ಅಂಕಣಗಳು

ಸಿಂಗ್, ಸೋನಿಯಾ ನೇತೃತ್ವದಲ್ಲಿ ನೆಲಕಚ್ಚಿತು ಸಂಸತ್ತು!

ಸಿಂಗ್, ಸೋನಿಯಾ ನೇತೃತ್ವದಲ್ಲಿ ನೆಲಕಚ್ಚಿತು ಸಂಸತ್ತು!
Published On :

ಯುಪಿಎ ಸರ್ಕಾರ ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿದೆ. ಡಾ. ಮನಮೋಹನ್ ಸಿಂಗ್ ಅವರು ಘನತೆಯೊಂದಿಗೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಈಗ ಅವರ ಸರ್ಕಾರದ ಆಡಳಿತಾವಧಿ ಮುಗಿಯುವ ಹೊತ್ತಿಗೆ, ಸ್ವತಂತ್ರ ಭಾರತ ಕಂಡ ಅತ್ಯಂತ ಭ್ರಷ್ಟ ಸರ್ಕಾರವನ್ನು ಮುನ್ನಡೆಸಿದ ನಾಯಕನಾಗಿ ಅವರು ಬದಲಾಗಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣ, ನಂತರ 2ಜಿ ಸ್ಪೆಕ್ಟ್ರಂ ಹಗರಣ.. ಹೀಗೆ ಒಂದಾದ ನಂತರ ಒಂದರಂತೆ ಮನಮೋಹನ್ ಸಿಂಗ್ ಸರ್ಕಾರದ ಅನೇಕ ಹಗರಣಗಳನ್ನು ಹೊರಗೆಡವಿದ್ದು ಸಿಎಜಿ. ಆದರೆ ಯುಪಿಎ1ರ ಅವಧಿಯಲ್ಲಿ ಹೊರಬಿದ್ದ ಅತ್ಯಂತ ನಾಚಿಕೆಗೇಡಿನ ಘಟನೆಯೆಂದರೆ 'ವೋಟಿಗಾಗಿ ನೋಟು ಹಗರಣ'. ಯುಪಿಎ ಸರ್ಕಾರ ವಾಷಿಂಗ್‌ಟನ್‌ನೊಂದಿಗೆ ಪರಮಾಣು ಒಪ್ಪಂದಕ್ಕೆ ಮುಂದಾದದ್ದನ್ನು ವಿರೋಧಿಸಿ ಎಡರಂಗ ಆ ಸರ್ಕಾರದಿಂದ ಹೊರನಡೆದಿತ್ತು. ಈ ಬೆಳವಣಿಗೆಯಿಂದಾಗಿ ಮನಮೋಹನ್ ಸಿಂಗ್ ಅವರ ಸರ್ಕಾರ ಅತ್ಯಂತ ದೊಡ್ಡ ಬಿಕ್ಕಟ್ಟಿಗೆ ಸಿಲುಕಿ, ವಿಶ್ವಾಸ ಮತ ಗಳಿಸುವ ಅನಿವಾರ್ಯತೆಯನ್ನು ಎದುರಿಸಿತು. ಸರ್ಕಾರ ಪದಚ್ಯುತಗೊಳ್ಳುವುದರಲ್ಲಿತ್ತು.
ಈ ಸಮಯದಲ್ಲೇ ಭಾರತ-ಅಮೆರಿಕ ಪರಮಾಣು ಒಪ್ಪಂದದ ಮೇಲೆ ಭಾರತಕ್ಕೆ ಸಂಬಂಧಿಸಿದ ಕೆಲವು  ಮಾಹಿತಿಗಳನ್ನು, 'ವಿಕೀ ಲೀಕ್ಸ್‌' ಹೊರಹಾಕಿತು. ಆ ಮಾಹಿತಿಯನ್ನು ಚೆನ್ನೈ ಮೂಲದ ಖ್ಯಾತ ಪತ್ರಿಕೆ 'ದಿ ಹಿಂದು' ಕೂಡ ಪ್ರಕಟಿಸಿತು.
