

ಇತ್ತೀಚೆಗೆ ನಾನು Unbreakable. ಎಂಬ ಪುಸ್ತಕ ಓದುತ್ತಿದ್ದೆ. ಸುಮಾರು 165 ಪುಟಗಳ ಪುಟ್ಟ ಪುಸ್ತಕ. ರಾತ್ರಿ ಮನೆಗೆ ಹೋಗಿ ಹನ್ನೊಂದಕ್ಕೆ ಆ ಪುಸ್ತಕದೊಳಗೆ ತೂರಿಕೊಂಡೆ. ಬೆಳಗಿನ ಜಾವ ಮೂರು ಗಂಟೆ ಹೊತ್ತಿಗೆ ಪುಸ್ತಕ ಮುಗಿಸಿದಾಗ, ಕಣ್ಣೊಳಗೆ ನಿದ್ದೆ ಇಳಿಯಲೇ ಇಲ್ಲ. ಬಹಳ ಪ್ರಯತ್ನಪಟ್ಟರೂ ಬರಲಿಲ್ಲ. ಆನಂತರ ಎಷ್ಟು ಹೊತ್ತಿಗೆ ನನ್ನನ್ನು ನಿದ್ದೆ ಎತ್ತಿಕೊಂಡು ಹೋಯಿತೆಂಬುದು ಗೊತ್ತಾಗಲಿಲ್ಲ. ಎಂದಿನಂತೆ ಬೆಳಗ್ಗೆ ಏಳಕ್ಕೆ ಎದ್ದು ಕುಳಿತಾಗ ಕಣ್ಣೊಳಗೆ ಆ ಪುಸ್ತಕದ ಹಾಳೆಗಳು ತೇಲುತ್ತಿದ್ದವು. ಮನಸ್ಸಿನಲ್ಲಿ ಆಕೆಯ ಪ್ರತಿಬಿಂಬಗಳೇ ಇದ್ದವು.
ನೀವು ಮೇರಿ ಕೋಮ್ ಹೆಸರನ್ನು ಕೇಳಿರಬಹುದು. ಈಕೆ ಭಾರತದ ಪ್ರಪ್ರಥಮ ಮಹಿಳಾ ಬಾಕ್ಸರ್. ಐದು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆದವಳು. 2012ರ ಬೇಸಿಗೆ ಓಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದ ಭಾರತದ ಏಕೈಕ ಮಹಿಳಾ ಬಾಕ್ಸರ್. ಈ ಓಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದವಳು. ವಿಶ್ವ ಮಹಿಳಾ ಬಾಕ್ಸರ್ ರ್ಯಾಂಕಿಂಗ್‌ನಲ್ಲಿ ಮೇರಿ ಕೋಮ್‌ಗೆ ನಾಲ್ಕನೇ ಸ್ಥಾನ.
ಈಕೆಯ ಆತ್ಮಕತೆಯೇ Unbreakable. . ಎಂಥವನಲ್ಲೂ ಉತ್ಸಾಹವನ್ನು ಉಕ್ಕಿಸುವ ಅದ್ಭುತ ಸಾಹಸಗಾಥೆ. ಈಶಾನ್ಯ ಭಾರತದ ಕುಗ್ರಾಮವೊಂದರ ಕಡುಬಡ ಕುಟುಂಬದಲ್ಲಿ ಹುಟ್ಟಿದ ಈ ಹೆಣ್ಣು ಮಗಳು ವಿಶ್ವಚಾಂಪಿಯನ್ ಆದ ಕತೆಯಿದೆಯಲ್ಲ, ಅದೊಂದು ಅಮೋಘ ಪವಾಡ. ಆಕೆ ಅನುಭವಿಸಿದ ಕಷ್ಟಕೋಟಲೆ, ಅವಮಾನ, ಬಡತನ, ಅಸಮಾನತೆ ಅಷ್ಟಿಷ್ಟಲ್ಲ. ಅವೆಲ್ಲವನ್ನೂ ಮೆಚ್ಚಿ ಕೀರ್ತಿ ಶಿಖರವೇರಿದ ಆಕೆಯ ಗುಂಡಿಗೆ ಎಂಥವನಲ್ಲಾದರೂ 'ಝಲ್' ಎಂದೆನಿಸದಿರದು.
ಅಂದ ಹಾಗೆ ಈಕೆಯ ಆತ್ಮಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಸದ್ಯದಲ್ಲಿಯೇ ಅದನ್ನು ನಿಮ್ಮ ಕೈಗಿಡಲಿದ್ದೇನೆ. ಮೇರಿ ಕೋಮ್ ಜೀವನದ ಒಂದು ಸಣ್ಣ ಝಲಕ್ ನಿಮ್ಮ ಮಂದಿಡುತ್ತಿದ್ದೇನೆ.
