ಅಂಕಣಗಳು

ಈ ಉದಾಸೀನತೆಗೆ ಉತ್ತರಿಸುವವರ್ಯಾರು?

Published On :

ಆರು ವರ್ಷದ ಬಾಲಕಿಯ ಮೇಲೆ ಬರ್ಬರ ಲೈಂಗಿಕ ದೌರ್ಜನ್ಯದ ಘಟನೆಯ ನಂತರ ಬೆಂಗಳೂರಿಗರು ಹೆಚ್ಚು ಗಾಬರಿಗೊಂಡಿದ್ದಾರೆ. ಆದರೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಏನು ಮಾಡುತ್ತಿವೆಯೋ ಯೋಚಿಸಿ? ಇದ್ದಲ್ಲೇ ಗಿರಕಿ ಹೊಡೆಯುತ್ತಾ, ಕತ್ತಲಲ್ಲಿ ಗುಂಡು ಹಾರಿಸುತ್ತಿವೆ! ಇನ್ನು ಶಾಲೆಗಳು "ಹೆಚ್ಚು ಶುಲ್ಕ ಕೊಟ್ಟರೆ ಮಾತ್ರ ಮಕ್ಕಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತೇವೆ" ಎನ್ನುತ್ತಿವೆ. ಇತ್ತ ಮಾಧ್ಯಮಗಳಂತೂ ಅನಾರೋಗ್ಯಕರ ಪೈಪೋಟಿಗೆ ಬಿದ್ದು ಇದ್ದದ್ದು ಇಲ್ಲದೆಲ್ಲವನ್ನೂ ಹೇಳುತ್ತಾ ಜನರನ್ನು ಗೊಂದಲಕ್ಕೆ ದೂಡುತ್ತಿವೆ.
ಬೆಂಗಳೂರಿನ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಡಾ. ಅಶ್ವಿನ್ ಮಹೇಶ್ ಎಂಬ ಸಾಮಾಜಿಕ ಕಾರ್ಯಕರ್ತರು, ಈ ಕುರಿತು ಏನೆನ್ನುತ್ತಾರೆಂದರೆ, "ಬೆಂಗಳೂರಿನಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರದ ತನಿಖೆ ಮತ್ತು ವರದಿಯ ವಿಷಯದಲ್ಲಿ ಎಲ್ಲರೂ ತಮಗೆ ತೋಚಿದಂತೆ ವರ್ತಿಸುತ್ತಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಸಿದ್ಧಾಂತ. ಬದಲಾಗುವ ತಪ್ಪಿತಸ್ಥರ ಹೆಸರುಗಳು ಮತ್ತು ಹೆಚ್ಚುತ್ತಿರುವ ಒತ್ತಡಗಳಿಂದಾಗಿ ಕೊನೆಗೆ ಯಾವ ತೀರ್ಮಾನಕ್ಕೆ ಬರಲಾಗುತ್ತದೋ ಅದನ್ನೂ ಅನುಮಾನದಿಂದ ನೋಡುವಂತಾಗುತ್ತದೆ. ಪೊಲೀಸರು ಇಂಥ ಅಪರಾಧ ಪ್ರಕರಣಗಳನ್ನು ಹೇಗೆ ತನಿಖೆ ಮಾಡಬೇಕು ಎನ್ನುವ ಕುರಿತು ಮಾನದಂಡವೊಂದನ್ನು ರಚಿಸಿಕೊಳ್ಳಬೇಕು. ಇನ್ನು ಮಾಧ್ಯಮಗಳ ಜಾತ್ರೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ."
