ಚರ್ಚೆಗೇ ಸೀಮಿತವಾಯಿತೆ ತುಂಗಭದ್ರಾ ವಿಷಯ?
ತುಂಗಭದ್ರಾ ಜಲಾಶಯ ಕರ್ನಾಟಕದಲ್ಲಿದ್ದರೂ ಆಂಧ್ರಪ್ರದೇಶ ಸರ್ಕಾರ ಮಾತ್ರ ಅಲ್ಲಿನ ಜನರ, ರೈತರ ಕಳಕಳಿ ಮೆರೆದು ತುಂಗಭದ್ರಾ ಜಲಾಶಯದಿಂದ ಎಚ್ಎಲ್ಸಿಯಿಂದ ಹರಿಯುವ ನೀರನ್ನು ಸಂಗ್ರಹಿಸಲು ಹಾಗೂ ಅಲ್ಲಿನ ಮಳೆಯ ನೀರು, ಪೆನ್ನಾ ನದಿಯ ನೀರು ಸಂಗ್ರಹಿಸಲು ಆಂಧ್ರದ ವಿವಿಧೆಡೆ 7 ಸಮಾನಾಂತರ ಜಲಾಶಯಗಳನ್ನು ನಿರ್ಮಿಸಿ, ಅಲ್ಲಿನ ರೈತರ ಪರ ತನ್ನ ಕಾಳಜಿ ತೋರಿದೆ. ಆದರೆ ಯೋಜನೆಯನ್ನು ಕಾರ್ಯಗತಗೊಳಿಸಬೇಕೆಂಬ ಛಲ ಇಲ್ಲದ ನಮ್ಮ ರಾಜಕಾರಣಿಗಳು ಮಾಧ್ಯಮದವರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ನೆಪದಲ್ಲಿ ಕಾಟಾಚಾರದ ಉತ್ತರ ನೀಡುತ್ತಾರೆ.
ಕಳೆದ ವರ್ಷದ ಬಜೆಟ್ನಲ್ಲಿ ತುಂಗಭದ್ರಾ ಜಲಾಶಯದ ಹೂಳೆತ್ತುವ ವಿಷಯ ಪ್ರಸ್ತಾಪವಾಗಿತ್ತು. ಈ ಬಾರಿ ಬಜೆಟ್ನಲ್ಲಿ ತುಂಗಭದ್ರಾ ಜಲಾಶಯ ಸಂಗ್ರಹ ಸಾಮರ್ಥ್ಯ ಹೆಚ್ಚಾಗುವ ಬಗ್ಗೆ ಒಂದಕ್ಷರವೂ ಇಲ್ಲ. ಇದು ರಾಜಕೀಯ ಇಚ್ಛಾಶಕ್ತಿಯ ಕೊರತೆಯಲ್ಲದೆ ಮತ್ತೇನು? ತುಂಗಭದ್ರಾ ಜಲಾಶಯ ತುಂಬುತ್ತಿಲ್ಲ ಎಂಬ ಕೊರಗಲ್ಲ, ಜಲಾಶಯ ತುಂಬುವುದು ಮಾತ್ರವಲ್ಲ, ಮಳೆಗಾಲದಲ್ಲಿ ಜಲಾಶಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಟಿಎಂಸಿ ನೀರು ಪ್ರವಾಹ ರೂಪದಲ್ಲಿ ನದಿಯ ಮೂಲಕ ಆಂಧ್ರಕ್ಕೆ ಹರಿದು ಹೋಗುತ್ತಿದೆ. ಪ್ರವಾಹದ ನೀರು ತಡೆಯುವ ಪ್ರಯತ್ನ ಆಗದಿರುವುದರಿಂದ ಜಲಾಶಯದ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ತುಂಗಭದ್ರಾ ಜಲಾಶಯದಿಂದ ಎರಡು ರಾಜ್ಯಗಳು 230 ಟಿಎಂಸಿ ನೀರನ್ನು ಬಳಕೆ ಮಾಡಲು ಬಚಾವತ್ ಆಯೋಗದ ತೀರ್ಪಿನಲ್ಲಿ ತಿಳಿಸಲಾಗಿದೆ. ಕರ್ನಾಟಕಕ್ಕೆ 