ಎಷ್ಟು ಯೋಜನೆಗಳು ಬಂದರೂ ಶಿಕ್ಷಣ ಕ್ಷೇತ್ರವೇಕೆ ಸುಧಾರಿಸುತ್ತಿಲ್ಲ?

ಈ ಹಿಂದೆ ಸರ್ಕಾರ ಕಂಪ್ಯೂಟರ್ ಶಿಕ್ಷಣ ಬಲಗೊಳಿಸುವ ನಿಟ್ಟಿನಲ್ಲಿ ಕೆಲವು ಆಯ್ದ ಶಾಲೆಗಳಿಗೆ ಕಂಪ್ಯೂಟರ್ ಕೊಟ್ಟಿತ್ತು. ಅವು ಇದೀಗ ಯಾವ ಸ್ಥಿತಿಯಲ್ಲಿವೆ? ಅಲ್ಲಿ ವಿದ್ಯುತ್ ವ್ಯವಸ್ಥೆ ಇದೆಯೆ? ಅಲ್ಲಿನ ಕಂಪ್ಯೂಟರ್ಗಳು ಹೇಗೆ ಬಳಕೆಯಾಗುತ್ತಿವೆ? ಎನ್ನುವುದನ್ನೆಲ್ಲ ಮೊದಲು ನೋಡಿ, ಆ ನಂತರ ಈ ಗಣಕ ಆಧಾರಿತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಮುಂದಾಗಬೇಕು.
ರಾಜ್ಯ ರಾಜಕೀಯದಲ್ಲಿ ಇದೀಗ ಲೋಕಸಭೆ ಚುನಾವಣೆಯ ಜ್ವರ. ಮುಖ್ಯಮಂತ್ರಿಗಳು ತಮ್ಮ ಬಜೆಟ್ ಮಂಡನೆ ಮಾಡಿರುವರು. ರಾಜ್ಯ ಬಜೆಟ್ ಒಂದಿಷ್ಟು ಸಿಹಿ-ಕಹಿ ಅಂಶಗಳನ್ನು ಹೊಂದಿದ್ದು ಮಿಶ್ರ ಪ್ರತಿಕ್ರಿಯೆಯ ಬಜೆಟ್ ಇದಾಗಿದೆ. ಮುಖ್ಯಮಂತ್ರಿಗಳು ಹಲವು ಭರವಸೆಗಳನ್ನು ನೀಡುವ ಮೂಲಕ, ಈ ರಾಜ್ಯದ ಲೋಕಸಭೆಯ ಮತಗಳನ್ನು ಗೆಲ್ಲುವ ಯೋಚನೆ ಮಾಡಿರುವುದು ಅತ್ಯಂತ ಸತ್ಯವಾದದ್ದು. ಹಾಗೆ ನೋಡಿದರೆ ಈ ಹಿಂದಿನ ಹಲವು ಯೋಜನೆಗಳು ಅನೇಕ ವರ್ಷಗಳಿಂದ ಸರಿಯಾಗಿ ಅನುಷ್ಠಾನಗೊಳ್ಳದೆ ನಿರುಪಯೋಗಿಯಾಗಿ ಕುಳಿತಿವೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಹೊಸ ಯೋಜನೆಗಳು ಘೋಷಣೆಯಾಗಿರುವುದೇನೋ ಸ್ವಾಗತಾರ್ಹ. ಆದರೆ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಇರುವ ಅನೇಕ ಯೋಜನೆಗಳು ಸ್ಥಿತಿ ಏನಾಗಿದೆ, ಅವುಗಳ ಅನುಷ್ಠಾನವಾಗಿದೆಯೇ, ಉದ್ದೇಶ ಈಡೇರಿದೆಯೇ ಎನ್ನುವುದನ್ನು ಗಮನಿಸುವುದೂ ಮುಖ್ಯವಾಗುತ್ತದೆ.
ಶಿಕ್ಷಣ ಕ್ಷೇತ್ರ, ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣಕ್ಕೆ 17,425 ಕೋಟಿ ರುಪಾಯಿಗಳ ಅನುದಾನ ಇಟ್ಟಿರುವುದು ತುಂಬಾ ಒಳ್ಳೆಯ ನಡೆ. ಆದರೆ ಈಗಾಗಲೇ ಶಿಕ್ಷಣ ಇಲಾಖೆಯಲ್ಲಿರುವ ಅನೇಕ ಯೋಜನೆಗಳು ಅಲಕ್ಷ್ಯದಿಂದ ಮೂಲೆಗುಂಪಾಗಿವೆ ಎನ್ನುವುದೂ ಅತ್ಯಂತ ಕಳವಳ ಪಡುವ ವಿಷಯ. ಶಿಕ್ಷಕರು ಈಗಾಗಲೇ ಈ ಯೋಜನೆಗಳಿಂದ ಮತ್ತು ಶಿಕ್ಷಣ ಕ್ಷೇತ್ರದ ಒತ್ತಡದ ಕೆಲಸದಿಂದ ಸೋತು ಹೋಗಿರುವರು. ತಳಮಟ್ಟದಲ್ಲಿ ಏನೆಲ್ಲ ನಡೆದಿದೆ ಎಂಬ ವಿಚಾರದತ್ತ ಗಮನಹರಿಸಿದಾಗ ಮಾತ್ರ ಆ ವಲಯದಲ್ಲಿನ ಸಮಸ್ಯೆಯ ವ್ಯಾಪ್ತಿ ಅರ್ಥವಾಗುತ್ತದೆ. ಆದರೆ ಅಧಿಕಾರದಲ್ಲಿರುವವರು ಇದ್ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ, ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಅನುದಾನ ನೀಡಿ ಶಿಕ್ಷಕರು ಹಾಗೂ ಸಮುದಾಯದ ಮಧ್ಯೆ ಈಗಾಗಲೇ ಎದ್ದಿರುವ ಜಗಳವನ್ನು ಮತ್ತಷ್ಟು ಬಲಗೊಳಿಸಿದ್ದಾರೆ.
"ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ಯೋಜನೆ" ಯನ್ನು ಜಾರಿ ಮಾಡುವುದಾಗಿ ಪ್ರತಿ ವರ್ಷವೂ, ಪ್ರತಿ ಸರ್ಕಾರಗಳೂ ಹೇಳುತ್ತಲೇ ಬರುತ್ತಿವೆ. ಪ್ರತಿ ಬಜೆಟ್ನಲ್ಲೂ ಶಾಲಾ ವಂಚಿತ ಮಕ್ಕಳಿಗಾಗಿ ಇಂತಿಷ್ಟು ಹಣ ವ್ಯಯವಾಗುತ್ತಿದೆ. ಆದರೆ ಇಷ್ಟೆಲ್ಲಾ ಮಾಡಿದರೂ ಈ ಮಕ್ಕಳ ಸಂಖ್ಯೆ ಮಾತ್ರ ಇಳಿಮುಖವಾಗುತ್ತಿಲ್ಲ ಏಕೆ? ಈಗಾಗಲೇ ಶಿಕ್ಷಣ ಹಕ್ಕು ಕಾಯ್ದೆ ಜಾರಿಯಿದ್ದು ಅದರ ಎಷ್ಟು ಜನ ಅದನ್ನು ಗಾಳಿಗೆ ತೂರುತ್ತಿದ್ದಾರೆ ಎನ್ನುವುದು ಬಜೆಟ್ ಬಾಕ್ಸ್ ತೆರೆಯುವವರಿಗೆ ತಿಳಿದಿದೆಯೇ? ಯೋಜನೆಗಳು ಬರೀ ಘೋಷಣೆಯಾಗಿ ಉಳಿಯುತ್ತಿವೆಯೆಂದರೆ, ಮತ್ತೆ ಮತ್ತೆ ಹೊಸ ಯೋಜನೆಗಳನ್ನು ತರುವ ಅವಶ್ಯಕತೆಯಾದರೂ ಏನಿದೆ?
