ಅಂಕಣಗಳು

ಮಹಾನಗರವೇ ತುಸು ನೀರಾಗಿಸು ನಿನ್ನ ಮನವ

ಮಹಾನಗರವೇ ತುಸು ನೀರಾಗಿಸು ನಿನ್ನ ಮನವ
Published On :

ಬೆಂಗಳೂರಿಗರ ನೀರಿನ ದಾಹವನ್ನು ತಣಿಸಲು ಯೋಜನೆಗಳನ್ನು ರೂಪಿಸುವುದಕ್ಕಾಗಿ ನೇಮಕಗೊಂಡ ತಜ್ಞರ ಸಮಿತಿಯೊಂದು ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಬೆಂಗಳೂರಿಗೆ ಸಾಗಿಸಬೇಕೆಂಬ ಸಲಹೆಯನ್ನು ಮಾಡಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ವರದಿಯನ್ನು ಪರಿಗಣಿಸಿದ ಮೇಲೆ ತಾರ್ಕಿಕವಾಗಿ ಮತ್ತು ತಾಂತ್ರಿಕವಾಗಿ ಇಂತಹ ಯೋಜನೆಯೊಂದು ಸಾಧ್ಯವೆಂದು ಸರ್ಕಾರಕ್ಕೆ ಅನಿಸಲೂ ಬಹುದು. ಆದರೆ ಒಟ್ಟಾರೆ ರಾಜ್ಯದ ಹಿತದೃಷ್ಟಿಯಿಂದ ಇಂತಹ ಯೋಚನೆಗಳು ತೀರಾ ಅಪಾಯಕಾರಿ ಎನ್ನುವುದನ್ನು ನಾವೆಲ್ಲಾ ಈಗಲೇ ಅರಿತುಕೊಳ್ಳಬೇಕಾಗಿದೆ.
ಬೆಂಗಳೂರಿನ ಜನಸಂಖ್ಯೆ 2022ರಲ್ಲಿ 1.43 ಕೋಟಿ ಮತ್ತು 2053ರಲ್ಲಿ 3.45 ಕೋಟಿಯಾಗಬಹುದೆಂದು ಈ ಸಮಿತಿ ಅಂದಾಜು ಮಾಡಿದೆ. ಇದರಲ್ಲಿರುವ ವಿಫುಲ ಅವಕಾಶಗಳಿಂದಾಗಿ ಜನಸಂಖ್ಯೆ ಹೆಚ್ಚುತ್ತಿರುವುದು ಅನಿವಾರ್ಯ ಎನ್ನುವುದು ನಮ್ಮನ್ನಾಳುವವರ ತಿಳಿವಳಿಕೆ. ರಾಜ್ಯದ ಇತರ ಭಾಗಗಳಲ್ಲಿಯೂ ಬೆಂಗಳೂರಿನಲ್ಲಿರುವ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಎಲ್ಲಾ ಪಕ್ಷಗಳು ಹೇಳುತ್ತಿದ್ದರೂ ಇದರ ಬಗೆಗೆ ಯಾರೂ ಗಮನ ಹರಿಸುತ್ತಿಲ್ಲ. ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಂಡಿಟ್ಟುಕೊಂಡಿರುವ ಸಾವಿರಗಟ್ಟಲೆ ಎಕರೆ ಜಮೀನು ಇವರೆಲ್ಲರನ್ನೂ ಬೆಂಗಳೂರಿನ ಬಗೆಗೆ ಮಾತ್ರ ಯೋಚಿಸಲು ಪ್ರೇರೇಪಿಸುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಗುಟ್ಟು. ಇಂತಹವರ ದುರಾಸೆಗೆ ಇಡೀ ರಾಜ್ಯದ ಜನತೆ ಬೆಲೆ ತೆರಬೇಕೇ ಎನ್ನುವುದು ಸದ್ಯದ ಪ್ರಶ್ನೆ. ರಾಜ್ಯದ ಸಾವಿರಾರು ಹಳ್ಳಿಗಳಲ್ಲಿ ಒಂದು ಹನಿ ಕೂಡ ಕುಡಿಯುವ ನೀರಿಲ್ಲದೇ ಜನರು