ಮೋದಿ ಗೆಲುವಿಗೆ ಜಪಾನ್ ಪ್ರಧಾನಿ ಕಾದು ಕುಳಿತಿರುವುದೇಕೆ?

ಜಪಾನ್ನಲ್ಲಿ ಡಿಸೆಂಬರ್ 2012ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲಿಬರಲ್ ಡೆಮಾಕ್ರಟಿಕ್ ಪಕ್ಷವನ್ನು ಗೆಲುವಿನ ಗೆರೆ ದಾಟಿಸಿದ ಶಿಂಜೋ ಅಬೆ ಅವರಿಗೆ ಪ್ರಪಂಚದ ನಾಯಕರಿಂದ ಅಭಿನಂದನಾ ಸಂದೇಶಗಳು ಹರಿದುಬಂದವು. ಆ ಸಮಯದಲ್ಲಿನ ಒಂದು ಸಂದೇಶ ಹೆಚ್ಚಿನ ಜನರಿಗೆ ಗಮನಕ್ಕೆ ಬರಲಿಲ್ಲ. ಅದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರದ್ದಾಗಿತ್ತು. ನಿಯಮಾವಳಿಗಳ ಕನ್ನಡಕ ಧರಿಸಿ ನೋಡುವುದಾದರೆ ನರೇಂದ್ರ ಮೋದಿ ಮತ್ತು ಅಬೆ ನಡುವೆ ನಡೆದ ಅಂದಿನ ದೂರವಾಣಿ ಸಂಭಾಷಣೆ ವಿಚಿತ್ರವಾಗಿ ಕಾಣಿಸುತ್ತದಾದರೂ, ಕಳೆದ ಕೆಲವು ವರ್ಷಗಳಲ್ಲಿ ಮೋದಿ-ಅಬೆ, ಜಪಾನ್-ಗುಜರಾತ್ ನಡುವೆ ಭದ್ರವಾಗುತ್ತಾ ಸಾಗಿರುವ ಸ್ನೇಹಕ್ಕೆ ಆ ಮಾತುಕತೆ ಮುನ್ನುಡಿಯಂತೆ ಕಾಣುತ್ತದೆ.
ಮೋದಿ ನೇತೃತ್ವದ ಭಾರತೀಯ ಜನತಾ ಪಾರ್ಟಿ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಭಾರೀ ಗೆಲುವು ಸಾಧಿಸಲಿದೆ ಎನ್ನುವ ಸೂಚನೆಯನ್ನು ಇತ್ತೀಚಿನ ಸಮೀಕ್ಷೆಗಳು ನೀಡಿವೆ. ಒಂದು ವೇಳೆ ಮೋದಿ ಮುಂದಿನ ಪ್ರಧಾನಿಯಾದರೆಂದರೆ, ಅವರ ಬೆಳವಣಿಗೆ ಭಾರತ-ಜಪಾನ್ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಿ, ಅದನ್ನೊಂದು ಅಭೂತಪೂರ್ವ ಸ್ಥಾನಕ್ಕೊಯ್ದು ನಿಲ್ಲಿಸಲಿದೆ.
ಜಪಾನ್ ಮತ್ತು ಗುಜರಾತ್ ನಡುವಿನ ಆರ್ಥಿಕ ಯಶಸ್ಸಿನ ಕಥೆ, ರಾಜಕೀಯ ದೂರದೃಷ್ಟಿಯ ದ್ಯೋತಕವೂ ಹೌದು. 2002ರ ಗುಜರಾತ್ ಹಿಂಸಾಚಾರವನ್ನು ಮುಂದಿಟ್ಟುಕೊಂಡು ಯಾವಾಗ ಅಮೆರಿಕ ಮೋದಿಯವರನ್ನು ದೂರವಿಟ್ಟಿತೋ, ಆಗ ಗುಜರಾತ್ ಸರ್ಕಾರ 'ಲುಕ್ ಈಸ್ಟ್' ನೀತಿಯನ್ನು ಅಪ್ಪಿಕೊಂಡು ಜಪಾನ್ನತ್ತ ನೋಡಿತು. 2007ರ ಮೋದಿಯವರ ಜಪಾನ್ ಭೇಟಿ, ಭಾರತದ ಒಂದು ರಾಜ್ಯ ಮತ್ತು ವಿದೇಶಿ ರಾಷ್ಟ್ರದ ನಡುವೆ ಆರ್ಥಿಕ ಸೇತುವೆಯೊಂದರ ನಿರ್ಮಾಣಕ್ಕೆ ಕಾರಣವಾಯಿತು.
