ಕ್ಷಮಿಸಿ ಬಿಲ್ಗೇಟ್ಸ್, ಬಡತನದ ಬಗ್ಗೆ ನಿಮ್ಮ ವ್ಯಾಖ್ಯಾನ ಒಪ್ಪಲಾಗದು...
ಮೈಕ್ರೊಸಾಫ್ಟ್ ದಿಗ್ಗಜ, ಜಗತ್ತಿನ ಅಗ್ರಶ್ರೇಣಿಯ ಶ್ರೀಮಂತ, ಕೊಡುಗೈ ದಾನಿ ಎಂದೇ ಗುರುತಿಸಿಕೊಂಡಿರುವ ಬಿಲ್ಗೇಟ್ಸ್ ಅವರು ಬಡತನದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದನ್ನು ನಿನ್ನೆಯ ಪುಟದಲ್ಲಿ ಓದಿರುತ್ತೀರಿ. ಅವರು ತಮ್ಮ ಪತ್ನಿ ಜತೆಗೂಡಿ ಬರೆದಿದ್ದ, 'ಬಡತನದ ಮೂರು ಮಿಥ್ಯೆಗಳು' ಎಂಬ ಬ್ಲಾಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪ್ರತಿಕ್ರಿಯೆ ವಿಮರ್ಶೆಗಳೂ ಬಂದಿವೆ. ಬಿಲ್ಗೇಟ್ಸ್ ತೊಡಗಿಸಿಕೊಂಡಿರುವ ಸಾಮಾಜಿಕ ಸೇವೆ, ಬಡತನ ನಿರ್ಮೂಲನೆಯ ಕಾರ್ಯಗಳ ಕಾಳಜಿ ಬಗ್ಗೆ ಎರಡು ಮಾತಿಲ್ಲವಾದರೂ ವಿದೇಶಿ ಫಂಡ್ಗಳ ಮೂಲಕ ಬಡತನ ಹೋಗಲಾಡಿಸಿಬಿಡುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ ಎಂಬ ಟೀಕೆಗಳೂ ವ್ಯಕ್ತವಾಗಿವೆ. ಜಾಗತಿಕ ವಿಸ್ತಾರದಲ್ಲಿ ಸಿರಿತನ-ಬಡತನ ಸಿದ್ಧಾಂತಗಳ ಬಗ್ಗೆ ವಿವರವಾದ ಚರ್ಚೆ ಮಾಡುವುದಕ್ಕೆ ಬಿಲ್ಗೇಟ್ಸ್ ಬ್ಲಾಗ್ ಮುನ್ನುಡಿ ಹಾಡಿದಂತಿದೆ. ಅಮೆರಿಕದ ವಿಶ್ವವಿದ್ಯಾಲಯದ ಮುಖ್ಯಸ್ಥರೊಬ್ಬರು ಬಿಲ್ಗೇಟ್ಸ್ ಲಹರಿಯನ್ನು ಹೇಗೆ ವಿಮರ್ಶಿಸಿದ್ದಾರೆ ನೋಡೋಣ...