151.49 ಟಿಎಂಸಿ, ಆಂಧ್ರಪ್ರದೇಶಕ್ಕೆ 78.51 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ 1980-81ರಲ್ಲಿ ಮಾತ್ರ ನೀರನ್ನು ಸಂಪೂರ್ಣ (230 ಟಿಎಂಸಿ)ವಾಗಿ ಬಳಕೆ ಮಾಡಿದ್ದು ಬಿಟ್ಟರೆ ತೀರ್ಪಿನಲ್ಲಿ ಇರುವಂತೆ 230 ಟಿಎಂಸಿ ನೀರನ್ನು ಬಳಕೆ ಮಾಡಲು ಸಾಧ್ಯವಾಗಿಲ್ಲ. ಕಾರಣ ಜಲಾಶಯಕ್ಕೆ ಮಳೆಗಾಲದಲ್ಲಿ ಬಂದ ನೀರು ಪ್ರವಾಹ ರೂಪದಲ್ಲಿ ನೀರು ಹರಿದು ಹೋಗುತ್ತದೆ. ಬೇಸಿಗೆ ಕಾಲದಲ್ಲಿ ಜಲಾಶಯಕ್ಕೆ ನೀರು ಬಾರದ ಹಿನ್ನೆಲೆಯಲ್ಲಿ ಸಹಜವಾಗಿ ಜಲಾಶಯದಿಂದ ಹಂಚಿಕೆಯಾಗಿರುವ ನೀರನ್ನು ಸಂಪೂರ್ಣವಾಗಿ ಬಳಕೆ ಮಾಡಲು ಆಗುತ್ತಿಲ್ಲ.
37 ವರ್ಷಗಳ ಅವಧಿಯಲ್ಲಿ, ಬಚಾವತ್ ಆಯೋಗದ ಆದೇಶ ಜಾರಿಗೆ ಬಂದಾಗಿನಿಂದ ಅಂದರೆ 1976-77ರಿಂದ 2012-13ರ ಅವಧಿಯಲ್ಲಿ 1978-79ರಲ್ಲಿ 558.775 ಟಿಎಂಸಿ ನೀರು ಜಲಾಶಯಕ್ಕೆ ಬಂದಿದೆ. ಆದರೆ ಆ ವರ್ಷ ಕೇವಲ 216.916 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಶಕ್ತವಾಗಿದೆ. ಹಂಚಿಕೆಯ ನೀರನ್ನು ಬಳಕೆ ಮಾಡಲು ಸಾಧ್ಯವಾಗಿಲ್ಲ. ಪ್ರವಾಹದ ನೀರನ್ನು ತಡೆಯುವಲ್ಲಿ ವಿಫಲವಾಗಿರುವುದು ಹಾಗೂ ಹೂಳಿನ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಈಗಲೂ ಪ್ರವಾಹ ನೀರನ್ನು ತಡೆಯಲು ವಿಫಲವಾಗುತ್ತಾ ಸಾಗಿರುವುದು ಜಲಾಶಯದ ನೀರನ್ನು ಈಗಲೂ ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. 