

ಏಪ್ರಿಲ್ - ಮೇ, ಉತ್ತರ ಭಾರತದಲ್ಲಿ ಉರಿಬಿಸಿಲಿನ ದಿನಗಳವು. ದೇಶದ ಇತರ ಕಡೆಗಳಲ್ಲೂ ಬೇಗೆಯ ಕಾಲ. ಅನೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಯ ಕಾಲವೂ ಹೌದು. ಆದರೂ ರಾಷ್ಟ್ರೀಯ ವೇಳಾ ಪಟ್ಟಿಯಂತೆ ಸಂವಿಧಾನದ ಗಡವನ್ನು ಮುಟ್ಟಲು ಬೇಸಿಗೆಯಲ್ಲೇ ಚುನಾವಣೆ ಬಂದಿದೆ. ಅದು ಅನಿವಾರ್ಯ.
ಚುನಾವಣೆ ಈಗ ನಡೆಯುತ್ತಿರುವುದು ದೇಶದ ಪ್ರಭುತ್ವದ ಉಸ್ತುವಾರಿ ಮುಂದಿನ ಐದು ವರ್ಷಗಳ ಕಾಲ ಯಾರದ್ದಾಗಬೇಕು ಎನ್ನುವುದರ ತೀರ್ಮಾನಕ್ಕೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಗಳು ತಮ್ಮ ತಮ್ಮ ಕೂಟಗಳನ್ನು ರಚಿಸಿಕೊಂಡಿವೆ. ಆ ಕೂಟಗಳಲ್ಲಿ, ವಾಸ್ತವದಲ್ಲಿ ಪ್ರಮುಖ ಪಕ್ಷದ್ದೇ ಕಾರುಬಾರು. ಇದು ಇದುವರೆಗಿನ ಅನುಭವ. ಕರ್ನಾಟಕದಲ್ಲಿ ಆ ಸಮಸ್ಯೆ ಇಲ್ಲ. ರಾಜ್ಯದ ಮೂರು ಪ್ರಮುಖ ಪಕ್ಷಗಳು ಇದುವರೆಗೆ ಯಾವುದೇ ಪ್ರಾದೇಶಿಕ - ಉಪ ಪ್ರಾದೇಶಿಕ ಪಕ್ಷಗಳ ಜತೆ ಹೊಂದಾಣಿಕೆಗೆ ಮುಂದೆ ಆಗಿಲ್ಲ, ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿಗಳನ್ನು ಬಿಟ್ಟರೆ ಇತರ ರಾಷ್ಟ್ರೀಯ ರಾಜಕೀಯ ಪಕ್ಷಗಳ ಅಸ್ತಿತ್ವವೇ ಇಲ್ಲ ಎನ್ನಬಹುದು. ಜಾತ್ಯತೀತ ಜನತಾದಳ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದಂತೆ ಒಂದು ಪ್ರಬಲ ಪ್ರಾದೇಶಿಕ ಪಕ್ಷ. ಆದರೆ ಬಹುತೇಕ ರಾಜಕೀಯ ವಿಶ್ಲೇಷಣೆಕಾರರು ಆ ಪಕ್ಷಕ್ಕೆ ನೀಡಿರುವುದು ಒಂದು ಉಪ ಪ್ರಾದೇಶಿಕ ಪಕ್ಷದ ಸ್ಥಾನವನ್ನು.
ಆ ರೀತಿಯ ಚಿತ್ರಣ ನಿಜವಾದ ಪರಿಸ್ಥಿತಿಗೆ ಅನುಗುಣವಾಗಿಯೇ ಇದ್ದರೂ, ಪಕ್ಷದ ಮುಖಂಡರು ಅದನ್ನು ಒಪ್ಪುವುದಿಲ್ಲ. ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಕ್ಷದ ಅಗ್ರೇಸರ ದೇವೇಗೌಡರು, (ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹೌದು, ಈಗ ಕಾಂಗ್ರೆಸ್ - ಬಿಜೆಪಿ ವಿರೋಧಿ ಐಕ್ಯರಂಗದ ನಾಯಕರೂ ಹೌದು) ತಮ್ಮ ಪಕ್ಷದ ವಿಚಾರದಲ್ಲಿ ಇರುವ ಹಲವು ತಪ್ಪು ಅಭಿಪ್ರಾಯಗಳನ್ನು ಬದಲಾಯಿಸುವ ರೀತಿಯಲ್ಲಿ ಚುನಾವಣೆ ಫಲಿತಾಂಶ ಪಡೆಯುವ ಪ್ರಯತ್ನದ "ಚಿಂತನೆಯನ್ನು" ನೀಡಿದ್ದಾರೆ.
