ಭಾರತೀಯರ ಈ ಕೆಟ್ಟ ಗುಣ, ಭಾರತವನ್ನೇ ಸುಡಬಲ್ಲದು

ಭಾರತ ಜನಾಂಗೀಯ ಮತ್ಸರ ಹೊಂದಿರುವವರ ದೇಶವಾ ಎನ್ನುವುದು...
Updated on: 

ಭಾರತ ಜನಾಂಗೀಯ ಮತ್ಸರ ಹೊಂದಿರುವವರ ದೇಶವಾ ಎನ್ನುವುದು ಪ್ರಶ್ನೆಯಲ್ಲ. ಅದು ಯಾವ ಮಟ್ಟಕ್ಕೆ ವರ್ಣಭೇದ ನೀತಿಯನ್ನು ಅಳವಂಡಿಸಿಕೊಂಡಿದೆ ಎನ್ನುವುದು ಪ್ರಶ್ನೆ. ಮೊದಲಿನಿಂದಲೂ ಒಂದು ಜನಾಂಗದ ಪ್ರತಿ ಪಕ್ಷಪಾತ ತೋರಿಸುವುದು ನಮ್ಮ ಸಾರ್ವಜನಿಕ ಜೀವನದ  ಭಾಗವಾಗಿಹೋಗಿದೆ. ಕೆಲವೊಮ್ಮೆ ಅದನ್ನು ಹಾಸ್ಯದ ಚೌಕಟ್ಟಿನಲ್ಲಿ ನೋಡಿ ಕಡೆಗಣಿಸಲಾಗುತ್ತದೆ. ಉದಾಹರಣೆಗೆ- ಸರ್ದಾರ್ಜಿ ಜೋಕುಗಳು. ಇನ್ನು ಉತ್ತರ ಭಾರತೀಯರು ಎಲ್ಲಾ ದಕ್ಷಿಣ ಭಾರತೀಯರನ್ನು "ಮದರಾಸಿ"ಗಳೆಂದು ಮೂದಲಿಸುವುದನ್ನು ದಕ್ಷಿಣದ ಜನರು ಕಡೆಗಣಿಸುತ್ತಾರೆ. ಕೆಲವೊಮ್ಮೆ ಇದು ಹದ್ದು ಮೀರಿ ಹೋಗಿದ್ದೂ ಉಂಟು. ಉದಾಹರಣೆಗೆ- ಶಿವಸೇನೆ ಮೊದಲು ದಕ್ಷಿಣ ಭಾರತೀಯರನ್ನು ಹಿಂಸಿಸಿದ್ದು, ಈಗ ಬಿಹಾರಿಗಳ ವಿರುದ್ಧ ತಿರುಗಿ ಬಿದ್ದಿರುವುದು. ಆದರೆ ಭಾರತೀಯರ ವರ್ಣಭೇದ ನೀತಿ ಸ್ಪಷ್ಟವಾಗಿ ಪ್ರಕಟವಾಗುವುದು, ಸಹ ನಾಗರಿಕರಾದ ಈಶಾನ್ಯ ರಾಜ್ಯದವರ ಮತ್ತು ಆಫ್ರಿಕನ್ನರ ವಿಷಯದಲ್ಲಿ.  ಆದರೆ ನಮ್ಮ ಈ ಗುಣದಿಂದಾಗಿ ನಿಸ್ಸಂಶವಾಗಿಯೂ ಈಶಾನ್ಯ ಭಾರತದ ಮನದಲ್ಲಿ ಪ್ರತ್ಯೇಕತಾವಾದದ ಆಲೋಚನೆ ಇನ್ನಷ್ಟು ಹೆಚ್ಚಾಗಲಿದೆ ಮತ್ತು ಆರ್ಥಿಕವಾಗಿ ಬೆಳೆಯುತ್ತಿರುವ ಆಫ್ರಿಕಾ ಭಾರತವನ್ನು ದ್ವೇಷಿಸಲಿದೆ.
