ಅಂಕಣಗಳು

ಕುಮಾರವ್ಯಾಸ ಪ್ರಶಸ್ತಿ ಇದು ತಾರತಮ್ಯವಲ್ಲವೇ?

Published On :

ಇದು ಹಿರಿಯ ಗಮಕ ಕಲಾವಿದರೊಬ್ಬರು ಸಲ್ಲಿಸಿರುವ ಆಕ್ಷೇಪ. ಹೆಸರು ಉಲ್ಲೇಖಿಸಿದಾಗ ಈ ಬಗ್ಗೆ ವಿಷಯಾಧಾರಿತ ಚರ್ಚೆ ಆಗುವುದು ಬಿಟ್ಟು ವೈಯಕ್ತಿಕ ನೆಲೆಯ ವಾಗ್ವಾದವಾಗುತ್ತದೆ ಎಂಬ ಕಾರಣದಿಂದ ಅವರು ಅನಾಮಧೇಯರಾಗಿರಲು ಬಯಸಿದ್ದಾರೆ.
***
ಮಂಗಳವಾರ ಪ್ರಕಟವಾದ ವಿವಿಧ ಪ್ರಶಸ್ತಿಗಳ ಘೋಷಣೆಯ ಸುದ್ದಿ ಓದಿ ದಿಗ್ಭ್ರಮೆಯಾಯಿತು. ಅದರಲ್ಲಿ ಪ್ರತಿಷ್ಠಿತ "ಕುಮಾರ ವ್ಯಾಸ ಪ್ರಶಸ್ತಿ"ಯನ್ನು ಮತ್ತೂರಿನ ವೇ॥ಬ್ರ॥ ಮಾರ್ಕಂಡೇಯ ಅವಧಾನಿಗಳಿಗೆ ನೀಡಲಾಗಿದೆ ಎನ್ನುವ ವಿಷಯ ಓದಿದ ಮೇಲಂತೂ ಆಶ್ಚರ್ಯವೇ ಆಯಿತು. ನಿಜ. ಅವಧಾನಿಗಳು ಉತ್ತಮ ವ್ಯಾಖ್ಯಾನಕಾರರು. ಸಂಸ್ಕೃತ ವಿದ್ವಾಂಸರು. ವಯಸ್ಸಿನಲ್ಲೂ ಹಿರಿಯರು. ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ನಾಲ್ಕನೆಯ ಗಮಕ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೂ ಪಾತ್ರರಾದವರು. ಆದರೆ ಪ್ರಶಸ್ತಿಯ ತಾರತಮ್ಯದ ಬಗ್ಗೆ ಆಕ್ಷೇಪವಿದೆ.
ಕುಮಾರವ್ಯಾಸ ಪ್ರಶಸ್ತಿಯನ್ನು ಸರ್ಕಾರ ಈಗ್ಗೆ ನಾಲ್ಕು ವರ್ಷಗಳ ಹಿಂದೆ ಘೋಷಿಸಿತು. ಆಗ ಪ್ರಶಸ್ತಿ ನೀಡುವ ಬಗ್ಗೆ ಒಂದು ರೂಪರೇಷೆಯನ್ನು ಹಾಕಿತು. ಒಂದು ವರ್ಷ ಒಬ್ಬ ವಾಚನಕಾರರಿಗೆ, ಮತ್ತೊಂದು ವರ್ಷ ಒಬ್ಬ ವ್ಯಾಖ್ಯಾನಕಾರರಿಗೆ ನೀಡಬೇಕೆಂಬ ನಿಬಂಧನೆಯನ್ನೂ ಜಾರಿಗೆ ತಂದಿತು.
ಮೊದಲ ಪ್ರಶಸ್ತಿಯನ್ನು ಘೋಷಿಸಲು ಒಂದು ಸಮಿತಿಯನ್ನು ರಚಿಸಿ ಹೊಸಹಳ್ಳಿಯ ವ್ಯಾಖ್ಯಾನಕಾರ ವಿ॥ ರಾಜಾರಾಮಮೂರ್ತಿ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿತು. ಉಳಿದ ಸದಸ್ಯರ ಬಗ್ಗೆ ತಿಳಿಯಲಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕ ಗಮಕ ಕಲಾ ಪರಷತ್ತಿನ ಸಲಹೆ ಸಹಕಾರ ಪಡೆದಿತ್ತೇ ಎನ್ನುವುದು ಪ್ರಶ್ನಾರ್ಹ. ನಿರೀಕ್ಷಿಸಿದಂತೆ ಪ್ರಶಸ್ತಿ, ಶಿವಮೊಗ್ಗ ಜಿಲ್ಲೆಯ ಹೊಸಹಳ್ಳಿಯ ಪಾಲಾಯಿತು. ಮುಂದಿನ ವರ್ಷದ ಸರದಿ ವ್ಯಾಖ್ಯಾನಕಾರರಿಗೆ.
