ಇದು ಸಂಸ್ಕೃತಿ ಸಚಿವೆ ಮಾತಾಡುವ ರೀತಿಯೇನು ಉಮಾಶ್ರೀಯವರೇ..?

ನಿನ್ನೆ ನಮ್ಮ ಪಕ್ಷದ ಹಿರಿಯರ ಕರೆಯೊಂದು ಬಂತು. ನಮ್ಮ ಕಾರ್ಯಕರ್ತರೊಂದಿಗೆ ದಂಪತಿಯನ್ನು ಕಳುಹಿಸಿಕೊಡುತ್ತೇನೆ, ಒಬ್ಬ ವಕೀಲೆಯಾಗಿ ನಿಮ್ಮಿಂದ ಯಾವ ರೀತಿಯ ಸಹಾಯ ಮಾಡಲು ಸಾಧ್ಯ, ಮಾಡಿ ಎಂದು ಫೋನಿಟ್ಟರು. ಎರಡುವರೆ ವರ್ಷದ ಹಸುಗೂಸು, ಈಗಷ್ಟೇ ವಿಶ್ವವನ್ನು ಕಣ್ತೆರೆದು ನೋಡುವ ಮುಗ್ಧ ಕಂದ. ಧರೆಗಿಳಿದು ಬಂದಿರುವ ದೇವರ ಪ್ರತಿರೂಪ...ಬೆಂಗಳೂರಿನ ದೊಡ್ಡದೊಂದು ಖಾಸಗಿ ಶಾಲೆಯ ಆವರಣದಲ್ಲಿ ಹೈವಾನನೊಬ್ಬನ ವಿಕೃತಿಗೆ, ಅತ್ಯಾಚಾರಕ್ಕೆ ತುತ್ತಾಗಿದೆ. "ಅದುವೂ ಭೋಗದ ವಸ್ತುವಾಗಿ ಕಾಣುತ್ತಿದೆಯಲ್ಲಾ ನಮ್ಮ ಕೆಲವು ಪುರುಷರಿಗೆ" ಎಂದು ಆ ಪೋಷಕರ ದಾರುಣ ಕಥೆಯನ್ನು ಕೇಳಿ ಅನಿಸಿತು.
2012ರಲ್ಲಿ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿತು ನಿರ್ಭಯಾ ಪ್ರಕರಣ. 2013ರಲ್ಲಿ ಭಾರತೀಯ ನೀತಿ ಸಂಹಿತೆಯ ಸೆಕ್ಷನ್ 376ರ ತಿದ್ದುಪಡಿಯಾಗಿ, 2013ರಲ್ಲೇ ಫಾಸ್ಟ್ ಟ್ರ್ಯಾಕ್ ಕೋರ್ಟ್, ನಿರ್ಭಯಾಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದವರಿಗೆ ಮರಣದಂಡನೆಯನ್ನು ವಿಧಿಸಿದ ನಂತರದ ಭಾರತದಲ್ಲಿ 2014ರ ಜನವರಿಯಲ್ಲಿರುವ ಭಾರತೀಯ ಮಹಿಳೆ, ಹೆಣ್ಣು ಮಕ್ಕಳ ವಾಸ್ತವ ಇದು! ಈ ಮಗು, ತನ್ನದಲ್ಲದ ತಪ್ಪಿಗೆ ಜೀವನ ಪರ್ಯಂತ ಮಾನಸಿಕ, ದೈಹಿಕ ನೋವನ್ನು ಅನುಭವಿಸಲಿದೆಯಲ್ಲಾ? ತಮ್ಮ ಕೂಸೇ ಸರ್ವಸ್ವವೆಂದು ಅವಳಿಗಾಗಿ ಬಣ್ಣ ಬಣ್ಣದ ಕನಸುಗಳನ್ನು ಹೊತ್ತಿರುವ ಪೋಷಕರ ಕಣ್ಣೀರನ್ನು ಯಾರು ಒರೆಸುತ್ತಾರೆ? ಸಾಂತ್ವನ ಹೇಳಲು ಸಾಧ್ಯವಾ? ಯಾರು ಸಾಂತ್ವನ ಹೇಳುತ್ತಾರೆ? ಸಮಾಜವಾ, ಮಹಿಳೆಯರಾ, ಸ್ತ್ರೀವಾದಿಗಳಾ ಅಥವಾ ನಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳಾ?
