ಭದ್ರತೆ ಮುಖ್ಯವೋ ಅಥವಾ ಪ್ರಾಮಾಣಿಕತೆಯೋ?

Updated on: 

ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ಕಂಡುಬರುತ್ತಿರುವ ದ್ವೇಷ, ಅಸೂಯೆ, ಸ್ವಾರ್ಥ ಹಾಗೂ ಜಾತೀಯತೆಯ ತಾಂಡವದ ನಡುವೆ, ಅಲ್ಲಿ ಇಲ್ಲಿ ನಡೆದಿರುವ ಗಂಭೀರವಾದ ವಿಚಾರ ಮಥನದಲ್ಲಿ ಕೇಳಿಬರುತ್ತಿರುವ ವಿಚಾರ ಎಂದರೆ, ಯಾರಾದರೂ ಅಧಿಕಾರಕ್ಕೆ ಬರಲಿ, ಮುಂದಿನ ಸರ್ಕಾರ ಭದ್ರತೆಯ ಭರವಸೆಯನ್ನು ನೀಡಬೇಕು, ಎನ್ನುವುದೇ.
ಕೇಳುವುದಕ್ಕೆ ಇದು ಒಂದು ರೀತಿಯಲ್ಲಿ ಇಂಪಾದ ಮಾತೇ? ಆದರೆ ಈಗ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅವರ ಹಿಂದಿರುವ ಬೆಂಬಲಿಗರ ಜಾತಕವನ್ನು ಪರಿಶೀಲಿಸಿದರೆ, ಭದ್ರತೆಯ ಜತೆಯಲ್ಲೇ ಪ್ರಾಮಾಣಿಕತೆಯ ಅಭಾವವೂ ಕಂಡುಬಂದರೇನು ಗತಿ ಎನ್ನುವ ಪ್ರಶ್ನೆ ಆತಂಕವನ್ನು ಮೂಡಿಸುವ ರೀತಿಯಲ್ಲೇ ತಲೆ ಎತ್ತುತ್ತಿದೆ.
ಮನಮೋಹನ ಸಿಂಗ್ ಅವರ ಕಾಲದಲ್ಲಿ ಕಾಂಗ್ರೆಸ್ ಹಾಗೂ-ಹೀಗೂ ಸರ್ಕಾರದ ಭದ್ರತೆಯನ್ನು ಅಪಾಯಕ್ಕೆ ಒಡ್ಡಿರಲಿಲ್ಲ. ಅಂತಹ ಒಂದೆರಡು ಪ್ರಕರಣಗಳು ಕಂಡು ಬಂದರೂ ಅದನ್ನು ಪಕ್ಷದ ವ್ಯವಸ್ಥಾಪಕರು ದಕ್ಷತೆಯಿಂದ ನಿಭಾಯಿಸಿದ್ದರು. ಆದರೆ ಅಲ್ಲಿ ಕಂಡುಬಂದಿದ್ದು ಪ್ರಾಮಾಣಿಕತೆಯ ಕೊರತೆ.