ವರ್ಣಭೇದ ನೀತಿ ಎಲ್ಲಾ ರಾಷ್ಟ್ರಗಳಲ್ಲೂ ಇದ್ದದ್ದೇ ಬಿಡಿ ಎಂದು ಸುಲಭವಾಗಿ ಹೇಳಿಬಿಡಬಹುದು. ಆದರೆ ಬಹುತೇಕ ರಾಷ್ಟ್ರಗಳು ಅದನ್ನು ತಡೆಯಲು ಪ್ರಯತ್ನವನ್ನಂತೂ ಮಾಡುತ್ತಿವೆ. ವರ್ಣದ್ವೇಷದ ವಿರುದ್ಧದ ಆಫ್ರಿಕಾದ ಹೋರಾಟ, ಈಗ ಅಲ್ಲಿನ ರಾಜಕೀಯ ಇತಿಹಾಸದ ವೀರ ಹೆಜ್ಜೆಗಳಲ್ಲಿ ಜಾಗ ಪಡೆದಿದೆ. ಗುಲಾಮಗಿರಿಯ ವಿಷಯವಾಗಿ ಇಡೀ ಉತ್ತರ ಅಮೆರಿಕ ದಕ್ಷಿಣ ಅಮೆರಿಕದ ಮೇಲೆ ಯುದ್ಧ ಸಾರಿತ್ತು. ಆನಂತರದಲ್ಲಿ ಒಂದೆಡೆ ನೀಗ್ರೋಗಳು ಆ ಹೋರಾಟಕ್ಕೆ ಕಲೆಯ ರೂಪ ಕೊಟ್ಟು ಅದನ್ನು "ಬ್ಲ್ಯಾಕ್ ಈಸ್ ಬ್ಯೂಟಿಫುಲ್‌" ಎಂಬ ಆಂದೋಲನವಾಗಿ ಪರಿವರ್ತಿಸಿದರೆ, ಇನ್ನೊಂದೆಡೆ ನ್ಯಾಷನಲ್ ಹೀರೋ ಆಗಿದ್ದ ಕ್ಯಾಸ್ಸಿಯಸ್ ಕ್ಲೇ ಕ್ರಿಶ್ಚಿಯಾನಿಟಿಯೇ ಶ್ರೇಷ್ಟವೆಂದು ಡಂಗುರ ಸಾರುತ್ತಿದ್ದವರ ವಿರುದ್ಧ ಸಿಡಿದುಬಿದ್ದು, ಮೊಹಮ್ಮದ್ ಅಲಿ ಆದ.
ಭಾರತದ ಸಮಸ್ಯೆಯೆಂದರೆ, ಇಲ್ಲಿನ ವ್ಯವಸ್ಥೆ ವರ್ಣಭೇದ ನೀತಿಯ ವಿರುದ್ಧವಾಗಿ ಏನೇನೂ ಮಾಡುತ್ತಿಲ್ಲ. ಸತ್ಯವೇನೆಂದರೆ, ತನ್ನ ಅಸಾಮರ್ಥ್ಯದಿಂದಾಗಿಯೋ ಅಥವಾ ರಾಜಕೀಯ ಲಾಭ ಪಡೆಯಲೋಸುಗವೋ, ಅದು ಜನಾಂಗೀಯ ಮತ್ಸರದ ಪೋಷಣೆ ಮಾಡುತ್ತಿದೆ. ವಿಭಜನೆಯ ನಂತರ ಕರುಳುಬಳ್ಳಿಯಂಥ ಕಾರಿಡಾರೊಂದನ್ನು ಬಿಟ್ಟು ಭೌತಿಕವಾಗಿ ಈಶಾನ್ಯ ರಾಜ್ಯಗಳು ಭಾರತದಿಂದ ಬೇರ್ಪಟ್ಟಿವೆ. ಇಂತಹ ಪ್ರದೇಶಗಳಿಗೆ ಹೆಚ್ಚು ಗಮನ ಕೊಡುವ ಅಗತ್ಯವಿರುತ್ತದೆ. ಆದರೆ ಜವಾಹರ್ ಲಾಲ್ ನೆಹರೂರ ಸರ್ಕಾರದಿಂದ ಹಿಡಿದು ಇಲ್ಲಿಯವರೆಗಿನ ಸರ್ಕಾರಗಳೆಲ್ಲವೂ ಈ ಭೌಗೋಳಿಕ ಪರಿಣಾಮವನ್ನು ಕಡೆಗಣಿಸುತ್ತಲೇ ಬಂದಿವೆ. ಬಾಂಗ್ಲಾದೇಶದಿಂದ ಗುಳೆ ಬಂದವರಿಗೆ ವೋಟ್ ಬ್ಯಾಂಕ್ ಲೆಕ್ಕಾಚಾರದಲ್ಲಿ ಚಾಪೆ ಹಾಸಿದ್ದರಿಂದಲೇ ಇಂದು ತ್ರಿಪುರಾದ ಮೂಲ ನಿವಾಸಿಗಳು ತಮ್ಮ ನೆಲದಲ್ಲೇ ಅಲ್ಪಸಂಖ್ಯಾತರಾಗಿದ್ದಾರೆ. ತಮ್ಮ ರಾಜ್ಯದಲ್ಲಿ ಬಹುಸಂಖ್ಯಾತರಾಗಿದ್ದ ಅಸ್ಸಾಮಿ ಭಾಷಿಕ ಜನರು ಈಗ ಬರೀ ಒಂದು ದೊಡ್ಡ ಗುಂಪಾಗಿ ಉಳಿದಿದ್ದಾರೆ. ಹೀಗಾಗೇ, ಈಶಾನ್ಯ ಭಾಗಗಳಿಂದು 26ಕ್ಕೂ ಹೆಚ್ಚು ಸಶಸ್ತ್ರ ಪ್ರತ್ಯೇಕತಾವಾದಿ ಗುಂಪುಗಳಿವೆ ಎಂದರೆ ಆಶ್ಚರ್ಯವಾಗದು.  