ನಂತರದ ವರ್ಷಗಳಲ್ಲಿ ಗುಜರಾತ್ನ ಆಡಳಿತ ಸಾಮರ್ಥ್ಯ ಮತ್ತು ಹೂಡಿಕೆದಾರ ಸ್ನೇಹೀ ವಾತಾವರಣ ಜಪಾನಿ ಹೂಡಿಕೆದಾರರನ್ನು ಆಕರ್ಷಿಸಿತು. ಗುಜರಾತ್ನ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಹೇರಳವಾಗಿ ಹೂಡಿಕೆ ಹರಿದುಬಂದಿತು. ಜಪಾನ್ನ ಆಟೊಮೊಬೈಲ್ ದೈತ್ಯ 'ಸುಜುಕಿ' ಗುಜರಾತ್ನಲ್ಲಿ ಆಗಲೇ ಹೊಸ ಕಾರ್ಖಾನೆಯನ್ನು ಮತ್ತು ಅದಕ್ಕೆ ಒಳಪಟ್ಟ ಘಟಕಗಳ ನಿರ್ಮಾಣದಲ್ಲಿ ತೊಡಗಿದೆ. ಅಲ್ಲದೆ 2015-2016ರ ವೇಳೆಗೆ ಗುಜರಾತ್ನಲ್ಲಿ ಜಪಾನ್ನ ಖಾಸಗಿ ಹೂಡಿಕೆ 2 ಬಿಲಿಯನ್ ಡಾಲರ್ಗಳಾಗಲಿದೆಯೆಂಬ ನಿರೀಕ್ಷೆಯಿದೆ. ಈ ಹೂಡಿಕೆಯ ಹಬ್ಬ ಕೇವಲ ಜಪಾನ್ನ ಬಹುರಾಷ್ಟ್ರೀಯ ಕಂಪನಿಗಳಿಗಷ್ಟೇ ಸೀಮಿತವಾಗಿಲ್ಲ. 2009ರಲ್ಲಿ, ಜಪಾನ್ ಸರ್ಕಾರದ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ಸಂಸ್ಥೆಯಾದ 'ಜೆಟ್ರೋ', 'ವೈಬ್ರಂಟ್ ಗುಜರಾತ್' ಎಂಬ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಗುಜರಾತ್
ಸರ್ಕಾರದೊಂದಿಗೆ ಕೈಜೋಡಿಸಿತು. ಆ ಸಮಾವೇಶದ 'ಸಹಭಾಗಿ ರಾಷ್ಟ್ರವಾಗಿದ್ದ' ಜಪಾನ್, ಅದಕ್ಕಾಗಿ ಜಪಾನಿ ರಾಜತಾಂತ್ರಿಕರ ನೇತೃತ್ವದಲ್ಲಿ ಹಿರಿಯ ನಿಯೋಗವೊಂದನ್ನು ಗುಜರಾತ್ಗೆ ಕಳುಹಿಸಿತ್ತು.
ಜಪಾನ್ನ ಪ್ರಸಕ್ತ ಸ್ಥಾಪನೆಯು ಮೋದಿಯವರೊಂದಿಗಿನ ತಮ್ಮ ಸಹಭಾಗಿತ್ವವನ್ನು ಇಷ್ಟಪಡುತ್ತದೆ. ಈ ಸಂಬಂಧದ ವ್ಯಾಪ್ತಿ ಸ್ಪಷ್ಟವಾಗಿ ಗೋಚರಿಸಿದ್ದು, 2012ರ ಭಾರತ ಭೇಟಿಯ ವೇಳೆ ಜಪಾನ್ ರಾಯಭಾರಿ ಅಕಿತಾಕ ಸಾಯ್ಕಿ ಮೋದಿಯವರನ್ನು ಭೇಟಿಯಾದಾಗ.(ಕೇಂದ್ರ ಕ್ಯಾಬಿನೆಟ್ ಸಚಿವರ ಸ್ಥಾನ ಮುಖ್ಯಮಂತ್ರಿಗಿಂತಲೂ ದೊಡ್ಡದಾದರೂ, ಅವರಷ್ಟೇ ಮಹತ್ವವನ್ನು ಮೋದಿಯ ಭೇಟಿಗೆ ಅಕಿತಾಕ ಕೊಟ್ಟಿದ್ದರು). ಆಗ ಮೋದಿ ವಿರೋಧ ಪಕ್ಷದಲ್ಲಿದ್ದ ಅಬೆಯವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ಸಹ ನಡೆಸಿದರು.