ಸರ್ಕಾರವನ್ನು, ದೇಶವನ್ನು ಕಾಡಿದ ಹಲವು ಲಕ್ಷ ಕೋಟಿ ರುಪಾಯಿಗಳ ಹಗರಣಗಳತ್ತ ಗಮನ ಹರಿಸಿದರೆ, ಆ ಹಗರಣಗಳಲ್ಲಿ ಯಾವುದೂ ದಿಢೀರನೆ ಸಂಭವಿಸಿದ್ದಲ್ಲ ಎನ್ನುವುದು ಸ್ಪಷ್ಟ. ಈಗಿನ ಆಡಿಟ್ ವರದಿಗಳಿಂದ ಅದು ಸ್ಪಷ್ಟವಾಗಿದೆ. ಆ ಹಗರಣಗಳ ಸುಳಿವು ಸಿಕ್ಕ ಕೂಡಲೇ (2-ಜಿ ತರಂಗಾಂತರ ಹಂಚಿಕೆಯ ವಿವಾದ ಪ್ರಧಾನಿಯ ಪತ್ರಿಕಾ ಗೋಷ್ಠಿಯಲ್ಲೂ ಪ್ರಸ್ತಾಪವಾಗಿತ್ತು) ಸಂಬಂಧಪಟ್ಟ ಮಂತ್ರಿ ವಿರುದ್ಧ ತತ್‌ಕ್ಷಣ ಕ್ರಮ ಕೈಗೊಳ್ಳುವುದು ಅಸಾಧ್ಯವಾಗಿದ್ದು, ಅಂತಹ ಕ್ರಮದಿಂದ ಸರ್ಕಾರದ ಭದ್ರತೆಗೆ ಅಪಾಯವನ್ನು ಒಡ್ಡಬಹುದೆನ್ನುವ ಭೀತಿಯಿಂದ, ಅಂತಹ ಭದ್ರತೆಯಿಂದ ದೇಶಕ್ಕೆ ಒಳಿತಾಗುವುದಕ್ಕಿಂತ ಹಾನಿಯೇ ಹೆಚ್ಚಾಗಬಹುದು.
ಈಗಲೂ, ಮನಮೋಹನ ಸಿಂಗ್ ಅವರು ಪ್ರಧಾನಿ ನಿವಾಸದಿಂದ ಹೊರಗೆ ಕಾಲಿಟ್ಟಿರುವ ಸನ್ನಿವೇಶದಲ್ಲೂ ಅವರ ಮೇಲೆ ಹಲವು ಶಕ್ತಿಗಳು, ವ್ಯಕ್ತಿಗಳು ಲೋಕಪಾಲರ ನೇಮಕವನ್ನು ಈಗಲೇ ಮಾಡಿಬಿಡಿ ಎನ್ನುವ ಒತ್ತಾಯವನ್ನು ಹೇರುತ್ತಿರುವುದರ ಹಿಂದೆ ಇರುವ ಉದ್ದೇಶವೂ ಪ್ರಾಮಾಣಿಕವಲ್ಲ. ಈಗಿನ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಹಲವರಿಗೆ ಮುಂದೆಯೂ ಅದೇ ಸೌಲಭ್ಯ ಸಿಕ್ಕೀತು ಎನ್ನುವ ಭರವಸೆ ಇದ್ದಂತಿಲ್ಲ. ಆದ್ದರಿಂದ ತಮಗೆ ಕೃತಜ್ಞವಾಗಿರುವಂತಹ ಲೋಕಪಾಲರ ನೇಮಕಕ್ಕೆ ಒತ್ತಾಯಪಡಿಸುತ್ತಿರುವ ಪ್ರಯತ್ನ ನಡೆದಿದೆ. ಆದರೆ ನಿರ್ಗಮಿಸುತ್ತಿರುವ ಪ್ರಧಾನಿ ಮನಮೋಹನ ಸಿಂಗ್ ಅವರೂ ಆ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ, ಚುನಾವಣೆ ಆಯೋಗವೂ ಈಗಲೇ ಲೋಕಪಾಲರನ್ನು ನೇಮಿಸುವ ಯೋಚನೆ ಇದ್ದರೆ, ಅದನ್ನು ಕೈ ಬಿಡುವುದು ಸೂಕ್ತ ಎನ್ನುವ ಆದೇಶವನ್ನು ನೀಡಿರುವುದರಿಂದ ಸದ್ಯಕ್ಕೆ ಆ ಸಮಸ್ಯೆಯನ್ನು ಮುಂದಕ್ಕೆ ಹಾಕಿದಂತೆ ಆಗಿದೆ.