----
ಎಲ್ಲವನ್ನೂ ಗುಲಾಬಿ ಬಣ್ಣದ ಚೆಂದದ ಕನ್ನಡಕದಲ್ಲಿಯೇ ನೋಡುವ ತಂತ್ರಜ್ಞಾನವೊಂದನ್ನು ಸಿದ್ಧಿಸಿಕೊಂಡಿರುವ ಕೀರ್ತಿ ಜಾಗತಿಕ ಇತಿಹಾಸದಲ್ಲಿ ಬಿಲ್ಗೇಟ್ಸ್ ಅವರಿಗೆ ಸಲ್ಲಲಿದೆಯೇನೋ. ಅವರು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ. ಕಾರ್ಲೋಸ್ ಸ್ಲಿಮ್ ಹೆಲು ಎಂಬ ವ್ಯಕ್ತಿಯ ಶ್ರೀಮಂತಿಕೆಯೊಂದಿಗೆ ದಿನನಿತ್ಯವೂ ಹೋಲಿಕೆಗೆ ಇಟ್ಟ ಸಂದರ್ಭದಲ್ಲಿ ಬಿಲ್ಗೇಟ್ಸ್ ಅವರ ಈ ಸ್ಥಾನಮಾನ ಆಗೀಗ ಆಚೀಚೆಯಾಗುತ್ತಿರುತ್ತದೆ. ಅದೇನೆ ಇರಲಿ, ಹೀಗೆ ಜಗತ್ತಿನ ಅಗ್ರಗಣ್ಯ ಶ್ರೀಮಂತರಾಗಿರುವುದರಿಂದ ಅವರಿಗೆ ಜಗತ್ತಿನ ಹೆಚ್ಚಿನ ಜನಸಂಖ್ಯೆಯನ್ನು ಆವರಿಸಿರುವ ಧೂಳೆದ್ದು ಹೋಗಿರುವ ಚಿತ್ರಣವನ್ನು ನೋಡಬೇಕಾಗಿ ಬರುವುದಿಲ್ಲ. ನಮ್ಮ ಗ್ರಹದಲ್ಲಿ ಬಡತನದಿಂದ ಬಳಲುತ್ತಿರುವ ಅಸಂಖ್ಯ ಜನಸಂಖ್ಯೆಗೆ ಒಂದುರೀತಿಯಲ್ಲಿ ಬರೆ ಎಳೆದಂತೆ ಅವರು ಹೇಳಿದ್ದಾರೆ- '2035ರ ವೇಳೆಗೆ ಜಗತ್ತಿನಲ್ಲಿ ಯಾವ ರಾಷ್ಟ್ರವೂ ಬಡತನದಲ್ಲಿ ಉಳಿದಿರುವುದಿಲ್ಲ' ಎಂದು.
ದಾವೋಸ್ನಲ್ಲಿ ಉಳ್ಳವರ ವೈಭವದ ವೇದಿಕೆ ಎಂದಾಗಿರುವ 'ವರ್ಲ್ಡ್ ಎಕನಾಮಿಕ್ ಫೋರಮ್' ಸಂಭ್ರಮದಲ್ಲಿ ಅವರು ತಮ್ಮ ಮಡದಿ ಮೆಲಿಂಡಾ ಜತೆಗೂಡಿ ವಾರ್ಷಿಕ ಪತ್ರವೊಂದನ್ನು ಲೋಕದೆದುರು ತೆರೆದಿಟ್ಟರು. ಅದರಲ್ಲಿ ಅವರು ಜಗತ್ತಿನ ಬಡವರ ಪ್ರಗತಿಗೆ ಅಡ್ಡಗಾಲಾಗುತ್ತಿರುವ ಮೂರು 'ಮಿಥ್ಯೆ'ಗಳ ಬಗ್ಗೆ ಮಾತನಾಡಿದ್ದಾರೆ.ಬನ್ನಿ, ಅದೋ ಆ ಕಾಮನಬಿಲ್ಲಿನ ಮೇಲೆ ಹೋಗಿ ಕುಳಿತುಬಿಡೋಣ ಎಂಬಂಥ ಉತ್ಸುಕ ಧಾಟಿಯ ಬರಹವದು. ಬಡ ಜನತೆ ಬಗ್ಗೆ ನಿರಾಸೆಯಿಂದ ಮಾತನಾಡುವವರೆಲ್ಲರನ್ನು ನಾವು ಬದಿಗಿರಿಸಿದ್ದೇ ಆದರೆ ಬಡತನ ಎಂಬುದು ಲ್ಯಾಂಡ್ಲೈನ್ ಫೋನುಗಳ ರೀತಿಯೇ ಮೈಕ್ರೊಸಾಫ್ಟ್ ಯುಗಕ್ಕೂ ಹಿಂದಿನ ಸ್ಮಾರಕವಾಗಿತ್ತು ಎಂದು ನಂಬಿಸುವ ಯತ್ನದಂತಿದೆ ಅವರ ವಾದ.