ಆ ಪ್ರದೇಶಗಳ ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರಗಳು ಆಗಿಷ್ಟು ಈಗಿಷ್ಟು ಭಿಕ್ಷೆ ನೀಡುವ ಅಭ್ಯಾಸ ಮಾಡಿಕೊಂಡಿವೆ. ಇದರಿಂದಾಗಿ ಆ ರಾಜ್ಯಗಳ ಸರ್ಕಾರಗಳು ಕೇಂದ್ರದ ಗಿರಾಕಿಗಳಾಗಿ ಉಳಿದಿವೆಯಷ್ಟೆ. ಅಲ್ಲಿ ಅರ್ಥಪೂರ್ಣ ಆರ್ಥಿಕ ಅಭಿವೃದ್ಧಿ ಆಗಲೇ ಇಲ್ಲ. ಪರಿಣಾಮ: ಬೇರೇ ದಾರಿಯೇ ಇಲ್ಲದೆ, ಅಲ್ಲಿನ ವಿದ್ಯಾವಂತ ಸಮೂಹ ಮತ್ತು ಇನ್ನಿತರ ಲಕ್ಷಾಂತರ ಜನರು ಕೆಲಸ ಹುಡುಕಿಕೊಂಡೋ, ವಿದ್ಯಾರ್ಜನೆಗೋ ಭಾರತದ ವಿವಿಧ ಭಾಗಗಳಿಗೆ ಹೋಗಿ ಸೇರಿಕೊಂಡರು. ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಅದರಲ್ಲೂ ಮುಖ್ಯವಾಗಿ ದೆಹಲಿಯಲ್ಲಿ, ಅವರು ವರ್ಣಭೇದ ಧೋರಣೆಯ ಭಾರತೀಯರಿಗೆ ಸುಲಭದ ಬೇಟೆಯಾದರು.
ನಿಡೋ ಎಂಬ ಹುಡುಗನನ್ನು ಹಾಡ ಹಗಲೇ ಹೊಡೆದು ಸಾಯಿಸಲಾಯಿತು. ಅವನನ್ನು ಕಾಡಿಸಿ, ನಂತರ  ಕೊಂದು ಹಾಕಿದವರನ್ನು ಗುರುತಿಸಲಾಯಿತು. ಆದರೆ ಕೆಲದಿನಗಳವರೆಗೆ ಯಾವ ಕ್ರಮಕ್ಕೂ ಮುಂದಾಗಲಿಲ್ಲ. ನಿಡೋ ಅವರ ಥಳಿತದಿಂದಲೇ ಸತ್ತದ್ದು ಎನ್ನುವುದಕ್ಕೆ ನಿರ್ಣಾಯಕ ಆಧಾರಗಳಿಲ್ಲ ಎನ್ನುವ ತಿರುವೂ ಎದುರಾಯಿತು. ಈಗ ಇನ್ನೊಂದು ಸಿನೆಮಾವನ್ನೂ ತೆಗೆಯಬಹುದು: ಃಕ ಕಃಊ ಓಐಔಔಊಉ ಃಐಉಕ. ದೆಹಲಿ ಮತ್ತು ದೆಹಲಿ ಪೋಲೀಸರ ಗುಣವೇ ಹೀಗೆ.
2005ರಲ್ಲಿ ದೆಹಲಿ ವಿಶ್ವವಿದ್ಯಾಲಯ ಈಶಾನ್ಯ ರಾಜ್ಯದ ವಿದ್ಯಾರ್ಥಿನಿಯರಿಗೆಂದೇ ಪ್ರತ್ಯೇಕ ವಸ್ತ್ರಸಂಹಿತೆಯನ್ನು ಘೋಷಿಸಿತು. ಲೈಂಗಿಕ ದೌರ್ಜನ್ಯಗಳಿಂದ ಅವರನ್ನು ಬಚಾವು ಮಾಡುವುದಕ್ಕೆ ಎಂದು ಅದು ಕಾರಣ ನೀಡಿತು. ಇನ್ನು ಕಳೆದ ವರ್ಷ ದೆಹಲಿಯಲ್ಲಿ ಬ್ರಿಕ್ಸ್ ಶೃಂಗ ಸಭೆ ನಡೆದಾಗಲೂ, ಪೋಲೀಸರು ಅಸ್ಸಾಮಿಯರು, ಮಣಿಪುರಿಗಳು, ಮಿಜೋಗಳು, ಮೇಘಾಲಯದ ಜನರನ್ನು ಬಸ್ಸುಗಳಲ್ಲಿ, ರಸ್ತೆಯಲ್ಲಿ ಮತ್ತು ಅವರುಗಳ ಮನೆಗಳಿಗೆ ನುಗ್ಗಿ ಕಿರುಕುಳ ನೀಡಿದರು. ಅವರನ್ನೆಲ್ಲ ನಿರಾಶ್ರಿತ ಟಿಬೇಟಿಯನ್ನರು ಎಂದು ಭಾವಿಸಿದ ದೆಹಲಿ ಪೊಲೀಸರಿಂದ ಬಚಾವಾಗಲು, ಅವರೆಲ್ಲ ತಾವು ಭಾರತೀಯರು ಎನ್ನುವ ದಾಖಲೆಗಳನ್ನು ತೋರಿಸಕಾಯಿತು.
