ಅಂಕಣಗಳು

ಕನ್ನಡಿಗರ ಭಾವದಂಗಳದಲ್ಲಿ ಡಾ. ರಾಜ್ ಎಂಬ ರಂಗವಲ್ಲಿ

ಕನ್ನಡಿಗರ ಭಾವದಂಗಳದಲ್ಲಿ ಡಾ. ರಾಜ್ ಎಂಬ ರಂಗವಲ್ಲಿ
Published On :

ಸೂಟು ಬೂಟುಗಳ ನಡುವೆ ನಮ್ಮ ಗಾಜನೂರಿನೊಡೆಯ ಪಂಚೆ ಸರಿಮಾಡಿಕೊಳ್ಳುತ್ತಾ ಮೈಕ್ ಮುಂದೆ ಬಂದು, "ಒಳ್ಳೇ ಸಮಾರಂಭ ಮಾಡುತ್ತಿದ್ದೀರಾ, ಸಂತೋಷ. ದೊಡ್ಡೋರು, ಬುದ್ಧಿವಂತರು, ಇಂಗ್ಲಿಷ್ ತಿಳಿದೋರು ಇಲ್ಲಿ ಸೇರಿದ್ದೀರಾ. ಬರೀ ಕನ್ನಡ ಮಾತನಾಡೋ ಈ ದಡ್ಡನನ್ನೂ ಕರೆದು ಪ್ರಶಸ್ತಿ ಕೊಟ್ಟಿದ್ದೀರಾ, ಇನ್ನೂ ಹೆಚ್ಚಿಗೆ ಮಾತನಾಡೋದು ಹೇಗೆ ಅಂತ ನನಗೆ ಗೊತ್ತಾಗ್ತಿಲ್ಲ. ಕಾರಣ ನಿಮಗೆ ನನ್ನ ಭಾಷೆ ಆರ್ಥವಾಗುತ್ತೋ ಇಲ್ವೋ ತಿಳೀದು. ನಂಗಂತೂ ನಿಮ್ಮ ಇಂಗ್ಲಿಷ್ ಬರೋಲ್ಲ ನನಗಿರೋದು ಬರೋದು ಒಂದೇ ಭಾಷೆ ಕನ್ನಡ" ಎಂದಿದ್ದರು ರಾಜ್.

"ಬಂಗಾರ ಪಾತಾಳದಲ್ಲಿಯೂ, ಕಬ್ಬಿಣ ಭೂಮಿಯ ಮೇಲೂ ಸಿಗುತ್ತದೆ. ಕಲೆ ಎಂಬುದು ಬಂಗಾರವಿದ್ದಂತೆ ತೋಡಿದಷ್ಟೂ ಸಿಗುತ್ತದೆ. ಅನುಭವಿಸಿದಷ್ಟೂ ಆಳಕ್ಕೆ ಹೋಗ್ತಿವಿ" ಎನ್ನುತ್ತಿದ್ದರು ಡಾ. ರಾಜಕುಮಾರ್. ಈ ಮಾತು ಸ್ವಯಂ ಬಂಗಾರದ ಮನುಷ್ಯನಿಗೂ ಅನ್ವಯಿಸುತ್ತದೆ. ಏಪ್ರಿಲ್ 24 ರಾಜ್‌ರ ಜನ್ಮದಿನ. ಕನ್ನಡಿಗರಲ್ಲಿ ಶಾಶ್ವತ ನೆನಪುಗಳನ್ನು ಉಳಿಸಿ ಅವರು ಅಗಲಿ ಆಗಲೇ ಎಂಟು ವರ್ಷಗಳು ಕಳೆದು ಹೋಗಿವೆ ಎಂಬುದು ಅಚ್ಚರಿ ಎನಿಸುತ್ತದೆ. ಏಕೆಂದರೆ ರಾಜ್ ಅವರು ಇಲ್ಲ ಎಂಬ ಭಾವನೆಗಿಂತ ದಿನ ನಿತ್ಯದ ಸಂದರ್ಭಗಳಲ್ಲಿ ಅವರ ನೆನಪುಗಳು, ಉದಾಹರಣೆಗಳು ಉಲ್ಲೇಖವಾಗುತ್ತಿರುವುದೇ ಹೆಚ್ಚು. ಅಷ್ಟರಮಟ್ಟಿಗೆ ರಾಜ್ ತಮ್ಮ ಗಾಢವಾದ ವ್ಯಕ್ತಿತ್ವದಿಂದ ಕನ್ನಡಿಗರನ್ನು ಆವರಿಸಿಕೊಂಡುಬಿಟ್ಟಿದ್ದಾರೆ. ರಾಜ್‌ರನ್ನು ಅರಿತಷ್ಟೂ ಅವರ ವ್ಯಕ್ತಿತ್ವದ ಪ್ರತಿಫಲನ ಪ್ರಕಾಶಿಸುತ್ತಲೇ ಇದೆ.