ಚೀನಾ-ಜಪಾನ್ ಸಂಬಂಧ ಹದಗೆಡುತ್ತಿರುವ ವೇಳೆಯಲ್ಲೇ ಭಾರತ, ಅಬೆ ಸರ್ಕಾರದೊಂದಿಗೆ ಹತ್ತಿರವಾಗುತ್ತಿದೆ. ಭಾರತ-ಜಪಾನ್ ಸಂಬಂಧವನ್ನು ಆರ್ಥಿಕ ತಳಹದಿಯ ಮೇಲ್ಲಷ್ಟೇ ಅಲ್ಲದೆ, ಮತ್ತಷ್ಟು ಆಯಕಟ್ಟಿನ ಜಾಗಗಳಲ್ಲೂ ಭದ್ರಪಡಿಸುವ ಕೆಲಸವನ್ನು ದೆಹಲಿಯೂ ಕೂಡ ಮುತುವರ್ಜಿಯಿಂದ ಮಾಡುತ್ತಿದೆ.
ಜಪಾನ್ನ ರಾಜ ಅಕಿಹಿತೋ ಅವರ ಇತ್ತೀಚಿನ ಐತಿಹಾಸಿಕ ಭೇಟಿ ಮತ್ತು ಗಣರಾಜ್ಯೋತ್ಸವದ ದಿನ ಭಾರತದ ಮುಖ್ಯ ಅತಿಥಿಯಾಗಿ ಅಬೆ ಅವರ ದೆಹಲಿಯಲ್ಲಿನ ಉಪಸ್ಥಿತಿ, ಏಶಿಯಾದಲ್ಲಿ ಕ್ರಮೇಣವಾಗಿ ಆಗುತ್ತಿರುವ ಮರುಸಮತೋಲನವನ್ನು ಸೂಚಿಸುತ್ತಿವೆ. ಈ ವರ್ಷ ನಡೆಯಲಿರುವ ಭಾರತ-ಅಮೆರಿಕದ ಮಲಬಾರ್ ನೌಕಾ
ಅಭ್ಯಾಸದಲ್ಲಿ ಭಾಗವಹಿಸಲು ಭಾರತ ಜಪಾನ್ಗೆ ಆಹ್ವಾನ ನೀಡಿರುವುದೂ ಕೂಡ ನಮ್ಮಿಬ್ಬರ ನಡುವೆ ಬೆಳೆಯುತ್ತಿರುವ ಸೇನಾ ಸಂಬಂಧದ ಬಹಿರಂಗ ಕುರುಹು. ಅಲ್ಲದೆ 2ನೇ ವಿಶ್ವಯುದ್ಧದ ನಂತರ ಜಪಾನ್ನ ಯುದ್ಧವಿಮಾನವನ್ನು ಖರೀದಿಸುವ ಮೊದಲ ರಾಷ್ಟ್ರವಾಗಿ ಇನ್ನು ಕೆಲವೇ ಸಮಯದಲ್ಲಿ ಭಾರತ ಗುರುತಿಸಿಕೊಳ್ಳಲಿದೆ. ಈ ಒಪ್ಪಂದ 1.65 ಬಿಲಿಯನ್ ಡಾಲರ್ಗಳಷ್ಟಿದೆ. ಈ ಸಂಬಂಧದ ರೂಪಾಂತರದ ಸಮಯದಲ್ಲೇ ಮೋದಿ ಭಾರತದ ಉನ್ನತ ಹುದ್ದೆಗೆ ಏರಬಹುದು.