ಕಲುಷಿತ ನೀರನ್ನೇ ಸೇವಿಸಿ ಗುಣಪಡಿಸಲಾಗದ ಕಾಯಿಲೆಗಳನ್ನು ಅಂಟಿಸಿಕೊಳ್ಳುತ್ತಿದ್ದಾರೆ ಎಂದು ಸರ್ಕಾರೀ ವರದಿಗಳೇ ಹೇಳುತ್ತಿವೆ. ಆದರೆ ಯಾವ ಸರ್ಕಾರಗಳಿಗೂ ಇದು ತಕ್ಷಣ ಗಮನ ಹರಿಸಬೇಕಾದ ವಿಷಯ ಅನ್ನಿಸುವುದೇ ಇಲ್ಲ. ಬೆಂಗಳೂರಿನ ಉದ್ದಿಮೆಗಳು ಅಭಿವೃದ್ಧಿಯಾದರೆ ಅಲ್ಲಿಂದ ರಾಜ್ಯದ ಬೊಕ್ಕಸಕ್ಕೆ ಸೇರುವ ಆದಾಯ ಇಡೀ ರಾಜ್ಯಕ್ಕೆ ಹಂಚಿಕೆಯಾಗುತ್ತದೆ, ಹಾಗಾಗಿ ಬೆಂಗಳೂರಿನ ಬಗೆಗೆ ಹೆಚ್ಚು ಕಾಳಜಿ ವಹಿಸಬೇಕು ಎನ್ನುವುದು ಇನ್ನೊಂದು ಪೊಳ್ಳುವಾದ. ರಾಜ್ಯದ ಇತರ ಕಡೆಗಳಲ್ಲಿ ಬೆಂಗಳೂರಿನ ಸೌಲಭ್ಯಗಳನ್ನು ನೀಡಿದರೆ ಅಲ್ಲಿಂದ ಕೂಡ ರಾಜ್ಯದ ಬೊಕ್ಕಸಕ್ಕೆ ಹಣ ಹರಿದು ಬರಲೇಬೇಕಲ್ಲವೇ?
 ಬೆಂಗಳೂರಿನ ಉದ್ದಿಮೆಗಳು ನೋಟುಗಳನ್ನು ಮಾತ್ರ ಸೃಷ್ಟಿಸುತ್ತಿವೆ. ಅದೇ ನೋಟುಗಳಿಂದ ನೈಸರ್ಗಿಸಂಪನ್ಮೂಲಗಳನ್ನು ಸೃಷ್ಟಿಸಿಕೊಳ್ಳಲು ಅವರಿಗೆಲ್ಲಿ ಸಾಧ್ಯ? ನೈಸರ್ಗಿಕ ಸಂಪನ್ಮೂಲಗಳು ಮತ್ತು ಅವುಗಳಿಂದ ಸೃಷ್ಟಿಯಾಗುವ ನಮ್ಮ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆಗಳಿಗಾಗಿ ಬೆಂಗಳೂರು ಹಳ್ಳಿಗರ ಮೇಲೆ ಅವಲಂಬಿಸಬೇಕು. ಆದರೆ ಈ ಹಳ್ಳಿಗಳಿಗೆ ನಿಲ್ಲದ ನೀರು ಮಾತ್ರ ಬೆಂಗಳೂರಿಗೆ ಬೇಕು- ಇದೆಂತಹ ಸಾಮಾಜಿಕ ನ್ಯಾಯ ಎಂದು ರಾಜ್ಯದ ಜನರೆಲ್ಲರೂ ಯೋಚಿಸಬೇಕಿದೆ. ಸೀಮಿತವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನೆಲ್ಲಾ ಬೆಂಗಳೂರಿನತ್ತ ಹರಿಸುವುದು ಕೇಂದ್ರಿಕರಣದ ಒಂದು ಮಾದರಿಯನ್ನು ಪೋಷಿಸುವುದಕ್ಕೆ ಸಮಾನ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಕೇಂದ್ರೀಕರಣದ ಬಗೆಗೆ ಹೆಚ್ಚು ಒತ್ತು ಕೊಟ್ಟಿದ್ದರೂ ಅವರ ಆಚರಣೆಗಳು ಮಾತ್ರ ಕೇಂದ್ರೀಕರಣದತ್ತಲೇ ಇರುತ್ತವೆ. ದೂರದಿಂದ ನೀರು ತರುವ ಇಂತಹ ಯೋಜನೆಗಳ ಬದಲಾಗಿ ಇರುವುದನ್ನು ಸರಿಯಾಗಿ ನಿರ್ವಹಿಸಿದರೆ ಬೆಂಗಳೂರಿನ ನೀರಿನ ದಾಹವನ್ನು ತಣಿಸಲು ಸಾಧ್ಯವಿದೆ.
