ಮತಬ್ಯಾಂಕ್ ಹಿಂದೆ ಬಿದ್ದ ಮುಲಾಯಮ್‌ರಿಂದ ದೇಶ ನಿರೀಕ್ಷಿಸಬಹುದಾದ್ದು ಅತ್ಯಾಚಾರವನ್ನಷ್ಟೇ

ಮತಬ್ಯಾಂಕ್ ಹಿಂದೆ ಬಿದ್ದ ಮುಲಾಯಮ್‌ರಿಂದ ದೇಶ ನಿರೀಕ್ಷಿಸಬಹುದಾದ್ದು ಅತ್ಯಾಚಾರವನ್ನಷ್ಟೇ
ಮತಬ್ಯಾಂಕ್ ಹಿಂದೆ ಬಿದ್ದ ಮುಲಾಯಮ್‌ರಿಂದ ದೇಶ ನಿರೀಕ್ಷಿಸಬಹುದಾದ್ದು ಅತ್ಯಾಚಾರವನ್ನಷ್ಟೇ
Updated on: 

ಪುರುಷ ಪ್ರಧಾನ ಮನಸ್ಥಿತಿ, ಮನುವಾದಿ ಧೋರಣೆ, ಮಹಿಳೆಯ ಅಗೌರವ- ಇವೆಲ್ಲವೂ ಪ್ರಗತಿಪರ ವರ್ಗದಿಂದ ಪುಂಖಾನುಪುಂಖವಾಗಿ ಚಿಮ್ಮುವ ಪದ ಹತ್ಯಾರಗಳಾಗಿದ್ದವು. ಆ ಹೇಳಿಕೆ ಕೊಟ್ಟಿರುವುದು 'ಸೆಕ್ಯುಲರ್‌' ಪಾಳಯದ ಮುಲಾಯಂ ಸಿಂಗ್ ಅಲ್ಲದೇ ಬೇರೆಯವರಾಗಿದ್ದರೆ....
'ಅತ್ಯಾಚಾರವಾಗಿದೆ ಅಂದಾಕ್ಷಣ ನೀವು ಅಪರಾಧಿಗೆ ನೇಣು ಹಾಕಿಬಿಡುತ್ತೀರಾ? ಹುಡುಗರು ಅಂದಮೇಲೆ ತಪ್ಪುಗಳಾಗುತ್ತವೆ' ಅಂದಿದ್ದಾರೆ ಮುಲಾಯಂ ಸಿಂಗ್ ಯಾದವರು. ಇಂಥವರನ್ನೆಲ್ಲ ಒಟ್ಟಿಗಿಟ್ಟುಕೊಂಡು ತಮ್ಮಲ್ಲೇ ಯಾರಾದರೂ ಪ್ರಧಾನಿಯಾಗಲಿದ್ದೇವೆ ಎಂಬ ಕನಸು ಹೆಣೆಯುತ್ತಿರುವ ದೇವೇಗೌಡರ ಬಳಿ, 'ಮುಲಾಯಂ ಹೇಳಿಕೆಗೆ ನಿಮ್ಮದೇನು ಪ್ರತಿಕ್ರಿಯೆ' ಅಂತ ಕೇಳಿದರೆ, 'ನಾನೇಕೆ ಅವರ ಹೇಳಿಕೆ ಖಂಡಿಸಲಿ. ಎಲ್ಲ ಪಕ್ಷಗಳಿಗೂ ಅವರದೇ ಆದ ರಾಜಕೀಯ ನಿಲವುಗಳಿರುತ್ತವೆ. ಕೊನೆಗೂ ನಿರ್ಧಾರ ತೆಗೆದುಕೊಳ್ಳಬೇಕಿರುವುದು ಸುಪ್ರೀಂಕೋರ್ಟ್ ಹಾಗೂ ರಾಷ್ಟ್ರಪತಿಗಳು ತಾನೇ?' ಅಂತ ಜಾರಿಕೊಂಡಿದ್ದಾರೆ. ಎಂಥ ಬುದ್ಧಿವಂತಿಕೆ?
