ಅಂಕಣಗಳು

ಅಸ್ಪೃಶ್ಯತೆ ದೂರಮಾಡಲಿದೆ ಈ ಚುನಾವಣೆ!

ಅಸ್ಪೃಶ್ಯತೆ ದೂರಮಾಡಲಿದೆ ಈ ಚುನಾವಣೆ!
Published On :

ವಾರಾಣಸಿಯಲ್ಲಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಯ ಯಾತ್ರೆ ನಿಜವಾಗಲೂ ವಿಜಯ ಯಾತ್ರೆಯಂತೆಯೇ ಭಾಸವಾಯಿತು. ಒಂದು ವೇಳೆ ಆ ದೃಶ್ಯವನ್ನು ನಾನು ಖುದ್ದು ನೋಡದೇ ಇದ್ದಿದ್ದರೆ, "ಒಬ್ಬ ನಾಯಕ ನಾಮಪತ್ರ ಸಲ್ಲಿಸಲು ಹೊರಟಾಗ ಈ ಪರಿ ಜನರು ಸೇರುತ್ತಾರಾ" ಎಂದು ನಂಬುವುದಕ್ಕೂ ಕಠಿಣವಾಗುತ್ತಿತ್ತು. ಆ ಘಟನೆಯನ್ನು ಅಸಾಧಾರಣ ಅಥವಾ ಅಭೂತಪೂರ್ವ ಎನ್ನುವ ಪದಗಳಿಂದ ವರ್ಣಿಸಲು ಹೋದರೆ, ಅವೂ ಕೂಡ ಚಿಕ್ಕವಾಗೇ ಕಾಣುತ್ತವೆ!
ಆ ದೃಶ್ಯವನ್ನು ನೋಡಿ ದಂಗಾದ ಕೆಲವರು "ಇದೆಲ್ಲ ಮಾಧ್ಯಮಗಳ ಕೃತಿಮ ಸೃಷ್ಟಿ, ಅಲ್ಲಿ ಬಂದವರೆಲ್ಲ ಬಾಡಿಗೆ ಜನರು, ಅಷ್ಟೊಂದು ಜನರು ಇರಲೇ ಇಲ್ಲ. ಹಾಗಾಗಿ ಆ ವಿಷಯಕ್ಕೆ ಹೆಚ್ಚು ಗಮನ ಕೊಡುವ ಅವಶ್ಯಕತೆಯಿಲ್ಲ" ಎಂದು ತೃಪ್ತಿಪಟ್ಟುಕೊಂಡರು. ನಾವು ವಾರಾಣಸಿಯಲ್ಲಿದ್ದ ದಿನ, ಮೋದಿಯವರನ್ನು ಭಯಂಕರ ದ್ವೇಷಿಸುವ ಸುದ್ದಿವಾಹಿನಿಯೊಂದರ ಆ್ಯಂಕರ್ ಒಬ್ಬರ ಮಾತು ಬಲೇ ಮಜವಾಗಿತ್ತು. ಈ ಜನಸಂದಣಿ ಅಭೂತಪೂರ್ವವಾಗಿದೆ, ಲಕ್ಷಾಂತರ ಜನರು ನೆರೆದಿದ್ದಾರೆ ಎಂದು ಉಳಿದ ಆ್ಯಂಕರ್ಗಳು ಹೇಳುತ್ತಿದ್ದರೆ, ಇವರು ಮಾತ್ರ "ಕೇವಲ ಹತ್ತು ಸಾವಿರ ಜನ ಬಂದಿದ್ದಾರೆ" ಎಂದರು! ಪಾಪ, ಅವರಾದರೂ ಏನು ಮಾತನಾಡಿಯಾರು? ಮೆಚ್ಚುಗೆಯ ಮಾತನ್ನಂತೂ ನುಡಿಯುವುದಕ್ಕೆ ಅವರಿಗೆ ಸಾಧ್ಯವಿಲ್ಲ ಬಿಡಿ.