ಕಾಕತಾಳೀಯ ಎಂಬಂತೆ, ಬಡತನದ ಬಗ್ಗೆ ಬಿಲ್ಗೇಟ್ಸ್ ಅವರು ತಮ್ಮ ಅಭಿಪ್ರಾಯವನ್ನು ಹೊರಹಾಕುವುದಕ್ಕೆ ಮುಂಚೆ, ದಾವೋಸ್ ಸಭೆಗೆ ಪೂರ್ವಭಾವಿಯಾಗಿ ಆಕ್ಸ್ಫಾಮ್ ಅಧ್ಯಯನ ತಂಡವು ವರದಿಯೊಂದನ್ನು ಬಿಡುಗಡೆ ಮಾಡಿತು. ಅದು ಬಿಚ್ಚಿಟ್ಟ ಸತ್ಯ ಹೀಗಿತ್ತು: ಕೆಳಸ್ತರದಲ್ಲಿ ಹೈರಾಣಾಗಿರುವ 3.5 ಬಿಲಿಯನ್ ಜನರ ಒಟ್ಟೂ ಸಂಪತ್ತಿನ ಪ್ರಮಾಣ ಎಷ್ಟಿದೆಯೋ ಆ ಪ್ರಮಾಣದ ಸಂಪತ್ತು ಭೂಮಿಯ 85 ಮಂದಿಯಲ್ಲಿ ಕೇಂದ್ರೀಕೃತವಾಗಿದೆ. (85 ಮಂದಿಯ ಪಟ್ಟಿ ನಿಮ್ಮ ಹೆಸರಿನಿಂದಲೇ ಆರಂಭವಾಗುತ್ತದೆ ಮಿಸ್ಟರ್ ಗೇಟ್ಸ್). ಆಕ್ಸ್ಫಾಮ್ನ ಈ ವರದಿ ಬಿಲ್ಗೇಟ್ಸ್ ಅವರಿಗೆ ಸರಿಬಂದಿಲ್ಲ ಎಂಬುದು ಸ್ಪಷ್ಟ. ಈ ವರದಿ ಆಧಾರದಲ್ಲಿ ಸಂಪತ್ತಿನ ಅಸಮಾನ ಹಂಚಿಕೆಯ ಬಗ್ಗೆ 'ದ ಎಕನಾಮಿಸ್ಟ್'ನ ಸಂದರ್ಶನದಲ್ಲಿ ಅವರ ಗಮನ ಸೆಳೆದಾಗ ಗೇಟ್ಸ್ ಹೇಳಿದ್ದು- 'ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ಸಂಪತ್ತನ್ನು ಆಕ್ಸ್ಫಾಮ್ ಎಣಿಸಿರುವ ರೀತಿಯೇ ಸೂಕ್ತವಾಗಿಲ್ಲ. ಏಕೆಂದರೆ ನನ್ನ ಸಂಪತ್ತು ವ್ಯಯವಾಗುತ್ತಿರುವುದು ಬಡತನ ನಿರ್ಮೂಲನೆಗಾಗಿ. ನೀವು ಕೆಟ್ಟದ್ದನ್ನೇ ನಂಬುತ್ತ ಹೋದರೆ ಯಾವುದು ಒಳ್ಳೆಯದು ಎಂಬುದನ್ನು ಕಂಡುಕೊಳ್ಳುವುದಕ್ಕೇ ಆಗದು.'