---------
ಬಾಲ್ಯದಲ್ಲಿ ನಮ್ಮ ಊರಿನಲ್ಲಿ ಮನರಂಜನೆಗೆ ಯಾವ ಅನುಕೂಲಗಳೂ ಇರಲಿಲ್ಲ. ಕೆಲವೇ ಕೆಲವು ಶ್ರೀಮಂತರ ಮನೆಗಳಲ್ಲಿ ಟಿ.ವಿಗಳಿದ್ದವು. 2002ರಲ್ಲಿ ರಾಜ್ಯಮಟ್ಟದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ನನಗೆ ನಗದು ಬಹುಮಾನ ಬಂದ ಸಂದರ್ಭದಲ್ಲಿ, ಆ ಹಣದಿಂದ ಮನೆಗೆ ಒಂದು ಟಿ.ವಿ. ಖರೀದಿಸಿದ್ದಾಯಿತು. ಅದುವರೆಗೂ ನಮ್ಮ ಸೋದರ ಸಂಬಂಧಿಗಳ ಮನೆಯಲ್ಲಿ ಟಿ.ವಿ. ನೋಡುತ್ತಿದ್ದೆವು. ಆ ದಿನಗಳಲ್ಲಿ ಜಾಕಿಚಾನ್, ಬ್ರೂಸ್ಲೀ, ಜೆಟ್‌ಲೀ ಮುಂತಾದವರ ಆ್ಯಕ್ಷನ್ ಪ್ರಧಾನ ಚಿತ್ರಗಳು ನನ್ನ ಫೇವರಿಟ್ ಆಗಿದ್ದವು. ಹಿಂದಿ, ನಮ್ಮ ದೇಶದ ರಾಷ್ಟ್ರ ಭಾಷೆ ನಿಜ. ಆದರೆ, ಮಣಿಪುರದಲ್ಲಿ ಮಣಿಪುರಿಯಾ ಪ್ರಧಾನ ಭಾಷೆಯಾಗಿತ್ತು. ಹೀಗಾಗಿ ನಾವು ಹಿಂದಿಯನ್ನು ಕಲಿತಿರಲಿಲ್ಲ. ಭಾಷೆ ಅರ್ಥವಾಗದಿದ್ದ ಕಾರಣ, ಹಿಂದಿ ಭಾಷೆಯ ಸಿನಿಮಾಗಳು ಬೋರ್ ಹೊಡೆಸುತ್ತಿದ್ದವು.
ಊರಿನಲ್ಲಿ, ಯಾರಾದರೂ ಹೊಸದೊಂದು ವಿಡಿಯೋ ಕೆಸೆಟ್ ಖರೀದಿಸಿದ್ದಾರೆ ಎಂದರೆ, ಆ ಸುದ್ದಿ ತುಂಬ ಬೇಗ ಎಲ್ಲರನ್ನೂ ತಲುಪುತ್ತಿತ್ತು. ನಾವು ಮಕ್ಕಳೆಲ್ಲ ತಕ್ಷಣವೇ ವಿಡಿಯೊ ಕ್ಯಾಸೆಟ್ ಖರೀದಿಸಿದವರ ಮನೆಗೆ ಹೋಗುತ್ತಿದ್ದೆವು. ನಂತರ ಎಲ್ಲರೂ ಗಪ್ಚುಪ್ ಆಗಿ ಕೂತು ಸಿನಿಮಾ ನೋಡುತ್ತಿದ್ದೆವು. ಅದು ಮುಗಿಯುತ್ತಿದ್ದಂತೆಯೇ ಆ ಚಿತ್ರದ ಹೀರೋ ಹೀರೊಯಿನ್‌ಗಳನ್ನು ಅನುಕರಿಸುತ್ತಾ ಅವರಂತೆಯೇ ಆ್ಯಕ್ಷನ್ ಮಾಡುವುದು ನಮ್ಮ ಮೆಚ್ಚಿನ ಹವ್ಯಾಸವಾಗಿತ್ತು. ನಾನು ಬ್ರೂಸ್ಲೀ ಕಿಕ್‌ಗಳನ್ನು ಪ್ರದರ್ಶಿಸುತ್ತಾ, ನಮ್ಮ ಸೋದರ ಸಂಬಂಧಿ ಚಂಗ್ ಜಲೀನ್ ಮೇಲೆ ಅವುಗಳನ್ನು ಪ್ರಯೋಗಿಸುತ್ತಿದ್ದೆ. ವಯಸ್ಸಿನಲ್ಲಿ ನನಗಿಂತ ಆತ ದೊಡ್ಡವನಿದ್ದ. ದನಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ನಾವಿಬ್ಬರೂ ಭವಿಷ್ಯದ ಕುರಿತು ಮಾತಾಡಿಕೊಳ್ಳುತ್ತಿದ್ದೆವು. ದೊಡ್ಡವರಾದ ಮೇಲೆ ಶ್ರೀಮಂತರಾಗಿ, ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದೇ ಇಬ್ಬರ ನಿರ್ಧಾರವೂ ಆಗಿರುತ್ತಿತ್ತು.
