ಅಂಕಣಗಳು

ಇವರ ನೆನಪಲ್ಲಿ ವಿಜ್ಞಾನದ ಮಾರ್ಗ ತುಳಿಯೋಣ

Published On :

ಪ್ರತಿವರ್ಷ ಏಪ್ರಿಲ್ 30, ಭಾರತೀಯ ಭೂ ವಿಜ್ಞಾನಿಗಳು ಮತ್ತು ಎಲ್ಲ ಪರಿಸರ ಪ್ರಿಯರೂ ನೆನಪಿಡಬೇಕಾದ ದಿನ. ಅದರಲ್ಲಿಯೂ ಬೆಂಗಳೂರಿಗರು ಹೆಮ್ಮೆ ಪಡಬೇಕಾದ ದಿನ.
ಏಕೆಂದರೆ, ಭಾರತದ ಭೂಮಿಯ ಇತಿಹಾಸ ಮತ್ತು ಸಂಪನ್ಮೂಲಗಳನ್ನು ಕುರಿತ ಜ್ಞಾನಭಂಡಾರ ನಿರ್ಮಾಣಕ್ಕೆ ಕಾರಣವಾದ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿವೆತ್ತ ಮೇಧಾವಿ, ಸತ್ಪುರುಷ 1918ನೇ ಇಸವಿಯ ಇದೇ ದಿನದಂದು ಬೆಂಗಳೂರಿನಲ್ಲಿ ಹುಟ್ಟಿದರು. ಅವರು ಡಾ. ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ. ಈ ಹೆಸರಿನಲ್ಲಿ ಅಪ್ಪ ಪುಟ್ಟಯ್ಯ ಮತ್ತು ಮಗ ರಾಧಾಕೃಷ್ಣರ ನಾಮಧೇಯಗಳಡಗಿವೆ.
ಅಪ್ಪ ಮಕ್ಕಳಿಬ್ಬರೂ ಭೂ ವಿಜ್ಞಾನ ಓದಿದ ಕನ್ನಡದ ಹೆಮ್ಮೆಯ ಕುವರರು. ಬ್ರಿಟಿಷ್ ಕಾಲದ ಪುಟ್ಟಯ್ಯ, ಮೈಸೂರು ರಾಜ್ಯದ ಉನ್ನತ ಮಟ್ಟದ ಆಡಳಿತ ಅಧಿಕಾರಿಯಾಗಿದ್ದು ಅನೇಕ ಸಾಮಾಜಿಕ ಕಳಕಳಿಯ ಸೇವೆ ಮಾಡಿ ಬಡವರ ಬಂಧುವಾಗಿದ್ದು ಹೆಸರು ಗಳಿಸಿದವರು. ರಾಧಾಕೃಷ್ಣ ಭೂ ವಿಜ್ಞಾನವನ್ನು ಅಧ್ಯಯನ ಮಾಡುತ್ತಲೇ ರಾಜ್ಯದ ಭೂ ವಿಜ್ಞಾನ ಇಲಾಖೆ ಹಾಗೂ ಭಾರತೀಯ ಭೂ ವಿಜ್ಞಾನ ಸಂಘ ನಿರ್ಮಿಸಿ ಎರಡೂ ಸಂಸ್ಥೆಗಳ ಧ್ಯೇಯೋದ್ದೇಶಗಳನ್ನು ಈಡೇರಿಸಲು ಇಡೀ ಜೀವನ ಸವೆಸುತ್ತಾ ವೃತ್ತಿಯಿಂದ ನಿವೃತ್ತರಾದರೂ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ತೊಂಬತ್ತಾರು ವರ್ಷಗಳ ಸಾರ್ಥಕ ಜೀವನ ನಡೆಸಿ ವಿರಮಿಸಿದವರು. ಈ ಒಂದೇ ವ್ಯಕ್ತಿಯಲ್ಲಿ ವಿಜ್ಞಾನಿ, ಲೇಖಕ ಮತ್ತು ವೇದಾಂತಿಗಳು ಅಡಗಿದ್ದರು. ಇವರ ನೆನಪು ಇಂದಿನ ಭೂ ವಿಜ್ಞಾನಿಗಳು ಮತ್ತು ಪರಿಸರಾಸಕ್ತರಿಗೆ ಸ್ಫೂರ್ತಿ ನೀಡಬಲ್ಲದು.