ಅಂದಹಾಗೆ, ಮುಲಾಯಂ ಅವರ ಹೇಳಿಕೆ, 'ಮರಣದಂಡನೆ ಬೇಕೋ ಬೇಡವೋ' ಎಂಬ ತಾತ್ವಿಕ ಚರ್ಚೆಯೇನಲ್ಲ. 'ಸಂದರ್ಭ ಸಹಿತ ವಿವರಿಸಿ' ಎಂಬ ವ್ಯಾಖ್ಯಾನವನ್ನು ಬೇಡುವ ನಡೆ ಇದು.
ಅತ್ಯಾಚಾರದಂಥ ಅಮಾನುಷ ಕೃತ್ಯವನ್ನು, 'ಅಯ್ಯೋ, ಹುಡುಗರು ತಪ್ಪು ಮಾಡ್ತಾರೆ ಬಿಡ್ರೀ. ಅದಕ್ಕೆಲ್ಲ ಗಲ್ಲೇಕೆ' ಎಂಬ ಮಾತು ಮುಲಾಯಂ ಬಾಯಲ್ಲಿ ಉದುರಿದ್ದು ಯಾವ ಸಂದರ್ಭದಲ್ಲಿ? ಮುಂಬೈನ ಶಕ್ತಿಮಿಲ್‌ನಲ್ಲಿ ಪತ್ರಕರ್ತೆಯ ಮೇಲೆ ಅತ್ಯಾಚಾರ ಎಸಗಿದ್ದವರಲ್ಲಿ ಮೂವರಿಗೆ ಗಲ್ಲುಶಿಕ್ಷೆಯನ್ನೂ ಮತ್ತೊಬ್ಬನಿಗೆ ಜೀವಾವಧಿಯನ್ನೂ ಕೆಲದಿನಗಳ ಹಿಂದೆ ತ್ವರಿತಗತಿ ನ್ಯಾಯಾಲಯ ಪ್ರಕಟಿಸಿತು. ಈ ಬಗ್ಗೆ ಪ್ರತಿಕ್ರಿಯಿಸುತ್ತಲೇ ಮುಲಾಯಂ ಸಾಹೇಬರಿಂದ ಇಂಥದೊಂದು ಆಣಿಮುತ್ತು ಉದುರಿದೆ. ಅಲ್ಲಿಗೆ ಸಮಾಜವಾದಿಪಕ್ಷವು ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದಮೇಲೆ ಗೂಂಡಾಗಿರಿ ಹೆಚ್ಚಾಗಿದೆ ಎಂಬ ಆರೋಪಗಳಲ್ಲಿ ಹುರುಳಿದೆ ಎಂದಾಯಿತು. ಗಂಭೀರ ಅಪರಾಧಗಳ ಬಗ್ಗೆ ಪಕ್ಷ ಪ್ರಮುಖರ ಧೋರಣೆಯೇ ಇಂಥದ್ದು ಎಂದಮೇಲೆ ತಮ್ಮ ರಾಜ್ಯದಲ್ಲಿ ಅತ್ಯಾಚಾರ ಮಾಡುವುದಕ್ಕೆ ಎಲ್ಲರೂ ಮುಕ್ತರು, ಹೆಣ್ಣು ಭೋಗಿಸಿ ಎಸೆಯಬಹುದಾದ ಪದಾರ್ಥ ಎಂದೇ ಹೇಳಿದಂತಾಯಿತಲ್ಲವೇ?