ಪ್ರಾದೇಶಿಕ ನಾಯಕ ಪ್ರಧಾನಿ: ಈಗ ದೇಶದ ಅನೇಕ ವಲಯಗಳಲ್ಲಿ ಗಂಭೀರ ಚರ್ಚೆಗೆ ಒಳಗಾಗುತ್ತಿರುವ ವಿಚಾರ ಎಂದರೆ, ಮುಂದಿನ ಪ್ರಧಾನಿ ದೆಹಲಿಯ ಪ್ರಭಾವಳಿಯ ಹೊರಗಿನ ಪ್ರದೇಶದಿಂದಲೇ ಬರಬೇಕು ಎನ್ನುವುದು. ಹಿಂದೆಯೂ ಈ ಮಾತು ಕೇಳಿಬಂದಿತ್ತು. ಆದರೆ ವಸ್ತುಶಃ ಆಕಸ್ಮಿಕದ ಪರಿಣಾಮವಾಗಿಯೇ ಪ್ರಧಾನಿಯಾದ ನರಸಿಂಹರಾಯರನ್ನು ಬಿಟ್ಟರೆ ಉಳಿದವರು ದೆಹಲಿ ಪ್ರಭಾವಳಿಯ ಆಶ್ರಿತರೇ ಆಗಿದ್ದರು. ಕರ್ನಾಟಕದ ದೇವೇಗೌಡರು ಹತ್ತು ತಿಂಗಳ ಅವಧಿ ಈ ನಿಯಮಕ್ಕೆ ಅಪವಾದ. ಮನಮೋಹನ ಸಿಂಗ್ ಅವರದ್ದು ಪಂಜಾಬಿನ ಮೂಲವಾದರೂ, ಅವರ ವೃತ್ತಿ ಜೀವನದ ಬಹು ಭಾಗವನ್ನು ಅವರು ದೆಹಲಿಯ ವಾತಾವರಣದಲ್ಲೇ ಕಳೆದಿದ್ದಾರೆ. ಅವರನ್ನು ಪ್ರಾದೇಶಿಕ ನಾಯಕ ಎನ್ನುವಂತಿಲ್ಲ. ಈಗಿನ ಪ್ರಚಾರ ಸಮರದಲ್ಲಿ ಗುಜರಾತ್ ಮೂಲದ ನರೇಂದ್ರ ಮೋದಿ ಅವರು ನಿಸ್ಸಂದೇಹವಾಗಿ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಅವರು ಕೆಲಸ ಮಾಡಿರುವುದೆಲ್ಲ ಗುಜರಾತ್ ಸೀಮೆಯಲ್ಲಿ. ಅವರಿಗೆ ಪ್ರಧಾನಿಯಾಗುವ ಅವಕಾಶ ಇಲ್ಲವೇ ಇಲ್ಲ ಎಂದು ಹೇಳುವುದಾಗಲಿ ಅಥವಾ ಅವರೇ ಪ್ರಧಾನಿಯಾಗುತ್ತಾರೆಂದು ಬಾಜಿ ಕಟ್ಟುವುದೇ ಆಗಲಿ ಪ್ರಾಂಜಲ ಮನಸ್ಸಿನ ಪ್ರಜ್ಞಾವಂತರಿಗೆ ಸಲ್ಲದ ವರ್ತನೆ. ಈಗ ಪ್ರಾದೇಶಿಕ ನಾಯಕರು ಎಂದರೆ ಯಾರು? ಸಹಜವಾಗಿಯೇ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಪ್ರಾದೇಶಿಕ ಪಕ್ಷಗಳ ಪ್ರಮುಖರು ಎನ್ನಬಹುದು.