ರಜಾದಿನಗಳಲ್ಲಿ, ಮನಸ್ಸಿಗೆ ಬಂದಂತೆ ಆಟವಾಡಲು ನನಗೆ ಅವಕಾಶವಿರುತ್ತಿರಲಿಲ್ಲ. ಅಂದು ಮನೆಗೆ ಅಗತ್ಯವಿದ್ದ ಉರುವಲುಗಳನ್ನು ಆಯ್ದು ತರುವ ಕೆಲಸ ನಮ್ಮ ಪಾಲಿಗೆ ಇರುತ್ತಿತ್ತು. ಹಣ ಕೊಟ್ಟು ಸೌದೆ ಖರೀದಿಸುವ ತ್ರಾಣ ನಮ್ಮ ಕುಟುಂಬಕ್ಕೆ ಇರಲಿಲ್ಲವಾದ್ದರಿಂದ ಚಿಕ್ಕಗಾತ್ರದ ಒಣಗಿದ ಕಡ್ಡಿ ಹಾಗೂ ಸೌದೆಯನ್ನು ಆಯ್ದು ತರುವುದು ಅನಿವಾರ್ಯವಾಗಿತ್ತು. ಸೌದೆ ಸಂಗ್ರಹಕ್ಕೆಂದೇ ಅಪ್ಪನೊಂದಿಗೆ ನಾವು ಮೂರು ಮಂದಿಯೂ ನಮ್ಮ ಊರಿಂದ 8 ಕಿ.ಮೀ. ದೂರವಿದ್ದ ನಿಂಗ್ ನೇ ಚಿಂಗ್ ಎಂಬ ಗುಡ್ಡ ಪ್ರದೇಶಕ್ಕೆ ಹೋಗುತ್ತಿದ್ದೆವು. ಅಲ್ಲಿ ಮರಗಳನ್ನೇರಿ ಅಲ್ಲಿದ್ದ ಒಣಗಿದ ಕೊಂಬೆಗಳನ್ನು ಅಪ್ಪ ಕಡಿದು ಹಾಕುತ್ತಿದ್ದ. ಸಂಜೆಯಾಗುತ್ತಿದ್ದಂತೆಯೇ ಸೌದೆಯ ಹೊರೆಗಳನ್ನು ಹೊತ್ತುಕೊಂಡು ನಾವು ಮನೆಯ ಹಾದಿ ಹಿಡಿಯುತ್ತಿದ್ದೆವು. ಒಂದು ಬಾರಿ ಅಪ್ಪ ಗುಡ್ಡದ ಮೇಲ್ಭಾಗಕ್ಕೆ ಹೋಗಿಬಿಟ್ಟಿದ್ದ. ನಾನು ಕೆಳಗೇ ನಿಂತಿದ್ದೆ. ಆಗ, ನಿಂತಿದ್ದ ಜಾಗ ಜಾರಿದಂತಾಯಿತು. ತಕ್ಷಣವೇ ಆಸರೆಗೆಂದು ಮರವೊಂದರ ಬಳ್ಳಿಯನ್ನು ಹಿಡಿದುಕೊಂಡೆ. ದುರಾದೃಷ್ಟಕ್ಕೆ ಆ ಬಳ್ಳಿ ಲಟ್ಟನೆ ಮುರಿದು ಹೋಯ್ತು. ನಾನು ಒಂದು ಕೊರಕಲಿಗೆ ಬಿದ್ದು ಮರುಕ್ಷಣವೇ ಜೋರಾಗಿ ಕೂಗಿಕೊಂಡೆ. ತಕ್ಷಣವೇ ಅಪ್ಪ ಗುಡ್ಡ ಇಳಿದು ಓಡೋಡಿ ಬಂದ. ಹೋ... ಎಂದು ಅಳುತ್ತಾ, ಕೈ ಕಾಲಿಗೆ ಆಗಿದ್ದ ಗಾಯಗಳನ್ನೂ ತೋರಿಸಿದೆ. ಗಾಬರಿಯಾದ ಅಪ್ಪ, ನನ್ನನ್ನು ಮೆಲ್ಲಗೆ ಎತ್ತಿಕೊಂಡು ಒಂದು ಕಡೆ ಮಲಗಿಸಿ, ಯಾವುದೇ ಮೂಳೆಯೂ ಮುರಿದಿಲ್ಲ ಎಂದು ಖಚಿತಪಡಿಸಿಕೊಂಡ. ನಂತರ ಕಾಡಲ್ಲಿದ್ದ ಯಾವುದೋ ಗಿಡದ ಎಲೆಗಳನ್ನು ಕಿತ್ತು ತಂದು, ಅದರಿಂದ ರಸ ತೆಗೆದು ಗಾಯಕ್ಕೆ ಸವರಿದ. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ನಾವು ಮನೆಗೆ ವಾಪಸಾದೆವು.