ಆಗ ಪ್ರಶಸ್ತಿ ಕೊಡುವ ಬಗ್ಗೆ ಯಾರಿಗೆ ಕೊಡಬಹುದು ಎಂಬ ಬಗ್ಗೆ ನನಗೊಂದು ಪತ್ರ ಬಂತು. ಆ ಪತ್ರದಲ್ಲಿ ನಾನು ಮೈಸೂರಿನ ಹಿರಿಯ ವ್ಯಾಖ್ಯಾನಕಾರರೊಬ್ಬರನ್ನು ಹೆಸರಿಸಿ ಅವರು ಸೂಕ್ತ ಅಭ್ಯರ್ಥಿ ಎಂದು ತಿಳಿಸಿದ್ದೇ ಅಲ್ಲದೇ ಒಂದು ಪ್ರಶಸ್ತಿಯನ್ನು ಒಂದು ಜಿಲ್ಲೆಗೆ ಒಂದು ಬಾರಿ ಮಾತ್ರ ನೀಡಿ ಬೇರೆ ಜಿಲ್ಲೆಗಳಿಗೂ ಪ್ರಾತಿನಿಧ್ಯ ನೀಡಬೇಕೆಂಬ ಸಲಹೆಯನ್ನು ಮಾಡಿದೆ. ಪ್ರಯೋಜನವಾಗಲಿಲ್ಲ. ಅದು ಕೂಡ ಶಿವಮೊಗ್ಗದ ಮತ್ತೂರಿನ ಪಾಲಾಯಿತು. ಅದಾದ ನಂತರ ಮೂರನೆಯ ಪ್ರಶಸ್ತಿ ಹಿರಿಯ ಗಮಕಿ ಎಚ್.ಕೆ. ರಾಮಸ್ವಾಮಿಯವರಿಗೆ ನೀಡಿದ್ದು ಸ್ವಲ್ಪ ಸಮಾಧಾನ ತಂದಿತು.
ಆದರೆ ಈ ವರ್ಷದ ಪ್ರಶಸ್ತಿ ಮತ್ತೆ ಮತ್ತೂರಿನ ಪಾಲಾಗಿರುವುದನ್ನು ನೋಡಿದರೆ ಇದರಲ್ಲಿ ಅಗೋಚರವಾದ ಹಸ್ತಕ್ಷೇಪ ಪಕ್ಷಪಾತ ಬಲವಾಗಿರುವುದೆಂಬ ಸಂಶಯಕ್ಕೆ ಎಡೆ ಕೊಡುತ್ತದೆ. ಏಕೆ ಹೀಗೆ? ಮತ್ತೂರು-ಹೊಸಹಳ್ಳಿಯನ್ನು ಬಿಟ್ಟರೆ ಕರ್ನಾಟಕದಲ್ಲಿ ಗಮಕಿಗಳಾಗಲೀ, ವ್ಯಾಖ್ಯಾನಕಾರರಾಗಲೀ ಇಲ್ಲವೇ ಇಲ್ಲವೇ? ಅಥವಾ ಪ್ರಶಸ್ತಿಗೆ ಅರ್ಹರಲ್ಲವೇ?
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ನಾಟ್ಯಗುರು ವೈಜಯಂತಿ ಕಾಶಿಯವರು ಕಳೆದ ಬಾರಿಯ ಪ್ರಶಸ್ತಿಯನ್ನು ಒಬ್ಬ ಮಹಿಳಾ ಗಮಕಿಗೆ ನೀಡಬೇಕೆಂಬ ಸಲಹೆ ಮಂಡಿಸಿದ್ದಾಗಿ ತಿಳಿದುಬಂದಿತ್ತು. ಆದರೆ ಅದಾಗಲಿಲ್ಲ. ಈ ಬಾರಿಯಾದರೂ ಅದನ್ನೂ ಗಣನೆಗೆ ತರಬಹುದಿತ್ತು!