ಇತ್ತೀಚೆಗಷ್ಟೇ ಭಾರತೀಯ ಭೂ ವಿಜ್ಞಾನ ಸಂಘ (ಜಿಯಲಾಜಿಕಲ್ ಸೊಸೈಟಿ ಆಫ್ ಇಂಡಿಯ) 'ರೆಮಿನಿಸೆನ್ಸಸ್‌' ಎಂಬ ಪುಸ್ತಕವನ್ನು ಇವರ ನೆನಪಿಗಾಗಿ ಪ್ರಕಟಿಸಿದೆ. ಈ ಪುಸ್ತಕದಲ್ಲಿ ಮುವ್ವತ್ತೊಂಬತ್ತು ಭೂ ವಿಜ್ಞಾನಿಗಳು ಡಾ. ಬಿ.ಪಿ. ರಾಧಾಕೃಷ್ಣರ ವ್ಯಕ್ತಿತ್ವವನ್ನು ಅವರವರು ಕಂಡಂತೆ ಚಿತ್ರಸಿದ್ದಾರೆ. ಒಬ್ಬರು ಅವರನ್ನು ಕರ್ಮಯೋಗಿ ಎಂದರೆ ಮತ್ತೊಬ್ಬರು ನನ್ನ ರೋಲ್ ಮಾಡೆಲ್ ಎಂದಿದ್ದಾರೆ.
ಮಗದೊಬ್ಬರು ಒಬ್ಬ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಿ ಎಂದು ವರ್ಣಿಸಿದ್ದಾರೆ. ಒಬ್ಬರು ನನ್ನ ಗುರು ಎಂದರೆ ಇನ್ನೊಬ್ಬರು ತಾನು ಅಂದದ್ದನ್ನು ಸಾಧಿಸಿದ ಗಾಂಧಿಯನ್ ಸೈಂಟಿಸ್ಟ್ ಎಂದಿದ್ದಾರೆ. ಅವರೊಂದಿಗಿನ ಒಡನಾಟ, ಮಾತುಕತೆ ಬಗ್ಗೆ, ಅವರು ರಚಿಸಿದ ವಿಶ್ವದ ಮಹಾನ್ ವಿಜ್ಞಾನಿಗಳು, ಸಾಹಿತಿಗಳ ಬಗೆಗಿನ ಪುಸ್ತಕಗಳ ಬಗ್ಗೆ ಭಾವುಕರಾಗಿ ಪ್ರಸ್ತಾಪಿಸಿದ್ದಾರೆ.
ವಲೇರಿ ಮಿಶೆಲ್ ಎಂಬ ಕೆನಡ ದೇಶದ ಭೂ ವಿಜ್ಞಾನ ಪ್ರಾಧ್ಯಾಪಕ, ರಾಧಾಕೃಷ್ಣರನ್ನು ನೆನೆಯುತ್ತ 'ಆತ ಒಬ್ಬ ಅಪರೂಪದ ತತ್ವಜ್ಞಾನಿ ಮತ್ತು ವಿಜ್ಞಾನಿ. ಈ ಕಾಲದಲ್ಲಿ ಇಂತಹವರ ಸಂಖ್ಯೆ ಕ್ಷೀಣಿಸುತ್ತಿದೆ.' ಎನ್ನುತ್ತಾರೆ. ಕೆನಡಾದಿಂದ ಪತ್ನಿ ಸಮೇತ ಭಾರತಕ್ಕೆ ಬಂದು ಮಿಶೆಲ್ ರಾಧಾಕೃಷ್ಣರನ್ನು ಅವರ ಮನೆಯಲ್ಲಿ ಭೇಟಿಯಾದದ್ದನ್ನು ನೆನೆಯುತ್ತ ಅವರಿದ್ದ ಮನೆ ಶಾಂತಿಯ ಸ್ವರ್ಗದಂತಿತ್ತು ಎಂದು ವರ್ಣಿಸುತ್ತಾರೆ. ಭಾರತದಲ್ಲಿರುವ ವಜ್ರ ಒಳಗೊಂಡ ಕಿಂಬರ್ಲೈಟ್ ಎಂಬ ಶಿಲೆಯ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಿ, ಮುಂದೆ ಇದೇ ವಿಚಾರವಾಗಿ, ಹತ್ತನೇ ಅಂತಾರಾಷ್ಟ್ರೀಯ ಸಮಾವೇಶವನ್ನು ಬೆಂಗಳೂರಿನಲ್ಲಿಯೇ ಏರ್ಪಡಿಸಲು ಕಾರಣವಾದ ಡಾ. ರಾಧಾಕೃಷ್ಣ ಆ ಸಮಾವೇಶಕ್ಕೆ ಮುನ್ನವೇ ಕಣ್ಮರೆಯಾದರೆಂದು ವ್ಯಥಿಸುತ್ತಾರೆ.