ಮುಲಾಯಂ ದೇಶಾವರಿಯಾಗಿ ನೀಡಿದ ಹೇಳಿಕೆಯೇನೂ ಇದಲ್ಲ. ಮುಸ್ಲಿಮರನ್ನು ಮತಬ್ಯಾಂಕ್‌ನ ಹೊರತಾಗಿ ಮತ್ಯಾವ ದೃಷ್ಟಿಯಲ್ಲೂ ನೋಡದ ಮುಲಾಯಂ, ಅವರ ತುಷ್ಟೀಕರಣದ ಚಿಕ್ಕ ಅವಕಾಶವನ್ನೂ ಬಿಟ್ಟುಕೊಡಲೊಲ್ಲರು. ಶಕ್ತಿಮಿಲ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಹೆಸರುಗಳನ್ನು ಗಮನಿಸಿದರೆ ಮುಲಾಯಂ ಹೇಳಿಕೆ ಎಂಥ ಭಯಾನಕ ಲೆಕ್ಕಾಚಾರವನ್ನು ಒಳಗೊಂಡಿದೆ ಎಂಬುದು ಅರ್ಥವಾಗುತ್ತದೆ. ಗಲ್ಲುಶಿಕ್ಷೆಗೆ ಒಳಗಾದವರು- ವಿಜಯ್ ಜಾಧವ್ (19), ಮೊಹಮದ್ ಖಾಸಿಮ್ ಶೇಖ್ (21),ಮೊಹಮದ್ ಸಲೀಂ ಅನ್ಸಾರಿ (28) ಹಾಗೂ ಜೀವಾವಧಿ ಶಿಕ್ಷೆಗೆ ಒಳಗಾದವ ಸಿರಾಜ್ ರೆಹ್ಮಾನ್ ಖಾನ್ (24). ಮುಸ್ಲಿಂ ಸಮುದಾಯ ಮುಲಾಯಂ ಅವರ ಸಂದೇಶವನ್ನು ಹೇಗೆ ಅರ್ಥಮಾಡಿಕೊಳ್ಳುತ್ತದೆ ಎಂಬುದು ಅದರ ಪ್ರಜ್ಞಾವಂತಿಕೆಗೆ ಬಿಟ್ಟ ವಿಚಾರ. ಆದರೆ ಮುಲಾಯಂ ಸಾರುತ್ತಿರುವ ಸಂದೇಶವಂತೂ ಸ್ಪಷ್ಟವಾಗಿದೆ- 'ಮೂಲಭೂತವಾಗಿ ಅತ್ಯಾಚಾರ-ಅನಾಚಾರಗಳಿಗೆ ನನ್ನದೇನೂ ವಿರೋಧವಿಲ್ಲ. ಅದರಲ್ಲೂ ತಪ್ಪಿತಸ್ಥರು ಮುಸ್ಲಿಮರು ಎನ್ನುವುದಾದರೆ ನನ್ನ ಅನುಕಂಪವೇನಿದ್ದರೂ ಅವರ ಪರವೇ.'
ಹಂಗೆಲ್ಲ ಏನೂ ಇರ್ಲಿಕ್ಕಿಲ್ಲ ಅನ್ನುವವರು ಈಬಾರಿಯ ಪ್ರಚಾರಕಾರ್ಯದಲ್ಲಿ ಮುಲಾಯಂ ಸಿಂಗ್ ಅಕ್ಕಪಕ್ಕದಲ್ಲಿ ಬೊಬ್ಬೆ ಎಬ್ಬಿಸುತ್ತಿರುವ ಅಸಾಮಿಗಳನ್ನು ಗಮನಿಸಬೇಕು. 'ಕಾರ್ಗಿಲ್ ಯುದ್ಧವನ್ನು ಗೆಲ್ಲಿಸಿಕೊಟ್ಟಿದ್ದು ಮುಸ್ಲಿಂ ಯೋಧರೇ ವಿನಃ ಹಿಂದುಗಳಲ್ಲ' ಎಂಬ ಮತಾಂಧ ಅಜಂ ಖಾನ್‌ರಂಥವರಿಗೆ ಅಲ್ಲಿ ಪ್ರಾಶಸ್ತ್ಯ. ಎಸ್‌ಪಿಯ ಇನ್ನೊಬ್ಬ ನೇತಾರ ಅಬು ಅಜ್ಮಿಗೆ ಭಾರತವನ್ನು ಇಸ್ಲಾಂ ಕಾನೂನಿಗೆ ಒಳಪಡಿಸುವ ಆಸೆ ಇದೆ. ಅವರ ಕಾನೂನಿನ ಪ್ರಕಾಂಡ ವ್ಯಾಖ್ಯಾನ ಹೀಗಿದೆ- 'ವಿವಾಹದ ಹೊರತಾಗಿ ಸಂಭೋಗಕ್ಕೆ ಒಳಗಾಗುವ ಹೆಣ್ಣನ್ನು ಮರಣದಂಡನೆಗೆ ಒಳಪಡಿಸಬೇಕು. ಆಕೆ ಅತ್ಯಾಚಾರ ಸಂತ್ರಸ್ತೆಯಾಗಿದ್ದರೂ ಸರಿಯೇ. ಇಸ್ಲಾಂ ಪ್ರಕಾರ ಅತ್ಯಾಚಾರಿಗೆ ಮರಣದಂಡನೆ ಸರಿ. ಆದರೆ ಇಲ್ಲಿ ಪುರುಷ ಮಾತ್ರವೇ ಶಿಕ್ಷೆಗೆ ಒಳಗಾಗುತ್ತಿದ್ದಾನೆ. ಮಹಿಳೆ ಆಕೆಯನ್ನು ಮುಟ್ಟಿದರೂ ದೂರುತ್ತಾಳೆ, ಮುಟ್ಟದಿದ್ದರೂ ದೂರುತ್ತಾಳೆ. ಆಕೆಗೇನು ಶಿಕ್ಷೆ. ಇಸ್ಲಾಂ ಪ್ರಕಾರ ಅತ್ಯಾಚಾರಕ್ಕೆ ಒಳಗಾದವಳನ್ನೂ ಅತ್ಯಾಚಾರಿಗಳೊಂದಿಗೆ ಮರಣದಂಡನೆಗೆ ಗುರಿಪಡಿಸಬೇಕು.'
ತೃತೀಯ ರಂಗದ ಮೂಲಕ ದೇಶವನ್ನಾಳುವ ಕನಸು ಕಾಣುತ್ತಿರುವವರ ಪಡೆಯ ಪ್ರಕಾರ 'ಸಮಾನತೆ' ಅಂದರೆ ಇದು ಅನ್ನೋದು ಯಾರಿಗೂ ಗೊತ್ತಿರಲಿಲ್ಲ ಬಿಡಿ! ಅತ್ಯಾಚಾರ ವಿರೋಧಿ ಕಾನೂನನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದೆ ಎಸ್‌ಪಿ. ಮುಲಾಯಂ ಅವರ ಸಹೋದರ ರಾಮ್ ಗೋಪಾಲ್ ಯಾದವ್ ಪ್ರಕಾರ, 'ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಕೆಲವರ ಸಲಹೆ ಮೇರೆಗೆ ಸಿದ್ಧಪಡಿಸಿರುವ ಮಸೂದೆ ಇದು.' ಹೊಸ ತಲೆಮಾರಿನವರು ಎಂದು ಪ್ರಾರಂಭದಲ್ಲಿ ಹೊಗಳಿಸಿಕೊಂಡ ಮುಲಾಯಂ ಅವರ ಮಗ, ಉ.ಪ್ರ. ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಸಹ ಅತ್ಯಾಚಾರದಂಥ ಗಂಭೀರ ಪ್ರಕರಣ ನಿಭಾಯಿಸುವ ಸೂಕ್ಷ್ಮತೆ ತೋರಿಲ್ಲ. ಮುಜಫರ್‌ನಗರದ ಇಬ್ಬರು ಅತ್ಯಾಚಾರ ಸಂತ್ರಸ್ತೆಯರ ಹೆಸರನ್ನು ಬಹಿರಂಗಗೊಳಿಸಿ ಮಾಧ್ಯಮಕ್ಕೆ ಬಿಡುಗಡೆ ಮಾಡಿದವರಿವರು.