ಅಂದರೆ, ಉಳಿದೆಲ್ಲ ಮಕ್ಕಳಂತೆ ಹಾಡುತ್ತ, ಕುಣಿಯುತ್ತ ಬಾಲ್ಯ ಕಳೆಯುವ ಅದೃಷ್ಟ ನನಗಿರಲಿಲ್ಲ ಎಂದು ಅರ್ಥವಲ್ಲ. ಎಲ್ಲ ಬ್ಯುಸಿ ಕೆಲಸದ ಮಧ್ಯೆಯೂ ಆಟವಾಡಲು ಕಾಲಾವಕಾಶ ಸಿಗುತ್ತಿತ್ತು. ಗೋಲಿಯಾಟದಲ್ಲಿ ನಾನು ಊರಿಗೇ ಫೇಮಸ್ ಆಗಿದ್ದೆ. ನನ್ನ ವಾರಿಗೆಯ ಎಲ್ಲ ಹುಡುಗರ ಗೋಲಿಗಳನ್ನೂ ಗೆದ್ದು ರಾಶಿ ಹಾಕಿಕೊಂಡಿದ್ದೆ. ಎಷ್ಟೋ ಸಂದರ್ಭದಲ್ಲಿ ಗೆದ್ದ ಗೋಲಿಗಳನ್ನು, ಕಳೆದುಕೊಂಡವರಿಗೇ ಮಾರುತ್ತಿದ್ದೆ. ಕೆಲವು ಸಂದರ್ಭಗಳಲ್ಲಿ ಗೋಲಿಯಾಟದಲ್ಲಿ ನನ್ನ ಸಾಮರ್ಥ್ಯ ತಿಳಿಯಲು ದೊಡ್ಡವರೂ ಮುಂದಾಗುತ್ತಿದ್ದರು. ಅವರೊಂದಿಗೂ ಆಟಕ್ಕಿಳಿದು ಗೆಲ್ಲುತ್ತಿದ್ದೆ. ಹಾಗೆ ನೋಡಿದರೆ ನಾನು ಹೆಣ್ಣುಮಕ್ಕಳೊಂದಿಗೆ ಆಟವಾಡಿದ್ದೇ ಕಡಿಮೆ. ಚಿಕ್ಕಂದಿನಿಂದಲೂ ನಾನು ಒರಟು ವರ್ತನೆಗೆ ಹೆಸರಾಗಿದ್ದೆ. ಯಾವುದೇ ಆಟವಾಗಿರಲಿ, ಅಲ್ಲಿ ಗೆಲ್ಲುವುದಷ್ಟೇ ನನ್ನ ಕೆಲಸ ಎಂಬುದು ನನ್ನ ನಂಬಿಕೆಯಾಗಿತ್ತು.
ಅವತ್ತೊಂದು ದಿನ ನಾನು ಗೋಲಿಯಾಟದಲ್ಲಿ ಮಗ್ನಳಾಗಿದ್ದೆ. ಆಗಲೇ ಓಡಿಬಂದ ತಮ್ಮ, ಅಷ್ಟು ದೂರದಲ್ಲಿ ನಿಂತು 'ಅಮ್ಮ ಕರೀತಾ ಇದ್ದಾರೆ ಬಾ' ಎಂದ, ಅವನ ಮಾತಿಗೆ ಗಮನ ಕೊಡದೆ ನಾನು ಆಟ ಮುಂದುವರಿಸಿದೆ. ಹೀಗೇ ಕೆಲವು ನಿಮಿಷ ಕಳೆಯಿತು. ನನ್ನ ಸಿಟ್ಟಿನ ಪರಿಚಯವಿದ್ದುದರಿಂದ, ತಮ್ಮ ಅಷ್ಟು ದೂರದಲ್ಲಿ ನಿಂತೇ ಮಾತಾಡಿಸ್ತಿದ್ದ. ಹೀಗೇ ಎರಡು ಬಾರಿ ಆಯಿತು. ಅವತ್ತು ಮೇಲಿಂದ ಮೇಲೆ ಆಟದಲ್ಲಿ ಸೋಲತೊಡಗಿದ್ದೆ. ಹಾಗಾಗಿ ಸಿಟ್ಟು ಹೆಚ್ಚುತ್ತಲೇ ಇತ್ತು. ಹೀಗಿರುವಾಗಲೇ ಅಮ್ಮ ಮೂರನೇ ಬಾರಿಗೆ ಹೇಳಿ ಕಳಿಸಿದ್ದಳು. ಈ ಬಾರಿ ತಮ್ಮ ನನ್ನ ಮಗ್ಗುಲಿಗೇ ಬಂದು ನಿಂತು 'ಅಮ್ಮ ಕರೀತಿದ್ದಾರೆ ಬೇಗ ಬಾ' ಎಂದ. ವಿಪರೀತ ಸಿಟ್ಟಾಗಿದ್ದ ನಾನು ಹಿಂದೆ ತಿರುಗಿದ್ದೇ ಅವನಿಗೆ ಜೋರಾಗಿ ಒದ್ದುಬಿಟ್ಟೆ. ಪೆಟ್ಟು ಎಷ್ಟು ಜೋರಾಗಿ ಬಿದ್ದಿತ್ತು ಎಂದರೆ, ತಕ್ಷಣವೇ ಅವನನ್ನು ಆಸ್ಪತ್ರೆಗೆ ಸೇರಿಸಬೇಕಾಯಿತು. ಪುಣ್ಯವಶಾತ್ ಪ್ರಾಣಾಪಾಯದಂಥ ತೊಂದರೆ ಎದುರಾಗಲಿಲ್ಲ.
