡಿಮೆ ದರ್ಜೆಯ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದೇವೆ. ಅಸಲಿ ಗುಟ್ಟು ಏನೆಂದರೆ, ಶಸ್ತ್ರಾಸ್ತ್ರಗಳನ್ನು ಹೊಂದುವುದು ಮುಖ್ಯ ಅಲ್ಲ. ಅದನ್ನು ಆಪರೇಟ್ ಮಾಡುವವರು ಬಹಳ ಮುಖ್ಯ. ಇರಾನ್ ಪರಿಸ್ಥಿತಿ ಹೇಗಿದೆಯೆಂದರೆ ಅವರ ಬಳಿ ಆಧುನಿಕ ಶಸ್ತ್ರಾಸ್ತ್ರಗಳಿವೆ. ಆದರೆ ಅದನ್ನು ಆಪರೇಟ್ ಮಾಡುವವರೇ ಇಲ್ಲ. ನಮ್ಮಿಂದ ಪಡೆದ ಶಸ್ತ್ರಾಸ್ತ್ರಗಳನ್ನು ಅವರು ಯುದ್ಧಭೂಮಿಗೂ ತೆಗೆದುಕೊಂಡು ಹೋಗಲು ಆಗುವುದಿಲ್ಲ. ನಾವು ಟ್ರೇನರ್‌ನ್ನು ಕಳಿಸದೇ ಅವರು ಬಳಸುವಂತಿಲ್ಲ. ಯುದ್ಧವಿಮಾನ ಅವರ ಬಳಿಯಿದ್ದರೆ ಏನು ಪ್ರಯೋಜನ? ಅದನ್ನು ಹಾರಿಸುವವರು ಬೇಕಲ್ಲ. ಇರಾನ್ ಬಳಿ ಅವರಿದ್ದರೆ ತಾನೆ? ಆದ್ದರಿಂದ ನಾವು ತಲೆಕೆಡಿಸಿಕೊಳ್ಳಬೇಕಿಲ್ಲ.'
ಎಲ್ಲರೂ ಒಂದು ರೀತಿಯಲ್ಲಿ ಯೋಚಿಸಿದರೆ ಈ ರಾಜಕಾರಣಿಗಳಿದ್ದಾರಲ್ಲ ಅವರು ಯೋಚಿಸುವ ಕ್ರಮವೇ ಬೇರೆ. ಅವರ ಲೆಕ್ಕಾಚಾರದಲ್ಲಿ ಗಣಿತದ ಯಾವ ಸೂತ್ರಗಳು ಲಾಗೂ ಆಗುವುದಿಲ್ಲ. ಅವರಿಗೆ ವೈಯಕ್ತಿಕ ಲಾಭವಾಗುವ ಲೆಕ್ಕಾಚಾರಗಳಲ್ಲಿ ಮಾತ್ರ ಅವರಿಗೆ ಆಸಕ್ತಿಯಿರುತ್ತದೆ. ಆ ಲೆಕ್ಕಾಚಾರ ಎಷ್ಟು ಪಕ್ಕಾ ಆಗಿರುತ್ತದೆಯೆಂದರೆ ಏನೇ ಆದರೂ ಅವರಿಗೇ ಲಾಭವಾಗುತ್ತದೆ. ಜನರಿಗಾಗಲಿ, ಸಮಾಜಕ್ಕಾಗಲಿ, ದೇಶಕ್ಕಾಗಲಿ ಏನು ಪ್ರಯೋಜನವಾಗಬೇಕು ಎಂದಿಲ್ಲ. ತಮ್ಮ ಹಿತಾಸಕ್ತಿಗೆ ಧಕ್ಕೆಯಾಗದಿದ್ದರೆ ಸಾಕು.