ರಾಜ್ ನೆನಪುಗಳು ಅದ್ವಿತೀಯ ಭಾವನೆಗಳನ್ನೇಕೆ ಸ್ಫುರಿಸುತ್ತವೆ ಎಂಬುದಕ್ಕೆ ಇಲ್ಲಿ ಕೆಲವೊಂದು ಪ್ರಸಂಗಗಳನ್ನು ತಿಳಿಸಿದರೆ ಉಚಿತವೆನಿಸುತ್ತದೆ.
ರಾಜ್‌ಕುಮಾರ್ ಅವರು ಯಾವ ಹಾಡನ್ನೇ ಹಾಡಲಿ ಅದನ್ನು ಬಹಳ ಪ್ರೀತಿಯಿಂದ ತಮ್ಮ ಮಗು ಎಂಬಂತೆ ಭಾಷೆಯ ಮೈದಡವಿ ಹಾಡುತ್ತಿದ್ದರು. ಅಷ್ಟೊಂದು ಭಾವುಕತೆಯಿಂದ ಭಾಷೆಯ ಬಗ್ಗೆ ಅತ್ಯಂತ ಪ್ರೀತಿ, ಕಾಳಜಿಯಿಂದ ಹಾಡುವ ಅದ್ವಿತೀಯ ಗಾಯಕರಾಗಿದ್ದರು ರಾಜ್‌ಕುಮಾರ್. "ಎಷ್ಟೇ ಜಾಗರೂಕರಾಗಿ ರಾಜ್ ಅವರ ಮಾತುಗಳನ್ನೇ ಆಗಲಿ, ಹಾಡುಗಳನ್ನೇ ಆಗಲಿ ಕಿವಿಗೊಟ್ಟು ಕೇಳಿ ನೋಡಿ, ಕನ್ನಡ ಎಲ್ಲೂ ಅಪಭ್ರಂಶಗೊಳ್ಳುವುದಿಲ್ಲ. ಬದಲಿಗೆ ಅಪ್ಯಾಯಮಾನವೆನಿಸುತ್ತದೆ. ಪ್ರೀತಿ ಮೂಡುತ್ತದೆ. ತಣ್ಣನೆಯ ಮನಸಿನಿಂದ ಆಲಿಸಿ ನೋಡಿದಾಗ ಡಾ.ರಾಜ್ ಕಂಠ ಸಿರಿಯಿಂದ ಉಲಿಯುವ ಭಾವ ತರಂಗಗಳು ಆದ್ಭುತ ಪರಿಣಾಮ ನೀಡುತ್ತವೆ"- ಈ ಸತ್ವಪೂರ್ಣ ನುಡಿಗಳನ್ನು ನುಡಿದವರು ಸಂಗೀತ ನಿರ್ದೇಶಕ ಹಂಸಲೇಖ ಅವರು. ಈ ಮಾತುಗಳನ್ನು ಓದಿದ ಮೇಲೆ ಡಾ.ರಾಜ್ ಅವರ ಮಧುರವಾದ ದನಿ ನಮ್ಮ ಕಿವಿಯಲ್ಲಿ ರಿಂಗಣಿಸಿದರೆ ಅಚ್ಚರಿ ಇಲ್ಲ.