ನನ್ನ ತಮ್ಮ ಮತ್ತು ತಂಗಿಗೆ, ನಾನು ಅಕ್ಕ ಎಂಬುದಕ್ಕಿಂತ ಅಣ್ಣನಂತಿದ್ದೆ. ಯಾರಾದರೂ ಹುಡುಗ ಹುಡುಗಿಯರು ಅವರನ್ನು ಕೀಟಲೆ ಮಾಡಿದರೆ, ತಕ್ಷಣವೇ ಅಂಥವರನ್ನು 'ವಿಚಾರಿಸಿಕೊಳ್ಳುತ್ತಿದ್ದೆ'. ಅವರು ಉಲ್ಟಾ ಮಾತಾಡಿದರೆ ಹಿಂದೆ ಮುಂದೆ ನೋಡದೆ ನಾಲ್ಕು ಬಾರಿಸುತ್ತಿದ್ದೆ. ಅದೊಮ್ಮೆ ನನ್ನ ತಮ್ಮ ಅಳುತ್ತಾ ಬಂದವನು, ಜೊತೆಗಾರನೊಬ್ಬ ಹೊಡೆದನೆಂದು ದೂರು ಹೇಳಿದ. ತಕ್ಷಣವೇ ಅವನೊಂದಿಗೆ ಹೊರಬಂದು, ಹೊಡೆದಿದ್ದ ಹುಡುಗನನ್ನು ಹುಡುಕಿದೆ. ಆನಂತರ ಅವನ ಎರಡೂ ಕಿವಿಗಳನ್ನು ಎಷ್ಟು ಜೋರಾಗಿ ನುಲಿದಿದ್ದೆನೆಂದರೆ, ಮುಂದೆ ಯಾವತ್ತೂ ಅಂಥ ತಪ್ಪು ಮಾಡುವುದಿಲ್ಲವೆಂದು ಆ ಹುಡುಗ ಪ್ರಾಮಿಸ್ ಮಾಡಿಬಿಟ್ಟಿದ್ದ.
ಹೀಗೆ, ಬಾಲ್ಯದ ದಿನಗಳಲ್ಲಿ ಭಾರೀ ಗಟ್ಟಿಗಿತ್ತಿ ಎಂದು ಊರಿಗೆಲ್ಲಾ ಹೆಸರಾಗಿದ್ದ ನಾನು, ಒಂದು ಸಂದರ್ಭದಲ್ಲಿ ಮಾತ್ರ ಅಸಹಾಯಕಳಾಗಿ ಆಸ್ಪತ್ರೆ ಸೇರುವಂತಾಯಿತು.
ಅದಾಗಿದ್ದು ಹೀಗೆ- ಅದೊಮ್ಮೆ ನಾವು ಕಳ್ಳ ಪೊಲೀಸ್ ಆಟ ಆಡುತ್ತಿದ್ದೆವು. ನನ್ನ ತಮ್ಮ ಬಾಗಿಲು ಮರೆಯಲ್ಲಿ ಅಡಗಿಕೊಂಡಿದ್ದ. ಅದೇನೂ ಗೊತ್ತಿಲ್ಲದ ನಾನು ಅವಿತಿದ್ದವರನ್ನು ಹುಡುಕುತ್ತಾ ಬಾಗಿಲ ಕಿಂಡಿಯಲ್ಲಿ ಇಣುಕಿ ನೋಡಿದೆ. ನಾನು ಕಾಣಿಸಬಾರದು ಎಂಬ ಉದ್ದೇಶದಿಂದ ಆ ಕಿಂಡಿಯಿಂದ ಒಂದು ಚೂಪಾದ ಕಡ್ಡಿಯನ್ನು ತೂರಿಬಿಟ್ಟ. ಅದು ನೇರವಾಗಿ ನನ್ನ ಕಣ್ಣಿಗೇ ಚುಚ್ಚಿಕೊಂಡಿತು. ತಕ್ಷಣವೇ ಅಸ್ಪತ್ರೆಗೆ ಸೇರಿಸಿದರು. ಪುಣ್ಯಕ್ಕೆ ಹೆಚ್ಚಿನ ಅಪಾಯವಾಗಿರಲಿಲ್ಲ. ಆನಂತರದಲ್ಲಿ ಒಂದು ಕಣ್ಣಿಗೆ ಬ್ಯಾಂಡೇಜ್ ಕಟ್ಟಿಸಿಕೊಂಡೇ ನನ್ನ ಮೆಚ್ಚಿನ ಗೋಲಿಯಾಟ ಆಡಲು ಮುಂದಾದೆ.