ಯಾರಾದರೂ ಅಂದುಕೊಂಡಿದ್ದರಾ, ಡಾ. ಮನಮೋಹನಸಿಂಗ್ ಈ ದೇಶದ ಪ್ರಧಾನಿಯಾಗುತ್ತಾರೆ ಹಾಗೂ ಅಖಂಡ ಹತ್ತು ವರ್ಷಗಳ ಕಾಲ ಆ ಹುದ್ದೆಯಲ್ಲಿರುತ್ತಾರೆಂದು. ಅವರು ಪ್ರಧಾನಿ ಆಗುತ್ತಾರೆಂಬುದು ಸ್ವತಃ ಅವರಿಗೇ ಗೊತ್ತಿರಲಿಲ್ಲ. ಅವರಲ್ಲಿ ಪ್ರಧಾನ ಮಂತ್ರಿಯಾಗುವ ಯಾವ ಗುಣಲಕ್ಷಣಗಳಿದ್ದವು? ಯಾವ ಅರ್ಹತೆಗಳಿದ್ದವು? ಹಾಗೆ ನೋಡಿದರೆ ಅವರು ಎಂದೂ ಪ್ರಧಾನಿಯಾಗಿ, ಪ್ರಧಾನಿಯಂತೆ ವರ್ತಿಸಲೇ ಇಲ್ಲ. ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಬೇರೆಯವರು ಅಧಿಕಾರ ನಡೆಸಿದರು! ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಪಕ್ಷದಲ್ಲಿ ಅರ್ಹ ವ್ಯಕ್ತಿಗಳಿದ್ದರು. ಪ್ರಣಬ್ ಮುಖರ್ಜಿ, ಚಿದಂಬರಂ ಅವರಂಥ ಘಟಾನುಘಟಿಗಳಿದ್ದರು. ಆದರೆ ಘಟಾನುಘಟಿಯಲ್ಲ ಎಂಬ ಕಾರಣಕ್ಕೆ ಡಾ. ಸಿಂಗ್ ಆಯ್ಕೆಯಾದರು. ಬುದ್ಧಿವಂತರಾದವರು, ಕ್ರಿಯಾಶೀಲರಾದವರು, ಅಪ್ರತಿಮ ನಾಯಕರು, ಉತ್ತಮ ವಾಗ್ಮಿಗಳು, ಧೀಮಂತ ವ್ಯಕ್ತಿಗಳು ಮಾತ್ರಪ್ರಧಾನಿಯಾಗುತ್ತಾರೆಂಬ ಲೆಕ್ಕಾಚಾರಗಳೆಲ್ಲ ಡಾ. ಸಿಂಗ್ ಆಯ್ಕೆಯಾಗುತ್ತಿದ್ದಂತೆ ನೆಗೆದು ಬಿದ್ದವು. ರಾಜಕಾರಣಿಗಳಲ್ಲದವರು, ನಿಷ್ಕ್ರಿಯರು, ಕೈಲಾಗದವರು ಸಹ ಪ್ರಧಾನಿಯಾಗಬಹುದು ಎಂಬುದನ್ನು ಡಾ. ಸಿಂಗ್ ತೋರಿಸಿಕೊಟ್ಟರು.
ಹತ್ತು ವರ್ಷಗಳ ಕಾಲ ಅವರು ನಡೆದುಕೊಂಡ ರೀತಿ ನೋಡಿದರೆ, ಒಂದು ದೇಶಕ್ಕೆ ಪ್ರಧಾನಿಯೇ ಬೇಕಾಗಿಲ್ಲ, ಅವರಿಲ್ಲದಿದ್ದರೂ ದೇಶವನ್ನು ಮುನ್ನಡೆಸಿಕೊಂಡು ಹೋಗಬಹುದೆಂಬುದನ್ನು ಅವರು ತೋರಿಸಿಕೊಟ್ಟರು. ಡಾ. ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಹಿಂದಿನ ಲೆಕ್ಕಾಚಾರವೂ ಅದೇ ಆಗಿತ್ತು. ನಾಮಕೇವಾಸ್ತೇ ಒಬ್ಬ ಪ್ರಧಾನಿ ಇರಬೇಕು, ಅವರು ರಾಜಕಾರಣಿಯಾಗಿರಕೂಡದು, ಹೇಳಿದಂತೆ ಕೇಳುವವರಿರಬೇಕು. ಈ ಎಲ್ಲ ಲೆಕ್ಕಾಚಾರಗಳಿಗೆ ಡಾ. ಸಿಂಗ್ ಅಗ್ದಿ ಭೇಷ್ ಆಗಿ ಫಿಟ್ ಆದರು. ಕೊನೆಯ ತನಕವೂ ತಮ್ಮನ್ನು ಆರಿಸಿದವರ ಆಶಯಗಳಿಗೆ ಸ್ವಲ್ಪವೂ ಕುಂದುಂಟಾಗದಂತೆ ನಡೆದುಕೊಂಡರು. ಜಗತ್ತಿನ ಯಾವುದೇ ಲೆಕ್ಕಾಚಾರಗಳ ಪ್ರಕಾರ, ಅವರು ಪ್ರಧಾನಿ ಆಗಲೇಬಾರದು. ಆದರೆ ರಾಜಕೀಯ ಲೆಕ್ಕಾಚಾರಗಳು ಅಷ್ಟು ಸರಳವಾಗಿರುವುದಿಲ್ಲ. ಇಡೀ ದೇಶಕ್ಕೆ ಒಪ್ಪಿತವಾಗದೇ ಇರುವುದು ಕೆಲವು ರಾಜಕಾರಣಿಗಳಿಗೆ ಒಪ್ಪಿತವಾಗಿರುತ್ತದೆ. ಹೀಗಾಗಿ ಅಪಾತ್ರರು ಮಹತ್ವದ ಹುದ್ದೆಗಳನ್ನು ಅಲಂಕರಿಸುತ್ತಾರೆ. ಇಲ್ಲದಿದ್ದರೆ ರಾಬ್ಡಿದೇವಿ ಬಿಹಾರದ ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಪನ್ನೀರಸೆಲ್ವಂ ತಮಿಳುನಾಡಿನ ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ರಾಜಕೀಯ ಲೆಕ್ಕಾಚಾರ ಉಳಿದೆಲ್ಲ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುತ್ತದೆ. ಇದು ಎಲ್ಲರಿಗೂ ಅರ್ಥವಾಗುವಂಥ ಲೆಕ್ಕಾಚಾರ ಅಲ್ಲ. ಯೋಗ್ಯರು, ಅರ್ಹರು, ಲಾಯಕ್ಕಾದವರ ಬದಲಿಗೆ ಅಯೋಗ್ಯರು, ಅನರ್ಹರು, ನಾಲಾಯಕ್ಕಾದವರೂ ಟಿಕೆಟ್ ಗಿಟ್ಟಿಸುತ್ತಾರೆ, ಅಧಿಕಾರ ಅನುಭವಿಸುತ್ತಾರೆ. ನಮ್ಮನ್ನು ಆಳುತ್ತಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿರುತ್ತವೆ.
ಜವಾಹರಲಾಲ್ ನೆಹರು ನಿಧನದ ಬಳಿಕ ಆ ಸ್ಥಾನಕ್ಕೆ ಯಾರನ್ನು ಕುಳ್ಳಿರಿಸಬೇಕೆಂಬ ಬಗ್ಗೆ ಅಂದಿನ ಕಾಂಗ್ರೆಸ್ ನಾಯಕರಲ್ಲಿ ಜಿಜ್ಞಾಸೆ ಶುರುವಾಯಿತು. ಆಗ ಪಕ್ಷದ ಮುಂದಿದ್ದುದು ಎರಡು ಹೆಸರು- ಮೊರಾರ್ಜಿ ದೇಸಾಯಿ ಹಾಗೂ ಲಾಲಬಹದ್ದೂರ ಶಾಸ್ತ್ರಿ. ಅಂದಿನ ಸಂದರ್ಭದಲ್ಲಿ ಶಾಸ್ತ್ರಿ ಅವರಿಗಿಂತ ಮೊರಾರ್ಜಿಯೇ ನೆಹರು ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗುವುದಕ್ಕೆ ಒಂದು ಹಿಡಿ ಹೆಚ್ಚು ಅರ್ಹತೆ, ಯೋಗ್ಯತೆಯನ್ನು ಪಡೆದಿದ್ದರು. ಆದರೆ ಕಾಂಗ್ರೆಸ್ ನಾಯಕರ ಲೆಕ್ಕಾಚಾರವೇ ಬೇರೆಯಾಗಿತ್ತು. ಮೊರಾರ್ಜಿ ಮೂಲತಃ ಮೊಂಡ, ಹಠವಾದಿ, ಮಹಾಜಿಗುಟು ಸ್ವಭಾವದ ಮನುಷ್ಯ. ಇಂಥವನನ್ನೇನಾದರೂ ಪ್ರಧಾನಿ ಮಾಡಿದರೇ ಅಂಕೆಗೇ ಸಿಗದೇ ಹೋಗಬಹುದು ಎಂದು ಕಾಂಗ್ರೆಸ್ ನಾಯಕರು ಯೋಚಿಸಲಾರಂಭಿಸಿದರು. ಅದೇ ಶಾಸ್ತ್ರಿ ಮೃದು ಸ್ವಭಾವದವರು, ಏತಿ ಅಂದ್ರೆ ಪ್ರೇತಿ ಎಂದು ಹೇಳುವವರಲ್ಲ. ಎದುರು ಮಾತಾಡುವವರಲ್ಲ, ಸುಲಭವಾಗಿ ನಿಯಂತ್ರಿಸಲು ಅನುಕೂಲವಾಗುವ ವ್ಯಕ್ತಿ. ಈ ರಾಜಕೀಯ ಲೆಕ್ಕಾಚಾರದಲ್ಲಿ ಮೊರಾರ್ಜಿ ಹೆಸರು ಪಕ್ಕಕ್ಕೆ ಸರಿದು ಶಾಸ್ತ್ರಿ ಹೆಸರು ಮುಂದಕ್ಕೆ ಬಂದಿತು. ಶಾಸ್ತ್ರಿಯವರು ಪ್ರಧಾನಿಯಾದರು.
ಆನಂತರ ಶಾಸ್ತ್ರಿಯವರು ಹಠಾತ್ ನಿಧನರಾದರಲ್ಲ, ಆಗಲೂ ಪುನಃ ಮೊರಾರ್ಜಿ ಅವರ ಹೆಸರು ಕೇಳಿ ಬಂತು. ಆಗ ಕಾಂಗ್ರೆಸ್ ನಾಯಕರ ಮುಂದೆ ಇದ್ದ ಮತ್ತೊಂದು ಹೆಸರೆಂದರೆ ಇಂದಿರಾಗಾಂಧಿ. ಈ ಎರಡು ಹೆಸರುಗಳ ಮಧ್ಯೆ ಮೊರಾರ್ಜಿಯವರು ನಿಸ್ಸಂದೇಹವಾಗಿ, ಅರ್ಹತೆ, ಹಿರಿತನ, ಪಕ್ಷನಿಷ್ಠೆ, ವ್ಯಕ್ತಿಶುದ್ಧಿ, ಪ್ರಾಮಾಣಿಕತೆ ದೃಷ್ಟಿಯಿಂದ ಆಯ್ಕೆಯಾಗಬೇಕಿತ್ತು. ಪುನಃ ಅಡ್ಡ ಬಂದಿದ್ದು ಅವರ ಹಠಮಾರಿ ಸ್ವಭಾವ, ಜಿಗುಟುತನ. ರಾಜಕೀಯದಲ್ಲಿ ಅನನುಭವಿಯಾಗಿರುವ, ಆಟಿಕೆ ಬೊಂಬೆಯಂತಿರುವ, ಹೆಣ್ಣು ಮಗಳೊಬ್ಬಳು ಪ್ರಧಾನಿಯಾದರೆ ಆಕೆಯನ್ನು ಸುಲಭವಾಗಿ ನಿಯಂತ್ರಿಸಬಹುದು, ತಮಗೆ ಬೇಕಾದಂತೆ ಮಾತು ಕೇಳಿಸಬಹುದು ಎಂದು ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದರು. ಇಂದಿರಾ ಅವರು ಮನೆಯಲ್ಲಿ ತೆಪ್ಪಗೆ ಕುಳಿತಿದ್ದರೆ ತಾವೇ ಅಧಿಕಾರ ಚಲಾಯಿಸಬಹುದು ಎಂದೂ ಲೆಕ್ಕ ಹಾಕಿದರು. ಆ ಸಂದರ್ಭದಲ್ಲಿ ಅದು ವಾಸ್ತವವಾಗಿತ್ತು. ಆದರೆ ಇಂದಿರಾ ಮಹಾ ಜಾಣೆ. ತಮ್ಮನ್ನು ಬೆಂಬಲಿಸಿದ ನಾಯಕರ ಪೈಕಿ ಒಬ್ಬೊಬ್ಬರನ್ನೇ ಮೂಲೆಗುಂಪು ಮಾಡುತ್ತಾ, ತಮ್ಮ ಸುತ್ತ ಭಟ್ಟಂಗಿಗಳನ್ನು ಕಟ್ಟಿಕೊಂಡರು. ಅವರೂ ಸಹ ಈಗಿನ ಡಾ. ಮನಮೋಹನಸಿಂಗ್ ಅವರಂತೆ ಆಗಬಹುದೆಂದು ಅಂದುಕೊಂಡವರೆಲ್ಲ ಹಣೆಹಣೆ ಚಚ್ಚಿಕೊಂಡರು. ಮುಂದೇನಾಯಿತು ಎಂಬುದು ಗೊತ್ತೇ ಇದೆ.