ವಿಮರ್ಶೆಯ ಸಂದರ್ಭದಲ್ಲಿ ಬಿಲ್ಗೇಟ್ಸ್ ಅವರಿಗೆ ಒಂದು ಶ್ರೇಯಸ್ಸನ್ನಂತೂ ನೀಡಲೇಬೇಕು. ಅವರೊಬ್ಬ ಅದ್ಭುತ ದಾನಿ. ಅವರ ಔದಾರ್ಯ ಇತರ ಸಿರಿವಂತ ಜನರಿಗೆ ಮಾದರಿಯಾಗಬೇಕಾದದ್ದು. ಹೀಗಾಗಿ 'ಬಡತನ ಕೊನೆಗೊಳ್ಳಲಿದೆ' ಎಂಬ ಅವರ ಅತಿ ಉತ್ಸಾಹವು ಈ ನಿಟ್ಟಿನಲ್ಲಿ ಗೇಟ್ಸ್ ಫೌಂಡೇಷನ್ ಮಾಡುತ್ತಿರುವಂಥದೇ ಕೆಲಸಗಳನ್ನು ಇತರರೂ ಮಾಡುವಂತೆ ಉತ್ತೇಜಿಸುವುದೂ ಆಗಿದ್ದಿರಬಹುದು. ಶಿಶು ಮರಣವನ್ನು ತಗ್ಗಿಸಿದ ಔಷಧಗಳ ಬಳಕೆ, ಪೊಲಿಯೋದ ಪರಿಣಾಮಕಾರಿ ಚಿಕಿತ್ಸೆ, ಮಲೇರಿಯಾ ಮತ್ತು ಏಡ್ಸ್ ನಿರ್ಮೂಲನೆಯಲ್ಲಿ ಸ್ವಯಂಸೇವಾ ಸಂಸ್ಥೆಗಳು ವಹಿಸಿದ ಪಾತ್ರದ ಬಗ್ಗೆ ಅವರು ಹೇಳಿದ್ದಾರೆ. ಖಂಡಿತ ಅವೆಲ್ಲವೂ ಪ್ರಶಂಸಾರ್ಹವೇ.
ಇವೆಲ್ಲದರ ನಡುವೆಯೂ ಬಿಲ್ಗೇಟ್ಸ್ ಅವರು ಭೂಮಿಯ ಶ್ರೀಮಂತ ರಾಷ್ಟ್ರಗಳಲ್ಲೂ ಬಡತನ ಅನುಭವಿಸುತ್ತಿರುವವರ ಬಗ್ಗೆ, ಬಡತನದ ಬವಣೆಗಳ ಬಗ್ಗೆ ಕುರುಡಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಬಡತನದಿಂದ ಪಾರಾಗಿ ಬಂದಿರುವ ರಾಷ್ಟ್ರಗಳಲ್ಲಿ ಚೀನಾದ ಯಶೋಗಾಥೆ ಅದ್ಭುತವಾದದ್ದು ಎಂಬ ಉದಾಹರಣೆಯನ್ನು ಅವರು ಕೊಡುತ್ತಾರೆ. ಆದರೆ ಚೀನಾದಲ್ಲಿ ನಿರಂತರವಾಗಿ ಆಗುತ್ತಿರುವ ಮಾನವ ಹಕ್ಕುಗಳ ದಮನವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ತಂತ್ರಜ್ಞಾನ ಉದ್ದಿಮೆಯ ಬಗ್ಗೆ ಮಾತನಾಡುವಾಗ, ಅದು ಚೀನಾದಲ್ಲಿ ಎಷ್ಟು ಶ್ರೀಮಂತರನ್ನು ಹುಟ್ಟಿಸಿದೆಯೋ ಆ ಒಂದು ಪ್ರಕ್ರಿಯೆ ಸಾಧ್ಯವಾಗಿರುವುದು ಚೀನಾದ ಅಸುರಕ್ಷಿತ ಕಾರ್ಖಾನೆಗಳಲ್ಲಿ ಕನಿಷ್ಠ ಬಿಲ್ಲೆಗೆ ದುಡಿದ ಕಾರ್ಮಿಕರ ಬೆವರಿನಲ್ಲಿ ಎಂಬುದನ್ನು ಮರೆಯುವ ಹಾಗಿಲ್ಲ.