ಪ್ರಪಂಚದ ವಿವಿಧ ಭೂ ವಿಜ್ಞಾನಿಗಳೊಡನೆ ಸತತ ಸಂಪರ್ಕವಿರಿಸಿಕೊಂಡಿದ್ದ ರಾಧಾಕೃಷ್ಣ ಒಟ್ಟಾರೆ ಭೂಗೋಳದ ವಿಜ್ಞಾನವನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಧ್ಯಯನ ಮಾಡುತ್ತಲೇ ಬಂದರು. ಅಲ್ಲದೇ ಭಾರತೀಯ ಭೂ ವಿಜ್ಞಾನ ಸಂಘದ ಮುಖ ಪತ್ರಿಕೆ 'ಜರ್ನಲ್ ಆಫ್ ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯ'ದಲ್ಲಿ  ಭೂ ವಿಜ್ಞಾನ ಸಂಶೋಧನ ಲೇಖನಗಳನ್ನು ಸಂಪಾದಿಸಿ ಪ್ರಕಟಿಸಿ, ಅನೇಕ ಗ್ರಂಥಗಳ ಬಿಡುಗಡೆಗೆ ಕಾರಣರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಭೂ ವಿಜ್ಞಾನ ಸಂಘದ ಅಧ್ಯಕ್ಷ ರಿಚರ್ಡ್ ವಿಲ್ಜೊಯಿನ್, ರಾಧಾಕೃಷ್ಣರು ದಕ್ಷಿಣ ಆಫ್ರಿಕಾದಲ್ಲಿ ಚಿನ್ನದ ನಿಕ್ಷೇಪ ಉಗಮಿಸಿದ ಬಗ್ಗೆ ಆಸಕ್ತಿ ಇಟ್ಟುಕೊಂಡು ಈ ಬಗ್ಗೆ ಪ್ರಕಟಣೆಗಳನ್ನು ಕೈಗೊಂಡ ಬಗ್ಗೆ ವಿವರಿಸುತ್ತಾ, 'ರಾಧಾಕೃಷ್ಣರಂತಹವರು ಅಪರೂಪದ ಭೂ ವಿಜ್ಞಾನಿ. ಇವರನ್ನು ಸತತವಾಗಿ ನೆನೆಯಲು ಅವರಿಗಿದ್ದ ಆಸಕ್ತ ವಿಷಯಗಳ ಬಗ್ಗೆ ವರ್ಷಕೊಮ್ಮೆ ದತ್ತಿ ಉಪನ್ಯಾಸ ಏರ್ಪಡಿಸಬೇಕು' ಎಂದು ಸಲಹೆ ನೀಡುತ್ತಾರೆ. ಮುಂದುವರಿದು 'ರಾಧಾಕೃಷ್ಣರವರು ಭಾರತದ ಪಶ್ಚಿಮ ಘಟ್ಟದ ನೀರಿನ ಪರಿಸ್ಥಿತಿ ವಿವರಿಸುತ್ತ ಅದಕ್ಕೆ ಸಾಮ್ಯ ಇರುವ ದಕ್ಷಿಣ ಆಫ್ರಿಕದ ಡ್ರೇಕ್ಸ್‌ಬರ್ಗ್ ಘಟ್ಟಗಳಿಗೆ ಹೋಲಿಸಿ ವಿಮರ್ಶೆ ಮಾಡುತ್ತಿದ್ದದ್ದನು ವಿವರಿಸುತ್ತಾರೆ. ರಿಚರ್ಡ್ ವಿಲ್ಜೊಯಿನ್ ಪ್ರಕಾರ 'ಬಿ.ಪಿ.