ಸತ್ಯವೇನೆಂದರೆ, ಇಂದು ಗೋಚರಿಸುತ್ತಿರುವ ಸಂಗತಿಗಳು ನಮಗೂ ಆಶ್ಚರ್ಯ ಹುಟ್ಟಿಸುತ್ತಿವೆ. 1952ರಿಂದ ಯಾವ ಚುನಾವಣೆಗಳಲ್ಲೂ ಇಂಥ ರೋಮಾಂಚನ, ಈ ಪರಿಯ ಮಂಥನ, ಇಷ್ಟೊಂದು ಆಕ್ರೋಶ, ಸಮರ್ಥನೆಗಳು, ಆರೋಪ-ಪ್ರತ್ಯಾರೋಪಗಳ ಅಲೆಯನ್ನು ಭಾರತ ನೋಡಿದ್ದೇ ಇಲ್ಲ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಜಮಾಸು ಒಂದುವರೆ ಲಕ್ಷ ಜನರು ಜೈಲು ಸೇರಿದ್ದರು ಮತ್ತು ಜೈಲು ಸೇರಿದ ಮುತ್ಸದ್ದಿಗಳಿಗೂ "ಸರ್ವಾಧಿಕಾರದ ಕತ್ತಲ ರಾತ್ರಿ ಎಂದಿಗೂ ಮುಗಿಯದು" ಎಂದು ಅನಿಸಿತ್ತು. ಅದರ ನಂತರವೂ ಜೆಪಿಯವರ ರಾಮಲೀಲ ಮೈದಾನದಲ್ಲಿನ ಅಭೂತಪೂರ್ವ ಸದ್ದು ಮತ್ತು ಬಾಬು ಜಗಜೀವನ್ರಾಮ್ ಅವರು ಕಾಂಗ್ರೆಸ್ ತೊರೆದು 'ಸಿಟಿಜನ್ಸ್ ಫಾರ್ ಡೆಮಾಕ್ರಸಿ' ಹುಟ್ಟುಹಾಕುವ ಬಿರುಗಾಳಿಯಂಥ ಘೋಷಣೆಗಳೂ ಕೂಡ ಕ್ರಾಂತಿಯ ಅಲೆಯನ್ನು ವಿಂಧ್ಯದ ಆ ಬದಿ ತಲುಪಿಸಲು ಹೆಚ್ಚು ಸಫಲವಾಗಲಿಲ್ಲ.  
ನಿಮಗೆ ನೆನಪಿರುವಂತೆ ಈಗಿನಷ್ಟು ಜನತಾ ಅಲೆಯನ್ನು ಹುಟ್ಟುಹಾಕಿದ ಮತ್ತೊಂದು ಆಂದೋಲನವ್ಯಾವುದಿದೆ ಹೇಳಿ? ಅಯೋಧ್ಯಾ ಆಂದೋಲನ? ಪರಿವರ್ತನಕಾರಿ ಆಂದೋಲನದ ದೃಷ್ಟಿಯಿಂದಲಂತೂ ಹೌದು. ಅದಕ್ಕೂ ಮುಂಚಿನ ಮೀನಾಕ್ಷಿಪುರಂ ಅಥವಾ ವಿರಾಟ್ ಹಿಂದೂ ಸಮ್ಮೇಳನ? ಆದರೆ ಇವನ್ನೆಲ್ಲ ಚುನಾವಣೆಯ ಅಲೆಯೊಂದಿಗೆ ತುಲನೆ ಮಾಡುವುದಕ್ಕೆ ಸಾಧ್ಯವಿಲ್ಲ. ಈ ತಳಹದಿಯಲ್ಲಿ ಹೋಲಿಕೆ ಮಾಡಬೇಕೆಂದರೆ 1952ರ ನೆಹರು ನೇತೃತ್ವದಡಿಯಲ್ಲಿನ ಚುನಾವಣೆಗಳು ಅಥವಾ ಅದರ ನಂತರದ ಇಂದಿರಾ ಗಾಂಧಿಯವರು ಎದುರಿಸಿದ ಚುನಾವಣೆಗಳಿರಬಹುದೇ? ಅಥವಾ ಇಂದಿರಾ ದೇಹಾಂತ್ಯದ ನಂತರ ನಡೆದ 1984ರ ಚುನಾವಣೆಗಳು ಈ ಪರಿ ಜನೋತ್ಸಾಹವನ್ನು ಹುಟ್ಟುಹಾಕಿತ್ತೇ?
