ಕೆಟ್ಟ ಅಪಪ್ರಚಾರ ಸಮರದ ದೊಡ್ಡ ಸ್ಪರ್ಧೆ

ದೀರ್ಘಕಾಲದ ಜನತಾಂತ್ರಿಕ ವ್ಯವಸ್ಥೆಯ ಅನುಕೂಲ - ಪ್ರತಿಕೂಲಗಳನ್ನೆಲ್ಲ ಅನುಭವಿಸಿದ ಶತಕೋಟಿಗೂ ಹೆಚ್ಚಿನ ಜನರ ನಾಡಿನ ಪರಿಸ್ಥಿತಿ ಇದು.
Updated on: 

ಇನ್ನೇನು ಕರ್ನಾಟಕದಲ್ಲಿ ಹದಿನಾರನೆ ಲೋಕಸಭೆ ಚುನಾವಣೆಯ ಮತದಾನದ ದಿನ ಬಂದೇ ಬಿಟ್ಟಿದೆ. ಮುಂದಿನ ವಾರವೇ ಮತದಾನ. ಸುಮಾರು ಮೂರು ವಾರಗಳ ಭೀಕರ ಪ್ರಚಾರ ಸಮರದಲ್ಲಿ ಕಂಡುಬಂದಿದ್ದು ಕೆಟ್ಟ ರೀತಿಯ ಅಪಪ್ರಚಾರ ಅಷ್ಟೇ. ರಾಜ್ಯದ ರಾಜಕೀಯ ವಾತಾವರಣದಲ್ಲಿ ಒಳ್ಳೆಯ ಗಾಳಿ, ಚಿಂತನೆ ಕಂಡುಬರಲೇ ಇಲ್ಲ. ಒಂದು ದೇಶವ್ಯಾಪೀ ಮಹಾನ್ ಚರ್ಚೆಯ ಅವಕಾಶವನ್ನು ನಾವೆಲ್ಲ ಕಳೆದುಕೊಂಡಿದ್ದೇವೆ.
ಈಗಾಗಲೇ ರಾಜ್ಯಕ್ಕೆ - ಕಾಂಗ್ರೆಸ್ ಬಿಜೆಪಿಗಳ ಅತಿರಥ ಮಹಾರಥಿಗಳೆಲ್ಲರೂ ಬಂದು ಹೋಗಿದ್ದಾರೆ. ಸೋನಿಯಾ ಗಾಂಧಿ, ರಾಹುಲ ಗಾಂಧಿ (ಕಾಂಗ್ರೆಸ್ಸಿಗೆ ಬೇರೆ ಯಾರಿದ್ದಾರೆ ರಾಷ್ಟ್ರೀಯ ನಾಯಕರು?) ಬಿಜೆಪಿಯ ಏಕೈಕ ನಾಯಕ, ರಾಜಕೀಯ ಪಕ್ಷ ಆಧರಿತ ಸಂಸದೀಯ ಜನತಾಂತ್ರಿಕ ವ್ಯವಸ್ಥೆಯನ್ನು ವ್ಯಕ್ತಿ ಕೇಂದ್ರಿತ (ಅಧ್ಯಕ್ಷೀಯ ಮಾದರಿ) ಚುನಾವಣೆಯಾಗಿ ಪರಿವರ್ತಿಸಿದ ನರೇಂದ್ರ ಮೋದಿ ಅವರೆಲ್ಲ ಬಂದು ಹೋಗಿದ್ದಾರೆ. ಅವರೆಲ್ಲರ ಭಾಷಣಗಳೂ ಚರ್ವಿತ ಚರ್ವಣವೇ. ಹಿಂದೆ ದಶಕಗಳಿಂದ ಕೇಳುತ್ತಲೇ ಬಂದಿರುವ ಮೌಲ್ಯಗಳ ನೆನಪು. ಹೊಸದೆನ್ನುವುದು ಏನೂ ಇಲ್ಲ. ಭಾರತೀಯರ ಸಾಮೂಹಿಕ ಚಿಂತನ ಶಕ್ತಿಯೇ ಹೆಪ್ಪುಗಟ್ಟಿರುವಂತೆ ಆಗಿದೆ.