ಇನ್ನು ರಾಜಕೀಯವಾಗಿಯೂ ಇವೆರೆಡೂ ದೇಶಗಳು ಪರಸ್ಪರ ಸಹಾಯದಲ್ಲಿ ತೊಡಗಬಹುದು. ಆರ್ಥಿಕ ಒತ್ತಡದಿಂದ ಹೊರಬರುತ್ತಿರುವ ಜಪಾನ್ ಹೂಡಿಕೆಗಾಗಿ ಉತ್ತಮ ವಾತಾವರಣವನ್ನು ಹುಡುಕುತ್ತಿದೆ. ಮೋದಿಯವರು ಗೆದ್ದರೆ, ನಿಂತುಹೋದ ಆರ್ಥಿಕ ಸುಧಾರಣಾ ಚಟುವಟಿಕೆಗಳು ಮತ್ತೆ ಜೀವ ಪಡೆಯಬಹುದು ಮತ್ತು ಜಪಾನಿ ಹೂಡಿಕೆದಾರರಿಗೆ ಹೊಸ ಜಾಗ ಕೊಡಬಹುದು ಎಂದು ಭಾರತದ ಉದ್ಯಮ ವಲಯ ಆಶಿಸುತ್ತಿದೆ. ಇನ್ನು ಭಾರತದ ಗಡಿಯಲ್ಲಿ ಮತ್ತು ಪೂರ್ವ ಚೀನಾ ಸಮುದ್ರದಲ್ಲಿನ ಚೀನಾದ ಆಕ್ರಮಣಕಾರಿ ನಡವಳಿಕೆ ಭಾರತ-ಜಪಾನ್ನ ಸೇನಾ ಮತ್ತು ವಾಣಿಜ್ಯ ಸಂಬಂಧವನ್ನು ಗಟ್ಟಿಗೊಳಿಸಲು ಸ್ಪಷ್ಟ ತಾರ್ಕಿಕ ವಿವರಣೆ ಒದಗಿಸಲಿದೆ.
ಹಾಗಂತ ಜಪಾನ್ ಮತ್ತು ಭಾರತದ ನಡುವೆ ಭದ್ರವಾಗುತ್ತಿರುವ ಸಂಬಂಧ ಚೀನಾ ನಡವಳಿಗೆಕೆ ಪ್ರತಿಕ್ರಿಯೆನ್ನಾಗಿಯಷ್ಟೇ ನೋಡಬಾರದು. ಇದರಲ್ಲಿ 2006ರಲ್ಲಿ ಅಮೆರಿಕ-ಜಪಾನ್-ಆಸ್ಟ್ರೇಲಿಯಾ ಮತ್ತು ಭಾರತದ ಚತುರ್ಭುಜ ಭದ್ರತಾ ಮಾತುಕತೆಯ ವೇಳೆ ಅಬೆ ಸೂಚಿಸಿದ ವಿಸ್ತೃತ ದೃಷ್ಟಿಕೋನವೂ ಅಡಗಿದೆ.
ಅದಾಗಲೇ ಅಬೆಯವರ ಈ 'ಚತುರ್ಭುಜ' ತಂತ್ರ ಹೊಸ ರಾಜಕೀಯ ಆಯಾಮವೊಂದನ್ನು ಪಡೆದಿದೆ.
ವಾಶಿಂಗ್ಟನ್ನೊಂದಿಗಿನ ತನ್ನ ಮೈತ್ರಿಯ ಬಲದ ಮೇಲೆ ಇತ್ತೀಚೆಗೆ ಅನುಮಾನಪಡುತ್ತಿರುವ ಜಪಾನ್, ಈ ಕಾರಣಕ್ಕಾಗಿಯೇ ಏಶಿಯಾದ ಬಲಿಷ್ಠ ರಾಷ್ಟ್ರಗಳೊಂದಿಗೆ ಭದ್ರತಾ ಸಂಬಂಧಗಳನ್ನು ಬೆಳೆಸಲು ತನ್ನ ರಾಜತಾಂತ್ರಿಕರನ್ನು ಓಡಾಡಿಸುತ್ತಿದೆ. ಅದಾಗ್ಯೂ ಅಮೆರಿಕದೊಂದಿಗಿನ 'ಮೈತ್ರಿ' ಪ್ರಮುಖ ವಿಷಯವಾದರೂ, ಇತ್ತೀಚೆಗೆ ಭಾರತ ಮತ್ತು ಜಪಾನ್ನೊಂದಿಗೆ ಆ ರಾಷ್ಟ್ರದ ಸಂಬಂಧ ಕೆಟ್ಟ ಮಾರ್ಗದಲ್ಲಿ ಸಾಗುತ್ತಿದೆ. ಅಲ್ಲದೆ ಅಬೆ, ತನ್ನ ಭದ್ರತಾ ವ್ಯವಸ್ಥೆಯನ್ನು ಅಮೆರಿಕ ಕೇಂದ್ರಿತ ಚೌಕಟ್ಟಿನಿಂದ ಹೊರತರಬೇಕಿದೆ ಎಂದು ಹೇಳಿರುವುದರಿಂದ ವಾಶಿಂಗ್ಟನ್ ಕೂಡಾ ಕುಳಿತಲ್ಲೇ ಕೊಸರಾಡುತ್ತಿದೆ.