ಕಳೆದ ಐದು ವರ್ಷದಿಂದ ಪ್ರತಿಯೊಂದು ಸರ್ಕಾರ ಸುಳ್ಳು ಹೇಳುತ್ತಾ, ಶಿಕ್ಷಕರಿಗೆ ಮೋಸ ಮಾಡುತ್ತಾ ಬಂದಿವೆ. ಒಂದಡೆ ಶಿಕ್ಷಕರ ಕೊರತೆಯಿದ್ದು ಶಿಕ್ಷಣ ಕುಂಠಿತವಾಗುತ್ತಿದೆ ಎನ್ನುವ ಕೂಗು, ಇನ್ನೊಂದೆಡೆ ಶಿಕ್ಷಕರಾಗಬೇಕೆಂದು ಆಸೆಯ ಕಣ್ಗಳಿಂದ ಕಾದು ಕುಳಿತಿರುವ ಶಿಕ್ಷಿತರ ವರ್ಗ! 9,405 ಪ್ರಾಥಮಿಕ ಮತ್ತು 1,137 ಪ್ರೌಢ ಶಾಲೆ ಶಿಕ್ಷಕರ ಭರ್ತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಬಜೆಟ್ನಲ್ಲಿ ಹೇಳಿದರೆ ಸಾಲದು, ಕೂಡಲೇ ಅವರನ್ನು ನೇಮಕ ಮಾಡುವ ಕೆಲಸಕ್ಕೆ ಚಾಲನೆ ಸಿಗಬೇಕು.
ಹಾಗೆ ನೋಡಿದರೆ ವರ್ಷಗಳಿಂದ ಜಾರಿಯಲ್ಲಿರುವ ಸರ್ವ ಶಿಕ್ಷಣ ಅಭಿಯಾನಕ್ಕೆ ಹಣ ಕೋಟಿ ಕೋಟಿ ಮೊತ್ತದಲ್ಲಿ ಹೋಗುತ್ತಿದ್ದರೂ, ಶೈಕ್ಷಣಿಕ ಅಭಿವೃದ್ಧಿ ಮಾತ್ರ ಇನ್ನು ಹತ್ತರ ಲೆಕ್ಕದಲ್ಲಿದೆ. ಅಲ್ಪಸಂಖ್ಯಾತರ ಭಾಷಾ ಶಾಲೆಗಳಲ್ಲಿ ಖಾಲಿ ಇರುವ ಕನ್ನಡ ಬೋಧಕರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಈ ಮೊದಲಿನ ಬಜೆಟ್ನಲ್ಲಿಯೂ ಹೇಳಲಾಗಿತ್ತು. ಆದರೆ ಅದು ಇನ್ನು ಜಾರಿಯಾಗಿಲ್ಲ. ಇದೀಗ ಮತ್ತೆ ಕಣ್ಣಾಮುಚ್ಚಾಲೆ ಆಟ ನಡೆದಿದೆ. ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಶಿಕ್ಷಣ ಗುಣಮಟ್ಟ ಹೆಚ್ಚಳಕ್ಕೆ 2 ಕೋಟಿ ರುಪಾಯಿ ಬಿಡುಗಡೆಯಾದರೆ ಈ ಎರಡು ಕೋಟಿ ರಾಜಕಾರಣಿಗಳ ಮತ್ತು ಅಧಿಕಾರಿಗಳ ಪಾಲಾಗುವುದೇ ಹೊರತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದೇ ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ಅತಿಹೆಚ್ಚು ಹಣ ಹೊಂದಿರುವ ಶಿಕ್ಷಣ ಇಲಾಖೆಯನ್ನು ಅನೇಕ ಅಧಿಕಾರಿಗಳು ದುರುಪಯೋಗ ಪಡೆಸಿಕೊಳ್ಳುವುದು ನಡೆದಿದೆ.