ಇನ್ನೊಂದು ಪ್ರಸಂಗ ಬೆಂಗಳೂರಿನ ಹಾಲಿಡೆ ಇನ್ - ಹೊಟೇಲಿನಲ್ಲಿ ಪ್ರತಿಷ್ಠಿತ ಸಮಾರಂಭ. ವಿವಿಧ ಕ್ಷೇತ್ರಗಳಲ್ಲಿ ಕೊಡುಗೆ ಇತ್ತ ಘಟಾನುಘಟಿಗಳಿಗೆ ಪ್ರಶಸ್ತಿ ಪ್ರದಾನ. ಸಮಾರಂಭದ ಸಂಘಟಕರು ಉತ್ತರ ಭಾರತದವರಾದ್ದರಿಂದ ಸಮಾರಂಭವೆಲ್ಲ ಇಂಗ್ಲಿಷಿನಲ್ಲೆ. ಅಲ್ಲಿ ಸೇರಿದ್ದ ಜನ ಮಾತ್ರ ಇಲ್ಲಿಯವರೇ. ಆದರೆ ಅವರೂ ಸಹ ಕನ್ನಡ ಮರೆತವರಂತೆ ನಡೆದುಕೊಳ್ಳುತ್ತಿದ್ದುದನ್ನು ನೋಡಲಾಗುತ್ತಿರಲಿಲ್ಲ. ಲಂಡನ್ನಿನಂಥ ವಾತಾವರಣದಲ್ಲಿದ್ದೇವೆಂಬುದಾಗಿ ಎಲ್ಲರೂ ಬೀಗಿದ್ದೇ ಬೀಗಿದ್ದು.
ಪ್ರಶಸ್ತಿ ಪಡೆದವರಲ್ಲಿ ಡಾ. ರಾಜ್ ಕೂಡ ಒಬ್ಬರು. ಅವರು ಮಾತನಾಡುವ ಸರದಿ. ಸೂಟು ಬೂಟುಗಳ ನಡುವೆ ನಮ್ಮ ಗಾಜನೂರಿನೊಡೆಯ ಪಂಚೆ ಸರಿಮಾಡಿಕೊಳ್ಳುತ್ತಾ ಮೈಕ್ ಮುಂದೆ ಬಂದು, "ಒಳ್ಳೇ ಸಮಾರಂಭ ಮಾಡುತ್ತಿದ್ದೀರಾ, ಸಂತೋಷ. ದೊಡ್ಡೋರು, ಬುದ್ಧಿವಂತರು, ಇಂಗ್ಲಿಷ್ ತಿಳಿದೋರು ಇಲ್ಲಿ ಸೇರಿದ್ದೀರಾ. ಬರೀ ಕನ್ನಡ ಮಾತನಾಡೋ ಈ ದಡ್ಡನನ್ನೂ ಕರೆದು ಪ್ರಶಸ್ತಿ ಕೊಟ್ಟಿದ್ದೀರಾ, ಇನ್ನೂ ಹೆಚ್ಚಿಗೆ ಮಾತನಾಡೋದು ಹೇಗೆ ಅಂತ ನನಗೆ ಗೊತ್ತಾಗ್ತಿಲ್ಲ. ಕಾರಣ ನಿಮಗೆ ನನ್ನ ಭಾಷೆ ಆರ್ಥವಾಗುತ್ತೋ ಇಲ್ವೋ ತಿಳೀದು. ನಂಗಂತೂ ನಿಮ್ಮ ಇಂಗ್ಲಿಷ್ ಬರೋಲ್ಲ. ನನಗಿರೋದು ಬರೋದು ಒಂದೇ ಭಾಷೆ ಕನ್ನಡ. ಈ ಕನ್ನಡದ ಕುಮಾರನಿಗೂ ಇಲ್ಲಿ ಜಾಗ ಕೊಟ್ಟು ಸನ್ಮಾನ ಮಾಡಿದ್ದಕ್ಕೆ ವಂದನೆಗಳು."