ಇದೇ ರೀತಿಯ ಇರುಸುಮುರುಸು ಇತ್ತೀಚೆಗೆ ಭಾರತ ಮತ್ತು ಅಮೆರಿಕದ ನಡುವೆ ಆಗುತ್ತಿದೆ. ಏಕೆಂದರೆ ಐತಿಹಾಸಿಕ ಇಂಡೋ-ಯುಎಸ್ ಪರಮಾಣು ಒಪ್ಪಂದದ ನಂತರ ರಕ್ಷಣಾ ಸಹಕಾರ ಮತ್ತು ಆಯಕಟ್ಟಿನ ಲಾಭದ ಮೇಲೆ ಕೇಂದ್ರಿತವಾಗಬೇಕಿದ್ದ ಒಪ್ಪಂದಗಳೆಲ್ಲ ಹಳ್ಳ ಹಿಡಿದು, ಈಗ ಬರೀ ರಾಜತಾಂತ್ರಿಕ ಬಿಕ್ಕಟ್ಟುಗಳು, ವಾಣಿಜ್ಯ ವ್ಯಾಜ್ಯಗಳು ಮತ್ತು ಬಾಂಗ್ಲಾ- ಅಘ್ಘಾನಿಸ್ತಾನದತ್ತ ಹೊರಳಿದ ಅಮೆರಿಕದ ವಿದೇಶಾಂಗ ನೀತಿಗಳೇ ಹೆಚ್ಚು ಸುದ್ದಿ ಮಾಡುತ್ತಿವೆ. ಈ ಸಂಬಂಧದ ನಡುವೆ ಎದ್ದಿರುವ ಕಂದಕವನ್ನು, ಮೋದಿಯವರನ್ನು ದೂರವಿಟ್ಟು ಇನ್ನಷ್ಟು ದೊಡ್ಡದು ಮಾಡಿದೆ ವಾಶಿಂಗ್ಟನ್. ಇತ್ತೀಚೆಗೆ ತನ್ನ ರಾಯಭಾರಿ ನ್ಯಾನ್ಸಿ ಪೋವೆಲ್ರನ್ನು ಮೋದಿಯವರ ಭೇಟಿಗೆ ಕಳುಹಿಸಿ ಅಮೆರಿಕ ತನ್ನ ನಿಲುವನ್ನು ಬದಲಿಸಿಕೊಂಡಿದೆ ಎನ್ನುವುದು ಬೇರೆ ಮಾತು.
Geopolitical ದೃಷ್ಟಿಕೋನದಿಂದ ನೋಡಿದಾಗ, ರಾಜತಾಂತ್ರಿಕ ತ್ರಿಕೋನದ ಎರಡು ಬದಿಗಳಾದ ಅಮೆರಿಕ- ಭಾರತ ಮತ್ತು ಅಮೆರಿಕ-ಜಪಾನ್ ಸಂಬಂಧ ಕೆಲವು ತಿಂಗಳಿಂದ ಜೂಲು ಜೂಲಾಗುತ್ತಿದೆ. ಆದರೆ, ಮೂರನೆ ಬದಿಯಾದ ಭಾರತ-ಜಪಾನ್ ಸಂಬಂಧದ ಶಕ್ತಿ ಮತ್ತು ಸಾಮಿಪ್ಯ ಹೊಸ ಹಂತವನ್ನು ಪ್ರವೇಶಿಸಿದೆ ಎನ್ನುವುದಂತೂ ಸ್ಪಷ್ಟ.
ಮೋದಿಯವರ ನಸೀಬು ಖುಲಾಯಿಸಿತೆಂದರೆ ನಿಸ್ಸಂಶಯವಾಗಿಯೂ ಈ ಸಂಬಂಧ ಹೆಚ್ಚಿನ ಅಭಿವ್ಯಕ್ತಿಯನ್ನು ಕಾಣಲಿದೆ. ಒಂದು ವೇಳೆ ಮೋದಿ ಗೆದ್ದರೆಂದರೆ, ಪ್ರಧಾನಿಯಾಗಿ ಅವರು ಹೆಜ್ಜೆಯಿಡಲಿರುವ ಮೊದಲ ವಿದೇಶಿ ನೆಲ 'ಟೋಕಿಯೋ' ಆಗಲಿದೆ ಎನ್ನುವುದನ್ನು ನಂಬಿ!
ಶ್ರೇಯ್ ವರ್ಮಾ
ಅಂಕಣಕಾರರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