ಆರ್. ವಿಶಿಷ್ಟ ವ್ಯಕ್ತಿ, ಒಂದು ವಿಶ್ವವಿಖ್ಯಾತ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕೆಗೆ 15 ವರ್ಷಗಳ ಕಾಲ ಸಂಪಾದಕರಾಗಿದ್ದು ಮತ್ತು ಅಂತಹ ಸಂಸ್ಥೆಗೆ 19 ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಪ್ರಪಂಚದ ಬೇರೆಲ್ಲೂ ಕೇಳಿಲ್ಲ' ಎಂದು ಹೇಳಿರುವುದು ಗಮನಿಸಬೇಕಾದ ಅಂಶ. ಇಂತಹ ಮಹಾನ್ ವ್ಯಕ್ತಿ ಡಾ. ಬಿ.ಪಿ. ರಾಧಾಕೃಷ್ಣ ತಾವು ಬೆಳೆಸಿದ ಜಿಯಾಲಾಜಿಕಲ್ ಸೊಸೈಟಿ ಆಫ್ ಇಂಡಿಯಾದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಬಿಡುಗಡೆ ಮಾಡಿದ ಸ್ಮರಣಿಕೆಯಲ್ಲಿ ಕೆಳಕಂಡ ವಿಚಾರಗಳನ್ನು ಸಂಸ್ಥೆ ಮತ್ತು ಮುಂದಿನ ಭೂ ವಿಜ್ಞಾನಿಗಳ ಪೀಳಿಗೆ ಮುಂದುವರಿಸಲು ಆಶಿಸಿದ್ದಾರೆ.
ಭಾರತದ ಅಭಿವೃದ್ಧಿ ಕೃಷಿ ಮತ್ತು ಗಣಿಗಾರಿಕೆ ಎರಡೂ ಉದ್ಯಮಗಳನ್ನು ಅವಲಂಬಿಸಿದೆ. ಪ್ರತಿಶತ ಎಪ್ಪತ್ತಕ್ಕೂ ಹೆಚ್ಚು ಜನ ಸಂಖ್ಯೆ ಕೃಷಿ ಅವಲಂಬಿಸಿದ್ದು ಕೃಷಿಕರ ಸಮಸ್ಯೆ ಬಗೆಹರಿಸಲು ಭೂ ವಿಜ್ಞಾನಿಗಳು ಮತ್ತು ಇತರೆ ವಿಜ್ಞಾನಿಗಳು ಶ್ರಮಿಸಬೇಕಾಗಿದೆ. ಅದಕ್ಕಾಗಿ ಮಲ್ಟಿ ಡಿಸಿಪ್ಲನರಿ ಅಧ್ಯಯನಗಳು ದೇಶದ ಮಣ್ಣಿನ ಗುಣ ಮತ್ತು ಸಂರಕ್ಷಣೆ, ಮಣ್ಣಿನ ತೇವಾಂಶ, ಅರಣ್ಯ ಸಂರಕ್ಷಣೆ ಮತ್ತು ಸ್ವಾಭಾವಿಕ ಸಸ್ಯ ವರ್ಗದ ಅಭಿವೃದ್ಧಿ ಒಟ್ಟೊಟ್ಟಿಗೆ ಆಗಬೇಕು. ಅದಕ್ಕಾಗಿ ವಿವಿಧ ವಿಜ್ಞಾನ ಕ್ಷೇತ್ರಗಳ ವಿಜ್ಞಾನಿಗಳು ವಿಚಾರ ಮಂಥನ ಮಾಡಿ ನಿಸರ್ಗದತ್ತ ಪ್ರಕ್ರಿಯೆಗಳಿಗೆ ಧಕ್ಕೆ ಬಾರದೇ ಆರ್ಥಿಕ ಸಂಪನ್ಮೂಲಗಳನ್ನು ರಕ್ಷಿಸಿ ಪ್ರಾಪ್ತ ಬಳಕೆಗೆ ಹಲವಾರು ಸಲಹೆ ನೀಡಿದ್ದಾರೆ. ಅಂತರ್ಜಲ ಬಳಕೆ ಕುರಿತು ತೀರಾ ತಡವಾಗುವ ಮುನ್ನ ಎಚ್ಚೆತ್ತುಕೊಳ್ಳಿ ಎಂದು ಮಳೆ ನೀರನ್ನು ತಡೆದು ಅಂತರ್ಜಲ ಹೆಚ್ಚಿಸುವ ಬಗ್ಗೆ. ನದಿ ನೀರಿನ ಸಂರಕ್ಷಣೆ ಬಗ್ಗೆ, ನದಿ ಜೋಡಣೆಯಿಂದಾಗುವ ದುಷ್ಪರಿಣಾಮಗಳನ್ನು ಹೇಳುತ್ತಾ ಪಶ್ಚಿಮ ಘಟ್ಟಗಳ ಪಶ್ಚಿಮವಾಹಿ ನೀರನ್ನು ಮಳೆಗಾಲದ ಸಮಯದಲ್ಲಿ ಸಣ್ಣ ಸಣ್ಣ ಸುರಂಗ ನಿರ್ಮಿಸಿ ಭಾಗಶಃ ನೀರನ್ನು ಪೂರ್ವಕ್ಕೆ ಹರಿಸಿ ಪೂರ್ವಕ್ಕೆ ಹರಿಯುವ ಹಳ್ಳಗಳಲ್ಲಿ ಸ್ವಾಭಾವಿಕವಾಗಿ ಗುರುತ್ವಾಕರ್ಷಣೆ ಆಧಾರದ ಮೇಲೆ ಹರಿಯಲಾರಂಭಿಸಿದರೆ ಅಂತರ್ಜಲ ತಂತಾನೆ ಹೆಚ್ಚುವ ಸಾಧ್ಯತೆ ಬಗ್ಗೆ ಉಲ್ಲೇಖಿಸಿದ್ದಾರೆ.
ದೊಡ್ಡ ಕೆರೆಗಳ ಬದಲು ನೆಲದಾಳದಲ್ಲಿ ಕೂಪ (ಶಾಫ್ಟ್)ಗಳನ್ನು ನಿರ್ಮಿಸುವ ಬಗ್ಗೆ, ಅಂತರ್ಜಲ ಹೆಚ್ಚಿಸುವ ಮತ್ತು ಆವಿಯಾಗಿ ಹೋಗುವ ನೀರನ್ನು ಮಣ್ಣಿನಲ್ಲಿ ತೇವಾಂಶ ಉಳಿಸುವ ಕುರಿತು, ಇನ್ನು ಅನೇಕ ವಿಚಾರಗಳ ಬಗ್ಗೆ ಸಲಹೆ ನೀಡಿ ಇಂತಹ ಸಂಶೋಧನೆ ಹೆಚ್ಚಿಸಲು ಯುವ ವಿಜ್ಞಾನಿಗಳಿಗೆ ಸಂದೇಶ ನೀಡಿದ್ದಾರೆ. ಇದಕ್ಕಾಗಿ ಸಂಬಂಧ ಪಟ್ಟ ಸಂಘ ಸಂಸ್ಥೆಗಳು ಮತ್ತು ಸರ್ಕಾರಿ ಇಲಾಖೆಗಳ ಭಾಗವಹಿಸಿದರೆ ರಾಧಾಕೃಷ್ಣರವರ ಆತ್ಮಕ್ಕೆ ಸಂತೋಷವಾಗುತ್ತದಲ್ಲದೆ ಅವರ ಸಂದೇಶ ಮುಂದಿನ ಪೀಳಿಗೆಗೆ ಲಭಿಸುವಂತಾಗುವುದು.

= ಡಾ. ಎಲೆ ಲಿಂಗರಾಜು
ಭೂವಿಜ್ಞಾನಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.