ಇನ್ನು ಪ್ರಶಸ್ತಿಗೆ ಅರ್ಹರಾರು ಎಂಬುದರ ಬಗ್ಗೆ ಕನ್ನಡ-ಸಂಸ್ಕೃತಿ ಇಲಾಖೆ ಯಾರಿಂದ ಮಾಹಿತಿ ಪಡೆದಿದೆ? ಸಂಗೀತ ನೃತ್ಯ ಅಕಾಡೆಮಿಯ ಪಾತ್ರವೇನು? ಕರ್ನಾಟಕ ಗಮಕ ಕಲಾ ಪರಿಷತ್ತು ಈ ನಿಟ್ಟಿನಲ್ಲಿ ಏನು ಕ್ರಮಕೈಗೊಂಡಿದೆ? ಅದರ ಅಧ್ಯಕ್ಷರಿಗೂ ಕರ್ನಾಟಕದಲ್ಲಿನ ಹಿರಿಯ ಗಮಕಿಗಳ ಬಗ್ಗೆ -ವಾಚನ-ವ್ಯಾಖ್ಯಾನಕಾರರ ಬಗ್ಗೆ, ವಿವರ ತಿಳಿದಿಲ್ಲವೇ? ಅಥವಾ ತಿಳಿಯುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿಲ್ಲವೇ?
ಕೇವಲ ಕುಮಾರವ್ಯಾಸ ಪ್ರಶಸ್ತಿಯೊಂದೇ ಅಲ್ಲ, ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಈ ತಾರತಮ್ಯವಿದೆ. ಸುಮಾರು 5-6 ವರ್ಷಗಳಿಂದ ಒಬ್ಬ ಗಮಕಿಯನ್ನೂ ಆಯ್ಕೆ ಮಾಡಿಲ್ಲದಿರುವುದು ಶೋಚನೀಯ. ಈ ನಿಟ್ಟಿನಲ್ಲೂ ಕರ್ನಾಟಕ ಗಮಕ ಕಲಾ ಪರಿಷತ್ತು ಸೊಲ್ಲೆತ್ತದಿರುವುದು ಆಶ್ಚರ್ಯವೆನಿಸುತ್ತದೆ.
ಶಿವಮೊಗ್ಗದ ಅವಳಿ ಹಳ್ಳಿಗಳಾದ ಮತ್ತೂರು-ಹೊಸಹಳ್ಳಿಯ ಗಮಕಿಗಳಿಗೇ ಏಕೆ ಸಿಂಹಪಾಲು? ಇದರ ಹಿಂದೆ ಯಾರ ಕೈವಾಡವಿದೆ. ಕನ್ನಡ ಸಂಸ್ಕೃತಿ ಇಲಾಖೆ ಈ ವಿಚಾರದಲ್ಲಿ ಪ್ರಾಮಾಣಿಕವಾಗಿ, ನಿಷ್ಪಕ್ಷಪಾತದಿಂದ ಕಾರ್ಯನಿರ್ವಹಿಸಿದೆಯೇ? ಏನೋ ಒಂದು-ಒಬ್ಬರಿಗೆ ಪ್ರಶಸ್ತಿ ನೀಡಿ ಕೈತೊಳೆದು ಕೊಂಡರಾಯಿತು ಎಂಬ ಧೋರಣೆಯೇ? ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸಹ ಈ ವಿಚಾರದಲ್ಲಿ ಗಮನ ಹರಿಸದಿರುವುದು ಶೋಚನೀಯ!
ಇನ್ನು ರಾಜ್ಯದ ಗಮಕಿಗಳು. ಒಬ್ಬರಿಗೂ ಸೊಲ್ಲೆತ್ತುವ ಧೈರ್ಯವಿಲ್ಲ. ಕಡೆಪಕ್ಷ ಪ್ರತಿನಿಧಿಗಳಾದರೂ ತಮ್ಮ ಜಿಲ್ಲಾ ಗಮಕಿಗಳ ಬಗ್ಗೆಯಾದರೂ ಸಹಾನುಭೂತಿ ತೋರಿಸಬಹುದಾಗಿತ್ತು. ಆದರೆ ಅವರೂ ಹೇಡಿಗಳಂತೆ ವರ್ತಿಸುತ್ತಿರುವುದು ಅತ್ಯಂತ ಖೇದದ ಸಂಗತಿ. ಇನ್ನು ರಾಜ್ಯ ಸರ್ಕಾರದ ಕನ್ನಡ -ಸಂಸ್ಕೃತಿ ಇಲಾಖಾ ಸಚಿವರು- ಚಲನಚಿತ್ರ ನಾಟಕರಂಗ ಬಿಟ್ಟರೆ ಬೇರೆ ಮಾಧ್ಯಮಗಳ ಪರಿಚಯವಿಲ್ಲದವರು. ಅವರಿಂದ ಹೆಚ್ಚೇನು ಅಪೇಕ್ಷಿಸಲು ಸಾಧ್ಯ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.