ಅಂಕಣಗಳು

2035ರ ವೇಳೆಗೆ ಪ್ರಪಂಚದಲ್ಲಿ ಯಾವ ದೇಶವೂ ಬಡ ರಾಷ್ಟ್ರವಾಗಿ ಉಳಿಯದು ಅಂತಾರೆ ಬಿಲ್ಗೇಟ್ಸ್ !

2035ರ ವೇಳೆಗೆ ಪ್ರಪಂಚದಲ್ಲಿ ಯಾವ ದೇಶವೂ ಬಡ ರಾಷ್ಟ್ರವಾಗಿ ಉಳಿಯದು ಅಂತಾರೆ ಬಿಲ್ಗೇಟ್ಸ್ !
Published On :

ನೀವು ಯಾವುದೇ ರೀತಿಯಲ್ಲಿ ನೋಡಿದರೂ ಪ್ರಪಂಚವಿಂದು ಹಿಂದೆಂದಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ. ಜನರ ಆಯಸ್ಸು, ಆರೋಗ್ಯ ಉತ್ತಮವಾಗುತ್ತಿದೆ. ಅನ್ಯರಾಷ್ಟ್ರಗಳ ಸಹಾಯ ಪಡೆದು ಬದುಕುತ್ತಿದ್ದ ಹಲವಾರು ರಾಷ್ಟ್ರಗಳೀಗ ತಮ್ಮ ಕಾಲಮೇಲೆ ತಾವು ನಿಂತಿವೆ. ಆದರೆ ಇದನ್ನೆಲ್ಲ ಗಮನಿಸದೆ ಬಹುತೇಕರು, ಜನಜೀವನ ದಿನೇ ದಿನೆ ಹಾಳಾಗುತ್ತಲೇ ಸಾಗುತ್ತಿದೆ ಎಂದು ಹೇಳುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ಹಾಗಂತ ಬಡವರೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎನ್ನುವ ವಾದವಿದೆಯಲ್ಲ, ಅದಕ್ಕೆ ನನ್ನ ವಿರೋಧವಿದೆ. ಅದು ಕೇವಲ ಮಿಥ್ಯೆಯಷ್ಟೇ ಅಲ್ಲ, ಹಾನಿಕಾರಕ ವಾದವೂ ಹೌದು.
ಮಿಥ್ಯೆ 1:  ಬಡರಾಷ್ಟ್ರಗಳು ಕೊನೆಯವರೆಗೂ ಬಡತನದಲ್ಲೇ ಉಳಿಯುತ್ತವೆ: ಈ ಮಾತನ್ನು ಬಹಳಷ್ಟು ರಾಷ್ಟ್ರಗಳಿಗೆ ಅನ್ವಯ ಮಾಡಿ ಮಾತನಾಡುವುದನ್ನು ನಾನು ಕೇಳಿದ್ದೇನೆ. ಅದರಲ್ಲೂ ಮುಖ್ಯವಾಗಿ ಆಫ್ರಿಕಾದ ಬಗ್ಗೆ. ಒಂದು ಬಾರಿ ಆಫ್ರಿಕಾದ ಬಗ್ಗೆ ನೀವು ಅಂತರ್ಜಾಲದಲ್ಲಿ ಟೈಪ್ ಮಾಡಿದಿರೆಂದರೆ, ಹೇಗೆ 'ಶ್ರೀಮಂತ ರಾಷ್ಟ್ರಗಳು ಶ್ರೀಮಂತವಾಗುತ್ತಲೇ ಸಾಗಿವೆ, ಬಡರಾಷ್ಟ್ರಗಳು ಬಡತನದಲ್ಲೇ ಉಳಿಯಲಿವೆ" ಎನ್ನುವ ತಲೆಬರಹದಲ್ಲಿ ದಂಡಿಯಾಗಿ ಲೇಖನಗಳು, ಪುಸ್ತಕಗಳು ಸಿಗುತ್ತವೆ. ಸುದೈವವೆಂದರೆ ಇಂಥ ಪುಸ್ತಕಗಳು ಹೆಚ್ಚು ಮಾರಾಟವಾಗುತ್ತಿಲ್ಲ ಎನ್ನುವುದು. ಏಕೆಂದರೆ ಅವುಗಳ ಮೂಲಭೂತ ಪ್ರಮೇಯವೇ ಮಿಥ್ಯೆಯಿಂದ ಕೂಡಿದೆ.