ಭವಿಷ್ಯದ ಪ್ರಧಾನಿ ಆಯ್ಕೆಗೆ ಅವರ ಪ್ರಾದೇಶಿಕ ನಾಯಕತ್ವದ ಸಾಧನೆಯೇ ಒಂದು ಆಧಾರ ಎಂದಿಟ್ಟುಕೊಂಡರೆ ಈಗಿನ ಕಣದಲ್ಲಿ 29 ಮಂದಿ ಮಾಜಿ ಮುಖ್ಯಮಂತ್ರಿಗಳು ಸ್ಪರ್ಧಿಸುತ್ತಿದ್ದಾರೆ. ಅದರಲ್ಲಿ ಯಾರನ್ನಾದರೂ ಭಾವಿ ಪ್ರಧಾನಿಯನ್ನಾಗಿ ಪರಿಗಣಿಸಬಹುದು.  ಆದರೆ ರಾಷ್ಟ್ರೀಯ ಪಕ್ಷಗಳು ಅಂತಹ ಸ್ಥಿತಿಯನ್ನು ಒಪ್ಪುವುದು ಅನುಮಾನ. ಎರಡು ದೊಡ್ಡ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್, ತಮಗೆ ಅವಕಾಶ ಸಿಕ್ಕರೆ ನರೇಂದ್ರ ಮೋದಿ- ರಾಹುಲ ಗಾಂಧಿ ಅವರೇ ಪ್ರಧಾನಿಯಾಗುವುದೆಂದು ಸ್ಪಷ್ಟಪಡಿಸಿಬಿಟ್ಟಿವೆ. ಹಾಗಿದ್ರೆ ಈ ಪಕ್ಷಗಳೇ ನಿರ್ಣಾಯಕವೇನು?
 ಖಂಡಿತ ಅಲ್ಲ. ಏಕಾಂಗಿಯಾಗಿ ಕಮ್ಯುನಿಸ್ಟರನ್ನು ಬಂಗಾಳದಲ್ಲಿ ಪದಚ್ಯುತಿಗೊಳಿಸಿದ ಮಮತಾ ಬ್ಯಾನರ್ಜಿ, ತಮಿಳುನಾಡಿನಲ್ಲಿ ಸದ್ಯದ ಸ್ಥಿತಿಯಲ್ಲಿ ಪ್ರಶ್ನಾತೀತ ನಾಯಕಿಯಾಗಿರುವ ಜಯಲಲಿತಾ, ದಲಿತ ಸಮುದಾಯಗಳ ಕಣ್ಮಣಿ ಎಂದು ಅನೇಕರು ಭಾವಿಸಿರುವ ಮಾಯಾವತಿ, ಹಿಂದಿನ ಸಂಯುಕ್ತ ರಂಗದ ಆಡಳಿತದ ಸಮಯದಲ್ಲಿ ಎಲ್ಲ ಬಗೆಯ ವ್ಯವಹಾರಗಳನ್ನೂ ನಿಭಾಯಿಸಿದ ತೆಲುಗುದೇಶಂನ ಚಂದ್ರಬಾಬು ನಾಯ್ಡು ಅವರಂತಹವರು, ತಮಗೇ ಸಲ್ಲಬೇಕಾಗಿದ್ದ ಪ್ರಧಾನಿ ಪೀಠ ಇನ್ನೂ ದಕ್ಕಿಲ್ಲವಲ್ಲ ಎಂದು ದಶಕದಿಂದಲೂ ಕೊರಗುತ್ತಿರುವ ಸಮಾಜವಾದಿ ಮುಲಾಯಂ ಸಿಂಗ್ ಯಾದವ್ ಅವರೂ ಇದ್ದಾರೆ.
ಇವರಲ್ಲಿ ಒಂದು ಕಡೆ ಮಮತಾ, ಜಯಲಲಿತಾ ಕೈ ಕುಲುಕಿದ್ದರೆ, ಇನ್ನೊಂದು ಕಡೆ ಮುಲಾಯಂ ಸಿಂಗ್ ಯಾದವ್ ಕಮ್ಯುನಿಸ್ಟರ ಜತೆ ಕೈ ಕುಲುಕಿ ಪರ್ಯಾಯ ರಂಗದ ಕಲ್ಪನೆಗೆ ಚಾಲನೆ ನೀಡಿದ್ದಾರೆ.  ಇವೆಲ್ಲವನ್ನೂ ಜೀರ್ಣಿಸಿಕೊಂಡು, ಚುನಾವಣೆ ಫಲಿತಾಂಶದ ವಿವರಗಳೂ ಇಲ್ಲದೇ, ಮುಂದಿನ ಆಳುವ ಕೂಟದ ಪ್ರಮುಖರನ್ನು ಆರಿಸಲಿಕ್ಕೆ ಹೊರಡುವುದು ಪ್ರಬುದ್ಧ ರಾಜಕಾರಣ ಅಲ್ಲ. ಆದರೂ ಇಂತಹ ಚಿಂತನೆ ಅನೇಕರಲ್ಲಿದೆ ಎನ್ನುವುದಂತೂ ನಿಜ.