ಆ ಪ್ರಕ್ರಿಯೆಗೆ ಈ ಚುನಾವಣೆಯಲ್ಲಿ ಪ್ರಧಾನವಾದ ಅಥವಾ ಏಕೈಕ ವಿಚಾರದ ಪ್ರತಿಪಾದನೆಯ ಸ್ವರೂಪವನ್ನು ಗಮನಿಸಿ:
ನರೇಂದ್ರ ಮೋದಿ ಬೇಕೇ ಬೇಕು (NAMO) ಗಡ ನರೇಂದ್ರ ಮೋದಿ ಬಿಟ್ಟು ಯಾರಾದರೂ ಆಗಲಿ (AOM). ದೀರ್ಘಕಾಲದ ಜನತಾಂತ್ರಿಕ ವ್ಯವಸ್ಥೆಯ ಅನುಕೂಲ - ಪ್ರತಿಕೂಲಗಳನ್ನೆಲ್ಲ ಅನುಭವಿಸಿದ ಶತಕೋಟಿಗೂ ಹೆಚ್ಚಿನ ಜನರ ನಾಡಿನ ಪರಿಸ್ಥಿತಿ ಇದು. ಇಂದಿನ ಪ್ರಚಾರದ ಯುಗದಲ್ಲಿ ಇದು ಅನಿವಾರ್ಯವೇ ಆಗಿರಬಹುದು. ಸಾರ್ವಜನಿಕ ಸಭೆಗಳು ಟಿ.ವಿ. ಯುಗದಲ್ಲಿ ತಮ್ಮ ಉಪಯುಕ್ತತೆಯನ್ನು ಕಳೆದುಕೊಂಡಿವೆ. ಮಹಾನಾಯಕರ ಸಾಮಾನ್ಯ ಭಾಷಣಕ್ಕಾಗಿ ಲಕ್ಷಾಂತರ ರುಪಾಯಿಗಳ ವೆಚ್ಚದಲ್ಲಿ ಸಭೆಯ ವ್ಯವಸ್ಥೆ. ಜನಗಳನ್ನು ಸಂಖ್ಯಾಬಲದ ಪ್ರದರ್ಶನಕ್ಕಾಗಿ ಬಸ್ಸು, ಲಾರಿ, ಕಾರು ವ್ಯಾನ್‌ಗಳಲ್ಲಿ ಕರೆತರುವ ವ್ಯವಸ್ಥೆ. ಆ ಭಾಷಣಗಳ ಸ್ವರೂಪವಾದರೂ ಏನು? ಎದುರಾಳಿಗಳ ಭರ್ತ್ಸನೆ. ಇಡೀ ಚುನಾವಣೆ ಪ್ರಚಾರದ ಕಸರತ್ತು ಒಂದು ಸಂಪ್ರದಾಯದ ಪಾಲನೆಯಂತೆಯೇ ಆಗಿದೆ. "ಶಾಸ್ತ್ರಕ್ಕಾಗಿ" ಮಾಡುವ ಕೆಲಸ ಅದು.
ಕರ್ನಾಟಕದಲ್ಲಿ ಸಿದ್ದರಾಮಯ್ಯ: ಬಿಜೆಪಿಗೆ ಅಖಿಲ ಭಾರತ ಮಟ್ಟದಲ್ಲಿ ನರೇಂದ್ರ ಮೋದಿ "ಮಾಡಿರುವುದನ್ನು" ಕರ್ನಾಟಕದಲ್ಲಿ ಕಾಂಗ್ರೆಸ್ಸಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಅದೇ ಧಾಟಿ, ಅದೇ ಉದ್ಯೋಗ. ಸಿದ್ದರಾಮಯ್ಯ ಅವರ ಭಾಷಣಗಳಲ್ಲೂ ಎದ್ದು ಕಾಣುವುದು ಒಂದೇ ಅಂಶ; ನರೇಂದ್ರ ಮೋದಿಯ ತೆಗಳಿಕೆ. ಗುಜರಾತ್‌ನಲ್ಲಿನ ಪ್ರಗತಿಯ ವಿವರಗಳೆಲ್ಲ ಮೋಸ. ಕರ್ನಾಟಕದಲ್ಲೇನಾಗಿದೆ? ಅದು ಈಗಿನ ಚುನಾವಣೆಗೆ "ವಸ್ತುವಲ್ಲ".