ಪಠ್ಯಪುಸ್ತಕ ರಚನಾ ಸಮಿತಿ ಪುನಾರಚನೆಗೆ ನಿರ್ಧಾರ ತೆಗೆದುಕೊಂಡಿದ್ದು ಒಳ್ಳೆಯ ವಿಚಾರ. ಆದರೆ ಇಲ್ಲಿಯೂ ರಾಜಕೀಯ ಮಾಡಿ ಅದರಲ್ಲಿ ಮೊಂಡುವಾದ ಮಾಡುವ, ಖಂಡಿಸುವ ರಾಜಕೀಯ ಲಾಬಿ ಮಾಡುವ ತಜ್ಞರನ್ನು ನೇಮಿಸಿಕೊಳ್ಳದೆ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳ ಆಯ್ಕೆಯಾಗಬೇಕಿದೆ. ಅದು ಪಾರಾದರ್ಶಕವಾಗಿ ಜನಬೆಂಬಲಿತವಾಗುವಂತೆ ಮಾಡಿದರೆ ಉತ್ತಮವೆನಿಸುತ್ತದೆ. ರಾಜ್ಯದ ಎಷ್ಟು ಶಾಲೆಗಳಲ್ಲಿ ಈಗಾಗಲೇ ಇರುವ ಕಿಟ್ಗಳ ಬಳಕೆ ನಡೆದಿದೆ ಎಂಬ ವಿಚಾರದತ್ತ ಗಮನಹರಿಸಬೇಕಿದೆ. ಅವುಗಳ ಬಳಕೆ ನೋಡಿ 4 ಮತ್ತು 5 ನೆಯ ತರಗತಿ ಮಕ್ಕಳಿಗೆ ಗಣಿತ ವಿಷಯ ಬೋಧನೆಗೆ ಗಣಿತ ಕಲಿಕಾ ಕಿಟ್ ವಿತರಿಸಲಿ.
ಇನ್ನು ರಾಜ್ಯದ ಪ್ರೌಢ ಶಾಲೆಗಳ ಸ್ಥಿತಿಗತಿಯ ಬಗ್ಗೆ ಮುಖ್ಯಮಂತ್ರಿಗಳು ಒಂದಿಷ್ಟು ಕಾಳಜಿ ವಹಿಸಿ ಅವುಗಳ ಪ್ರಗತಿ ಪರಿಶೀಲನೆ ಮಾಡಲಿ. ಈಗಾಗಲೇ ಬಿಡುಗಡೆಯಾದ ಅನುದಾನದಿಂದ ಯಾವ ರೀತಿ ಕಟ್ಟಡ ನಿರ್ಮಾಣವಾಗಿವೆ, ರಾಜಕೀಯ ವ್ಯಕ್ತಿಯಿಂದ ಹಿಡಿದು ಅಧಿಕಾರಿಗಳು ಎಷ್ಟು ಹಂಚಿಕೊಂಡಿರುವರು ಎಂಬ ವಿಚಾರದತ್ತ ಗಮನಕೊಟ್ಟ ಮೇಲೆ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ 178 ಶಾಲೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡರೆ ಸೂಕ್ತವೆನಿಸುತ್ತದೆ.
ಈಗಾಗಲೇ ಸರ್ಕಾರ, ಪಾಲಕರ ಸಭೆ ಮಾಡಬೇಕು, ಮಕ್ಕಳ ಹಾಗೂ ಪಾಲಕರ ಮನವೊಲಿಸಬೇಕು ಎಂದು ಹೇಳಿದೆ. ಆದರೆ ಅದೆಷ್ಟು ಶಿಕ್ಷಕರು ನೈಜವಾಗಿ ಈ ಕೆಲಸ ಮಾಡುತ್ತಿದ್ದಾರೆ? ಅದರ ಫಲಿತಾಂಶ ಏನಾಯಿತು ಎಂಬ ವಿಷಯ ತಿಳಿದು, ಆಮೇಲೆ 7 ರಿಂದ 10 ನೇ ತರಗತಿಯ ಮಕ್ಕಳಿಗೆ ಕರಿಯರ್ ಕೌನ್ಸೆಲಿಂಗ್, ಪಾಲಕರಿಗೆ ಮಾರ್ಗದರ್ಶನಕ್ಕಾಗಿ 1.27 ಕೋಟಿ ರುಪಾಯಿ ಖರ್ಚು ಮಾಡಬೇಕು. ನಮ್ಮ ರಾಜ್ಯದಲ್ಲಿ ಈಗಾಗಲೇ ಇರುವ ಗ್ರಂಥಾಲಯಗಳು ಹೇಗಿವೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಶಾಲೆಗಳ
ಗ್ರಂಥಾಲಯಗಳ ಕೀಲಿ ಕೈ ಮುಖ್ಯ ಗುರುಗಳ ತಿಜೋರಿಯಲ್ಲಿ ಭದ್ರವಾಗಿದೆ. ಪಂಚಾಯತಿ ಮಟ್ಟದಲ್ಲಿ ಅವು ಗ್ರಂಥಪಾಲಕರ ಮನೆಯಲ್ಲಿವೆ. ಮೊದಲು ಅವುಗಳನ್ನು ತೆರೆಸುವ ಕೆಲಸ ಮಾಡಿ ಅವುಗಳ ಪರಿಶೀಲನೆ ಮಾಡಿ ನಂತರ ಹೈದ್ರಾಬಾದ್ ಕರ್ನಾಟಕದ ಭಾಗದಲ್ಲಿ 250 ಪಂಚಾಯತಿಗಳಲ್ಲಿ ಗ್ರಂಥಾಲಯ ನಿರ್ಮಾಣದಂತಹ ಕೆಲಸಕ್ಕೆ ಕೈ ಹಾಕಬೇಕು.