ಐವತ್ತು ವರ್ಷಗಳ ಹಿಂದಕ್ಕೆ ಹೋಗಿ ನೋಡಿದಾಗ, ಆಗೆಲ್ಲ ಪ್ರಪಂಚ ಮೂರು ಭಾಗವಾಗಿ ವಿಂಗಡಣೆಯಾಗಿತ್ತು. ಅಮೆರಿಕ ಮತ್ತದರ ಮಿತ್ರರಾಷ್ಟ್ರಗಳು, ಸೋವಿಯತ್ ಒಕ್ಕೂಟ ಮತ್ತದರ ಮಿತ್ರರಾಷ್ಟ್ರಗಳು ಮತ್ತು "ಉಳಿದವರು". ನಾನು ಹುಟ್ಟಿದ್ದು 1955ರಲ್ಲಿ. ಆಗೆಲ್ಲ ನಾನೂ ಕೂಡ ಋಐಖಖಖಿ ಗಿಕಖಔಉ ಎಂದು ಕರೆಸಿಕೊಳ್ಳುತ್ತಿದ್ದ ನಮ್ಮ ಭಾಗಗಳು ಅಭಿವೃದ್ಧಿಶೀಲ ರಾಷ್ಟ್ರಗಳು, ಇಲ್ಲಿನ ಎಲ್ಲಾ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತಿದೆ, ನಮ್ಮ ಆಯುಃ ಪ್ರಮಾಣ ತೃತೀಯ ರಾಷ್ಟ್ರಗಳಿಗಿಂತಲೂ ಹೆಚ್ಚಾಗಿ ಇರುತ್ತದೆ ಎನ್ನುವುದನ್ನು ಕಲಿಯುತ್ತಲೇ ಬೆಳೆದೆ. ಆಗೆಲ್ಲ ತೃತೀಯ ರಾಷ್ಟ್ರಗಳೆಂದಾಕ್ಷಣ ನಾನು ಬೆಚ್ಚಿಬೀಳುತ್ತಿದ್ದೆ. ಆ ಬಡವರಿಂದ ತುಂಬಿದ, ಅನಕ್ಷರಸ್ಥ, ರೋಗಗ್ರಸ್ಥರ ರಾಷ್ಟ್ರಗಳ ಹೆಸರು ಕೇಳುತ್ತಿದ್ದಂತೆಯೇ ಹೆದರಿಕೆಯಾಗುತ್ತಿತ್ತು. ಅವೆಂದೂ ಆ ಕಷ್ಟಗಳಿಂದ ಹೊರಬರಲಾರವು ಎಂದೇ ನಂಬಿದ್ದೆ.
ಆದರೆ ಈಗ ಹೇಳುತ್ತಿದ್ದೇನೆ ಕೇಳಿ. 2035ರ ವೇಳೆಗೆ ಪ್ರಪಂಚದಲ್ಲಿ ಒಂದೇ ಒಂದು ಬಡರಾಷ್ಟ್ರವೂ ಇರುವುದಿಲ್ಲ!  1960ರ ವರೆಗೆ ಬಹುತೇಕ ಜಾಗತಿಕ ಆರ್ಥಿಕತೆ ಪಶ್ಚಿಮರಾಷ್ಟ್ರಗಳಲ್ಲಿತ್ತು. ಅಮೆರಿಕನ್ನರ ತಲಾ ವಾರ್ಷಿಕ ಆದಾಯ 15,000 ಡಾಲರ್ಗಳಷ್ಟಿತ್ತು. ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳ ಜನರ ವಾರ್ಷಿಕ ಆದಾಯ(ತಲಾ)ವಂತೂ ಅತಿ ಕೆಟ್ಟದಾಗಿತ್ತು. ಬ್ರೆಜಿಲ್: 1,982 ಡಾಲರ್, ಚೀನಾ: 928 ಡಾಲರ್, ಬೋಟ್ಸ್ವಾನಾ: 383 ಡಾಲರ್...ಹೀಗೆ.
