ಸಮಾನತೆ ಎಂಬ ಶಬ್ದಕ್ಕೆ ಆಮ್ ಆದ್ಮಿಯ ಅಸಂಬದ್ಧ ವ್ಯಾಖ್ಯಾನಗಳು!
ಯೇನಕೇನ ಪ್ರಸಿದ್ಧ ಪುರುಷರಾಗಬೇಕು. ಪ್ರಸಿದ್ಧಿಗೆ ಬರಬೇಕೆಂದರೆ ಪ್ರಚಾರ ಸಿಗಬೇಕು. ಪ್ರಚಾರ ಸಿಗಬೇಕೆಂದರೆ ಆಕರ್ಷಕ ಮಾತುಗಾರಿಕೆ ಬೇಕು. ಈ ತಂತ್ರವನ್ನು ಉಪಯೋಗಿಸಿಕೊಂಡು ಎಂತೆಂಥ ಬುದ್ದಿವಂತರನ್ನೇ ಬುದ್ಧುಗಳನ್ನಾಗಿ ಮಾಡಿ ಸ್ಟಾಕ್ ಮಾರ್ಕೆಟ್ನಲ್ಲಿ ಸಾಮ್ರಾಟರಂತೆ ಮೆರೆದವರು ಹರ್ಶದ್ ಮೆಹತಾ, ಕೇತನ್ ಪಾರಿಖ್ರಂಥವರು. ಇಂಥವರು ಸ್ಟಾಕ್ ಮಾರ್ಕೆಟ್ಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದುಹೋದರೆ ರಾಜಕೀಯ ಕ್ಷೇತ್ರದಲ್ಲಿ ನಿರಂತರವಾಗಿ ಬರುತ್ತಲೇ ಇರುತ್ತಾರೆ. ಈಗ ಸಧ್ಯಕ್ಕೆ ಅಂತಹ ಹೊಸ ಸೇರ್ಪಡೆ ಆಮ್ ಆದ್ಮಿ. ಒಬ್ಬರ ಗುರಿ ಹಣ, ಇನ್ನೊಬ್ಬರ ಗುರಿ ಅಧಿಕಾರ. ಸಾಮಾನ್ಯ ಜನರಲ್ಲಿನ ಶೀಘ್ರಹಣಗಳಿಕೆಯ ಹಪಾಹಪಿ ಒಬ್ಬರ ಬಂಡವಾಳವಾದರೆ, ಬಡವರಿಗೆ ತಮ್ಮ ಬಡತನದ ಬಗ್ಗೆ ಇರುವ ಬೇಸರ, ಶ್ರೀಮಂತರ ಬಗೆಗಿನ ಅಸಹನೆ, ಆಡಳಿತ ವರ್ಗದ ಮೇಲಿರುವ ಆಕ್ರೋಶಗಳೇ ಇನ್ನೊಬ್ಬರ ಬಂಡವಾಳ.