ಅಮೆರಿಕದ ಶೈಕ್ಷಣಿಕ ಸುಧಾರಣೆ ಚಳವಳಿಯಲ್ಲಿ ಗೇಟ್ಸ್ ಫೌಂಡೇಶನ್ನ ಪಾತ್ರ ದೊಡ್ಡದಿದೆ. ಆದರದು ಶಿಕ್ಷಕರನ್ನು ದೂಷಿಸುವ, ಶಾಲೆಗಳನ್ನು ಮುಚ್ಚುವ ತಂತ್ರದ ಭಾಗವಾಗುತ್ತಿದೆ. ಮಕ್ಕಳಿಗೆ ಕಲಿಯುವ ಸಾಮರ್ಥ್ಯ ಎಷ್ಟರಮಟ್ಟಿಗೆ ಸಿಗುತ್ತದೋ ಆ ಆಧಾರದಲ್ಲಿ ಬಡತನದ ಪರಿಣಾಮಗಳು ರೂಪುಗೊಳ್ಳುತ್ತವೆ ಎಂಬುದನ್ನದು ಅಲಕ್ಷಿಸಿದಂತಿದೆ. ಭೂಖಂಡದ ಸಿರಿವಂತ ಪ್ರದೇಶ ಎಂದು ಪರಿಗಣಿತವಾಗುವ ಕೊಲಂಬಿಯಾದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ದೊರಕಿಸಿಕೊಳ್ಳುವುದರಲ್ಲಿ ಬಡತನವೇ ವಿದ್ಯಾರ್ಥಿಗಳಿಗೆ ಅಡ್ಡಗಾಲಾಗುತ್ತಿದೆ. ಈ ಶ್ರೀಮಂತ ನಗರದ ಕಾಲುಭಾಗ ಮಕ್ಕಳು ಬಡತನ, ಹಸಿವು ಮತ್ತು ವಸತಿಹೀನ ಸ್ಥಿತಿಯಲ್ಲಿ ಬಳಲುತ್ತಿದ್ದಾರೆ. ಹಸಿದ, ಮನೆಯಿಲ್ಲದ, ರೋಗಿಷ್ಟ, ನಿರ್ಲಕ್ಷಿತ ಹಾಗೂ ಮಾನಸಿಕವಾಗಿ ಘಾಸಿಗೊಳಗಾದ ಮಕ್ಕಳಿಗೆ ಜಗತ್ತಿನ ಯಾವ ಶಿಕ್ಷಣ ಮೌಲ್ಯವರ್ಧನೆಯ ಯೋಜನೆಗಳೂ ತಾಕುವುದಿಲ್ಲ. ಇಂಥ ಮಕ್ಕಳಿಗೆ ಇರುವುದು ಸಿಂಗಲ್ ಪೇರಂಟ್ಸ್. ಅವರೂ ಎಂಥ ಸ್ಥಿತಿಯಲ್ಲಿ ಮಕ್ಕಳನ್ನು ಮಾಡಿಕೊಂಡಿದ್ದಾರೆಂದರೆ ಖುದ್ದು ಅವರೇ ಇನ್ನೂ ಸಂಪೂರ್ಣವಾಗಿ ಯೌವನಕ್ಕೆ ಕಾಲಿರಿಸಿಲ್ಲ! ನನಗನ್ನಿಸುತ್ತದೆ, ಗೇಟ್ಸ್ ಫೌಂಡೇಶನ್ ಶಿಕ್ಷಣ ಸುಧಾರಮೆಗಾಗಿ ವ್ಯಯಿಸುತ್ತಿರುವ ಹಣದ ದೊಡ್ಡ ಭಾಗವನ್ನು ಇಲ್ಲಿನ ಮಕ್ಕಳ ನಿಗಾ ಕೇಂದ್ರಗಳಿಗೆ, ಆರೋಗ್ಯ ಕೇಂದ್ರಗಳಿಗೆ ಹಾಗೂ ಇಂಥ ಮಕ್ಕಳ ಪಾಲಕರ ಸಾಕ್ಷರತೆಗೆ ಎತ್ತಿಡಬೇಕಾಗಿದೆ. ಆಗಮಾತ್ರ ಅವರು ಮುಂದಿನ ಪೀಳಿಗೆಯನ್ನು ಓದಿಸುವುದಕ್ಕೆ ಶಕ್ಯರಾಗುತ್ತಾರೆ.