37 ವರ್ಷದಲ್ಲಿ 24 ವರ್ಷಗಳ ಕಾಲ ಸುಮಾರು 256.5 (1935-36 ಮತ್ತು 1936-37 ಅವಧಿಯಲ್ಲಿ ತುಂಗಭದ್ರಾ ಜಲಾಶಯದ ನಿರ್ಮಾಣದ ಪೂರ್ವದಲ್ಲಿ ಮೈಸೂರು, ಮದ್ರಾಸ್ ಹಾಗೂ ಹೈದ್ರಾಬಾದ್ ಕರ್ನಾಟಕ ಸರ್ಕಾರದ ಅಂದಿನ ಎಂಜಿನಿಯರ್ಗಳು ಜಂಟಿ ಸರ್ವೇ ಮಾಡಿ, ಜಲಾಶಯಕ್ಕೆ 256 ಟಿಎಂಸಿ ನೀರು ಹರಿದು ಬರುತ್ತದೆ ಎಂದು ಲೆಕ್ಕಾಚಾರ ಹಾಕಿದ್ದರು). ಟಿಎಂಸಿಗಿಂತ ಹೆಚ್ಚಿನ ನೀರು ಪ್ರತಿವರ್ಷ ಜಲಾಶಯಕ್ಕೆ ಹರಿದು ಬಂದಿದೆ. ಆದರೂ ಕೂಡ 230 ಟಿಎಂಸಿ ನೀರನ್ನು ಬಳಕೆ ಮಾಡಲು ಸಾಧ್ಯವಾಗಿಲ್ಲ. ಅಂದರೆ ಜಲಾಶಯದ ನೀರು ಪ್ರವಾಹದ ಮೂಲಕ ಹರಿದು ಹೋಗಿರುವ ಪ್ರಮಾಣವೇ ಹೆಚ್ಚಾಗಿದೆ. 2012-13ರಲ್ಲಿ ಕೇವಲ 13.948 ಟಿಎಂಸಿ ನೀರು ಕನಿಷ್ಟವಾಗಿ ಪ್ರವಾಹದ ರೂಪದಲ್ಲಿ ಹರಿದು ಹೋಗಿದೆ. ಇಂತಹ ಅಂಕಿ ಸಂಖ್ಯೆಗಳನ್ನು ಪರಿಶೀಲನೆ ನಡೆಸಿದರೆ ಎಂತಹವರಿಗೆ ಜಲಾಶಯದ ಗರಿಷ್ಟ ನೀರಿನ ಬಳಕೆಗೆ ಯೋಜನೆ ರೂಪಿಸುವ ಅಗತ್ಯ ಕಾಣುತ್ತದೆ. ಜಲಾಶಯದ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಜಲಾಶಯದ ಹೂಳೆತ್ತುವ ಮೂಲಕ ಮಾಡಬಹುದು. ಆದರೆ ಅದಕ್ಕಿಂತಲೂ ಇನ್ನುಳಿದ ಸರಳ ಮಾರ್ಗವಾದ ಸಮಾನಾಂತರ ಜಲಾಶಯ ಅಥವಾ ಪ್ರವಾಹ ಕಾಲುವೆ ನಿರ್ಮಾಣದ ಕಲ್ಪನೆಯು ಹೆಚ್ಚು ಪರಿಣಾಮಕಾರಿ ಎಂಬ ಅಂಶವು ನೀರಾವರಿ ತಜ್ಞರ ವಾದವಾಗಿದೆ. ಆದರೆ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಗಂಭೀರವಾಗಿ ಆಲೋಚಿಸುವ ಕಿಂಚಿತ್ತ್ತೂ ಕಾಳಜಿ ಇಲ್ಲವೆಂಬುದು ದುರಂತವೇ ಸರಿ. ಸ್ವಂತ ಜಲಾಶಯವಿಲ್ಲದಿದ್ದರೂ ಆಂಧ್ರಪ್ರದೇಶ ಸರ್ಕಾರ ತುಂಗಭದ್ರಾ ಜಲಾಶಯದಿಂದ ಎಚ್ಎಲ್ ಕಾಲುವೆ ಮೂಲಕ ಬರುವ ಆಂಧ್ರಪ್ರದೇಶದ ಪಾಲಿನ ನೀರು ಸಂಗ್ರಹಿಸಲು ಮತ್ತು ಅಲ್ಲಿನ ಮಳೆ ನೀರು, ಪೆನ್ನಾ ನದಿಯ ಮೂಲಕ ಹರಿದು ಬರುವ ನೀರನ್ನು ಸಂಗ್ರಹಿಸಲು 7 ಕಡೆಗಳಲ್ಲಿ ಸಮಾನಾಂತರ ಜಲಾಶಯ ನಿರ್ಮಿಸಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಇಂತಹ ಕಾಳಜಿ ಕರ್ನಾಟಕ ಸರ್ಕಾರಕ್ಕೆ ಇಲ್ಲ. ಆಂಧ್ರದ ಕಣೇಕಲ್ನಲ್ಲಿ 0.4 ಟಿಎಂಸಿ ಸಾಮರ್ಥ್ಯದ ಸಮಾನಾಂತರ ಜಲಾಶಯ, ಪೆನ್ನೊಬಳಂ ಸಮೀಪದಲ್ಲಿ 11.1 ಟಿಎಂಸಿ ಸಾಮರ್ಥ್ಯದ ಜಲಾಶಯ, ಮೀಡಪೆನ್ನಾದಲ್ಲಿ 5.17 ಟಿಎಂಸಿ ಸಾಮರ್ಥ್ಯ, ಚಿತ್ರಾವತಿಯಲ್ಲಿ 10.0 ಟಿಎಂಸಿ ಸಾಮರ್ಥ್ಯ, ಮೈಲಾವರಂನಲ್ಲಿ 9.865 ಟಿಎಂಸಿ ಸಾಮರ್ಥ್ಯ, ಸುಬ್ರರಾಯ ಸಾಗರದಲ್ಲಿ 0.424 ಟಿಎಂಸಿ ಸಾಮರ್ಥ್ಯ, ಮುಚ್ಚುಕೋಟದಲ್ಲಿ 0.658 ಟಿಎಂಸಿ ಸಾಮರ್ಥ್ಯದ ಸಮಾಂತರ ಜಲಾಶಯ ನಿರ್ಮಿಸಲಾಗಿದೆ.
ಆಂಧ್ರದಲ್ಲಿನ ಈ ಸಮಾನಾಂತರ ಜಲಾಶಯದಲ್ಲಿ ನೀರು ಸಂಗ್ರಹಿಸಿ ನೀರಾವರಿ ಹಾಗೂ ಕುಡಿಯಲು ಬಳಸಲಾಗುತ್ತಿದೆ. ಆದರೆ ನೀರಾವರಿ ತಜ್ಞರ ಅನಿಸಿಕೆಯ ಪ್ರಕಾರವಾಗಿ ಈ ಏಳು ಸಮಾಂತರ ಜಲಾಶಯದಲ್ಲಿ ಇನ್ನು 25 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುತ್ತದೆ. ಇದೀಗ ಕರ್ನಾಟಕಕ್ಕೆ ತುಂಗಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು ಅತ್ಯಗತ್ಯವಾಗಿರುವುದರಿಂದ, ನೀರನ್ನು ಹೆಚ್ಚಿನ ಮಟ್ಟದಲ್ಲಿ ಸದ್ಭಳಕೆ ಮಾಡಬೇಕೆಂಬ ಮಹಾದಾಸೆ ಇದೆ. ಇಂತಹ ಸಂದರ್ಭದಲ್ಲಿ ಆಂಧ್ರಪ್ರದೇಶಕ್ಕೆ ಪ್ರವಾಹ ಕಾಲುವೆ ನಿರ್ಮಿಸುವ ಪೂರ್ವದಲ್ಲಿ ಪ್ರವಾಹ ಕಾಲುವೆಯ ಮೂಲಕ 20 ಟಿಎಂಸಿ ನೀರು ಏಳು ಸಮಾನಾಂತರ ಜಲಾಶಯಗಳಿಗೆ ಪ್ರವಾಹದ 20 ಟಿಎಂಸಿ ನೀರು ಹರಿಸಿದರೆ ಆಂಧ್ರಪ್ರದೇಶ ತನ್ನ ಕೋಟಾದಲ್ಲಿ 20 ಟಿಎಂಸಿ ನೀರು ಪಡೆದಂತಾಗುತ್ತದೆ. ಇದರಿಂದಾಗಿ ಜಲಾಶಯದಲ್ಲಿ 20 ಟಿಎಂಸಿ ನೀರು ಹೆಚ್ಚಿಗೆ ಉಳಿದಂತಾಗುತ್ತದೆ. ಈ 20 ಟಿಎಂಸಿ ನೀರನ್ನು ಎರಡೂ ರಾಜ್ಯಗಳು ಸಮಾಂತರವಾಗಿ ಹಂಚಿಕೆ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡರೆ ಹೂಳು ತೆಗೆಯುವ ಮತ್ತು ಸಮಾಂತರ ಜಲಾಶಯ ನಿರ್ಮಿಸುವ ಸಮಸ್ಯೆ ಇಲ್ಲದೆ 10 ಟಿಎಂಸಿಯಷ್ಟು ನೀರನ್ನು ಹೆಚ್ಚಿಗೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಚಿಂತನೆಗೆ ಸರ್ಕಾರ ಏಕೆ ಮುಂದಾಗುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ. ಇದರಿಂದಾಗಿ ರಾಜ್ಯದ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ರೈತರಿಗೆ ಯಾವುದೇ ಕಷ್ಟವಿಲ್ಲದೆ 10 ಟಿಎಂಸಿ ಹೆಚ್ಚಿನ ನೀರು ಸಿಗುತ್ತದೆ. ಪ್ರವಾಹದ ಕಾಲುವೆಯ ಮೂಲಕ ಆಂಧ್ರಪ್ರದೇಶಕ್ಕೆ ನೀರು ಹರಿಸುವ ವಿಚಾರವಾಗಿ 1984ರಲ್ಲಿ ಆಂಧ್ರ ಸರ್ಕಾರ ಕೇಳಿಕೊಂಡಿತ್ತು. ಈ ವಿಚಾರದಲ್ಲಿ ಬ್ರಿಜೇಶ್ ಟ್ರಿಬ್ಯೂನಲ್ ಮುಂದೆ ಬಂದಿತ್ತು. ಆದರೆ ಕರ್ನಾಟಕ ಸರ್ಕಾರವು ಪ್ರವಾಹದ ಕಾಲುವೆಯಿಂದ ಕರ್ನಾಟಕಕ್ಕೆ ಯಾವುದೆ ಉಪಯೋಗವಿಲ್ಲ ಎಂದು ತನ್ನ ವಾದ ಮಂಡಿಸಿತ್ತು. ಈ ಬಗ್ಗೆ ಗಂಭೀರ ಚಿಂತನೆಯನ್ನು ಸರ್ಕಾರ ಮಾಡಬೇಕಾಗಿದೆ. ಇನ್ನು ರಾಜ್ಯದಲ್ಲಿ ಸಮಾಂತರ ಜಲಾಶಯ ನಿರ್ಮಾಣ ಮಾಡಬೇಕಾದರೆ ಭೂಸ್ವಾಧೀನಕ್ಕೆ ಮುಂದಾಗಬೇಕು ಇದು ತಲೆನೋವಿನ ವಿಷಯ. ಆಂಧ್ರಕ್ಕೂ ಅಲ್ಲಿನ ಸಮಾನಾಂತರ ಜಲಾಶಯದಲ್ಲಿ ನೀರು ಸಂಗ್ರಹವಾಗಬೇಕು, ಕರ್ನಾಟಕಕ್ಕೂ ತುಂಗಭದ್ರಾ ಜಲಾಶಯದಲ್ಲಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಾಗಬೇಕಂಬ ಉದ್ದೇಶವಿದ್ದರಿಂದ ಎರಡು ರಾಜ್ಯಗಳು ಇಂತಹ ಚಿಂತನೆ ಮಾಡಬಾರದೇಕೆ?
- ಶಶಿಧರ ಮೇಟಿ
kpshashibellary@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