*    ನೀರಿನ ಬಳಕೆಯ ಬಗೆಗೆ ಜನರಲ್ಲಿ ಪ್ರಜ್ಞೆ ಮೂಡಿಸಬೇಕಾಗಿದೆ. ಕಾವೇರಿಯಿಂದ ಬರುವ ಶುದ್ಧ ನೀರನ್ನು ಇಲ್ಲಿಯ ಜನ ನೆಲ, ಮನೆ, ಮುಂದಿನ ರಸ್ತೆಗಳನ್ನು ತೊಳೆಯಲು ಹಾಗೂ ಕಾರು, ನಾಯಿಗಳನ್ನು ಸ್ನಾನ ಮಾಡಿಸಲು ಉಪಯೋಗಿಸುತ್ತಾರೆ. ಇದಕ್ಕೆ ನಿರ್ಬಂಧ ಹಾಕಿದರೆ ಸಾಕಷ್ಟು ಉಳಿತಾಯವಾಗುತ್ತದೆ.
*     24 ಗಂಟೆ ನೀರು ಸರಬರಾಜಿನಂತಹ ತುಘಲಕ್ ಯೋಜನೆಗಳನ್ನು ಕೈ ಬಿಟ್ಟು ಸೀಮಿತ ಅವಧಿಗೆ ನಿಯಮಿತವಾಗಿ ನೀರನ್ನು ಒದಗಿಸಿದರೆ ಸಾಕು.
*     ಹಣವಿದ್ದವರು ಬೇಕಾಬಿಟ್ಟಿಯಾಗಿ ನೀರನ್ನು ದುಂದು ಮಾಡುವುದಕ್ಕೆ ಅವಕಾಶವಿರಬಾರದು. ಸೀಮಿತವಾಗಿ ದೊರಕುವ ನೈಸರ್ಗಿಕ ಸಂಪನ್ಮೂಲಗಳು ಸಮಾನ ಹಂಚಿಕೆಯಾಗಬೇಕು.
*     ವಿದೇಶಗಳಲ್ಲಿರುವಂತೆ ನೀರನ್ನು ಪುನರ್ಬಳಕೆ ಮಾಡುವ ಯೋಜನೆಗಳನ್ನು ರೂಪಿಸಬೇಕು. ಕೈಗಾರಿಕೆ ಮತ್ತು ಹೋಟೆಲ್‌ಗಳಲ್ಲಿ ಇವು ಕಡ್ಡಾಯವಾಗಬೇಕು.
*     ಬೆಂಗಳೂರಿನಲ್ಲಿ ಬೀಳುವ ಮಳೆಯ ಒಂದೇ ಒಂದು ಹನಿ ನೀರು ಕೂಡ ಸದ್ಯಕ್ಕೆ ಸದ್ಬಳಕೆಯಾಗುತ್ತಿಲ್ಲ. ಕಾಂಕ್ರಿಟ್ ಅರಣ್ಯದ ಮೇಲೆ ಬೀಳುವ ಮಳೆನೀರು ಚರಂಡಿಗಳನ್ನು ಸೇರಿ ಬೆಂಗಳೂರಿನ ಹೊರವಲಯದಲ್ಲಿ ಮಡುವುಗಟ್ಟುತ್ತಿದೆ. ಮಳೆಕೊಯಿಲನ್ನು ಕಡ್ಡಾಯಗೊಳಿಸಿದರೆ ಮಳೆಗಾಲದ ನಂತರ ಮೂರ್ನಾಲ್ಕು ತಿಂಗಳು ಸಾಕಷ್ಟು ನೀರನ್ನು ಉಳಿಸಬಹುದು.