ರಾಜಕೀಯ ನಾಯಕರ ಲೆಕ್ಕಾಚಾರ, ಪಟ್ಟುಗಳನ್ನು ಅರಿಯಬೇಕಾದರೆ ಅವರು ಯಾರಿಗೆ ಟಿಕೆಟ್ ನೀಡುತ್ತಾರೆ. ಯಾಕೆ ನೀಡುತ್ತಾರೆ, ಯಾವ ಯಾವ ಸಂಗತಿಗಳು ಪರಿಗಣನೆಗೆ ಬರುತ್ತವೆ ಎಂಬುದನ್ನೆಲ್ಲ ತಿಳಿದರೆ ತಲೆಕೆಟ್ಟು ಹೋಗುತ್ತದೆ. ಇಷ್ಟಾಗಿಯೂ ಅಭ್ಯರ್ಥಿ ಸೋಲಬಹುದು, ಅದು ಬೇರೆ ಮಾತು. ಆದರೆ ಲೆಕ್ಕಾಚಾರವಿಲ್ಲದೇ ಟಿಕೆಟ್ ಅಂತೂ ಸಿಗುವುದಿಲ್ಲ. ಒಬ್ಬನಿಗೆ ತಪ್ಪಿಸಿ, ಮತ್ತೊಬ್ಬನಿಗೆ ಟಿಕೆಟ್ ಸಿಕ್ಕಿದೆಯೆಂದರೆ ಅದರ ಹಿಂದೆ ಹತ್ತಾರು ಪ್ರಬಲ ಕಾರಣಗಳು ಕೆಲಸ ಮಾಡಿರುತ್ತವೆ. ಗೆಲ್ಲುವುದೇ (ಗ್ಝಿಟಿಟಿಛಛ್ಝಿಟ್ಝಡಿಣ)ಮುಖ್ಯ ಕಾರಣವಾದಾಗ ಜಾತಿ, ಹಣಬಲ, ತೋಳ್ಬಲವಿದ್ದವರು ಮೇಲುಗೈ ಸಾಧಿಸುತ್ತಾರೆ. 'ಡಕಾಯಿತರ ರಾಣಿ' ಫೂಲನ್ ದೇವಿಗೆ ಟಿಕೆಟ್ ನೀಡಿದಾಗ ದೇಶಾದ್ಯಂತ ಟೀಕೆ, ಖಂಡನೆ ವ್ಯಕ್ತವಾಗಿತ್ತು. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರ ತೀರ್ಮಾನಕ್ಕೆ ಪಕ್ಷದೊಳಗೇ ತೀಕ್ಷ್ಣ ಪ್ರತಿರೋಧ ವ್ಯಕ್ತವಾಗಿತ್ತು. ದಿಲ್ಲಿಯಲ್ಲಿ ಪತ್ರಕರ್ತರು ಈ ಬಗ್ಗೆ ಕೇಳಿದಾಗ, 'ಫಲಿತಾಂಶ ಬಂದ ನಂತರ ಮಾತಾಡುತ್ತೇನೆ. ಈಗ ಚರ್ಚಿಸಿ ಫಲವಿಲ್ಲ' ಎಂದರು. ಫಲಿತಾಂಶ ಬಂತು. ಫೂಲನ್‌ದೇವಿ ಗೆದ್ದಳು. ಇದಕ್ಕಿಂತ ಮುಖ್ಯವಾಗಿ ಮುಲಾಯಂ ಲೆಕ್ಕಾಚಾರ ಗೆದ್ದಿತು. ಲೋಕದ ಕಣ್ಣಿಗೆ ಈಕೆ 'ಡಕಾಯಿತ ರಾಣಿ'ಯಾಗಿರಬಹುದು. ಆದರೆ ಮುಲಾಯಂ ಕಣ್ಣಿಗೆ ಅವಳು 'ಗೆಲ್ಲುವ ಕುದುರೆ'ಯಾಗಿ ಕಂಡಿದ್ದಳು. ಅವರಿಗೆ ನಂಬರ್ ಬೇಕಿತ್ತು. ಅಭ್ಯರ್ಥಿಗಳ ಸುಬಗತನ, ಸಾಚಾತನ ಕಟ್ಟಿಕೊಂಡು ಅವರಿಗೇನೂ ಆಗಬೇಕಿರಲಿಲ್ಲ. ಒಳ್ಳೆಯ ಮಂದಿಯನ್ನು ಕಟ್ಟಿಕೊಂಡು ರಾಜಕಾರಣ ಮಾಡಲಾಗುವುದಿಲ್ಲ ಎಂಬ ಕಟು ವಾಸ್ತವವನ್ನು ಅವರು ಬಹಳ ಬೇಗ ಅರಿತುಕೊಂಡಿದ್ದರು. ಹೀಗಾಗಿ ಅವರು ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಮುಲಾಜಿಲ್ಲದೇ ಟಿಕೆಟ್ ಕೊಡಲಾರಂಭಿಸಿದರು. ತನ್ನ ಅಪರಾಧಗಳನ್ನು ಮುಚ್ಚಿಕೊಳ್ಳಲು ಆತ ಹೇಗಾದರೂ ಮಾಡಿ ಆರಿಸಿ ಬರಲು ಪ್ರಯತ್ನಿಸುತ್ತಾನೆಂಬುದು ಅವರಿಗೆ ಗೊತ್ತು. ಆತನನ್ನು ತಾನು ಗೆಲ್ಲುವುದಕ್ಕಿಂತ, ಆತನಿಗೇ ಗೆಲುವಿನ ಅನಿವಾರ್ಯತೆಯಿರುವುದರಿಂದ ಶತಾಯಗತಾಯ ಗೆಲ್ಲುತ್ತಾನೆಂಬುದು ಮುಲಾಯಂಗೆ ಗೊತ್ತು. ಹೀಗಾಗಿ ಅವರು ಇಂಥ ಅಭ್ಯರ್ಥಿಗಳನ್ನು ಹುಡುಕಿ ಹುಡುಕಿ ಟಿಕೆಟ್ ನೀಡಲಾರಂಭಿಸಿದರು. ಈ 'ಕಲೆ'ಯಲ್ಲಿ ಅಷ್ಟೇ ನಿಷ್ಣಾತರಾದವರು ಲಾಲೂಪ್ರಸಾದ್ ಯಾದವ್. ಇಡೀ ಜಗತ್ತಿಗೆ ಕ್ರಿಮಿನಲ್ ಎಂದು ಅನಿಸಿಕೊಂಡವರು, ಈ ಇಬ್ಬರು ನಾಯಕರಿಗೆ ಅಚ್ಚುಮೆಚ್ಚಿನವರಾದರು. ಈ ರಾಜಕೀಯ ಲೆಕ್ಕಾಚಾರವನ್ನು ಆನಂತರ ಎಲ್ಲ ರಾಜಕೀಯ ಪಕ್ಷಗಳು ಒಂದಿಲ್ಲೊಂದು ರೀತಿಯಲ್ಲಿ ಅಳವಡಿಸಿಕೊಂಡಿದ್ದು ದುರಂತ.
ರಾಜಕಾರಣಿಯ ಮುಂದೆ ಬಿದ್ದಾಗ ಆತ ನಗದಿರಬಹುದು. ಅದರರ್ಥ ಆತನಿಗೆ ನಗೆ ಬಂದಿಲ್ಲ ಎಂದು ಅರ್ಥ ಅಲ್ಲ. ಗಹಗಹಿಸಿ ನಗಲು ಆತ ಸಂದರ್ಭಕ್ಕೆ ಕಾಯುತ್ತಿದ್ದಾನೆ ಎಂದರ್ಥ ಅಥವಾ ಆ ವೇಳೆ ಆತ ಹಲ್ಲು ಸೆಟ್ಟನ್ನು ತೆಗೆದಿಟ್ಟಿರಬಹುದು.
ಮುಂದಿನ ರಾಜಕೀಯ ಲೆಕ್ಕಾಚಾರ ನೋಡ್ತಾ ಇರಿ!

-ವಿಶ್ವೇಶ್ವರ ಭಟ್
vbhat@me.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com