ಬಂಗಾರದ ಮನುಷ್ಯನ ಬಂಗಾರದ ಮಾತುಗಳನ್ನು ಕೇಳಿ ಇಂಗ್ಲಿಷ್ ಭೂತ ಹತ್ತಿಸಿಕೊಂಡಿದ್ದ ಜನಕ್ಕೆ ಬೆವರು ಬರುವುದೊಂದೇ ಬಾಕಿ. ನನಗೆ ಇಂಗ್ಲಿಷ್ ಬಾರದು ಎನ್ನುವಾಗ ರಾಜ್ ಅವರಿಗೆ ಬೇಸರವಿರಲಿಲ್ಲ. ಕನ್ನಡ ಬಲ್ಲೆ ಅಂದಾಗ ಹೆಮ್ಮೆ ಇತ್ತು. ಈ ಹೆಮ್ಮೆ ಎಲ್ಲಾ ಕನ್ನಡಿಗರದಾಗಬೇಕು. ಆಗಲೇ ಕಸ್ತೂರಿ ಕನ್ನಡದ ಕಂಪು ಎಲ್ಲೆಡೆ ಬೀರೀತು. ಇದು ಖ್ಯಾತ ನಿರೂಪಕಿ ಅಪರ್ಣಾ ಅವರ ನೆನಪಿನಿಂದ ಅರಳಿ ಬಂದ ಪ್ರಸಂಗ. ರಾಜ್ ನಡೆದುಕೊಳ್ಳುತ್ತಿದ್ದ ಸಹಜಶೀಲತೆಗೆ ಒಂದು ಪ್ರಾತಿನಿಧಿಕ ಉದಾಹರಣೆಯೂ ಹೌದು.
"ನಾನು, ನನ್ನಿಂದ, ನಾನೇ" ಹೀಗೆ ಇಂದು ನಾನತ್ವದಿಂದ ಎಷ್ಟೇ ಎತ್ತರಕ್ಕೇರಿದರೂ ವ್ಯಕ್ತಿತ್ವದಿಂದ ಕುಬ್ಜರೇ ತುಂಬಿರುವ ಸಮಾಜಕ್ಕೆ ನಮ್ಮ ರಿಯಲ್‌ಸ್ಟಾರ್ ಉಪೇಂದ್ರ ಅವರು  ನೀಡಿರುವ ಅಣ್ಣಾವ್ರ ಒಂದು ಬೊಂಬಾಟ್ ಉದಾಹರಣೆ ಅವರದೇ ಮಾತುಗಳಲ್ಲಿ ಹೀಗಿದೆ:
"ಸಾರ್ ನಾನು ಯಾರು ಗೊತ್ತಾ? ಎಂಬ ದಯನೀಯ ಹಂತದಲ್ಲಿದ್ದ ವ್ಯಕ್ತಿ ನಿಧಾನವಾಗಿ ಬೆಳೆಯುತ್ತಾ "ನಾನು ಯಾರು ಗೊತ್ತೇನು?" ಎಂದು ದರ್ಪದಿಂದ ಕೇಳಲಾರಂಭಿಸುತ್ತಾನೆ. ಆತ ವಿನಾಶದ ಹಂತ ತಲುಪಿದ ಎಂಬುದೇ ಅದರರ್ಥ. ಆದರೂ ಜನಪ್ರಿಯತೆ, ಪ್ರಶಸ್ತಿ, ಗೌರವ, ಹಣ ಪಡೆದವರ ಕೆಲವರ ವರ್ತನೆ ಮಾತ್ರ ಎಂದಿಗೂ ಬದಲಾಗುವುದೇ ಇಲ್ಲ. ಅದಕ್ಕೆ ಅತ್ಯಂತ ಉತ್ತಮ ಉದಾಹರಣೆ ಎಂದರೆ, ನಮ್ಮೆಲ್ಲರ ನೆಚ್ಚಿನ ಅಣ್ಣಾವ್ರು."