ಏನೇ ಇರಲಿ, ಆದರೆ ತಿರುವನಂತಪುರದಿಂದ ಗುವಾಹಾಟಿಯವರೆಗೆ, ಜಮ್ಮುವಿನಿಂದ ವಾರಾಣಸಿಯವರೆಗೆ, ದೆಹಲಿಯಿಂದ ಹೈದ್ರಾಬಾದ್, ಚೆನ್ನೈನಿಂದ ತಿರುಚಿ ಅಲ್ಲಿಂದ ಜಯಪುರ್, ಪಟನಾ, ಕೋಲ್ಕತ್ತಾ ಹೀಗೆ ಇಡೀ ದೇಶಾದ್ಯಂತ ಸಂಚಲನ ಉಂಟುಮಾಡಿರುವ, ಜನಸಾಗರವನ್ನೇ ಸೆಳೆಯುತ್ತಿರುವ ಈಗಿನ ವಿದ್ಯಮಾನವನ್ನು ಮಾತ್ರ ನಾವು ಐತಿಹಾಸಿಕವೆಂದು ಭಾವಿಸುತ್ತೇವೆ. ಒಂದು ವೇಳೆ ನೀವು ಇದನ್ನೆಲ್ಲ ಮಾಧ್ಯಮಗಳ ಸೃಷ್ಟಿ ಅಥವಾ ಬಾಡಿಗೆ ಜನರ ಸಾಗರ ಎಂದು ಕರೆಯುತ್ತೀರೆಂದರೆ, ಅದು ನಿಮ್ಮ ಸಮಸ್ಯೆ. ಯಾವ ವ್ಯಕ್ತಿಯನ್ನು ರಾಜಕೀಯ ಅಸ್ಪೃಶ್ಯನೆಂದು ನೋಡಲಾಗಿತ್ತೋ ಆತನ ಅಲೆಯಿದು!
ಪರಿಶಿಷ್ಟ ಜಾತಿಗಳ ಮೇಲೆ ಯಾವ ಭಯಾನಕ ಮತ್ತು ಶಬ್ದಾತೀತ ಅತ್ಯಾಚಾರಗಳು ನಡೆದವೋ, ಅದರ ಪಶ್ಚಾತಾಪವನ್ನು ಏನು ಮಾಡಿದರೂ ದೂರ ಮಾಡಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ. ಇಂದಿಗೂ ಕೂಡ ದೇಶದಲ್ಲಿ ಆ ಜಾತಿಗಳ ಮೇಲಾಗುತ್ತಿರುವ ದೌರ್ಜನ್ಯವನ್ನು ನೋಡಿದರೆ ರಕ್ತ ಕುದಿಯುತ್ತದೆ. ತಮ್ಮನ್ನು ತಾವು ದೊಡ್ಡ ಜಾತಿಯವರೆಂದು ಹೇಳಿಕೊಂಡು ಹಿಂದುಳಿದ ಜಾತಿಗಳ ಮೇಲೆ ದರ್ಪ ಮೆರೆಯುವವರನ್ನು ಹೀನಾಯವಾಗಿ ದಂಡಿಸಬೇಕೆಂದು ಮನಸು ಬಯಸುತ್ತದೆ. ಸತ್ಯವೇನೆಂದರೆ ಭಗವಂತನ ದೃಷ್ಟಿಯಲ್ಲಿ ಮುಂದುವರಿದಜಾತಿಯ ಈ ಅತ್ಯಾಚಾರಿ ಗುಣದವರೇ ಅತಿ ಕೀಳು ಜಾತಿಯವರು!