ಆದ್ದರಿಂದ ಈಗಿನ ಚುನಾವಣೆ ಪರಿಸ್ಥಿತಿಯ ವಿಶ್ಲೇಷಣೆಯ ಪ್ರಯತ್ನದಲ್ಲಿ ಜಾತ್ಯತೀತ ಜನತಾದಳಕ್ಕೇ ಮೊದಲ ಸ್ಥಾನ. ಜಾತ್ಯತೀತ ಜನತಾದಳ ಈಗಿನ ಸ್ವರೂಪದ ವಿಚಾರದಲ್ಲಿ ಪ್ರಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಪ್ರಮುಖ ಅಂಶಗಳು ಎರಡು; ಮೊದಲನೆಯದು ಅದು ಹಳೆಯ ಮೈಸೂರಿನ ಸಂಸ್ಥಾನದ ಕೆಲವೇ ಜಿಲ್ಲೆಗಳಿಗೆ ಸೀಮಿತವಾದ ಪಕ್ಷ. ಎರಡನೆಯದು, ಆ ಪಕ್ಷದಲ್ಲಿ ಒಕ್ಕಲಿಗ ಸಮಾಜದ್ದೇ ಪ್ರಬಲ ಹಾಗೂ ನಿರ್ಣಾಯಕ ಶಕ್ತಿ ಮತ್ತು ಗೌಡರ ಕುಟುಂಬದ್ದೇ ದೊಡ್ಡ ಪಾತ್ರ ಎನ್ನುವುದು. ಈ ಚುನಾವಣೆಯಲ್ಲಿ ದೇವೇಗೌಡರು, ಆ ಭಾವನೆಗಳನ್ನು ತೊಡೆದು ಹಾಕುವ ಪ್ರಯತ್ನಕ್ಕೆ ಮುಂದಾಗಿರುವುದು ಒಂದು ಮುಖ್ಯವಾದ ವಿಚಾರ. ಪಕ್ಷದ ರಾಜ್ಯ ಸಮಿತಿಯ ಅಧ್ಯಕ್ಷರಾಗಿ ಒಕ್ಕಲಿಗರಲ್ಲದ, ಹಿಂದುಳಿದ ಜನಾಂಗದ ಶ್ರೀಮಂತ ರಾಜಕಾರಣಿ ಎ. ಕೃಷ್ಣಪ್ಪ ಅವರನ್ನು ನೇಮಿಸಿದ್ದಾರೆ. ಆದರೆ ಆ ಇಮೇಜ್ ಎಷ್ಟರ ಮಟ್ಟಿಗೆ ಜನರನ್ನು ಮುಟ್ಟಿದೆ? ಈಗಲೂ ಪ್ರಮುಖ ವಿಚಾರಗಳಲ್ಲಿ ಪಕ್ಷದ ನಿಲವನ್ನು ಪ್ರತಿಪಾದಿಸುತ್ತಿರುವವರು ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ, ಕುಮಾರಸ್ವಾಮಿ ಅವರೇ, ಎ. ಕೃಷ್ಣಪ್ಪ ಅಲ್ಲ.