ನನ್ನದು ಏನೂ ಇಲ್ಲ, ಎಲ್ಲಾ ಆ ದೇವರ ಇಚ್ಛೆ. ನಾನು ಅವಿದ್ಯಾವಂತ, ನಾನು ನಿಮ್ಮಿಂದ ಕಲಿಯಬೇಕಾದ್ದು ತುಂಬಾ ಇದೆ ಎಂಬುದಾಗಿ ಡಾರಾಜ್ ಬಹುತೇಕ ಎಲ್ಲಾ ಸಮಾರಂಭಗಳಲ್ಲಿ ಹೇಳುವಾಗ, ಆ ಕ್ಷಣ ಅದು ಕೃತಕ ಎಂದೆನಿಸಿದರೂ ಆ ರೀತಿ ಹೇಳುತ್ತಾ ನಾನಿನ್ನೂ ಕಲಿಯಬೇಕಾಗಿರುವುದು ಬೇಕಾದಷ್ಟಿದೆ ಅಂತ ಅವರು ಅಂದುಕೊಂಡಿದ್ದರಿಂದಲೇ ಕೊನೆವರೆಗೂ ಸೂಪರ್ ಸ್ಟಾರ್ ಆಗಿಯೇ ಉಳಿದರು.
ಅವರು ಯಾವತ್ತೂ ಪ್ರಿನ್ಸಿಪಾಲ್ ಆಗಲು ಪ್ರಯತ್ನಿಸಲೇ ಇಲ್ಲ. ಜೀವನ ಪೂರ್ತಿ ವಿದ್ಯಾರ್ಥಿಯಾಗಿದ್ದು ಕಲೀತಾ ಇರಬೇಕು ಎಂಬುದೇ ಅವರ ಆಸೆಯಾಗಿತ್ತು. ಅದು ಎಂಥ ಅದ್ಭುತವಾದ ಕನಸು ನೋಡಿ, ಹತ್ತಿಪ್ಪತ್ತು ಸಿನಿಮಾ ಮಾಡಿದಾಕ್ಷಣ ನನಗೆ ಸಿನಿಮಾದ ಬಗ್ಗೆ ಎಲ್ಲಾ ಗೊತ್ತು ಎಂಬ ವರ್ತನೆಗಳನ್ನು ಕಂಡಿರುವ ನಮಗೆ ಡಾ.ರಾಜ್ ವಿಶ್ವವಿದ್ಯಾಲಯ ಎಂದು ಎಷ್ಟೇ ಜನ ಅಂದರೂ ಅವರು ಮಾತ್ರ "ನಾನು ನಿಮ್ಮಿಂದ ಕಲಿಯಬೇಕಾದ್ದು ಬೇಕಾದಷ್ಟಿದೆ" ಎಂದೇ ಕಲಾ ಸೇವೆ ಮಾಡುತ್ತಾ ಬಂದವರು.