ಭಾರತೀಯರಿಗೆ ಸಮಾನತೆ ಎಂಬುದೇ ಗೊತ್ತಿಲ್ಲ. ಇಲ್ಲಿ ತುಂಬಿರುವುದು ಬರೀ ಮೇಲು-ಕೀಳು ಎಂಬ ಭೇದಭಾವಗಳು, ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮೊದಲನೇ ಸಲ ಸಮಾನತೆಯ ಬಗ್ಗೆ ಧ್ವನಿಯೆತ್ತಿದರು, ಇಲ್ಲದೇ ಇದ್ದಲ್ಲಿ ಸಮಾನತೆ, ಸಮಾಜವಾದ ಇವೆಲ್ಲಾ ನಮಗೆ ಗೊತ್ತಿರುತ್ತಲೇ ಇರಲಿಲ್ಲ ಎಂದೇ ಬಹುತೇಕರ ವಾದ. ಆದರೆ ಸಮಾನತೆಯನ್ನು ಮಹಾಭಾರತದ ಭೀಷ್ಮಪರ್ವದಲ್ಲಿ ವಿವರಿಸಿರುವಷ್ಟು ಚೆನ್ನಾಗಿ ಬೇರೆಲ್ಲೂ ವಿವರಿಸಿರುವುದಿಲ್ಲ. ಇಲ್ಲಿ ಸಮಾನತೆಯನ್ನು ಎರಡು ವಿಧವಾಗಿ ಪರಿಗಣಿಸುತ್ತಾರೆ. ಸಮದರ್ಶಿತ್ವ, ಸಮವರ್ತಿತ್ವ ಎಂದು. ಸಮದರ್ಶಿತ್ವ ಎಂದರೆ ಎಲ್ಲವನ್ನೂ ಸಮಭಾವದಿಂದ ನೋಡುವುದು, ಸಮವರ್ತಿತ್ವ ಎಂದರೆ ಸಮಾನರಂತೆ ವರ್ತಿಸುವುದು. ಈಗ ಪ್ರಾಣಿಗಳಲ್ಲೂ ದೇವರಿದ್ದಾನೆ, ನಮ್ಮಲ್ಲೂ ದೇವರಿದ್ದಾನೆ, ನಮ್ಮಲ್ಲಿ ಜೀವವಿದ್ದಂತೆ ಅವುಗಳಲ್ಲೂ ಜೀವವಿದೆ, ನಮಗೆ ನೋವಾದಂತೆ ಅವುಗಳಿಗೂ ನೋವಾಗುತ್ತದೆ ಎಂದು ತಿಳಿದುಕೊಂಡು,ಅವುಗಳನ್ನು ಹೊಡೆಯದೆ ಬಡಿಯದೆ ಕರುಣೆಯಿಂದ ನೋಡುವುದು ಸಮದರ್ಶಿತ್ವ. ಇದು ಕಾರ್ಯಸಾಧುವೂ ಹೌದು. ಪ್ರಾಣಿಗಳಲ್ಲೂ ದೇವರಿದ್ದಾನೆ, ನಮ್ಮಲ್ಲೂ ದೇವರಿದ್ದಾನೆ ನಾವಿಬ್ಬರೂ ಸಮಾನರೇ ಎಂದು ತಿಳಿದುಕೊಂಡು ಮನುಷ್ಯ, ಪ್ರಾಣಿಗಳ ಜೊತೆ ಪ್ರಾಣಿಗಳಂತೆಯೇ ವರ್ತಿಸುವುದು ಸಮವರ್ತಿತ್ವ. ಇದು ಸಾಧ್ಯವೇ? ಎಲ್ಲಾ ಪ್ರಾಣಿಗಳಲ್ಲಿರುವ ಪರಮಾತ್ಮ ಒಬ್ಬನೇ ಎಂದು ನಾಗರ ಹಾವನ್ನೋ, ಇಲ್ಲಾ ಕೊಳಕು ಮಂಡಲವನ್ನೋ ನಾಯಿಮರಿಯಂತೆ ಅಪ್ಪಿಮುದ್ದಿಸಲಾದೀತೆ?