ರಾಯಟರ್ಸ್ ಸುದ್ದಿ ಸಂಸ್ಥೆ ಈ ಘಟನೆಯ ಕುರಿತು ವರದಿ ಮಾಡಿದ್ದು ಹೀಗೆ: "ಅಮೆರಿಕ ಸರ್ಕಾರದ ರಹಸ್ಯ ಮಾಹಿತಿಗಳನ್ನು ವಿಕಿಲೀಕ್ಸ್ ಹೊರಹಾಕಿದೆ. ವಿಶ್ವಾಸ ಮತಗಳಿಸುವಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರ ಆ ಕಾರಣಕ್ಕಾಗಿ ಪ್ರಾದೇಶಿಕ ಪಕ್ಷವೊಂದರ ಸದಸ್ಯರಿಗೆ ಸುಮಾರು 9 ದಶಲಕ್ಷ ಡಾಲರ್ ಮೊತ್ತವನ್ನು ಪಾವತಿ ಮಾಡಿದ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರ ಸಹಾಯಕ ಹಾಗೂ ಅಮೆರಿಕರದ ರಾಜತಾಂತ್ರಿಕ ಅಧಿಕಾರಿಯ ನಡುವೆ ನಡೆದ ಆ ಮಾತುಕತೆಯ ವಿವರಗಳನ್ನು ದಿ ಹಿಂದು ಪತ್ರಿಕೆ ವಿಸ್ತಾರವಾಗಿ ಪ್ರಕಟಿಸಿದೆ."
ಭ್ರಷ್ಟಾಚಾರವನ್ನು ನಿಗ್ರಹಿಸಲು ವಿಫಲವಾಗಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಕಳೆದ ಕೆಲವು ತಿಂಗಳಿಂದ ದೊಡ್ಡ ಸಮರ ಸಾರಿರುವ ಸುಷ್ಮಾ ಸ್ವರಾಜ್ ಅವರು ಆ ಸಮಯದಲ್ಲಿ ಟ್ವಿಟ್ಟರ್‌ನಲ್ಲಿ ಹೀಗೆ ಬರೆದಿದ್ದರು- "ಸಂಸದರಿಗೆ ಹಣ ಪಾವತಿ ಮಾಡಿರುವ ಸುದ್ದಿ ಆಘಾತಕಾರಿಯಾಗಿದೆ. ಈ ವಿಷಯವನ್ನು ನಾನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇನೆ".
ಆಗ ವಿಕೀಲೀಕ್ಸ್ ಹೊರಹಾಕಿದ ಮಾಹಿತಿ ಕುರಿತು ಎದ್ದ ಗಲಾಟೆಯಿಂದಾಗಿ ಸದನವನ್ನು ಮುಂದೂಡಬೇಕಾಗಿ ಬಂತು. ಸೋನಿಯಾ ಗಾಂಧಿಯವರ ಆಪ್ತ ಸಹಾಯಕನೂ ಮತ್ತು ಸತೀಶ್ ಶರ್ಮಾ ಎನ್ನುವ ಸಂಸದರ ಆಪ್ತನೂ ಆದ ವ್ಯಕ್ತಿಯೊಬ್ಬನ ಹಾಗೂ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಸ್ಟೀವನ್ ವೈಟ್ ನಡುವಿನ ಮಾತುಕತೆಯದು. ವಿಶ್ವಾಸ ಮತ ಗಳಿಸುವುದಕ್ಕಾಗಿ ರಾಷ್ಟ್ರೀಯ ಲೋಕದಳ(ಆರ್‌ಎಲ್‌ಡಿ)ದ ನಾಲ್ಕು ಸಂಸದರಿಗೆ ತಲಾ 10 ಕೋಟಿ ರುಪಾಯಿ ಕೊಡಲಾಗಿದೆ ಎಂಬ ಮಾಹಿತಿಯನ್ನು ವಿಕಿಲೀಕ್ಸ್ ಹೊರಹಾಕಿತ್ತು. ಇಷ್ಟೇ ಅಲ್ಲ, ಆರ್‌ಎಲ್‌ಡಿಯ ಸಂಸದರಿಗೆ ಕೊಡಲು ಕೂಡಿಟ್ಟಿದ್ದ ಸುಮಾರು 50-60 ಕೋಟಿ ರುಪಾಯಿಗಳ ಹಣದ ಪೆಟ್ಟಿಗೆಯನ್ನು ಕಾಂಗ್ರೆಸ್ಸಿಗರು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ತೋರಿಸಿದ್ದರಂತೆ!