ಅಶ್ವಿನ್ ಹೇಳುತ್ತಿರುವುದು ಅಕ್ಷರಶಃ ಸತ್ಯವಲ್ಲವೇ? ಅವರ ಮಾತಿಗೆ ಪುಷ್ಠಿ ನೀಡುತ್ತವೆ ಈ ಕೆಳಕಂಡ ಅಂಶಗಳು:
-ಪೊಲೀಸರು ಮೊದಲಿಗೆ ಶಾಲೆಯ ಸ್ಕೇಟಿಂಗ್ ತರಬೇತುದಾರ ಮುಸ್ತಫಾನನ್ನು ಬಂಧಿಸಿ, ಆತನೇ ಪ್ರಮುಖ ಶಂಕಿತ ವ್ಯಕ್ತಿ ಎಂದು ಘೋಷಿಸಿದರು. ಮುಸ್ತಫಾಗೆ ಹೆಣ್ಣುಮಕ್ಕಳೊಡನೆ ಅನುಚಿತವಾಗಿ ವರ್ತಿಸುವ ಮತ್ತು ಪೀಡೋಫೀಲಿಯಾ(ಮಕ್ಕಳೆಡೆಗೆ ಲೈಂಗಿಕವಾಗಿ ಆಕರ್ಷಿತನಾಗುವ ವಯಸ್ಕ) ಇತಿಹಾಸವಿದೆ, ಅಲ್ಲದೆ ಆತನಿಂದ ವಶಪಡಿಸಿಕೊಂಡ ಲ್ಯಾಪ್‌ಟಾಪ್‌ನಲ್ಲಿ ಮಕ್ಕಳ ಪೋರ್ನ್ ವೀಡಿಯೋಗಳಿವೆ ಎಂದು ದಂಡಿಯಾಗಿ ಮಾಧ್ಯಮಗಳಿಗೆ ಮಾಹಿತಿ ಒದಗಿಸಿದರು. ಕೊನೆಗೂ ಅಪರಾಧಿ ಸಿಕ್ಕಿಬಿದ್ದ ಎಂದು ಜನರು ನಿಟ್ಟುಸಿರು ಬಿಡುವಷ್ಟರಲ್ಲೇ ಪೊಲೀಸರು ಆತನಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟರು. ಮುಸ್ತಫಾ ಅಲ್ಲ, ಬದಲಾಗಿ ಆ ಅಪರಾಧ ಎಸಗಿದವರು ಇಬ್ಬರು ಜಿಮ್ ತರಬೇತುದಾರರು(ಬಂಧಿಸಲಾಗಿದೆ) ಎಂದರು. ತಲ್ಲಣಗೊಂಡಿರುವ ವಿದ್ಯಾರ್ಥಿಗಳ ಪೋಷಕರೀಗ ನಿಜಕ್ಕೂ ಇವರೇ ಅಪರಾಧಿಗಳಾ ಅಥವಾ ಪೊಲೀಸರು ಮತ್ತೆ ಹೊಸ ಹೆಸರಿನೊಂದಿಗೆ ಮುಂದೆ ಬರುತ್ತಾರಾ ಎಂದು ಯೋಚಿಸುತ್ತಿದ್ದಾರೆ. ಈ ವಿಷಯ ಇಲ್ಲಿಗೇ ಮುಗಿಯುವುದಿಲ್ಲ. ಕಂಬಿಯ ಹಿಂದಿರುವ ವ್ಯಕ್ತಿಯನ್ನು ಏನು ಮಾಡುವುದು? ಸ್ವತಂತ್ರಗೊಳಿಸಬೇಕೇ ಅಥವಾ ಆತನ ಹಿಂದಿನ ತಪ್ಪುಗಳಿಗಾಗಿ ಶಿಕ್ಷೆವಿಧಿಸಬೇಕೇಎಂದು ಪೊಲೀಸರು ಈಗ ಗೊಂದಲಕ್ಕೆ ಬಿದ್ದಿದ್ದಾರೆ.