ಇಂದು ಈ ಸಮಾಜವಾದ, ಸಮಾನತೆ ಎಂಬ ಪದಗಳಿಗೆ ವಿಕೃತ ವ್ಯಾಖ್ಯಾನಗಳನ್ನು ಮಾಡಿ, ಜನಗಳನ್ನು ಭಾವನಾತ್ಮಕವಾಗಿ ಕೆರಳಿಸಿ ಹಣ ಅಧಿಕಾರ ಪದವಿ ಪುರಸ್ಕಾರಗಳನ್ನು ಪಡೆಯುತ್ತಿರುವ ಮಂದಿಯೇ ಹೆಚ್ಚು. ಈಗ ದಿಢೀರನೆ ಹುಟ್ಟಿ, ಇಂದ್ರಜಾಲದಂತೆ ದೆಹಲಿಯ ಅಧಿಕಾರದ ಚುಕ್ಕಾಣಿ ಹಿಡಿದಿರುವ ಅರವಿಂದ ಕೇಜ್ರೀವಾಲ್ ಹಾಗೂ ಅವರ ಆಪ್ ಪಕ್ಷದವರ ಸಮಾನತೆ ಪದದ ವಿಕೃತ ವ್ಯಾಖ್ಯಾನಗಳನ್ನು ಕೇಳಿ ದೆಹಲಿಯ ಜನ ಹೇಗೆ ಮರುಳಾದರು, ವಿದ್ಯಾವಂತರೆನಿಸಿಕೊಂಡವರೇ ಹೇಗೆ ಅವರ ಅಂಧಾನುಸರಣೆ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದಾಗ ವಿಕೃತ ವ್ಯಾಖ್ಯಾನಗಳು ಮನುಷ್ಯರನ್ನು ಹೇಗೆ ಭಾವಾವೇಶದ ಕೂಪಕ್ಕೆ ತಳ್ಳಿ ಅವನ ಸೂಕ್ಷ್ಮಪ್ರಜ್ಞೆಯನ್ನು ನಿಶ್ಚೇತನಗೊಳಿಸುತ್ತದೆ ಎಂಬುದು ತಿಳಿಯುತ್ತದೆ.
ಜನಪ್ರತಿನಿಧಿಗಳು ಸಾಮಾನ್ಯ ಜನರಿಗಿಂತ ಹೇಗೆ ಭಿನ್ನ, ಅವರೇಕೆ ಸಾಮಾನ್ಯ ಜನರಂತೆಯೇ ಬದುಕಬಾರದು? ಮುಖ್ಯಮಂತ್ರಿಗಳು ಹಾಗೂ ಇತರೆ ಸಚಿವರುಗಳಿಗೇಕೆ ಸರ್ಕಾರಿ ಕಾರು? ಅವರಿಗೇಕೆ ದೊಡ್ಡ ಬಂಗಲೆ? ಅವರೇಕೆ ಕೆಂಪುದೀಪದ ಕಾರಲ್ಲಿ ಓಡಾಡಬೇಕು? ಅವರು ಕಾರಲ್ಲಿ ಹೋಗುವಾಗ ಟ್ರಾಫಿಕ್ ಫ್ರೀ ಮಾಡಿಕೊಡುವುದೇಕೆ? ಸಾಮಾನ್ಯ ಜನರಿಗಿಲ್ಲದ ಪೊಲೀಸ್ ಬೆಂಗಾವಲು, ರಕ್ಷಣೆ ಅವರಿಗೇಕೆ? ಚರ್ಚೆಗಳು ವಿಧಾನಸಭೆಗಳಲ್ಲಿಯೇ ಯಾಕೆ ನಡೆಯಬೇಕು? ಸಾರ್ವಜನಿಕರ ಮಧ್ಯೆಯೇ ಏಕೆ ನಡೆಯಬಾರದು? ಒಟ್ಟಿನಲ್ಲಿ ಈ ದೇಶದ ಬಡವನಿಗಿಲ್ಲದ ಯಾವ ಸೌಲಭ್ಯವೂ ಆಡಳಿತ ನಡೆಸುವವನಿಗಿರಬಾರದೆಂಬುದೇ ಈ ಪ್ರಶ್ನೆಗಳ ಒಟ್ಟಾರೆ ಸಾರಾಂಶ. ಈ ರೀತಿಯ ಸಮತಾವಾದ ಮಹಾಭಾರತದಲ್ಲಿ ವರ್ಣಿಸಿರುವ ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿರುವ ಸಮವರ್ತಿತ್ವದ ಅಡಿಯಲ್ಲಿ ಬರುವಂಥದ್ದು. ಇಂಥ ಪ್ರಶ್ನೆಗಳನ್ನು ಕೇಳಿ, ಬಡತನದಿಂದ ರೋಸಿಹೋಗಿರುವ ಹಾಗೂ ತಮ್ಮ ಬಡತನಕ್ಕೆ ತಾವು ಕಿಂಚಿತ್ತೂ ಕಾರಣರಲ್ಲ ಸರ್ಕಾರವೇ ಪೂರ್ಣ ಹೊಣೆ ಎಂದು ಭಾವಿಸಿರುವ ಜನಗಳನ್ನು ಎತ್ತಿಕಟ್ಟಿ ಯಾರು ಬೇಕಾದರೂ ದಿನಬೆಳಗಾಗುವುದರೊಳಗೆ ನಾಯಕರಾಗಿಬಿಡಬಹುದು. ಆದರೆ ಜನ ಪೂರ್ವಾಗ್ರಹಪೀಡಿತರಾಗದೆ ಆಡಳಿತ ನಡೆಸುವವರ ಸ್ಥಾನದಲ್ಲಿ ತಾವೇ ನಿಂತು ಒಂದರೆ ಕ್ಷಣ ಯೋಚಿಸಿದರೂ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಬಿಡುತ್ತದೆ. ಆಡಳಿತ ವಹಿಸಿಕೊಂಡ ಮೇಲೆ ಆಪ್ ನಾಯಕರಿಗೂ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿದೆ. ಆದಕ್ಕೆ ಎಲ್ಲ ಮಂತ್ರಿಗಳೂ ಎಲ್ಲ ಸೌಲಭ್ಯಗಳನ್ನೂ ಮೂಗುಮುಚ್ಚಿಕೊಂಡು ಅನುಭವಿಸುತ್ತಿದ್ದಾರೆ. ಈ ಸತ್ಯ ಮೊದ ಮೊದಲು ಆಮ್ ಆದ್ಮಿಯನ್ನು ಮೆರೆಸಿ ಗದ್ದುಗೆ ಏರುವ ಮಟ್ಟಕ್ಕೆ ತಂದು ನಿಲ್ಲಿಸಿದ ಮಾಧ್ಯಮದವರಿಗೆ ಅರ್ಥವಾಗಿಬಿಟ್ಟಿರುವುದರಿಂದಲೇ ಇಂದು ಅವರ ವಿರುದ್ಧ ತಿರುಗಿಬಿದ್ದಿರುವುದು.
ಇನ್ನು ಅವರ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇವೆಲ್ಲಾ ಎಷ್ಟು ಬಾಲಿಶ ಎನಿಸಿಬಿಡುತ್ತವೆ. ಜನ ಕೊಟ್ಟ ಮತಭಿಕ್ಷೆಯಿಂದ ಜನನಾಯಕನಾದ ಮೇಲೆ ಅವನಿಗೆ ವಿಶೇಷ ಸೌಲಭ್ಯಗಳು ಏಕೆ? ಅವನೂ ಸಾಮಾನ್ಯ ಜನರಂತೆಯೇ ಬಾಳಬೇಕು ಎಂದಾದರೆ ಅವನು ನಾಯಕನೇಕಾಗಬೇಕು? ಎಲ್ಲರೂ ಸೇರಿ ಅವನನ್ನು ನಾಯಕನನ್ನಾಗಿ ಮಾಡುವುದು ಅವನು ತನ್ನ ಸಾಮರ್ಥ್ಯದಿಂದ ತಮ್ಮ ಉದ್ಧಾರ ಮಾಡಲೆಂದು. ತಾವು ಅನುಭವಿಸುತ್ತಿರುವ ಕಷ್ಟಗಳನ್ನೇ ಅವನೂ ಅನುಭವಿಸುತ್ತಾ ಕಾಲ ಕಳೆಯಲೆಂದಲ್ಲ. ಈಗ ಉತ್ತರ ಕರ್ನಾಟಕದಲ್ಲಿ ಜನಗಳು ಶೌಚಾಲಯಗಳಿಲ್ಲದೆ ಹೆಂಗಸರಾದಿಯಾಗಿ ಬಯಲುಗಳಲ್ಲೇ ಶೌಚಾದಿಗಳನ್ನು ಮಾಡುತ್ತಿದ್ದಾರೆಂದರೆ ಮುಖ್ಯಮಂತ್ರಿಯಾದ ಸಿದ್ಧರಾಮಯ್ಯನವರೇನು ಮಾಡಬೇಕು? ಅವರಿಗೆ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು. ಅದುಬಿಟ್ಟು ಅವರಿಗಿಲ್ಲದ ಶೌಚಾಲಯ ನನಗೇಕೆ ಎಂದು ಅವರೂ ಬಯಲಿಗೇ ಬಂದು ಶೌಚಕ್ಕೆ ಕೂಡಲಾದೀತೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಮಂತ್ರಿಗಳಾಗುವವರೆಲ್ಲಾ ಶ್ರೀಮಂತರೇ ಆಗಿರುತ್ತಾರೆ, ದೊಡ್ಡದೊಡ್ಡ ಬಂಗಲೆಗಳನ್ನೇ ಹೊಂದಿರುತ್ತಾರೆ ಎಂಬುದು ತಪ್ಪು ಕಲ್ಪನೆ. ಸಣ್ಣಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುವವರೂ ಮಂತ್ರಿಗಳಾದ ಎಷ್ಟೋ ಉದಾಹರಣೆಗಳಿವೆ. ಅಂಥವರು ಸಚಿವರಾದ ಮೇಲೂ ನಾನು ಸರಳಜೀವನ ನಡೆಸುತ್ತೇನೆಂದು, ಅದೇ ಸಣ್ಣ ಮನೆಯಲ್ಲಿಯೇ ವಾಸಿಸುತ್ತೇನೆಂದು ನಿರ್ಧರಿಸಿದರೆ, ಅಹವಾಲುಗಳನ್ನು ಹಿಡಿದು ಬರುವ ನೂರಾರು ಮಂದಿ ನಿಲ್ಲುವುದೆಲ್ಲಿ? ಸಾಮಾನ್ಯ ಜನರಲ್ಲಿ ನೌಕರಿ ಮಾಡುವ ಮಂದಿ ಒಮ್ಮೆ ಮನೆಯಿಂದ ಹೊರಟು, ಸಂಜೆವರೆಗೂ ಒಂದು ಜಾಗದಲ್ಲಿ ಕೂತು ನೌಕರಿ ಮಾಡಿ ಮನೆಗೆ ವಾಪಸಾಗಿಬಿಡುತ್ತಾರೆ. ಅಂಥದ್ದರಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದಲೇ ದಿನಕ್ಕೆ ಹತ್ತಾರು ಕಡೆ ಸುತ್ತಾಡಬೇಕಾದ ಅನಿವಾರ್ಯತೆಯಿರುವ ಮುಖ್ಯಮಂತ್ರಿಗಳು ಹಾಗೂ ಮಂತ್ರಿಗಳು ನಾವು ಸಾಮಾನ್ಯರಂತೆ ಬಸ್ಸಿನಲ್ಲೇ ಓಡಾಡುತ್ತೇವೆಂದು ನಿರ್ಧರಿಸಿ ಬೆಳಗಾಗೆದ್ದು ಬಸ್ಸಿಗಾಗಿ ಕ್ಯೂ ನಿಂತುಕೊಂಡುಬಿಟ್ಟರೆಂದರೆ ಎಷ್ಟು ಕಡೆ ಹೋಗಲಾದೀತು? ಈ ರೀತಿ ಭಾವನಾತ್ಮಕವಾಗಿ ಜನಗಳನ್ನು ಕೆರಳಿಸುವ ಕೇಜ್ರೀವಾಲ್ ಮತ್ತು ಗ್ಯಾಂಗ್ ಪ್ರಮಾಣವಚನದ ದಿನ ತೋರಿಕೆಗಾಗಿ ಮೆಟ್ರೋನಲ್ಲಿ ಪ್ರಯಾಣಿಸಿದ್ದು ಬಿಟ್ಟರೆ ಎಷ್ಟು ದಿನ ಮೆಟ್ರೋನಲ್ಲಿ ಮತ್ತು ಬಸ್ಸಿನಲ್ಲಿ ಪ್ರಯಾಣಿಸಿದ್ದಾರೆ?