*   ಈಗಾಗಲೇ ಸಾಕಷ್ಟು ಕೆರೆಗಳನ್ನು ನೆಲಗಳ್ಳರು ಕಬಳಿಸಲು ಅವಕಾಶ ನೀಡಲಾಗಿದೆ. ಉಳಿದ ಕೆರೆಗಳನ್ನು ರಕ್ಷಿಸಿಕೊಳ್ಳುವುದಲ್ಲದೇ ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕಾಗಿದೆ.
ಇವೆಲ್ಲವುಗಳನ್ನು ಸರ್ಕಾರದವರು ಮಾಡುತ್ತಾರೆ ಎಂದು ಬೆಂಗಳೂರಿನ ಜನತೆ ನಂಬಿಕೊಂಡರೆ ಅವರಿಗೆ ಭಾರೀ ನಿರಾಸೆ ಕಾದಿರುತ್ತದೆ. ಬೆಂಗಳೂರಿಗರು ಈಗಾಗಲೇ ಕಾವೇರಿ ನೀರಿನಲ್ಲಿ ಸಿಂಹಪಾಲು ಪಡೆದಿದ್ದಾರೆ. ಇದರಿಂದಲೂ ತೃಪ್ತರಾಗದೇ ಈಗ ಶರಾವತಿ, ನಂತರ ತುಂಗಭದ್ರಾ, ಕೃಷ್ಣಾ ನದಿಗಳ ನೀರಿನತ್ತ ಕೈ ಚಾಚಿದರೆ ಇಡೀ ರಾಜ್ಯದ ಜನತೆಯ ಸಿಟ್ಟನ್ನು ಎದುರಿಸಬೇಕಾಗುತ್ತದೆ. ಹೀಗೆ ದೂರದಿಂದ ನೀರನ್ನು ತರುವ ವ್ಯವಸ್ಥೆಗೆ ಬೇಕಾಗುವ ಭಾರಿ ಬಂಡವಾಳ ರಾಜ್ಯದ ಜನತೆಯ ಮೇಲೆ ಹಾಕುವ ಹೊರೆ ಮತ್ತು ಇಂತಹ ಯೋಜನೆಗಳನ್ನು ನಿರ್ವಹಿಸುವುದರಲ್ಲಿ ಇರುವ ಅನಿಶ್ಚಿತತೆಗಳನ್ನು ಸರ್ಕಾರ ಮತ್ತು ಬೆಂಗಳೂರಿನ ನಾಗರಿಕರು ಮನವರಿಕೆ ಮಾಡಿಕೊಳ್ಳಬೇಕಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದಾಗಲೆಲ್ಲಾ ಬೆಂಗಳೂರಿಗೆ ನೀರು ಸರಬರಾಜು ಮಾಡುವುದರ ವಿರುದ್ಧ ಪ್ರತಿಭಟನೆಗಳಾಗಿವೆ. ಹಾಗಾಗಿ ಇಂತಹ ಯೋಜನೆಗಳಲ್ಲಿರಬಹುದಾದ ಅನಾನುಕೂಲಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಇತರ ಪ್ರದೇಶ ಜನರಿಗಿಂತ ಬೆಂಗಳೂರಿಗರೇ ಇದನ್ನು ಹೆಚ್ಚು ಜೋರಾಗಿ ವಿರೋಧಿಸುವ ಅಗತ್ಯವಿದೆ. ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕುವ ಬಗೆಗೆ ಸರ್ಕಾರವನ್ನು ಒತ್ತಾಯಿಸಲು ಅಲ್ಲಿನ ಜನ ಒಂದು ಆಂದೋಲನ ಪ್ರಾರಂಭಿಸಬೇಕಾಗಿದೆ.

- ನಡಹಳ್ಳಿ ವಸಂತ್, ಶಿವಮೊಗ್ಗ

ಗಿಡಗಳು ಬೇಕು, ಆದರೆ ಅವುಗಳ ಒಣಗಿದ ಎಲೆ ಮತ್ತು ಹೂವು ಬೇಡ.... ಯಾಕೆಂದರೆ ಅದು 'ಹೊಲಸು ಕಸ'. ಮಳೆ ಬೇಕು ಆದರೆ ರಾಡಿ ಬೇಡ. ಯಾಕೆಂದರೆ ಅದು 'ಹೇಸಿಗೆ'.