-ಜನರ ಪ್ರತಿಭಟನೆ ಮತ್ತು ವಿರೋಧಪಕ್ಷಗಳ ದಾಳಿಯಿಂದ ಕಂಗೆಟ್ಟಿರುವ ಸರ್ಕಾರ, ಗೂಂಡಾ ಕಾಯ್ದೆಯಲ್ಲಿ ಲೈಂಗಿಕ ಅಪರಾಧಗಳು ಮತ್ತು ಮನಿ ಲಾಂಡರಿಂಗ್ ಅನ್ನು ಸೇರಿಸಲು ಕಾಯ್ದೆಗೆ ತಿದ್ದುಪಡಿ ತಂದಿದೆ. ಆದರೆ ಮಸೂದೆ ಜಾರಿಯಾಗುವುದಕ್ಕೂ ಮುನ್ನ ಅದರ ಮೇಲೆ ಒಬ್ಬರೂ ಸರಿಯಾಗಿ ಕಣ್ಣುಹಾಯಿಸಿಲ್ಲವೆನಿಸುತ್ತಿದೆ. ಅದರಲ್ಲೂ ಆಂಗ್ಲ ಅವತರಣಿಕೆಯಲ್ಲಂತೂ ಬರೀ ಕಾಗುಣಿತ ತಪ್ಪುಗಳು ಮತ್ತು ವಾಕ್ಯ ರಚನೆಯಲ್ಲಿ ದೋಷಗಳೇ ತುಂಬಿಕೊಂಡಿವೆ. ತಿದ್ದುಪಡಿ ತರಲಾದ ಮಸೂದೆಯಲ್ಲಂತೂ "Sexual offences in public interest'' ಎಂಬ ಹೊಸ ವಾಕ್ಯ ಸೇರಿಕೊಂಡಿದೆ. ಇನ್ನು Money laundering ಎನ್ನುವುದನ್ನು "Many laundering" ಎಂದು ಬರೆಯಲಾಗಿದೆ! ಸರ್ಕಾರದ ಬೇಜವಾಬ್ದಾರಿತನವನ್ನು ಇದು ಹೊರಗೆಡಹುವುದಿಲ್ಲವೇ? ಒಂದು ಮಸೂದೆ ಸಿದ್ಧವಾಗಬೇಕಾದರೆ ಅನೇಕ ಪ್ರಕ್ರಿಯೆಗಳು ಮತ್ತು ಪರಿಶೀಲನೆಗಳನ್ನು ಅದು ದಾಟಬೇಕಾಗುತ್ತದೆ. ಹೀಗಿರುವಾಗ ಈ ಪರಿ ತಪ್ಪುಗಳು ಅದರಲ್ಲಿ ಉಳಿದುಕೊಂಡದ್ದೇಕೆ? ಇನ್ನು ಮಸೂದೆಯನ್ನು ಪಾಸು ಮಾಡಿದ ಶಾಸಕರು ಏನು ಮಾಡಿದರು? ಅದರಲ್ಲಿರುವ ಅಂಶಗಳನ್ನು ಓದಿ, ಅದರಲ್ಲಿನ ತಪ್ಪುಗಳನ್ನು ಅವರೇಕೆ ಗುರುತಿಸಲಿಲ್ಲ? ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿರುವುದಂತೂ ಸತ್ಯ. ಜನರೂ ಕೋಪಗೊಂಡಿದ್ದಾರೆ.