ಅದರ ಹಿನ್ನೆಲೆಯಲ್ಲಿರುವುದು ಬೆಂಗಳೂರು ಗ್ರಾಮೀಣ ಅಥವಾ ರಾಮನಗರ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರು ಉಪ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳುವ ಉದ್ದೇಶ. ತಪ್ಪೇನಿಲ್ಲ. ರಾಜಕೀಯಕ್ಕೆ ಸಂಬಂಧಿಸಿದಂತೆ, ಯಾವ ನಿರ್ಧಾರವೂ ಬದಲಾಯಿಸಲೇ ಬಾರದಂತಹ ನಿರ್ಧಾರವೇನೂ ಅಲ್ಲ. ಅದನ್ನು ಇತಿಹಾಸ ಸ್ಪಷ್ಟಪಡಿಸಿದೆ. ಜೆಡಿಎಸ್ ಪಕ್ಷವೇ ರಾಜ್ಯದಲ್ಲಿ ಕಾಂಗ್ರೆಸ್ - ಬಿಜೆಪಿಗಳ ಜತೆ ಸೇರಿ ಸರದಿಯಂತೆ ಸರ್ಕಾರಗಳನ್ನು ನಡೆಸಿದೆ. ಈಗ ಆ ಪಕ್ಷದ ಪ್ರಮುಖ ರಾಜಕೀಯ ಪ್ರಣಾಳಿಕೆ ಕಾಂಗ್ರೆಸ್ -ಬಿಜೆಪಿಗಳನ್ನು ಸಮಾನವಾಗಿ ವಿರೋಧಿಸುವುದು.
ಜಾತ್ಯತೀತ ಜನತಾದಳ ಈ ನಿರ್ಧಾರವನ್ನು ರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರುವ ಚೈತನ್ಯ ಆ ಪಕ್ಷಕ್ಕೆ ಇಲ್ಲ. ಏನಿದ್ದರೂ ಅದು ರಾಜ್ಯದಲ್ಲಷ್ಟೇ ಆ ಕೆಲಸ ಮಾಡಬಹುದು. ಇದರಿಂದ ರಾಜ್ಯದಲ್ಲಿ ಚುನಾವಣೆಗೆ ತ್ರಿಕೋಣ ಸ್ಪರ್ಧೆಗೆ ಭೂಮಿಕೆ ಸಿದ್ಧವಾದಂತೆ ಕಂಡು ಬಂದರೂ, ವಾಸ್ತವದಲ್ಲಿ ಅದು ರಾಜ್ಯದ ಒಂದು ಭಾಗದಲ್ಲಿ ಕಾಂಗ್ರೆಸ್ - ಬಿಜೆಪಿ ಸಮರ, ಇನ್ನೊಂದು ಭಾಗದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮರದ ಸ್ವರೂಪವನ್ನು ಪಡೆಯುವುದು ಸಹಜವೇ.
ಈ ಕಠೋರ ವಾಸ್ತವದ ಹಿನ್ನೆಲೆಯಲ್ಲೂ ದೇವೇಗೌಡರು ತಮ್ಮ ಸ್ವಂತದ ಹಾಗೂ ಪಕ್ಷದ ಇಮೇಜ್ ಬದಲಾಯಿಸಲು ಹೊರಟಿದ್ದಾರೆ. ಆ ದೃಷ್ಟಿಯಿಂದ ಅವರು ಈಗಿನ ಚುನಾವಣೆಯನ್ನು ರಾಷ್ಟ್ರೀಯ ಚುನಾವಣೆ ಎಂದೇ ಭಾವಿಸಿ, ರಾಜ್ಯ ರಾಜಕೀಯಕ್ಕೆ ಹೆಚ್ಚು ಪ್ರಾಮುಖ್ಯವನ್ನು ಕೊಡದೇ ಇರಲು ನಿರ್ಧರಿಸಿರುವಂತೆ ಕಂಡು ಬರುತ್ತಿದೆ. ಪಕ್ಷಕ್ಕೆ ರಾಜ್ಯದಲ್ಲಿ ಕಮ್ಯುನಿಸ್ಟರ ಬೆಂಬಲ ಕೇವಲ ಸಾಂಕೇತಿಕ.
ಕಾಂಗ್ರೆಸ್: ಆತಂಕವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅಗತ್ಯ ಬಿದ್ದರೆ, ತಮ್ಮ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದ ದಲಿತರ) ಅವತಾರವನ್ನು ನಿಯಂತ್ರಣದಲ್ಲಿಡಲು ಸಿದ್ಧವಾಗಿದ್ದರೂ, ಕಳೆದ ಎಂಟು ತಿಂಗಳಲ್ಲಿ ಅವರ ರಾಜಕೀಯ - ಸಾಮಾಜಿಕ - ಆಡಳಿತದ ಆದ್ಯತೆ ಬದಲಾಗಿರುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ. ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಈಗ ಕಂಡು ಬರುತ್ತಿರುವುದು ಸಮನ್ವಯ, ಸಮಾಲೋಚನೆಯ ಕೊರತೆ. ಅದರಲ್ಲಿ ಅನುಮಾನವೇ ಇಲ್ಲ. ಸಚಿವ ಸಂಪುಟದಲ್ಲಿ ಕೆಲವರ ಚಿಂತನೆಯೇ ಹಾಗೂ ಆಸಕ್ತಿಗಳೇ ಪ್ರಧಾನವಾಗಿರುವಂತೆ ಕಂಡು ಬರುತ್ತಿದೆ. ಅದರ ನೋವನ್ನು ಅನುಭವಿಸುತ್ತಿರುವುದು ಪಕ್ಷದ ಶಾಸಕರಲ್ಲಿ ಮೂಲೆ ಗುಂಪಾಗಿರುವಂತೆ ಕಂಡು ಬಂದಿರುವ ವರ್ಗ.
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ॥ ಜಿ. ಪರಮೇಶ್ವರ ಅವರು ಇಂದಿನ ವಿಶಿಷ್ಟ ಪರಿಸ್ಥಿತಿಯಲ್ಲಿ, ಶಾಸನಸಭೆ, ಸರ್ಕಾರಕ್ಕೂ ತಮಗೂ ಸಂಬಂಧವೇ ಇಲ್ಲವೇನೋ ಎನ್ನುವ ರೀತಿಯಲ್ಲಿ ಹೆಚ್ಚು ಕಡಿಮೆ ಏಕಾಂಗಿಯಂತೆಯೇ ಕೆಲಸ ಮಾಡುತ್ತಿದ್ದಾರೆ. ಈಗ ಜನರ ಮನಸ್ಸಿನಲ್ಲಿ ಮೂಡಿರುವ ಚಿತ್ರ, ಪಕ್ಷಕ್ಕೂ - ಸರ್ಕಾರಕ್ಕೂ ಸಂಬಂಧವೇ ಇಲ್ಲವೇನೋ ಎನ್ನುವಂತೆ ನಿರ್ಧಾರಗಳು ಪ್ರಕಟವಾಗುತ್ತಿವೆ ಎನ್ನುವ ರೀತಿಯದ್ದು. ನಿಜ. ಇಂತಹ ಸನ್ನಿವೇಶದಲ್ಲಿ, ಅನೇಕ ಶಾಸಕರಲ್ಲಿ ಅತೃಪ್ತಿ ಮೂಡಿರುವುದೂ ಸಹಜವೇ. ಮಂತ್ರಿ ಮಂಡಲದ ರಚನೆಯಲ್ಲಿ ಸಮಾನ ಮನಸ್ಕರ ಕೂಟದ ಸಮನ್ವಯತೆಯ ಕಲ್ಪನೆ ಮೂಡಿಬಂದಿಲ್ಲ. ಜಾತಿಗಳ ಪ್ರಾತಿನಿಧ್ಯದಲ್ಲಿ ಅತೃಪ್ತಿ ಇದೆ. ಪ್ರಾದೇಶಿಕ ಅಸಮತೆಯ ವಿಚಾರವೂ ತಲೆ ಎತ್ತಿದೆ. ಪ್ರಬಲ ಜಾತಿಗಳೆನಿಸಿದ ಲಿಂಗಾಯತ, ಒಕ್ಕಲಿಗ ಸಮಾಜಗಳಲ್ಲಿನ ಪ್ರಮುಖರಲ್ಲಿ ಈಗಾಗಲೇ ಅಧಿಕಾರ ತಮ್ಮ ಕೈ ತಪ್ಪಿಹೋದ ಭಾವನೆ ಮೂಡಿದೆ.