ಇನ್ನು ಅಧಿಕಾರದಲ್ಲಿದ್ದಾಗ ಇವರು ತೆಗೆದುಕೊಳ್ಳುವ ಆಡಳಿತಾತ್ಮಕ ಹಾಗೂ ರಾಜಕೀಯ ನಿರ್ಧಾರಗಳು ಮಿತ್ರರನ್ನು, ಶತೃಗಳನ್ನು ಹುಟ್ಟುಹಾಕುವುದು ಸಹಜ. ನಾನು ಸಾಮಾನ್ಯರಂತೆ ಬದುಕುತ್ತೇನೆಂದು ರಕ್ಷಣೆಯಿಲ್ಲದೆ ಒಬ್ಬೊಬ್ಬರೇ ಓಡಾಡಿದರೆ ಏಟು ತಿಂದು ಆಸ್ಪತ್ರೆ ಸೇರುವುದನ್ನು ಬಿಟ್ಟು ಬೇರೇನನ್ನು ಸಾಧಿಸಲಾರರು.
ಇನ್ನು ಜನರ ಸಮಸ್ಯೆಗಳ ಬಗ್ಗೆಯೇ ನಡೆಯಬೇಕಾದ ಚರ್ಚೆಗಳು ಸದನದಲ್ಲಿ ನಾಲ್ಕುಗೋಡೆಗಳ ಮಧ್ಯೆ ಯಾಕೆ ನಡೆಯಬೇಕು? ಸಾರ್ವಜನಿಕರ ಮುಂದೆ ಮುಕ್ತವಾಗಿ ಏಕೆ ನಡೆಯಬಾರದು? ಇಂಥ ಮಾತುಗಳು ಹೇಳುವುದಕ್ಕೂ, ಕೇಳುವುದಕ್ಕೂ ಕ್ರಾಂತಿಕಾರಿಯಾಗಿ ಕಾಣಬಹುದೇ ವಿನಃ ಆಚರಣೆಗೆ ತರಲು ಸಾಧ್ಯವೇ ಇಲ್ಲ. ಚರ್ಚಾ ಸಾಮರ್ಥ್ಯಕ್ಕಿಂತ ದೈಹಿಕ ಸಾಮರ್ಥ್ಯದ ಮೇಲೆಯೇ ಹೆಚ್ಚು ಅವಲಂಬಿತರಾಗಿರುವ ಇಂದಿನ ಶಾಸಕರುಗಳು ಸದನದಲ್ಲಿ ಹೇಗೆ ಹೊಡೆದಾಡುತ್ತಾರೆ, ಮೈಕ್ಗಳನ್ನು ಹೇಗೆ ಕಿತ್ತೆಸೆಯುತ್ತಾರೆ, ಚಪ್ಪಲಿಗಳನ್ನು ಹೇಗೆ ತೂರಿಬಿಡುತ್ತಾರೆ, ಲೇಟೆಸ್ಟ್ ಆಗಿ ಪೆಪ್ಪರ್ ಸ್ಪ್ರೇ ಅನ್ನು ಹೇಗೆ ಎರಚುತ್ತಾರೆ ಎಂಬುದನ್ನು ಈ ದೇಶ ಪ್ರತ್ಯಕ್ಷವಾಗಿ ಕಂಡಿದೆ. ಇಂಥವರನ್ನು ತೆರೆದ ಬಯಲಿನಲ್ಲಿ ಜನಗಳ ಮುಂದೆ ಚರ್ಚೆ ಮಾಡಲು ಬಿಟ್ಟರೆ ಎಂಥಾ ದೃಶ್ಯ ಸೃಷ್ಟಿಯಾಗಬಹುದೆಂದು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ನಾಲ್ಕು ಗೋಡೆಗಳ ಮಧ್ಯೆಯಾದರೆ ಸಭಾಪತಿಗಳು ಕಲಾಪವನ್ನು