ಇದು ನಿಜವೂ ಆಗಿತ್ತು. 1987ರಲ್ಲಿ ನಾನು ಮತ್ತು ನನ್ನ ಮಡದಿ ಮೆಲಿಂದಾ ಮೆಕ್ಸಿಕೋ ನಗರಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಬಡತನ ಪ್ರಮಾಣವನ್ನು ನೋಡಿ ಬೆಚ್ಚಿಬಿದ್ದೆವು. ಯಾವ ಮನೆಗೂ ನೀರಿನ ಸಂಪರ್ಕವಿರಲಿಲ್ಲ, ಬೈಕುಗಳ ಮೇಲೆ ಅಥವಾ ನಡೆದುಕೊಂಡು ಹೋಗಿಯೇ ದೂರದ ಸ್ಥಳಗಳಿಂದ ಜನ ನೀರು ಹೊತ್ತು ತರುತ್ತಿದ್ದರು. ಒಂದು ಕ್ಷಣಕ್ಕೆ ನಾವು ಗ್ರಾಮೀಣ ಆಫ್ರಿಕಾದಲ್ಲಿ ಇದ್ದೀವೋ ಹೇಗೆ ಎನ್ನುವಂತಾಗಿಬಿಟ್ಟಿತು.
ಆದರೆ ಇಂದು ಅದೇ ನಗರ ಅದ್ಭುತವಾಗಿ ಪರಿವರ್ತನೆಯಾಗಿದೆ. ಧೂಮ ಕವಿದ ಮಂಜಿನಿಂದ ಆವೃತವಾಗಿರುತ್ತಿದ್ದ ಅದರ ವಾತಾವರಣವೀಗ ಲಾಸ್ ಏಂಜಲಿಸ್ನಂತೆಯೇ ಶುಭ್ರವಾಗಿದೆ. ಗಗನಚುಂಬೀ ಕಟ್ಟಡಗಳು, ಹೊಸ ರಸ್ತೆಗಳು ಕಣ್ಣುಕುಕ್ಕಿಸುತ್ತಿವೆ. ಈಗಲೂ ಅಲ್ಲಿ ಸ್ಲಂಗಳಿವೆಯಾದರೂ, ಮಧ್ಯಮ ವರ್ಗದ ಜನರ ಸಂಖ್ಯೆ ಮಾತ್ರ ಹಿಂದಿಗಿಂತಲೂ ಹೆಚ್ಚಾಗಿದೆ. ಇದು ಪವಾಡವಲ್ಲದೇ ಮತ್ತೇನು?
ಇನ್ನು ಬ್ರೆಜಿಲ್, ಚೀನಾ, ಭಾರತದಂಥ ರಾಷ್ಟ್ರಗಳಲ್ಲೂ ಬಡತನದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. 1960ರ ನಂತರ ಚೀನಿಯರ ತಲಾ ವಾರ್ಷಿಕ ಆದಾಯ 8 ಪಟ್ಟು ಹೆಚ್ಚಾಗಿದ್ದರೆ, ಭಾರತೀಯರದ್ದು ನಾಲ್ಮಡಿಯಾಗಿದೆ. ಬೋಟ್ಸಾವಾನಾ ಅಂತೂ ತನ್ನ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಮೂಲಕ ಜನರ ವಾರ್ಷಿಕ ಆದಾಯ 30 ಪಟ್ಟುಹೆಚ್ಚಾಗುವಂತೆ ಮಾಡಿದೆ.  ಬಡರಾಷ್ಟ್ರಗಳು ಬಡತನದಲ್ಲೇ ಉಳಿಯುತ್ತವೆ ಎನ್ನುವ ಮಿಥ್ಯೆಯನ್ನು ಈ ರಾಷ್ಟ್ರಗಳು ಸುಳ್ಳು ಮಾಡುತ್ತಾ ಸಾಗಿವೆ. 1990ರ ನಂತರ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ಸದೃಢವಾಗತೊಡಗಿದವು. ಈ ಕಾರಣಕ್ಕಾಗಿಯೇ ಇಂದು ಕಡುಬಡವರ ಸಂಖ್ಯೆ ಅರ್ಧದಷ್ಟು ಕುಸಿದಿದೆ. ಆದರೆ ಇದಕ್ಕಾಗಿ ನಾವು ಸಂಭ್ರಮ ಪಡುವ ಹಾಗಿಲ್ಲ. ಏಕೆಂದರೆ, ಇಂದಿಗೂ ಪ್ರಪಂಚದಲ್ಲಿ ತೀವ್ರ ಬಡತನದಲ್ಲಿರುವವರ ಸಂಖ್ಯೆ 1 ಬಿಲಿಯನ್ನಷ್ಟಿದೆ.
ಏಷಿಯಾದ ಹುಲಿಗಳ ಪರಿಸ್ಥಿತಿ ಈಗ ಸುಧಾರಿಸಿರಬಹುದು, ಆದರೆ ಆಫ್ರಿಕಾ ಮಾತ್ರ ಎಂದಿನಂತೆಯೇ ಇರಲಿದೆ ಎಂದು ಕೆಲವರು ವಾದಿಸಬಹುದು. 50 ವರ್ಷಗಳ ಹಿಂದೆ ಆಫ್ರಿಕಾದ ಸ್ಥಿತಿ ಇನ್ನೂ ಶೋಚನೀಯವಾಗಿತ್ತು ಎನ್ನುವದನ್ನು ನಾವು ಗಮನಿಸಬೇಕಾಗುತ್ತದೆ. ಸಬ್ ಸಹಾರನ್ ಆಫ್ರಿಕಾದ ಪ್ರತಿ ವ್ಯಕ್ತಿಯ ಆದಾಯ ಈಗ ಹೆಚ್ಚಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಆಫ್ರಿಕಾ ಉನ್ನತಿ ಸಾಧಿಸುತ್ತಾ ಸಾಗಿದೆ. ಹೆಚ್ಐವಿಯಂಥ ಸಾಂಕ್ರಾಮಿಕ ರೋಗದ ನಡುವೆಯೂ ಅಲ್ಲಿನ ಮಹಿಳೆಯರ ಆಯುಷ್ಯ ಪ್ರಮಾಣ 41ರಿಂದ ಈಗ 57 ವರ್ಷಕ್ಕೇರಿದೆ. ಈಗಲ್ಲಿ ಬಹಳ ಕಡಿಮೆ ಜನರು ಹಸಿವಿನಿಂದಿದ್ದಾರೆ, ಉಳಿದವರಿಗೆ ಪೌಷ್ಠಿಕ ಆಹಾರ ದೊರೆಯುತ್ತಿದೆ. ಹೊಟ್ಟೆಗೆ, ಬಟ್ಟೆಗೆ, ವಿದ್ಯೆಗೆ ಅಲ್ಲೀಗ ಮೊದಲಿನಂತೆ ಅಭಾವವಿಲ್ಲ. ಹಾಗಿದ್ದ ಮೇಲೆ ಅಲ್ಲಿ ಸುಧಾರಣೆಯಾಗುತ್ತಿದೆ ಎಂದೇ ಅರ್ಥವಲ್ಲವೇ? ಸುಧಾರಣೆಯೊಂದೇ ಅಂತ್ಯವಲ್ಲ, ಆದರೆ ಅದೇ ಪ್ರಗತಿಯ ಬುನಾದಿಯಂತೂ ಹೌದು.   
ಬಡರಾಷ್ಟ್ರಗಳು ಎನ್ನುವ ಕ್ಲೀಷೆಯನ್ನು ಪಕ್ಕಕ್ಕಿಟ್ಟು, ಅವುಗಳನ್ನು ಮಧ್ಯಮ ಆದಾಯದ ರಾಷ್ಟ್ರಗಳು ಎಂದು ಕರೆಯುವುದು ಸರಿ. ಏಕೆಂದರೆ ದಕ್ಷಿಣ ಅಮೆರಿಕ, ಏಶಿಯಾ ಮತ್ತು ಕರಾವಳಿ ಆಫ್ರಿಕಾದ ರಾಷ್ಟ್ರಗಳೀಗ ಈ ಪಟ್ಟಿಯಲ್ಲಿ ಬರುವಂಥವು. ಮುಂದಿನ ವರ್ಷಗಳಲ್ಲಿ ನಿಸ್ಸಂಶಯವಾಗಿಯೂ ಅವು ಡಿಜಿಟಲ್ ಕ್ರಾಂತಿ, ಹೊಸ ಲಸಿಕೆಗಳ ಸಂಶೋಧನೆ ಮತ್ತು ಉತ್ತಮ ಬೀಜಾಭಿವೃದ್ಧಿಯಿಂದ ಲಾಭ ಪಡೆಯಬಲ್ಲವು. ಅಲ್ಲದೆ ಆ ಭಾಗಗಳಲ್ಲಿನ ಅಗಾಧ ಕಾರ್ಮಿಕ ಶಕ್ತಿ ಮತ್ತು ಅಭಿವೃದ್ಧಿಯಾಗುತ್ತಿರುವ ಶಿಕ್ಷಣ ವಲಯ ಹೊಸ ಹೂಡಿಕೆದಾರರನ್ನು ಆಕರ್ಷಿಸಬಲ್ಲದು/ ಆಕರ್ಷಿಸುತ್ತಿದೆ. ಆದರೆ ಈ ಬದಲಾವಣೆ ಯುದ್ಧ ಪೀಡಿತ ರಾಷ್ಟ್ರಗಳಲ್ಲಿ, ಮತ್ತು ಸುತ್ತಲೂ ಬರೀ ಭೂ ಪ್ರದೇಶ ಹೊಂದಿರುವ ಅಫ್ಘಾನಿಸ್ತಾನ ಮತ್ತು ಮಧ್ಯ ಆಫ್ರಿಕಾದ ರಾಷ್ಟ್ರಗಳಲ್ಲಿ ತುಸು ಕಷ್ಟ.  