ಶಾಲೆಯಲ್ಲಿ ಪ್ರತಿವರ್ಷವೂ 100 ಮೀಟರ್, 400 ಮೀಟರ್ ದೂರದ ರನ್ನಿಂಗ್ ರೇಸ್, ಚಮಚದ ಮೇಲೆ ಗೋಲಿಯಿಟ್ಟುಕೊಂಡು, ಆ ಚಮಚವನ್ನು ಬಾಯಲ್ಲಿ ಕಚ್ಚಿಕೊಂಡು ಓಡುವ ಸ್ಪರ್ಧೆಯಂಥ ಆಟೋಟಗಳು ನಡೆಯುತ್ತಿದ್ದವು. ಅಂಥ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂದರ್ಭದಲ್ಲಿ ನನಗೆ ಮೊದಲ ಬಹುಮಾನವೇ ಸಿಗುತ್ತಿತ್ತು. ಆ ಬಹುಮಾನಗಳಾದರೂ ಎಂಥವು ಗೊತ್ತೆ? ಟಿಫನ್ ಬಾಕ್ಸ್, ಸ್ಟೀಲ್ ಲೋಟ, ಸ್ಟೀಲ್ ತಟ್ಟೆ... ಹೀಗೆ ಮನೆಯಲ್ಲಿ ಒಂದಲ್ಲ ಒಂದು ರೀತಿ ಉಪಯೋಗಕ್ಕೆ ಬರುವಂಥವೇ ಆಗಿದ್ದವು. ಈ ಬಹುಮಾನಗಳನ್ನು ಕಂಡರೆ ಮನೆಯಲ್ಲಿ ಎಲ್ಲರಿಗೂ ಖುಷಿಯಾಗುತ್ತಿತ್ತು. ಅದರಲ್ಲೂ ನಾನು ಟಿಫನ್ ಬಾಕ್ಸ್ ಗೆದ್ದಿದ್ದ ದಿನ ನನ್ನ ತಮ್ಮ ಹರ್ಷದಿಂದ ಕುಣಿದಾಡಿದ್ದ. ಉಳಿದೆಲ್ಲರಂತೆಯೇ ಅದರಲ್ಲಿ ಮಧ್ಯಾಹ್ನದ ಊಟ ತುಂಬಿಸಿಕೊಂಡು ಹೋಗಬಹುದು ಎಂಬುದು ಅವನ ಸಂಭ್ರಮಕ್ಕೆ ಕಾರಣವಾಗಿತ್ತು.
ಆಟೋಟದ ಬಗ್ಗೆ ಆಸಕ್ತಿ ಹೆಚ್ಚಿದಂತೆಲ್ಲ ಓದಿನಲ್ಲಿ ಆಸಕ್ತಿ ಕಡಿಮೆಯಾಗತೊಡಗಿತು. ಇದರಿಂದ ಅಪ್ಪ ವಿಪರೀತ ಬೇಸರ ಮಾಡಿಕೊಂಡರು. ಮೊದಲು ಓದಿ ಡಿಗ್ರಿ ಸಂಪಾದಿಸಬೇಕು. ಸರ್ಕಾರಿ ನೌಕರಿಗೆ ಸೇರಬೇಕು. ಆಟೋಟದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು ಎಂಬುದು ಅವರ ವಾದವಾಗಿತ್ತು. ಓದುವುದರಲ್ಲಿ ಹಿಂದೆ ಬಿದ್ದರೆ ಮಕ್ಕಳೂ ತನ್ನಂತೆ ಕೂಲಿ ಕೆಲಸಕ್ಕೆ ಮೈ ಬಗ್ಗಿಸಬೇಕಾಗುತ್ತದೆ ಎಂಬ ಯೋಚನೆಯೇ ಅವರನ್ನು ಕಂಗಾಲು ಮಾಡಿತ್ತು. ಅವತ್ತಿನ ಸಂದರ್ಭದಲ್ಲಿ ಪೋಷಕರು ಮಕ್ಕಳಿಗೆ ಪಾಕೆಟ್ ಮನಿ ಕೊಡುತ್ತಿರಲಿಲ್ಲ. ಆದರೆ, ನಾನು ಹಾಗೂ ನನ್ನ ವಾರಿಗೆಯ ಗೆಳೆಯರು ಹಳೆಯ ಬಾಟಲ್‌ಗಳು, ಮನೆಯವರು ಹೊರಗೆ ಎಸೆದ ಕಬ್ಬಿಣದ ತುಂಡುಗಳು, ಡಬ್ಬಾಗಳನ್ನು ಅಂಗಡಿಗಳಿಗೆ ಮಾರಿ ಬಿಡಿಗಾಸು ಸಂಪಾದಿಸುತ್ತಿದ್ದೆವು. ಕೆಲವು ಸಂದರ್ಭದಲ್ಲಿ ಶ್ರೀಮಂತರ ಭತ್ತದ ಗದ್ದೆಗಳಲ್ಲಿ ಕೆಳಗೆ ಬಿದ್ದಿರುವ ಭತ್ತವನ್ನು ಬೆಳಗಿನಿಂದ ಸಂಜೆಯವರೆಗೂ ಸಂಗ್ರಹಿಸಿ ಅದನ್ನು ಅಂಗಡಿಯಲ್ಲಿ ಮಾರುತ್ತಿದ್ದೆ. ಹಣ್ಣು ಮತ್ತು ತರಕಾರಿಗಳನ್ನು ಮಾರಿ ಹಣ ಸಂಪಾದಿಸುತ್ತಿದ್ದ ಸಂದರ್ಭವೂ ಇತ್ತು. ಹೀಗೆ ಸಂಗ್ರಹವಾದ ಹಣದಿಂದ ಪೆನ್ನು, ಪೆನ್ಸಿಲ್, ರಬ್ಬರ್, ಪುಸ್ತಕಗಳನ್ನೂ ಖರೀದಿಸುತ್ತಿದ್ದೆ. ಕೆಲವೊಮ್ಮೆ ಅಮ್ಮನೇ ನನ್ನಿಂದ ಸಾಲ ಪಡೆಯುತ್ತಿದ್ದಳು. ಅದನ್ನು ವಾಪಸ್ ಮಾಡುವವರೆಗೂ ಆಕೆಯನ್ನು ಕಾಡುತ್ತಿದ್ದೆ.