-ಶಿಕ್ಷಣ ಇಲಾಖೆ, ಪೊಲೀಸರು ಮತ್ತು ಪೋಷಕರು ಮಕ್ಕಳ ರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಪಟ್ಟಿ ಮಾಡುತ್ತಿರುವಾಗ ಸಹಜವಾಗಿ ಶಾಲೆಗಳೇನು ಮಾಡಬೇಕು? ಅವೇ ಮುಂದೆ ಬಂದು ಮುಂಜಾಗ್ರತಾ ಕ್ರಮಗಳನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕಲ್ಲವೇ? ಆಗಲೇ ಕೆಲವು ಶಾಲೆಗಳು ಈ ಕೆಲಸಕ್ಕೆ ಮುಂದಾಗಿರುವುದರಲ್ಲಿ ಅನುಮಾನವಿಲ್ಲ. ಆದರೆ ಇದಕ್ಕಾಗಿ ಮಕ್ಕಳ ಶಾಲಾ ಶುಲ್ಕವನ್ನು ಶೇ. 10 ರಷ್ಟು ಏರಿಸುತ್ತೇವೆ ಎಂದು ಅವು ಹೇಳುತ್ತಿವೆ. ಶಾಲೆಯಲ್ಲಿ ಸಿಸಿಟಿವಿ ಮತ್ತು ಶಾಲಾ ವಾಹನಗಳಲ್ಲಿ ಹೆಚ್ಚುವರಿ ತುರ್ತುದ್ವಾರಗಳನ್ನು ಅಳವಡಿಸುವುದು ಶಾಲಾ ಆಡಳಿತ ಮಂಡಳಿಗೆ ಬಹುದೊಡ್ಡ ಹೊರೆಯಾಗುತ್ತದೆ ಎನ್ನುವುದು ಅವುಗಳ ವಾದ. ಮಕ್ಕಳ ರಕ್ಷಣೆ ಶಾಲೆಯ ಜವಾಬ್ದಾರಿಯಾಗಬೇಕಲ್ಲವೇ? ಈಗ ವಿವಾದಕ್ಕೀಡಾಗಿರುವ ಶಾಲೆಯಂತೂ, "ಮಕ್ಕಳ ಭದ್ರತೆಗೆ ಶಾಲಾ ಮಂಡಳಿ ಜವಾಬ್ದಾರಿ ಹೊರುವುದಿಲ್ಲ" ಎಂಬ ಕರಾರಿಗೆ ಪೋಷಕರಿಂದ ಸಹಿಹಾಕಿಸಿಕೊಂಡಿದೆ ಎನ್ನಲಾಗುತ್ತಿದೆ.
ಸಾರ್ವಜನಿಕರ ವಿರೋಧದಿಂದ ತಪ್ಪಿಸಿಕೊಳ್ಳಲು ಕಾಯಿದೆಗಳಲ್ಲಿ ತಿದ್ದುಪಡಿ ಮಾಡುವ ಬದಲು ಸರ್ಕಾರ ತನ್ನ ಕಾರ್ಯವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. "ಕ್ರಿಮಿನಲ್‌ಗಳ ಮೇಲೆ ತ್ವರಿತವಾಗಿ ಕಠಿಣ ಕ್ರಮ ಜರುಗಿಸಿ ಮತ್ತು ಅತ್ಯಾಚಾರದಂಥ (ಮುಖ್ಯವಾಗಿ ಮಕ್ಕಳ ಮೇಲಿನ ದೌಜರ್ನ್ಯ) ಪ್ರಕರಣಗಳಲ್ಲಿ ಸಂವೇದನೆ ತೋರಿಸಿ, ಜನರಿಗೆ ಧೈರ್ಯ ತುಂಬಿ" ಎಂದು ಸರ್ಕಾರ ಪೊಲೀಸ್ ಇಲಾಖೆಗೆ ಆಜ್ಞೆ ನೀಡಬೇಕು. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ. ಅದರಂತೆಯೇ ಅಪರಾಧಗಳೂ ಕೂಡ. ದಕ್ಷ ಉಸ್ತುವಾರಿ ಈ ಕ್ಷಣದ ಅಗತ್ಯ.
ಕೊನೆಯ ಗುಟುಕು: ಮಾತನಾಡುವುದಕ್ಕೂ ಮುನ್ನ, ಆಲಿಸಿ. ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನ, ಯೋಚಿಸಿ. ವ್ಯಯಿಸುವುದಕ್ಕೂ ಮುನ್ನ, ಗಳಿಸಿ. ದೂಷಿಸುವುದಕ್ಕೂ ಮುನ್ನ, ಕಾದು ನೋಡಿ. ಪ್ರಾರ್ಥಿಸುವುದಕ್ಕೂ ಮುನ್ನ, ಕ್ಷಮಿಸಿ. ಬಿಟ್ಟುಕೊಡುವುದಕ್ಕೂ ಮುನ್ನ, ಮತ್ತೊಮ್ಮೆ ಪ್ರಯತ್ನಿಸಿ. -ಅರ್ನ್ಸ್ಟ್ ಹೆಮಿಂಗ್‌ವೇ

-ಎಚ್.ಎಸ್. ಬಲರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.