ಮಿಥ್ಯೆ 2: ವಿದೇಶಿ ನೆರವೆನ್ನುವುದು ದುಂದು ವೆಚ್ಚ: ಅನ್ಯ ರಾಷ್ಟ್ರಗಳಿಗೆ ಧನ ಸಹಾಯ ಮಾಡುವುದರಲ್ಲಿ ಅರ್ಥವಿಲ್ಲ, ಆ ಹಣವೆಲ್ಲ ಉದ್ದೇಶಿತ ಕೆಲಸಕ್ಕೆ ವಿನಿಯೋಗವಾಗುವುದೇ ಇಲ್ಲ ಎನ್ನುವುದು ಹಲವರ ವಾದ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯೊಂದು, ಬ್ರಿಟನ್ನ ತೆರಿಗೆದಾರರಲ್ಲಿ ಅರ್ಧದಷ್ಟು ಮಂದಿ ಈ ಕಾರಣಕ್ಕಾಗಿಯೇ ತಮ್ಮ ತೆರಿಗೆ ಹಣ ವಿದೇಶಿ ನೆರವಿನ ರೂಪದಲ್ಲಿ ಹಂಚಿಕೆಯಾಗುವುದು ಬೇಡ ಎಂದು ಹೇಳುತ್ತಿದ್ದಾರಂತೆ. ಇಂಥ ಲೇಖನಗಳು ಜನರ ಹಾದಿ ತಪ್ಪಿಸುತ್ತವೆ.  ಇಲ್ಲೊಂದು ವಿಷಯವನ್ನು ಹೇಳಲು ಬಯಸುತ್ತೇನೆ. ಹಣ ವ್ಯರ್ಥವಾಗಬಾರದು ಎಂದರೆ, ಶ್ರೀಮಂತ ರಾಷ್ಟ್ರಗಳು ತಮ್ಮ ನೀತಿಗಳಲ್ಲಿ ಬದಲಾವಣೆ ತಂದುಕೊಳ್ಳಬೇಕು. ಕೃಷಿ ಸಬ್ಸಿಡಿಗಳನ್ನು ಆದಷ್ಟು ಕಡಿಮೆಗೊಳಿಸುವುದು ಉತ್ತಮ ನಡೆಯಾದೀತು. ಇನ್ನು ಬಡರಾಷ್ಟ್ರಗಳು ತಮಗೆ ದೊರೆತ ನೆರವಿನ ಹಣವನ್ನು ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣವಲಯಕ್ಕೆ ವಿನಿಯೋಗಿಸಬೇಕು.
ಮೆಲಿಂದಾ ಮತ್ತು ನಾನು ನಮ್ಮ ಫೌಂಡೇಷನ್ ಅನ್ನು ಶುರು ಮಾಡಿ 14 ವರ್ಷಗಳಾದವು. ಆಫ್ರಿಕಾ ಮತ್ತು ಏಶಿಯಾದ ರಾಷ್ಟ್ರಗಳಿಗೆ ನೆರವು ನೀಡಿರುವುದರಿಂದಾಗಿ ಅಲ್ಲಿ ಆಗುತ್ತಿರುವ ಬದಲಾವಣೆಯನ್ನು ನಾವು ಕಣ್ಣಾರೆ ಕಾಣುತ್ತಲೇ ಬಂದಿದ್ದೇವೆ. ಅಲ್ಲೆಲ್ಲೋ ಇರುವ ರವಾಂಡಾದ ಕಿಜಿಬಾ ಎಂಬ ಶಿಬಿರದಲ್ಲಿ ನಿಕುಜೆ ಅಜೀಜಾ ಎನ್ನುವಾತ ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿದ್ದಾನೆ, ಹೊಟ್ಟೆ ತುಂಬಾ ಊಟಮಾಡುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಆತನಿಗೆ ಅರಿವಿಲ್ಲದ ಯಾವುದೋ ರಾಷ್ಟ್ರದ ನೆರವು!