ರಾಜ್ಯದ ಮೇಲೆ ಪರಿಣಾಮ: ಲೋಕಸಭೆ ಚುನಾವಣೆ ಫಲಿತಾಂಶ ಈಗಿನ ಸ್ಥಿತಿಯಲ್ಲಿ ರಾಜ್ಯದ ರಾಜಕೀಯ ಹಾಗೂ ಸರ್ಕಾರದ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮವನ್ನೇನೂ ಬೀರಲಿಕ್ಕಿಲ್ಲ ಎಂದೇ ಬಹುತೇಕ ರಾಜಕಾರಣಿಗಳು ಹಾಗೂ ಇತರ ಆಸಕ್ತರ ಅಭಿಪ್ರಾಯ. ಆದರೆ, ಅದೇ ಅಂತಿಮ ಎಂದೇನೂ ಅಲ್ಲ. ರಾಜಕೀಯದಲ್ಲಿ ಕೊನೆ ಮಾತು ಎನ್ನುವುದೇ ಇಲ್ಲ.
 ಸದ್ಯದಲ್ಲಿ ಚರ್ಚೆಯಾಗುತ್ತಿರುವ ವಿಷಯ ಮಂತ್ರಿಗಳ ಸ್ಥಾನ-ಮಾನದ ಅಳಿವು - ಉಳಿವಿನ ವಿಚಾರ ಅಷ್ಟೇ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಸ್ತಾಪವಿಲ್ಲ. ಅವರ ಪಾತ್ರವೂ ಇರಲಿಕ್ಕಿಲ್ಲ.
  ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮಗ್ಗುಲು ಮುರಿಯುವಂತಹ ವಿಜಯವನ್ನು ಸಾಧಿಸಿದ ಕಾಂಗ್ರೆಸ್, ಅಧಿಕಾರದಲ್ಲಿ ಬಂದು ಒಂದೇ ವರ್ಷದ ಅನಂತರ ತನ್ನ ರಾಜಕೀಯ ಸ್ಥಾನಮಾನವನ್ನು ಉಳಿಸಿಕೊಳ್ಳದೇ ಹೋದರೆ, ಅದಕ್ಕೆ ಯಾರಾದರೂ ತಲೆದಂಡ ತೆರಲೇಬೇಕಲ್ಲ, ಆಗ ಸುಲಭವಾಗಿ ಸಿಗುವವರು ಮಂತ್ರಿಗಳು.   ತಮ್ಮ ಜಿಲ್ಲೆಗಳಲ್ಲಿ ಕಾಂಗ್ರೆಸ್ಸನ್ನು "ಗೆಲ್ಲಿಸುವ ಮಂತ್ರಿಗಳಿಗೆ" ಏನಾದರೂ ಬಹುಮಾನವನ್ನು ಕೊಡಲೇಬೇಕಲ್ಲ. ಅದೇ ರೀತಿ, ತಮ್ಮ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸೋತರೆ, ಅದಕ್ಕೆ ಮೊದಲ ಜವಾಬ್ದಾರಿಯನ್ನು ಜಿಲ್ಲಾ ಮಂತ್ರಿಗಳೇ ಹೊರಬೇಕು.