ನಮ್ಮ ಮಂತ್ರಿಗಳಿಗೆ ಮಹಿಳಾ ಸುರಕ್ಷತೆ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆಯ ಸರಿಯಾದ ಕಲ್ಪನೆ ಇದ್ದಿದ್ದರೆ, ನಿನ್ನೆಯ ಕಾಂಗ್ರೆಸ್ನ "ಮಹಿಳಾ ಸಮಾವೇಶ"ದಲ್ಲಿ ಆ ಧಾಟಿಯಲ್ಲಿ ಮಾತನಾಡುತ್ತಿದ್ದರಾ? ಇವತ್ತಿನ ಭಾರತೀಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳೇನು, ಅವುಗಳಿಗೆ ಪರಿಹಾರಗಳೇನು ಎನ್ನುವುದನ್ನು ಸೂಚಿಸುವುದು ಬಿಟ್ಟು...?
ಶ್ರೀಮತಿ ಉಮಾಶ್ರೀ ಯವರೇ, ಒಬ್ಬ ಮಹಿಳೆಯಾಗಿ, ಒಬ್ಬ ತಾಯಾಗಿ, ಒಬ್ಬ ಕಲಾವಿದೆಯಾಗಿ, ಇಡೀ ಮಂತ್ರಿ ಮಂಡಲದ ಏಕೈಕ ಮಹಿಳಾ ಸದಸ್ಯೆಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣದ ಮಹತ್ವದ ಜವಾಬ್ದಾರಿಯನ್ನು ಹೊತ್ತಿರುವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿಗಳಾದ ತಾವು ಮಾತನಾಡಿದ್ದಾದರೂ ಏನು?
ಭಾರತೀಯ ಜನತಾ ಪಕ್ಷದ ಬೆರಳೆಣಿಕೆಯ ಕೆಲವರ ವೈಯಕ್ತಿಕ ವಿಚಾರಗಳನ್ನು ಅವಾಚ್ಯ ಶಬ್ದಗಳಲ್ಲಿ ವಿಶ್ಲೇಷಣೆ ಮಾಡಿದ್ದೀರಿ.
ತಾವು ಪ್ರಸ್ತಾಪಿಸಿರುವ ಪ್ರಕರಣಗಳಲ್ಲಿ ನಮ್ಮ ಪಕ್ಷ ಸೂಕ್ತ ನಡವಳಿಕೆಯನ್ನು ಕೈಗೊಂಡಿದೆ ಎಂದು ತಮಗೆ ಮನವರಿಕೆ ಮಾಡಿಕೊಡುವುದು ನನ್ನ ಧರ್ಮ. ತಮ್ಮ ಪಕ್ಷದ ಧುರೀಣರು ಅದಕ್ಕಿಂತ ದೊಡ್ಡ ಪ್ರಮಾಣದ ಇಕ್ಕಟ್ಟಿನ ಪರಿಸ್ಥಿತಿಗಳಲ್ಲಿ ಸಿಲುಕಿರುವುದು ನಮಗೂ ತಿಳಿದಿದೆ. ಆದರೆ ಆ ಚರ್ಚೆಯಲ್ಲಿ ತೊಡಗುವ ಸಂಸ್ಕೃತಿ ನಮ್ಮದಲ್ಲ. ಜತೆಗೆ ಮಹಿಳೆಯರಾಗಿ ನಾನು ನೀವು ಕೂತು ಮಾತನಾಡುವ ಹಲವಾರು ಗಂಭೀರ ಸಮಸ್ಯೆಗಳಿವೆ. ಮಹಿಳಾ ಸಮಾವೇಶದ ಚರ್ಚೆ ಒಟ್ಟಾರೆ ಮಹಿಳೆಯರ ಒಳಿತಿಗಾಗಿ ನಡೆದಿದ್ದರೆ ಅದು ನಿಮಗೂ ಶೊಭೆ ತರುತ್ತಿತ್ತಲ್ಲವೆ? ಇಂದು ಸಾಮಾನ್ಯ ಮಹಿಳೆಯರ ದೈನಂದಿನ ಬದುಕು ಬೃಹದಾಕಾರದ ಸಮಸ್ಯೆಯಾಗಿ ದೇಶದ ಮುಂದೆ ನಿಂತಿರುವಾಗ, ಕೆಲವರ ವೈಯಕ್ತಿಕ ವಿಚಾರಕ್ಕೆ ಅದನ್ನು ಸೀಮಿತಗೊಳಿಸುವುದು ಒಬ್ಬ ಮಂತ್ರಿಯಾಗಿ ಎಷ್ಟು ಸಮಂಜಸ? ನಿಮ್ಮ ಪ್ರೇಕ್ಷಕರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚಿದ್ದರೆಂದು ಮಾಧ್ಯಮದ ವರದಿಗಳು ಸೂಚಿಸುತ್ತವೆ. ಅವರ ಶಿಳ್ಳೆ, ಚಪ್ಪಾಳೆಗಳ ಆಪೇಕ್ಷೆಯಲ್ಲಿ ಮಹಿಳಾ ಸಮಸ್ಯೆಗಳ ಚರ್ಚೆಯ ಸ್ಥರವನ್ನು ಈ ಮಟ್ಟಕ್ಕೆ ಇಳಿಸಬಹುದೇ?
ಕನ್ನಡ ಪರ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂಬ ಆಪಾದನೆ ಆಗಾಗ ಕೇಳಿಬರುತ್ತದೆಯಾದರು, ಕಲಾವಿದೆಯಾದ ತಾವು ಕನ್ನಡದ ಏಳಿಗೆಗಾಗಿ ದುಡಿಯುತ್ತೀರೆಂಬ ನಂಬಿಕೆ ನಮಗಿತ್ತು. ಆದರೆ ತಾವು ಸಂಸ್ಕೃತಿಯ ಸಚಿವೆಯಾಗಿ ಇಂತಹ ಭಾಷೆಯನ್ನು ಬಳಸಿದ್ದು ದುರದೃಷ್ಟಕರ. ನಮ್ಮ ನಂಬಿಕೆಯನ್ನು ಹುಸಿಗೊಳಿಸಿದ್ದೀರ ಸಚಿವರೆ.
ತಮ್ಮ ನಾಯಕರ ತ್ಯಾಗದ ಕುರಿತು ಹೊಗಳಿ ಹೆಮ್ಮೆಯ ಮಾತುಗಳನ್ನಾಡುತ್ತಾ, ಭಾಜಪದ ನಾಯಕರ ಕುರಿತು ನುಡಿಮುತ್ತುಗಳನ್ನುದಿರಿಸಿರುತ್ತೀರಿ. ನಿಮ್ಮ ನಾಯಕರು ಸ್ವಾತಂತ್ರ್ಯ ಸಂಗ್ರಾಮದಲ್ಲಾಗಲಿ, ಶತ್ರು ಸೈನಿಕರೊಂದಿಗೆ ಹೋರಾಡಿ ಯುದ್ಧದಲ್ಲಾಗಲಿ ಮಣಿದಿಲ್ಲ. ರಾಜಕೀಯ ಹತ್ಯೆಗೆ ಬಲಿಯಾದವರಷ್ಟೆ. ನಮ್ಮ ಭಾರತೀಯ ಜನ ಸಂಘದ ಸಂಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿಯವರು ಕಾಶ್ಮೀರದ ಉಳಿವಿಗಾಗಿ ಹೋರಾಟ ನಡೆಸಿ ಶ್ರೀನಗರದ ಸೆರೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮರಣಿಸಿದ್ದು ತಮಗೆ ತಿಳಿದಿರಲಿ. ಭಾಜಪಗೆ ಸಿದ್ಧಾಂತವನ್ನು ನೀಡಿದ ಮಹಾನ್ ಪುರುಷ ಪಂ. ದೀನ್ದಯಾಳ್ ಉಪಾಧ್ಯಾಯರನ್ನು