ಕರ್ನಾಟಕ ಕಾಂಗ್ರೆಸ್ಸಿನ ಚುನಾವಣೆಯ ಪ್ರಚಾರ ಚುಕ್ಕಾಣಿಯನ್ನು ಸಿದ್ದರಾಮಯ್ಯ ಅವರು "ಅಪಹರಿಸಿದ್ದಾರೆ". ಅವರಲ್ಲಿ ಈಗ ರಾಜ್ಯಾಧಿಕಾರವೆಲ್ಲ ಕೇಂದ್ರೀಕೃತವಾಗಿರುವುದರಿಂದ ಆ ಕೆಲಸವೇನೂ ಕಷ್ಟವಲ್ಲ-
ಸಿದ್ದರಾಮಯ್ಯ ಅವರು ತಮ್ಮ ಪಕ್ಷ ಹಾಗೂ ಸರ್ಕಾರದ ಕ್ರಾಂತಿಕಾರಿ ಬದಲಾವಣೆಗಳ ವಿಚಾರವನ್ನೇ ಪ್ರಸ್ತಾಪಿಸುತ್ತಿಲ್ಲ. ಅವರ ಗಮನವೆಲ್ಲವೂ ಅಹಿಂದ ಶಕ್ತಿಗಳ ಕ್ರೋಢೀಕರಣದ ಕಡೆಗೇ ಕೇಂದ್ರೀಕೃತವಾಗಿದೆ. ಆ ಶಕ್ತಿಯ ಬೆಂಬಲ ಸಿಕ್ಕರೆ ಸಾಕು. ಉಳಿದವರ ಗೊಡವೆ ಯಾಕೆ? ರಾಜ್ಯದ ಅತಿ ದೊಡ್ಡ - ಅತಿ ಪ್ರಭಾವ ಶಾಲಿ ಜನರ ಗುಂಪದು. ಸಿದ್ದರಾಮಯ್ಯ ಪ್ರಚಾರ ರಥದಲ್ಲಿ ಕೂಡುವುದು ಅಹಿಂದದ 'ಅ' ಭಾಗವನ್ನು ಪ್ರತಿನಿಧಿಸುವ ಸಿ.ಎಂ. ಇಬ್ರಾಹಿಂ ಅವರೇ. ಇನ್ನೊಬ್ಬರಿಗೂ ಸ್ಥಾನವಿಲ್ಲ. ದಲಿತ ಸಮಾಜದ ನಾಯಕಲ್ಲಿ ಖರ್ಗೆಯವರು ಹೈದರಾಬಾದ್ ಕರ್ನಾಟಕದ ಸೀಮೆಯನ್ನೇ ಭದ್ರವಾಗಿ ಹಿಡಿದುಕೊಂಡಿದ್ದಾರೆ. ಅವರ ರಾಜಕೀಯ ವೈಖರಿ ಅದು. ಮೊದಲು ಮನೆಗೆದ್ದು ಅನಂತರ ಮುಂದಿನ ಮಾತು. ಮತ್ತೊಬ್ಬ ದಲಿತ ನಾಯಕ ಶ್ರೀನಿವಾಸ ಪ್ರಸಾದ್, ಮೈಸೂರು - ನಂಜನಗೂಡು - ಚಾಮರಾಜನಗರ ಸೀಮೆಯ "ಪ್ರಭಾರಿ". ಆ ರಥವನ್ನೇರುವುದರಲ್ಲಿ ತುಮಕೂರಿನ ಡಾ॥ ಜಿ. ಪರಮೇಶ್ವರ ಅವರಿಗೆ ಉತ್ಸಾಹವಿಲ್ಲ.