ಇದಷ್ಟೇ ಅಲ್ಲ, ಆದರೆ ಒಬ್ಬರನ್ನು ಅವರ ವಿಚಾರಧಾರೆಯಿಂದಾಗಿ ಮಾಧ್ಯಮಗಳಲ್ಲಿ ಮತ್ತು ರಾಜಕೀಯದಲ್ಲಿ ಅಸ್ಪೃಶ್ಯರಂತೆ ಇಡಲಾಯಿತಲ್ಲ ಅದಕ್ಕೇನನ್ನಬೇಕು? ಸೆಕ್ಯುಲರ್ವಾದದ ಹೆಸರಿನಲ್ಲಿ ಅವರನ್ನೆಲ್ಲ ಎಲ್ಲಾ ಸಂದರ್ಭಗಳಲ್ಲೂ ದೂರವಿಡಲಾಯಿತು. ಅವರಿಗೆ ಯಾವ ಮುಖ್ಯವಾಹಿನಿ ಪತ್ರಿಕೆಗಳಲ್ಲೂ ತಮ್ಮ ಮಾತನ್ನು ಹೇಳುವ ಅವಕಾಶ ಸಿಗಲಿಲ್ಲ, ಸಿಕ್ಕರೂ ಅವರ ಹೇಳಿಕೆಗಳನ್ನೆಲ್ಲ ವಿಕೃತವಾಗಿ ತಿರುಚಿ ಪ್ರಕಟಿಸಲಾಯಿತು. ಹೀಗೆ ತಿರುಚಬೇಕೆಂಬ ನಿಯಮ ಅನೇಕ ಮಾಧ್ಯಮಗಳಲ್ಲಿ ಲಿಖಿತ ಮತ್ತು ಅಲಿಖಿತ ರೂಪದಲ್ಲಿ ಜಾರಿಯಾಗಿತ್ತು. ಒಂದು ವೇಳೆ ಸಂಪಾದಕನೊಬ್ಬ ನಮ್ಮಂಥವರ ನಾಲ್ಕು ಸಾಲುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಧೈರ್ಯ ತೋರಿದನೆಂದರೆ, ಕೂಡಲೇ ಆತನ ಮೇಲೆ ವಿಚಾರವಾದಿಗಳೆನಿಸಿಕೊಂಡವರು ಮುಗಿಬೀಳುತ್ತಿದ್ದರು. ವೈಚಾರಿಕ ಮತ್ತು ರಾಜಕೀಯ ಅಸ್ಪೃಶ್ಯತೆಯ ಅತಿರೇಕ ಎಷ್ಟಿದೆಯೆಂದರೆ ನಮ್ಮ ವಿಚಾರಧಾರೆಯ ಮುತ್ಸದ್ದಿಗಳಿಗೂ ಕೂಡ ಸ್ವಾತಂತ್ರ್ಯ ಅಥವಾ ಗಣತಂತ್ರ ದಿನದ ಸಮಾರೋಪಗಳಲ್ಲಿ ಆಹ್ವಾನ ನೀಡಬಾರದೆಂಬ ನಿಯಮ ತರಲಾಯಿತು, ಅದು ಈಗಲೂ ಜಾರಿಯಲ್ಲಿದೆ.
ತಮಗೆ ಬೇಕಿದ್ದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿ, ಬೇಡದವರನ್ನು ಪಟ್ಟಿಯಿಂದ ಕಿತ್ತೆಸೆದು, ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ತರ ತರಹದ ನಿಯಮಗಳನ್ನು ತಂದು, ಹೊಸ ಹೊಸ ಉಪಶಬ್ದಗಳನ್ನು, ಲೇಬಲ್ಗಳನ್ನು ಪ್ರಯೋಗ ಮಾಡಿ ನಮ್ಮಂಥ ಸ್ವಯಂಸೇವಕರನ್ನು ಅಸ್ಪೃಶ್ಯರನ್ನಾಗಿ ಬಿಂಬಿಸಿದ, ಈಗಲೂ ಅದೇ ಗುಣವನ್ನೇ ಪಾಲಿಸಿಕೊಂಡು ಬರುತ್ತಿರುವ ಸ್ಟಾಲಿನ್ ಮತ್ತು ವಾವೋವಾದಿ ಪರಂಪರೆಯ ಜನರಿಗೆ ಈಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬೆಳೆದ, ಹಿಂದೆ ಚಹಾ ಮಾರಿ ಬದುಕುತ್ತಿದ್ದ ವ್ಯಕ್ತಿಯೊಬ್ಬ ಭಾರತದ ಹೊಸ ನಾಯಕನಾಗಿ ಹೊರಹೊಮ್ಮುತ್ತಾನೆ ಎಂಬ ಸತ್ಯವನ್ನು ಅರಿಗಿಸಿಕೊಳ್ಳುವುದಕ್ಕಾದರೂ ಹೇಗೆ ಸಾಧ್ಯ? ಹಾಗಾಗೇ ಕಣ್ಣೆದುರಿಗಿರುವ ಸತ್ಯವನ್ನು ಒಪ್ಪಿಕೊಳ್ಳಲೂ ಅವರು ನಿರಾಕರಿಸುತ್ತಿದ್ದಾರೆ.
ಒಂದು ವೇಳೆ ಮೋದಿ ಗೆದ್ದರೆ, ಇವರೆಲ್ಲ ನಿರಾಕರಣೆಗೆ ಸಮಾನಾರ್ಥಕವಾದ ಹೊಸ ಹೊಸ ಶಬ್ದಗಳನ್ನು ಶಬ್ದಕೋಶದಲ್ಲಿ ಹುಡುಕಿ ತೆಗೆದು, ಸಿಗದಿದ್ದರೆ ತಾವೇ ಸೃಷ್ಟಿಸಿ, ಅಸಹ್ಯದ ಮಸಿಯನ್ನು ತಮ್ಮ ಲೇಖನಿಗಳೊಳಗೆ ತುಂಬಿಕೊಂಡು ಕುದಿಯುವ ಕವಿತೆಗಳನ್ನು ಬರೆಯಲಿದ್ದಾರೆ! ಪುಟಗಟ್ಟಲೇ ಅವರ ಸಮೀಕ್ಷೆಗಳು ಪ್ರಕಟವಾಗುತ್ತವೆ. "ಇದು ಭಾರತ ವಿರೋಧಿ" ಎಂದು ಗಂಟಲುಹರಿದುಕೊಳ್ಳಲಿದ್ದಾರೆ.
ಪ್ರತಿ ಪರಿವರ್ತನೆಯನ್ನೂ ಇದೇ ರೀತಿಯಲ್ಲಿ ವಿರೋಧಿಸಲಾಗುತ್ತದೆ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ: "ಎಲ್ಲವನ್ನೂ ಸಹಿಸಿಕೊಳ್ಳುವ ನೆಲದಂತೆ, ಜನ ಸಮಾಜವೂ ಕೂಡ ಬಹಳಷ್ಟು ಸಂಗತಿಗಳನ್ನು, ಬಹಳ ಕಾಲದವರೆಗೆ ಸಹಿಸಿಕೊಳ್ಳುತ್ತಾ ಹೋಗುತ್ತದೆ. ಆದರೆ ಯಾವಾಗ ಇನ್ನು ಸಹಿಸಲಸಾಧ್ಯ ಎಂದು ಅದು ನಿರ್ಧರಿಸುತ್ತದೋ, ಆಗ ಜ್ವಾಲಾಮುಖಿಯ ರೂಪದಲ್ಲಿ ಸ್ಫೋಟಗೊಂಡ ಆ ಆಕ್ರೋಶ ಯುಗ ಯುಗಗಳ ಹೊಲಸನ್ನೆಲ್ಲ ಸುಟ್ಟು ಹಾಕುತ್ತದೆ"!