ಕೆಲವು ಅತೃಪ್ತ ಶಾಸಕರು ದೆಹಲಿಗೂ ಹೋಗಿ ಬಂದಿದ್ದಾರೆ. ಅಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ ಅವರು ವರಿಷ್ಠರನ್ನು ಭೇಟಿಯಾಗುವುದಕ್ಕೆ ಅವಕಾಶವಾಗಿಲ್ಲ. ಆದ್ದರಿಂದ ಅವರ ಅಳಲನ್ನು (ಕಾರಣ ಏನೇ ಇರಲಿ) ಕೇಳುವವರು ಇಲ್ಲ. ಈಗಷ್ಟೇ ಹೈದರಾಬಾದ್ ಕರ್ನಾಟಕದ ಪ್ರದೇಶಕ್ಕೆ, ಅಲ್ಲಿನ ಜನರಿಗೆ ಸಂವಿಧಾನದಂತೆ ತೀರ ಹಿಂದುಳಿದ ಸೀಮೆಯ ವಿಶೇಷ ಸೌಲಭ್ಯಗಳು ದೊರಕಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಆ ಭಾಗದಲ್ಲೇ ಈಗ ರಾಜ್ಯ ಕಾಂಗ್ರೆಸ್ಸಿನ ಅತಿ ಪ್ರಭಾವಿ ನಾಯಕರೂ ಇರುವುದು. ಸಹಜವಾಗಿಯೇ, ಕಾಂಗ್ರೆಸ್ ಆ ಭಾಗದಲ್ಲಿ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವನ್ನು ಇಟ್ಟುಕೊಂಡಿದೆ. ಆದರೆ ಅಭ್ಯರ್ಥಿಗಳ ಆಯ್ಕೆಯಲ್ಲಿ ನಾಯಕರು ಹಟ ಮಾಡಿದರೆ, ವಿಶೇಷ ಸ್ಥಾನ-ಮಾನ ತಂದು ಕೊಟ್ಟು ಅನುಕೂಲವಾದ ವಾತಾವರಣ ಕಲುಷಿತವಾಗಬಹುದು. ಆ ಭಾಗದಲ್ಲಿ ಸಿದ್ದರಾಮಯ್ಯ, ಪರಮೇಶ್ವರ ಅವರಿಗಿಂತ ಮಲ್ಲಿಕಾರ್ಜುನ ಖರ್ಗೆ - ಧರಂ ಸಿಂಗ್ ಅವರ ಪ್ರಭಾವವೇ ಹೆಚ್ಚು. ಇಲ್ಲಿ ಕೆಲವು ಕಡೆ ಜೆಡಿಎಸ್‌ನ ಬೆಂಬಲಿಗರ ಪ್ರಾಬಲ್ಯ ಇದೆ. ಕಾಂಗ್ರೆಸ್ ಈ ಭಾಗದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ನಿರೀಕ್ಷಿಸಿರುವುದು.
ಬಿಜೆಪಿ: ಹತಾಶೆಯ ಗುಂಗು
ವಿಧಾನಸಭೆ ಚುನಾವಣೆಯ ಸೋಲಿನಿಂದ ಹತಾಶೆಯ ಮಡುವಿಗೆ ಬಿದ್ದಿದ್ದ ಭಾರತೀಯ ಜನತಾ ಪಾರ್ಟಿ ಆ ಗುಂಗಿನಿಂದ ಹೊರಬರುತ್ತಿದೆ. ದೇಶದ ಎಲ್ಲ ಕಡೆಗಳಲ್ಲೂ ಕೇಳಿ ಬರುತ್ತಿರುವ ನರೇಂದ್ರ ಮೋದಿ ಅವರ "ಆವಾಜ್" ರಾಜ್ಯದಲ್ಲೂ ಕೇಳಿ ಬಂದಿದೆ. ಚುನಾವಣೆ ಪ್ರಚಾರದಲ್ಲಿ ಬಿಜೆಪಿಗೆ ಅದೊಂದು ಪ್ಲಸ್ ಪಾಯಿಂಟ್. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯಾವುದೇ ಷರತ್ತುಗಳನ್ನು ಹಾಕದೇ (ಬಹಿರಂಗವಾಗಿ) ಪಕ್ಷಕ್ಕೆ ಹಿಂತಿರುಗಿದ್ದಾರೆ. ಅವರ ಆಗಮನದಿಂದ ಪ್ರದೇಶ ಅಧ್ಯಕ್ಷ ಪ್ರಹ್ಲಾದ ಜೋಷಿ ಅವರು ಸ್ವಲ್ಪ ಹಿಂದಕ್ಕೆ ಸರಿಯಬೇಕಾಗಿದೆ. ಅವರು ಧಾರವಾಡಕ್ಕೇ ಸೀಮಿತವಾಗಲೂ ಬಹುದು.
