ಲಾಲುಗೇ ಫುಲ್ಲು ಸೀರಿಯಸ್ ಕ್ವೆಶ್ಚನ್ನಾ?
ಹಳೆ ಜಮಾನಾವೇ ಒಳ್ಳೇದಿತ್ತು. ನನ್ನನ್ನು ಎಲ್ಲರೂ ಜೋಕರ್ ಥರ ನೋಡಿಕೊಂಡು ಬಂದಿದ್ದರು. ಲಾಲು ಪ್ರಸಾದ್ ಸಂಸತ್ತಿನಲ್ಲಿ ಮಾತನಾಡಬೇಕು ಅಂತ ಜನ ಬಯಸುತ್ತಿದ್ದರು. ಪ್ರೆಸ್ನ ಮೈಕುಗಳೆದುರು ಮಾತಾಡಲಿ ಅಂತಲೂ ಜನರ ನಿರೀಕ್ಷೆಗಳು ಇರ್ತಿದ್ದವು. ನನಗೂ ಗೊತ್ತು, ನಾನೇನೋ ದೇಶ ಕಾಳಜಿ ವಿಷ್ಯ ಹೇಳ್ತೀನಿ ಅಂತೇನೂ ಅವರೆಲ್ಲ ಕಾಯ್ತಾ ಇರ್ಲಿಲ್ಲ. ಆದ್ರೆ ಲಾಲು ಮಾತಾಡಿದ್ರೆ ಒಂದಷ್ಟು ಮನರಂಜನೆ ಸಿಗುತ್ತಲ್ಲ ಅನ್ನೋದು ಎಲ್ಲರ ಲೆಕ್ಕಾಚಾರ. 'ಜಬ್ ತಕ್ ಸಮೋಸಾ ಮೆ ಆಲೂ ಹೋಗಾ, ತಬ್ ತಕ್ ಬಿಹಾರ್ ಮೇ ಲಾಲೂ ಹೋಗಾ' ಅಂದಿದ್ದನ್ನು ಎಲ್ಲರೂ ಎಂಜಾಯ್ ಮಾಡಿದವರೇ. ಹಾಗಂತ ನನ್ನ ಬಗ್ಗೆ ದೇಶವಾಸಿಗಳಿಗೆ ಏನೋ ಆಪ್ಯಾಯವಿತ್ತು ಅಂತೇನಲ್ಲ. ಇವನು ಬಿಹಾರವೆಂಬ ರಾಜ್ಯವನ್ನು ನುಂಗಿ ನೀರು ಕುಡಿದವನು ಅಂತಲೇ ಎಲ್ಲರೂ ಮಾತಾಡ್ತಿದ್ದದ್ದು. ಆದರೆ ಬೇರೆಲ್ಲ ರಾಜಕಾರಣಿಗಳ ಭ್ರಷ್ಟಾಚಾರದ ಬಗ್ಗೆ ಜನ- ಮಾಧ್ಯಮಗಳೆಲ್ಲ ನಖಶಿಖಾಂತ ಕೋಪದ ಧಾಟಿಯಲ್ಲಿ ಮಾತಾಡ್ತಿದ್ದರಲ್ಲ, ಆ ಧಾಟಿ ನನ್ನ ಬಗ್ಗೆ ಬರಲಿಲ್ಲ. ಏಕೆಂದರೆ ನಾನು ನನ್ನ ಇಮೇಜ್ ಅನ್ನು ಬಿಲ್ಡಪ್ ಮಾಡಿಕೊಂಡಿದ್ದೇ ಹಂಗೆ. ಲಾಲು ಅಂದರೆ ಜೋಕರ್ರು ಅಂತ. ಹಾಗಂದುಕೊಂಡೇ ಎಲ್ಲರೂ ಹೊಟ್ಟೆತುಂಬ ನಕ್ಕರು. ಆದರೆ ಜನರ ಅಗಾಧ ಪೆದ್ದುತನದ ಬಗ್ಗೆ ಒಳಗೊಳಗೇ ನಗೆಯಾಡಿಕೊಂಡು ಹೊಟ್ಟೆ ತುಂಬಿಸಿಕೊಂಡಿದ್ದು ನಾನು, ನನ್ನ ಪರಿವಾರದವರು ಮಾತ್ರ.
ಜೋಕರ್ ಆಗುವುದರಲ್ಲಿ ಬಹುದೊಡ್ಡ ಲಾಭವಿದೆ. ಜೋಕರ್ನನ್ನು ಎಲ್ಲರೂ ನಗೆಯ ವಸ್ತುವಾಗಿಯೇ ನೋಡುತ್ತಾರೆಯೇ ಹೊರತು ಆತನನ್ನು ಯಾರೂ ಯಾವುದಕ್ಕೂ ಹೊಣೆಗಾರನನ್ನಾಗಿಸೋದಿಲ್ಲ. ಜೋಕರ್ ಎನಿಸಿಕೊಂಡವನು ಬಿದ್ದರೆ, ಕೆಸರಲ್ಲಿ ಹೊರಳಾಡಿದರೆ, ಅಸಂಬದ್ಧವಾಗಿ ಮಾತನಾಡಿದರೆ ಅದು ತಪ್ಪೆನಿಸುವುದಿಲ್ಲ. ಏಕೆಂದರೆ ಜೋಕರ್ ಆದವನು ಇರಬೇಕಿರುವುದೇ ಹಾಗೆ. ಹಾಗಿಲ್ಲದಿದ್ದರೇ ಸಮಸ್ಯೆ ಅಂತ ಜನ ಒಪ್ಪಿಕೊಂಡುಬಿಟ್ಟಿರುತ್ತಾರೆ. ಹೀಗಾಗಿ ಬೇರೆಯವರ ವಿಷಯದಲ್ಲಿ ಕೇಳುವ ಕಠಿಣ ಪ್ರಶ್ನೆಗಳನ್ನು ಜೋಕರ್ ಆದವನು ಎದುರಿಸಬೇಕಿರುವುದಿಲ್ಲ. ಅವನು ಯಾರನ್ನು ಹೇಗೆ ಬೇಕಾದರೂ ಗೇಲಿ ಮಾಡಬಹುದು. ಅದನ್ನು ಮಂದಿ ಆಸ್ವಾದಿಸುತ್ತಾರೆ. ಹೀಗೆಲ್ಲ ಹೇಳಿದ್ದು ತಪ್ಪಲ್ಲವಾ ಅಂತ ಕೇಳುವುದಿಲ್ಲ. ಇದು ವೈಯಕ್ತಿಕ ನಿಂದನೆ ಅಲ್ವಾ ಅಂತ ಯಾರೂ ಸಿಟ್ಟಾಗೋಲ್ಲ. ಲಾಲೂ ಮಾತಾಡೋದೇ ಹಂಗೆ ಕಣ್ರೀ ಅಂತ ನಗೆಯಾಡಿ ಮುಂದೆ ಸಾಗ್ತಾರೆ. ನಾನು ಬಿಹಾರವನ್ನು ಆಳುತ್ತಿದ್ದಾಗ ಪತ್ರಕರ್ತರು, 'ಲಾಲೂ ಅವರೇ... ನಿಮ್ಮ ರಾಜ್ಯದ ರಸ್ತೆಗಳೆಲ್ಲ ಗುಂಡಿಬಿದ್ದು ಹೋಗಿವೆಯಲ್ಲ' ಅಂತ ಕೇಳಿದರು. 'ಹೇಮಾಮಾಲಿನಿ ಕೆನ್ನೆ ಥರ ನುಣುಪು ಮಾಡ್ತೀನಿ, ಸ್ವಲ್ಪ ಇರಿ' ಅಂದಿದ್ದಕ್ಕೆ ನಗಾಡಿಕೊಂಡು ಎದ್ದುಹೋದರು. ಇದೇ ಉತ್ತರ ಬೇರೆ ಯಾರಾದ್ರೂ ಹೇಳಿದ್ರೆ, 'ಸೀರಿಯಸ್ ಆಗಿ ಉತ್ರ ಕೊಡ್ರಿ' ಅಂತ ಮತ್ತೆ ಪ್ರಶ್ನಿಸುತ್ತಿದ್ರು. ಲಾಲುಗೆ ಹಂಗೆಲ್ಲ ಯಾರೂ ಸತಾಯಿಸಿದ್ದಿಲ್ಲ.