---
ಈ ಹಗರಣವನ್ನು ಹೊರಹಾಕುವ ಕಾರ್ಯಾಚರಣೆಯಲ್ಲಿ ನನ್ನ ಆಪ್ತ ಸುಧೀಂದ್ರ ಕುಲಕರ್ಣಿಯೊಟ್ಟಿಗೆ ಬಿಜೆಪಿಯ ಮೂವರು ಸಂಸದರು ಪಾಲ್ಗೊಂಡಿದ್ದರು. ಈ ಲಂಚದ ಎಪಿಸೋಡ್ ಅನ್ನು ರೆಕಾರ್ಡ್ ಮಾಡಲು ಒಂದು ಸುದ್ದಿ ವಾಹಿನಿಯನ್ನೂ ಅವರು ಸಂಪರ್ಕಿಸಿದರು. ಆದರೆ ಯುಪಿಎ ಸರ್ಕಾರ ಇವರನ್ನೇ ತಪ್ಪಿತಸ್ಥರೆಂದು ಜೈಲಿಗೆ ಕಳುಹಿಸಿತು!
ಇವರನ್ನೆಲ್ಲ ನಿರ್ದೋಷಿಗಳು ಎಂದು ನರೋತ್ತಮ ಕೌಶಾಲ್ ಅವರು ನೀಡಿದ ತೀರ್ಪಿನ ಮೊದಲ ಪ್ಯಾರಾದಲ್ಲಿ ಹೀಗೆ ಹೇಳಲಾಗಿದೆ: "ಜುಲೈ 22, 2008 ಭಾರತೀಯ ಸಂಸತ್ತಿನ ಇತಿಹಾಸದಲ್ಲೊಂದು ಕರಾಳ ದಿನ. ಮೂವರು ಸಂಸತ್ ಸದಸ್ಯರು-ಅಶೋಕ್ ಅರ್ಗಾಲ್, ಫಗ್ಗನ್ ಸಿಂಗ್ ಕುಲಾಸ್ತೆ ಮತ್ತು ಮಹಾಬೀರ್ ಸಿಂಗ್ ಭಗೋರಾ, ಸಂಸತ್ತಿನಲ್ಲಿ ವಿಶ್ವಾಸ ಮತದ ಚರ್ಚೆಯಾಗುತ್ತಿರುವ ಸಮಯದಲ್ಲಿ ತಮ್ಮ ಟೇಬಲ್ಲುಗಳ ಮುಂದೆ 1 ಕೋಟಿ ರುಪಾಯಿಗಳ ಕಟ್ಟನ್ನು ತೆರೆದಿಟ್ಟರು. ವಿಶ್ವಾಸ ಮತಕ್ಕೆ ಸಂಬಂಧಿಸಿದಂತೆ ಆ ಹಣವನ್ನು ತಮಗೆ ಕೊಡಲಾಗಿದೆ ಎಂದು ಅವರು ಹೇಳಿದರು. ಹಿರಿಯ ಸಂವಿಧಾನ ತಜ್ಞರೊಂದಿಗೆ ಈ ಕುರಿತು ಚರ್ಚಿಸಿದ ಸ್ಪೀಕರ್, ಈ ಮೂವರು ಸಂಸದರಿಗೆ 'ಲಿಖಿತ ದೂರು' ಕೊಡಲು ಹೇಳಿದರು. ಈ ಮೇಲಿನ ಮೂವರು ಸಂಸದರು ಲಿಖಿತ ದೂರನ್ನು ನೀಡುವುದಕ್ಕಿಂತಲೂ ಮುಂಚೆಯೇ, ಅಂದರೆ, 23.07.2008ರಂದು, ಸಭಾಪತಿಗಳಿಗೆ ಸಿಎನ್‌ಎನ್-ಐಬಿಎನ್ ನೆಟ್ವರ್ಕ್‌ನ ಮುಖ್ಯಸಂಪಾದಕ ರಾಜದೀಪ್ ಸರ್ದೇಸಾಯಿ ಅವರಿಂದ ಕೆಲವು ಮಾಹಿತಿಗಳು ದೊರಕಿದವು. ರಾಜದೀಪ್ ಸರ್ದೇಸಾಯಿ 5 ವೀಡಿಯೋ ಟೇಪ್ ಮತ್ತು ತಮ್ಮ ಹೇಳಿಕೆಯನ್ನು ಸಭಾಪತಿಗಳಿಗೆ ಕಳುಹಿಸಿಕೊಟ್ಟಿದ್ದರು. 25.07.2008 ರಂದು ಈ ಮೂವರು ಸಂಸದರು, ಲಿಖಿತ ದೂರನ್ನು ನೀಡಿದರು. ವಿಶ್ವಾಸ ಮತದ ವಿರುದ್ಧ ಮತ ಚಲಾಯಿಸದಿರುವಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ಕೆಲವು ನಾಯಕರು ತಮಗೆ ಹಣಕೊಟ್ಟಿದ್ದಾರೆ ಎಂದು ಅವರು ಅದರಲ್ಲಿ ಆರೋಪಿಸಿದರು.