ಶೋಭಾ ಕರಂದ್ಲಾಜೆ ಅವರನ್ನು ಈಗ ಬಿಜೆಪಿ ಕಾರ್ಯಾಲಯಕ್ಕೆ ಬರಲು ಯಾರೂ ಕರೆಯಬೇಕಾಗಿಲ್ಲ. ಅವರೇ ಇತರರನ್ನು ಕಾರ್ಯಾಲಯಕ್ಕೆ ಬನ್ನಿ ಎಂದು ಕರೆಯಬೇಕಾದ ಪರಿಸ್ಥಿತಿ ಮುಂದಿನ ವಾರಗಳಲ್ಲಿ ನಿರ್ಮಾಣವಾಗಲಿದೆ.
ಬಿಜೆಪಿಯಲ್ಲಿ ಬೇರೆ ಬೇರೆ ಕಾರಣಗಳಿಂದ ಏಕಾಂಗಿಗಳಂತಾಗಿದ್ದ ಕೆಲವು ನಾಯಕರು ಈಗ ಪ್ರಾತಿನಿಧಿಕ ಸ್ಥಾನ-ಮಾನ ಪಡೆದು ಕಾರ್ಯಾಲಯಕ್ಕೆ ಹಿಂತಿರುಗಬಹುದು. ರಾಷ್ಟ್ರೀಯ ಚುನಾವಣೆಯಲ್ಲಿ ರಾಜ್ಯದ ಆಂತರಿಕ ಜಗಳಗಳನ್ನು ಮರೆಯುವುದು ಒಳಿತೆನ್ನುವುದು ಅವರಿಗೂ ಅರಿವಾದಂತಿದೆ.
ಜಾತಿ - ಜಾತಿ - ಜಾತಿ: ಆದರೂ ಮಾಧ್ಯಮ ಪ್ರಪಂಚದಲ್ಲಿ ಪ್ರಕಟವಾಗುತ್ತಿರುವ ವರದಿ, ವಿಶ್ಲೇಷಣೆ, ಅಭಿಪ್ರಾಯಗಳನ್ನು ಗಮನಿಸಿದರೆ, ಈಗಲೂ ಜಾತಿಯ ಲೆಕ್ಕಾಚಾರವೇ ಮುಖ್ಯವಾಗಿರುವುದು ಗೋಚರವಾಗುತ್ತಿದೆ. ಈಗಲೂ ಕಾಂಗ್ರೆಸ್ಸಿಗೆ ಒಕ್ಕಲಿಗ ನಾಯಕರೆಂದರೆ ಎಸ್.ಎಂ. ಕೃಷ್ಣ, ಡಿ.ಕೆ. ಶಿವಕುಮಾರ್ ಅವರಂತಹವರೇ. ಒಂದು ಸಮಾಜವಾಗಿ ಒಕ್ಕಲಿಗರು ಈಗಲೂ ಬಹುಮಟ್ಟಿಗೆ ಜೆಡಿಎಸ್ ಜತೆ ಭಾವನಾತ್ಮಕವಾಗಿ ಸೇರಿಕೊಂಡಿರುವುದೂ ನಿಜ. ಉದಾಹರಣೆಗೆ ಉತ್ತರ ಬೆಂಗಳೂರು ಕ್ಷೇತ್ರದಲ್ಲಿ ಒಕ್ಕಲಿಗರನ್ನು ಬಿಟ್ಟು ಬೇರೆ ಯಾರೂ ಗೆಲ್ಲುವುದೇ ಸಾಧ್ಯವಿಲ್ಲವೆನ್ನುವ ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಈಗ ಕಾಂಗ್ರೆಸ್ - ಬಿಜೆಪಿಗಳು (ರಾಜೀವ ಗೌಡ, ಅಶೋಕ, ಚಂದ್ರೇಗೌಡ) ತೊಡೆ ತಟ್ಟುತ್ತಿದ್ದರೂ, ಜೆಡಿಎಸ್‌ನ ಸಂಭವನೀಯ ಅಭ್ಯರ್ಥಿಯ ಹೆಸರೂ ಪ್ರಚಾರವಾಗಿಲ್ಲ. ಇದೊಂದು ವಿಪರ್ಯಾಸವೇ. ರಾಜ್ಯದಲ್ಲಿ ಕೆಲವು ತಿಂಗಳ ಹಿಂದೆ ಗಣಿಧಣಿಗಳ "ಪ್ರಭಾವ - ಅಟಾಟೋಪಗಳ ಪರಿಣಾಮವಾಗಿ, ರಿಪಬ್ಲಿಕ್ ಆಫ್ ಬಳ್ಳಾರಿ" ಎನ್ನುವ ಕಲ್ಪನೆ ಮೂಡಿಬಂದಿತ್ತು. ಈಗ ಗಣಿ-ಧಣಿಗಳ ಕುಟುಂಬದ ಪ್ರಮುಖರೆಲ್ಲ ಚುನಾವಣೆಯ ಸ್ಪರ್ಧೆಯ ವಿಚಾರವನ್ನೇ ತಲೆಗೆ ಹಚ್ಚಿಕೊಂಡಂತಿಲ್ಲ.