ಹಿಂಗೆಲ್ಲ ಇರಬೇಕಾದ್ರೆ ಜಮಾನಾ ಬದಲಾಗಿಹೋಗಿದ್ದೇಕೆ ಅಂತ ಸಿಟ್ಟು ಬರ್ತಿದೆ. ಒಂದು ಕಡೆ ಚುನಾವಣೆಗಳಲ್ಲಿ ಸೋಲು, ನ್ಯಾಯಾಲಯದಿಂದ ಶಿಕ್ಷೆ ಹೀಗೆಲ್ಲ ಆಗಿರುವಾಗ ಮೇಲಿಂದ ಸೀರಿಯಸ್ ಪ್ರಶ್ನೆ ಕೇಳಿದ್ರೆ ಉರಿಯದೇ ಇರುತ್ತಾ? ಏನೋ ಮೊದಲಿನ ಹಾಗೆ ಮೋದಿ ಬಗ್ಗೆ ನಿಮ್ಮ ಅಭಿಪ್ರಾಯ ಏನು, ನಿತೀಶ್ ಕುಮಾರ್ ಬಗ್ಗೆ ಏನಂತೀರಿ ಅಂತ ಕೇಳಿ ಅವ್ರನ್ನೆಲ್ಲ ಉಗಿದು ಉಪ್ಪಿನಕಾಯಿ ಹಾಕಿ, ಹೇಗೆ ಬೇಕೋ ಹಾಗೆ ಗೇಲಿ ಮಾಡೋಣ ಅಂದ್ಕೊಂಡು ಅರ್ನಾಬ್ ಗೋಸ್ವಾಮಿಗೆ ಸಂದರ್ಶನ ಕೊಟ್ಟೆ. ಆ ಮನುಷ್ಯ ನನ್ನ ಎಂಟರ್ಟೈನ್ಮೆಂಟ್ ವ್ಯಾಲ್ಯೂಗೆ ಬೆಲೆ ಕೊಡದೇ ಬರೀ ಬುಡ ಅಲ್ಲಾಡೋ ಪ್ರಶ್ನೇನೆ ಕೇಳಿದ್ರೆ ಹೆಂಗೆ? ರಾಹುಲ್ ಬಗ್ಗೆ ಒಳಗೊಳಗೇ ಕುದೀತಾ ಇದೀರಾ ಹೌದಲ್ವಾ ಅಂತ ಪದೇ ಪದೆ ಕೆಣಕೋದಾ? ಒಟ್ಟಾರೆಯಾಗಿ ಕಾಂಗ್ರೆಸ್ಗೆ ಬೇಕಾದ್ರೆ ಏನೋ ತಮಾಷೇನೋ, ಟೀಕೆನೋ ಮಾಡಿಬಿಡಬಹುದು. ಆದ್ರೆ ಪರ್ಟಿಕ್ಯುಲರ್ ಆಗಿ ಸೋನಿಯಾ, ರಾಹುಲ್ ವಿರುದ್ಧ ಟೀಕೆ ಮಾಡಿ ಬದುಕೋದುಂಟಾ? ನಮ್ದೂ ಫ್ಯಾಮಿಲಿ ಬಿಸ್ನೆಸ್ಸು, ಅವ್ರುದ್ದೂ ಹಂಗೇ. ನಂಗೂ ಹಿಂದೆ ನಿಂತು ಅಧಿಕಾರ ಚಲಾಯಿಸೋದು ಗೊತ್ತು, ಅವ್ರುದ್ದೂ ಅದೇ ಬ್ರಾಂಡ್. ಕೊನೆಗೂ ನನ್ನಂಥವ್ರನ್ನ ಅವ್ರು, ಅವ್ರಂಥವರನ್ನ ನಾನಲ್ದೇ ಇನ್ಯಾರೋ ಅಪ್ಪಿಕೊಳ್ಳೋಕೆ ಸಾಧ್ಯ?
ಆದ್ರೂ ಈ ಹಾಸ್ಯೋತ್ಸವಗಳು ಬೋರ್ ಹೊಡೆಸುವುದಕ್ಕೆ ಶುರುವಾದ ರೀತೀಲೆ ನನ್ನ ಸ್ಟಾಕ್ ವ್ಯಾಲ್ಯೂನೂ ಇಳೀತಿದೆ. ಎಂಟರ್ಟೈನ್ಮೆಂಟೇ ಬೇಕು ಅಂತಾದ್ರೆ ಪಪ್ಪೂ ಇಲ್ವಾ ಅಂತಾನೂ ಜನ ಕೇಳ್ತಿದಾರೆ. ಆಲೂ-ಲಾಲೂ, ಸೆಕ್ಯುಲರ್ರು- ಕಮ್ಯುನಲ್ಲು ಕತೆಗಳಲ್ಲಾ ರಿಪೀಟೆಡ್ ಜೋಕ್ಗಳಂತೆ ಸವಕಲಾಗಿಬಿಟ್ಟು, ಲಾಲು ಅಂದ್ರೆ ಅತ್ತ ಲೈಟ್ ಆಗಿಯೂ ತಗೊಳ್ದ ರೀತಿ ಆಗ್ತೀದೀನಲ್ಲ....
- ಅಶ್ವಹೃದಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