ಗ್ಲೋಬಲ್ ಫಂಡ್ನಂಥ ಸಂಸ್ಥೆಗಳು ಮಾನವ ಸಮಾಜಕ್ಕೆ ಮಾಡಿರುವ ಸೇವೆ ಅನನ್ಯವಾದದ್ದು. ದಶಕದ ಹಿಂದೆ ಮಲೇರಿಯಾ ರಾಷ್ಟ್ರವೆಂದೇ ಕುಖ್ಯಾತಿ ಪಡೆದಿದ್ದ ಕಾಂಬೋಡಿಯಾದಲ್ಲೀಗ ಮಲೇರಿಯಾ ಅಂದರೆ ಏನು ಎಂದು ಕೇಳುವಂಥ ವಾತಾವರಣ ನಿರ್ಮಾಣವಾಗಿದ್ದರೆ ಅದಕ್ಕೆ ಕಾರಣ ಅನ್ಯ ರಾಷ್ಟ್ರಗಳ ನೆರವು. ಈಗ ಅಲ್ಲಿನ ಜನರ ಗಮನ ರೋಗದಿಂದ ಆರೋಗ್ಯದೆಡೆಗೆ ಹರಿದಿದೆ, ಆರೋಗ್ಯವಂತ ಸಮಾಜ, ಶಿಕ್ಷಣದತ್ತ, ಶಿಕ್ಷಣದಿಂದ ಸದೃಢತೆಯತ್ತಾ ಸಾಗುತ್ತದೆ ಎನ್ನುವುದು ನನ್ನ ನಂಬಿಕೆ.
ಆದರೆ ನೆರವಿನ ಹಣವನ್ನು ಆ ರಾಷ್ಟ್ರಗಳು ಹೇಗೆ ಬಳಸಿಕೊಳ್ಳುತ್ತವೆ ಎನ್ನುವುದೂ ಮುಖ್ಯವಾಗುತ್ತದೆ. ಅಲ್ಲಿನ ಸರ್ಕಾರಗಳು ಸರಿಯಾದ ನೀತಿಯನ್ನು ರೂಪಿಸಬೇಕು. ಕೆಳ ಮತ್ತು ಮಧ್ಯಮ ಆದಾಯದ ದೇಶಗಳು ಆದಷ್ಟು ಸಬ್ಸಿಡಿ(ಆಹಾರ/ ಇಂಧನ) ಕೊಡುವ ಕೆಲಸವನ್ನು ಕಡಿಮೆ ಮಾಡಿ, ಜನರಿಗೆ ಉದ್ಯೋಗಾವಕಾಶಗಳನ್ನು ರೂಪಿಸುವಂಥ, ಅಂದರೆ ಹೂಡಿಕೆಗೆ ಅನುವಾಗುವಂಥ ನಿಯಮಗಳನ್ನು ಜಾರಿ ಮಾಡಬೇಕು.
ಮಿಥ್ಯೆ 3: ಜೀವಗಳನ್ನು ಉಳಿಸಿದರೆ ಜನಸಂಖ್ಯೆ ಅತಿಯಾಗುವ ಅಪಾಯವಿದೆ!: ನಮ್ಮ ಫೌಂಡೇಷನ್(ಗೇಟ್ಸ್)ನ ಬ್ಲಾಗ್ಗಳಲ್ಲಿ, ಫೇಸ್ಬುಕ್ ಗೋಡೆಯ ಮೇಲೆ ಜನರು ಈ ರೀತಿಯ ಸಂದೇಶಗಳನ್ನು ಹಲವಾರು ಬಾರಿ ಬರೆದಿದ್ದಾರೆ. ಹೆಚ್ಚುತ್ತಿರುವ ಮಾನವ ಸಂತತಿಯನ್ನು ತಡೆದುಕೊಳ್ಳುವ ಶಕ್ತಿ ಭೂಮಿಗೆ ಇದೆಯೋ ಇಲ್ಲವೋ ಎನ್ನುವ ಭಯ ಅವರಿಗಿರುವುದು ಒಳ್ಳೆಯದೇ. ಆದರೆ ಇಂಥ ಯೋಚನೆಯಿಂದಾಗಿಯೇ ಪ್ರಪಂಚವಿಂದು ಹೆಚ್ಚು  ಸಮಸ್ಯೆಗೆ ಸಿಲುಕುತ್ತಿರುವುದು! ಮುಂದೆ ಆಹಾರ ಕೊರತೆಯುಂಟಾಗಿ ತಮಗೆ ತೊಂದರೆಯಾದರೆ ಹೇಗೆ ಎನ್ನುವ ಸ್ವಾರ್ಥವೇ ಇಂಥ ಮಾತಿಗೆ ಬುನಾದಿ! ಎಲ್ಲರೂ ಹೀಗೇ ಯೋಚನೆ ಮಾಡುತ್ತಾ ಹೋದರೆ ಮಾನವೀಯತೆ ಎನ್ನುವ ಪದಕ್ಕೆ ಅರ್ಥವೇ ಇರುವುದಿಲ್ಲ ಅಲ್ಲವೇ?
ಇಲ್ಲೊಂದು ಉದಾಹರಣೆ ಕೊಡಬಯಸುತ್ತೇನೆ. ಅಫ್ಘಾನಿಸ್ತಾನದಲ್ಲಿ ಶಿಶುಮರಣ ಪ್ರಮಾಣ ಅತ್ಯಧಿಕವಾಗಿದೆ. ಒಬ್ಬ ಅಫ್ಘನ್ ಮಹಿಳೆಗೆ ಸುಮಾರು 7 ಮಕ್ಕಳಿರುತ್ತವೆ. ಈ ಕಾರಣಕ್ಕಾಗಿಯೇ, ಅಫ್ಘಾನಿಸ್ತಾನದಲ್ಲಿ ಹುಟ್ಟಿದ ಮಕ್ಕಳಲ್ಲಿ ಸುಮಾರು 10 ಪ್ರತಿಶತ ಮಕ್ಕಳು ಮರಣಹೊಂದಿದರೂ ಅಲ್ಲಿನ ಜನಸಂಖ್ಯೆ ಹೆಚ್ಚುತ್ತಲೇ ಇದೆ.
ಶಿಶು ಮರಣ ಪ್ರಮಾಣ ಕಡಿಮೆಯಾಯಿತೆಂದರೆ, ಆಗ ಪೋಷಕರು ಚಿಕ್ಕ ಕುಟುಂಬಗಳತ್ತ ಮನಸ್ಸು ಮಾಡುತ್ತಾರೆ! ಉದಾಹರಣೆಗೆ ಥಾಯ್ಲ್ಯಾಂಡ್. ಅಲ್ಲಿ ಶಿಶುಮರಣ ಪ್ರಮಾಣ ಕಡಿಮೆಯಾಗುತ್ತಾ ಸಾಗಿದಂತೆ, ಒಂದೊಮ್ಮೆ ಆರು- ಏಳು ಮಕ್ಕಳನ್ನು ಹಡೆಯುತ್ತಿದ್ದ ಥಾಯ್ ಮಹಿಳೆಯರು ಈಗ ಹೆಚ್ಚೆಂದರೆ 2-3 ಮಕ್ಕಳನ್ನು ಹಡೆಯುತ್ತಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾಯಿತೆಂದರೆ, ಪೋಷಕರಿಗೆ ಖರ್ಚೂ ಕಡಿಮೆಯಾಗಿ, ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತದೆ. ಇನ್ನು ಈಗ ಬಹುತೇಕ ರಾಷ್ಟ್ರಗಳು ಮಕ್ಕಳಿಗೆ ಉಚಿತ ಶಿಕ್ಷಣವನ್ನೂ ನೀಡುತ್ತಿವೆ. ಬಡತನವನ್ನು ಹೋಗಲಾಡಿಸುವ ಪ್ರಮುಖ ಅಸ್ತ್ರ ಶಿಕ್ಷಣ. ಈ ಕಾರಣಕ್ಕಾಗಿಯೇ ನಾನು  ಭವಿಷ್ಯ ಭದ್ರವಾಗಿರಬೇಕಾದರೆ, ಬಡವರ ಮೇಲೆ ಹೂಡಿಕೆ ಮಾಡಬೇಕು ಎಂದು ಹೇಳುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.