ನರೇಂದ್ರ ಮೋದಿ ವಾರಾಣಸಿಯಲ್ಲಿ ಸ್ಪರ್ಧೆಗಿಳಿದಿದ್ದನ್ನು 'ಹಿಂದುತ್ವ'ದ ಆಯಾಮದಲ್ಲಿಟ್ಟು ಸಾಕಷ್ಟು ಚರ್ಚೆಗಳಾಗಿವೆ. ಆದರೆ ಅಜಮ್‌ಗಢದಂಥ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರದಿಂದ ಸ್ಪರ್ಧಿಸಿರುವ ಮುಲಾಯಮ ಸಿಂಗ್ ಅವರು ನೀಡುತ್ತಿರುವ ಸಂದೇಶವನ್ನೂ ಚರ್ಚಿಸಬೇಕಿದೆ. ಸಮಾಜವಾದಿ ಪಕ್ಷದ ಮುಖ್ಯ ಆಧಾರವೇ ಮುಸ್ಲಿಂ ಓಟ್‌ಬ್ಯಾಂಕ್. ಆದರೆ ಮುಜಫರ್‌ನಗರದ ದಂಗೆಯನ್ನು ಅಖಿಲೇಶ್ ಸರ್ಕಾರ ನಿರ್ವಹಿಸಿದ ರೀತಿ ಮುಸ್ಲಿಮರಲ್ಲಿ ಅಸಮಾಧಾನ ಉಂಟುಮಾಡಿತ್ತು. ಅಜಮ್‌ಗಢದಲ್ಲಿ ಸ್ಪರ್ಧಿಸುವ ಮೂಲಕ ತಾವು ಮುಸ್ಲಿಮ್ ಪರ ಎಂಬುದನ್ನು ಚೀರಿ ಹೇಳುತ್ತಿದ್ದಾರೆ ಮುಲಾಯಂ. ಯಾವ ಮೂಲಸೌಕರ್ಯಗಳೂ ಇಲ್ಲದೇ, ಕೊಳಚೆಯನ್ನೇ ತನ್ನ ಲಕ್ಷಣವಾಗಿಸಿಕೊಂಡು ಗಬ್ಬೆದ್ದು ಹೋಗಿರುವ ಪ್ರದೇಶ ಅಜಮ್‌ಗಢ. ಅಲ್ಲಿ ಅಭಿವೃದ್ಧಿ ಮುಖ್ಯವಾಗಬೇಕಿತ್ತು. ಆದರೆ 'ಸೆಕ್ಯುಲರ್ ರಾಜಕಾರಣ'ದ ಮುಸ್ಲಿಂ ತುಷ್ಟೀಕರಣವೇ ಅಲ್ಲಿ ಮೆರೆಯುತ್ತಿದೆ.
ಈ ಎಲ್ಲ ಹಿನ್ನೆಲೆಗಳಲ್ಲಿ, ಅತ್ಯಾಚಾರ ಕುರಿತಾದ ಎಸ್‌ಪಿ ನೇತಾರರ ಹೇಳಿಕೆಗಳು, 'ನಮ್ಮನ್ನು ಹರಸಿದರೆ ನಿಮ್ಮೆಲ್ಲ ಅತ್ಯಾಚಾರಗಳಿಗೆ ನಾವು ಶ್ರೀರಕ್ಷೆಯಾಗಿರುತ್ತೇವೆ' ಅಂತ ಸಮುದಾಯವೊಂದಕ್ಕೆ ನೀಡುತ್ತಿರುವ ಆಮಿಷವೇ ಹೊರತು ಮತ್ತೇನಲ್ಲ.

-ಚೈತನ್ಯ ಹೆಗಡೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com