ಮುಂದೂಡಿಯೋ, ಗಲಾಟಾನಿರತರನ್ನು ಮಾರ್ಷಲ್ಗಳಿಂದ ಹೊರದಬ್ಬಿಸುವ ಮೂಲಕವೋ ತಹಬದಿಗೆ ತರಬಹುದು. ಆದರೆ ಇದೇ ಗಲಾಟೆ ಬಯಲಿನಲ್ಲಿ ನಡೆದರೆ ಇವರ ಅಭಿಮಾನಿ ಜನಗಳೂ ಅದರಲ್ಲಿ ಭಾಗಿಗಳಾಗಿಬಿಟ್ಟರೆ ಉಂಟಾಗಬಹುದಾದ ಅರಾಜಕತೆಯನ್ನು ಶಮನಗೊಳಿಸಲು ಸಾಧ್ಯವೇ? ಸರ್ಕಾರವನ್ನು ಜನಗಳ ಬಳಿಗೇ ಕೊಂಡೊಯ್ಯುತ್ತೇವೆಂದು ಕೈಗೊಂಡ ಜನತಾದರ್ಬಾರ್ ಕಾರ್ಯಕ್ರಮ ಏನಾಯಿತು? ಅರ್ಧ ಗಂಟೆಯಲ್ಲೇ ಅಂಗಡಿ ಬಂದ್ ಮಾಡಿ ರಕ್ಷಣೆಗೆಂದು ಸೆಕ್ರೆಟರಿಯೇಟ್ ಭವನದ ಟಾಪ್ಗೆ ಓಡಿಹೋಗಬೇಕಾಯಿತು!
ಇಂಥಾ ಇತಿಮಿತಿಗಳನ್ನು ಅರಿತೇ ಶಿಷ್ಟಾಚಾರಗಳನ್ನು ರೂಪಿಸಲಾಗಿದೆಯೇ ಹೊರತು ಯಾರಿಗೋ ಮಜ ಮಾಡಲು ಅವಕಾಶ ಮಾಡಿಕೊಡುವುದಕ್ಕಲ್ಲ. ಸಕಾರಣದಿಂದ ಒದಗಿಸಿರುವ ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಪ್ರಶ್ನೆ ಮಾಡಬಹುದೇ ವಿನಃ ಸಮಾನತೆಯ ಹೆಸರಿನಲ್ಲಿ ಸೌಲಭ್ಯಗಳನ್ನು ಒದಗಿಸಿರುವುದನ್ನೇ ಪ್ರಶ್ನೆಮಾಡಲಾಗದು. ಕ್ರಾಂತಿಯೋಗಿ ಬಸವಣ್ಣನವರೂ ಸಹ ರಾತ್ರಿಯಹೊತ್ತಿನಲ್ಲಿ ಎರಡು ಎಣ್ಣೆದೀಪಗಳನ್ನಿಟ್ಟುಕೊಳ್ಳುತ್ತಿದ್ದರಂತೆ. ಒಂದು ರಾಜಾಧಿಕಾರ ಒದಗಿಸಿದ್ದು, ಇನ್ನೊಂದು ತಮ್ಮ ಸ್ವಂತದ್ದು. ಅವರು ರಾಜಸ್ವದ ಲೆಕ್ಕ ಬರೆಯುವಾಗ ಮಾತ್ರ ರಾಜ ಕೊಟ್ಟ ದೀಪವನ್ನು ಬಳಸಿ, ಮಿಕ್ಕ ಸಮಯದಲ್ಲಿ ಅದನ್ನು ಆರಿಸಿ ತಮ್ಮ ಸ್ವಂತ ದೀಪವನ್ನು ಹಚ್ಚಿಕೊಳ್ಳುತ್ತಿದ್ದರಂತೆ. ಈ ತೆರನಾದ ಪ್ರಾಮಾಣಿಕತೆಯನ್ನು