ಪಂಡಿತರಿಂದ ಪಾಮರರವರೆಗೆ ಡಾ.ರಾಜ್ ಕುಮಾರ್ ಕನ್ನಡಿಗರ ನಾಡಿ ಮಿಡಿತವಾಗಿದ್ದರ ಕುರಿತು ಪ್ರತ್ಯೇಕವಾಗಿ ಏನೂ ಹೇಳಬೇಕಾಗಿಲ್ಲ. ಆ ಸತ್ಯವನ್ನು ಕನ್ನಡದ ಪ್ರತಿನಿಧಿಯಾಗಿ ನುಡಿದಿರುವ ಸಾಹಿತಿ- ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ರ ಸ್ವಾನುಭವವನ್ನು ಗಮನಿಸೋಣ:
ಆಗಷ್ಟೆ ಡಾ. ರಾಜ್ ಅವರ ಅಂತಿಮಯಾತ್ರೆ ಮತ್ತು ಸಂಸ್ಕಾರಗಳು ಮುಗಿದಿತ್ತು. ನಾಗತಿಹಳ್ಳಿಯವರು ತಮ್ಮ ಮುಂದಿನ ಸಿನಿಮಾಗೆ ಶೂಟಿಂಗ್ ಸ್ಪಾಟ್ ಹುಡುಕಾಟಕ್ಕಾಗಿ ನೆದರ್ಲ್ಯಾಂಡ್‌ನಲ್ಲಿದ್ದರು. ಅಲ್ಲಿ ಒಬ್ಬರ ಕೈಯಲ್ಲಿ ಒಂದು ಡಚ್ ಪತ್ರಿಕೆ ಇತ್ತು. ಆ ಪತ್ರಿಕೆಯ ಮುಖಪುಟದಲ್ಲಿ ರಾಜ್ ಅಂತಿಮ ಯಾತ್ರೆಯ ದೊಡ್ಡ ಫೋಟೊ ಮತ್ತು ವರದಿ ಇತ್ತು. ಆ ಪೇಪರ್ ಕೊಟ್ಟವ ನಾಗತಿಹಳ್ಳಿಯವರನ್ನು ಕೇಳಿದ, "ಇದು ನಿಜಕ್ಕೂ ನಡೆಯಿತೆ? ಒಬ್ಬ ಕಲಾವಿದನ ಅಂತಿಮ ಯಾತ್ರೆಯಲ್ಲಿ ಇಷ್ಟು ಮಂದಿ ಪಾಲ್ಗೊಂಡಿದ್ದರೆ? ಗಲಭೆಯಲ್ಲಿ ಎಂಟು ಜನ ಸತ್ತಿದ್ದು ಹೌದೆ?"
ನಾಗತಿಹಳ್ಳಿಯವರು ಹೌದು ಮಾರಾಯ  ನಾನೇ ಆ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡು ಬಂದೆ ಎಂದರು. ಆತ ತನಗೆ ಇದನ್ನೆಲ್ಲಾ ಯಾಕೆ ನಂಬಲಾಗುತ್ತಿಲ್ಲ ಎಂಬುದಕ್ಕೆ ಕಾರಣ ಹೇಳಿದ, ಡಚ್‌ನ ಖ್ಯಾತ ಲೇಖಕನೊಬ್ಬ ರಾಜ್ ತೀರಿಕೊಂಡ ಹೊತ್ತಿನ ಸುಮಾರಿಗೇ ನೆದರ್ಲ್ಯಾಂಡ್‌ನಲ್ಲಿ ತೀರಿಕೊಂಡ. ಆತನಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯೂ ಬಂದಿತ್ತು. ಆದರೆ ಆತನ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದವರ ಸಂಖ್ಯೆ ಕೇವಲ ಅರವತ್ತು! ಆತನ ಪ್ರಶ್ನೆ ಮತ್ತು ಕುತೂಹಲ ಇಷ್ಟೆ, "ಒಬ್ಬ ವ್ಯಕ್ತಿಗೆ ಹೀಗೆ ಒಂದು ಸಮೂಹವನ್ನು ಸನ್ನಿಗೆ ಒಳಪಡಿಸಲಾದೀತೆ? ಒಬ್ಬ ಕಲಾವಿದನನ್ನು ಭಾರತದ ಜನ ಅಷ್ಟು ಪ್ರೀತಿಸುತ್ತಾರೆಯೇ?".
ಗಾಂಧೀಜಿ ಅನ್ನುವವರು ಒಬ್ಬರಿದ್ದರು ಎಂದು ಮುಂದಿನ ಜನಾಂಗಕ್ಕೆ ಹೇಳಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗೆಯೇ ರಾಜ್ ಕುಮಾರ್ ಅನ್ನೋರು ಒಬ್ಬರಿದ್ದರು ಎಂಬುದನ್ನು ತಿಳಿಸಬೇಕಾಗಿ ಬರಬಹುದು ಎನ್ನುತ್ತಾರೆ ನಾಗತಿಹಳ್ಳಿಯವರು. ಗಾಂಧೀಜಿ ಬ್ರಿಟೀಷ್ ಸಂಸತ್ತಿಗೆ ಹೋಗಿದ್ದಾಗ ಅವರನ್ನು ದ್ವೇಷಿಸುತ್ತಿದ್ದ ಬಿಳಿಯ ಜನರಿಗೂ ಎದ್ದು ನಿಂತು ಗೌರವ ತೋರಿಸದೇ ಇರಲಾಗಲಿಲ್ಲ. ರಾಜ್ ವ್ಯಕ್ತ್ತಿತ್ವ ಕೂಡ, ಅದೇ ತೆರನಾದ್ದು ಎಂಬುದು ಇಡೀ ಕನ್ನಡ ನಾಡಿಗೆ ಸಲ್ಲುವ ಗೌರವ. ರಾಜ್ ಚಿತ್ರದಲ್ಲಿ ಏನಿರಲಿಲ್ಲ? ದಲಿತವಾದ, ಸ್ತ್ರೀವಾದ, ಭಾಷೆ ಮೊದಲಾದ ಎಲ್ಲಾ ಚಳವಳಿಗಳೂ ಅವರ ಚಿತ್ರದಲ್ಲಿದ್ದವು. ಅವೆಲ್ಲಾ ಸಿನಿಮಾ ಭಾಷೆಯ ಸರಳ ನುಡಿಗಟ್ಟಿನಲ್ಲಿದ್ದವು ಮತ್ತು ಅವೇ ಒಂದು ಜನಾಂಗವನ್ನು ಕಟ್ಟಿ ನಿಲ್ಲಿಸಿದವು. ಹಾಗಾಗಿ ಅವರ ಬಗ್ಗೆ ಎಷ್ಟೇ ಕೃತಿಗಳು, ಲೇಖನಗಳು, ವ್ಯಾಖ್ಯಾನಗಳು ಬಂದರೂ ಅಗತ್ಯವೆ. ಅವರನ್ನು ಅಕಾಡೆಮಿಕ್ ಆಗಿ ಅಭ್ಯಸಿಸುವ ಅಗತ್ಯ ಇಂದಿನ ಮತ್ತು ಮುಂದಿನ ಜನಾಂಗಕ್ಕಿದೆ. ಏಕೆಂದರೆ ಇಂಥ ಅಧ್ಯಯನಗಳೆಲ್ಲಾ ಅವರ ವ್ಯಕ್ತಿತ್ವದ ಅರಿವನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸುತ್ತವೆ.
ಕನ್ನಡದ ಮತ್ತೊಬ್ಬ ಜನಪ್ರಿಯ ನಟ ಡಾ. ವಿಷ್ಣುವರ್ಧನ್ ಅವರು ತಮ್ಮ ಹೃದಯಾಂತರಾಳದಿಂದ ರಾಜ್ ಕೊಡುಗೆಯನ್ನು ಸ್ಮರಿಸಿದ್ದು ಹೀಗೆ: "ಕನ್ನಡ ಚಿತ್ರಗಳೆಂದರೆ ಮೂಗು ಮುರಿಯುತ್ತಿದ್ದ ಕಾಲದಲ್ಲೇ ಹೀರೋ ಆಗಿ, ಜನಪ್ರಿಯತೆಗಳಿಸಿ ಕನ್ನಡ ಚಿತ್ರರಂಗದ ಧ್ವಜವನ್ನು ಹಾರಿಸಿರುವ ರಾಜಣ್ಣ ಚಿತ್ರರಂಗಕ್ಕಷ್ಟೇ ಅಲ್ಲ, ನಮ್ಮಂಥ ಕಲಾವಿದರಿಗೆಲ್ಲ ಹಿರಿಯಣ್ಣನಾಗಿ ಆಧಾರ ಸ್ಥಂಭವಾಗಿ ನಿಂತಿದ್ದಾರೆ. ನಾವುಗಳೆಲ್ಲ ವರ್ಷಗಳಿಂದೀಚೆಗೆ ಬಂದವರು ಅದಕ್ಕೂ ಮುಂಚೆ ಕನ್ನಡ ಚಿತ್ರರಂಗಕ್ಕೆ ಬರುವ ಕಲಾವಿದರಿಗೆ ದಾರಿ ಕೂಡ ಇರಲಿಲ್ಲ.