ಮಂಡ್ಯ - ಧಾರವಾಡ: ಒಂದು ರೀತಿಯಲ್ಲಿ ಈಗ ರಾಜ್ಯದ ಚುನಾವಣೆ ಚಿತ್ರವನ್ನು ಮಂಡ್ಯ - ಧಾರವಾಡ ಕ್ಷೇತ್ರಗಳು ಸರಿಯಾಗಿ ದರ್ಶನ ಮಾಡಿಸುತ್ತಿವೆ ಎನ್ನಬಹುದು. ಎರಡೂ ಕ್ಷೇತ್ರಗಳಲ್ಲಿ ಪ್ರಬಲ ಕೋಮುಗಳ ಶಕ್ತಿಯ ನಡುವಣ ಹೋರಾಟವೇ ಕಂಡುಬರುವುದು. ಮಂಡ್ಯದಲ್ಲಿ ಕೆಲವೇ ತಿಂಗಳ ಹಿಂದೆ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದ ರಾಜಕೀಯ ಹೊಸಮುಖವಾದ ಕಾಂಗ್ರೆಸ್ಸಿನ ರಮ್ಯ ಅವರಿಗೆ ಹಿರಿಯ ಒಕ್ಕಲಿಗ ನಾಯಕ ಎಸ್ಸೆಮ್ ಕೃಷ್ಣಅವರ ಆಶೀರ್ವಾದ - ಬೆಂಬಲವಿದೆ. ರಮ್ಯಾ ಎದುರಾಳಿ ಜಾತ್ಯತೀತ ಜನತಾದಳದ ಪುಟ್ಟರಾಜು ಹೋದ ಬಾರಿ ಸೋತವರು. ಅವರಿಗೇ ಈಗಲೂ ಪಕ್ಷದ ಅಗ್ರೇಸರ ದೇವೇಗೌಡರ ಬೆಂಬಲ.
ಅಭ್ಯರ್ಥಿಗಳಿಬ್ಬರೂ ಒಂದೇ ಜಾತಿಗೆ ಸೇರಿದವರಾದರೂ, ಅವರನ್ನು ಬೆಂಬಲಿಸುತ್ತಿರುವುದು ವಿಭಿನ್ನ ರಾಜಕೀಯ ಚಿಂತನೆಯ ಶಕ್ತಿಗಳು.
ಆದರೆ ಜೆಡಿಎಸ್. ನಾಯಕರಾದ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ, ಅನಿತಾ, ಭವಾನಿ, ನಿಖಿಲ್, ಪ್ರಜ್ವಲ್ ಅವರೆಲ್ಲರ ಗಮನ ಹಾಸನ - ಚಿಕ್ಕಬಳ್ಳಾಪುರಗಳಲ್ಲೇ ಕೇಂದ್ರೀಕೃತವಾಗಿಬಿಟ್ಟಿದೆ. ಚುನಾವಣೆಗೆ "ರಂಗೇ" ಬರುವುದಿಲ್ಲ.
ಹಾಸನಕ್ಕೇ ದೇವೇಗೌಡರು ಹೆಚ್ಚು ಗಮನ ಕೊಡುವುದು. ಯಾರಿಗೆ ಗೊತ್ತು ರಾಜಕೀಯದಲ್ಲಿ ಹಿಂದೆ ನಡೆದುಹೋದ ಪ್ರಕರಣದ (ದೇವೇಗೌಡರ ಪಟ್ಟಾಭಿಷೇಕ) ಪುನರಾವರ್ತನೆ ಆಗಬಾರದೇಕೆ? ಆ ಪ್ರಶ್ನೆ ಕನಸಿನ ರೂಪದಲ್ಲಿ ಗೌಡರ ಮುಂದೆ ನಿಂತಿದೆ. ಧಾರವಾಡದಲ್ಲಿ ಜಾತಿ ಆಧರಿತ ರಾಜಕೀಯವೇ ನಡೆಯುತ್ತಿರುವುದು. ಧಾರವಾಡ ಲಾಗಾಯ್ತಿನಿಂದಲೂ ಕಾಂಗ್ರೆಸ್ಸಿನ ಪ್ರಬಲ ಸ್ಥಾನ. ಲಿಂಗಾಯಿತರ ಅತಿ ಪ್ರಬಲ ಕ್ಷೇತ್ರಗಳಲ್ಲಿ ಧಾರವಾಡವೂ ಒಂದು. ಆದರೂ ಇಲ್ಲಿಂದ ಸರೋಜಿನೀ ಮಹಿಷಿ ಎರಡು ಬಾರಿ ಆಯ್ಕೆಯಾಗಿದ್ದರು.