ಹಿಂದೊಮ್ಮೆ ಸರ್ಕಾರ ಕಂಪ್ಯೂಟರ್ ಶಿಕ್ಷಣ ಬಲಗೊಳಿಸುವ ನಿಟ್ಟಿನಲ್ಲಿ ಕೆಲವು ಆಯ್ದ ಶಾಲೆಗಳಿಗೆ ಕಂಪ್ಯೂಟರ್ ಕೊಟ್ಟಿತ್ತು. ಅವು ಇದೀಗ ಯಾವ ಸ್ಥಿತಿಯಲ್ಲಿವೆ? ಅಲ್ಲಿ ವಿದ್ಯುತ್ ವ್ಯವಸ್ಥೆ ಇದೆಯೆ? ಅಲ್ಲಿನ ಕಂಪ್ಯೂಟರ್ಗಳು ಹೇಗೆ ಬಳಕೆಯಾಗುತ್ತಿವೆ? ಮಕ್ಕಳು ಅದರ ಲಾಭ ಪಡೆದಿರುವರೆ? ಎನ್ನುವುದನ್ನೆಲ್ಲ ಮೊದಲು ನೋಡಿ ಆ ನಂತರ ಈ ಗಣಕ ಆಧಾರಿತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಎಲ್ಲ ಶಾಲೆಗಳಲ್ಲಿ, ಇಲಾಖಾ ಕಚೇರಿಗಳಲ್ಲಿ ಆನ್ಲೈನ್ ಸೌಲಭ್ಯ ಕೊಡುವತ್ತ ಗಮನಹರಿಸಬೇಕು.
ಸರ್ಕಾರ ಶಿಕ್ಷಣ ಪ್ರಗತಿಯ ಬಗ್ಗೆ ಗಮನಕೊಡಬೇಕು, ಇಲ್ಲವಾದರೆ ಸಾಮಾನ್ಯ ಜನರ ಹಣ ಅನ್ಯಾಯವಾಗಿ ಅಧಿಕಾರಿಗಳ ಹಾಗೂ ಪುಢಾರಿಗಳ ಜೇಬು ಸೇರುವುದರಲ್ಲಿ ಸಂಶಯವಿಲ್ಲ. ಶಿಕ್ಷಣ ಅಭಿವೃದ್ಧಿ ಆಗುವ ಬದಲು ಇಲಾಖಾ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ಅಭಿವೃದ್ಧಿಯಾದರೆ ಬಜೆಟ್ ಸಾರ್ಥಕತೆ ಕಳೆದುಕೊಳ್ಳುತ್ತದೆ. ಬರೀ ಘೋಷಣೆ ಮಾಡಿದರೆ ಸಾಲದು ಎಲ್ಲವೂ ಸರಿಯಾಗಿ ಅನುಷ್ಠಾನವಾಗಬೇಕು. ಹಳ್ಳಿಮಟ್ಟದಲ್ಲಿ ಮಕ್ಕಳ ಸ್ಥಿತಿಗತಿಯತ್ತ ಸರ್ಕಾರ ಹೆಚ್ಚು ಗಮನ ಹರಿಸಬೇಕು. ಶಿಕ್ಷಣದ ಬಜೆಟ್ ಮಂಡನೆ ನೋಡಿ ಅಧಿಕಾರಿಗಳು ಸಂತೋಷಗೊಂಡರೇ ಹೊರತು, ಮಕ್ಕಳಲ್ಲ ಎನ್ನುವುದು ನೆನಪಿರಲಿ.
ಕೆ.ಎಂ.ವಿಶ್ವನಾಥ ಮರತೂರ
mankavi143@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