ಆ ಪ್ರಕರಣವನ್ನು ಹೊರಗೆಡವಿದ ಈ ಮೂವರು ಸಂಸದರು ಮತ್ತು ಸುಧೀಂದ್ರ ಕುಲಕರ್ಣಿಯವರನ್ನು ಬಂಧಿಸಲಾಯಿತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ನಾನು, "ಮುಂದಿನ ಹೆಜ್ಜೆಯಿಡುವುದಕ್ಕೂ ಮುನ್ನ ನಮ್ಮ ಅಹವಾಲನ್ನು ಕೇಳಬೇಕೆಂದು ಸಭಾಪತಿಗಳಿಗೆ" ಮನವಿ ಮಾಡಿದೆ.
"ಘೋರ ಅಪರಾಧವೊಂದು ನಡೆದಿದೆ. ಸರ್ಕಾರವನ್ನು ಬೆಂಬಲಿಸಲು ಪ್ರಾದೇಶಿಕ ಪಕ್ಷದ ಕೆಲವು ಸಂಸದರಿಗೆ ಲಂಚ ನೀಡಲಾಗಿದೆ. ಅಲ್ಲದೆ ಮಾಹಿತಿದಾರರಾಗಿ ಈ ಬಿಜೆಪಿಯ ಸಂಸದರು ಸತ್ಯವನ್ನು ತೆರೆದಿಟ್ಟಿದ್ದಾರೆ. ತಮಗೆ ಕೊಟ್ಟ ಹಣವನ್ನು ಅವರು ಮನೆಗೊಯ್ಯಲಿಲ್ಲ, ಬದಲಾಗಿ, ಅದನ್ನು ನೇರವಾಗಿ ಸಂಸತ್ತಿಗೆ ತಂದು ತೆರೆದಿಟ್ಟಿದ್ದಾರೆ. ಪ್ರಪಂಚದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಸತ್ಯವನ್ನು ತೆರೆದಿಟ್ಟವರನ್ನು ಕೊಂಡಾಡಲಾಗುತ್ತದೆ. ಆದರೆ ನಮ್ಮಲ್ಲಿ ಜೈಲಿಗಟ್ಟಲಾಗಿದೆ! ಒಂದು ವೇಳೆ ನನ್ನ ಸಹೋದ್ಯೋಗಿಗಳು ತಪ್ಪೆಸಗಿದ್ದಾರೆ ಎಂದು ಸರ್ಕಾರ ಭಾವಿಸುವುದಾದರೆ, ಆ ಸಹೋದ್ಯೋಗಿಗಳು ನನ್ನ ಅನುಮತಿಯ ಮೇರೆಗೇ ಈ ಹಳವಂಡವನ್ನು ಹೊರಹಾಕುವ ಕೆಲಸವನ್ನು ಮಾಡಿದ್ದಾರೆ. ಈ ಕಾರಣಕ್ಕಾಗಿ, ನನ್ನನ್ನೂ ಜೈಲಿಗಟ್ಟಲಿ ಎಂದು ನಾನು ಸರ್ಕಾರಕ್ಕೆ ಸವಾಲು ಎಸೆಯುತ್ತೇನೆ"  ಎಂದು ಸ್ವಲ್ಪ ಸಿಟ್ಟಿನಿಂದಲೇ ಹೇಳಿದೆ.  