ಸಿಬಿಎಸ್ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಗೇಟ್ಸ್ ಅವರು, ನಾವು ಹೆಚ್ಚಿನ ಸಂದರ್ಭಗಳಲ್ಲಿ ವಿನಾಶಗಳನ್ನೇ ವೈಭವೀಕರಿಸಿ ಯಶಸ್ಸನ್ನು ನೋಡುವುದಕ್ಕೆ ವಿಫಲರಾಗುತ್ತೇವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ. ಆದರೆ ಬಿಲ್ಗೇಟ್ಸ್ ಅವರ ಅತಿ ಆಶಾವಾದದ ಮಾತುಗಳು ಜಗತ್ತಿನಾದ್ಯಂತ ಬದುಕು ಕಟ್ಟಿಕೊಳ್ಳುವುದಕ್ಕೆ ಮೂಲ ನೆಲೆಯೇ ಸಿಗದೆ ಚಂಡಮಾರುತ, ಭೂಕಂಪ, ಪ್ರವಾಹ, ಬರ, ಹಸಿವು, ಶೋಷಣೆ, ಜನಾಂಗೀಯ ಕದನ, ಉಗ್ರರು ಮತ್ತು ಸರ್ವಾಧಿಕಾರಿಗಳ ನಿರ್ದಯ ಹೊಡೆತಗಳಿಗೆ ನಲುಗುತ್ತಿರುವವರನ್ನು ಅಣುಕಿಸಿದಂತಾಗುವುದಿಲ್ಲವೇ ಎಂದು ನಾನು ಭಯಗೊಂಡಿದ್ದೇನೆ.
ಮೈಕ್ರೋಸಾಫ್ಟ್ ಯಶಸ್ಸಿನ ನಂತರದ ದಿನಗಳನ್ನು ಬಿಲ್ಗೇಟ್ಸ್ ಅವರು ಈ ಪ್ರಥ್ವಿಯಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೇ ವ್ಯಯಿಸುತ್ತಿದ್ದಾರೆ. ಆದರೆ ಅವರ ಒಳ್ಳೆಯ ಉದ್ದೇಶದ ಹುರುಪು ಮತ್ತು ಜಗತ್ತಿನಲ್ಲಿ ಅವರಿಗಿರುವ ಸ್ಥಾನಮಾನಗಳು ಸಾಮಾನ್ಯರು ಪ್ರತಿದಿನದ ಹೋರಾಟದಲ್ಲಿ ಎದುರಿಸುವ ಬಡತನವನ್ನು ಅರ್ಥಮಾಡಿಕೊಳ್ಳುವುದಕ್ಕೆ ಬಿಟ್ಟಿಲ್ಲ. ದಾವೋಸ್ನ ವೈಭವದ ವೇದಿಕೆ ಮೇಲೆ ಬಣ್ಣದ ಕನ್ನಡಕ ಹಾಕಿ ಕುಳಿತ ಅವರಿಗೆ ಪ್ರಪಂಚದ ಹಳ್ಳಿಮೂಲೆಯ ಬವಣೆಗಳು ದೃಷ್ಟಿಯಿಂದ ತಪ್ಪಿಸಿಕೊಂಡಿವೆ. ಆ ವೇದಿಕೆಯನ್ನು ಇಳಿದು ಬಂದರೆ 3.5 ಬಿಲಿಯನ್ ಜನರ ಭಯಾನಕ ತಲ್ಲಣಗಳು ಕಣ್ಣಿಗೆ ಕಾಣಬಹುದೇನೋ.
-ಪೆಟ್ರಿಶಿಯಾ ಮೆಕ್ಗೈರ್
ಟ್ರಿನಿಟಿ ವಾಷಿಂಗ್ಟನ್ ವಿವಿಯ ಅಧ್ಯಕ್ಷೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