ಅವರ ಪರವಾಗಿ, ರಾಜಕೀಯ ಚಿಂತನೆ ಹಾಗೂ ಕೆಲಸವನ್ನು ಮಾಡಬೇಕಾಗಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತಾಡುತ್ತಿದ್ದಾರೆ. ಅದು ಅರ್ಥವಾಗುವಂತಹ ವಿಚಾರವೇ. ರಾಜ್ಯದ ಮೂರೂ ಪಕ್ಷಗಳಿಗೆ, ಶ್ರೀರಾಮುಲು ಅವರು ಪಡೆದಿರುವ ಹಿಂದುಳಿದ ಜಾತಿಗಳ ಬೆಂಬಲ ಸಂಖ್ಯಾಬಲದ ದೃಷ್ಟಿಯಿಂದ ಬೇಕು. ಆದರೆ ಬೇರೆ ಬೇರೆ ಕಾರಣಗಳಿಂದಾಗಿ, ಶ್ರೀರಾಮುಲು ಅವರ ಜತೆ ಹೆಚ್ಚಾಗಿ ಕಾಣಿಸಿಕೊಳ್ಳುವುದು ಬೇಕಾಗಿಲ್ಲ. ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗಂಗಾವತೀ ಸೀಮೆಯಲ್ಲಿ ಶ್ರೀರಾಮುಲು ಅವರ ಶಕ್ತಿಯನ್ನು ಕಡೆಗಣಿಸುವಂತಿಲ್ಲ. ಆದರೆ ಈಗ ಏಕಾಂಗಿಯಾಗಿರುವ ಶ್ರೀರಾಮುಲು ಚುನಾವಣೆಯಲ್ಲಿ ಸಾಧಿಸಬೇಕೆಂದಿರುವುದೇನು ಎನ್ನುವ ಪ್ರಶ್ನೆಗೆ ಉತ್ತರ ಕೊಡುವ ಸ್ಥಿತಿಯಲ್ಲಿ ಯಾರೂ ಇಲ್ಲ. ಇದು ಎಲ್ಲ ಪಕ್ಷಗಳಿಗೂ ಪರ್ವಕಾಲ.
ಕಿಡಿಗೇಡಿತನ: ಇನ್ನೂ ಕೆಲವು ದಿನಗಳ ಕಾಲ ರಾಜ್ಯ ರಾಜಕೀಯದ ಅಂಗಳ ವಿಧಾನಸಭೆಯ ಮೊಗಸಾಲೆಗಳೇ. ಅಲ್ಲೇ ಎಲ್ಲ ವ್ಯಾಪಾರವೂ ನಡೆಯುವುದು. ಮೊಗಸಾಲೆಗಳಲ್ಲಿ ಯಾರ್ಯಾರು ಚುರುಕಾಗಿರುತ್ತಾರೆನ್ನುವುದೇ ಗಮನಿಸಬೇಕಾದ ವಿಚಾರ. ಮೈದಾನದ ರಾಜಕೀಯಕ್ಕೆ ವಿರಾಮ. ಅದರಿಂದ ಯಾರಿಗೆ ಲಾಭವೋ ಗೊತ್ತಿಲ್ಲ.
- ಸತ್ಯ
anisikeprabha@gmail.com