ಕಾಂಗ್ರೆಸ್ಸಿನ ಅಲೆ ಮುಗಿಯುವ ಸಮಯದಲ್ಲಿ ಭಾರತೀಯ ಜನತಾ ಪಾರ್ಟಿಯ ಅಗ್ರಗಣ್ಯ ನೇತಾರರಾಗಿದ್ದ ಜಗನ್ನಾಥ ರಾವ್ ಜೋಷಿಯವರೂ ಸೋತಿದ್ದರು. ಕುರುಬರ ಪ್ರತಿನಿಧಿಯಾಗಿ ಡಿ.ಕೆ. ನಾಯ್ಕರ್ ಗೆದ್ದಿದ್ದ ಕ್ಷೇತ್ರ ಇದು. ಆಗ ಕಾಂಗ್ರೆಸ್ ಅಲೆ ಮತ್ತೆ ಬಂದಿತ್ತು. ಈಗಿನದ್ದು ವಿಚಿತ್ರವಾದ ಸನ್ನಿವೇಶ. ರಾಜ್ಯದಲ್ಲಿ ಸಾಮಾನ್ಯವಾಗಿ ಲಿಂಗಾಯಿತರು ಬಿಜೆಪಿಯ ಕಡೆಗೆ ವಾಲಿರುವಂತಿದೆ. ಧಾರವಾಡದಲ್ಲಿನ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಷಿ ಬ್ರಾಹ್ಮಣರು. ಅವರ ವಿರುದ್ಧ ಕಾಂಗ್ರೆಸ್ ಹೂಡಿರುವುದು ವೀರಶೈವ ಸಮಾಜದ ವಿನಯ ಕುಲಕರ್ಣಿ ಅವರನ್ನು. ಈ ಕ್ಷೇತ್ರದಲ್ಲಿನ ಫಲಿತಾಂಶ ರಾಜ್ಯದ ನಾಳಿನ ರಾಜಕೀಯಕ್ಕೆ ತೋರು ಬೆರಳು.
ಯಡಿಯೂರಪ್ಪ ಪ್ರಾಮುಖ್ಯ: ಭಾರತೀಯ ಜನತಾ ಪಾರ್ಟಿಯ ಓಟು ಗಳಿಕೆಗೆ, ಪ್ರಬಲ ಜನಾಂಗದ ನಾಯಕ ಹಾಗೂ ಆ ಜನಾಂಗವನ್ನು ಆಕರ್ಷಿಸುವ ಮಾಜಿ ಮುಖ್ಯಮಂತ್ರಿ ಯಡಿಯೂಪ್ಪ ಅವರನ್ನೇ ನಂಬಿರುವುದು.
ಆದರೂ ಪಕ್ಷ ಅವರನ್ನು ರಾಜ್ಯದ ಎಲ್ಲ ಕಡೆಗಳಿಗೂ ಪ್ರಧಾನ ಪ್ರಚಾರಕರನ್ನಾಗಿ ಬಳಸಿಕೊಳ್ಳದೇ ಶಿವಮೊಗ್ಗದಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿಯೂ ಆರಿಸಿದೆ. "ಕಳಂಕಿತ ಅಭ್ಯರ್ಥಿ ಯಡಿಯೂರಪ್ಪ" ಎನ್ನುವ ಮಾತನ್ನು ಕಾಂಗ್ರೆಸ್ಸಿಗರು ಕಾಶ್ಮೀರದಿಂದ ಕನ್ಯಾಕುಮಾರಿ, ಮಣಿಪುರದಿಂದ ಮಥುರಾವರೆಗಿನ ಎಲ್ಲ ಪ್ರದೇಶಗಳಲ್ಲೂ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಶಿವಮೊಗ್ಗದಲ್ಲೇ ಹೆಸರು ಮಾಡಿದ್ದ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರಿ ಕನ್ನಡದ ವರನಟ ದಿವಂಗತ ರಾಜಕುಮಾರ್ ಅವರ ಸೊಸೆ ಗೀತಾ ಶಿವರಾಜಕುಮಾರ್ ಅವರನ್ನೇ ಅಭ್ಯರ್ಥಿಯಾಗಿ ಆರಿಸಿ ಕ್ಷೇತ್ರದ ಅವರ ಜಾತಿಯ ಮತಗಳನ್ನೆಲ್ಲ ಗುಡ್ಡೆ ಹಾಕಿಕೊಳ್ಳಲು ಮುಂದಾಗಿದೆ.