ರೈಲಿನಲ್ಲಿ ಹತ್ಯೆ ಮಾಡಲಾಯಿತು. ಇವರಿಬ್ಬರ ಸಾವಾದ ಸಮಯದಲ್ಲಿ ಪ್ರಧಾನಿಯಾಗಿದ್ದವರು ನೆಹರು ಮತ್ತು ಶ್ರೀಮತಿ ಇಂದಿರಾ ಗಾಂಧಿಯವರು. ಅವರ ಹತ್ಯೆಯ ಹಿಂದಿನ ಸಂಚು ಇಂದಿಗೂ ನಿಗೂಢವಾಗೇ ಉಳಿದಿದೆ. ತಮಗೆ ಗೊತ್ತಿರಲಿ, ಇಂದಿರಾಗಾಂಧಿಯವರು 1975ರಲ್ಲಿ ರಾಷ್ಟ್ರದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದು, ತುರ್ತು ಪರಿಸ್ಥಿತಿಯನ್ನು ಹೇರಿದಾಗ, ಸರ್ವಾಧಿಕಾರಿ ಮತ್ತು ನಿರಂಕುಶ ಆಡಳಿತದ ವಿರುದ್ಧ ಮತ್ತು ಜನಸಾಮಾನ್ಯರ ವ್ಯಕ್ತಿ ಸ್ವಾತಂತ್ರ್ಯವನ್ನು ಹಿಂಪಡೆಯುವುದಕ್ಕಾಗಿ ಅಂದು ಹೋರಾಟ ಮಾಡಿ, ಜೈಲು ಸೇರಿದ ಅನೇಕರು ಇಂದು ನಮ್ಮ ಪಕ್ಷದ ಹಿರಿಯ ನಾಯಕರು.
ಇದು ಚುನಾವಣಾ ಸಮಯ ಹೌದು. ಆದರೆ ಭಾಗವಹಿಸುತ್ತಿರುವ ನಾವೆಲ್ಲರೂ ಭಾರತೀಯರೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಹಾಗಾಗಿ ವಿಚಾರ, ಸಮಸ್ಯೆಗಳು, ನಾಯಕರ ಸಾಮರ್ಥ್ಯ, ವೈಫಲ್ಯಗಳು, ಪ್ರಗತಿಯ ಕುರಿತು ಚರ್ಚೆ ಮಾಡೋಣ. ಅದನ್ನು ಬಿಟ್ಟು ದೇಶದ ಮತ್ತು ಪ್ರಮುಖ ವಿರೋಧ ಪಕ್ಷದ ನಾಯಕರನ್ನು ಇಂತಹ ಸಂಸ್ಕೃತಿ ರಹಿತ ಭಾಷೆಯಲ್ಲಿ ಟೀಕಿಸುವುದರ ಮೂಲಕ ಒಟ್ಟಾರೆ ಚುನಾವಣಾ ಸಂಭಾಷಣೆಯ ಸ್ತರವನ್ನು ಈ ಮಟ್ಟಕ್ಕೆ ತಂದಿಳಿಸಿದ್ದೀರಲ್ಲಾ, ಪಟ್ಟಿ ಮಾಡಲು ನಿಮ್ಮ ನಾಯಕರ ಸಾಧನೆ, ಸಾಮರ್ಥ್ಯಗಳ ಆಗಾಧ ಕೊರತೆಯೇ ಇದಕ್ಕೆಲ್ಲಾ ಕಾರಣವೇ?
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಚಿವರ ಹಗುರವಾದ ಮಾತುಗಳಿಗೆ, ಟೀಕೆಗಳಿಗೆ ಕಡಿವಾಣ ಹಾಕಬೇಕೆಂಬುದು ವಿನಯ ಪೂರ್ವಕ ಮನವಿ.
- ಮಾಳವಿಕ ಅವಿನಾಶ್
ಬಿಜೆಪಿ ವಕ್ತಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