ವೋಟಿಗಾಗಿ ನೋಟು ಹಗರಣವಷ್ಟೇ ಅಲ್ಲ, ಯುಪಿಎ-2ರ ಅವಧಿಯಲ್ಲಿ ನಡೆದ ಹಲವಾರು ಹಗರಣಗಳೂ ಅಷ್ಟೇ ಭಯಾನಕವಾಗಿವೆ. ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಡಿಯಲ್ಲಿ ಮೂರು ಮುಖ್ಯ ರಾಜ್ಯಗಳಾದ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಬಿಹಾರವನ್ನು ವಿಭಜಿಸಿ, ಹೊಸ ರಾಜ್ಯಗಳಾದ ಛತ್ತೀಸ್‌ಗಡ, ಉತ್ತರಾಖಂಡ ಮತ್ತು ಜಾರ್ಖಂಡ್‌ಗಳನ್ನು ಹುಟ್ಟುಹಾಕಲಾಯಿತು. ಆದರೆ ಆ ಪ್ರಕ್ರಿಯೆಯಲ್ಲಿ ಒಂದಿಷ್ಟೂ ಗೊಂದಲ- ಗಲಾಟೆಗಳಾಗಲಿಲ್ಲ. ಆದರೆ ಪ್ರಸಕ್ತ ಸರ್ಕಾರ ತೆಲಂಗಾಣ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದೆಯೋ ಗಮನಿಸಿ. ತೆಲಂಗಾಣದ ಬೆಂಬಲಿಗರು ಮತ್ತು ವಿಭಜನೆಯ ವಿರೋಧಿಗಳು ಎಬ್ಬಿಸುತ್ತಿರುವ ಗದ್ದಲದಿಂದಾಗಿ ಪದೇ ಪದೆ ಸದನವನ್ನು ಮುಂದೂಡಬೇಕಾಗುತ್ತಿದೆ.
ಕಳೆದ ವಾರ ಈ ವಿಚಾರವಾಗಿ ನಡೆದ ಘಟನೆಯನ್ನು ನೋಡಿ ಖುದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರೇ, "ಸಂಸತ್‌ನಲ್ಲಿ ನಡೆಯುತ್ತಿರುವ ಇಂಥ ದೃಶ್ಯಗಳನ್ನು ನೋಡಿ ಮನಸ್ಸಿಗೆ ತುಂಬಾ ನೋವಾಗುತ್ತಿದೆ" ಎಂದು ಹೇಳಿದರು. ಮೊದಲನೆಯ ದಿನ ಸರ್ಕಾರದ ಅರ್ಧ ಡಜನ್‌ಗೂ ಸಚಿವರು, ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾಗಾಂಧಿಯವರ ಉಪಸ್ಥಿತಿಯನ್ನೇ ಕಡೆಗಣಿಸಿ, ಸಂಸತ್ತಿನ ಬಾವಿಗೆ ನುಗ್ಗಿ ಗದ್ದಲವೆಬ್ಬಿಸಿದರು. ಆಂಧ್ರ ಪ್ರದೇಶದ ವಿಭಜನೆಯ ವಿರುದ್ಧ ಕೂಗು ಹಾಕಿದರು. ಹಾಳೆಗಳನ್ನೆಲ್ಲ ಎಲ್ಲೆಡೆ ತೂರಿದರು. ಇದು ನಡೆದದ್ದು ಫೆಬ್ರವರಿ 12ರಂದು.
ಅದರ ಮರುದಿನವಂತೂ ಸಂಸತ್ತು ಅಹಿತಕರ ಘಟನೆಗಳ ಅತಿರೇಕಗಳಿಗೆ ಸಾಕ್ಷಿಯಾಯಿತು. ಕಾಂಗ್ರೆಸ್‌ನ ಸಂಸದನೊಬ್ಬ ಪೆಪ್ಪರ್ ಸ್ಪ್ರೇ(ಮೆಣಸಿನ ಸ್ಪ್ರೇ) ಹೊರತೆಗೆದು ಸುತ್ತಲೂ ಸಿಂಪಡಿಸಿಬಿಟ್ಟ. ಇದರಿಂದಾಗಿ ಸುಷ್ಮಾ ಸ್ವರಾಜ್ ಒಳಗೊಂಡಂತೆ ಹಲವಾರು ನಾಯಕರ ಕಣ್ಣುಗಳು ಉರಿಯಿಂದ ನೀರುಬಿಟ್ಟವು. ಇನ್ನೂ ಕೆಲವರಂತೂ ಅಸ್ವಸ್ಥರಾಗಿ ಕೆಮ್ಮತೊಡಗಿದರು!



 -ಎಲ್. ಕೆ. ಆಡ್ವಾಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.