ಇದು ನಮ್ಮ ಹುಬ್ಬಳ್ಳಿ- ಧಾರವಾಡದ ಹಲವಾರು ನಗರವಾಸಿಗಳ ಮನಸ್ಥಿತಿ. ಇವರೆಲ್ಲ ತಮ್ಮ ಮನೆಯ ಕಂಪೌಂಡಿನಲ್ಲಿ ಸಿಮೆಂಟಿನಿಂದ ಸವರಿ ಮಣ್ಣು ಎಲ್ಲಿಯೂ ಕಾಣದ ಹಾಗೆ ಮಾಡಿ, ಅದರ ಮೇಲೆ ಪ್ಲಾಸ್ಟಿಕ್ ಪಾಟ್‌ಗಳಲ್ಲಿ ಗಿಡ ನೆಟ್ಟು ಖುಷಿ ಪಡುತ್ತಾರೆ. ರೋಡಿನ ತುಂಬೆಲ್ಲ ಥಳಿ ಹೊಡೆದು ಆಪರೇಷನ್ ಥಿಯೇಟರ್‌ನಷ್ಟು ಶುದ್ಧಗೊಳಿಸುತ್ತಾರೆ.   
ಗಿಡಗಳಿಗೆ ದಿನ ನಿತ್ಯ ಶಾಪ ಹಾಕುವ ಇವರು ಅವುಗಳನ್ನು ಕತ್ತರಿಸಿಹಾಕಲೂ ಹಿಂದುಮುಂದೆ ನೋಡಲಾರರು. ಇವರಿಂದ ಅಳಿದುಳಿದ ಗಿಡಗಳು ಹೆಸ್ಕಾಂ ಕೊಡಲಿಗೆ ಬಲಿಯಾಗುತ್ತವೆ.    
ಒಂದಡೆ ನಗರಪಾಲಿಕೆಗಳು ನೀರಿನ ಸಂಗ್ರಹಣೆ  ಹಾಗೂ ಮಳೆ ಕೊಯ್ಲಿನ ಬಗ್ಗೆ ಅಬ್ಬರದ ಪ್ರಚಾರ ಮತ್ತು ಪಾಲಿಸಿಗಳನ್ನು ಮಾಡುತ್ತಿದೆ. ಇದೆ ಪಾಲಿಕೆ ರಸ್ತೆಬದಿಯ ಮಣ್ಣನ್ನು ಸಂಪೂರ್ಣವಾಗಿ ಸಿಮೆಂಟಿನಿಂದ ಮುಚ್ಚಿ ಒಂದು ಹನಿ ನೀರು ಇಂಗದ ಹಾಗೆ ಮಾಡಿ 'ಸ್ವಚ್ಛತೆ'ಯನ್ನು ಮೆರೆದಿವೆ.
ಪರಿಣಾಮ ಇಲ್ಲಿ ಬೀಳುವ ಪ್ರತಿ ಮಳೆ ಹನಿಯೂ ಕೂಡಲೇ ಕ್ಷಣಮಾತ್ರದಲ್ಲಿ ಗಟಾರ ಸೇರುತ್ತದೆ.
ಇನ್ನೈದು ವರ್ಷಗಳಲ್ಲಿ ಇಲ್ಲಿಯ ತಾಪಮಾನ 45 ಡಿಗ್ರಿ ಮೀರಿದರೆ ಮತ್ತು 15-20 ದಿನಕ್ಕೊಮ್ಮೆ ನಳದ ನೀರು ಬಂದರೆ ಯಾರೂ ಆಶ್ಚರ್ಯಪಡಬೇಕಿಲ್ಲ.    