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಕಂಡುಬಂದಿರುವ ಒಡಕು, "ಮೈಸೂರಿನಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ" ಎಂದು ಬಲವಾಗಿ ಹಬ್ಬಿರುವ ವದಂತಿಗಳ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ನಂತರ ಕಾಂಗ್ರೆಸ್ ವರಿಷ್ಠರು ಈ ಬೆಳವಣಿಗೆಯನ್ನು ತಾವೂ ಗಮನಿಸಿರುವುದನ್ನು ಪ್ರದರ್ಶಿಸಲೇಬೇಕಲ್ಲ. ಇನ್ನು ಇತರ ಜಿಲ್ಲೆಗಳಲ್ಲಿ ನಡೆದಿರುವ ಕರಾಮತ್ತುಗಳಿಗೆ ಹೆಚ್ಚಿನ ಪ್ರಚಾರ ಸಿಕ್ಕಿಲ್ಲ. ಆದರೆ ಅದರಲ್ಲಿ ಯಾವುದೂ ಚುನಾವಣೆಯ ಫಲಿತಾಂಶ ಪ್ರಕಟವಾದ ಅನಂತರ ರಹಸ್ಯವಾಗಿ ಉಳಿಯುವುದಿಲ್ಲ. ಈಗಾಗಲೇ ಕೆಲವು ಕಡೆಗಳಲ್ಲಿ ಗುಸಗುಸ ಮಾತುಕತೆ ಆರಂಭವಾಗಿರುವುದು ನಿಜ.
ಫಲಿತಾಂಶ- ಊಹಾಪೋಹ: ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಮೊದಲೇ ಊಹಿಸುವುದು ಸಾಧ್ಯವೇ? ಊಹಿಸುವುದು ಸಾಧ್ಯ. ಆದರೆ ಅದು ನಿಜವಾಗಿ ಪರಿಸ್ಥಿತಿಗೆ ಹತ್ತಿರುವಿರುತ್ತದೆ ಎನ್ನುವ ಖಾತ್ರಿ ಕೊಡುವುದು ಸಾಧ್ಯವಿಲ್ಲ. ಆದರೂ ಆ ಕಸರತ್ತು ನಡೆಯುವುದು ನಿಜ. ಈಗಾಗಲೇ ನಡೆಯುತ್ತಿದೆ. ಚುನಾವಣೆಯ ಪೂರ್ವದಲ್ಲಿ ಜನಾಭಿಪ್ರಾಯ ಸಂಗ್ರಹ, ಅನಂತರ ಪ್ರಚಾರ ಸಮರದ ಹಿನ್ನೆಲೆಯಲ್ಲಿ ಯಾವ್ಯಾವ ಪ್ರದೇಶಗಳು, ನಾಯಕರು, ಜಾತಿಗಳು ಎತ್ತ ಒಲಿಯಬಹುದು ಎನ್ನುವ ಅನುಭವ ಆಧರಿತ ಅಂದಾಜು ಮಾಡುವುದರಲ್ಲಿ ತಪ್ಪೇನೂ ಇಲ್ಲ. ಇಲ್ಲಿ ಒಂದು ಸೂಕ್ಷ್ಮ ವಿಚಾರವನ್ನು ಗಮನಿಸಬೇಕು. ಸಮೀಕ್ಷೆಗಳನ್ನು ನಡೆಸಿರುವ ಎಲ್ಲ ಸಂಸ್ಥೆಗಳೂ ಮತದಾನ ನಡೆದಿರುವ ಕ್ಷೇತ್ರಗಳಲ್ಲಿ ನಿರ್ಗಮನ ಸಮೀಕ್ಷೆಗಳನ್ನು ನಡೆಸಿವೆ. ಈಗಾಗಲೇ ಆ ಸಮೀಕ್ಷೆಗಳಂತೆ ಕಂಡುಬಂದಿರುವ ಸಂಭವನೀಯ ಫಲಿತಾಂಶ ಭದ್ರವಾಗಿ, ಕೆಲವರ ಕಣ್ಣಿಗಷ್ಟೇ ಕಾಣುವ ರೀತಿಯಲ್ಲಿ, ಅಡಗಿ ಕೂತಿರುವುದೂ ನಿಜ. ಅಂದರೆ ಇದುವರೆಗೆ ನಡೆದಿರುವ ನಿರ್ಗಮನ ಸಮೀಕ್ಷೆಯ (ಎಕ್ಸಿಟ್ ಪೋಲ್) ವಿವರಗಳನ್ನು "ಬಲ್ಲವರ ಮೂಲಕ" ಎಲ್ಲ ವಿವರಗಳಲ್ಲದೇ ಹೋದರೂ ಸ್ಥೂಲವಾದ ಅಂಕಿ - ಅಂಶಗಳು ರಹಸ್ಯದ ಪರದೆಯನ್ನು ಭೇದಿಸಲೂಬಹುದು. ಅದು ಅಸಾಧ್ಯವೇನೂ ಅಲ್ಲ.
ಆದರೆ ಯಾರೂ ಅದನ್ನು ಮೇ 12ನೇ ತಾರೀಖಿಗೆ ಮುಂಚೆ ಪ್ರಕಟಿಸಲಿಕ್ಕೆ ಹೋಗುವಂತಿಲ್ಲ. ಆದರೂ ಮಾಧ್ಯಮ ಪ್ರಪಂಚದಲ್ಲಿ ರಾಜಕೀಯ ಅಥವಾ ಚುನಾವಣೆ ಪಂಡಿತರ ಹೇಳಿಕೆಗಳ ಮೂಲಕವೋ, ಲೇಖನ - ವಿಶೇಷ ಚರ್ಚೆಯ ಮೂಲಕವೋ ಸ್ವಲ್ಪವಾದರೂ ಮಾಹಿತಿಯ ಸೋರಿಕೆಯಾಗುವ ಸಂಭವ ಇದ್ದೇ ಇದೆ. ಅಂತಹ ಲೇಖನಗಳು (ಅಂಕಣಗಳು) ಪ್ರಸಾರವಾಗುವ ವಿಶೇಷ ಕಾರ್ಯಕ್ರಮಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದರೆ ವಿಶ್ವಾಸಾರ್ಹವಾದ ಸೂಚನೆಗಳು ಸಿಕ್ಕರೂ ಸಿಗಬಹುದು.
ಕಿಡಿಗೇಡಿತನ: ಸದ್ಯಕ್ಕೆ ತೃತೀಯರಂಗದ ಅಥವಾ ಪರ್ಯಾಯ ರಂಗದ ಮಾತು - ಪ್ರಸ್ತಾಪ ಪ್ರಕಾಶ್ ಕಾರಟ್, ಸೀತಾರಾಮ ಯೆಚೂರಿ, ಮುಲಾಯಂ ಸಿಂಗ್ ಯಾದವ್ ಅವರಲ್ಲಷ್ಟೇ ಪ್ರಸ್ತಾಪವಾಗುತ್ತಿದ್ದರೂ, ಇತರ ಪ್ರಾದೇಶಿಕ ಶಕ್ತಿಗಳು ಸುಮ್ಮನೆ ಕೂತಿಲ್ಲ. ಜಾತ್ಯತೀತ ಜನತಾದಳದ ಅಗ್ರೇಸರ ದೇವೇಗೌಡರು ಬಹಿರಂಗವಾಗಿಯೇ ಭವಿಷ್ಯದ ಸರ್ಕಾರದ ರಚನೆಯಲ್ಲಿ ತಮ್ಮ ಪಕ್ಷದ ಪಾತ್ರವೂ ಇರುತ್ತದೆ ಎಂದಿದ್ದಾರೆ. ಅದಕ್ಕೆ ಅವರು ಯಾವ ಆಧಾರವನ್ನೂ ಕೊಡದೇ ಇರುವುದು ಗಮನಾರ್ಹ.

-ಸತ್ಯ
anisikeprabha@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com