ಈಗಿನ ಕೇಸರಿ ಅಲೆಯ ಬೆಂಬಲಿಗರ್ಯಾರಿದ್ದಾರೋ ಅವರೆಲ್ಲ ತಮ್ಮ ದೊಡ್ಡ ದೊಡ್ಡ ಮಹಾತ್ವಾಕಾಂಕ್ಷೆಗಳನ್ನು ತುಸು ಸಂಯಮದಿಂದ ಅದುಮಿಟ್ಟುಕೊಳ್ಳುವುದು ಒಳಿತು. ಏಕೆಂದರೆ ಸವಾಲುಗಳು ಮುಂದೆ ಹೆಚ್ಚಾಗಲಿವೆ. ಅಲ್ಲದೆ ಹೊರಗಿನ ಆಪೇಕ್ಷೆಗಳು, ಒಳಗಿನ ಸವಾಲುಗಳು, ದ್ವೇಷ-ಬದ್ಧ ದ್ವೇಷಗಳ ಆರ್ಭಟ ಮೇ 16ರ ನಂತರ ಇನ್ನಷ್ಟು ಕಠಿಣ ಸವಾಲುಗಳನ್ನು ಒಡ್ಡಲಿವೆ. ಆದರೆ ಕಳೆದ 12 ವರ್ಷಗಳಿಂದ ವಿಶ್ವವೆಲ್ಲ ಒಂದಾಗಿ ಮಾಡಿದ ಕೀಳುಮಟ್ಟದ ಕ್ರೂರ ಆಘಾತಗಳ-ಭಯಂಕರ ಪ್ರಹಾರಗಳ ಅಗ್ನಿಪರೀಕ್ಷೆಯನ್ನು ಪಾರು ಮಾಡಿಬಂದಿರುವ ವ್ಯಕ್ತಿ, ಈಗ ಕಾಶಿ ವಿಶ್ವನಾಥನ ನಗರಿಯಲ್ಲಿ ಅಭೂತಪೂರ್ವ ಆಶೀರ್ವಾದವನ್ನು ಪಡೆಯಲು ಯಶಸ್ವಿಯಾಗಿದ್ದಾನೆ. ಇಷ್ಟೆಲ್ಲ ಸವಾಲುಗಳನ್ನು ಎದುರಿಸಿ ಗೆಲುವಿನ ನಗೆ ಬೀರುವಾತ, ಮುಂದೆಯೂ ಸಫಲನಾಗಬಲ್ಲ.
ಒಂದಂತೂ ಸತ್ಯ. ಇಷ್ಟು ವರ್ಷಗಳಿಂದ "ರಾಜಕೀಯ ಅಸ್ಪೃಶ್ಯರ"ಮೇಲೆ ಮಾಡುತ್ತಾ ಬಂದ ಜನರ ಅಹಂಕಾರವನ್ನು ಮುರಿಯುವ ಘಳಿಗೆ ನಿರ್ಣಾಯಕ ಹಂತವನ್ನು ತಲುಪಿಬಿಟ್ಟಿದೆ. ಯಾವ ಜನರನ್ನು ಪ್ರತಿ ವೇಳೆಯಲ್ಲೂ, ಪ್ರತಿ ಹಂತದಲ್ಲೂ ಅಸ್ಪೃಶ್ಯರಂತೆ ಕಾಣಲಾಯಿತೋ ಅವರೇ ಈಗ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಮುಂದಾಗುತ್ತಿದ್ದಾರೆ. ಇದೂ ಕೂಡ ವೈಚಾರಿಕ ಆಂದೋಲನದ ಹೊಸ ರೂಪವೇ. ದಯವಿಟ್ಟು ಸ್ವೀಕರಿಸಿ!

= ತರುಣ್ ವಿಜಯ್
tarunvijay2@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.