ಆರನೇ ತರಗತಿ ಮುಗಿಯುತ್ತಿದ್ದಂತೆಯೇ, ಮೊಯಿರಂಗ್‌ನಲ್ಲಿಯೇ ಇದ್ದ ಸೇಂಟ್ ಕ್ಸೇವಿಯರ್ ಶಾಲೆಗೆ ನನ್ನನ್ನು ಸೇರಿಸಲಾಯಿತು. ಈ ಒಂದು ಬದಲಾವಣೆಗೆ ಕಾರಣವೇನೆಂದು ನನಗೀಗ ನೆನಪಿಲ್ಲ. ಆದರೆ, ನನ್ನ ತಮ್ಮ ಅದೇ ಶಾಲೆಯಲ್ಲಿ ಓದುತ್ತಿದ್ದ. ಅದೇ ಕಾರಣದಿಂದ ನನ್ನನ್ನು ಅಲ್ಲಿಗೆ ಸೇರಿಸಿದರೇನೋ. ಹೊಸ ಶಾಲೆ ಮತ್ತು ಅಲ್ಲಿನ ಆಟದ ಮೈದಾನ ವಿಪರೀತ ದೊಡ್ಡದಿತ್ತು. ಹೊಸ ಶಾಲೆಯಲ್ಲೂ ತುಂಬ ಉತ್ಸಾಹದಿಂದಲೇ ಆಟೋಟದಲ್ಲಿ ಭಾಗವಹಿಸಿದೆ.
ಕ್ರೀಡೆಯಲ್ಲಿ ನನಗಿದ್ದ ಆಸಕ್ತಿ ಗುರುತಿಸಿದ್ದ ಪ್ರಾಚಾರ್ಯರು ಒಂದು ದಿನ ತಂದೆಗೆ ಹೇಳಿ ಕಳಿಸಿದರು. ವಿಧೇಯತೆಯಿಂದ ಎದುರು ನಿಂತ ತಂದೆಗೆ 'ನಿಮ್ಮ ಮಗಳನ್ನು ಇಂಫಾಲದಲ್ಲಿರುವ ಸ್ಪೋರ್ಟ್ಸ್ ಅಕಾಡೆಮಿಗೆ ತರಬೇತಿಗೆಂದು ಕಳಿಸುತ್ತಿದ್ದೇನೆ ಒಪ್ಪಿಗೆ ಕೊಡಿ' ಅಂದರು. ಇದರಿಂದ ಅಪ್ಪನಿಗೆ ಖುಷಿಯಾಗುವ ಬದಲು ಚಿಂತೆ ಶುರುವಾಯಿತು. ತರಬೇತಿ ಶಿಬಿರದ ಸಂದರ್ಭದಲ್ಲಿ ತಗುಲುವ ಖರ್ಚುಗಳಿಗೆ ಹಣ ಹೊಂದಿಸುವುದು ಹೇಗೆ ಎಂಬುದೇ ಅಪ್ಪನ ಚಿಂತೆಯಾಗಿತ್ತು.
1998ರಲ್ಲಿ ಥಾಯೆಂಗ್ ಎಂಬ ನಗರದಲ್ಲಿ ಕೋಮ್-ರೇಮ್ ಸ್ಟೂಡೆಂಟ್ಸ್ ಯೂನಿಯನ್ ವತಿಯಿಂದ ಕ್ರೀಡಾಕೂಟ ಏರ್ಪಟ್ಟಿತು. ನಾನು ಹೊರಟು ನಿಂತೆ. ಅಪ್ಪ ಅಮ್ಮ, ನಮ್ಮಲ್ಲಿ ಖರ್ಚಿಗೆ ಕೊಡಲು ಹಣವಿಲ್ಲ. ಹೋಗಬೇಡ ಅಂದರು. ಹೋಗಿಯೇ ತೀರುವೆನೆಂದು ಹಠ ಹಿಡಿದಾಗ ಬೇರೆ ದಾರಿ ಕಾಣದೆ ಒಪ್ಪಿಕೊಂಡರು. ನಮ್ಮ ಊರಿಂದ ಥಾಯೆಂಗ್ ತಲುಪಬೇಕಿದ್ದರೆ ಬಸ್‌ನಲ್ಲಿ ಹೋಗಬೇಕಿತ್ತು. ಅವತ್ತು ವಿಪರೀತ ರಷ್ ಇದ್ದ ಕಾರಣ, ನಮ್ಮ ಸಮುದಾಯದ ಹುಡುಗರೊಂದಿಗೆ ಬಸ್‌ನ ಟಾಪ್ ಮೇಲೆ ಕೂತು ಪ್ರಯಾಣಿಸಿದೆ. ಅದು ನನ್ನ ಪಾಲಿಗೆ ಎಂದೆಂದೂ ಮರೆಯಲಾಗದ ರೋಮಾಂಚಕ ಅನುಭವ ನೀಡಿದ ಪ್ರಯಾಣ. ಆನಂತರದ ದಿನಗಳಲ್ಲಿ ನಾನು ಹವಾ ನಿಯಂತ್ರಿತ ಬಸ್ ಹಾಗೂ ರೈಲುಗಳಲ್ಲಿ, ವಿಮಾನಗಳಲ್ಲಿ ಪ್ರಯಾಣ ಮಾಡಿದ್ದೇನೆ. ಆದರೆ, ಅದ್ಯಾವುದೂ ಬಸ್‌ನ ಟಾಪ್ ಮೇಲೆ ಕೂತಾಗ ದೊರೆತಂಥ ರೋಮಾಂಚನವನ್ನು ಕೊಡಲೇ ಇಲ್ಲ. ಆ ಕ್ರೀಡಾಕೂಟದಲ್ಲಿ ಒಂದರ ಹಿಂದೊಂದು ಗೆಲುವಿನೊಂದಿಗೆ ಭರ್ಜರಿಯಾಗಿಯೇ ಮಿಂಚಿದೆ. ಹಲವರು ಹೊಸದಾಗಿ ಪರಿಚಯವಾದರು. ನಮ್ಮ ಕೋಮ್ ಸಮುದಾಯದಲ್ಲಿ ನನ್ನ ಹೆಸರು ಹಲವರ ಗಮನಕ್ಕೆ ಬಂತು.
ಊರಿಗೆ ಹಿಂತಿರುಗುತ್ತಿದ್ದಂತೆಯೇ ಅಚ್ಚರಿಯೊಂದು ನನಗಾಗಿ ಕಾದಿತ್ತು. ತಾನು ಪೈಸೆಗೆ ಪೈಸೆ ಸೇರಿಸಿ ಉಳಿಸಿದ್ದ ಹಣದಿಂದ ತಂದೆಯವರು ನನಗೆ ಒಂದು ಸೈಕಲ್ ತೆಗೆದುಕೊಟ್ಟರು. ಹಿಂದಿನ ಕ್ಯಾರಿಯರ್ ಮೇಲೆ ತಂಗಿಯನ್ನು ಕೂರಿಸಿಕೊಂಡು ಶಾಲೆಗೆ ಹೋಗುವುದು ನನ್ನ ದಿನಚರಿಯಾಯಿತು. ನಾನು ವಿಪರೀತ ವೇಗವಾಗಿ ಸೈಕಲ್ ಓಡಿಸುತ್ತಿದ್ದೆ. ನನಗೆ ಸರಿಸಮನಾಗಿ ಸೈಕಲ್ ತುಳಿಯಲು ನನ್ನೊಂದಿಗೆ ಓದುತ್ತಿದ್ದ ಯಾವ ಹುಡುಗರಿಗೂ ಸಾಧ್ಯವಾಗುತ್ತಿರಲಿಲ್ಲ. ಅವರೆಲ್ಲ ಸೈಕಲನ್ನೂ ಈಕೆ ಬೈಕ್ ರೀತಿ ಓಡಿಸುತ್ತಾಳೆ ಎಂದು ಮೆಚ್ಚುಗೆಯಿಂದ ಮಾತಾಡಿಕೊಳ್ಳುತ್ತಿದ್ದರು.
ಅದೊಮ್ಮೆ ಶಾಲೆಗೆ ಹೊತ್ತಾಗಿತ್ತು. ತಂಗಿಯನ್ನು ಕೂರಿಸಿಕೊಂಡು ಅವಸರದಿಂದ ಪೆಡಲ್ ತುಳಿದೆ. ಅದೆಷ್ಟೊ ದೂರ ಬಂದ ಮೇಲೆ ಗೆಳತಿಯರೆಲ್ಲ ಗಾಬರಿಯಾಗಿ, 'ಕ್ಯಾರಿಯರ್‌ನಲ್ಲಿ ನಿನ್ನ ತಂಗಿ ಇಲ್ಲವಲ್ಲ; ಅವಳು ಇವತ್ತು ರಜವಾ ಬಂದಿಲ್ವಾ?' ಎಂದರು. ನನ್ನ ತಂಗಿ ಸೈಕಲ್‌ನಿಂದ ಬಿದ್ದುಹೋಗಿರುವುದೇ ಗೊತ್ತಾಗಿರಲಿಲ್ಲ. ಅಷ್ಟು ವೇಗವಾಗಿ ಸೈಕಲ್ ತುಳಿದಿದ್ದೆ. ತಕ್ಷಣವೇ ಹಿಂದಕ್ಕೆ ವಾಪಸ್ ಹೋಗಿ ದಾರಿ ಮಧ್ಯೆ ಅಳುತ್ತ ನಿಂತಿದ್ದ ತಂಗಿಯನ್ನು ಮತ್ತೆ ಕ್ಯಾರಿಯರ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಹೋದೆ.
- ವಿಶ್ವೇಶ್ವರ ಭಟ್
vbhat@me.com