ಯಡಿಯೂರಪ್ಪ ಅವರ ಅಶ್ವಮೇಧ ಯಾತ್ರೆ ಈಗಾಗಲೇ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು ರೌಂಡ್ ಆಗಿದೆ. ಇನ್ನೊಂದು ರೌಂಡ್ ಅನಂತರ ಶಿವಮೊಗ್ಗದಲ್ಲೇ ಯಡಿಯೂರಪ್ಪ ಠಿಕಾಣಿ ಹೂಡಬೇಕು.
ಬೆಂಗಳೂರು ದಕ್ಷಿಣ - ಚಿಕ್ಕಬಳ್ಳಾಪುರ: ಇಡೀ ದೇಶದ ಗಮನ ಸೆಳೆದಿರುವ ಇನ್ನೆರಡು ಕ್ಷೇತ್ರಗಳೆಂದರೆ, ಐದು ಬಾರಿ ಗೆದ್ದಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಆಧಾರ್ ಕಾರ್ಡ್‌ನ ಬ್ರಹ್ಮ, ಅತಿ ಶ್ರೀಮಂತ ಕಾಂಗ್ರೆಸ್ ಅಭ್ಯರ್ಥಿ ನಂದನ ನೀಲೆಕಣಿ ಅವರ ನಡುವಣ ಹೋರಾಟದ ಕಣವಾದ ಬೆಂಗಳೂರು ದಕ್ಷಿಣ ಹಾಗೂ ಸಮೀಪದ ಚಿಕ್ಕಬಳ್ಳಾಪುರ ಕ್ಷೇತ್ರ. ಚಿಕ್ಕಬಳ್ಳಾಪುರದಲ್ಲಿ ಹೋದ ಬಾರಿ ವಿಜಯಿಯಾಗಿ, ಕೇಂದ್ರದಲ್ಲಿ ಅತಿಪ್ರಭಾವಿ ಮಂತ್ರಿಯಾಗಿ, ಸೋನಿಯಾ - ರಾಹುಲ್ ಗಾಂಧಿ ಕುಟುಂಬಕ್ಕೂ ಹತ್ತಿರವಾದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಕಾಂಗ್ರೆಸ್ ಅಭ್ಯರ್ಥಿ.
ಕಳೆದ ಬಾರಿ ಅವರು ಕ್ಷೇತ್ರಕ್ಕೆ ಕಾರ್ಕಳ ಸೀಮೆಯಿಂದಲೋ, ಎಲ್ಲಿಂದಲೋ ಬಂದಿದ್ದ ಅಭ್ಯರ್ಥಿ. ಚಿಕ್ಕಬಳ್ಳಾಪುರದ ರಾಜಕೀಯ ತುಂಬಾ ಸಂಕೀರ್ಣವಾದದ್ದು. ಕ್ಷೇತ್ರದ ಬಹುಮಂದಿಗೆ ಕನ್ನಡ - ತೆಲುಗುಗಳೆರಡೂ ಮಾತೃಭಾಷೆಯೇ. ಬೆಂಗಳೂರಿಗೆ ತುಂಬಾ ಹತ್ತಿರವಾಗಿರುವುದರಿಂದ ಎಲ್ಲ ಬಗೆಯ ರಾಜಕೀಯ ಅಲೆಗಳಿಗೂ ಸ್ಪಂದಿಸುವ ಕ್ಷೇತ್ರ ಇದು.