ಮಳೆ ನೀರಿನ ಕೊಯ್ಲು ಎಂದರೆ ಮಳೆ ಬಂದಾಗ ಮಳೆ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಡುವುದು. ಮನೆಗಳು, ಗುಡಾರಗಳು ಮತ್ತು ಸ್ಥಳೀಯ ಸಾರ್ವಜನಿಕ ಕಟ್ಟಡಗಳ ಚಾವಣಿಗಳಿಂದ ಅಥವಾ ವಿಶೇಷವಾಗಿ ಸಿದ್ಧಗೊಳಿಸಲಾದ ನೆಲದ ಪ್ರದೇಶಗಳಿಂದ ಸಂಗ್ರಹಿಸಲಾದ ಮಳೆನೀರು, ಕುಡಿಯುವ ನೀರಿಗೆ ತನ್ನದೇ ಆದ ಪ್ರಮುಖ ಕೊಡುಗೆಯನ್ನು ನೀಡಬಲ್ಲದು. ಕೆಲವೊಂದು ಸಂದರ್ಭಗಳಲ್ಲಿ, ಮಳೆ ನೀರು ಮಾತ್ರವೇ ಲಭ್ಯವಿರುವ ಏಕೈಕ, ಅಥವಾ ಮಿತವ್ಯಯದ ನೀರಿನ ಮೂಲವಾಗಿರಲು ಸಾಧ್ಯವಿದೆ. ಸಾಮಾನ್ಯವಾಗಿ, ಮಳೆನೀರನ್ನು ನೆಲದಿಂದ ಇಲ್ಲವೇ ಚಾವಣಿಯೊಂದರಿಂದ ಕೊಯ್ಲು ಮಾಡಲಾಗುತ್ತದೆ. ನಗರ ಪ್ರದೇಶಗಳಲ್ಲಿನ ಮಳೆನೀರು ಕೊಯ್ಲು ಪ್ರಕ್ರಿಯೆಯು ಬಗೆಬಗೆಯ ಕಾರಣಗಳನ್ನು ಹೊಂದಲು ಸಾಧ್ಯವಿದೆ. ನಗರದ ಅಗತ್ಯಗಳಿಗಾಗಿ ಪೂರಕವಾದ ನೀರನ್ನು ಒದಗಿಸಲು, ನಗರ ಪ್ರದೇಶದ ಗಿಡ-ಮರಗಳಿಗಾಗಿ ಮಣ್ಣಿನ ತೇವಾಂಶದ ಮಟ್ಟವನ್ನು ಹೆಚ್ಚಿಸಲು, ಕೃತಕ ಮರುಭರ್ತಿ ವಿಧಾನದ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು, ನಗರ ಪ್ರದೇಶದಲ್ಲಿನ ನೀರು ಉಕ್ಕಿ ಹರಿಯುವಿಕೆಯನ್ನು ತಗ್ಗಿಸಲು ಮತ್ತು ಅಂತರ್ಜಲದ ಗುಣಮಟ್ಟವನ್ನು ಸುಧಾರಿಸಲು ನಗರಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು ಒಂದು ಅಗತ್ಯ ಕ್ರಮವಾಗಿ ಕಂಡುಬರುತ್ತದೆ.
ನ್ಯೂಜಿಲೆಂಡ್‌ನಲ್ಲಿ, ದೊಡ್ಡ ಪಟ್ಟಣಗಳು ಹಾಗೂ ನಗರಗಳಿಂದ ದೂರವಿರುವ ಅನೇಕ ಮನೆಗಳು, ಎಲ್ಲಾ ಗೃಹಕೃತ್ಯದ ಚಟುವಟಿಕೆಗಳಿಗಾಗಿರುವ ಏಕೈಕ ನೀರಿನ ಮೂಲವಾಗಿ ಚಾವಣಿಗಳಿಂದ ಸಂಗ್ರಹಿಸಿದ ಮಳೆನೀರನ್ನು ವಾಡಿಕೆಯಂತೆ ಅವಲಂಬಿಸಿವೆ. ಅನೇಕ ವಿರಾಮಧಾಮಗಳದ್ದೂ ಹೆಚ್ಚೂಕಮ್ಮಿ ಇದೇ ಅನಿವಾರ್ಯ ಪರಿಸ್ಥಿತಿ ಎನ್ನಬಹುದು.
ಹುಬ್ಬಳ್ಳಿಯ ವಿಜಯನಗರದ ಈ ಚಿತ್ರಗಳನ್ನು ನೋಡಿ ನಿಮ್ಮ ಕಣ್ಣಲ್ಲಿ ಒಂದು ಹನಿ ನೀರು ಜಿನುಗಿದರೆ ಸಾಕು, ನನ್ನ ಪ್ರಯತ್ನ ಸಾರ್ಥಕ ಎಂದುಕೊಳ್ಳುತ್ತೇನೆ.

- ಶರದ್ ದೇಶಪಾಂಡೆ, ಹುಬ್ಬಳ್ಳಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.