ದೆಹಲಿ ನಿಜಕ್ಕೂ ಅಮಾನವೀಯ ಜಾಗ. ಲೇಖಕ ರಾಮದಾಸ್ ಗುಪ್ತಾ ತಮ್ಮ ಇತ್ತೀಚಿನ ಕೃತಿ  capital: A Portrait of 21st Century Delhi ಹೇಳುವಂತೆ, ದೆಹಲಿಯಲ್ಲಿ ಒಂದು ವೇಳೆ ಭೂಕಂಪವಾದರೆ ಅಥವಾ ನೀರು ಸರಬರಾಜು ನಿಂತಿತೆಂದರೆ, ಜನ ಸಹಾಯಕ್ಕೆ ಬರುವುದಿಲ್ಲ, ಬದಲಾಗಿ ಒಬ್ಬರನೊಬ್ಬರು ಕೊಂದುಹಾಕಲು ನಿಲ್ಲುತ್ತಾರೆ. ಇದನ್ನು ಲೇಖಕನೊಬ್ಬನ ಕಲ್ಪನೆ ಎನ್ನಬಹುದಾ? ಒಂದು ವೇಳೆ ನಾವು ಅಲ್ಲಿ ಅಮಾಯಕರ ಮೇಲಾಗುತ್ತಿರುವ ದೌರ್ಜನ್ಯವನ್ನು, ಹಿಂದಿಯೇತರರನ್ನೆಲ್ಲಾ ಏಕರೂಪದಲ್ಲಿ ನೋಡುವ ಬಗೆಯನ್ನು, ಅಲ್ಲಿನ ಉತ್ತರೋತ್ತರ ಸರ್ಕಾರಗಳು ಈಶಾನ್ಯ ರಾಜ್ಯದವರನ್ನು ಹೊರಗಿನವರಂತೆ ಪ್ರತ್ಯೇಕವಾಗಿಟ್ಟಿರುವುದನ್ನು...ಇದನ್ನೆಲ್ಲಾ ನೋಡಿದಾಗ ಖಂಡಿತವಾಗಿಯೂ ಕಲ್ಪನೆ ಎಂದು ಅನಿಸದು.
ಆದರೆ ನಿಡೋನ ಸಾವು ಈಗ ಎಲ್ಲರನ್ನೂ ದಂಗುಬಡಿಸಿದೆ. ಆದರೆ ರಾಜಕಾರಣಿಗಳು ಕ್ರಮಕೈಗೊಳ್ಳುವ ಬಗ್ಗೆ ಬರೀ ಬಾಯಿಮಾತಿನಲ್ಲಿ ಹೇಳುತ್ತಿದ್ದಾರಷ್ಟೆ. ನಿಡೋ, ಚೀನಾ ತನ್ನ ಪ್ರದೇಶವೆಂದು ವಾದಿಸುತ್ತಾ ಬಂದಿರುವ ಅರುಣಾಚಲದ ಹುಡುಗ. ನಿಜವಾಗಲೂ ಭಾರತೀಯರು ಪ್ರಜ್ಞಾವಂತರಾಗಿದ್ದರೆ, ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ ಪ್ರತಿಯೊಬ್ಬ ಅರುಣಾಚಲ ವಾಸಿಯೂ "ಭಾರತ ತನ್ನದು" ಎಂದು ಭಾವಿಸುವಂತೆ ಮಾಡಬೇಕು. ಅವರನ್ನು ಗುರಿಯಾಗಿಸಿಕೊಳ್ಳುವುದೂ ಒಂದೇ, ಚೀನಾದ ತೀವ್ರ ಯೋಜನೆಗಳಿಗೆ ಸಹಾಯ ಮಾಡುವುದೂ ಒಂದೇ.

-ಟಿಜೆಎಸ್ ಜಾರ್ಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com