ಈ ಕ್ಷೇತ್ರದ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಪುತ್ರ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಣ್ಣೇಕೆ ಬಿತ್ತೋ ಗೊತ್ತಿಲ್ಲ. ಕರ್ನಾಟಕದ ವಿಧಾನಸಭೆಯಲ್ಲಿ ಅವರಿಗೆ ಈಗ ವಿರೋಧ ಪಕ್ಷದ ನಾಯಕರ ಸ್ಥಾನ -ಮಾನವೂ ಇಲ್ಲದೇ ಇರುವುದರಿಂದ ವೀರಪ್ಪ ಮೊಯಿಲಿ ಅವರಂತಹ ಪ್ರಭಾವಿ ನಾಯಕರನ್ನು ಸೋಲಿಸಿ, ಲೋಕಸಭೆಗೆ ಹೋದರೆ ರಾಷ್ಟ್ರೀಯ ರಾಜಕೀಯದ ತಿರುವುಗಳಲ್ಲಿ ಅವರಿಗೂ ಏನಾದರೂ ಒಳ್ಳೆಯ ಅವಕಾಶ ಸಿಗಬಹುದೆನ್ನುವ ಆಸೆ ಇದ್ದರೂ ಇರಬಹುದು. ಅದಕ್ಕೇ ಅವರು ಖಡಾಖಡಿ ಹೋರಾಟ ನಡೆಸಿದ್ದಾರೆ.
ಭವಿಷ್ಯದ ರಾಷ್ಟ್ರೀಯ ರಾಜಕೀಯದಲ್ಲಿ, ಲೋಕಸಭೆ ಕೇಂದ್ರಿತವಾಗಿ, ಕರ್ನಾಟಕದ ಕಾಣಿಕೆ ಪರಿಣಾಮಕಾರಿಯಾಗಿರುವ ಭರವಸೆಯಂತೂ ದೇವೇಗೌಡರಿಗೆ ಅವರ ಕುಟುಂಬಕ್ಕೆ ಇದೆ. ಮುಂದಿನದ್ದನ್ನು ಊಹಿಸುವುದಕ್ಕೂ ಎಂಟೆದೆ ಬೇಕು.
ಕಿಡಿಗೇಡಿತನ: ಸರ್ವತಂತ್ರ ಸ್ವತಂತ್ರ ಜನತಾಂತ್ರಿಕ ಗಣತಂತ್ರ ರಾಷ್ಟ್ರವಾದ ಭಾರತದ ಉದಯವಾಗಿದ್ದು 1952ರಲ್ಲಿ. ಮೊದಲ ಲೋಕಸಭೆಯಲ್ಲಿ ವಿರೋಧ ಪಕ್ಷವೇ ಇರಲಿಲ್ಲ. ಆ ಸ್ಥಾನ ಪಡೆಯಲು ಕನಿಷ್ಠ 50 ಸ್ಥಾನಗಳನ್ನು ಪಡೆಯಬೇಕಿತ್ತು. ಯಾವ ಪಕ್ಷಕ್ಕೂ ಆ ಸಂಖ್ಯೆ ಇರಲಿಲ್ಲ.
  ಆದ್ದರಿಂದ ಅಂದಿನ ಲೋಕಸಭೆ ಸ್ಪೀಕರ್ ಜಿ.ವಿ. ಮಾವಲಂಕರ್ ಅವರು 22 ಸ್ಥಾನಗಳನ್ನು ಪಡೆದಿದ್ದ ಕಮ್ಯುನಿಸ್ಟ್ ಪಾರ್ಟಿಯನ್ನೇ ಪ್ರಧಾನ ವಿರೋಧಿ ಗುಂಪು ಎಂದು ಮಾನ್ಯ ಮಾಡಿದ್ದರು. ಎ.ಕೆ. ಗೋಪಾಲನ್ ಆಗ ವಿರೋಧಿ ಗುಂಪಿನ ನಾಯಕ. (1952-57). ಅದಾದ ಅರವತ್ತೆರಡು ವರ್ಷಗಳ ಅನಂತರ 2014 ರಲ್ಲಿ ಕಮ್ಯುನಿಸ್ಟರ ರಾಷ್ಟ್ರೀಯ ಪಕ್ಷದ ಮಾನ್ಯತೆಯೂ ಅಳಿಸಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಕಾಲಚಕ್ರದ ಉರುಳಿನ ಮಹಾತ್ಮೆ ಅದು.

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com