ನಾವು ಜನಪ್ರತಿನಿಧಿಗಳಿಂದ ನಿರೀಕ್ಷಿಸಬೇಕಷ್ಟೇ, ಆದರೆ ಇಂದು ಆಗುತ್ತಿರುವುದೇನು? ರಾಜನಾದವನು ಎಣ್ಣೆ ಕೊಂಡುಕೊಳ್ಳುವ ಶಕ್ತಿಯಿಲ್ಲದೆ ಎಷ್ಟೋ ಬಡಜನರು ಕತ್ತಲಲ್ಲೇ ಕೊಳೆಯುತ್ತಿರುವಾಗ ಅವರಿಗೆ ಕೊಡದ ಎಣ್ಣೆದೀಪ ಬಸವಣ್ಣನವರಿಗೆ ಏಕೆ ಕೊಟ್ಟ? ಸಾಮಾನ್ಯ ಜನಗಳಿಗೊಂದು ಕಾನೂನು, ಅಧಿಕಾರಸ್ಥರಿಗೊಂದು ಕಾನೂನೇ? ಎಂದು ಹುಚ್ಚುಚ್ಚಾಗಿ ಪ್ರಶ್ನೆ ಮಾಡುವ ಮೂಲಕ ಮೌಲ್ಯಗಳಿಗೆ ಹೊಸ ವ್ಯಾಖ್ಯಾನಗಳನ್ನೇ ಹುಟ್ಟುಹಾಕುತ್ತಿದ್ದಾರೆ. ತಮಗಿಲ್ಲದ ಸವಲತ್ತುಗಳನ್ನು ಅನ್ಯರು ಅನುಭವಿಸುತ್ತಿದ್ದರೆ ಸಹಜವಾಗಿ ಈರ್ಶ್ಯೆಗೊಳಗಾಗುವ ಜನಗಳ ಮನಸ್ಥಿತಿಯನ್ನು ಉಪಯೋಗಿಸಿಕೊಂಡು ತಾವು ಹಣ ಅಧಿಕಾರ ಪಡೆಯುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇಂಥವರ ಮಾತುಗಳನ್ನು ಜನ ಯಥಾವತ್ತಾಗಿ ಸ್ವೀಕರಿಸದೆ ಮೌಲ್ಯಮಾಪನ ಮಾಡುವುದು ಒಳಿತು. ಇಲ್ಲದೇ ಹೋದಲ್ಲಿ ಜನ ಮತ್ತು ದೇಶ ವಿನಾಶದ ಅಂಚಿಗೆ ದೂಡಲ್ಪಡುವುದಂತೂ ಸತ್ಯ. ಆಮೇಲೆ ಚಿಂತಿಸಿ ಫಲವಿಲ್ಲ.
ಹಳ್ಳದಲ್ಲಿರುವವರನ್ನು ಮೇಲಕ್ಕೆತ್ತಿ ಸದೃಢವಾಗಿ ನಿಲ್ಲುವಂತೆ ಮಾಡುವವನು ಉತ್ತಮ ನಾಯಕನೇ ಹೊರತು, ತಾನೂ ಅವರಂತೆ ಹಳ್ಳಕ್ಕೆ ಬಿದ್ದು ಅವರಂತೆಯೇ ಗೋಳಾಡುತ್ತೇನೆ ಎನ್ನುವವನು ಉತ್ತಮ ನಾಯಕನೆನಿಸಲಾರ.
- ಫಣಿರಾಮಚಂದ್ರ
paniramachandra.hs@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