ರಾಜಣ್ಣ ಕಲ್ಲು, ಮುಳ್ಳು, ಗುಡ್ಡಗಾಡುಗಳನ್ನು ಕಡಿದು ಹಾದಿ ಮಾಡಿ ಹೊಸಬರಿಗೆ ಅವಕಾಶ ಸಿಗುವಂತೆ ಟಾರು ರಸ್ತೆ ನಿರ್ಮಿಸಿದರು. ಇಂದು ಆ ರಸ್ತೆ ಶಾಶ್ವತವಾಗಿ ಸ್ವಚ್ಛವಾಗಿ ಹಬ್ಬಿಕೊಂಡಿದೆ. ಸಾವಿರಾರು ಕಲಾವಿದರು ಬರುತ್ತಾರೆ, ಹೋಗುತ್ತಾರೆ. ಆದರೆ ರಾಜಣ್ಣ ಮಾತ್ರ ಎಂದಿಗೂ ಮರೆಯಲಾಗದಂಥ ಕಲಾವಿದರು. ಅವರನ್ನು ಮರೆಯುವುದಕ್ಕೇ ಅಸಾಧ್ಯ."
ಇದನ್ನೆಲ್ಲ ಗಮನಿಸಿದಾಗ ಡಾ.ರಾಜ್‌ರನ್ನು ಮರೆಯಲು ಸಾಧ್ಯವೇ? ಕನ್ನಡಿಗರ ಹೃದಯ ಸಿಂಹಾಸನದ ಈ ಚಿರನೂತನ ರಾಜಕುಮಾರರ ಸ್ಥಾನವಾದರೂ ಎಂಥದ್ದು ಎಂಬ ವಿಚಾರಗಳಿಗೆ ಈ ಪ್ರಸಂಗಗಳು ಒಂದಿಷ್ಟು ಅಮೃತ ಸಿಂಚನಗಳಾಗುತ್ತವೆ ಎನಿಸುತ್ತದೆ.
ಜೀವನ ಪ್ರೀತಿಯನ್ನು ದೃಢವಾಗಿ ನಂಬಿದ್ದ ಡಾ. ರಾಜ್ ಕುಮಾರ್ ಅವರು ಸ್ವಯಂ ಹಲವು ಸನ್ನಡತೆಗಳಿಗೆ ಕಾರಣ ಜನ್ಮರಾಗಿದ್ದಾರೆ. ಇಂದು ಅವರ ಜನ್ಮದಿನ (ಏಪ್ರಿಲ್ 24) ಆ ಕಾರಣಗಳನ್ನು ಮರೆಯಬಾರದೆಂಬ ಸಂಕಲ್ಪದಿಂದ ಜನತೆಯು ಅವರ ಜನ್ಮ ದಿನವನ್ನು ತಮ್ಮ ಹಬ್ಬವನ್ನಾಗಿ ಸ್ವೀಕರಿಸಿದ್ದಾರೆ. ಹಬ್ಬಗಳ ಮೂಲ ಆಶಯವೇ ಕೃತಜ್ಞತೆ ಸಲ್ಲಿಸುವುದು ಎಂಬ ಹಿರಿಯರ ಮಾತಿಗನುಗುಣವಾಗಿ ಇಡೀ ನಾಡು ಕನ್ನಡದ ಈ ಅಣ್ಣನಿಗೆ ಮನಸಾರೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ.

= ಎಸ್.ಜಗನ್ನಾಥರಾವ್ ಬಹುಳೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.